ಸಂತ್ರಸ್ತ ಕೊಡವರಿಗೆ ಅಗತ್ಯ ವಸ್ತುಗಳ ಪೂರೈಸಿ:ಹಳೆಯ ವಸ್ತು ಕೊಡಬೇಡಿ ಎನ್ನುವ ಕಳಕಳಿ ಇರಲಿ

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಬಹಳಷ್ಟು ಅನಾಹುತ ಸಂಬಂಧಿಸಿದ್ದು ಕೆಲವೆಡೆ ಬಹುತೇಕ ಮಂದಿ ಮನೆ-ಮಠ, ಆಸ್ತಿ-ಪಾಸ್ತಿ ಎಲ್ಲಾವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕಾವೇರಿಯ ತವರು ನೆಲ ಇಂದೆಂದೂ ಕಂಡು ಕೇಳರಿಯದ ಜಲಪ್ರಳಯವನ್ನು ಕಂಡಿದೆ.ಇದನ್ನು ಕಂಡು ಮರುಗಿದವರು ಹಲವಾರು ಮಂದಿ.
ಜಿಲ್ಲೆ ಹೊರಜಿಲ್ಲೆ ಮಾತ್ರವಲ್ಲ, ಹೊರ ರಾಜ್ಯಗಳಿಂದ ಹಿಡಿದು ಹೊರದೇಶಗಳಿಂದ ಕೂಡ ಆರ್ಥಿಕ ನೆರವು ಬರುತ್ತಿದೆ.
ನಿಮಗೆಲ್ಲಾರಿಗೂ ಸುದ್ದಿಲೋಕ ನ್ಯೂಸ್ ಪೋರ್ಟಲ್ ವತಿಯಿಂದ ತುಂಬು ಹೃದಯದ ವಂದನೆಗಳು.

ನಿಮ್ಮ ಅಭಿಮಾನಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ. ಸಹಾಯ ಮಾಡಲ ಮನಸ್ಸು ಇರುವವರು ಇನ್ನೂ ಕಾಲ ಮಿಂಚಿಲ್ಲ ನೆರವು ನೀಡಿ ಕೊಡವ ಕೈ ಹಿಡಿಯಿರಿ.ವಸಂತನಗರದಲ್ಲಿ ಕೊಡವ ಸಮಾಜ ಇದ್ದು ಅಲ್ಲಿಗೆ ನೀವು ಕೊಡಬೇಕೆಂದಿರುವ ಬಟ್ಟೆ,ಬರೆ,ದವಸ ಧಾನ್ಯ, ಅಗತ್ಯ ವಸ್ತುಗಳು,ಹೊದಿಕೆ, ಔಷಧಿಗಳ ಸೇರಿದಂತೆ ಯಾವುದೇ ವಸ್ತುಗಳನ್ನು ತಲುಪಿಸಿದರೂ ಅವರು ಸರಿಯಾಗಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.

ಇನ್ನು ಬಿಜೆಪಿ ಕಚೇರಿ ಮಾಧ್ಯಮಗಳ ಕಚೇರಿಗೆ ತಲುಪಿಸಿದರೂ ನಿಮ್ಮ ವಸ್ತುಗಳು ಸಂತ್ರಸ್ತರಿಗೆ ತಲುಪಲಿವೆ.ಸಾಧ್ಯವಾದಷ್ಟು ವಸ್ತುಗಳನ್ನೇ ನೀಡಿ ಹಣಕಾಸು ನೆರವು ಕಡಿಮೆ ಮಾಡಿ,ಹಣ ನೀಡಲೇಬೇಕು ಎಂದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮೂಲಕ ತಲುಪಿಸಿ ಎನ್ನುವುದು ಸುದ್ದಿಲೋಕ ನ್ಯೂಸ್ ಪೋರ್ಟಲ್ ನ ಕಳಕಳಿಯ ಮನವಿ.

ಇನ್ನು ಕೆಲವು ಭಾಗದಲ್ಲಿ ಹಳೆಯ ಬಟ್ಟೆಗಳನ್ನು ಕಳುಹಿಸಿದ್ದು ಅದು ಹಾಗೆಯೇ ಬಿದ್ದಿದೆ.ಕೊಡಗಿನ ಜನ ಸ್ವಾಭಿಮಾನಿಗಳು ತಾವು ಕಷ್ಟದಲ್ಲಿದ್ದರು ಒಬ್ಬರು ಹಾಕಿದ ಬಟ್ಟೆಯನ್ನು ಮನೆಯ ಆಳು-ಕಾಳುಗಳಿಗೂ ಕೊಡುವುದಿಲ್ಲ ಹಾಗೆ ಅವರು ಬಳಸುವುದಿಲ್ಲ.ದಯವಿಟ್ಟು ಇಂತಹ ಬಟ್ಟೆಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಿ. ಸಾದ್ಯವಾದರೆ ಕೇವಲ ಒಂದೆರಡು ಆದರು ಚಿಂತೆ ಇಲ್ಲ. ಕಡಿಮೆ ದರವಾದರು ಪರವಾಗಿಲ್ಲ ಹೊಸದನ್ನು ನೀಡಿ ಎನ್ನುವ ಮನವಿ ನಮ್ಮ‌ತಂಡದ ಪರವಾಗಿ ಮಾಡುತ್ತಿದ್ದೇವೆ.

ಸರಕು ಹೆಚ್ಚುವರಿಯಾದರೂ ಚಿಂತೆಯಿಲ್ಲ ಕಡಿಮೆಯಾಗಬಾರದು,ಹೆಚ್ಚಾದರೆ ನೆರೆಯ ಕೇರಳಕ್ಕೂ‌ ಕಳಿಸಬಹುದಾಗಿದ್ದು ನೀವು ಕಳಿಹಿಸುವ ವಸ್ತುಗಳು ವ್ಯರ್ಥವಾಗಲ್ಲ ಹಾಗಾಗಿ ಅಗತ್ಯ ವಸ್ತುಗಳು,ಔಷಧಿಗಳನ್ನು ನೀಡಿ ಸಂತ್ರಸ್ತರಿಗೆ ನೆರವು ನೀಡಿ ಎನ್ನುವ ಸಣ್ಣ ಮನವಿಯನ್ನು ಸುದ್ದಿಲೋಕ‌ ಮಾಡುತ್ತಿದೆ.

ಕೊಡಗು ಪರಿಸ್ಥಿತಿ ಮಾಹಿತಿ ಪಡೆದ ರಾಷ್ಟ್ರಪತಿ:ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ

ಕೊಡಗು:ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.

ಕೊಡಗು ಜಿಲ್ಲಾಡಳಿತವು ರಕ್ಷಣೆ ಹಾಗೂ ಪರಿಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸೇನಾ ಸಿಬ್ಬಂದಿ, ಎನ್.ಡಿ.ಆರ್.ಎಫ್. ಮತ್ತಿತರ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು ಈವರೆಗೆ 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿಯವರು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದರು.
ರಾಷ್ಟ್ರಪತಿಗಳು ಕರೆಮಾಡಿ ತೋರಿದ ಕಾಳಜಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು.

ಈ ನಡುವೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೊಡಗಿನಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು.ಇಂದು ಅವರು ಮೈಸೂರು ವಿಮಾನ ನಿಲ್ದಾಣದಿಂದ ಹೊರಟು ಸೋಮವಾರಪೇಟೆ, ಶುಂಠಿ ಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ, ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಿದರು.ನಂತರ ಪಿರಿಯಾಪಟ್ಟಣ ಹೆಲಿಪ್ಯಾಡ್ನಲ್ಲಿ ಇಳಿದು ಮಡಿಕೇರಿಗೆ ತೆರಳಿದರು.
ಮಾರ್ಗಮಧ್ಯದಲ್ಲಿ ಮಳೆಹಾನಿಗೆ ಒಳಗಾದ ಕೆಲವು ಸ್ಥಳ ಪರಿಶೀಲನೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.

ಕೊಡಗು ಸಂತ್ರಸ್ತರ ನೆರವಿಗೆ 20 ಟ್ರಕ್ ಅಗತ್ಯ ವಸ್ತು ಪೂರೈಕೆ,2 ತಿಂಗಳ ವೇತನ ನೀಡಿದ ಬಿಜೆಪಿ

ಬೆಂಗಳೂರು: ಕೊಡಗಿನ ನೆರೆ ಸಂತ್ರಸ್ತರಿಗೆ ನೆರವು ನೀಡಲು 20 ಟ್ರಕ್ ಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ರಾಜ್ಯ ಬಿಜೆಪಿಯಿಂದ ನಾಳೆ ರವಾನಿಸುತ್ತಿದ್ದು ಶಾಸಕರು ಪಾಲಿಕೆ‌ ಸದಸ್ಯರು 2 ತಿಂಗಳ ವೇತನವನ್ನ ನೆರವಿಗೆ ನೀಡುವ ನಿರ್ಧಾರವನ್ನು ಕೈಗೊಂಡಿದೆ.

ಕೊಡಗಿನಲ್ಲಿ ಮಳೆ ಅನಾಹುತ ಹಿನ್ನಲೆಯಲ್ಲಿ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯರ ಸಭೆ ನಡೆದಿದ್ದು ಮಳೆಯಿಂದ ಅನಾಹುತವಾದ ಕೊಡಗಿಗೆ ಯಾವ ರೀತಿ ಸಹಾಯ ಮಾಡಬಹುದೆಂಬ ಬಗ್ಗೆ ಚರ್ಚೆ ನಡೆಸಲಾಯಿತು.

ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನವನ್ನು ನೆರೆ ಪರಿಹಾರಕ್ಕಾಗಿ ನೀಡಲು ನಿರ್ಧರಿಸಿದ್ದು ಇತರ ಪದಾಧಿಕಾರಿಗಳು ಕನಿಷ್ಠ 10ಸಾವಿರ ರೂ. ನೀಡುವಂತೆ ಆರ್. ಅಶೋಕ್ ಅವರು ಸಭೆಯಲ್ಲಿ ಮನವಿ ಮಾಡಿದರು.

ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಡಿಸಿಎಂ ಆರ್ ಅಶೋಕ್, ಬೆಂಗಳೂರಿನ ನಾವು ಕಾವೇರಿ ನೀರು ಕುಡಿಯುತ್ತೇವೆ ದೇಶಕ್ಕ ಹೆಚ್ಚು ಸೈನಿಕರನ್ನ ಕೊಟ್ಟ ನಾಡು ಕೊಡಗು.ಇಂತಹ ಕೊಡಗು ಮೊದಲಿನ ಸ್ಥಿತಿಗೆ ಬರಲು ಐದಾರು ವರ್ಷ ಬೇಕಾಗಬಹುದು ನಮಗೆ ಕುಡಿಯುವ ನೀರು, ದೇಶಕ್ಕೆ ಸೈನಿಕರನ್ನ ಕೊಟ್ಟ ಕೊಡಗಿಗೆ ನಾವು ಮಾಡುತ್ತಿರುವುದು ಸಹಾಯವಲ್ಲ, ಅದು ನಮ್ಮ ಕರ್ತವ್ಯ ನಾವು ಕೊಡಗಿಗೆ ಬೆಂಗಳೂರು ಘಟಕದಿಂದ ಟ್ರಕ್ ನಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡು ನಾನೇ ಹೋಗುತ್ತೇನೆ ನಾಳೆ ಮಧ್ಯಾಹ್ನ 12 ಕ್ಕೆ ನ್ಯಾಶನಲ್ ಕಾಲೇಜಿನ ಗ್ರೌಂಡ್ ನಿಂದ ಹೊರಡಲಿದ್ದೇವೆ ಒಂದು ಕುಟುಂಬಕ್ಕೆ 15 ದಿನಕ್ಕಾಗುವಷ್ಟು ಎಲ್ಲ ದಿನೊಪಯೋಗಿ ವಸ್ತುಗಳ ಕಿಟ್ ಅನ್ನು ಬಿಜೆಪಿ ನಾಳೆ ತೆಗೆದುಕೊಂಡು ಹೋಗಲಾಗುತ್ತದೆ ಎಂದರು.

ಇಂದಿನ ಸಭೆಯಲ್ಲಿ ಒಟ್ಟು 11.5 ಲಕ್ಷ ರೂ. ಕಲೆಕ್ಟ್ ಆಗಿದೆ
ಇನ್ನು ಹೆಚ್ಚಿನ ಸಹಾಯವನ್ನ ಕಾರ್ಪೊರೇಟರ್ಸ್, ನಾವು ಮಾಡಲಿದ್ದೇವೆ ಬೆಂಗಳೂರು ಶಾಸಕರು, ಬಿಬಿಎಂಪಿ ಬಿಜೆಪಿ ಸದಸ್ಯರು ತಮ್ಮ ಎರಡು ತಿಂಗಳ ಸಂಬಳವನ್ನ ಕೊಡಲು ತೀರ್ಮಾನಿಸಿದ್ದೇವೆ ಕೇಂದ್ರ ಸಚಿವ ಅನಂತ ಕುಮಾರ್ ಒಂದು ಲೋಡ್ ಅಕ್ಕಿ, ಒಂದು ಲೋಡ್ ಬೇಳೆ ಕೊಡೊದಾಗಿ ಹೇಳಿದ್ದಾರೆ ನಮ್ಮಲ್ಲಿ ಈಗ 20ಕ್ಕೂ ಹೆಚ್ಚು ಲಾರಿಗಳ ಸಾಮಗ್ರಿಗಳು ರೆಡಿ ಇವೆ ಮಕ್ಕಳಿಗೆ ಬಟ್ಟೆ, ಅಕ್ಕಿ, ಬೇಳೆ, ರಗ್ಗು ಸೇರಿದಂತೆ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನ ತೆಗೆದುಕೊಂಡು ಹೋಗ್ತೇವೆ ನಮ್ಮ ಸಂಬಳ ಅಲ್ಲಿ ಮನೆ ಕಟ್ಟಲು ಬಳಸಬಹುದಾಗಿದೆ ಎಂದರು.

ಕೊಡಗಿನಲ್ಲಿ ಭೂಕಂಪವಾಗುತ್ತದೆ ಎಂಬುದು ಕೇವಲ ವಂದತಿ: ಸಿಎಂ

ಮಡಿಕೇರಿ: ಮಹಾ ಮಳೆಯಿಂದ ತತ್ತರಿಸಿರುವ ಕೊಡಗಿನ ಜನತೆಗೆ ಇದೀಗ ಜಿಲ್ಲೆಯಲ್ಲಿ ಭೂಕಂಪ ಸಂಭವಿಸುತ್ತದೆ ಎನ್ನುವ ಸುಳ್ಳು ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೊಡಗಿನಲ್ಲಿ ಭೂಕಂಪನವಾಗುವ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ  ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ  ಸಂಕಷ್ಟದಲ್ಲಿ ಸಿಲುಕಿರುವ ಕೊಡಗಿನ ಜನತೆಯ ಕಿವಿಗೆ ಬಿದ್ದು ಮತ್ತಷ್ಟು ಚಿಂತೆಗೆ ಈಡು ಮಾಡಿದ್ದು, ಭಯದಲ್ಲೇ ಕಾಲ ಕಳೆಯುವಂತೆ ಮಾಡುತ್ತಿದೆ.

ಈ ಕುರಿತಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೊಡಗು ಜಿಲ್ಲೆಯಲ್ಲಿ ಭೂಕಂಪನವಾಗಲಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಆದ್ದರಿಂದ ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ಕೊಡಗಿನಲ್ಲಿ ನಾಳೆಯೂ ಮುಖ್ಯಮಂತ್ರಿಗಳ ಪ್ರವಾಸ!

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಳೆಯ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಪ್ರವಾಸ ರದ್ದು ಪಡಿಸಿದ್ದು, ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮುಂದುವರೆಸಲಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಸ್ತೆ ಮೂಲಕ ಮಡಿಕೇರಿಗೆ ತೆರಳಿದ ಮುಖ್ಯಮಂತ್ರಿಗಳು ಅಲ್ಲಿನ ಗಂಜಿಕೇಂದ್ರವೊಂದಕ್ಕೆ ತೆರಳಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.
ನಂತರ ಮಡಿಕೇರಿ ನಗರದಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದರು.

ಮಡಿಕೇರಿ ಬಳಿ ಭೂಕುಸಿತದಿಂದ ಸಿಲುಕಿಕೊಂಡಿರುವ ಸುಮಾರು 60 ಜನರನ್ನು ರಕ್ಷಿಸಲು ಮುಖ್ಯಮಂತ್ರಿ ಗಳು ಪ್ರಯಾಣಿಸಿದ ಹೆಲಿಕಾಪ್ಟರ್ ಬಳಸುವ ಉದ್ದೇಶದಿಂದ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿ, ನಾಳೆಯೂ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮುಂದುವರೆಸಲಿದ್ದಾರೆ ಎಂದು ಸಿಎಂ ಕಛೇರಿ ಪ್ರಕಟಣೆ ತಿಳಿಸಿದೆ.

ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಕುಮಾರಸ್ವಾಮಿ!

ಕೊಡಗು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಅತಿವೃಷ್ಟಿ ಯಿಂದಾಗಿ ಸಂಭವಿಸಿದ ಹಾನಿಯ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದರು.

ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಮುಖ್ಯಮಂತ್ರಿಗಳು ವಾಯುಪಡೆಯ ವಿಮಾನದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪಿರಿಯಾಪಟ್ಟಣ ಹೆಲಿಪ್ಯಾಡ್ ನಲ್ಲಿ ಇಳಿದು ಮಡಿಕೇರಿಗೆ ರಸ್ತೆ ಮಾರ್ಗವಾಗಿ ತೆರಳಿದರು.

ಅತಿವೃಷ್ಟಿ ಪರಿಹಾರ ಕಾರ್ಯಾಚರಣೆಗಳ ಕುರಿತು ಅಧಿಕಾರಿಗಳ ಸಭೆಯ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ಧಿಗಾರರೊಂದಿಗೆ ಮಾತನಾಡಿ, ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ, ಭೂ ಸೇನೆಯ ಡೋಗ್ರಾ ರೆಜಿಮೆಂಟ್ , ಎನ್.ಸಿ.ಸಿಯ 200 ಜನ, ವಾಯುಪಡೆಯ ತಂಡ ಸೇರಿದಂತೆ ಒಟ್ಟು 948 ಜನ ತೊಡಗಿದ್ದಾರೆ ಎಂದು ತಿಳಿಸಿದರು.

ಈವರೆಗೆ 3500 ಜನರನ್ನು ರಕ್ಷಿಸಲಾಗಿದೆ. ಶುಕ್ರವಾರ ಸಂಜೆ ದಕ್ಷಿಣ ಕನ್ನಡ, ಕೊಡಗು ಗಡಿಭಾಗದ ಜೋಡುಪಾಲ ಎಂಬಲ್ಲಿ ಗುಡ್ಡ ಕುಸಿತದಿಂದ ಸಿಲುಕಿಕೊಂಡಿದ್ದ 347 ಜನರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ರಕ್ಷಣೆ ಮಾಡಿದೆ. ಕೊಡಗು ಭಾಗದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 31 ಗಂಜಿ ಕೇಂದ್ರಗಳಲ್ಲಿ 2250 ಜನರು ಆಶ್ರಯ ಪಡೆದಿದ್ದಾರೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ರಕ್ಷಣಾ ಕಾರ್ಯದ ನಿಮಿತ್ತ ಕೊಡಗು ಜಿಲ್ಲೆಗೆ ಇತರೆ ಜಿಲ್ಲೆಗಳಿಂದ ನಿಯೋಜಿಸಲಾಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ತಲುಪಿದ್ದಾರೆ. ತಡೆರಹಿತ ಗ್ಯಾಸ್, ಪೆಟ್ರೋಲ್ ಮತ್ತು ಡೀಸಲ್ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ. ಬಿದ್ದುಹೋಗಿರುವ ಮೊಬೈಲ್ ಟವರ್‍ಗಳನ್ನು ಯಥಾಸ್ಥಿತಿಗೆ ತಂದು ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಇತರೆ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಕೊಡಗು ಜಿಲ್ಲೆಗೆ 10 ವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಒದಗಿಸಲು ಸೂಚನೆ ನೀಡಲಾಗಿದೆ. ಶಿಶು ಆಹಾರ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲೆಯ ಮುಕೊಡ್ಲು ಗ್ರಾಮದಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಹಲವು ಜನ ಸಿಲುಕಿರುವ ಬಗ್ಗೆ ಮಾಹಿತಿ ಇದ್ದು, ಅವರನ್ನು ರಕ್ಷಿಸಲು ಸೇನಾ ತಂಡ ಈಗಾಗಲೇ ತರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಗಳಿಗೆ 50 ಜೆಸಿಬಿಗಳನ್ನು ಬಳಸಿ ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿ ಮಾಡಿ, ರಕ್ಷಣಾ ಕಾರ್ಯಕ್ಕೆ ಅನುವುಮಾಡಿಕೊಡಲಾಗುತ್ತಿದೆ. ಮಂಗಳೂರು –ಮೈಸೂರು ರಾಷ್ಟ್ರೀಯ ಹೆದ್ದಾರಿ 275 ನ ಬಹುತೇಕ ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಕುಸಿಯುತ್ತಿರುವುದರಿಂದ ಭೂವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರನ್ನು ನಿಯೋಜಿಸಲಾಗಿತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು, ಸಂತ್ರಸ್ತರ ದಾಖಲೆಗಳು ನಾಶವಾಗಿದೆ. ತಕ್ಷಣವೇ ಅವುಗಳ ನಕಲು ಪ್ರತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಮನೆಗಳನ್ನು ಕಳೆದುಕೊಂಡ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ 2.00 ಲಕ್ಷ ರೂ.ಗಳವರೆಗೆ ಪರಿಹಾರ ಒದಗಿಸಲು ಸೂಚಿಸಲಾಗಿದೆ. ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಫೋರ್ ವ್ಹೀಲ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯುವಂತೆ ಸೂಚಿಸಲಾಗಿದೆ. ಪೋಲೀಸ್ ಹಾಗೂ ಅರಣ್ಯ ಇಲಾಖೆಯಿಂದಲೂ ಈ ವಾಹನಗಳನ್ನು ಪಡೆಯಲು ಸೂಚಿಸಲಾಗಿದೆ. ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಕಚೇರಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಕೋಟೆ ಶಿಥಿಲಾವಸ್ಥೆಯಲ್ಲಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಗಮನಕ್ಕೆ ನಿರ್ಧರಿಸಲಾಯಿತು. ಸರ್ಕಾರಿ ಕಚೇರಿಯ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಯಾವುದೇ ಆರ್ಥಿಕ ಮುಗ್ಗಟ್ಟು ಎದುರಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಪ್ರಕೃತಿ ವಿಕೋಪದೊಂದಿಗೆ ಮಾನವ ನಿರ್ಮಿತ ಲೋಪದೋಷಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ, ಮುನ್ನೆಚರಿಕೆ ವಹಿಸಲು ಸೂಚಿಸಲಾಗಿದೆ. ಪಶ್ಚಿಮಘಟ್ಟ ಭಾಗದಲ್ಲಿ ಭೂ ಪರಿವರ್ತನೆ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಎಟಿಎಂ ಗಳಲ್ಲಿ ನಗದು ಕೊರತೆಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುವುದನ್ನು ಗಮನಿಸಲಾಗಿದೆ. ಈ ಕುರಿತು ಬ್ಯಾಂಕರ್‍ಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಫಿ ಹಾಗೂ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಕಾಫಿ ನಷ್ಟ ಅಂದಾಜು ಮಾಡಲು ಸಂಬಂಧಿಸಿದಂತೆ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸುವಂತೆ ಕಾಫಿ ಮಂಡಳಿಯನ್ನು ಕೋರಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.