ಮಳೆಯಿಂದ ಬಾಧಿತ ಜಿಲ್ಲೆಗಳಿಗೆ 200 ಕೋಟಿ ರೂಪಾಯಿ ಬಿಡುಗಡೆ!

ಬೆಂಗಳೂರು: ಮಳೆಯಿಂದ ಪ್ರವಾಹ, ಭೂಕುಸಿತ ಮೊದಲಾದ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ 200 ಕೋಟಿ ರೂಪಾಯಿ ಅನುದಾನ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಮಳೆ ಬಾಧಿತ ಜಿಲ್ಲೆಗಳ ವಸ್ತುಸ್ಥಿತಿ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಳೆಯಿಂದಾಗಿ ಈ ಜಿಲ್ಲೆಗಳಲ್ಲಿ ಸಂಭವಿಸಿರುವ ನಷ್ಟದ ಕುರಿತು ಎರಡು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೊಡಗಿನಲ್ಲಿ ವಾಡಿಕೆಗಿಂತ ಶೇ. 175 ರಷ್ಟು, ಉಡುಪಿಯಲ್ಲಿ ಶೇ. 62 ರಷ್ಟು, ಶಿವಮೊಗ್ಗದಲ್ಲಿ ಶೇ. 117 ರಷ್ಟು, ಚಿಕ್ಕಮಗಳೂರಿನಲ್ಲಿ ಶೇ. 170 ರಷ್ಟು, ಹಾಸನದಲ್ಲಿ ಶೇ. 130 ರಷ್ಟು, ಉತ್ತರಕನ್ನಡ ಜಿಲ್ಲೆಯಲ್ಲಿ ಶೇ. 81 ರಷ್ಟು ಹೆಚ್ಚುವರಿ ಮಳೆಯಾಗಿದೆ.
ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿಯೇ ವಾಸ್ತವ್ಯ ಹೂಡಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. 29 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು 1755 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗಿನಲ್ಲಿ ಇಬ್ಬರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೊಡಗಿನಲ್ಲಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ ಹಲವಾರು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇವರ ರಕ್ಷಣೆಗೆ ಸೇನೆಯ ನೆರವು ಪಡೆಯಲಾಗುತ್ತಿದೆ. ಇವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಯತ್ನಿಸಲಾಯಿತಾದರೂ ಹವಾಮಾನ ವೈಪರೀತ್ಯದಿಂದಾಗಿ ಸಾಧ್ಯವಾಗಿಲ್ಲ. ನಾಳೆ ಬೆಳಿಗ್ಗೆ ಅವರ ರಕ್ಷಣೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಇವರಿಗೆ ಆಹಾರದ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಆಧರಿಸಿ, ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ 237.55 ಕೋಟಿ ರೂ. ಅನುದಾನ ಲಭ್ಯವಿದ್ದು, ಕೂಡಲೇ ಪರಿಹಾರ ಒದಗಿಸಲು ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮೊದಲಾದವರು ಹಾಜರಿದ್ದರು.

ವಾಜಪೇಯಿ ಅವರ ನಿಧನ ಅತೀವ ನೋವು ತಂದಿದೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಆಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ ವಾಜಪೇಯಿ, ಅಜಾತ ಶತ್ರು ಅವರ ನಿಧನದಿಂದ ಅತೀವ ದುಃಖವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಲನ್ನೆಂದೂ ಒಪ್ಪಲಾರೆ, ಹೊಸ ಸವಾಲುಗಳಿಗೆಂದೂ ಹೆದರಲಾರೆ” ಎನ್ನುವ ಅವರ ಕವನದ ಸಾಲೊಂದು ವಾಜಪೇಯಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ವಾಜಪೇಯಿ ಅವರು ಭ್ರಾತೃತ್ವ ಮತ್ತು ಸಹಬಾಳ್ವೆಯಲ್ಲಿ ಅಪರಿಮಿತ ನಂಬಿಕೆ ಇಟ್ಟವರು. ಅವರೊಬ್ಬ ಅತ್ಯುತ್ತಮ ವಾಗ್ಮಿ ಮತ್ತು ಆದರ್ಶ ಸಂಸದೀಯ ಪಟುವಾಗಿದ್ದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೆ ಅವರು ಮಾಡಿದ ಪ್ರಯತ್ನಗಳು ಶ್ಲಾಘನೀಯ. ವೈಯಕ್ತಿಕವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಸೌಜನ್ಯ ನಮಗೆಲ್ಲರಿಗೂ ಆದರ್ಶ ಅವರ ನಿಧನದಿಂದ ದೇಶ ಒಬ್ಬ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅಜಾತಶತ್ರುವಿಗೆ ಅಂತಿಮ ನಮನ ಸಲ್ಲಿಸಲು ದೆಹಲಿಗೆ ತೆರಳುವೆ: ಎಚ್‌ಡಿಡಿ

ಬೆಂಗಳೂರು: ವಾಜಪೇಯಿ ಅವರು ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಅಪಾರ ಸೇವೆ ಮಾಡಿದ್ದಾರೆ. ಅವರೊಬ್ಬ ಶ್ರೇಷ್ಟ ನಾಯಕ, ಸಂಸದೀಯ ಪಟು ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಾಜಪೇಯಿ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಜೀವನದಲ್ಲಿ ಶತ್ರುವನ್ನೂ ಕೂಡ ಕಟುವಾದ ಶಬ್ಧದಿಂದ ಟೀಕಿಸಿದವರಲ್ಲ. ನಾನು ಪ್ರಧಾನಿಯಾಗಿ ರಾಜೀನಾಮೆ ಕೊಡುವ ವೇಳೆ ದೂರವಾಣಿ ಮುಖೇನ ಅಧಿಕಾರ ಉಳಿಸಿಕೊಡುತ್ತೇನೆ ಎಂದು ಹೇಳಿದ್ರು ರಾಜಕಾರಣದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದವರು. ಪಾಕಿಸ್ತಾನದ ಸಂಬಂಧ ಕುದುರಿಸಲು ಲಾಹೋರ್ ಗೆ ಬಸ್ ಯಾತ್ರೆ ಮಾಡಿದ್ರು. ಮುಷ್ರಪ್ ಅವರನ್ನು ಕರೆಸಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ರು. ಆದ್ರೆ, ಸಫಲವಾಗಲಿಲ್ಲ. ಶಾಂತೀಯತೆ ಕಾಪಾಡಲು ಪ್ರಯತ್ನ ಮಾಡಿದ್ರು, ಜೊತೆಗೆ ನಮ್ಮ ಸೈನಿಕರ ಸಾಮರ್ಥ್ಯವನ್ನೂ ತೋರಿಸಿಕೊಟ್ಟಿದ್ದಾರೆ ಎಂದರು.

ರಾಜ್ಯ, ರಾಷ್ಟ್ರದ ಆಡಳಿತ ಹೇಗೆ ನಡೆಸಬೇಕು ಎಂದು ಗೋದ್ರಾ ಪ್ರಕರಣ ಆದಾಗ ಅಂದಿನ ಸಿಎಂ ಮೋದಿ ಅವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಎಂದು ಕಠಿಣವಾಗಿ ಹೇಳಿದ್ರು. ತಮ್ಮ ಪಕ್ಷದ ಸಿಎಂ ಆಗಿದ್ರೂ, ಅಂತ ಮಾತು ಹೇಳಿದ್ದು ಅವರ ವ್ಯಕ್ತಿತ್ವ ಎಂತದ್ದು ಎಂದು ತೋರಿಸುತ್ತದೆ.

ಪ್ರತಿ ವರ್ಷ ಜನೆವರಿಯಲ್ಲಿ ಅವರ ಮನೆಗೆ ಹೋಗಿ ಬರ್ತಿದ್ದೆ. ರಾಜಕೀಯದಲ್ಲಿ ಯಾವುದೇ ಧರ್ಮ ಜಾತಿಗೆ ನೋವು ಉಂಟುಮಾಡಬಾರದು ಎನ್ನುವುದಕ್ಕೆ ಗೋದ್ರಾ ಪ್ರಕರಣದಲ್ಲಿ ಅವರು ನಡೆದುಕೊಂಡ ರೀತಿಯೇ ಸಾಕ್ಷಿ. ಅವರು ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿ ರಾಮಮಂದಿರ ಕಟ್ಟಲು ಶಿಲೆಗಳನ್ನ ಕಳಿಸಿಕೊಟ್ರು
ಅದನ್ನ ವಾಜಪೇಯಿಯವರೇ ತೆಗೆದುಕೊಳ್ಳಬೇಕು ಎಂದು ವಿಹೆಚ್ ಪಿ ಮುಖಂಡರು ಕಟುವಾಗಿ ಹೇಳಿದ್ರು. ಆದ್ರೆ, ಪ್ರಧಾನಿಯಾಗಿದ್ದಾಗ ಅವರು ಹೋಗದೇ ಅಧಿಕಾರಿಯನ್ನ ಕಳಿಸಿದ್ರು ಎಂದು ವಾಜಪೇಯಿಯವರ ವ್ಯಕ್ತಿತ್ವವನ್ನು ತೆರೆದಿಟ್ಟುರು.

ನಾಳೆ ದೆಹಲಿಗೆ ಹೋಗುತ್ತೇನೆ ಅಜಾತಶತ್ರುವಿಗೆ ಅಂತಿಮ ನಮನ ಸಲ್ಲಿಸುತ್ತೇನೆ. ಯಾರನ್ನೂ ನೋಯಿಸಬಾರದು ಅನ್ನೋ ಮನೋ ಭಾವನೆ ಹೊಂದಿದ್ದರು. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕೊಡಲಿ. ಅವರ ಸಂಬಂಧಿಕರಿಗೆ ನೋವನ್ನ ತಡೆದುಕೊಳ್ಳುವ ಶಕ್ತಿ ನೀಡಲಿ. ಸರ್ಕಾರದ ವ್ಯವಸ್ಥೆಗಳನ್ನ ನೋಡಿಕೊಂಡು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ಅಜಾತಶತ್ರು ಇನ್ನಿಲ್ಲ!

ನವದೆಹಲಿ: ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅಜಾತ ಶತ್ರುವಿನ ಅಗಲಿಕೆಯಿಂದ ಇಡೀ ದೇಶವೇ ದುಃಖದಲ್ಲಿ ಮುಳುಗಿದೆ.

ಕಳೆದ 9 ವಾರಗಳಿಂದ ವಾಜಪೇಯಿ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಹ ಆಗಾಗ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವಾಜಪೇಯಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ವಾಜಪೇಯಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ: ಪ್ರಧಾನಿ ಸೇರಿದಂತೆ ಆಸ್ಪತ್ರೆಗೆ ಗಣ್ಯರ ಭೇಟಿ!

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ(93) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಆರೋಗ್ಯ ಸುಧಾರಣೆಗಾಗಿ ದೇಶಾದ್ಯಂತ ಹೋಮ ಹವನಗಳನ್ನು ನಡೆಸಲಾಗುತ್ತಿದೆ.

ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ವಾಜಪೇಯಿ ಅವರ ಆರೋಗ್ಯದ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಏಮ್ಸ್, ಕಳೆದ 9 ವಾರಗಳಿಂದ ಚಿಕಿತ್ಸೆ ಪಡೆಯುತ್ತಿರುವ  ವಾಜಪೇಯಿ ಅವರ ಆರೋಗ್ಯ ದುರದೃಷ್ಟವಶಾತ್ ಇನ್ನಷ್ಟು ಹದಗೆಟ್ಟಿದೆ, ಆಮ್ಲಜನಕದ ಬೆಂಬಲದಲ್ಲಿ ಅವರು ಉಸಿರಾಡುತ್ತಿದ್ದಾರೆ ಎಂದು ತಿಳಿಸಿದೆ.

ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೇರಿದಂತೆ ಕೇಂದ್ರ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಏಮ್ಸ್ ಆಸ್ಪತ್ರೆಗೆ ಗಣ್ಯರ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಪ್ರವಾಹ ಪೀಡಿತರ ರಕ್ಷಣೆಗೆ ಕ್ರಮ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಹಟ್ಟಿಹೊಳೆ ಬಳಿಯ ಗ್ರಾಮದ ಜನರನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಲೋಕೋಪಯೋಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿನ ಜನರನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಅಲ್ಲದೆ ತಾವು ವಾಯುಪಡೆಯ ಅಧಿಕಾರಿಗಳೊಂದಿಗೆ , ಈ ಜಿಲ್ಲೆಗಳಲ್ಲಿ ಜನರ ರಕ್ಷಣೆಗೆ ನೆರವು ನೀಡುವ ಕುರಿತು ಮಾತುಕತೆ ನಡೆಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಕೊಡಗಿನಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಮೊಕ್ಕಾಮ್ ಹೂಡಿದ್ದು ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ಕ್ರಮ ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಖುದ್ದು ಮಾತನಾಡಿದ್ದು ವಸ್ತುಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದಾರೆ.

ಸಾರ್ವಜನಿಕರಿಗೆ ನೆರವು ನೀಡಲು, ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಹಾಗೂ ಇತರ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳು ಕೂಡಲೇ ಜಿಲ್ಲೆಗಳಿಗೆ ತೆರಳುವಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಈ ಜಿಲ್ಲೆಗಳಲ್ಲಿಯೇ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ.