ರಾಜ್ಯದ ಜಲಾಶಯಗಳ ಒಳ ಹರಿವು ಹೆಚ್ಚಳ: ಸಾಧ್ಯವಾದಷ್ಟು ಕೆರೆಗಳ ಭರ್ತಿಗೆ ಕ್ರಮ: ಡಿಕೆಶಿ

ಬೆಂಗಳೂರು: ರಾಜ್ಯದ ಜಲಾಶಯಗಳಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕಾಲುವೆಗಳನ್ನು ದುರಸ್ಥಿ ಮಾಡಿ ಕೆರೆಗಳನ್ನು ತುಂಬಿಸಲು ಆದೇಶಿಸಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೆಆರ್ ಎಸ್, ಕಬಿನಿ ಹಾಗೂ ಹೇಮಾವತಿ ತುಂಗಭದ್ರಾ ಭಾಗದ ಅಣೆಕಟ್ಟಗಳಲ್ಲಿ ಸಣ್ಣ ಪುಟ್ಟ ಬಿರುಕುಗಳು ಉಂಟಾಗಿವೆ. ಭಾರಿ ನೀರು ಒಳಹರಿವು ಉಂಟಾಗಿರುವ ಕಾರಣ ಒತ್ತಡ ಹೆಚ್ಚಿದೆ. ಹಾಗಾಗಿ ಹೊರ ಹರಿವು ಹೆಚ್ಚಳ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಅಣೆಕಟ್ಟೆ ಬಳಿ ಅಧಿಕಾರಿಗಳ ಗಸ್ತು ಹೆಚ್ಚಿಸಲು ಉದ್ದೇಶಿಸಿದ್ದೇವೆ ಎಂದು ಮಾಹಿತಿ ನೀಡಿದರು.

ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿ ಅನಾಹುತಗಳಾಗಿವೆ. ಅಲ್ಲೆಲ್ಲಾ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರಿಗೆ ನೆರವು ನೀಡುವಂತೆ ಆದೇಶಿಸಿದ್ದೇವೆ. ನೀರಾವರಿ ಇಲಾಖೆಯ ಗುತ್ತಿಗೆದಾರರ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ರಸ್ತೆ ಕ್ಲಿಯರ್ ಮಾಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ನೆರೆ ಪರಿಹಾರಕ್ಕೆ ಬೆಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಲಭ್ಯ ಇರುವ ಸೆಕೆಂಡ್ಸ್ ಬಟ್ಟೆಗಳನ್ನು ಕಳುಹಿಸಲು ಹಾಗೂ ರಾಮನಗರ ಜಿಲ್ಲಾ ಪಂಚಾಯ್ತಿ ಮತ್ತು ಜಿಲ್ಲಾಧಿಕಾರಿ ಕಚೇರಿಗೂ ನೆರೆ ಪರಿಹಾರ ಸಾಮಗ್ರಿಗಳನ್ನು‌ ಕಳುಹಿಸಿಕೊಡಲು ಉದ್ಯಮಿಗಳು ಮತ್ತು ಶಾಸಕರಿಗೆ ಮನವಿ ಮಾಡಿದ್ದೇವೆ. ಎಲ್ಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವೈದ್ಯರ ತಂಡವನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಲು, ಔಷಧ ನೆರವು ನೀಡಲು ಸಹ ಮನವಿ ಮಾಡಿದ್ದೇವೆ ಎಂದರು.

ಇದೇ ವೇಳೆ ಮಾತನಾಡಿದ ಅವರು, ಮಹಾದಾಯಿ ವಿವಾದ ಕುರಿತಂತೆ ಮೇಲ್ಮನವಿ ಸಲ್ಲಿಸುವುದು ನಿಶ್ಚಿತ. ಈ ಸಂಬಂಧ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ನಮ್ಮ ನೀರಿನ ಹಕ್ಕು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಯುಮುನೆಯ ತಟದಲ್ಲಿ ಅಟಲ್ ಅಂತ್ಯ ಸಂಸ್ಕಾರ: ಪಂಚಭೂತಗಳಲ್ಲಿ ಲೀನವಾದ ವಾಜಪೇಯಿ

ನವದೆಹಲಿ: ಸಕಲ ಸರಕಾರಿ ಗೌರವದೊಂದಿಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಬಿಜೆಪಿ ಹಿರಿಯ ನಾಯಕ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.

ಸಂಜೆ 4 ಗಂಟೆಗೆ ರಾಜ್ ಘಾಟ್ ಬಳಿ ಇರುವ ಯುಮುನಾ ತೀರದ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಸಕಲ‌ ಸರಕಾರಿ ಗೌರವಗಳೊಂದಿಗೆ ರಾಷ್ಟ್ರಧ್ವಜ ಹೊದಿಸಿ21 ಬಾರಿ ಕುಶಾಲ ತೋಪು ಸಿಡಿಸಿ ಅಂತಿಮ ವಿಧಿ ವಿಧಾನ ಪುಇರತಣಗೊಳಿಸಲಾಯಿತು. ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಅಟಲ್ ಜಿ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಮಗಳಾಗಿ ಮಗನ ಜಬಾವ್ದಾರಿ ನಿರ್ವಹಿಸಿದರು. ಯುಮುನೆಯ ತಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಂಚ ಭೂತಗಳಲ್ಲಿ ಲೀನವಾದರು.

ಅಂತ್ಯ ಸಂಸ್ಕಾರದ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್,ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು,ಪ್ರಧಾನಿ ನರೇಂದ್ರ ಮೋದಿ,ಮಾಜಿ ಪ್ರಧಾನಿ ಮನಮೋಹನ್ ಸಿಂಗ್,ಸಾರ್ಕ್ ರಾಷ್ಟ್ರಗಳ ಗಣ್ಯರು,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ,ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದು ಅಂತಿಮ ಗೌರವ ಸಲ್ಲಿಕೆ ಮಾಡಿದರು.

ಇದಕ್ಕೂ ಮುನ್ನ ಕೃಷ್ಣ ಮೆನನ್ ರಸ್ತೆಯ ನಿವಾಸದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ‌ ದೇವೇಗೌಡ ಸೇರಿದಂತೆ ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು ಭೇಟಿ ನೀಡಿ ವಾಜಪೇಯಿ ಅಂತಿಮ ದರ್ಶನ ಮಾಡಿದರು.

ಮಧ್ಯಾಹ್ನ 12 ಗಂಟೆ ವೇಳೆಗೆ ಬಿಜೆಪಿ ಕೇಂದ್ರ ಕಚೇರಿಗೆ ವಾಜಪೇಯಿ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು.ಅಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ಮೆರವಣಿಗೆ ಮೂಲಕ ವಾಜಪೇಯಿ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು.ಪ್ರಧಾನಿ ಮೋದಿ ಹಾಗು ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೆರವಣಿಗೆ ಜೊತೆಯಲ್ಲಿಯೇ ಸಾಕಿ ನೆಚ್ಚಿನ ಗುರುವಿನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದರು.

ಸಂಜೆ 5 ಗಂಟೆಗೆ ವಿಜಯ ಘಾಟ್ ನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ವಾಜಪೇಯಿ ಅಂತ್ಯ ಸಂಸ್ಕಾರ

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ನಡೆದಿದೆ.ಇಂದು ಸಂಜೆ 5 ಗಂಟೆಗೆ ಸಕಲ ಸರಕಾರಿ‌ ಗೌರವಗಳೊಂದಿಗೆ ವಿಜಯ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಗುರುವಾರು ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವಾಜಪೇಯಿ ಮೃತದೇಹವನ್ನು ಕೃಷ್ಣಮೆನನ್ ರಸ್ತೆಯ ನಿವಾಸಕ್ಕೆ ಕೊಂಡೊಯ್ಯಲಾಯಿತು. ಪ್ರಧಾನಿ ನರೇಂದ್ರ ಮೋದಿ,ಮಾಜಿ ಉಪ ಪ್ರಧಾನಿ ಹಾಗು ವಾಜಪೇಯಿ ಅವರ ಒಡನಾಡಿ ಲಾಲ್‌ ಕೃಷ್ಣ ಅಡ್ವಾಣಿ, ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು,ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,ಸೋನಿಯಾಗಾಂಧಿ,ಮಾಜಿ ಪ್ರಧಾನಿ ಮನಮೋಹನ್ ಸಿಂಗ್,ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ,ಬಿಜು ಜನತಾದಳ ನಾಯಕ ನವೀನ್ ಪಟ್ನಾಯಕ್ ಸೇರಿದಂತೆ ರಾಜಕೀಯ ಧುರೀಣರೆಲ್ಲರೂ ವಾಜಪೇಯಿ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ್ರು.

ಮಧ್ಯಾಹ್ನ 12 ಗಂಟೆವರಗೂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಕಲಗಪಿಸಲಾಗುತ್ತದೆ. ಸಂಜೆಬ 5 ಗಂಟೆಗೆ ಸಕಲ ಸರಕಾರಿ ಗೌರವಗಳೊಂದಿಗೆ ವಿಜಯ ಘಾಟ್ ನಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಬೆಳಗ್ಗೆ ವಾಜಪೇಯಿ ಅಂತಿಮ ದರ್ಶನ ಮಾಡಲಿದ್ದಾರೆ.ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕೂಡ ಬೆಳಗ್ಗೆ ದೆಹಲಿಗೆ ತೆರಳಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಕೆ ಮಾಡಲಿದ್ದಾರೆ.

ಪ್ರವಾಹ ಪರಿಸ್ಥಿತಿಯಿಂದ: ಪೊಲೀಸ್ ಲಿಖಿತ ಪರೀಕ್ಷೆ ಮುಂದೂಡಿಕೆ!

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಪೊಲೀಸ್ ಲಿಖಿತ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ನೇಮಕಾತಿ ವಿಭಾಗದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಮುಂದಿನ ಪರೀಕ್ಷಾ ದಿನಾಂಕವನ್ನು ಇನ್ನು ತಿಳಿಸಿಲ್ಲ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಇದೇ ತಿಂಗಳ 19ರಂದು ನಿಗಧಿ ಪಡಿಸಲಾಗಿತ್ತು. ಆದರೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯ ಕಾರಣದಿಂದ ಪ್ರವಾಹ ಅಧಿಕವಾಗಿರುವ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅಡಚಣೆ ಉಂಟಾಗುವುದರಿಂದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ.

ಮುಂದಿನ ಲಿಖಿತ ಪರೀಕ್ಷೆಯ ದಿನಾಂಕವನ್ನು ಇನ್ನು ತಿಳಿಸಿಲ್ಲ. ಪರೀಕ್ಷೆ ಮುಂದೂಡಿರುವ ಕುರಿತು ಅಭ್ಯರ್ಥಿಗಳಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ‌.

ವಾಜಪೇಯಿ ನಿಧನ: ಯಡಿಯೂರಪ್ಪ ಸಂತಾಪ

ಬೆಂಗಳೂರು:ದೇಶ ಕಂಡ ಮಹಾನ್ ಮುತ್ಸದ್ಧಿ, ಅಜಾತ ಶತ್ರು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ದೇಶ ಅತ್ಯುತ್ತಮ ಕವಿ, ಬರಹಗಾರ, ಮುತ್ಸದ್ದಿ, ಸಹೃದಯಿ ರಾಜಕಾರಣಿಯನ್ನು ಕಳೆದುಕೊಂಡು ಅನಾಥವಾಗಿದೆ.ಅವರ ಅಗಲುವಿಕೆ ದೇಶಕ್ಕೆ, ಜನತೆಗೆ ಅದರಲ್ಲೂ ಭಾರತೀಯ ಜನತಾ ಪಕ್ಷದ ಕುಟುಂಬಕ್ಕೆ ತುಂಬಲಾರದ ಹಾನಿ.ನನ್ನಂತವರಿಗೆ ಅವರ ಜೊತೆ ಕೆಲಸ ಮಾಡಿದ್ದೇ ಪುಣ್ಯ ಮತ್ತು ದೊಡ್ಡ ಅನುಭವ. ಅವರ ರಾಜಕೀಯ ನಡೆ ನುಡಿ ಎಲ್ಲರಿಗೂ ಅನುಕರಣೀಯ. ನನಗೆ ನೆನೆಪಿದ್ದಂತೆ 1980ರಲ್ಲಿ ವಾಜಪೇಯಿ ಆಡಿದ ಮಾತುಗಳು ” ಅಂಧೇರಾ ಚಟೇಗಾ, ಸೂರಜ್
ನಿಕ್ಲೇಗಾ, ಕಮಲ್ ಕಿಲೇಗಾ” (ಕತ್ತಲೆ ದೂರವಾಗುತ್ತದೆ, ಸೂರ್ಯ ಉದಯಿಸುತ್ತಾನೆ, ಕಮಲ ಅರಳುತ್ತದೆ) ಇಂದಿಗೂ ಕೂಡ ನಮಗೆಲ್ಲಾ ಅನುಕರಣೀಯ ಮತ್ತು ವಾಜಪೇಯಿ ಅವರ ದೂರದೃಷ್ಟಿತನ ಮತ್ತು ಆಶಾಭಾವನೆ ಎತ್ತಿ ತೋರಿಸುತ್ತದೆ. ವಾಜಪೇಯಿಯವರ ಈ ಆಶಾಭಾವನೆಯೇ, ಇಂದು ಸಂಪೂರ್ಣ ಬಹುಮತದೊಂದಿಗೆ ಮೋದಿಯವರು
ಪ್ರಧಾನಿಯಾಗಲು ಕಾರಣ. ಅವರನ್ನು ಸ್ವತಂತ್ರಭಾರತದ “ಅಜಾತಶತ್ರು” ಎಂದು ಬಣ್ಣಿಸಿದರೆ ಅತಿಶಯೋಕ್ತಿ ಆಗದು ಎಂದು ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ.

1924ರ ಡಿಸೆಂಬರ್ 25ರಂದು ಕೃಷ್ಣ ಬಿಹಾರಿ ಹಾಗೂ ಕೃಷ್ಣ ದೇವಿ ದಂಪತಿಗಳಿಗೆ ಜನಿಸಿ 93 ವರ್ಷದ ತುಂಬು ಜೀವನ ನಡೆಸಿದ ಭಾರತ ರತ್ನ, ಪದ್ಮವಿಭೂಷಣ ಅಟಲ್ ಬಿಹಾರಿ ವಾಜಪೇಯಿರವರು, ದೇಶ ಕಂಡ ಅತ್ಯುತ್ತಮ ರಾಜಕಾರಣಿ.
1939ರಿಂದಲೇ ಸ್ವಯಂಸೇವಕರಾಗಿ ಆರ್.ಎಸ್.ಎಸ್‍ನ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ವಾಜಪೇಯಿಯವರು,
1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಸ್ವಾತಂತ್ರಹೋರಾಟಗಾರರು.

1996 ಮೇ (13 ದಿನ) 1998-1999,1999-2004 3 ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕಳಂಕರಹಿತ ರಾಜಕಾರಣಿ.ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಚಾರಕ್ಕೆ ಚಾಲನೆ ನೀಡುವ ಮೂಲಕ ಸ್ನೇಹ ಹಸ್ತ ಚಾಚಿದರು.ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ದೇಶದ ರಕ್ಷಣೆಗೆ ಒತ್ತು. ದೇಶಾದ್ಯಂತ ಚತುಷ್ಪಥ ಹೆದ್ದಾರಿ ನಿರ್ಮಾಣ. ಕಾರ್ಗಿಲ್ ಯುದ್ಧವನ್ನು ಸಮರ್ಪಕವಾಗಿ ನಿಭಾಯಿಸಿದರು.
ಸತತ ನಾಲ್ಕು ದಶಕಗಳ ಕಾಲ ಸಂಸತ್ತನ್ನು ಪ್ರತಿನಿದಿಸಿದ್ದ ವಾಜಪೇಯಿಯವರು, 10 ಬಾರಿ ಲೋಕಸಭಾ (ಉತ್ತರ
ಪ್ರದೇಶದ-ಲಕ್ನೋ) ಹಾಗೂ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು.ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿ, ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿದ್ದರು.ಇವರ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲಿ. ಕುಟುಂಬದ ಸದಸ್ಯರಿಗೆ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ
ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ರಾಜ್ಯದಲ್ಲಿ 7 ದಿನಗಳ ಶೋಕಾಚರಣೆ!

ಬೆಂಗಳೂರು: ಮಾಜಿ ಪ್ರಧಾನಮಂತ್ರಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತ ಪಡಿಸಿರುವ ರಾಜ್ಯ ಸರ್ಕಾರ ಆಗಸ್ಟ್ 16 ರಿಂದ 22 ರ ವರೆಗೆ ರಾಜ್ಯದಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ.

ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.

ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಇರುವ ಕಾರಣ ತುರ್ತು ಪರಿಸ್ಥಿತಿ ನಿಭಾಯಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವವರನ್ನು ಹೊರತು ಪಡಿಸಿ ಉಳಿದವರಿಗೆ ಅನ್ವಯಿಸುವಂತೆ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ
ಆಗಸ್ಟ್ 17 ರಂದು ಒಂದು ದಿನ ರಜೆ ಘೋಷಿಸಲಾಗಿದೆ.