ಹಜ್‌ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ನೀಡಿದ ಪರಮೇಶ್ವರ್!

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಶನಿವಾರ ಹಜ್‌ ಭವನಕ್ಕೆ ತೆರಳಿ ಹಜ್ ಯಾತ್ರಾರ್ಥಿ ಗಳನ್ನು ಬೀಳ್ಕೊಡುಗೆ ನೀಡಿದರು.

ಬಳಿಕ ಮಾತನಾಡಿದ ಅವರು, ಹಿಂದೆಲ್ಲಾ ಹಜ್ ಯಾತ್ರಾರ್ಥಿಗಳಿಗೆ ಇಷ್ಟು ಸುವ್ಯವಸ್ಥೆಗಳಿರಲಿಲ್ಲ.‌ಸಾಕಷ್ಟು ಸಮಸ್ಯೆ ಇತ್ತು. ಈಗ ಸರಕಾರದ ವತಿಯಿಂದ ಸುಸಜ್ಜಿತ ವ್ಯವಸ್ಥೆ ನಿರ್ಮಿಸಿಕೊಟ್ಟಿದ್ದೇವೆ. ಒಂದೇ ಸೂರಿನಡಿ ಪಾಸ್‌ಪೋರ್ಟ್‌, ಸೆಕ್ಯೂರಿಟಿ ಚೆಕ್‌ ಸೇರಿದಂತೆ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಹಜ್‌ ಸಚಿವ ಜಮೀರ್ ಅವರು ಹೆಚ್ಚು ಆಸಕ್ತಿ ವಹಿಸಿ ಯಾತ್ರಾರ್ಥಿಗಳನ್ನು ಬೀಳ್ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಜ್‌ ಯಾತ್ರಾರ್ಥಿಗಳಿಗೆ ಭೋಜನದ ವ್ಯವಸ್ಥೆ ನಿರ್ಮಿಸಲಾಗಿತ್ತು. ಅಲ್ಪಾಸಂಖ್ಯಾತ, ಹಜ್‌ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಕೂಡ ಉಪಸ್ಥಿತರಿದ್ದರು.

ಕನ್ನಡ ಭಾಷಾ ಅಕಾಡೆಮಿ: ಜಯಮಾಲಾ ಅಭಿನಂದನೆ

ಬೆಂಗಳೂರು: ನಮ್ಮ ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಲು ದೆಹಲಿ ಸರ್ಕಾರದ ಸಚಿವ ಸಂಪುಟವು ಸಮ್ಮತಿ ನೀಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ ಜಯಮಾಲ ಅವರು ತಿಳಿಸಿದ್ದಾರೆ.

ಈ ಬಗ್ಗೆ ನಾನು ಕರ್ನಾಟಕ ಸರ್ಕಾರದ ಮತ್ತು ಸಮಗ್ರ ಕನ್ನಡಿಗರ ಪರವಾಗಿ ದೆಹಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬಯಸುತ್ತೇನೆ.ಈ ಪ್ರತಿಷ್ಠಿತ ಅಕಾಡೆಮಿಯು ದೆಹಲಿಯಲ್ಲಿ ಸ್ಥಾಪನೆಯಾಗಿ ಸಮರ್ಪಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಎಲ್ಲಾ ಸಹಾಯ, ಸಹಕಾರ, ನೆರವುಗಳನ್ನು ನೀಡಲು ನಮ್ಮ ಇಲಾಖೆಯು ಸದಾ ಸಿದ್ಧ ಎಂದು ನಾನು ಪುನರುಚ್ಛರಿಸುತ್ತೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ನಾನು ಈಗಾಗಲೇ ಸೂಚನೆ ನೀಡಿದ್ದೇನೆ ಎಂದ್ರು.

ನೀರು ಕೊಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ: ಮಹದಾಯಿ ಹೋರಾಟಗಾರರಿಂದ ಧರಣಿ

ಬೆಂಗಳೂರು: ನೀರು ಕೊಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಒತ್ತಾಯಿಸಿ ಮಹಾದಾಯಿ ಹೋರಾಟಗಾರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದೆ.ನಗರದ ಫ್ರೀಡಂ ಪಾರ್ಕನಲ್ಲಿ‌ ಮಹಾದಾಯಿ ಹೋರಾಟಗಾರ ವೀರೇಶ ಸೊರಬದಮಠ ನೇತೃತದ ರೈತರ ತಂಡ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.

ಮಹದಾಯಿ ಹೋರಾಟಗಾರರ ಧರಣಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಬೆಂಬಲ ನೀಡಿ ಸ್ವತಃ ಧರಣಿಯಲ್ಲಿ ಪಾಲ್ಗೊಂಡ್ರು.ನೀರು ಕೊಡಿ‌ ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ ಎನ್ನುವ ಬೇಡಿಕೆಯಂತೆ ದಯಾಮರಣ ಕೋರುವ ಪತ್ರಕ್ಕೆ ಸಹಿ ಹಾಕಿದ್ರು.

ಈ ವೇಳೆ ಮಾತನಾಡಿದ ಎಚ್.ಎಸ್.ದೊರೆಸ್ವಾಮಿ,
ಮಹಾದಾಯಿ ವಿಷಯದಲ್ಲಿ ಇದುವರೆಗೆ ರಾಜ್ಯಕ್ಕೆ ನ್ಯಾಯ ಸಿಗದೆ ಇರುವುದಕ್ಕೆ ಬಿಜೆಪಿಯವರ ಮಲತಾಯಿ ಧೋರಣೆಯೇ ಕಾರಣ ಎಂದು ಆರೋಪಿಸಿದ್ರು.ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಿದ್ದಿದ್ದರೆ ಮಹಾದಾಯಿ ವಿವಾದ ಯಾವಾಗಲೋ ಇತ್ಯರ್ಥವಾಗುತ್ತಿತ್ತು.ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರಲಿಲ್ಲ.ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಮಹಾದಾಯಿ ವಿವಾದ ಇತ್ಯರ್ಥ ಮಾಡದೆ ಕೇಂದ್ರ ಸರ್ಕಾರದ ಬಿಜೆಪಿ ಪ್ರಮುಖರು ನಿರ್ಲಕ್ಷ ಮಾಡುತ್ತಿದ್ದಾರೆ‌ ಎಂದು ಕಿಡಿಕಾರಿದ್ರು.

ಸಾ.ರಾ.ಗೋವಿಂದು ಮಾತನಾಡಿ ಕೇಂದ್ರ ಸರಕಾರದ ನಡೆಯನ್ನು ಟೀಕಿಸಿದ್ರು.ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಸರಿಯಲ್ಲ ಸರಕಾರದ ಧೋರಣೆಯಿಂದ ಹೋರಾಟಗಾರರು ದಯಾಮರಣ ಪತ್ರಕ್ಕೆ ಸಹಿ ಚಳವಳಿ ಆರಂಭಿಸುವಂತಾಗಿದೆ, ಹೋರಾಟಕ್ಕೆ ಚಿತ್ರರಂಗದ ಸಂಪೂರ್ಣ ಬೆಂಬಲ ಇದೆ.ಹಿಂದೆಯೂ ಬೆಂಬಲ ನೀಡಿದ್ವಿ ಈಗಲೂ ನೀಡುತ್ತೇವೆ,ಮುಂದೆಯೂ ನೀಡಲಿದ್ದೇವೆ ಎಂದ್ರು.

ಹೋರಾಟಗಾರ ವೀರೇಶ್ ಸೊರಬದಮಠ ಮಾತನಾಡಿ,ಇದೇ 21 ರಂದು ತೀರ್ಪು ಬರಲಿದೆ.ಅಲ್ಲಿಯವರೆಗೂ ನಾವು ಧರಣಿ ಮಾಡುತ್ತೇವೆ, ನೀರು ಸಿಗಬೇಕು ಇಲ್ಲವೇ ದಯಾಮರಣ ಪತ್ರಕ್ಕೆ ಅನುಮತಿ ನೀಡಬೇಕು ಈ ಎರಡೇ ಆಯ್ಕೆ ಕೇಂದ್ರ ಸರಕಾರಕ್ಕೆ ನೀಡುತ್ತಿದ್ದೇವೆ ಎಂದು ಹೋರಾಡ ತೀವ್ರಗೊಳಿಸುವ ಸೂಚನೆ ನೀಡಿದ್ರು.

ಒಕ್ಕಲುತನದ ಹಿನ್ನಲೆಯ ಸಿಎಂ ಭತ್ತದ ನಾಟಿ ಮಾಡಿದ್ದರಲ್ಲಿ‌ ತಪ್ಪೇನಿದೆ: ಸಿಎಂ ಪರ ಡಿಕೆಶಿ ಬ್ಯಾಟಿಂಗ್

ಬೆಂಗಳೂರು: ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ವಿರುತ್ತದೆ.ಒಕ್ಕಲುತನದ ಹಿನ್ನೆಲೆಯ ಕುಮಾರಸ್ವಾಮಿ ಯವರು ರೈತರ ಜತೆಗೂಡಿ ನಾಟಿ ಮಾಡಿದ್ರೆ ತಪ್ಪೇನು.ನನ್ನನ್ನು ಕರೆದಿದ್ರೆ ನಾನೂ ಹೋಗುತ್ತಿದ್ದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗದ್ದೆ ನಾಟಿ ಮಾಡಿದ್ದನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಂಡಿದ್ದಾರೆ.

ಮಂಡ್ಯದಲ್ಲಿ ಹೆಚ್ಚಿನ ಜೆಡಿಎಸ್ ಶಾಸಕರು ಗೆದ್ದಿದ್ದಾರೆ ಹಾಗಾಗಿ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಜತೆಗೆ ಹಲವಾರು ವರ್ಷಗಳಿಂದ ಮಳೆ ಕೊರತೆಯಾಗಿದ್ದ ಪರಿಣಾಮ ಬೆಳೆ ಪದ್ದತಿ ಬದಲಾಯಿಸಿಕೊಳ್ಳುವಂತೆ,ಭತ್ತದ ಬದಲು ಬೇರೆ ಬೆಳೆ ಬೆಳೆಯುವಂತೆ ಸರ್ಕಾರವೇ ರೈತರಿಗೆ ಸೂಚಿಸಿತ್ತು.ಈಗ ಮಳೆ ಸಂವೃದ್ದವಾಗಿ ಆಗಿದೆ.ರೈತರು ಇಚ್ಚಿಸಿದ ಬೆಳೆ ಬೆಳೆಯಬಹುದು.ಅದಕ್ಕೆ ಭತ್ತವನ್ನು‌ ಪ್ರೋತ್ಸಾಹಿಸಲು ಕುಮಾರಸ್ವಾಮಿ ನಾಟಿ ಮಾಡಿದ್ದಾರೆ.ಇದರಲ್ಲಿ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದ್ರು.

ಹಿಂದೆ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ ತಾವೇ ಈಜುವ ಮೂಲಕ ಈಜುಕೊಳ ಉದ್ಘಾಟಿಸಿದ್ದರು,ನಾನೂ ಕೂಡ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಿದ ಕೆರೆಯಲ್ಲಿ ,ಪತ್ನಿ ಸಮೇತನಾಗಿ ಬೋಟ್ ನಲ್ಲಿ ಪ್ರಯಾಣಿಸಿ ಉದ್ಘಾಟನೆ ಮಾಡಿದ್ದೆ ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ರು.

ಸಹಕಾರ ಸಂಘಗಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿಯವರಿಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ.ಅಂದು ಕ್ಯಾಬಿನೆಟ್ ನಲ್ಲಿ ಚರ್ಚಿಸುವಾಗ ಕುಟುಂಬದಲ್ಲಿ ಒಬ್ಬರ ಸಾಲ ಮಾತ್ರ ಮನ್ನಾ ಮಾಡುವ ನಿಯಮಾವಳಿಯನ್ನು ತೆಗೆಯುವಂತೆ ಸಲಹೆ ಮಾಡಿದ್ದೇ ನಾವು.ಜತೆಗೆ ಅಂದು ಸಚಿವ ಕೃಷ್ಣಬೈರೇಗೌಡರು ಊರಲ್ಲಿ ಇರಲಿಲ್ಲ.ಹಾಗಾಗಿ ವಾರ್ತಾ ಸಚಿವರಾಗಿ ಸ್ವತಃ ಮುಖ್ಯಮಂತ್ರಿ ಯವರೇ ಮೀಡಿಯಾ ಬ್ರೀಫಿಂಗ್ ಮಾಡಿದ್ರು.ಸರ್ಕಾರದ ಮುಖ್ಯಸ್ಥರೇ ವಿವರಣೆ ನೀಡುವಾಗ ನಾವು ಉಪಸ್ಥಿತಿತರಿರಲಿಲ್ಲ ಎಂದು ದೋಷ ಹುಡುಕುವುದು ಸರಿಯಲ್ಲ ಎಂದ್ರು.

ಕೇರಳ ಮತ್ತು ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಾವೇರಿ ಕಣಿವೆಯ ಜಲಾಶಯಗಳಲ್ಲೂ ಒಳಹರಿವು ಹೆಚ್ಚಾಗಿದೆ.ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.ನದಿ ಪಾತ್ರದ ಕೆಳಗಿನ ಪ್ರದೇಶದ ಜನರನ್ನು ಸ್ಥಳಾಂತರ ಮಾಡುವಂತೆ ಆದೇಶಿಸಲಾಗಿದೆ.ಹಾಗೂ ಇದೇ ಸಮಯದಲ್ಲಿ ಜಲಾಶಯಗಳ ಹೆಚ್ಚುವರಿ ನೀರನ್ನು ಕೆರೆ ತುಂಬಿಸಲು ಸಹ ಸೂಚನೆ ನೀಡಲಾಗಿದೆ.ಇಂತಹಾ ಸಂದರ್ಭದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಉಪಯೋಗವಾಗಲಿ ಎಂದೇ ನಾವು ಈಗ ಮೇಕೆದಾಟು ಅಣೆಕಟ್ಟು ನಿರ್ಮಾಣ ಪ್ರಸ್ತಾಪವನ್ನು ಮುಂದಿಟ್ಟಿರೋದು ಎಂದ್ರು.

ಕನ್ನಂಬಾಡಿ ಕಟ್ಟೆಗೆ ನಿರ್ಮಲಾನಂದ ಶ್ರೀಗಳ ಭೇಟಿ: ಸಿಎಂ ಸಾತ್

ಮಂಡ್ಯ: ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗಳು ಕೆಆರ್‌ಎಸ್ ಜಲಾಶಯವನ್ನು ವೀಕ್ಷಿಸಿದ್ರು. ಶ್ರೀಗಳಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಚಿವರಾದ ಸಿ.ಎಸ್.ಪಟ್ಟರಾಜು,ಜಿ.ಟಿ ದೇವೇಗೌಡ,ಸಾ.ರಾ.ಮಹೇಶ್ ಮತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ಸಾತ್ ನೀಡಿದ್ರು.

ಕೆಆರ್‌ಎಸ್ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡುತ್ತಿರುವ ಸ್ಥಳದಲ್ಲಿ ಕುಳಿತು ನದಿಗೆ ನೀರು‌ ಹರಿದುಹೋಗುತ್ತಿರುವ ದೃಶ್ಯವನ್ನು ವೀಕ್ಷಿಸಿದ್ರು. 62 ಸಾವಿರ ಕ್ಯೂಸೆಕ್ ನೀರು ರಭಸದಿಂದ ಕೆಎರ್‌ಎಸ್ ಡ್ಯಾಂನ ಗೇಟುಗಳಿಂದ ದುಮ್ಮಿಕ್ಕುತ್ತಿದ್ದು,ಸ್ವಲ್ಪವೂ ಆತಂಕವಿಲ್ಲವೇ ನೀರು ದುಮ್ಮಿಕ್ಕುವ ಅತಿ ಸಮೀಪದಲ್ಲಿ ಕುಳಿತು ಶಾಂತವಾಗಿ ಕೆಲಕಾಲ ಕಳೆದ್ರು.

ನಂತರ ಜಲಾಶಯದ ಹೊರಭಾಗದಲ್ಲಿ‌ ಶ್ರೀಗಳು‌ ವಿಹರಿಸಿದ್ರು.ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ವಿಹಂಗಮ ನೋಟವನ್ನು ಕಣ್ದುಂಬಿಕೊಂಡು ನಾಡಿನ ರೈತ ಸಮೂಹಕ್ಕೆ ಒಳಿತಾಗುವಂತೆ ಹರಸಿದ್ರು.

ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ!

ಮಂಡ್ಯ: ಗದ್ದೆಗಿಳಿದು ನಾಟಿ ಮಾಡುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರೈತರು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು.

ಮಂಡ್ಯದ ಪಾಂಡವಪುರ ತಾಲ್ಲೂಕಿನ ಸೀತಾಪುರದ ಮಹದೇವಮ್ಮ ಎಂಬುವರ ಜಮೀನಿನಲ್ಲಿ ಸಿಎಂ ಭತ್ತ ನಾಟಿ ಮಾಡಿದರು. ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿ, ನನ್ನ ರೈತ ಬಂಧುಗಳ ಜೊತೆಗೂಡಿ ನಾಟಿ ಮಾಡಿದ್ದೇನೆ. ಭತ್ತದ ಕಣಜ, ಹಸಿರಿನ ನಾಡು ಮಂಡ್ಯ ಜಿಲ್ಲೆ ಪ್ರಕೃತಿ ವಿಕೋಪ, ಬರ, ಮಳೆ ಹಾನಿಯಿಂದ ಜಿಲ್ಲೆ ಸೊರಗಿತ್ತು. ಕಳೆದ ಎರಡು ವರ್ಷದಿಂದ ಮಂಡ್ಯ ಜಿಲ್ಲೆಯ ರೈತರು ನೀರಿನ ಕೊರತೆಯಿಂದಾಗಿ ಭತ್ತ ನಾಟಿ ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕೃಷಿ ಇಲಾಖೆಯಿಂದ ರೈತರಿಗೆ ಭತ್ತ ನಾಟಿ ಮಾಡದಿರಲು, ಮನವಿ ಸಹ ಮಾಡಲಾಗಿತ್ತು. ಈ ವರ್ಷ ಕಾವೇರಿ ಕಣಿವೆ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಭತ್ತವನ್ನು ನಾಟಿ ಮಾಡಲು ಒಳ್ಳೆಯ ವಾತಾವರಣ ಕೂಡಿ ಬಂದಿದೆ ಎಂದು ಸಿಎಂ ಹರ್ಷ ವ್ಯಕ್ತಪಡಿಸಿದರು.

ನಾನು ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಬಂದಿದ್ದೇನೆ. ಇಲ್ಲಿ ಕೆಲವು ಮಹತ್ವದ ಘೋಷಣೆಗಳನ್ನು ನಾನು ಮಾಡುವಂತಿಲ್ಲ. ಆದರೆ ಗೌರಿ-ಗಣೇಶ ಹಬ್ಬದೊಳಗೆ ಹೊಸ ಘೋಷಣೆ. ಸಂಪುಟದಲ್ಲಿ ಚರ್ಚಚೆ ಬಳಿಕ ನಾನು ಸಿಹಿ ಸುದ್ದಿ ನೀಡುತ್ತೇನೆ. ತಾಯಿ ಚಾಮುಂಡಿ ಈ ಬಾರಿ ನಮಗೆ ಕರುಣೆ ತೋರಿದ್ದಾಳೆ ಎಂದರು.

37 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಸಹಾ ನಾನು ಸಿಎಂ ಆಗಿದ್ದೇನೆ. ತಿಂಗಳಲ್ಲಿ ಒಂದು ದಿನ ಜನರ ಮಧ್ಯದಲ್ಲಿರುತ್ತೇನೆ. ನಿಮ್ಮ ಋಣ ತೀರಿಸಲು ನಾನು ಸದಾ ಬದ್ಧನಾಗಿರುತ್ತೇನೆ. ಏನೇ ಕಷ್ಟ ಬಂದರೂ ವಿಧಾನಸೌಧ ಬಾಗಿಲು ತೆರೆದಿರುತ್ತೆ. ರೈತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ ಎಂದು ಗ್ರಾಮದ ಜನರಲ್ಲಿ ಭರವಸೆ ಮೂಡಿಸಿದರು.

ಒಂದು ವರ್ಷದ ಹಿಂದಯೇ ನಾನು ನಾಟಿ ಮಾಡುವ ಘೋಷಣೆ ಮಾಡಿದ್ದೆ. ನಾವು ಚಿಕ್ಕ ವಯಸ್ಸಿನಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ನಮ್ಮ ಜೀವನದ ಕಸುಬು ಮುಂದುವರೆಸಿದ್ದೇನೆ. ನನ್ನ ತಾಯಿಯೊಂದಿಗೆ ಜತೆ ಸೇರಿ ಭತ್ತದ ನಾಟಿ ಮಾಡಿದ್ದೇನೆ. ಇಂದು ಭತ್ತದ ನಾಟಿಯಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಇನ್ನು ಒಂದು ವಾರದಲ್ಲಿ ಸಹಕಾರಿ ಬ್ಯಾಂಕ್ ನ ಒಂದೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಎಂದು ಮತ್ತೊಮ್ಮೆ ಸಾಲ ಮನ್ನಾ ಕುರಿತು ರೈತರಿಗೆ ಸ್ಪಷ್ಟಪಡಿಸಿದರು.

30 ಜಿಲ್ಲೆಯ ರೈತರಿಗಾಗಿ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ಯಾವುದೇ ಸಂಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಸಂಕಷ್ಟಗಳನ್ನು ನಾನು ಪರಿಹರಿಸ್ತೇನೆ. ತಿಂಗಳಿಗೊಂದು ಜಿಲ್ಲೆಗೆ ಭೇಟಿ ನೀಡಿ ರೈತರ ಜತೆ ಸಂವಾದ ನಡೆಸುತ್ತೇನೆ. ಸಹಕಾರಿ ಬ್ಯಾಂಕ್ ಗಳಲ್ಲಿ 9500 ಕೋಟಿ ಸಾಲ ಮನ್ನಾ ಮಾಡಿರುವೆ ಎಂದು ಹೇಳಿದರು‌

ಇದೇ ವೇಳೆ ಮಾತನಾಡಿದ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ಭತ್ತ ನಾಟಿ ಕಾರ್ಯ ಯುವಜನತೆಗೆ ಮಾದರಿ. ಕೈ ಕೆಸರಾದರೆ ಬಾಯಿ ಮೊಸರು ಎಂಬುದು ನಾಣ್ನುಡಿ. ಆದರೀಗ, ಕೈ ಕೆಸರಾಗಬಾರದು, ಬಾಯಿ ಮೊಸರಾಗ ಬೇಕೆಂಬ ಆಸೆ. ಇಂತಹ ಯುವ ಸಮೂಹಕ್ಕೆ ಸಿಎಂ ಕಾರ್ಯ ಮಾದರಿಯಾಗಿದೆ. ಯುವ ಸಮುದಾಯ ಕೃಷಿಯನ್ನು ಆಶ್ರಯಿಸಲು ಸಿಎಂ ಮಾದರಿಯಾಗಿದ್ದಾರೆ ಎಂದರು.