ಕೊಡಗಿನ ಅಭಿವೃದ್ಧಿಗಾಗಿ ಸಿಎಂ ಪರಿಹಾರ ನಿಧಿಗೆ ಜನರಿಂದ ಕೋಟ್ಯಾಂತರ ರೂಪಾಯಿ ದೇಣಿಗೆ!

ಬೆಂಗಳೂರು: ನೆರೆ ಪ್ರವಾಹದಿಂದ ನಲುಗಿರುವ ಕೊಡಗಿನ ಜನತೆಗೆ ಭರಪೂರವಾಗಿ ಆಹಾರ ನೀಡುತ್ತಿರುವ ಜನರು ಒಂದೆಡೆಯಾದರೆ, ಮತ್ತೊಂದೆಡೆ ಕೈತುಂಬಾ ಹಣ ಸಹಾಯವನ್ನು ಮಾಡುತ್ತಿದ್ದಾರೆ. ಒಂದೇ ದಿನದಲ್ಲಿ ಸುಮಾರು ಕೋಟ್ಯಾಂತರ ರೂಪಾಯಿಗಳನ್ನು ಹಲವರು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

ರಾಜ್ಯದ ಹಲವೆಡೆ ಪ್ರವಾಹ ಹಿನ್ನೆಲೆಯಲ್ಲಿ ಹಲವರು ಇಂದು ಸಿಎಂ ಗೃಹ ಕಚೇರಿ ಕೃಷ್ಣಗೆ ತೆರಳಿ ಸಿಎಂ ಪರಿಹಾರ ನಿಧಿಗೆ ಚೆಕ್ ನೀಡಿದರು. ಒಂದೇ ದಿನದಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಿಎಂ ಪರಿಹಾರ ನಿಧಿಗೆ ಬಂದಿದ್ದು, ನೆರವಿನ ಮಹಾಪೂರವೇ ಹರಿದು ಬಂದಿದೆ.

ಪರಿಹಾರ ನಿಧಿಗೆ ಹರಿದು ಬರುತ್ತಿರುವ ದೇಣಿಗೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಕುಮಾರಸ್ವಾಮಿ, ಬೃಹತ್ ಕೈಗಾರಿಕೆ ಇಲಾಖೆಯ ಕೈಗಾರಿಕೆ ಸಂಘ ಸಂಸ್ಥೆಯಿಂದ 3.75 ಕೋಟಿ ದೇಣಿಗೆಯನ್ನು ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ತಿಳಿಸಿದರು.

ಕೊಡಗಿನ ಜನರ ಕಷ್ಟಕ್ಕೆ ಸ್ಪಂದಿಸಿರುವ 74 ವರ್ಷದ
ನಿವೃತ್ತ ಅರಣ್ಯ ಇಲಾಖೆ ನೌಕರ ಕೋಲಾರದ ವೆಂಕಟರಮಣಯ್, ತಮ್ಮ ಮೂರು ತಿಂಗಳ ಪೆನ್ಷನ್ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. 50 ಸಾವಿರ ರೂಪಾಯಿ ಚೆಕ್‌ನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

ಸಂವಿಧಾನ ಸುಟ್ಟ ಪ್ರಕರಣ: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸುಪ್ರೀಂ, ಹೈ ಗೆ ವಕೀಲರ ಆಗ್ರಹ!

ಬೆಂಗಳೂರು: ದೆಹಲಿಯ ಜಂತರ್ ಮಂತರ್ ಬಳಿ ಸಂವಿಧಾನವನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಅಡ್ವೊಕೇಟ್ ಜನರಲಫ ಪ್ರೊ.ರವಿವರ್ಮ ಕುಮಾರ್ ಆಗ್ರಹಿಸಿದರು.

ಸಂವಿಧಾನವನ್ನು ಸುಟ್ಟ ಪ್ರಕರಣವನ್ನು ಖಂಡಿಸಿ ಹೈಕೋರ್ಟ್ ಮುಂಭಾಗ ವಕೀಲರು ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ರವಿವರ್ಮ ಕುಮಾರ್, ಸಂವಿಧಾನ ಸುಟ್ಟ ಎರಡು ಸಂಘಟನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು ಇದೆ. ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು‌.

ಸಂವಿಧಾನದ ನೆರಳಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಅದರ ಆಶಯಗಳಿಗೆ ತಕ್ಕಂತೆ ನಡೆಯಬೇಕು. ಆದರೆ, ಇಂದು ಇದಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿಯಾಗಿದೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದು ಕೊಳ್ಳಲಾಗುತ್ತಿದೆ. ಸಾರ್ವಜನಿಕವಾಗಿ ರಸ್ತೆಯ ಮೇಲೆ ನಡೆದಾಡಲೂ ಅಗದಂತಹ ವಾತಾವರಣದಲ್ಲಿ ಬದುಕುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕುರಿತು ಮನವಿ ಸಲ್ಲಿಸಲು ರಾಜ್ಯಪಾಲರ ಬಳಿ ತೆರಳಿದ ವಕೀಲರ ತಂಡದಿಂದ ರಾಜ್ಯಪಾಲರು ಮನವಿ ಸ್ವೀಕರಿಸಲಿಲ್ಲ‌. ಟಪಾಲು ಪೆಟ್ಟಿಗೆಯಲ್ಲಿ ಮನವಿ ಹಾಕಿ ಹೋಗುವಂತೆ ಸೂಚಿಸಿದ ರಾಜ್ಯಪಾಲರ ಸಂಪರ್ಕಾಧಿಕಾರಿ ವಕೀಲರ ತಂಡಕ್ಕೆ ಸೂಚಿಸಿದರು.

ಹೈಕೋರ್ಟ್ ಮುಂಭಾಗದಿಂದ ರಾಜಭವನಕ್ಕೆ ಹೊರಟ ಪ್ರತಿಭಟನೆಯಲ್ಲಿ ವಕೀಲರಾದ ಎಚ್.ವಿ‌.ಮಂಜುನಾಥ್, ದೇವದಾಸ್, ಬಾಬುರಾವ್, ಕೆ.ಬಿ.ಕೆ ಸ್ವಾಮಿ, ಡೆರಿಕ್ ಅನಿಲ್, ಎಸ್.ಮಂಜುನಾಥ್, ಮಾಳವಿಕಾ, ಅಖಿಲಾ, ಒ.ಅಶ್ವಿನಿ ಮತ್ತಿತರರು ಹಾಜರಿದ್ದರು.

ಪ್ರಧಾನಿ ಕೊಡಗಿನ ವೈಮಾನಿಕ ಸಮೀಕ್ಷೆ ನಡೆಸಲಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಕೊಡಗು:ಮಳೆಹಾನಿಯಿಂದ ಉಂಟಾಗಿರುವ ನಷ್ಟವನ್ನು ಅಂದಾಜಿಸಿದ ಬಳಿಕ ಕೇಂದ್ರ ಸರಕಾರದಿಂದ‌ ಧನಸಹಾಯಕ್ಕೆ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕೊಡಗು, ಮಡಿಕೇರಿ, ಕುಶಾಲನಗರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ ವೀಕ್ಷಿಸಿ, ಸಂತ್ರಸ್ತರ ನೋವು ಆಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರಕಾರ ಕೇರಳಕ್ಕೆ ೫೦೦ ಕೋಟಿ ರು. ನೀಡಿದಂತೆ ಕೊಡಗಿಗೂ ಸಹಾಯ ಧನ ನೀಡಬೇಕು. ಮೊದಲು ಇಲ್ಲಿನ ಆಸ್ತಿ, ಬೆಳೆ, ರಸ್ತೆ ಸೇರಿದಂತೆ ಎಲ್ಲ ನಷ್ಟವನ್ನು ಅಂದಾಜಿಸಿ ವರದಿ ಪಡೆದ ಬಳಿಕ ಕೇಂದ್ರಕ್ಕೆ ಹಣದ ನೆರವಿಗೆ ಮನವಿ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಕೊಡಗಿನ ವೈಮಾನಿಕ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.

ಕೊಡಗಿನಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಮಳೆಯಾದ್ದರಿಂದ ಈ ಭಾಗ ಸಂಪೂರ್ಣ ಹಾನಿಗೊಳಲಾಗಿದೆ. ೫೦ ಸಾವಿರ ಜನ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ೫ ಸಾವಿರ ಜನರನ್ನು ಸಂತ್ರಸ್ತ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಸಾಕಷ್ಟು ಮನೆಗಳು ಕೊಚ್ಚಿ ಹೋಗಿವೆ. ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ.

ರಾಜ್ಯ ಸರಕಾರ ನೆರೆ ನಿರಾಶ್ರಿತ ನೆರವಿಗೆ ಧಾವಿಸಿದೆ. ಸಿಎಂ, ಕಂದಾಯ ಸಚಿವರು ಸೇರಿದಂತೆ ಹಲವು ಸಚುವರುಗಳು ಇಲ್ಲಿನ ಪರಿಸ್ಥಿತಿ ಅವಲೋಕಿಸಿ, ಇಲ್ಲಿಯೇ ಬೀಡುಬಿಟ್ಟಿದ್ದಾರೆ.
ಮತ್ತೊಂದೆಡೆ ರಾಜ್ಯಾದ್ಯಂತ ಸಾರ್ವಜನಿಕರು ಇವರ ಕಷ್ಟಕ್ಕೆ ನೆರವಾಗಿ, ಆಹಾರ, ಇತರೆ ಸಾಮಾಗ್ರಿಗಳು ಸೇರಿದಂತೆ ಎಲ್ಲರೀತಿಯ ಸಹಾಯಹಸ್ತ ಚಾಚುತ್ತಿದ್ದಾರೆ.

ಇದುವರೆಗು ಒಟ್ಟು ೭ ಜನ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಕೆಲವರು ಕಾಣೆಯಾಗಿದ್ದಾರೆ. ಇವರ ಹುಡುಕಾಟ ನಡೆಯುತ್ತಿದೆ. ಮನೆ‌ ಕಳೆದುಕೊಂಡವರಿಗೆ ಸರಕಾರದಿಂದಲೇ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿದ್ದು, ಪ್ರೀ ಫ್ಯಾಬ್ರಿಕ್‌ ಮನೆ ನಿರ್ಮಿಸಲು ಚಿಂತಿಸಲಾಗಿದೆ. ಕೆಲವರ ಮನೆ ಇದ್ದ ಜಾಗವೂ ಗುರುತಿಸಲು ಸಾಧ್ಯವಾಗದ ರೀತಿ ಹಾಳಾಗಿದೆ. ಅಂಥವರಿಗೆ ಸರಕಾರದ ಜಾಗದಲ್ಲಿಯೇ ಮನೆ ನಿರ್ಮಿಸಿ ಕೊಡಲಾಗುತ್ತದೆ ಎಂದರು.

ಆಹಾರ ಸಾಮಾಗ್ರಿಗಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ನಮಗೂ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಎಸ್‌ಪಿ ಅವರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಕೊಡಗು ಪ್ರವಾಹದಿಂದ ಏಷ್ಟೇಲ್ಲಾ ಹಾನಿಯಾಗಿದೆ: ಸಿಎಂ ಮಾಹಿತಿ

ಕೊಡಗು: ಶತಮಾನದ ಮಹಾಮಳೆಗೆ ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು , 12 ಜನ ಮೃತಪಟ್ಟಿದ್ದಾರೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 773 ಭಾಗಶ: ಹಾನಿಯಾಗಿದೆ. 123 ಕಿ.ಮೀ. ರಸ್ತೆ, 58 ಸೇತುವೆ, 278 ಸರ್ಕಾರಿ ಕಟ್ಟಡ, 3800 ವಿದ್ಯುತ್ ಕಂಬ ಹಾನಿಗೊಳಗಾಗಿವೆ. ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ ಎಂದು ಸಿಎಂ ಕುಮಾರಸ್ವಾಮಿ ಮಾಹಿತಿ ನೀಡಿದರು.

ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ ನಂತರ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇಂದು ಬೆಳಿಗ್ಗೆ 10.00 ಗಂಟೆವರೆಗೆ 4320 ಜನರನ್ನು ಆಪತ್ತಿನಿಂದ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ನಿನ್ನೆಯಿಂದ ಮಳೆಯ ಭೀಕರತೆ ಸ್ಪಲ್ಪ ತಗ್ಗಿರುವುದರಿಂದ, ಪರಿಹಾರ ಕಾರ್ಯಗಳನ್ನು ಚುರುಕುಗೊಂಡಿವೆ ಎಂದು ಹೇಳಿದರು.

ಜಿಲ್ಲಾಡಳಿತ , ಪೊಲೀಸ್ ಇಲಾಖೆ, ರಾಜ್ಯ ಸಶಸ್ತ್ರ ಮೀಸಲು ಪಡೆ, ಭೂ ಸೇನೆ, ವಾಯು ಪಡೆ, ನೌಕಾ ದಳ, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್) ತಂಡಗಳು, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧಿಕಾರಿಗಳು, ಎನ್ಸಿಸಿ, ನಾಗರೀಕ ರಕ್ಷಣಾ ದಳ, ಗೃಹ ರಕ್ಷಕ ದಳ ಸೇರಿದಂತೆ ಒಟ್ಟು 1725 ವಿಶೇಷ ತರಬೇತಿ ಪಡೆದ ತಜ್ಞರು ಯುದ್ಧೋಪಾದಿಯಲ್ಲಿ ಪ್ರತಿ ದಿನ 24 ಗಂಟೆಗಳ ಕಾಲ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ವಾಯುಪಡೆಯ ಎಂ-17 ಹೆಲಿಕಾಪ್ಟರ್ ಹಾರಂಗಿಯಿಂದ ಕಾರ್ಯನಿರ್ವಹಿಸುತ್ತಿವೆ.

ಪ್ರತಿ ದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನಿರಂತರ ಮಾಹಿತಿಯನ್ನು ಒದಗಿಸುತ್ತಿದ್ದಾರೆ. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಕೇಂದ್ರ ರಕ್ಷಣಾ ಸಚಿವರು ದೂರವಾಣಿ ಮೂಲಕ ಮಾತನಾಡಿ, ಪರಿಸ್ಥಿತಿಯ ವಿವರ ಪಡೆದಿರುತ್ತಾರೆ. ಪೂರ್ಣ ಸಹಕಾರವನ್ನು ನೀಡಿದ್ದಾರೆ. ಇಂದು ಮಧ್ಯಾಹ್ನ ಮುಖ್ಯ ಕಾರ್ಯದರ್ಶಿಗಳು ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕಾಮಗಾರಿ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡಿಜಿಪಿ ಅಗ್ನಿ ಶಾಮಕ ದಳ, ಇಬ್ಬರು ಎಡಿಜಿಪಿಗಳು, ಇಬ್ಬರು ಅಪರ ಮುಖ್ಯ ಕಾರ್ಯದರ್ಶಿಗಳು ಸ್ಥಳದಲ್ಲೇ ಮುಕ್ಕಾಂ ಮಾಡಿ , ಪರಿಹಾರ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಕೊಡಗಿನ ನೆರೆಯ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಜಿಲ್ಲಾ ಮಟ್ಟದ ಅಧಿಕಾರಿಗಳು ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೊಬೆಷನರಿ ಐಎಎಸ್ ಅಧಿಕಾರಿಗಳನ್ನು ಕೊಡಗಿಗೆ ನಿಯೋಜಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 41 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 09 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 6620 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿದ್ದಾರೆ. ಪರಿಹಾರ ಕೇಂದ್ರಗಳಿಗೆ ಹಾಲು, ಕುಡಿಯುವ ನೀರು ವ್ಯವಸ್ಥೆಯನ್ನು ಮಾಡಲಾಗಿದೆ. ನೆರವಿಗಾಗಿ ಒದಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು ಮಡಿಕೇರಿಯಲ್ಲಿರುವ ಎಪಿಎಂಸಿ ಯಾರ್ಡ್ ನಲ್ಲಿ ಸಂಗ್ರಹಿಸಿ ಪಂಚಾಯತಿಗಳ ಮೂಲಕ ಜನರಿಗೆ ವಿತರಣೆ ಮಾಡಲಾಗುತ್ತಿದೆ.

ಐದು ವಿಶೇಷ ವೈದ್ಯಕೀಯ ತಂಡಗಳು, 10 ರೆವಿನ್ಯೂ ಅಧಿಕಾರಿಗಳ ತಂಡಗಳನ್ನು ಪರಿಹಾರ ಕಾಮಗಾರಿಗಳಿಗಾಗಿ ವಿಶೇಷವಾಗಿ ನಿಯೋಜಿಸಲಾಗಿದೆ. 60 ಜೆಸಿಬಿಗಳು, 20 ಫೋರ್ ವೀಲ್ ಡ್ರೈವ್‌ನ ಬೊಲೆರೋ ವಾಹನಗಳು ಕಾರ್ಯತತ್ಪರವಾಗಿದೆ. ಕೊಡಗು ಜಿಲ್ಲೆಯಲ್ಲಿ ತಕ್ಷಣವೇ ಮುಂದಿನ ಹತ್ತು ದಿನಗಳೊಳಗೆ ಸಂತ್ರಸ್ತರಿಗೆ ತಾತ್ಕಾಲಿಕ ಅಲ್ಯುಮಿನಿಯಂ ಶೆಡ್ ಗಳನ್ನು ನಿರ್ಮಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸಂತ್ರಸ್ತರಿಗೆ ಅಗತ್ಯವಾದ ಶೆಡ್ ಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗುತ್ತಿದೆ. ಕುಶಾಲನಗರದ ಮೂರು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ನೀರನ್ನು ಹೊರಕ್ಕೆ ಪಂಪ್ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತಾಂತ್ರಿಕ ತಂಡ ಕೊಡಗಿಗೆ ತೆರಳಿದೆ.

ನೆರೆ- ಪ್ರವಾಹದ ಬಳಿಕ ನಮಗೆ ಎದುರಾಗುವ ಪ್ರಮುಖ ಸವಾಲೆಂದರೆ ಸಾರ್ವಜನಿಕ ಆರೋಗ್ಯ. ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯ ವಿಶೇಷ ಘಟಕಗಳನ್ನು ರೂಪಿಸಿ ನಿಯೋಜಿಸಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಕೂಲಿ ಕಾರ್ಮಿಕರಿಗೆ ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ ಮುಂತಾದ ಪಟ್ಟಣಗಳಲ್ಲಿ ಬಿದ್ದಿರುವ ತ್ಯಾಜ್ಯವಸ್ತುಗಳ ನಿರ್ಮೂಲನಾ ಕಾಮಗಾರಿಯನ್ನು ವಹಿಸಲು ಸೂಚಿಸಲಾಗಿದೆ. ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಈಗಾಗಲೇ ಸರಬರಾಜು ಮಾಡಿರುವ ಪುಸ್ತಕ, ಸಮವಸ್ತ್ರ ಹಾನಿಗೊಳಗಾಗಿರುವುದರಿಂದ ಮತ್ತೊಂದು ಸೆಟ್ ಪುಸ್ತಕ ಮತ್ತು ಸಮವಸ್ತ್ರಗಳನ್ನು ಸರಬರಾಜು ಮಾಡಲು ಸೂಚಿಸಲಾಗಿದೆ.

ಪರಿಹಾರ ಕೇಂದ್ರಗಳಲ್ಲಿರುವ ಸುಮಾರು 5800 ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ರೂ.3800/- ನೀಡಲು ಸೂಚಿಸಲಾಗಿದೆ. ಹಾಗೂ ಸಂಕಷ್ಟಕ್ಕೊಳಗಾಗಿರುವ 50 ಸಾವಿರ ಕುಟುಂಬಗಳಿಗೆ ದಿನೋಪಯೋಗಿ ದಿನಸಿ ಸಾಮಾಗ್ರಿಗಳನ್ನು ಪ್ರತಿ ಕುಟುಂಬದ ಮನೆಯ ಬಾಗಿಲಿಗೆ ತಲುಪಿಸಲು 10 ಮೊಬೈಲ್ ದಿನಸಿ ಸಾಮಾಗ್ರಿಗಳ ವಿತರಣಾ ಘಟಕಗಳನ್ನು ಪ್ರಾರಂಬಿಸಲು ಸೂಚಿಸಲಾಗಿದೆ.

ಭಾಗಮಂಡಲ-ನಾಪೊಕ್ಲು- ಅಯ್ಯಂಗೇರಿ ,ಸುಳ್ಯ -ಮಡಿಕೇರಿ ನಡುವಿನ ಸಂಪರ್ಕ ರಸ್ತೆಯಲ್ಲಿ ಹಲವೆಡೆ ಮಣ್ಣು ಕುಸಿತ ಉಂಟಾಗಿದ್ದು, ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೊಳಿಸಲು ಕಾರ್ಯತತ್ಪರವಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಾಗಿರುವ ಅಡೆತಡೆಗಳನ್ನು ಸರಿಪಡಿಸಲು ಕೆಪಿಟಿಸಿಎಲ್/ ಚೆಸ್ಕಾಂ ವಿಶೇಷ ತಂಡವನ್ನು ರವಾನಿಸಿದೆ.

ಕೊಡಗು ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಕಳೆದ ಮೂರು ತಿಂಗಳಿನಲ್ಲಿ ಇಪ್ಪತ್ತು ದಿನ ರಜೆ ಇದ್ದುದಸರಿಂದ, ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ನಷ್ಟದ ಅಂದಾಜು ಪಟ್ಟಿಯನ್ನು ತಯಾರಿಸಲು ಹಾಗೂ ಮನೆಗಳನ್ನು ಕಟ್ಟುವ ಕಾರ್ಯದ ಮೇಲ್ವಿಚಾರಣೆ ಮಾಡಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿನ ಪ್ರಕೃತಿ ವಿಕೋಪ/ ಅತಿವೃಷ್ಟಿಯಲ್ಲಿ ನೊಂದ ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಈ ಕೆಳಕಂಡ ಮುಖ್ಯಮಂತ್ರಿಯವರ ಪರಿಹಾರ ನಿಧಿ: ಖಾತೆಗೆ ದೇಣಿಗೆ ಸಲ್ಲಿಸಬಹುದಾಗಿರುತ್ತದೆ.
ಖಾತೆಯ ಹೆಸರು : ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018.
ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ : ವಿಧಾನ ಸೌಧ
ಖಾತೆ ಸಂಖ್ಯೆ : 37887098605
ಐ.ಎಫ್.ಎಸ್.ಸಿ. ಕೋಡ್ : ಎಸ್ಬಿಐಎನ್ 0040277
ಎಂ.ಐ.ಸಿ.ಆರ್. ಸಂಖ್ಯೆ : 560002419

“ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80 -ಜಿ ಅಡಿ ಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.”

ಸಂತ್ರಸ್ತರಿಗೆ ವಸತಿ ಕಲ್ಪಿಸಲು ಜಾಗ ಗುರ್ತಿಸಿ: ಸಿಎಂ ಸೂಚನೆ

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂತ್ರಸ್ಥರಿಗೆ ನೆಲೆ ಕಲ್ಪಿಸುವುದರ ಜೊತೆಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಪ್ರತಿಯೊಬ್ಬ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರಬಾರದು, ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಮುಕ್ಕೋಡ್ಲು ಗ್ರಾಮದಲ್ಲಿ ಭಾನುವಾರ 60 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎರಡು ಸ್ಥಳಗಳಲ್ಲಿ ಒಟ್ಟು 170 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಸಮಸ್ಯೆಗಳಿಗೆ ತುತ್ತಾದ ಕುಟುಂಬಗಳಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಯಾವುದೇ ರೀತಿಯಲ್ಲಿ ಹಣದ ಕೊರತೆ ಇಲ್ಲ, ಎಷ್ಟು ಬೇಕಾದರೂ ಹಣ ಬಿಡುಗಡೆ ಮಾಡಲಾಗುವುದು. ಆ ನಿಟ್ಟಿನಲ್ಲಿ ಸಂತ್ರಸ್ಥರಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಮಡಿಕೇರಿ-ಮಂಗಳೂರು ರಸ್ತೆ ಗುಡ್ಡ ಕುಸಿದಿದೆ, ಹಾಗೆಯೇ ಮಡಿಕೇರಿ-ಸೋಮವಾರಪೇಟೆ ರಸ್ತೆ ಕುಸಿದಿದ್ದು, ತಕ್ಷಣವೇ ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು. ಆ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೂಚಿಸಿದರು.

ಸರ್ಕಾರಕ್ಕೆ ಕಪ್ಪುಚುಕ್ಕೆ ಬರದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಕೊಡಗು ಜಿಲ್ಲೆಯಲ್ಲಿ ಆಗಿರುವ ನಷ್ಟಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಅವರು ಪ್ರಕಟಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಮರ್ಪಕ ಶೌಚಾಲಯಗಳು ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಸಂಬಂಧ ಈಗಾಗಲೇ ಬೆಂಗಳೂರಿನಿಂದ 120 ಸಂಚಾರಿ ಶೌಚಾಲಯಗಳನ್ನು ತರಿಸಲಾಗುತ್ತಿದೆ. ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ 300 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಅವರು ಸಲಹೆ ಮಾಡಿದರು.

ಈಗಾಗಲೇ ಕುಶಾಲನಗರದ ಹಲವು ಬಡಾವಣೆಗಳಲ್ಲಿ ನೀರು ನಿಂತಿದ್ದು, ನೀರನ್ನು ಖಾಲಿ ಮಾಡಿಸಬೇಕು. ಸಾಂಕ್ರಾಮಿಕ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಉತ್ತಮ ಊಟ, ಉಪಹಾರ ಒದಗಿಸಬೇಕು. ಸರ್ಕಾರ ಎಡವಿದೆ ಎಂಬ ದೂರುಗಳು ಕೇಳಿಬರಬಾರದು, ಸಮರೋಪಾದಿಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಪ್ರಕೃತಿ ವಿಕೋಪ ಪರಿಹಾರ ಸಂಬಂಧ ಇನ್ನಷ್ಟು ಕಾರ್ಯ ನಿರ್ವಹಿಸುವಂತಾಗಲು ಬೇರೆ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಹಾಗೆಯೇ ಕಾಫಿ ಮಂಡಳಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ತಿಳಿಸಲಾಗಿದೆ ಎಂದರು.

ಈಗಾಗಲೇ ನಾನಾ ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವರು ಪರಿಹಾರ ಕೇಂದ್ರಗಳಿಗೆ ಹೋಗಲು ಇಷ್ಟಪಡುವುದಿಲ್ಲ, ಹಾಗೆಯೇ ಸರ್ಕಾರತೇರ ಸಂಸ್ಥೆಗಳು ಸಹ ಸಂತ್ರಸ್ಥರಿಗೆ ಊಟೋಪಚಾರ ಕಲ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರು ವಿವರಿಸಿದರು.

ಕಳೆದ ಒಂದು ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಪ್ರಕೃತಿ ವಿಕೋಪದಿಂದ ಆಗಿರುವ ಅನಾಹುತದಲ್ಲಿ ಸಂತ್ರಸ್ಥರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು, ಸಾರ್ವಜನಿಕರು, ಸ್ಥಳೀಯರು ಶ್ರಮಿಸಿದ್ದಾರೆ ಎಂದರು.

ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗುತ್ತದೆ, ಹಾಗೆಯೇ ಹಾರಂಗಿ ಜಲಾಶಯ ಬಿರುಕು ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇಂತಹ ವದಂತಿಗಳಿಗೆ ಯಾರೂ ಸಹ ಕಿವಿಗೊಡಬಾರದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೋರಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಜಿಲ್ಲೆಯಲ್ಲಿ ಸುಮಾರು 50 ಸಾವಿರ ಜನ ನೇರವಾಗಿ ಮಳೆಯಿಂದ ತೊಂದರೆಗೀಡಾಗಿದ್ದಾರೆ. ಈ ಪೈಕಿ ಸುಮಾರು 4 ಸಾವಿರ ಜನರು ವಿವಿಧ ಪ್ರದೇಶಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳ ತೀವ್ರ ಮಳೆಯಿಂದಾಗಿ ಸಾವಿರಾರು ಮನೆಗಳು ಹಾನಿಯಾಗಿದ್ದು, 07 ಜನರು ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 3120 ಸಂತ್ರಸ್ತರನ್ನು ರಕ್ಷಿಸಿದ್ದು, ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 41 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಈ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಊಟೋಪಚಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಹಾಸಿಗೆ ಮತ್ತು ಹೊದಿಕೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಸಂತ್ರಸ್ತರಿಗೆ ನೆರವು ನೀಡಿದ ಅಭಿಮಾ‌ನಿಗಳಿಗೆ ಸಿನಿತಾರೆಯರಿಂದ ಕೃತಜ್ಞತೆ

0

ಬೆಂಗಳೂರು: ಜಲಪ್ರಳಯದಿಂದ ತತ್ತರಿಸಿರುವ ಕೊಡವರ ನೆರವಿಗೆ ಸ್ಯಾಂಡಲ್ ವುಡ್ ಸ್ಪಂಧಿಸಿದೆ.ಚಂದನವನದ ತಾರೆಯರ ಕರೆಗೆ ಓಗೊಟ್ಟು ಜನರು ಅಗತ್ಯ ವಸ್ತುಗಳನ್ನು ಕಳಿಸಿದ್ದು ಜನತೆಗೆ ತಾರೆಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಸಂಭವಿಸಿದ ನೆರೆಯಲ್ಲಿ ಸಂತ್ರಸ್ತರಾದ ಜನರಿಗೆ ಸ್ಯಾಂಡಲ್ ವುಡ್ ಪರೋಕ್ಷವಾಗಿ ನೆರವು ನೀಡಿದೆ.ನೆರೆ ಹಾವಳಿಯಿಂದ ಜನ ಬೀದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಕಿಚ್ಚ ಸುದೀಪ್,ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ‌ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಸಿನಿ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಕೊಡಗು ಜನರ ಕಷ್ಟಕ್ಕೆ ಸ್ಪಂಧಿಸಿ ಅಗತ್ಯ ವಸ್ತುಗಳನ್ನು ಕೈಲಾದ ಮಟ್ಟದಲ್ಲಿ ನೀಡಿ ಎಂದು ಅಭಿಮಾನಿಗಳಿಗೆ ಜನತೆಗೆ ಕರೆ ನೀಡಿದ್ದರು.ತಾರೆಯರ ಕರೆಗೆ ಸ್ಪಂಧಿಸಿದ್ದಾರೆ.

ಕಿಚ್ಚ ಫೌಂಡೇಶನ್ ಮೂಲಕ ಸುದೀಪ್ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕೊಡಗಿಗೆ ರವಾನಿಸಿದ್ದಾರೆ.ದರ್ಶನ್, ಪುನೀತ್ ಅಭಿಮಾನಿಗಳು ಕೂಡ ಬಟ್ಟೆಗಳು,ಔಷಧಿಗಳು,ತಿನಿಸುಗಳನ್ನು ಕಳುಹಿಸಿಕೊಟ್ಟಿದ್ದು ಸಂತ್ರಸ್ತರಿಗೆ ನೆರವು ನೀಡಿದ ಎಲ್ಲರಿಗೂ ಟ್ವಿಟ್ಟರ್ ಮೂಲಕ ನಟರು ಧನ್ಯವಾದ ಅರ್ಪಿಸಿದ್ದಾರೆ.