ವಿದ್ಯುತ್ ಆಘಾತ : ಮೃತರ ಮನೆಗೆ ಸಚಿವೆ ಡಾ.ಜಯಮಾಲಾ ಭೇಟಿ ಮೃತರ ಕುಟುಂಬಕ್ಕೆ ಸಾಂತ್ವಾನ

ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕೀರ್ತನ್ ಪುತ್ರನ್ ಹಾಗೂ ರಾಕೇಶ್ ಬೆಳ್ಚಡ ಅವರ ಮನೆಗೆ ಇಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಭೇಟಿ ಮಾಡಿ ಮೃತರ ಕುಟುಂಬಕ್ಕೆ ಸಂತ್ವಾನ ಹೇಳಿದರು.

ಮೊದಲಿಗೆ ಕೀರ್ತನ್ ಅವರ ಮನೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲ ಅವರು ಮೃತ ಕೀರ್ತನ್ ಅವರ ತಂದೆ ತಾಯಿ ಹಾಗೂ ಬಂಧುಗಳಿಗೆ ಸಾಂತ್ವಾನ ಹೇಳಿದರು.
ಬಳಿಕ ರಾಕೇಶ್ ಬೆಳ್ಚಡ ಅವರ ಮನೆಗೆ ಭೇಟಿ ನೀಡಿದ ಸಚಿವರು ಮೃತರ ತಂದೆ ಹಾಗೂ ತಾಯಿ ಮತ್ತು ಕುಟುಂಬ ವರ್ಗದವರಿಗೆ ಸಂತ್ವಾನ ಹೇಳಿದರು.
ಇಬ್ಬರೂ ಮೃತರು ಯುವಕರಾಗಿದ್ದು, , ಇನ್ನೂ ಸಾಕಷ್ಟು ಬಾಳಿ ಬದುಕಬೇಕಾಗಿದ್ದವರು, ಆದರೆ ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿ. ಮೃತರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಯಾವ ರೀತಿಯಲ್ಲೂ ಹೋದ ಜೀವವನ್ನು ಮರಳಿ ತರಲಾಗದು, ಕುಟುಂಬಕ್ಕೆ ಆಧಾರವಾಗಬೇಕಾಗಿದ್ದ ಈ ಯುವಕರ ಸಾವು ಇವರ ಕುಟುಂಬದ ಆಧಾರಸ್ಥಂಬವನ್ನೇ ಕಳಚಿದಂತೆ ಮಾಡಿದೆ. ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮೆಸ್ಕಾಮ್ ಇಲಾಖೆಯ ವತಿಯಿಂದ ತಕ್ಷಣ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಕುಟುಂಬಿಕರ ಭೇಟಿಯ ಬಳಿಕ ತಿಳಿಸಿದರು.
ಮೃತರ ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ ಭಾಗವಹಿಸಿದ್ದರು.
….ಮೇಸ್ಕಾ ಅಧಿಕಾರಿಗಳಿಗೆ ನಿರ್ದೇಶನ ….
ಜನ ವಸತಿ ಪ್ರದೇಶದಲ್ಲಿ ಕಡಿದು ಬಿದ್ದಿರುವ ವಿದ್ಯುತ್‌ ತಂತಿಗಳನ್ನು ಹಾಗೂ ಅಪಾಯದ ಅಂಚಿನಲ್ಲಿ ಇರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವು ಗೊಳಿಸುವಂತೆ ಸಚಿವರು ಮೆಸ್ಕಾಮ್ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.

ಬೆಂಗಳೂರು ತಲುಪಿದ ವಾಜಪೇಯಿ ಅಸ್ಥಿ ಕಲಶ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ಇಂದು ಬೆಂಗಳೂರಿಗೆ ತರಲಾಗಿದ್ದು, ಬಿಜೆಪಿ ಕಚೇರಿಯಲ್ಲಿ ಅಸ್ಥಿ ಕಲಶಕ್ಕೆ ಪುಷ್ಪಾರ್ಚನೆ ನಡೆಸಲಾಗುತ್ತಿದೆ.

ದೆಹಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಅಟಲ್ ಜೀ ಕುಟುಂಬದ ಸದಸ್ಯರಿಂದ ಮಾಜೀ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಕಲಶವನ್ನು ಸ್ವೀಕರಿಸಿದರು.

ನಂತರ ಬೆಂಗಳೂರು ಕಡೆ ಹೊರಟ ಯಡಿಯೂರಪ್ಪ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದರು.ಪಕ್ಷದ ಮುಖಂಡರು ಅಸ್ಥಿ ಕಲಶವನ್ನು ಸ್ವಾಗತಿಸಿದ್ದು, ರಾಜ್ಯ ಬಿಜೆಪಿ ಕಾರ್ಯಾಲಯದ ವರೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಅಸ್ಥಿಕಲಶವನ್ನು ಮೆರವಣಿಗೆಯಲ್ಲಿ ಬಿಜೆಪಿ ಕಚೇರಿಗೆ ತರಲಾಯಿತು. ಇಂದು ರಾತ್ರಿಯ ವರೆಗೆ ಪಕ್ಷದ ಕಾರ್ಯಾಲಯದಲ್ಲಿ ಪುಷ್ಪಾರ್ಚನೆ ಮಾಡಲಿದ್ದು ನಾಳೆಯಿಂದ ರಾಜ್ಯದ ಪವಿತ್ರ ನದಿಗಳಲ್ಲಿ ಅಸ್ಥಿ ಕಲಶ ಬಿಡಲಾಗುತ್ತದೆ.

ಕರ್ನಾಟಕದ ನಯಾಗರ ಫಾಲ್ಸ್ ಆದ ಜೋಗ ಜಲಪಾತ!

ಬೆಂಗಳೂರು: ವಿಶ್ವವಿಖ್ಯಾತ ಜೋಗ ಜಲಪಾತ ಇದೀಗ ಕರ್ನಾಟಕದ ನಯಾಗರಾ ಫಾಲ್ಸ್ ಆಗಿದೆ.ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನಲೆಯಲ್ಲಿ ಜಲಪಾತ ನಯಾಗರದಂತೆ ದುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಮಲೆನಾಡಿನಲ್ಲಿ ವರ್ಷಧಾರೆ ಮುಂದುವರೆದಿದ್ದು ಸಹ್ಯಾದ್ರಿಯ ಗಿರಿ ಶಿಖರಗಳ ಹಸಿರು ಸಿರಿಯ ಕಾನನದ ನಡುವೆ ಧುಮ್ಮಿಕ್ಕುವ ಜೋಗ ಜಲಪಾತದ ರಮಣೀಯ ದೃಶ್ಯ ನೋಡುಗರನ್ನು ಮಂತ್ರ ಮುಗ್ದರನ್ನಾನಿಗಿಸುತ್ತಿದೆ. ಕಾಡು, ಬೆಟ್ಟ, ಕಣಿವೆ, ಜಲಧಾರೆ, ಝರಿ, ತೊರೆ ಮುಂತಾದ ವೈವಿದ್ಯಮಯ ಪ್ರಕೃತಿ ಸೊಬಗನ್ನು ಮೈಗೂಡಿಸಿಕೊಂಡಿರುವ ಈ ಜಲಧಾರೆಯ ಮನಮೋಹಕ ದೃಶ್ಯ ಪ್ರವಾಸಿಗರನ್ನು ಪುಳಕಿತರನ್ನಾಗಿಸುತ್ತದೆ.

ಕಳೆದ ಎರಡು ಮೂರು ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕಳೆಗುಂದಿದ್ದು ಜೋಗ ಜಲಪಾತ ಇದೀಗ ಮಲೆನಾಡಿನಲ್ಲಿ ಮುಂದುವರೆದ ವರ್ಷಧಾರೆ ಹಿನ್ನೆಲೆಯಲ್ಲಿ ವೈಯಾರದಿಂದ ದುಮ್ಮಿಕ್ಕುತ್ತಿದೆ.ಬಾರಂಗಿ, ಬಾಣಾವತಿ, ಬಾರಗಂಗಾ, ಗೇರುಸೊಪ್ಪಾ ಹೊಳೆ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಶರಾವತಿ ನದಿ ಪಶ್ಚಿಮ ಘಟ್ಟದಲ್ಲಿ ಹರಿಯುವ ಪ್ರಮುಖ ನದಿ. 956 ಅಡಿ ಆಳದ ಪ್ರಪಾತದ ಕಗ್ಗಲ್ಲ ಮೇಲೆ ಬಾಗಿ ಚತುರ್ಮುಖಗಳಾಗಿ ಬೀಳುವ ದೃಶ್ಯದ ಎದುರು ನಿಂತವನ ಎದೆಯಲ್ಲಿ ಕಂಪನದ ಅಲೆ ಏಳುವುದು ಖಂಡಿತ.

ಗಾಂಭೀರ್ಯವನ್ನು ಮೈವೆತ್ತ ರಾಜ, ವೈಯಾರತೆಯ ಜೊತೆಗೆ ತುಸು ಮೆಲುವಿನ ವೇಗವನ್ನು ಮೈಗೂಡಿಸಿಕೊಂಡು ಬೀಳುವ ರಾಣಿ, ಭೋರ್ಗರೆಯುವ ರೋರರ್, ಶರವೇಗದ ರಾಕೇಟ್ ದುಮ್ಮಿಕ್ಕುವ ದೃಶ್ಯ ನೋಡಲು ಮೈ ನವಿರೇಳುತ್ತದೆ. ಆದರೆ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಕಾರಣ ನಾಲ್ಕು ಕವಲಾಗಿ ಬೀಳಬೇಕಾದ ಜಲಧಾರೆ ಇಡೀ ಜಲಪಾತವನ್ನೇ ಆವರಿಸಿದೆ.ಅಮೆರಿಕಾದ ನಯಾಗರಾ ಫಾಲ್ಸ್ ಮಾದರಿಯಲ್ಲಿ ದುಮ್ಮಿಕ್ಕುತ್ತಿದೆ.ಕರ್ನಾಟಕದ ನಯಾಗರ ಫಾಲ್ಸ್ ಎಂದು ಕರೆಸಿಕೊಳ್ಳುತ್ತಿದೆ.

ಪ್ರಕೃತಿದತ್ತ ಕೊಡುಗೆಯ ನೈಜ ಸೃಷ್ಠಿಯ ಜಲಪಾತದ ಅದ್ಭುತ ದೃಶ್ಯ ನೋಡಲು ನಯನ ಮನೋಹಕವಾಗಿದ್ದು ಎರಡು ಕಣ್ಣು ಸಾಲದಂತಾಗಿದೆ. ಇಳೆಗೂ-ಬಾನಿಗೂ ಆವರಿಸಿಕೊಂಡ ತಿಳಿ ಬಿಳಿಯ ಮಂಜಿನ ಮೋಡ, ಸುತ್ತಲಿನ ಪ್ರಪಂಚವನ್ನೇ ಮರೆಸುತ್ತದೆ. ಸುರಿಯುವ ಮಳೆಯ ನಡುವೆ ಆಗೊಮ್ಮೆ ಈಗೊಮ್ಮೆ ಮೋಡ ಸರಿದು ಹಾಲ್ನೊರೆಂಯಂತೆ ದುಮ್ಮಿಕ್ಕುವ ಜಲಧಾರೆಗಳು ಕಂಡು ಮಾಯವಾಗುವ ದೃಶ್ಯ ಅವಿಸ್ಮರಣೀಯ.

ವಿಶ್ವವಿಖ್ಯಾತ ಜಲಧಾರೆ ತನ್ನ ಖ್ಯಾತಿಗೆ ತಕ್ಕಂತೆ ದೇಶ-ವಿದೇಶದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಎಡೆ ಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಂಜಿನಿಂದ ಮುಚ್ಚಿದ ಜಲಧಾರೆ, ಆಗೊಮ್ಮೆ ಈಗೊಮ್ಮೆ ತನ್ನ ಚಲುವನ್ನು ಆನಾವರಣಗೊಳಿಸುವ ದೃಶ್ಯವನ್ನು ಸವಿಯುವ ಪ್ರವಾಸಿಗರು ದಿಡೀರ್ ಸುರಿಯುವ ವರ್ಷಧಾರೆಗೆ ನೆನೆಯುತ್ತಾ ಸೂರು ಹುಡುಕಿದರೆ ಅಲ್ಲಿನ ಪರಿಸರದಲ್ಲಿ ಸ್ವಚ್ಛಂದವಾಗಿ ತಿರುಗಾಡಿಕೊಂಡಿರುವ ವಾನರ ಸೈನ್ಯ ತನ್ನ ಮರಿಗಳನ್ನು ಮಳೆಯಿಂದ ರಕ್ಷಿಸಲು ತನ್ನ ಒಡಲನ್ನೇ ಸೂರನ್ನಾಗಿ ಮಾಡಿಕೊಳ್ಳುವ ದೃಶ್ಯ ಮನುಷ್ಯರನ್ನು ನಾಚಿಸುವಂತಿದೆ.

ಜೋಗ ಜಲಪಾತ ವೀಕ್ಷಣೆಗೆ ದೇಶ-ವಿದೇಶದಿಂದ ಬಂದಿದ್ದ ಪ್ರವಾಸಿಗರು ಸುದ್ದಿಲೋಕ ತಂಡದ ಜೊತೆ ಮಾತನಾಡಿ, ಜಲಧಾರೆಯನ್ನು ಕೊಂಡಾಡಿದರು. ವಿಶ್ವವಿಖ್ಯಾತ ಜೋಗ ಜಲಪಾತದ ದೃಶ್ಯವೈಭವ ತಮ್ಮನ್ನು ಮಂತ್ರ ಮುಗ್ದರನ್ನಾಗಿಸಿದೆ, ಸುರಿಯುವ ಮಳೆಯ ನಡುವೆ ಆಗೊಮ್ಮೆ-ಈಗೊಮ್ಮ ಅನಾವರಣಗೊಳ್ಳುವ ಹಾಲ್ನೊರೆಯಂತಹ ನಾಲ್ಕು ಜಲಧಾರೆಗಳನ್ನು ವೀಕ್ಷಿಸಲು ತುಂಬಾ ಖುಷಿಯಾಗುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಜಲಾಶಯದಿಂದ ನೀರನ್ನು ಹರಿಸುವುದು ಮುಂದುವರೆದಿದ್ದು ಜೋಗಜಲಪಾತ ಅನನ್ಯ ಸೌಂದರ್ಯದಿಂದ‌ ಕಣ್ಮನ‌ ಸೂರೆಗೊಳ್ಳುತ್ತಿದೆ.ಮಳೆ ಕಡಿಮೆಯಾಗಿ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸುವ ಮೊದಲು ನೀವೂ ಒಮ್ಮೆ ಜೋಗಜಲಪಾದತ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಿ.

ಪರಿಹಾರ ಕೇಂದ್ರದಲ್ಲಿರದ ನಿರಾಶ್ರಿತರಿಗೂ ಪರಿಹಾರ ಸಾಮಗ್ರಿಗಳ ಸಮರ್ಪಕ ಪೂರೈಕೆ!

ಮಡಿಕೇರಿ: ನೆರೆ ಪ್ರವಾಹದಿಂದ ನಿರಾಶ್ರಿತರಾಗಿರುವವರಿಗೆ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಊಟೋಪಹಾರ, ವಾಸ್ತವ್ಯದ ವ್ಯವಸ್ಥೆ, ಪರಿಹಾರ ಸಾಮಗ್ರಿಗಳ ಪೂರೈಕೆ ಮಾಡಲಾಗುತ್ತಿದ್ದು, ಪರಿಹಾರ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ ಆಯಾ ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿ, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸುವ ಕಾರ್ಯ ನಿರಂತರವಾಗಿ ನಡೆದಿದೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕು ಹೆಚ್ಚಿನ ಹಾನಿ ಅನುಭವಿಸಿದೆ. ಇದರಿಂದಾಗಿ ಸಂತ್ರಸ್ತರಾದವರಿಗೆ ರಾಜ್ಯದ ಎಲ್ಲ ದಿಕ್ಕುಗಳಿಂದಲೂ ಪರಿಹಾರ ಸಾಮಗ್ರಿಗಳ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಎಲ್ಲ ಜಿಲ್ಲಾಡಳಿತಗಳು ಪರಿಹಾರ ಸಾಮಗ್ರಿಗಳನ್ನು ಪಡೆಯಲು ಆಯಾ ಜಿಲ್ಲೆಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಂಡಿದ್ದು, ಇದರ ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗು ಜಿಲ್ಲೆಗೆ ರವಾನಿಸುವ ಕಾರ್ಯವನ್ನು ಮಾಡಿರುವುದು, ಕನ್ನಡಿಗರ ಒಗ್ಗಟ್ಟಿನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ಗ್ರಾಮ ಪಂಚಾಯತಿಗಳ ಮೂಲಕ ಪೂರೈಕೆ :
ಭಾರಿ ಮಳೆಯಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರಾದವರಿಗೆ ಜಿಲ್ಲೆಯಲ್ಲಿ ಒಟ್ಟು 51 ಪರಿಹಾರ ಮತ್ತು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಅತಿ ಹೆಚ್ಚು ಹಾನಿ ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿದ್ದು, ಇಲ್ಲಿನ ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ ಐಕೊಳ, ಮಡಿಕೇರಿ ನಗರ ಸೇರಿ ವಿವಿಧೆಡೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಅದೇ ರೀತಿ ಸೋಮವಾರ ಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿಯೂ ಪರಿಹಾರ ಮತ್ತು ಪುನರ್ವಸತಿ ಕೇಂದ್ರವನ್ನು ತೆರೆದು, ಸಂತ್ರಸ್ತರಿಗೆ ಊಟೋಪಹಾರ, ವಾಸ್ತವ್ಯ, ಆರೋಗ್ಯ ತಪಾಸಣೆ, ಮಾನಸಿಕ ಸ್ಥೈರ್ಯ ತುಂಬುವ ಕಾರ್ಯಕ್ರಮದ ಜೊತೆಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನೂ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲೆಡೆಯಿಂದ ಸ್ವೀಕರಿಸಲಾಗುತ್ತಿರುವ ನೆರವಿನ ಸಾಮಗ್ರಿಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಇರದ ನಿರಾಶ್ರಿತರಿಗೂ ಕೂಡ ಸಮರ್ಪಕವಾಗಿ ವಿತರಿಸಲು ಕೊಡಗು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ದಾಸ್ತಾನು ಕೇಂದ್ರಗಳಿಂದ ನೆರವು ಸಾಮಗ್ರಿಯನ್ನು ಪಡೆದು ಗ್ರಾಮ ಪಂಚಾಯತಿಗಳ ಮೂಲಕ ಪೂರೈಸಲು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಿಡಿಒ ಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಸಿಬ್ಬಂದಿಗಳು ದಾಸ್ತಾನು ಕೇಂದ್ರಗಳಲ್ಲಿ ಸಾಮಗ್ರಿಗಳ ಬೇಡಿಕೆ ಪಟ್ಟಿಯಂತೆ ಸಾಮಗ್ರಿಗಳನ್ನು ಪಡೆದು, ವಾಹನದ ವಿವರದೊಂದಿಗೆ ರಜಿಸ್ಟರ್‍ನಲ್ಲಿ ನಮೂದಿಸಿ, ಸಹಿ ಮಾಡಿ ಪಡೆದುಕೊಂಡು ಹೋಗುತ್ತಿದ್ದಾರೆ. ಈ ರೀತಿ ಪಡೆದ ಸಾಮಗ್ರಿಗಳನ್ನು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನಿಜವಾದ ಸಂತ್ರಸ್ತರಿಗೆ ಸಮರ್ಪಕವಾಗಿ ಪೂರೈಕೆ ಮಾಡಲಾಗುತ್ತಿದೆ. ಸೋಮವಾರದಂದು ಸುಮಾರು 25 ಗ್ರಾಮ ಪಂಚಾಯತಿಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಪೂರೈಕೆ ಮಾಡಲಾಗಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಅವರು ಮಂಗಳವಾರದಂದು ಜಿಲ್ಲಾಡಳಿತ ಭವನದ ದಾಸ್ತಾನು ಕೇಂದ್ರಕ್ಕೆ ಖುದ್ದು ಭೇಟಿ ನೀಡಿ, ದಾಸ್ತಾನು ಸ್ವೀಕಾರ ಹಾಗೂ ವಿತರಣೆ ಕಾರ್ಯವನ್ನು ಪರಿಶೀಲಿಸಿ, ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.

ಹರಿದುಬರುತ್ತಿರುವ ನೆರವಿನ ಮಹಾಪೂರ :
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾದ ಸಂತ್ರಸ್ತರಿಗೆ ಸಹಾಯದ ಹಸ್ತ ಚಾಚಿರುವ ಕರ್ನಾಟಕ ರಾಜ್ಯದ ಜನತೆ, ನಿಶ್ಕಲ್ಮಶ ಮನಸ್ಸಿನಿಂದ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ. ರಾಜ್ಯದೆಲ್ಲೆಡೆಗಳಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿವಿಧ ಬಗೆಯ ವಾಹನಗಳು ಕೊಡಗು ಜಿಲ್ಲೆಯತ್ತ ಧಾವಿಸುತ್ತಿವೆ. ಪರಿಹಾರ ಸಾಮಗ್ರಿ ದಾಸ್ತಾನು ಕೇಂದ್ರಗಳಲ್ಲಿ ಈವರೆಗೆ ಅತಿ ಹೆಚ್ಚು ಸ್ವೀಕೃತವಾಗಿರುವ ಸಾಮಗ್ರಿಗಳೆಂದರೆ ಹಾಲು (ಬಹುದಿನ ಬಾಳಿಕೆ ಬರುವ), ಅಕ್ಕಿ, ಬಿಸ್ಸೆಟ್, ಬ್ರೆಡ್, ಬನ್, ರಸ್ಕ್ ಇವು ಹೆಚ್ಚು, ಹೆಚ್ಚು ಪೂರೈಕೆಯಾಗಿದೆ. ಇದಲ್ಲದೆ, ಬ್ಲಾಂಕೆಟ್ಸ್, ಬೆಡ್‍ಶೀಟ್ಸ್, ಸ್ಯಾನಿಟರಿ ನ್ಯಾಪ್‍ಕಿನ್ಸ್, ಟೂತ್ ಬ್ರಶ್, ಟೂತ್ ಪೇಸ್ಟ್, ಸೋಪು, ಕ್ಯಾಂಡೆಲ್ಸ್, ಮ್ಯಾಚ್‍ಬಾಕ್ಸ್, ಟವೆಲ್ಸ್, ನೀರಿನ ಬಾಟಲ್, ಹ್ಯಾಂಡ್ ಗ್ಲೌಸ್, ಶೂಗಳು, ಅಕ್ಕಿ, ಗೋಧಿ, ಸಕ್ಕರೆ, ಫ್ರೂಟ್ ಜ್ಯೂಸ್ ಟೆಟ್ರಾ ಪ್ಯಾಕ್, ಹಣ್ಣುಗಳು, ಉಡುಪುಗಳು, ಚಾಪೆಗಳು ಸೇರಿದಂತೆ ಹಲವಾರು ಬಗೆಯ ಸಾಮಗ್ರಿಗಳನ್ನು ಉದಾರವಾಗಿ ನೀಡುತ್ತಿದ್ದಾರೆ. ಸಂತ್ರಸ್ತರಿಗಾಗಿ ನೆರವು ನೀಡಬಯಸುವವರು ಇತರೆ ಸಂಘ ಸಂಸ್ಥೆಗಳಿಗೆ ನೀಡುವುದರ ಬದಲಾಗಿ, ಜಿಲ್ಲಾಡಳಿತ ಸ್ಥಾಪಿಸಿರುವ ದಾಸ್ತಾನು ಕೇಂದ್ರಗಳಿಗೆ ನೀಡುವುದು ಸೂಕ್ತ. ಅಂತಹವರು ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅಥವಾ ಮಲ್ಲೇಶ್- 9743168840, ಶ್ರೀಷಾ- 9972995353. ಬಸವರಾಜು- 8105204059 ಇವರನ್ನು ಸಂಪರ್ಕಿಸಬಹುದು.

ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ :
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ ಸ್ವೀಕೃತವಾಗುತ್ತಿರುವ ಸಾಮಗ್ರಿಗಳನ್ನು ಮಡಿಕೇರಿ ತಾಲೂಕಿನಲ್ಲಿ ಮಡಿಕೇರಿಯ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನೂತನ ಕಟ್ಟಡ, ಹಾಗೂ ಎಪಿಎಂಸಿ ಗೋದಾಮು, ಕುಶಾಲನಗರದ ಎಪಿಎಂಸಿ ಗೋದಾಮು ಹಾಗೂ ವಿರಾಜಪೇಟೆಯಲ್ಲಿಯೂ ದಾಸ್ತಾನು ಮಾಡಲಾಗುತ್ತಿದೆ. ಸಾಕಷ್ಟು ಪರಿಹಾರ ಸಾಮಗ್ರಿಗಳು ದಾಸ್ತಾನು ಇದ್ದರೂ, ಕೆಲವು ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ಪರಿಹಾರ ಸಾಮಗ್ರಿಗಳು ಸಕಾಲದಲ್ಲಿ ಹಾಗೂ ಅವಶ್ಯಕತೆಗೆ ತಕ್ಕಂತೆ ದೊರೆಯುತ್ತಿಲ್ಲವೆಂದು ಮತ್ತು ಪುನರ್ವಸತಿ ಕೇಂದ್ರಗಳಿಗೆ ವಿತರಿಸಲಾಗುತ್ತಿರುವ ಸಾಮಗ್ರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ದಾಸ್ತಾನು ಕೇಂದ್ರಗಳಿಗೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಗಳು ದಾಸ್ತಾನು ಕೇಂದ್ರದಲ್ಲಿ ಸ್ವೀಕರಿಸಲಾಗುವ ಸಾಮಗ್ರಿಗಳ ಮಾಹಿತಿಯನ್ನು ರಜಿಸ್ಟರ್‍ನಲ್ಲಿ ದಾಖಲಿಸಿ, ಪರಿಹಾರ ಕೇಂದ್ರಗಳಿಗೆ ಸಾಮಗ್ರಿಗಳನ್ನು ವಿತರಿಸುವಾಗ ಕಡ್ಡಾಯವಾಗಿ ಸಾಮಗ್ರಿ ಪಡೆದುಕೊಂಡವರ ಸಹಿ, ಹೆಸರು, ವಿಳಾಸ, ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ವಿತರಿಸಿದ ಸಾಮಗ್ರಿಗಳ ವಿವರ ಹಾಗೂ ಪ್ರಮಾಣವನ್ನು ಸ್ಪಷ್ಟವಾಗಿ ದಾಖಲಿಸಬೇಕು. ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯವನ್ನು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬಿಡಿಎ ಇನ್ನಷ್ಟು ಪಾರದರ್ಶಕ ಆಡಳಿತ ನೀಡಿಲಿ: ಡಿಸಿಎಂ ಪರಮೇಶ್ವರ್

ಬೆಂಗಳೂರು: ಬಿಡಿಎ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಆಡಳಿತ ವೈಖರಿಯನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸುವಂತೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡಿಎ ಅಧಿಕಾರಗಳೊಂದಿಗೆ ಮಂಗಳವಾರ ಬಿಡಿಎ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.

ಬಿಡಿಎ ಸ್ಥಾಪನೆಗೊಂಡ‌ ಉದ್ದೇಶವೇ ಸಂಪೂರ್ಣ ಬದಲಾಗಿದೆ.‌ ಬಡವರು, ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಿಸಿಕೊಡುವ ಜವಾಬ್ದಾರಿ ಬಿಡಿಎ ಮೇಲಿತ್ತು. ಇಂದು ಈ ಕೆಲಸಕ್ಕಿಂತ ರಸ್ತೆ , ಮೇಲ್ಸೇತುವೆ ನಿರ್ಮಾಣ, ಕಮರ್ಷಿಕಲ್‌ ಇತರೆ ಕ್ಷೇತ್ರದತ್ತ ವಿಸ್ತರಿಸಿಕೊಂಡಿದೆ.‌ ಇಲ್ಲಿಯೂ ಪಾರದರ್ಶಕ ಆಡಳಿತವಿಲ್ಲ ಎಂಬ ದೂರು ಬರುತ್ತಿದೆ. ಹಿಂದೊಮ್ಮೆ ಬಿಡಿಎ ಮುಚ್ಚುವ ಚರ್ಚೆ ಕೂಡ ನಡೆದಿತ್ತು. ಹೀಗಾಗಿ ಬಿಡಿಎನನ್ನು ಆರೋಗ್ಯಕರ ದಾರಿಯಲ್ಲಿ‌ ನಡೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದರು. ಟೆಂಡರ್‌ದಾರರು ಕಾಮಗಾರಿ ಪೂರ್ಣಗೊಳಿಸುವಲ್ಲಿ ತಡ ಮಾಡಿದರೆ ಮುಲಾಜಿಲ್ಲದೇ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ನೀಡಿ. ಯಾವುದೇ ಕಾಮಗಾರಿಯಾದರೂ ಅವಧಿಯೊಳಗೆ ನಡೆಯಬೇಕು, ಅನಗತ್ಯ ವೆಚ್ಚಕ್ಕೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಬಿಡಿಎ ಕೈಗೆತ್ತಿಕೊಂಡಿರುವ ಯೋಜನೆಗಳ ವಿವರವನ್ನು ಪಡೆದರು. ಈ ವೇಳೆ ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಎಸ್‌ಪಿ‌ ಜಗದೀಶ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೈಕ್‌ಗಳ ನಡುವೆ ಡಿಕ್ಕಿ: ಸಿನಿಮೀಯ ರೀತಿಯಲ್ಲಿ ಬಚಾವಾದ ಬಾಲಕ

ಬೆಂಗಳೂರು: ನೆಲಮಂಗಲದ ಬಳಿ ನಡೆದಿರುವ‌ ಅಪಘಾತ ಒಂದರಲ್ಲಿ ಪುಟ್ಟ ಬಾಲಕನೊಬ್ಬನೇ ಬೈಕ್ ನಲ್ಲಿ 500 ಮೀಟರ್ ದೂರ ಹೋಗಿ ಸಾವಿನ ದವಡೆಯಿಂದ ಪಾರಾಗಿರುವ ಪವಾಡ ಸದೃಶ ಘಟನೆ ಸಂಭವಿಸಿದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಎನ್.ಎಚ್.4 ರಸ್ತೆಯಲ್ಲಿ ತಂದೆ-ತಾಯಿ ಮತ್ತು ಮಗು ಬೈಕ್‌ನಲ್ಲಿ ಚಲಿಸುತ್ತಿರುವಾಗ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತವಾದ ತಕ್ಷಣ ತಂದೆ-ತಾಯಿ ಇಬ್ಬರೂ ಬೈಕ್‌ನಿಂದ ಕೆಳೆಗೆ ಬಿದ್ಧಿದ್ದಾರೆ. ಆದರೆ, ಪುಟ್ಟ ಬಾಲಕ ಮಾತ್ರ ಅದೇ ಬೈಕ್‌ನಲ್ಲಿ ಸುಮಾರು 500 ಮೀಟರ್ ಮುಂದೆ ಹೋಗಿ ಡಿವೈಡರ್ ಮೇಲೆ ಬಿದ್ದಿದ್ದಾನೆ.

ತಕ್ಷಣ ಸ್ಥಳೀಯರು ಬಂದು ಬಾಲಕನನ್ನು ಎತ್ತಿಕೊಂಡಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ತೊಂದರೆಯಾಗಿಲ್ಲ. ಈ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.