ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಸ್ವಯಂ ಪ್ರೇರಣೆಯಿಂದ ನಡೆದಾಡಲು ಮುಂದಾಗಿರುವ ಶ್ರೀಗಳು

ತುಮಕೂರು: ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮತ್ತೆ ಸ್ವಯಂ ಪ್ರೇರಣೆಯಿಂದ ನಡೆದಾಡಲು ಶ್ರೀಗಳು ಮುಂದಾಗಿದ್ದಾರೆ.

ಕಳೆದ ಕೆಲ ತಿಂಗಳ‌ ಹಿಂದೆ ಶ್ರೀಗಳು ಅನಾರೋಗ್ಯಕ್ಕೆ ಈಡಾಗಿದ್ದರು. ಶ್ರೀಗಳಿಗೆ ಮಠದಲ್ಲೇ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೆ, ಈಗಾಗಲೇ ಶ್ರೀಗಳ ದೇಹದಲ್ಲಿ ೮ ಸ್ಟಂಟ್ ಅಳವಡಿಸಲಾಗಿದೆ. ಅನಾರೋಗ್ಯದಿಂದ ಕೆಲ ಕಾಲ ಸಾರ್ವಜನಿಕ‌ ದರ್ಶನಕ್ಕೆ ಬ್ರೇಕ್ ಹಾಕಲಾಗಿತ್ತು.

ಇದೀಗ ಆರೋಗ್ಯ ಚೇತರಿಕೆಯಿಂದ ನೂರ ಹನ್ನೊಂದರ ಹರೆಯದ ಸಿದ್ದಗಂಗಾ ಮಠದ ಶ್ರೀಗಳು ಯಾರ ನೆರವಿಲ್ಲದೆ ನಡೆದಾಡಲು ಮುಂದಾಗಿದ್ದಾರೆ. ಮೂಲ ಮಠದಿಂದ ಸಾರ್ವಜನಿಕ ದರ್ಶನ ಸ್ಥಳಕ್ಕೆ ಶ್ರೀಗಳ ನಡೆದುಕೊಂಡು ಬಂದರು. ಶ್ರೀಗಳ ನಡಿಗೆ ಕಂಡು ಭಕ್ತರಲ್ಲಿ ಹರ್ಷ ಮೂಡಿದೆ.

ಭರ್ತಿಯಾದ ಲಿಂಗನಮಕ್ಕಿ‌ ಒಡಲು: ನಾಲ್ಕು ವರ್ಷದ ನಂತರ ನದಿಗೆ ನೀರು

ಶಿವಮೊಗ್ಗ: ನಾಡನ್ನು ಬೆಳಗುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು‌ ನಾಲ್ಕು ವರ್ಷದ ಬಳಿಕ ಮೊದಲ ಬಾರಿ ಜಲಾಶಯದ ಗೇಟ್ ಗಳನ್ನು ತೆರೆದು ಶರಾವತಿ ನದಿಗೆ ನೀರು ಬಿಡಲಾಗುತ್ತಿದೆ.

1819 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯ ಭರ್ತಿಯಾಗುವ ಸನಿಹದಲ್ಲಿದ್ದು ಜಲಾಶಯಕ್ಕೆ 95 ಸಾವಿರ ಕ್ಯೂಸೆಕ್ ನೀರು ಹರಿ ಬರುಬರುತ್ತಿದೆ.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 11 ಗಂಟೆಗೆ ಕ್ರೆಸ್ಟ್ ಗೇಟ್ ಗಳನ್ನು ತೆರೆದು 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ತೀರ್ಥಹಳ್ಳಿ,ಹೊಸನಗರ ಮತ್ತು ಸಾಗರ ತಾಲ್ಲೂಕಿನಲ್ಲಿ ಮಳೆ ಮುಂದುವರೆದಿದೆ.ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು ಸಂಜೆ ಮತ್ತು ರಾತ್ರಿ ವೇಳೆಗೆ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುತ್ತದೆ.

ಜಲಾಶಯ ಭರ್ತಿಯಾಗಿರು ಹಿನ್ನಲೆಯಲ್ಲಿ ಶರಾವತಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮ ಸೂಚನೆ ನೀಡಿದ್ದು, ನದಿ ಪಾತ್ರದಲ್ಲಿ ಇಳಿಯದಂತೆ,ಜಾನುವಾರುಗಳನ್ನು ಬಿಡದಂತೆ ಜನತೆಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಲಿಂಗನಮಕ್ಕಿ ಜಲಾಶಯ ವಿದ್ಯುತ್ ಉತ್ಪಾದನೆಗೆ ಮೀಸಲಾಗಿರುವ ರಾಜ್ಯದ ಏಕೈಕ ಜಲಾಶಯವಾಗಿದ್ದು ಅತಿ ಕಡಿಮೆ ದರದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.ರಾಜ್ಯದ ವಿದ್ಯುತ್ ಬೇಡಿಕೆಯ ಶೇ.23 ರಷ್ಟನ್ನು ಪೂರೈಸುವ ಸಾಮರ್ಥ್ಯ ಹೊಂದಿದ್ದು ಜಲಾಶಯ ಭರ್ತಿಯಾಗಿರುವುದು ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಕೊಂಚ ದೂರವಾಗುವಂತೆ ಮಾಡಿದೆ.

ಕೆಆರ್‌ಎಸ್‌ ನಿಂದ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ!

ಮಂಡ್ಯ: ಕಾವೇರಿ ಕಣಿವೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಒಂದು ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ.

ಇಂದು ಮಧ್ಯಾಹ್ನದ ವೇಳೆಗೆ 1 ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡುವ ಸಾಧ್ಯತೆ ಇದ್ದು, ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಮನವಿ ಮಾಡಿದೆ.

ಮೋದಿ ಸರಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಬೀದರ್:ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಕೊಳಚೆಗುಂಡಿಯಲ್ಲಿ ಪಾತ್ರೆಯನ್ನು ಬೋರಲು ಹಾಕಿ, ಅನಿಲ ಸಂಗ್ರಹಿಸಿ, ಗ್ಯಾಸ್ ಸ್ಟೌ ಹತ್ತಿಸಿ, ಪಕೋಡ ಮಾಡಿ, ವ್ಯಾಪಾರ ಮಾಡುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ‌ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿವಯರು ರೈತರಿಗೆ ನಾವು ಗರಿಷ್ಠ ಬೆಂಬಲ ಬೆಲೆ ನೀಡುವುದಿಲ್ಲ, ಬೆಳೆ ವಿಮೆ ನೀಡುವುದಿಲ್ಲ, ನಿಮ್ಮ ಹೊಲ-ಗದ್ದೆಗಳಲ್ಲಿ ಗುಂಡಿ ತೋಡಿ, ಅಲ್ಲಿ ತ್ಯಾಜ್ಯ ತುಂಬಿ, ಅನಿಲ ಸಂಗ್ರಹಿಸಿ, ಅವುಗಳಿಂದ ನಿಮ್ಮ ಪಂಪ್ ಸೆಟ್ ಗಳನ್ನು ಓಡಿಸಿ, ನೀರು ಹರಿಸಿಕೊಳ್ಳಿ! ಎಂದು ಸಲಹೆ ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ರು.

ಈ ಹಿಂದಿನ ಯುಪಿಎ ಸರ್ಕಾರವು ರಾಫೆಲ್ ಯುದ್ದ ವಿಮಾನಗಳನ್ನು ಕರ್ನಾಟಕದ ಹೆಚ್ ಎ ಎಲ್ ನಲ್ಲಿ ನಿರ್ಮಿಸಲು ನಿರ್ಧರಿಸಿತ್ತು. ಆದರೆ ಬಿಜೆಪಿ ಆ ಅವಕಾಶವನ್ನು ಕಸಿದುಕೊಂಡಿತು. ಹೀಗಾಗಿ ಕರ್ನಾಟಕದ ಯುವಕರು ನಿರುದ್ಯೋಗಿಗಳಾಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ರು.

ಈ ಹಿಂದಿನ ಯುಪಿಎ ಸರ್ಕಾರವು ಫ್ರಾನ್ಸ್ ನಿಂದ ಪ್ರತಿ ರಾಫೆಲ್ ಯುದ್ದ ವಿಮಾನವನ್ನು ರೂ. 565 ಕೋಟಿಗಳಿಗೆ ಕೊಳ್ಳುವ ಇಂಗಿತ ವ್ಯಕ್ತ ಪಡಿಸಿತ್ತು. ಆದರೆ, ಮೋದಿಯವರ ಸರ್ಕಾರ ಈ ರೂ. 1,600ಕ್ಕೆ ಕೋಟಿಗಳಿಗೆ ಕೊಳ್ಳಲು ಹೊರಟಿದೆ.ಇಷ್ಟೊಂದು ಮೊತ್ತದ ವ್ಯತ್ಯಾಸ ಹಗರಣಕ್ಕೆ ಸಾಕ್ಷಿಯಲ್ಲದೆ ಇನ್ನೇನು ಎಂದ್ರು.

ಭೇಟಿ ಪಡಾವೋ… ಭೇಟಿ ಬಚಾವೋ ಎನ್ನುತ್ತಾರೆ ಮೋದಿಯವರು. ಆದರೆ ಯಾರಿಂದ ಹೆಣ್ಣುಮಕ್ಕಳನ್ನು ರಕ್ಷಿಸಬೇಕು. ಉತ್ತರ ಪ್ರದೇಶ ಮತ್ತು ದೇಶದ ಇತರೆಡೆಗಳಲ್ಲಿ ಬಿಜೆಪಿ ಶಾಸಕರು/ಮುಖಂಡರಿಂದಲೇ ಅತ್ಯಾಚಾರಗಳಾಗುತ್ತಿವೆ ಎಂದು ಮೋದಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ರು.

ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ‌ ಸಿಎಂ ಕುಮಾರಸ್ವಾಮಿ ಕುಟುಂಬ

ಮಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿ ಕ್ಷೇತ್ರನಾಥ ಶ್ರೀ ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಮೈಸೂರು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇಂದು ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ರು. ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ,ಚೆನ್ನಮ್ಮ,ಸಿಎಂ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಮಂಜುನಾಥ ದೇವಾಲಯಕ್ಕೆ ಭೇಟಿ ನೀಡಿದ್ರು.

ದೇವಾಲಯದ ಆಡಳಿತ ಮಂಡಳಿ ವತಿಯಿಂದ ಕುಮಾರಸ್ವಾಮಿ ಕುಟುಂಬಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.ನಂತರ ಕ್ಷೇತ್ರನಾಥ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು.

ಬೆಂಗಳೂರಿನಲ್ಲೇ ಏರ್ ಶೋ ನಡೆಸಿ: ಪ್ರಧಾನಮಂತ್ರಿಗಳಿಗೆ ಸಿಎಂ ಪತ್ರ!

ಬೆಂಗಳೂರು: ಏರೋ ಇಂಡಿಯಾ ಶೋ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳಿಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನ ಮಂತ್ರಿ ನರೇಂದ್ರ ಅವರಿಗೆ ಪತ್ರ ಬರೆದಿದ್ದು ಬೆಂಗಳೂರಿನಲ್ಲೇ ಏರ್ ಶೋ ನಡೆಸುವಂತೆ ಮನವಿ ಮಾಡಿದ್ದಾರೆ.

2017 ರಲ್ಲಿ ನಡೆದ ಏರ್ ಶೋ ಸೇರಿದಂತೆ ಈವರೆಗೆ ನಡೆದಿರುವ ಏರ್ ಶೋ ಗಳಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಿದ್ದೇವೆ. ಅಲ್ಲದೆ, ಏರ್ ಶೋ ಗೆ ಬೆಂಗಳೂರಿನಲ್ಲಿ ಉತ್ತಮ ವಾತಾವರಣ ಸಹ ಇದೆ ಎಂದು ಪತ್ರದಲ್ಲಿ ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

2019 ರಲ್ಲಿ ನಡೆಯಲಿರುವ ಏರ್ ಶೋವನ್ನು ಕೂಡ ಬೆಂಗಳೂರಿನಲ್ಲೇ ನಡೆಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಹಾಗೂ ಈ ಕುರಿತು ತ್ವರಿತವಾಗಿ ಕೇಂದ್ರ ಸರ್ಕಾರ ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.