ಟೀಂ ಇಂಡಿಯಾ ಮಾಜಿ ಕಫ್ತಾನ ಅಜಿತ್ ವಾಡೇಕರ್ ನಿಧನ

ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನರಾಗಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಬೈನ ಜಸ್ ಲೋಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅವರಿಗೆ 77 ವರ್ಷ ವಯಸ್ಸಾಗಿತ್ತು.

1941 ಏ.1ರಂದು ಜನಿಸಿದ್ದ ಅಜಿತ್​ ಲಕ್ಷ್ಮಣ್​ ವಾಡೇಕರ್​
1958 – 59ರಲ್ಲಿ ಕ್ರಿಕೆಟ್‌ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. 37 ಟೆಸ್ಟ್‌ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದರು.1971ರಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಡ್‌ನಲ್ಲಿ ನಡೆದ ಪಂದ್ಯಗಳ ಐತಿಹಾಸಿಕ ಗೆಲುವಿಗೆ ಈ ಸ್ಫೋಟಕ ಎಡಗೈ ಬ್ಯಾಟ್ಸಮನ್‌ ಕಾರಣ ಆಗಿದ್ದರು.

ಕ್ರಿಕೆಟ್ ಆಟಗಾರ,ತಂಡದ ನಾಯಕ,ಟೀಂ ಮ್ಯಾನೇಜರ್,ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಜಿತ್ ವಾಡೇಕರ್ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿ ಟ್ವೀಟ್ ಮಾಡಿದೆ.ಮಾಜಿ ಕ್ರಿಕೆಟಿಗರು,ಟೀಂ ಇಂಡಿಯಾ ಆಟಗಾರರು ಕೂಡ ಸಂತಾಪ ಸೂಚಿಸಿದ್ದಾರೆ.

10 ಸಾವಿರ ಕೋಟಿ ವೆಚ್ಚದಲ್ಲಿ ಮಾನವಸಹಿತ ಅಂತರಿಕ್ಷ ಯಾನ: ಇಸ್ರೋ ಘೋಷಣೆ

ಬೆಂಗಳೂರು:450 ಕೋಟಿ ರೂ.ಗಳಲ್ಲಿ ಮಂಗಳನ ಅಂಗಳಕ್ಕೆ ನೌಕೆ ಕಳುಹಿಸಿದ್ದ ಇಸ್ರೋ ಇದೀಗ 10 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಮಾನವಸಹಿತ ಅಂತರಿಕ್ಷ ಯಾನಕ್ಕೆ ಮುಂದಾಗಿದೆ.2022 ಕ್ಕೆ ಮಾನವಸಹಿತ ಗಗನಯಾನ ಕೈಗೊಂಡ ರಾಷ್ಟ್ರಗಳ ಸಾಲಿನಲ್ಲಿ ಭಾರತದ ಹೆಸರು ಸೇರ್ಪಡೆಯಾಗಲಿದೆ ಎನ್ನುವ ಭರವಸೆ ನೀಡಿದೆ.

72 ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವ ವೇಳೆ ಕೆಂಪು ಕೋಟೆ ಮೇಲೆ ನಿಂತು 2022 ಕ್ಕೆ ಮಾನವಸಹಿತ ಅಂತರಿಕ್ಷಯಾನದ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿರುವ ಅಂತರಿಕ್ಷ ಭವನದಲ್ಲಿ ಇಸ್ರೋ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮೋದಿ ಘೋಷಣೆಯನ್ನು ಸ್ವಾಗತಿಸಿತು.

ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮೋದಿ ಇಸ್ರೋ ಮೇಲೆ ನಂಬಿಕೆ ಇಟ್ಟು ಮಾಡಿರುವ ಘೋಷಣೆ ನನಸು ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇವೆ,ನಮ್ಮ ಆತ್ಮ ವಿಶ್ವಾಸವನ್ನು ಪ್ರಧಾನಿ ಹೆಚ್ಚಿಸಿದ್ದಾರೆ ಎಂದ್ರು.

ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಸಾಧ್ಯವಿದೆ,ಇದು ನಮಗೆ ನಿಜಕ್ಕೂ ಸವಾಲಿನದ್ದೇ ಆಗಿದೆ ಜೊತೆಗೆ ದೇಶದ ಘನತೆ ಕೂಡ ಹೌದು,ಇದೊಂದು ದೊಡ್ಡ ಯೋಜನೆಯಾಗಿದೆ, ತುಂಬಾ ಕೆಲಸ ಇದೆ. ಈಗಾಗಲೆ ಬೇಕಾದ ತಂತ್ರಜ್ಞಾನಗಳ ಅಭಿವೃದ್ಧಿ ಕಾರ್ಯ ನಡೀತಿದೆ.ಇನ್ನು ಪ್ರಧಾನಿಯವರ ಹೇಳಿದ ಗುರಿ ತಲುಪುವುಯೊಂದೆ ಬಾಕಿ.ಈ ಕೆಲಸ ಇಸ್ರೋದಿಂದ ಸಾಧ್ಯ . ಈಗಾಗಲೇ ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಸ್ಯೂಟ್ ಅನ್ನ ನಾವೇ ಅಭಿವೃದ್ಧಿ ಪಡಿಸಿದ್ದೇವೆ. 2022ರ ಒಳಗೆ ಮಾನವ ಸಹಿತ ಅಂತರಿಕ್ಷ ಯಾತ್ರೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಮೋದಿ ಭರವಸೆಗೆ ಮುದ್ರೆ ಒತ್ತಿದ್ರು.

10 ಸಾವಿರ ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ನಾವು ಮಾನವಸಹಿತ ಅಂತರಿಕ್ಷ ಯಾನದ ಯೋಜನೆ ತಯಾರಿಸುತ್ತೇವೆ.ಕೇವಲ ದೇಶದ ಹೆಮ್ಮೆಯ ವಿಚಾರಕ್ಕಾಗಿ ಮಾತ್ರ ನಾವು ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡುತ್ತಿಲ್ಲ.ಈ ಉಡಾವಣೆಯಿಂದ ವಿಜ್ಞಾನ ಮತ್ತು‌ ತಂತ್ರಜ್ಞಾನ ಮತ್ತಷ್ಟು ಉನ್ನತ ದರ್ಜೆಗೆ ಕೊಂಡೊಯ್ಯಲಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡ್ರು.

2022 ಕ್ಕೆ ಮಾನವಸಹಿತ ಗಗನಯಾನ: ಮೋದಿ‌ ಘೋಷಣೆ

ನವದೆಹಲಿ:2022ಕ್ಕೆ ಮಾನವಸಹಿತ ಗಗನಯಾನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವ ಮೂಲಕ ಕಡಿಮೆ‌ ವೆಚ್ಚದಲ್ಲಿ ಮಂಗಳಗ್ರಹಕ್ಕೆ ಆರ್ಬಿಟರ್ ಕಳಿಸಿದ ಬಳಿಕ ಜಗತ್ತು ಮತ್ತಿಮ್ಮೆ ಭಾರತದೆಡೆಗೆ ನೋಡುವಂತೆ ಮಾಡಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಆರೋಹಣ ಮಾಡಿದರು.ನಂತರ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ,ಮಾನವಸಹಿತ ಗಗನಯಾನ ಯೋಜನೆ ಘೋಷಣೆ ಮಾಡಿದ್ರು.2022ಕ್ಕೆ ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಗಗನಯಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಾವು ಯಶಸ್ವಿಯಾದರೆ ಮಾನವಸಹಿತ ಬಾಹ್ಯಾಕಾಶ ಯಾನ ಮಾಡಿದ ನಾಲ್ಕನೆ ದೇಶ ಭಾರತವಾಗಲಿದೆ ಎಂದು ಮೋದಿ ಹೇಳಿದರು.

ಇದೇ ವೇಳೆ ಒಂದೇ ರಾಕೆಟ್​ನಲ್ಲಿ ನೂರು ಸ್ಯಾಟಲೆಟ್​ಗಳನ್ನು ಉಡಾವಣೆ ಮಾಡಿ, ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದರು.

ನಂತರ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಮೋದಿ, ಮುಂದಿನ ಮೂರು ದಶಕದಲ್ಲಿ ಭಾರತದ ಆರ್ಥಿಕತೆ ಜಾಗತಿಕವಾಗಿ ಪ್ರಬಲವಾಗಲಿದೆ. ಮಲಗಿರುವ ಆನೆ ಎದ್ದು ಓಡುವಂತೆ ದೇಶದ ಆರ್ಥಿಕತೆ ಪ್ರಗತಿ ಸಾಧಿಸಲಿದೆ‌ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ರು.

ದೇಶದ ಬೃಹತ್ ಆರೋಗ್ಯ ರಕ್ಷೆಯ ಯೋಜನೆಯಾದ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಹೆಸರಿನಲ್ಲಿ ಮರುಪರಿಚಯಿಸಿದ ಮೋದಿ ಇದೇ ವರ್ಷದ ಸೆಪ್ಟೆಂಬರ್ 25ರಂದು ಧೀನ ದಯಾಳು ಉಪಾಧ್ಯ ಅವರ ಜನ್ಮ ದಿನದಂದು ಯೋಜನೆ ಜಾರಿಯಾಗಲಿದೆ. ವರ್ಷಕ್ಕೆ 50 ಕೋಟಿ ಜನರಿಗೆ ಐದು ಲಕ್ಷ ರೂ.ವರೆಗೆ ಫಲಾನುಭವಿಗಳಿಗೆ ಈ ಯೋಜನೆ ಅನುಕೂಲ ಒದಗಿಸಿಕೊಡಲಿದೆ. ಆರೇಳು ವಾರಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಅಧಿಕೃತವಾಗಿ ಜಾರಿಗೆ ತರಲಾಗುತ್ತದೆ ಎಂದ್ರು.

ರೈತರೇ ಆತ್ಮಹತ್ಯೆಗೆ ಶರಣಾಗಬೇಡಿ,ನಿಮ್ಮೊಂದಿಗೆ ನಾವಿದ್ದೇವೆ: ಸಿಎಂ

ಬೆಂಗಳೂರು: ರೈತರೇ ದಯಮಾಡಿ ಆತ್ಮಹತ್ಯೆಗೆ ಶರಣಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಸರಕಾರವಿದೆ ಎಂದು ಸಾಲಮನ್ನಾ ಆಗಲಿದೆ ಇದರಲ್ಲಿ ಯಾವುದೇ ಅಪನಂಬಿಕೆ ಬೇಡ ಸಿಎಂ ಎಚ್.ಡಿ ಕುಮಾರಸ್ವಾಮಿ ರೈತರಲ್ಲಿ ಮನವಿ ಮಾಡಿದ್ದಾರೆ.

72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸಲಾಯಿತು.ಬೆಳಿಗ್ಗೆ 9 ಗಂಟೆಗೆ ಸಿಎಂ ಕುಮಾರಸ್ವಾಮಿ ಧ್ವಜಾರಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಚಾಲನೆ ನೀಡಿದ್ರು.ಬಿಳಿ ಪಂಚೆ, ಬಿಳಿ ಶರ್ಟ್ ತೊಟ್ಟು ಬಂದ ಸಿಎಂ ಸಿಎಂ ಗೆ ಅನಿತಾ ಕುಮಾರಸ್ವಾಮಿ ಸಾಥ್ ನೀಡಿದ್ರು.ತೆರೆದ ವಾಹನದ ಮೂಲಕ ಪರೇಡ್ ವೀಕ್ಷಣೆ ಮಾಡಿ ಗೌರವ ಸ್ವೀಕಾರ ಮಾಡಿ ತುಕಡಿಗಳ ವೀಕ್ಷಣೆ ಮಾಡಿದ್ರು.

ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವಿವಿಧ ಶಾಲೆಗಳ ಒಟ್ಟು 2 ಸಾವಿರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.ಗೋವಾ ಪೊಲೀಸರು,ಸೇವಾ ದಳ, ಎನ್.ಸಿ.ಸಿ, ಇತರರಿಂದ ಪಥಸಂಚಲನ ನಡೆಸಿತು.ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ನಿಂದ ಜಿಮ್ನಾಸ್ಟಿಕ್ಸ್, ಮಿಲಟರಿ ಎಸಿ ಸೆಂಟರ್ ತಂಡದಿಂದ ಮೊಟರ್ ಸೈಕಲ್ ಪ್ರದರ್ಶನ ಮೂಡಿ ಬಂತು.

ನಂತರ ಭಾಷಣ ಮಾಡಿದ ಸಿಎಂ,ರೈತರ ಬದುಕು ಹಸನು ಮಾಡಲು ನನ್ನ ಹೊಸ ಚಿಂತನೆಯೇ ಈ ರೈತ ಸ್ಪಂದನ.ಎರಡನೆ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು‌ ಇಂದು 85ನೇ ದಿನ. ಈ 85 ದಿನಗಳಲ್ಲಿ ನನ್ನ ಬಹುತೇಕ ಚಿಂತನೆ ರೈತರ ಚಿತ್ತದತ್ತ ಇವೆ. ರೈತರನ್ನು ಚಿಂತೆಯಿಂದ ಮುಕ್ತಗೊಳಿಸಬೇಕೆಂದು ಶತಪ್ರಯತ್ನಪಟ್ಟಿದ್ದೇನೆ. ನಿಮ್ಮೊಂದಿಗೆ ನಾನಿದ್ದೇನೆ. ರೈತರ ಆತ್ಮಹತ್ಯೆಯ ಸುದ್ದಿ ಕಿವಿಗೆ ಪ್ರತಿಬಾರಿ ಬಿದ್ದಾಗಲೂ ನನ್ನ ಕುಟುಂಬದ ಸದಸ್ಯರನ್ನೇ
ಕಳೆದುಕೊಂಡಂತೆ ದುಃಖ ಅನುಭವಿಸಿದ್ದೇನೆ.ರಾಜ್ಯದಲ್ಲಿ ಈ ಬಾರಿ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ಇದು ಸಂತೋಷದ ವಿಷಯವಾದರೂ 13 ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದೆ. ಋತುಮಾನಕ್ಕೆ, ಹವಾಮಾನಕ್ಕೆ ಅನುಗುಣವಾಗಿ ರೈತರು ಕೃಷಿ ಚಟುವಟಿಕೆ ನಡೆಸಲು ಕಂದಾಯ ಹಾಗೂ ಕೃಷಿಇಲಾಖೆಗಳು ಸೂಕ್ತ ಮಾರ್ಗದರ್ಶನ ನೀಡಲಿವೆ ಎಂದರು.

ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸಹಕಾರಿ ವಲಯದ ಸಾಲ ಮನ್ನಾ ಮಾಡಲು ಆದೇಶಿಸಲಾಗಿದೆ. 20 ಲಕ್ಷ 38 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆ. ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಸಹ ಸಧ್ಯದಲ್ಲಿಯೇ ಸರಕಾರಿ ಆದೇಶ ಹೊರಡಿಸಲಾಗುವುದು. ಸಾಲಮನ್ನಾ
ಕುರಿತಂತೆ ಸಂದೇಹಗಳನ್ನು ಹುಟ್ಟುಹಾಕಲಾಗುತ್ತಿದೆ. ಈ ಕುರಿತು ಅಪನಂಬಿಕೆ ಬೇಡ. ರಾಜಕೀಯ ಇಚ್ಛಾಶಕ್ತಿಯ ಮೂಲಕ ನಮ್ಮ ಮೈತ್ರಿ ಸರ್ಕಾರ ರೈತರ ಹೆಗಲಿಗೆ ಹೆಗಲು ಕೊಡುತ್ತದೆ. ಅತ್ಯಂತ ಪಾರದರ್ಶಕವಾಗಿ, ರೈತರ ಸಾಲ ಮನ್ನಾ ಮಾಡಲು ಕ್ರಮ ವಹಿಸಲಾಗಿದೆ. ರೈತರ ವಿಚಾರದಲ್ಲಿ ರಾಜಕೀಯ
ಮಾಡುವುದು ಆರೋಗ್ಯಕರವಲ್ಲ ಎಂದು ರಾಜಕೀಯ ಪಕ್ಷಗಳಿಗೆ ಮನವಿ ಸಿಎಂ ಮನವಿ ಮಾಡಿದರು.

ಸಾಲ ಮನ್ನಾ ಕ್ರಮವೊಂದೇ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ಇದು ಅವರಲ್ಲಿ ಆತ್ಮವಿಶ್ವಾಸ ತುಂಬುವ ಒಂದು ಪ್ರಯತ್ನ ಮಾತ್ರ. ಕೃಷಿ ವಲಯವನ್ನು ಸುಸ್ಥಿರಗೊಳಿಸಲು, ಲಾಭದಾಯಕವನ್ನಾಗಿಸಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಖ್ಯಾತ ಕೃಷಿ ತಜ್ಞ ಡಾ. ಎಂ.ಎಸ್. ಸ್ವಾಮಿನಾಥನ್ ಹಾಗೂ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡಿರುವ ತಜ್ಞರ ಸಲಹೆ, ಮಾರ್ಗದರ್ಶನವನ್ನೂ ಪಡೆಯಲಾಗುತ್ತಿದೆ. ನೀರಿನ ಸದ್ಬಳಕೆಗೆ ಇಸ್ರೇಲ್ ಮಾದರಿ ನೀರಾವರಿ ಯೋಜನೆಯನ್ನು
ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಕೃಷಿಯ ವೆಚ್ಚ ಕಡಿತಗೊಳಿಸಿ, ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಇದಕ್ಕೆ ಹಲವು ಖಾಸಗಿ
ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ. ರಾಜ್ಯದ ಕೃಷಿ ವಲಯದಲ್ಲಿ ಸುಸ್ಥಿರತೆ ತರಲು ಎಲ್ಲರ ಸಹಕಾರ ಅತಿ ಮುಖ್ಯ. ರೈತರಲ್ಲಿ ಉತ್ತೇಜನ ತುಂಬಿ ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಮಾರ್ಗದರ್ಶನ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ಮಂಗಳೂರಿನಲ್ಲಿ ಭಾರೀ ಮಳೆ ಹಿನ್ನಲೆ : ತಾಲೂಕುವಾರು ಕಂಟ್ರೋಲ್ ರೂಂ ಸ್ಥಾಪನೆ

ಮಂಗಳೂರು : ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಳೆ ಹಾನಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಸಾರ್ವಜನಿಕರು ಯಾವುದೇ ನೆರವಿಗೆ ಆಯಾ ತಾಲೂಕಿನ ಕಂಟ್ರೋಲ್‌ ರೂಂ ದೂರವಾಣಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

*ಮಂಗಳೂರು ತಾಲೂಕು 0824-2220587 ಅಥವಾ 2220596*

*ಬಂಟ್ವಾಳ 08255-232120/232500*

*ಪುತ್ತೂರು*
*08251-230349/232799*

*ಬೆಳ್ತಂಗಡಿ*
*08256-232047/233123*

*ಸುಳ್ಯ*
*08257-230330/231231*

*ಮೂಡಬಿದ್ರೆ*
*08258-238100/239900*
*ಕಡಬ*
*08251-260435*

*ಮುಲ್ಕಿ*
*0824-2294496*

*ಮಂಗಳೂರು ಮಹಾನಗರಪಾಲಿಕೆ*
*0824-2220306*

ಕರಾವಳಿಯಲ್ಲಿ ಭಾರಿ ಮಳೆ ಎಫೆಕ್ಟ್:ಚಾರ್ಮಾಡಿ ಘಾಟ್ ನಲ್ಲಿ ಕೆಎಸ್ಆರ್‌ಟಿಸಿ ಐಶಾರಾಮಿ ಬಸ್ ಸಂಚಾರ ಸ್ಥಗಿತ

ಬೆಂಗಳೂರು:ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆ ಸಂಚಾರದಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ಮಾರ್ಗದಲ್ಲಿನ ಐಶಾರಾಮಿ ಬಸ್ ಸೇವೆಯನ್ನು ಕೆಎಸ್ಆರ್‌ಟಿಸಿ ಸ್ಥಗಿತಗೊಳಿಸಿದೆ.

ಬೆಂಗಳೂರಿನಿಂದ ತೆರಳುವ ಬಸ್ ಸೇವೆ ಸ್ಥಗಿತಕ್ಕೆ ಕೆಎಸ್.ಆರ್.ಟಿಸಿ ನಿರ್ಧಾರಿಸಿದ್ದು ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕುಂದಾಪುರಕ್ಕೆ ಪ್ರೀಮಿಯಂ ಮಾದರಿಯ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಚಾರ್ಮಾಡಿ ಮಾರ್ಗವಾಗಿ ಎಕ್ಸ್‌ಪ್ರೆಸ್ ಬಸ್ ಹೊರತುಪಡಿಸಿ ಉಳಿದೆಲ್ಲಾ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.ಆದರೆ ಚಾರ್ಮಾಡಿ ಮಾರ್ಗವಾಗಿ ಕೆಎಸ್.ಆರ್.ಟಿಸಿಯ ಎಕ್ಸ್‌ಪ್ರೆಸ್ ಬಸ್ ಗಳು ಸಂಚಾರ ನಡೆಸುತ್ತಿವೆ.

ಮಂಗಳೂರು ಮೈಸೂರು ನಡುವಿನ 40 ಹಾಗು ಮಂಗಳೂರು ಬೆಂಗಳೂರು ನಡುವಿನ 49 ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ.