ಓಲಂಪಿಕ್‍ನಲ್ಲಿ ಮೊದಲ ದಿನವೇ ಭಾರತದ ಕುವರಿಯಿಂದ ಪದಕ ಬೇಟೆ

ಬೆಂಗಳೂರು, ಜು. 24-ಟೋಕಿಯೋ ಓಲಂಪಿಕ್‍ನ ಮಹಿಳೆಯರ 49ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕ ಬೇಟೆ ಶುರುವಾಗಿದೆ.ಮೀರಾಬಾಯಿ ಐತಿಹಾಸಿಕ ಗೆಲುವು ದಾಖಲಿಸಿ ಶುಭಾರಂಭ ದೊರಕಿಸಿಕೊಟ್ಟಿದ್ದಾರೆ.

ಓಲಂಪಿಕ್‍ನ ಮಹಿಳೆಯರ 49ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಣಿಪುರದ ಮೀರಾಬಾಯಿ ಚಾನು ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಮೀರಾಬಾಯಿ ಚಾನು ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಭಾರತೀಯರ ನಿರೀಕ್ಷೆ ಹುಸಿಗೊಳಿಸದ ಮೀರಾ ಅವರು ಮೊದಲ ದಿನವೇ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದಾರೆ. ಮೀರಾ ಅವರ ಗೆಲುವು ಭಾರತದ ಎಲ್ಲ ಕ್ರೀಡಾಪಟುಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬುವಂತೆ ಮಾಡಿದೆ. ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೀರಾಬಾಯಿ ಚಾನು ಅವರು ಓಲಂಪಿಕ್‍ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪದಕ ಬೇಟೆಗೆ ನಾಂದಿ ಹಾಡಿದ ಮೀರಾ ಅವರಿಗೆ ಸಚಿವರು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಹೆಸರಿಡುವುದಾಗಿ ಹೇಳಿದ ಸಿಎಂ

ಬೆಂಗಳೂರು,ಜು.24:ಶಿವಮೊಗ್ಗ ಜಿಲ್ಲೆಯ ಸಾಗರ  ತಾಲೂಕಿನ ಇರುವಕ್ಕಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಿದರು.

ಈ ನೂತನ ಕೃಷಿ   ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ,ಮಲೆನಾಡು , ಅರೆ ಮಲೆನಾಡು , ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳಿಗೆ ವಿಶೇಷವಾದ ಹಾಗೂ ಕೃಷಿ , ತೋಟಗಾರಿಕೆ ಹಾಗೂ ಅರಣ್ಯ ಶಾಸ್ತ್ರ ಹೊಂದಿದ ಸಮಗ್ರ ವಿಶ್ವವಿದ್ಯಾಲಯವನ್ನು 2013 ರಲ್ಲಿ ಪ್ರಾರಂಭಿಸಿದರು . ಈ ವಿಶ್ವವಿದ್ಯಾಲಯವು ಸಿಎಂ ಬಿ.ಎಸ್ . ಯಡಿಯೂರಪ್ಪನವರ ಕನಸಿನ ಕೂಸಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ . ಯಡಿಯೂರಪ್ಪನವರು ಈ ವಿಶ್ವವಿದ್ಯಾಲಯವನ್ನು 2013 ರಲ್ಲಿ ಹುಟ್ಟು ಹಾಕಿ ತಾವೇ ತಮ್ಮ ಅಮೃತ ಹಸ್ತದಿಂದ ಇಂದು ಸದರೀ ನೂತನ ವಿಶ್ವವಿದ್ಯಾಲಯದ ಆವರಣವನ್ನು ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಉದ್ಘಾಟನೆ ಮಾಡುತ್ತಿರುವುದು ರಾಜ್ಯದ ಅದರಲ್ಲಿಯೂ ವಿಶೇಷವಾಗಿ ಮಲೆನಾಡಿನ ರೈತರಿಗೆ ಒಂದು ವರದಾನವಾಗಿದೆಂದು ಬಿಸಿಪಿ ಅಭಿಪ್ರಾಯಪಟ್ಟರು.

ಈ ವಿಶ್ವವಿದ್ಯಾಲಯಕ್ಕೆ 787 ಎಕರೆ ಜಮೀನನ್ನು ನೀಡಿ 155 ಕೋಟಿ ರೂ.ಗಳನ್ನು ಮಂಜೂರು ಮಾಡಿ ಇರುವ ನೂತನ ಆವರಣ ಅಭಿವೃದ್ಧಿಗೆ ಸರ್ಕಾರವು ಆದೇಶ ಹೊರಡಿಸಿತ್ತು.ಇದರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಶಿವಮೊಗ್ಗ , ಚಿಕ್ಕಮಗಳೂರು , ದಾವಣಗೆರೆ , ಚಿತ್ರದುರ್ಗ , ಉಡುಪಿ , ಕೊಡಗು ಮತ್ತು ಮಂಗಳೂರು ಸೇರಿ ಒಟ್ಟು 7 ಜಿಲ್ಲೆಗಳು ಸೇರುತ್ತವೆ . ಸರ್ಕಾರದ ಆದೇಶದಂತೆ ಇರುವ ಆವರಣದಲ್ಲಿ 4 ಲಕ್ಷ 95 ಸಾವಿರ ಚದುರ ಅಡಿ ಪ್ರದೇಶದಲ್ಲಿ ಆಡಳಿತ ಭವನ , ಬೆಳೆ ಉತ್ಪಾದನೆ ಮತ್ತು ಬೆಳೆ ಸಂರಕ್ಷಣಾ ವಿಭಾಗ , ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ , ಸಮಾಜ ಮತ್ತು ಮೂಲ ವಿಜ್ಞಾನಗಳ ವಿಭಾಗ , ತೋಟಗಾರಿಕೆ ಮತ್ತು ಅರಣ್ಯ ವಿಭಾಗ , ಗ್ರಂಥಾಲಯ , ಕೊಳಚೆ ನೀರು ಶುದ್ದೀಕರಣ ಘಟಕ ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಿಲಯಗಳನ್ನು ನೂತನವಾಗಿ ನಿರ್ಮಿಸಲಾಗಿದೆ . ಇದೊಂದು ಸಮಗ್ರ ಕೃಷಿ ವಿಶ್ವವಿದ್ಯಾಲಯವಾಗಿದ್ದು , ಇಲ್ಲಿ ಹಂತ ಹಂತವಾಗಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೃಷಿ , ತೋಟಗಾರಿಕೆ ಹಾಗೂ ಅರಣ್ಯ ವಿಭಾಗಗಳಲ್ಲಿ ಸ್ನಾತಕ , ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. ಪದವಿಗಳನ್ನು ನೀಡಲು ಮೂಲ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲಾಗಿದೆ.ಈ ವಿಶ್ವವಿದ್ಯಾಲಯದ ಅಡಿಯಲ್ಲಿ 4 ಪದವಿ ಕಾಲೇಜುಗಳು , 2 ಡಿಪ್ಲೊಮೋ ಕಾಲೇಜುಗಳು , 13 ಸಂಶೋಧನಾ ಕೇಂದ್ರಗಳು , 4 ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ 2 ವಿಸ್ತರಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ . • ವಿಶ್ವವಿದ್ಯಾಲಯವು ಭತ್ತದಲ್ಲಿ ಕೆ.ಪಿ.ಆರ್ -1 , ಕೆ.ಕೆ.ಪಿ -5 , ಐ.ಇ.ಟಿ -21179 , ಪ್ರಗತಿ , ಸಹ್ಯಾದ್ರಿ ಮೇಘ , ಸಹ್ಯಾದ್ರಿ ಪಂಚಮುಖಿ , ಸಹ್ಯಾದ್ರಿ ಕಾವೇರಿ ತಳಿಗಳನ್ನು ಹಾಗೂ ಅಡಿಕೆಯಲ್ಲಿ ಮೈದಾನ ಸ್ಥಳೀಯ ಮತ್ತು ಅಲಸಂದೆಯಲ್ಲಿ ಸಹ್ಯಾದ್ರಿ ಯುಕ್ತಿ ತಳಿಗಳನ್ನು ಅಭಿವೃದ್ಧಿ ಪಡಿಸಿದೆ .
ವಿಶ್ವವಿದ್ಯಾಲಯದ ಪ್ರಾರಂಭದಿಂದ 2019-20 ರವರೆಗೆ 389 ಟನ್ ಗುಣಮಟ್ಟದ ಬೀಜಗಳನ್ನು ಹಾಗೂ 39 ಲಕ್ಷ ಸಸಿಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗಿದೆ.

ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ದ: ಸಚಿವ ಮುರುಗೇಶ್ ನಿರಾಣಿ

ಕಲಬುರಗಿ,ಜು.24: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಬಳಿ ಯಾವುದೇ ರೀತಿಯ ಲಾಬಿ ನಡೆಸಿಲ್ಲಘಿ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ದರಾಗಿರುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನಗರದ ಐವಾನ್-ಈ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ವರಿಷ್ಠರ ಆದೇಶವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಇಲ್ಲಿ ಹುದ್ದೆಗಾಗಿ ಬೇರೆ ಪಕ್ಷದಂತೆ ಲಾಬಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಲೂ ನಮ್ಮ ನಾಯಕರು. ಮುಂದೆಯೂ ಕೂಡ ಅವರೇ ನಮ್ಮ ಸಾರಥಿ. ನಮ್ಮ ಹೈಕಮಾಂಡ್ ಅತ್ಯಂತ ಪ್ರಬಲವಾಗಿದ್ದುಘಿ, ಯಾರಿಗೆ ಯಾವ ಸ್ಥಾನವನ್ನು, ಯಾವ ಸಂದರ್ಭದಲ್ಲಿ ನೀಡಬೇಕೆಂಬುದನ್ನು ತೀರ್ಮಾನಿಸುತ್ತಾರೆ ಎಂದರು.

ನಾನು ಯಾವುದೇ ಹುದ್ದೆಗಾಗಿ ಲಾಬಿ ಮಾಡುತ್ತಿಲ್ಲ, ರಾಷ್ಟ್ರಿಯ ನಾಯಕರು ಅಳೆದು ತೂಗಿ ಅರ್ಹರನ್ನೇ ಸಿಎಂ ಮಾಡುತ್ತಾರೆ. ನನಗೆ ಪಕ್ಷ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಸ್ಥಾನಮಾನಕ್ಕಾಗಿ ನಾನು ಯಾವತ್ತೂ ಲಾಬಿ ಮಾಡಿಲ್ಲಘಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ ಪಕ್ಷದ 120 ಶಾಸಕರೆಲ್ಲರೂ ಸಿಎಂ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ನಿರೀಕ್ಷೆಯಿಲ್ಲದೆ ಪಕ್ಷ ನನಗೆ ಹಲವು ಜವಾಬ್ದಾರಿ ನೀಡಿದೆ. ಮೊದಲ ಬಾರಿ ಶಾಸಕನಾದಾಗಲೇ ಹೈಕಮಾಂಡ್ ನನ್ನನ್ನು ಸಚಿವನನ್ನಾಗಿ ಮಾಡಿದೆ. ಈಗಲೂ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಯಾವುದೇ ಹುದ್ದೆ ಅಪೇಕ್ಷೆ ಮಾಡಿದವನಲ್ಲ, ಈಗಲೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಅಧಿಕೃತವಾಗಿ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ಜೊತೆ ನಾವಿರುತ್ತೇವೆ ಬೆಂಬಲ ಸೂಚಿಸಿದರು. ಯಾರನ್ನು ಈ ಸ್ಥಾನಕ್ಕಾಗಿ ಕೂರಿಸಬೇಕೆಂದು ನಮ್ಮ ವರಿಷ್ಠರು ತೀರ್ಮಾನಿಸುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಬೇಕೆಂದು ಹೇಳಿದರು.

ವಿಶೇಷ ಅರ್ಥ ಬೇಡ:

ನಾನು ಚಿಕ್ಕನಿಂದಲೂ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವುದನ್ನು ರೂಢಿಸಿಕೊಂಡು ಬಂದಿದ್ದೇನೆ. ಈಗಲೂ ಅಷ್ಟೇ. ಸಾಮಾನ್ಯವಾಗಿ ತಿಂಗಳು – ಎರಡು ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗಿಬರುತ್ತೇನೆ. ಅದರಂತೆಯೇ ನಾನು ವಾರಣಾಸಿಗೆ ಹೋಗಿದ್ದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ನಾನು ವಾರಣಾಸಿಗೆ ಹೋಗಿದ್ದಕ್ಕೆ ಏನೇನೋ ಅರ್ಥ ಕಲ್ಪಿಸಲಾಗಿತ್ತು. ಪ್ರತಿ ತಿಂಗಳು ನಾನು ಒಂದೊಂದು ದೇವಸ್ಥಾನಕ್ಕೆ ಹೋಗಿಬರುತ್ತೇನೆ. ಇದಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಹೇಳಿದರು. ಮತದಾರರು ನಮಗೆ ಮತ ಹಾಕಿ ಆರಿಸಿ ಕಳಿಸಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುವುದೊಂದೇ ನನ್ನ ಮೂಲ ಉದ್ದೇಶ ಎಂದರು.

 

Video-ಬೆಂಗಳೂರನ್ನು ನಿಜವಾದ ಸಿಲಿಕಾನ್ ಸಿಟಿ ಮಾಡಬೇಕು;ಯಡಿಯೂರಪ್ಪ

ಬೆಂಗಳೂರು:ಬೆಂಗಳೂರನ್ನು ನಿಜವಾಗಿಯೂ ಒಂದು ಸಿಲಿಕಾನ್ ಸಿಟಿ ಮಾಡಬೇಕು.ದೇಶ ವಿದೇಶಗಳಿಂದ ಬರುವವರೆಗಗೆ ಬೆಂಗಳೂರು ಪ್ರವಾಸಿ ತಾಣವಾಗಬೇಕು ಹೀಗಾಗಿ ಇಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು.

ಸಿಟಿ ರೌಂಡ್ಸ್ ಮುಗಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ಈಗ ನಿರ್ಮಾಣ ವಾಗಿರುವ ರಸ್ತೆಗಳು ಉತ್ತಮವಾಗಿ ನಿರ್ಮಾಣ ವಾಗಿವೆ.ಇನ್ಮುಂದೆ ಈ ರಸ್ತೆಗಳಲ್ಲಿ ಗುಂಡಿ ಬೀಳುವುದಿಲ್ಲ. ಆ ರೀತಿಯಾಗಿ ನಗರದ ಎಲ್ಲಾ ಕಡೆ ಚೆನ್ನಾಗಿ ರಸ್ತೆ ಕಾಮಗಾರಿಗಳ ಪೂರ್ಣ ಗೊಳಿಸಲಾಗಿದೆ.ರಾಜಕಾಲುವೆ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ.ಸಮಗ್ರ ಬೆಂಗಳೂರು ಅಭಿವೃದ್ಧಿಗೆ ಒತ್ತು.ಇದಕ್ಕೆ ಸೂಕ್ತ ಹಣಕಾಸು ಒದಿಸಲು ಕ್ರಮ ವಹಿಸಲಾಗಿದೆ ‌ಎಂದ್ರು.

ಹಿರಿಯ ಅಧಿಕಾರಿಗಳ ಜೊತೆಗೆ ನಗರ ಪರಿಶೀಲನೆ ನಡೆಸಲಾಗಿದೆ. ಎನ್ ಎ ಹ್ಯಾರಿಸ್, ರಿಜ್ವನ್ ಅರ್ಷದ್ ಭಾಗಿಯಾಗಿ ಕೆಲಸ ಕಾರ್ಯಗಳನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದರು.ಬೆಂಗಳೂರು ನಗರ ಪ್ರವಾಸಿಗರ ತಾಣ ಆಗಬೇಕು
ಅದಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗ್ತಿದೆ. ಇಪ್ಪತ್ತು ವರ್ಷ ಆದರೂ ಸಣ್ಣ ಗುಂಡಿಯಾಗದ ರೀತಿ ರಸ್ತೆಗಳನ್ನು ಮಾಡಲಾಗಿದೆ. ಕ್ವಾಲಿಟಿ ರಸ್ತೆಗಳು, ರಾಜಕಾಲುವೆಗಳ ಅಭಿವೃದ್ಧಿ, ಕೆರೆ ಅಭಿವೃದ್ಧಿ ಗೆ ವಿಶೇಷ ಗಮನ ಕೊಡಲಾಗಿದೆ
ಬೆಂಗಳೂರಿನ ಎಲ್ಲಾ ರಸ್ತೆಗಳ ಅಭಿವೃದ್ಧಿ ಗೆ ಹಣಕಾಸಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. 36 ರಸ್ತೆಗಳನ್ನು ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಪಡಿಸಲಾಗ್ತಿದೆ. ‌69 ರಸ್ತೆಗಳು ವೈಟ್ ಟಾಪಿಂಗ್ ರಸ್ತೆಯಡಿ ಅಭಿವೃದ್ಧಿ ಪಡಿಸಲಾಗಿದೆ ಎಂದ್ರು.

ರಾಜ್ಯದ ಹಲವೆಡೆ ಮಳೆ ಹಿನ್ನೆಲೆ ಮಳೆಯಿಂದ ಅನಾಹುತ ಡಿಸಿಗಳ ಜೊತೆ ಚರ್ಚೆ ಮಾಡಿದ್ದೇನೆ ಸಂಜೆ ವೀಡಿಯೋ ಕಾನ್ಪೆರೆನ್ಸ್ ಕೂಡ ಮಾಡ್ತೇನೆ.ಅಗತ್ಯ ಬಿದ್ರೆ ಹೆಲಿಕಾಪ್ಟರ್ ನಲ್ಲಿ ಅಲ್ಲಿಗೆ ಹೋಗ್ತೇನೆ.ಆದರೆ ಮಳೆ ವಾತಾವರಣ ಇರುವ ಕಾರಣ ಹೆಲಿಕಾಪ್ಟರ್ ನಲ್ಲಿ ಹೋಗೋಕೆ ಆಗಲ್ಲ. ಈಗಿನ ಪರಿಸ್ಥಿತಿ ಯಲ್ಲಿ ಗಾಬರಿ ಯಾಗುವಂತ ಸಂದರ್ಭ ಸೃಷ್ಟಿ ಯಾಗಿಲ್ಲ.ಪ್ರವಾಹ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ.ಡಿಸಿಗಳ ಜೊತೆ ಚರ್ಚೆ ಮಾಡಿದಾಗ, ಯಾವುದೇ ದೊಡ್ಡ ಅನಾಹುತ ಆಗಿಲ್ಲ ಎಂದಿದ್ದಾರೆ.ಹೀಗಾಗಿ ಮಳೆಯಿಂದ ಭಯ ಪಡುವ ಅಗತ್ಯ ಇಲ್ಲ ಎಂದ್ರು.

ಮಳೆಯಿಂದ ಅನಾಹುತ ಆಗ್ತಿರುವ ಜಿಲ್ಲೆಯ ಸಚಿವರ ಜೊತೆ, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕಳೆದ ನಾಲ್ಕೈದು ದಿನದಿಂದ ನಿರಂತರವಾಗಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದೇನೆ ಹೆಲಿಕಾಪ್ಟರ್ ಮೂಲಕ ವೀಕ್ಷಿಸಲು ವಾತಾವರಣ ಸರಿ ಇಲ್ಲ ಅನಾಹುತದ ಪರಿಸ್ಥಿತಿ ಏನೂ ಬಂದಿಲ್ಲ ಎಂದ್ರು.

ಕಳೆದ ಮೂರು ದಿನಗಳಿಂದಲೂ ನಾನು ಮಳೆ ಪೀಡಿತ ಡಿಸಿಗಳ ಸಂಪರ್ಕ ದಲ್ಲಿದ್ದೇನೆ.ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ತೆರಳದೆ ಇರುವ ವಿಚಾರ ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿ ಗಳ ಮೇಲೆ ಗರಂ ಆದ ಸಿಎಂ ಯಾರಿ ಹೇಳಿದ್ದು ಅಲ್ಲಿಗೆ ಹೋಗಿಲ್ಲ ಎಂದು ಗರಂ ಆಗಿ ತೆರಳಿದ್ರು.

ಆಗಸ್ಟ್‌ 1 ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇಂಡಿಯನ್‌ ಆರ್ಟಿಸನ್ಸ್‌ ಬಜಾರ್

ಬೆಂಗಳೂರು ಜುಲೈ 23: ಕರೋನಾ ಸಾಂಕ್ರಾಮಿಕದ ಲಾಕ್‌ಡೌನ್‌ ನಿಂದ ತೀವ್ರ ತೊಂದರೆಗೀಡಾಗಿರುವ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ನಟಿ ರಾಜೇಶ್ವರಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ಇಂಡಿಯನ್‌ ಆರ್ಟಿಸನ್ಸ್‌ ಬಜಾರ್‌ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೋನಾ ಎರಡನೇ ಅಲೆಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದೆ ತೊಂದರೆಗೀಡಾಗಿದ್ದು ಕರಕುಶಲಕರ್ಮಿಗಳು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಗಾಗ್ಗೆ ಆಯೋಜಿಸಲಾಗುತ್ತಿದ್ದ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ಬಹಳಷ್ಟು ಕರಕುಶಲಕರ್ಮಿಗಳಿಗೆ ಅಗತ್ಯ ಪ್ರದರ್ಶನ ಹಾಗೂ ಮಾರಾಟದ ವೇದಿಕೆಯನ್ನು ಒದಗಿಸುತ್ತಿತ್ತು. ಲಾಕ್‌ಡೌನ್‌ ಹಿನ್ನಲೆಯಲ್ಲಿ ಈ ವ್ಯವಸ್ಥೆಯೂ ಇಲ್ಲದೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ತೊಂದರೆಪಡುತ್ತಿದ್ದ ಕರಕುಶಲಕರ್ಮಿಗಳ ಅನುಕೂಲಕ್ಕಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ 10 ದಿನಗಳ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೊಂದರೆಯಲ್ಲಿರುವ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎಂದು ಹೇಳಿದರು.

ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ಎಲ್ಲಾ ಭಾಗಗಳಿಂದಲೂ ಆಗಮಿಸಲಿರುವ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಾಶ್ಮೀರಿ ಸೀರೆಗಳು ಮತ್ತು ಶಾಲುಗಳು, ಮಣಿಪುರಿ, ಆಂಧ್ರಪ್ರದೇಶ, ತಮಿಳುನಾಡಿನ ಪ್ರಸಿದ್ದ ರೇಷ್ಮೇ ಸೀರೆಗಳು ಹಾಗೂ ಈಶಾನ್ಯ ರಾಜ್ಯಗಳ ಕಲಾಕಾರರು ತಯಾರಿಸಿರುವ ಉತ್ಪನ್ನಗಳು ಎಲ್ಲರ ಗಮನ ಸೆಳೆಯುತ್ತಿವೆ ಎಂದು ನಟಿ ಐಶಾನ ಸಣ್ಣಪ್ಪನವರ್‌ ಹೇಳಿದರು.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಾರಿ ಕೇವಲ 60 ಅಂಗಡಿಗಳನ್ನು ನಿರ್ಮಿಸಲಾಗಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.

Video-ನಂದಿಬೆಟ್ಟದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಸಿ.ಪಿ.ಯೋಗೇಶ್ವರ್

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಪರಿಸರ ಹಾಗೂ ಜೀವ ಸಂಕುಲಕ್ಕೆ ಯಾವುದೇ ರೀತಿಯಲ್ಲೂ ಹಾನಿ, ತೊಂದರೆಯಾಗದಂತೆ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ್ ಅವರು ಹೇಳಿದರು.

ತಾಲೂಕಿನ ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಹಾಗೂ ವಾಹನ ಪಾರ್ಕಿಂಗ್ ಸ್ಥಾಪನೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಷ್ಟು ದಿನ ನಂದಿಬೆಟ್ಟವು ಮೂರು ನಾಲ್ಕು ಇಲಾಖೆಗಳ ಅಡಿಯಲ್ಲಿತ್ತು. ಇದೀಗ ಸಂಪೂರ್ಣ ನಿಯಂತ್ರಣ ಪ್ರವಾಸೋದ್ಯಮ ಇಲಾಖೆ ಸುಪರ್ಧಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೇ ನಂದಿಬೆಟ್ಟದ ಪ್ರವಾಸಿ ತಾಣದ ಸಮಗ್ರ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂದಿಬೆಟ್ಟದ ಸಮಗ್ರ ಅಭಿವೃದ್ಧಿ ಇಷ್ಟು ದಿನ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂಬ ಅಪಾದನೆಗಳು ಇವೆ. ಅದರೆ, ಇನ್ನು ಮುಂದೆ ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಈ ಮೂಲಕ ನಂದಿಗಿರಿಧಾಮವನ್ನು ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಇದುವರೆಗೆ ಎಲ್ಲೂ ಕೂಡ ರೋಪ್ ವೇ ಮಾಡಲು ಸಾಧ್ಯವಾಗಿಲ್ಲ. ನಂದಿಬೆಟ್ಟಕ್ಕೆ ರೋಪ್ ವೇ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಇದೀಗ ಸಕಾರಗೊಳ್ಳುವ ಎಲ್ಲಾ ಲಕ್ಷಣಗಳು ಕಣ್ಣಮುಂದೆ ನಡೆಯುತ್ತಿದ್ದು, ಈ ದಿಸೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಿರುವ ಹೆಗ್ಗಳಿಕೆ ಹೊಂದಿರುವ ಲಾಲ್ ಅವರ ಒಡೆತನದ ಪ್ರತಿಷ್ಠಿತ ದೇಶೀಯ ಖಾಸಗಿ ಸಂಸ್ಥೆಯೊಂದು ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲು ಮುಂದೆ ಬಂದಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ 2 ವರ್ಷದೊಳಗೆ ರೋಪ್ ವೇ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಪ್ ವೇ ನಿರ್ಮಾಣ ಸಂಬಂಧ ಸಂಸ್ಥೆಯವರು ಈಗಾಗಲೇ ನಂದಿಬೆಟ್ಟದಲ್ಲಿ ಸ್ಥಳ ಸರ್ವೇ ಕಾರ್ಯ, ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಹಾಗೂ ಡ್ರೋಣ್ ಸರ್ವೇಕಾರ್ಯ ನಡೆಸಿದ್ದು, ತಾಂತ್ರಿಕವಾಗಿ ಇನ್ನೂ ಕೆಲವೊಂದು ಕೆಲಸಗಳು ಪ್ರಾರಂಭವಾಗಿವೆ. ರೋಪ್ ವೇನಲ್ಲಿ ಎಷ್ಟು ಜನರನ್ನು ಮೇಲಕ್ಕೆ ಕರೆದೊಯ್ಯಬೇಕು. ವಾಪಸ್ ಕರೆತರಬೇಕು ಸೇರಿದಂತೆ ಜನರ ಸುರಕ್ಷಣೆ ಹಾಗೂ ಇನ್ನಿತರೆ ಪೂರಕವಾದ ಎಲ್ಲಾ ಮಾಹಿತಿಯ ಆಧರಿಸಿ ಈ ಯೋಜನೆಗೆ ಎಷ್ಟು ಅನದಾನ ವೆಚ್ಚವಾಗಲಿದೆ ಎಂಬುದು ಗೊತ್ತಾಗಲಿದೆ. ಸರ್ಕಾರಕ್ಕೆ ಹಣದ ಹೊರೆಯಾಗದಂತೆ ಇದೆಲ್ಲವನ್ನೂ ಖಾಸಗಿ ಸಹಭಾಗಿತ್ವದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮ ದೃಷ್ಠಿಯಲ್ಲಿ ನಂದಿಬೆಟ್ಟದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬಹುದಾಗಿದೆ. ಪ್ರಸ್ತುತ ಬೆಂಗಳೂರಿಗೆ ಹತ್ತಿರ ಇರುವುದರಿಂದ ಪ್ರವಾಸಿಗರ ದಟ್ಟಣೆ ಹೆಚ್ಚಾಗುತ್ತಿದೆ. ಪಾರ್ಕಿಂಗ್ ಜತೆಗೆ ಕುಡಿಯುವ ನೀರು, ಕೆಲವೊಂದು ಮೂಲಭೂತ ಸೌಲಭ್ಯಗಳ ಸಮಸ್ಯೆಯೂ ಇದೆ. ಇದನ್ನೆಲ್ಲಾ ಬಗೆಹರಿಸಬೇಕಾದರೆ ಕೆಲವೊಂದು ವೈಜ್ಞಾನಿಕ ತಳಹದಿಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ. ಪಾರ್ಕಿಂಗ್ ಗೆ ಬೆಟ್ಟದ ಕೆಳಗಡೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಒಳಪಟ್ಟ ಸುಮಾರು 30-35 ಎಕರೆ ಸರ್ಕಾರಿ ಜಮೀನು ಇದೆ. ಅದನ್ನು ಇಲಾಖೆಗೆ ಮಂಜೂರು ಮಾಡುವಂತೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲಿ ರೋಪ್ ವೇ ಹಾಗೂ ಇತರೆ ಸಾರ್ವಜನಿಕ ವಾಹನಗಳಿಗೆ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸಿಂಧೂ ರೂಪೇಶ್, ಕೆಎಸ್ ಟಿಡಿಸಿ ಯ ಅಧ್ಯಕ್ಷ ಕಾಪು ಸಿದ್ಧಲಿಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರಾದ ವಿಜಯಶರ್ಮಾ, ಜೆಎಲ್ಆರ್ ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಜಿತೇಂದ್ರನಾಥ್, ಐಡೆಸ್ಕ್ ರೋಪ್ ವೇ ಸಂಸ್ಥೆಯ ಮುಖ್ಯಸ್ಥ ಲಾಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.