ರಾಮನಗರದಲ್ಲಿ ಬಂಧಿತನಾದ ಉಗ್ರನಿಗೂ ತುಮಕೂರಿಗೂ ನಂಟಿದೆ: ಸೊಗಡು ಶಿವಣ್ಣ

ತುಮಕೂರು: ರಾಮನಗರದಲ್ಲಿ ಬಂಧಿತನಾದ ಉಗ್ರನಿಗೂ ತುಮಕೂರಿಗೂ ನಂಟಿದೆ. ತುಮಕೂರಿನಲ್ಲೂ ಅವನ ಸಹಚರರಿದ್ದಾರೆ. ಆದರೆ, ಸರ್ಕಾರ ಅದನ್ನ ಬಹಿರಂಗಪಡಿಸದೇ ಇರೋದು ದುರಾದೃಷ್ಟಕರ ಎನ್ನುವ ಮೂಲಕ ಮಾಜಿ ಸಚಿವ ಸೊಗಡು ಶಿವಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ಎರಡು ವರ್ಷದ ಹಿಂದೆ ತುಮಕೂರಿನಲ್ಲಿ ಬಂಧಿತನಾಗಿದ್ದ ಸೈಯದ್ ಮುಜಾಹಿದ್‌ಗೂ ರಾಮನಗರದ ಉಗ್ರನಿಗೂ ನಂಟಿತ್ತು. ತುಮಕೂರಿನಲ್ಲಿ ಹೊರ ರಾಜ್ಯದಿಂದ ಬಂದು ಅನುಮಾನಸ್ಪದವಾಗಿ ಓಡಾಡುತ್ತಿದ್ದಾರೆ. ಅವರ ಮೇಲೆ ಪೊಲೀಸರು ನಿಗಾ ಇಡುತ್ತಿಲ್ಲ ಎಂದು ಹೇಳಿದರು.

ಸರ್ಕಾರ ವೋಟ್ ಬ್ಯಾಂಕಿಗೋಸ್ಕರ ಉಗ್ರರಿರುವುದನ್ನು ಬಹಿರಂಗಪಡಿಸುತ್ತಿಲ್ಲ. ಸರ್ಕಾರಕ್ಕೆ ಜನರ ಸಂತತಿ, ದೇಶ, ಸಮಾಜಕ್ಕಿಂತ ಅಧಿಕಾರ‌ ಮುಖ್ಯ. ತುಮಕೂರಿನಲ್ಲಿ ಡ್ರಗ್ ಮಾಫಿಯಾ ಮಿತಿಮೀರಿದೆ. ಡ್ರಗ್ ಮಾಫಿಯಾದಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ದಂದೆಕೋರರ ಜೊತೆ ಶಾಮೀಲಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಅರೋಪಿಸಿದರು.

ಮೋದಿಯವರು ಚೌಕೀದಾರ ಅಲ್ಲ, ಭ್ರಷ್ಟಾಚಾರದ ಭಾಗೀದಾರ : ಸಿದ್ದು

ಬೀದರ್: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚೌಕೀದಾರ ಅಲ್ಲ, ಭ್ರಷ್ಟಾಚಾರದ ಭಾಗಿದಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಇಂದಿಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದ ಸಿದ್ಧರಾಮಯ್ಯ, ನಾಲ್ಕು ವರ್ಷಗಳ ಬಳಿಕ ಕೇಂದ್ರದ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಎಲ್ಲ ರಂಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.

ಸುಳ್ಳು ಭರವಸೆ ಮತ್ತು ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ ಎಂದರು.

ನರೇಂದ್ರ ಮೋದಿ ಅವರು ಈ ದೇಶದ ಚೌಕೀದಾರ ಅಲ್ಲ. ಭ್ರಷ್ಟಾಚಾರದ ಭಾಗೀದಾರ. ಅವರ ಕುಮ್ಮಕ್ಕಿನಿಂದಲೇ ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸುಳ್ಳು ಭರವಸೆಗಳ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೋದ ಮೋದಿ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ರಾಹುಲ್ ಗಾಂಧಿಯವರು ಪ್ರಧಾನಿ ಆಗಲಿದ್ದಾರೆ. ಬಳಿಕ ಅವರು ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದು ಹೇಳಿದರು.

ಪ್ರಧಾನಿಯವರ ಮನ್ ಕೀ ಬಾತ್ ನಿಂದ ಬಡವರ ಹೊಟ್ಟೆ ತುಂಬದು. ಅವರಿಗೆ ಬೇಕಿರುವುದು ಕಾಮ್ ಕೀ ಬಾತ್. ದಲಿತರ ಬಗ್ಗೆ ಮೋದಿಯವರಿಗೆ ಕಾಳಜಿ ಇದ್ದರೆ ಅವರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್ ಸಿಪಿ, ಟಿಎಸ್ ಪಿ ಕಾಯಿದೆಯನ್ನು ದೇಶವ್ಯಾಪಿ ಜಾರಿಗೆ ತರಲಿ. ಕೇವಲ ಮೂಗಿಗೆ ತುಪ್ಪ ಸವರುವುದರಿಂದ ದಲಿತರು, ರೈತರ ಉದ್ಧಾರ ಆಗದು. ಅವರ ಕಲ್ಯಾಣಕ್ಕೆ ಕಾರ್ಯಕ್ರಮ ಜಾರಿಗೆ ತರಬೇಕು. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ತಂದುಕೊಟ್ಟ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ತಂದುಕೊಟ್ಟದ್ದು ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ. ಬಿಜೆಪಿಯಿಂದ ಆ ಕೆಲಸ ಆಗಲಿಲ್ಲ. ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಕಳಕಳಿಗೆ ಬಲ ಬರಬೇಕಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಪಕ್ಷಕ್ಕೆ ಆಶೀರ್ವಾದ ಮಾಡುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕೆಂದು ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಯುಪಿಯಲ್ಲಿ ಅತೀಹೆಚ್ಚು ಲೋಕಸಭಾ ಕ್ಷೇತ್ರಗಳಿರುವುದರಿಂದ ಏರ್ ಶೋ ಶಿಫ್ಟ್: ಸಿಎಂ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳಿರುವುದರಿಂದ ಏರ್‌ ಶೋ ವನ್ನು ಲಕ್ನೋಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರಬಹುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಹುಬ್ಬಳ್ಳಿಯಲ್ಲಿ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಕರ್ನಾಟಕದಲ್ಲಿ  ಏರ್‌ಶೋ ನಡೆಸಲು ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ನೀಡಲಾಗಿತ್ತು. ಏರ್ ಶೋ ಇಲ್ಲಿಂದ ಸ್ಥಳಾಂತರಿಸಲಾಗುತ್ತದೆ ಎಂದು ಕೇಳಿದ್ದೇನೆ. ಆದರೆ, ಅಧಿಕೃತವಾಗಿ ನನಗಿನ್ನೂ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು‌

ಏರ್ ಶೋ ಉತ್ತರ ಪ್ರದೇಶಕ್ಕೆ ಶಿಫ್ಟ್? ಬೆಂಗಳೂರಿಗರಿಗೆ ಮಿಸ್ ಆದ ಲೋಹದ ಹಕ್ಕಿಗಳ ಹಾರಾಟ!

ಬೆಂಗಳೂರು: ಏರ್ ಶೋ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಸ್ಥಳಾಂತರ ವಿವಾದ ಇದೀಗ ರಾಜಕೀಯ ನಾಯಕರ ದಾಳವಾಗಿ ಪರಿಣಮಿಸಿದೆ‌. ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ರೆ, ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಏರ್ ಶೋ ಶಿಫ್ಟ್ ಆಗಲು ಬಿಡುವುದಿಲ್ಲ ಎಂದಿದ್ದಾರೆ.

ಲೋಹಗಳ ಹಕ್ಕಿಗಳ ಹಾರಾಟ ಉದ್ಯಾನನಗರಿ ಬೆಂಗಳೂರಿನ ಒಂದು ಗರಿಮೆ. ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಇದೀಗ ಉತ್ತರ ಪ್ರದೇಶಕ್ಕೆ ಸ್ಥಳಾಂತರವಾಗೊ ಸಾಧ್ಯತೆ ಇದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಬೆಂಗಳೂರಿಗರಿಗೆ ವಿಮಾನಗಳ ಹಾರಾಟ ಪ್ರದರ್ಶನ ಮಿಸ್ ಆಗೊ ಸಾದ್ಯತೆ ದಟ್ಡವಾಗುತ್ತಲೇ, ರಾಜಕೀಯ ನಾಯಕರು ತಮ್ಮ ಬೆಳೆ ಬೇಳಿಸಲು ಮುಂದಾಗಿದ್ದಾರೆ. ಎನ್ ಡಿಎ ಅಧಿಕಾರದಿಂದಾಗಿ ಏರ್ ಶೋ, ರಕ್ಷಣಾ ಕಾರ್ಯಕ್ರಮ, ಯೋಜನೆಗಳು ಕೈ ತಪ್ಪುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಪರಮೇಶ್ವರ್, ಬೆಂಗಳೂರಿನಿಂದ ವಿಮಾನ ಹಾರಾಟ ಪ್ರದರ್ಶನ ಲಖನೌ ಗೆ ಶಿಫ್ಟ್ ಆಗಿದೆ ಎಂಬ ಸುದ್ದಿ ಇದೆ. ಬಿಜೆಪಿಯ ಈ ನಿರ್ಧಾರ ಬೆಂಗಳೂರಿಗರಿಗೆ ಮಾಡಿರೊ ಅವಮಾನ. ಯಾವ್ದೇ ಕಾರಣಕ್ಕೂ ಈ ಏರ್ ಶೋ ಸ್ಥಳಾಂತರ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು..

ಏರೋ ಇಂಡಿಯಾ ಶೋ ಲಖನೌಗೆ ಶಿಫ್ಟ್ ಆಗಿದೆ ಎಂಬ ಮಾಹಿತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟರ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಕರ್ನಾಟಕ ಬೇಕಿತ್ತು, ವೆಲ್ ಡನ್ ಒಳ್ಳೆ ಕೆಲಸ ಮಾಡಿದ್ರಿ ಇದನ್ನೇ‌ ಮುಂದುವರೆಸಿ ಎಂದು ಟ್ವೀಟರ್ ಮೂಲಕ ಕಾಲೆಳೆದಿದ್ದಾರೆ.

ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗದಗದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಏರ್ ಶೋ ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದರು.

ಮತ್ತೊಂದೆಡೆ ಏರ್ ಶೋ ಸ್ಥಳಾಂತರ ಮಾಡದಂತೆ ವಿದ್ಯಾರ್ಥಿಗಳು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಒಟ್ಟಾರೆಯಾಗಿ ಏರ್ ಶೋ ಸ್ಥಳಾಂತರ ವಿಚಾರ ಇದೀಗ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಸಂವಿಧಾನದ ಆಶಯ ಜಾರಿಗೆ ಎಲ್ಲರೂ ಶ್ರಮಿಸೋಣ: ಪರಮೇಶ್ವರ್

ಬೆಂಗಳೂರು: ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಸಂಪೂರ್ಣ ಯಶಸ್ಸು ಕಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.‌ಪರಮೇಶ್ವರ್ ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ
ಭಾರತದ ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವ, ರಾಜಕೀಯ ವ್ಯವಸ್ಥೆ ಬಗ್ಗೆ ವಿಧ ವಿಧವಾದ ವ್ಯಾಖ್ಯಾನಗಳು ಬರುತ್ತಿದೆ.

ನಮ್ಮದು ಸಫಲತೆಯ ಪ್ರಜಾಪ್ರಭುತ್ವ. ಸಂವಿಧಾನದ ಆಶಯಗಳನ್ನು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಸಾಕಾರ ಗೊಳಿಸಲು ಸಾಧ್ಯವಾಗಿದೆಯಾ ಎಂಬ ಪ್ರಶ್ನೆ ಈಗಲೂ ಮೂಡುತ್ತಿದ್ದೆ.

ದೇಶದಲ್ಲಿ ಹಣ ‌ಮತ್ತು ಅಧಿಕಾರ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿದೆ. ದೇಶದಲ್ಲಿ ಅತ್ಯಾಚಾರ, ಅವ್ಯವಹಾರ ಬೀದಿಯಲ್ಲಿ ನಡೆಯುತ್ತಿದೆ. ಇದಕ್ಕೆಲ್ಲಾ ಅಂತ್ಯ ಹಾಡಬೇಕಿದೆ.

ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಆದರೆ ಈ ವ್ಯವಸ್ಥೆ ಇರ ಬಾರದು ಎಂದು ಏಕೆ ಚಿಂತನೆ ಬರುತ್ತಿಲ್ಲ. ನಾವು ಯಾವ ರೀತಿಯ ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ಇದಕ್ಕೆ ಉತ್ತರ ಸಿಗ ಬೇಕಿದೆ. ಇಲ್ಲವಾದಲ್ಲಿ ಆಡಳಿತ, ಪ್ರಜಾಪ್ರಭುತ್ವ ವ್ಯವಸ್ಥೆ‌ಗೆ ಸಂಚಕಾರ ಬರಲಿದೆ.

ಪ್ರಜಾಪ್ರಭುತ್ವ ಫಲ, ಸ್ವಾತಂತ್ರ್ಯ ದ ಫಲ ಪ್ರತಿಯೊಬ್ಬರಿಗೂ ಸಿಗಬೇಕಾದರೆ ನಾವೆಲ್ಲರೂ ಚಿಂತನೆ ಮಾಡಬೇಕು. ಸಂವಿಧಾನದ ಆಶಯಗಳ‌ ಅನುಷ್ಠಾನಕ್ಕೆ ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇತರರು ಇದ್ದರು.

ರಂಗದ ಮೇಲೆ ಅನಾವರಣಗೊಂಡ ಗಾಂಧಿ ಬದುಕಿನ ಹಾದಿ: ರಾಜ್ಯಾದ್ಯಂತ ೪ ತಿಂಗಳ ಸುತ್ತಾಟಕ್ಕೆ ಧಾರವಾಡದಲ್ಲಿ ಚಾಲನೆ

ಧಾರವಾಡ: ಪಾಪು ಬಾಪುವಾಗಿ ಬೆಳೆದ ಕಥೆಯನ್ನು ರಂಗದ ಮೇಲೆ ಅನಾವರಣಗೊಳಿಸುವ ವಿಭಿನ್ನ ಪ್ರಯತ್ನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣ ಕೈಗೆತ್ತಿಕೊಂಡಿದೆ.

ಬೊಳುವಾರು ಮಹ್ಮದ್ ಕುಂಇ ಅವರ “ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ” ಆಧರಿಸಿದ ರಂಗರೂಪಕವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರ ಪರಿಕಲ್ಪನೆ, ಡಾ.ಶ್ರೀಪಾದ ಭಟ್ ಅವರ ನಿರ್ದೇಶನ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ ಶಿಗ್ಗಾಂವ್ ಅವರ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ನಾಡಿನ ವಿವಿಧ ಭಾಗಗಳ ಸುಮಾರು ೩೦ ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಿ, ಹಾವೇರಿ ಜಿಲ್ಲೆಯ ಶೇಷಗಿರಿ ಗ್ರಾಮದಲ್ಲಿ ಸುಮಾರು ಒಂದು ತಿಂಗಳ ಕಾಲ ತರಬೇತಿ ನೀಡಲಾಗಿದೆ.

ನಿರಂತರ ತಾಲೀಮಿನ ನಂತರ ‘ಗಾಂಧಿ- ೧೫೦ ಒಂದು ರಂಗ ಪಯಣ’ ಎಂಬ ಶೀರ್ಷಿಕೆಯಡಿ ಕಲಾವಿದರನ್ನು ಎರಡು ತಂಡಗಳಾಗಿ ವಿಂಗಡಿಸಿ, ನಾಡಿನಾದ್ಯಂತ ಬರುವ ೪ ತಿಂಗಳವರೆಗೆ ನಿರಂತರವಾಗಿ ೮೦೦ ಕ್ಕೂ ಹೆಚ್ಚು ಪ್ರದರ್ಶನ ನೀಡುವ ಗುರಿ ಹೊಂದಲಾಗಿದೆ.