ಮಹದಾಯಿಗಾಗಿ ಇನ್ನು ರೈತರು ಹೋರಾಡೋದು ಬೇಡ: ಬಸವರಾಜ ಹೊರಟ್ಟಿ

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಇನ್ಮುಂದೆ ರೈತರು ಹೋರಾಟ ಮಾಡುವುದು ಬೇಡ.ಸರ್ಕಾರವೇ ಈ ಬಗ್ಗೆ ಹೋರಾಟ ಮಾಡಿ ನೀರು ಪಡೆಯುವ ಪ್ರಯತ್ನ ಮಾಡುತ್ತದೆ ಎಂದು ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ್ ಹೊರಟ್ಟಿ,ಮಹದಾಯಿ ಅಂತಿಮ ತೀರ್ಪು ನೂರಕ್ಕೆ ನೂರರಷ್ಟು ಸಮಧಾನ ತಂದಿಲ್ಲ.ಆದರೂ ಸ್ವಲ್ಪಮಟ್ಟಿಗೆ ಸಮಧಾನ ತಂದಿದೆ.ಗೋವಾದ ನಿಲುವಿನ ಬಗ್ಗೆ ವಿಚಾರ ಮಾಡಿದ್ರೆ ಇಂದಿನ ತೀರ್ಪು ಕೊಂಚ ಸಮಧಾನ. ಮುಂದಿನ ಹೋರಾಟದ ಮೂಲಕ ಹೆಚ್ಚಿನ ನೀರು ಪಡೆಯಲು ಪ್ರಯತ್ನ ನಡೆಸಬೇಕು.ಅಖಂಡ ಕರ್ನಾಟಕದ ಜನರ ಹೋರಾಟದ ಪರಿಣಾಮ ಈ ನೀರು ಸಿಕ್ಕಿದೆ.ವೇಷ್ಟಾಗಿ ಹೋಗುವ ನೀರನ್ನು ರಾಜ್ಯಕ್ಕೆ ಪಡೆಯಲು ಪ್ರಯತ್ನಿಸಬೇಕು.ಇಂದಿನ ತೀರ್ಪು ಉಸಿರಾಡುವಂತೆ ಆಗಿದೆ.ನ್ಯಾಯಾಧಿಕರಣಕ್ಕೆ ಸರ್ಕಾರ ಅಭಿನಂದನೆ ಸಲ್ಲಿಸಿ ಮುಂದಿನ ತಮ್ಮ ಹಕ್ಕು ಪ್ರತಿಪಾದಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ರು.

ಸಿಎಂ ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಹೆಚ್ಚಿನ ನೀರಿಗಾಗಿ ಹಕ್ಕು ಮಂಡನೆ ಮಾಡಬೇಕು. ಹೋರಾಟಗಾರರ ಹೋರಾಟದಿಂದ ಇವತ್ತು ಇಷ್ಟು ನೀರು ಸಿಕ್ಕಿದೆ. ಹೋರಾಟಗಾರರ ಹೋರಾಟಕ್ಕೆ ಸಿಕ್ಕ ಜಯ ಇದು.ಇನ್ನು ಹೋರಾಟಗಾರರು ಹೋರಾಟ ಮಾಡೋದು ಬೇಡ.ಸರಕಾರ ಮುಂದಿನ ಹೋರಾಟ ಮಾಡಬೇಕು.ಹೆಚ್ಚಿನ ನೀರು ಪಡೆಯಲು ಸರಕಾರ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು.ಟ್ರಬ್ಯುನಲ್ ಮುಂದೆ ಮೇಲ್ಮನವಿ ಸಲ್ಲಿಸಬೇಕು ಎಂದ್ರು.

ವಿದ್ಯುತ್ ಉತ್ಪಾದನೆ,ಕೃಷಿಗೆ ಇನ್ನೂ ಹೆಚ್ಚಿನ ನೀರು ಕೊಡಬೇಕಿತ್ತು.ಕುಡಿಯುವ ನೀರಿಗೆ 7.5 ಟಿಎಂಸಿ ನೀರು ಕೊಡಬೇಕಿತ್ತು.ಆದರೆ ಈಗ ಅವರೂ ದಾರಿಗೆ ಬಂದಿದ್ದಾರೆ‌.
ಒಮ್ನೆಲೆ ಕೇಳಿದ್ದೆಲ್ಲಾ ಕೊಟ್ಟರೆ ತಮ್ಮ ಅಸ್ತಿತ್ವವೇ ಇರುವುದಿಲ್ಲ ಎಂಬ ಭಾವನೆ ಅವರಿಗೂ ಇರುತ್ತದೆ‌.ಹಾಗಾಗಿ ಸರ್ಕಾರ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮಾಡಿದ್ರೆ ನಮ್ಮ ಬೇಡಿಕೆ ಈಡೇರಬಹುದು ಎಂದ್ರು.

ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸಿಎಂ ಗೆ ತಿಳಿಸಿದ್ದೇವೆ.ಪ್ರಕರಣ ಹಿಂಪಡೆಯುವ ಬಗ್ಗೆ ಸಿಎಂ ಕೂಡಾ ಒಪ್ಪಿಗೆ ನೀಡಿದ್ದಾರೆ.ಈ ಬಗ್ಗೆ ಮತ್ತೊಮ್ಮೆ ಸಿಎಂ ಗೆ ತಿಳಿಸುತ್ತೇನೆ.ರೈತರ ಮೇಲಿನ ಪ್ರಕರಣ ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದ್ರು.

ಮಹದಾಯಿ ತೀರ್ಪು ಕೊಂಚ ನಿರಾಳ ನೀಡಿದೆ: ಡಿಸಿಎಂ ಪರಮೇಶ್ವರ್

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ರಾಜ್ಯದ ಜನರಿಗೆ ಕೊಂಚ ನಿರಾಳತೆ‌ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ರಾಜ್ಯ 36.4 ಟಿಎಂಸಿ ನೀರನ್ನು ಕೇಳಿತ್ತು.‌ ಆದರೆ, 13.5 ಟಿಎಂಸಿ ನೀರು ಹಂಚಿಕೆ ಮಾಡಿ, ತೀರ್ಪು ನೀಡಲಾಗಿದೆ.‌ ಇಷ್ಟು ವರ್ಷದ ಹೋರಾಟಕ್ಕೆ ಈ ತೀರ್ಪು ಸ್ವಲ್ಪ ಮಟ್ಟಿಗೆ ನಿರಾಳತೆ ನೀಡಿದೆ. ಆದರೆ ಇನ್ನು ೧೦ ಟಿಎಂಸಿ‌ ನೀರು ಹೆಚ್ಚುವರಿ ನೀಡಿದ್ದರೆ ಸಂತೋಷವಾಗುತ್ತಿತ್ತು. ಈ ತೀರ್ಪಿನ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ, ಮರುಅರ್ಜಿ ಸಲ್ಲಿಕೆ ಬಗ್ಗೆಯೂ ಚಿಂತನೆ ಮಾಡಲಾಗುವುದು ಎಂದರು.

ಹಲವು ವರ್ಷದಿಂದ ಮಹದಾಯಿ ವಿಚಾರವಾಗಿ ಸಾಕಷ್ಟು ಹೋರಾಟ, ಸಭೆ ನಡೆದಿದೆ. ಈ‌ ವಿವಾದ ಪರಿಹರಿಸಲು ಪ್ರಧಾನಿ‌ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೇಳಿದ್ದೆವು. ಆದರೆ ಅವರು ನ್ಯಾಯಾಲಯದ ಮುಂದೆ ಹೋಗುವಂತೆ ಹೇಳಿದ್ದರು.

ಗೋವಾ ಸರಕಾರ ಈ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಗೋವಾಗೆ ೨೪ ಟಿಎಂಸಿ ಹಂಚಿಕೆ ಮಾಡಿದೆ. ಅವರು ಈ ತೀರ್ಪಿಗೆ ತೃಪ್ತಿ ಪಟ್ಟುಕೊಳ್ಳಬೇಕು ಎಂದು ಹೇಳಿದರು.

ಮಹದಾಯಿಯಲ್ಲಿ‌ 188 ಟಿಎಂಸಿ ನೀರು ಇದೆ ಎಂದು ನ್ಯಾಯಾಧಿಕರಣ ಒಪ್ಪಿಕೊಂಡಿದ್ದು ನಮಗೆ ಸಿಕ್ಕ ಜಯ: ಎಚ್.ಕೆ ಪಾಟೀಲ್

ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಕುಡಿಯುವ ನೀರಿಗಾಗಿ 5.4 ಟಿ ಎಮ್ ಸಿ ನೀರನ್ನು ಬಿಟ್ಟುರುವುದು ನಮಗೆ ಸಿಕ್ಕ ದೊಡ್ಡ ಗೆಲುವಲ್ಲ.ಬದಲಾಗಿ ಮಹದಾಯಿಯಲ್ಲಿ 188 ಟಿ ಎಮ್ ಸಿ ನೀರು ಇದೆ ಎಂದು ನ್ಯಾಯಾಧಿಕರಣ ಒಪ್ಪಿಕೊಂಡಿದ್ದು ನಮಗೆ ಸಿಕ್ಕಿರುವ ದೊಡ್ಡ ಜಯವಾಗಿದೆ ಎಂದು ಮಾಜಿ ಸಚಿವ‌ ಎಚ್.ಕೆ ಪಾಟೀಲ್ ಹೇಳಿದ್ದಾರೆ.

ನ್ಯಾಯಾಧಿಕರಣದ ಆದೇಶ ರಾಜ್ಯ ಒಪ್ಪುವ ಹಾಗೆ ಬಂದಿಲ್ಲ,ಉತ್ತರ ಕರ್ಣಾಟಕ ಸಂಭ್ರಮ ಪಡುವ ಆದೇಶ ಇದಲ್ಲ.ಮಹದಾಯಿ ತೀರ್ಪು ನನಗೆ ಬೇಸರ ತಂದಿದೆ.188 ಟಿ ಎಮ್ ಸಿ ನೀರಿನಲ್ಲಿ ನಮಗೆ ನೀಡಿದ್ದು ಕೇವಲ 5.4 ಟಿ ಎಮ್ ಸಿ .ನ್ಯಾಯಾಧಿಕರಣ ನಡವಳಿಕೆ ನನಗೆ ಬೇಸರ ತಂದಿದೆ ಎಂದ್ರು.

ನ್ಯಾಯಾಧಿಕರಣ ಮೊದಲು ಆದೇಶ ನೀಡಬೇಕು ಬಳಿಕ ಸರ್ಕಾರಕ್ಕೆ ಆದೇಶದ ಪ್ರತಿ ಸಲ್ಲಿಸಬೇಕು .ಆದ್ರೆ ಸರ್ಕಾರಕ್ಕೆ ಮೊದಲು ವರದಿ ಸಲ್ಲಿಸಿ ಆದೇಶ ನೀಡಿದೆ.ಇದು ನ್ಯಾಯಾಧಿಕರಣಕ್ಕೆ ಶೋಭೆ ತರುವುದಿಲ್ಲ.ನಮ್ಮ ಬೇಡಿಕೆ ಹಾಗೆ ನೀರು ಹಂಚಿಕೆ ಆಗಿಲ್ಲ ಹಾಗಾಗಿ ಸಂಪೂರ್ಣ ಆದೇಶ ಪ್ರತಿ ಸಿಕ್ಕ ಬಳಿಕ ಮುಂದಿನ ಹೋರಾಟ ಮಾಡುವೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ಕೂಡಾ ನೀಡುವೆ ಎಂದ್ರು.

ಮಹದಾಯಿ ತೀರ್ಪು: ಕನ್ನಡಪರ ಸಂಘಟನೆಗಳಿಂದ ಸಂಭ್ರಮಾಚರಣೆ

ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಪ್ರಕರಣದಲ್ಲಿ ರಾಜ್ಯಕ್ಕೆ ನಿರೀಕ್ಷಿತ ಮಟ್ದ ನೀರು ಹಂಚಿಕೆ ಮಾಡದಿದ್ದರೂ ಕುಡಿಯುವ ನೀರಿಗೆ ಆದ್ಯತೆ ನೀಡಿದ ಟ್ರಿಬ್ಯುನಲ್ ತೀರ್ಪು ಸ್ವಾಗತಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಸೇರಿದ ಕನ್ನಡ ಪರ‌ ಸಂಘಟನೆಗಳ ಕಾರ್ಯಕರ್ತರು ಜಯಘೋಷಗಳನ್ನು ಮೊಳಗಿಸಿ ಸಂಭ್ರಮಾಚರಣೆ ಮಾಡಿದರು.ಪಟಾಕಿಗಳನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಿದ್ರು.

ರಾಜ್ಯದ ಒಟ್ಟಾರೆ ನಿರೀಕ್ಷೆ ಈಡೇರಿಲ್ಲ ಆದರೆ ಕನಿಷ್ಠ ಕುಡಿಯುವ ನೀರಿಗೆ ಅವಕಾಶ ಕಲ್ಪಿಸಿದೆ.ಕೇಳಿದ್ದಕ್ಕಿಂತ ಹೆಚ್ಚು ಸಿಕ್ಕಿದೆ.ಇದು ಮಹದಾಯಿ ಹೋರಾಟಕ್ಕೆ ಸಿಕ್ಕ ಜಯ ಎಂದು ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ರು.

ಕಾವೇರಿ ಐದನೇ ಹಂತದ ಯೋಜನೆ ಕುರಿತು ಡಿಸಿಎಂ ನೇತೃತ್ವದಲ್ಲಿ ಸಭೆ!

ಬೆಂಗಳೂರು: ಕಾವೇರಿ ಐದನೇ ಹಂತದ ಯೋಜನೆ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಲಿ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಮಂಗಳವಾರ ಬಿಎಂಆರ್‌ಡಿಎನಲ್ಲಿ ಸಭೆ ನಡೆಸಿದರು.

ಬೆಂಗಳೂರು ಜನ‌ರ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ವಿಸ್ಕೃತವಾಗಿ ಚರ್ಚಿಸಲಾಯಿತು.

ಪ್ರಸ್ತುತ ಬೆಂಗಳೂರಿಗೆ ವಾರ್ಷಿಕ ೧೯ ಟಿಎಂಸಿ ನೀರನ್ನು ಕಾವೇರಿಯಿಂದ ಪೂರೈಕೆ ಮಾಡಲಾಗುತ್ತಿದೆ. ಕಾವೇರಿ ಐದನೇ ಹಂತದ ಯೋಜನೆ ಅನುಷ್ಠಾನದಿಂದ ಹೊಸ ೧೧೦ ಹಳ್ಳಿಗಳಿಗೆ ನೀರು ಪೂರೈಕೆ ಹಾಗೂ ಬೇಡಿಕೆ ನೀಗಿಸಲು ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು.

ನೀರು ಸೋರಿಕೆ ತಡೆಗಟ್ಟುವಿಕೆ ಹಾಗೂ ಹೊಸ ಯೋಜನೆ ಅನುಷ್ಠಾನಗೊಂಡರೆ ಬೆಂಗಳೂರಿನಲ್ಲಿ‌ ನೀರಿನ‌ ಸಮಸ್ಯೆ‌ ನೀಗಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನೂತನ ಯೋಜನೆಗಳನ್ನು ಆದಷ್ಟು ಶೀಘ್ರವೇ ಅನುಷ್ಠಾನಕ್ಕೂ ಅಧಿಕಾರಿಗಳಿಗೆ ನಿರ್ದೇಶಿಸಿದರು. ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಇದ್ದರು.

ಮಹದಾಯಿ ಐ ತೀರ್ಪು ಪ್ರಕಟ: ರಾಜ್ಯಕ್ಕೆ ಭಾರೀ ಹಿನ್ನಡೆ

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಪ್ರಕರಣ ಸಂಬಂಧ ನ್ಯಾಯಾಧಿಕರಣ ಇಂದು ತೀರ್ಪು ಪ್ರಕಟಿಸಿದ್ದು ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದೆ.ರಾಜ್ಯದ ನಿರೀಕ್ಷೆಯ ಅರ್ಧದಷ್ಟು ಪಾಲು ಪಡೆಯುವಲ್ಲಿಯೂ ರಾಜ್ಯ ವಿಫಲವಾಗಿದೆ.

ಗೋವಾ ಹಾಗು ಕರ್ನಾಟಕ ರಾಜ್ಯದ ನಡುವಿನ ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ನದಿ ಪಾತ್ರದ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಇಂದು ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಿದೆ. ನ್ಯಾಯಮಂಡಳಿ ಐ ತೀರ್ಪಿನಲ್ಲಿ ಕರ್ನಾಟಕಕ್ಕೆ ಒಟ್ಟು 13. 7 ಟಿಎಂಸಿ ನೀರನ್ನು ಮಾತ್ರ ಹಂಚಿಕೆ ಮಾಡಲಾಗಿದೆ.

ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ, ಮಹದಾಯಿ ಜಲನಯನ ಪ್ರದೇಶದ ವ್ಯಾಪ್ತಿಯಲ್ಲಿ ಬಳಕೆ ಮಾಡಲು 1.50 ಟಿಎಂಸಿ ನೀರು ಹಾಗೂ ವಿದ್ಯುಚ್ಛಕ್ತಿಗೆ ಉತ್ಪಾದನೆಗೆ 8.02 ಟಿಎಂಸಿ ಸೇರಿದಂತೆ ರಾಜ್ಯಕ್ಕೆ ಒಟ್ಟು 13.07 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.

ವಾರ್ಷಿಕ 200 ಟಿಎಂಸಿ ಅಡಿ ನೀರಿನ ಹರಿವು ಇರುವ ಮಹದಾಯಿ ನದಿಯಲ್ಲಿ ಗೋವಾ ಕೇವಲ 9 ಟಿಎಂಸಿ ಬಳಕೆ ಮಾಡಿಕೊಳ್ಳುತ್ತಿದೆ.ಉಳಿದ ನೀರು ಸಮುದ್ರದ ಪಾಲಾಗುತ್ತಿದೆ.ಆ ನೀರಿನಲ್ಲಿ 14.98 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ರಾಜ್ಯಕ್ಕೆ ಮಂಜೂರು ಮಾಡಬೇಕು,ಇಷ್ಟು ನೀರನ್ನು ರಾಜ್ಯಕ್ಕೆ ಕೊಡುವುದರಿಂದ ಗೋವಾದಲ್ಲಿನ ಅರಣ್ಯ ಪ್ರದೇಶಕ್ಕೆ ನೀರಿನ ಕೊರತೆ ಆಗಲ್ಲ ಎಂದು ರಾಜ್ಯ ವಾದ ಮಂಡಿಸಿ ನೀರಿನ ಬೇಡಿಕೆ ಸಲ್ಲಿಸಿತ್ತು.ಆದರೆ ರಾಜ್ಯಕ್ಕೆ ಐ ತೀರ್ಪು ಭಾರೀ ಹಿನ್ನೆಡೆ ತಂದಿದೆ.