ಜನತಾ ಪರ್ವ 1.O: ಜೆಡಿಎಸ್ 2ನೇ ಹಂತದ ಸಂಘಟನಾ ಕಾರ್ಯಗಾರ ಜನತಾ ಸಂಗಮಕ್ಕೆ ತೆರೆ

ಬೆಂಗಳೂರು: ಕಳೆದ 9 ದಿನಗಳಿಂದ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜನತಾ ಪರ್ವ 1.O ದ ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ಕ್ಕೆ ಇಂದು ತೆರೆ ಬಿದ್ದಿದ್ದು, ಮುಂದಿನ ಹಂತದ ಕಾರ್ಯಕ್ರಮವನ್ನು ಶೀಘ್ರವೇ ಘೋಷಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ” ಪಕ್ಷದ ಕಚೇರಿಯಲ್ಲಿ 9 ದಿನಗಳಿಂದ ಸಂಘಟನೆ ಕಾರ್ಯಕ್ರಮ ನಡೆದಿದೆ. ಎಲ್ಲಾ ಜಿಲ್ಲೆಗಳ ಮುಖಂಡರ ಜತೆ ಸಭೆ ನಡೆಸಿದ್ದೇವೆ. ಬಿಡದಿ ಕಾರ್ಯಾಗಾರದ ನಂತರ ಪಕ್ಷದ ಕಚೇರಿಯಲ್ಲಿ ಜನತಾ ಸಂಗಮ ನಡೆದಿದೆ. ಮುಖಂಡರು, ಪದಾಧಿಕಾರಿಗಳು ಹಾಗೂ ಮುಂಬರುವ ಚುನಾವಣೆ ಸಂಭವನೀಯ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದ್ದೇವೆ. ದೇವೇಗೌಡರ ಸಮ್ಮುಖದಲ್ಲಿ ಅವರಿಗೆಲ್ಲ ಗುರಿ ದಾರಿ ತೋರಿದ್ದೇವೆ” ಎಂದು ಅವರು ಹೇಳಿದರು.

ಸಿಂದಗಿ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಫಲಿತಾಂಶ ಸಿಗಲಿಲ್ಲ. ಆದರೂ ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ಕುಗ್ಗಿಲ್ಲ. ಎಲ್ಲ ಜಿಲ್ಲೆಗಳಿಂದ ಬಂದವರು ಸಂಘಟನಾತ್ಮಕವಾಗಿ ಹೆಚ್ಚು ಆಸಕ್ತಿ ವಹಿಸಿದ್ದರು. ಅವರ ಅನುಮಾನ, ಗೊಂದಲಗಳನ್ನು ಬಗೆಹರಿಸಿದ್ದೇವೆ. ಜನರ ಸಮೀಪ ಹೋಗಲು ಕೆಲ ಯೋಜನೆಗಳ ಅನುಷ್ಠಾನವೂ ಆಗಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ:

ಕೆಲ ಜಿಲ್ಲೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಅಲ್ಲಿನ ಹಲವು ಕೊರತೆಗಳ ಕಾರಣ ಸಂಘಟನೆಗೆ ಸ್ವಲ್ಪ ಸಮಯಾವಾಕಾಶ ಬೇಕಿದೆ. ಜತೆಗೆ, ಬೆಂಗಳೂರು ನಗರದ ಸಭೆ ನಿರೀಕ್ಷೆಗೂ‌ ಮೀರಿ ಯಶಸ್ವಿಯಾಗಿದೆ. ಮುಂದಿನ ಬಿಬಿಎಂಪಿ ಚುನಾವಣೆ ಹಾಗೂ 2023ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರು ಮಹಾನಗರಕ್ಕೆ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕೂಡ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದೇನೆ. ನಗರದ ಮೊತ್ತ ಮೊದಲ ಮೇಲ್ಸೇತುವೆ ಸಿರ್ಸಿ ವೃತ್ತದಿಂದ ಕಾರ್ಪೊರೇಷನ್ ವರೆಗಿನ ಮೇಲುಸೇತುವೆ ಗೌಡರು ಕೊಟ್ಟ ಕೊಡುಗೆ ಎಂದು ಅವರು ತಿಳಿಸಿದರು.

ಈಗಾಗಲೇ ರಾಜ್ಯಕ್ಕೆ ಪಂಚರತ್ನ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. 2023ಕ್ಕೆ ನಮ್ಮ ಪಕ್ಷದ ಸ್ವತಂತ್ರ ಸರಕಾರ ಬಂದರೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಕಾಲ ಮಿತಿಯಲ್ಲಿ ಅನುಷ್ಟಾನಕ್ಕೆ ತರುತ್ತೇವೆ ಎಂದು ಅವರು ತಿಳಿಸಿದರು.

Video-ಬಿಜೆಪಿಯವರು ಮೆಂಟಲ್ ಗಿರಾಕಿಗಳು, ಅವರಿಗೆ ನಾನ್ಯಾಕೆ ಉತ್ತರಿಸಲಿ; ಡಿ.ಕೆ. ಶಿವಕುಮಾರ್

ಬೆಂಗಳೂರು:ಬಿಜೆಪಿಯವರು ಮೆಂಟಲ್ ಗಿರಾಕಿಗಳು. ನಮ್ಮ ಪಕ್ಷದ ವಿಚಾರದಲ್ಲಿ ತಲೆ ಹಾಕಲು ಅವರು ಯಾರು? ಮೊದಲು ಅವರ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣ ಎತ್ತಿಹಾಕಿ, ಕ್ಲೀನ್ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೆ ಯಾಕೆ ಬೇಕು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಇದೆ ಎಂಬ ಬಿಜೆಪಿ ಟ್ವೀಟ್ ಬಗ್ಗೆ ಮಾಧ್ಯಮದವರು ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಅರ್ಧಕ್ಕೇ ಭಾಷಣ ಮುಗಿಸಿದರು, ನೀವೂ ಕೂಡ ಘೋಷಣೆ ಹಾಕುತ್ತಿದ್ದ ಕಾರ್ಯಕರ್ತರ ಮೇಲೆ ಗರಂ ಆದೀರಿ ಎಂದು ಮಾಧ್ಯಮದವರು ಪ್ರಸ್ತಾಪಿಸಿದಾಗ, ‘ಸಿದ್ದರಾಮಯ್ಯ ಅವರು ಪುನೀತ ನಮನ ಕಾರ್ಯಕ್ರಮಕ್ಕೆ 3 ಗಂಟೆಗೇ ಹೋಗಬೇಕಾಗಿದ್ದರಿಂದ ಚಿಕ್ಕದಾಗಿ ಬೇಗ ಭಾಷಣ ಮುಗಿಸಿದರು. ಅದನ್ನು ಮೊದಲೇ ಹೇಳಿದ್ದಾಗಿ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ. ಆಮೇಲೆ ನಾನು ಮಾತನಾಡಿದೆ. ಅವರು ಯಾರೋ ಬಿಜೆಪಿಯವರು ಏನೇನೋ ಮಾತಾಡ್ತಾರೆ ಅಂದ್ರೆ ಅದಕ್ಕೆಲ್ಲ ಉತ್ತರ ಕೊಡೋಕೆ ಹೋಗಲ್ಲ. ಏನಾದರೂ ಚೀಫ್ ಮಿನಿಸ್ಟರ್ ಮಾತಾಡಿದ್ರೆ ಹೇಳಿ ಉತ್ತರ ಕೊಡುತ್ತೇನೆ ಎಂದರು.

ಇನ್ನು ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಾರ್ಯಕರ್ತರ ಮೇಲೆ ನಿಗಾ ಇಡುವುದು, ಕಂಟ್ರೋಲ್ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಕೆಲವೊಮ್ಮೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಚಿಕ್ಕವರಿರಲಿ, ದೊಡ್ಡವರಿರಲಿ ಅವರನ್ನು ಸಂಭಾಳಿಸಬೇಕಾಗುತ್ತದೆ. ಕೆಲವೊಮ್ಮೆ ಕಟ್ಟುನಿಟ್ಟಾಗಿ ವರ್ತಿಸಬೇಕಾಗುತ್ತದೆ. ಕಠಿಣವಾಗಿ ಮಾತಾಡಬೇಕಾಗುತ್ತದೆ. ಆತ್ಮೀಯವಾಗಿ, ಪ್ರೀತಿಯಿಂದಲೂ ನೋಡಬೇಕಾಗುತ್ತದೆ. ಅವರು ನಮ್ಮ ಪಕ್ಷದವರು, ನಮ್ಮವರು, ನಮ್ಮ ಮನೆಯ ಮಕ್ಕಳು ಇದ್ದಂತೆ. ಬೈದರೂ ಪ್ರೀತಿಯಿಂದ ನೋಡುತ್ತಾರೆ. ಗದರಿದರೂ ಪ್ರೀತಿಸುತ್ತಾರೆ. ಅವರನ್ನು ಗದರುತ್ತೇನೆ, ಪ್ರೀತಿಸುತ್ತೇನೆ, ಸಂತೋಷದಿಂದ ನೋಡಿಕೊಳ್ಳುತ್ತೇನೆ. ಇದು ನಮ್ಮ ಮನೆಯ ವಿಷಯ. ಇದು ನನ್ನ ರೂಢಿಗತ ವರ್ತನೆ. ಅದನ್ನು ಹೊಸದಾಗಿ ಏನೂ ಬದಲಾವಣೆ ಮಾಡಲು ಆಗುವುದಿಲ್ಲ ಎಂದರು.

ಜಮೀರ್ ಅಹಮದ್ ಖಾನ್ ಅವರು ನಿನ್ನೆ ಕಾರ್ಯಕ್ರಮಕ್ಕೆ ಬಂದಿಲ್ಲ ಅಂತಾ ಇಷ್ಟೆಲ್ಲ ಪರಿಸ್ಥಿತಿ ನಿರ್ಮಾಣ ಆಯಿತಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಪಾಪ, ಅವರೆಲ್ಲೋ ದಿಲ್ಲಿಯಲ್ಲಿ ಇದ್ದರು. ಅವರ ಕೆಲಸ ಅವರು ಮಾಡುತ್ತಾ ಇದ್ದಾರೆ. ಎಲ್ಲರಿಗೂ ಫಾಲೋಯರ್ಸ್ ಇದ್ದಂತೆ ಅವರಿಗೂ ಇದ್ದಾರೆ. ಅದನ್ನು ಇದಕ್ಕೆ ತಳಕು ಹಾಕೋದು ಸರಿಯಲ್ಲ. ಬಿಜೆಪಿಯವರು ಏನೋ ಹೇಳ್ತಾರೆ ಅಂತಾ ನಾನ್ಯಾಕೆ ಉತ್ತರ ಕೊಡೋಕೆ ಹೋಗಲಿ. ಮೊದಲು ಅವರ ತಟ್ಟೇಲಿರೋ ಹೆಗ್ಗಣ ಕ್ಲೀನ್ ಮಾಡಿಕೊಳ್ಳಲಿ ಎಂದರು.

Video-ಬೆಂಗಳೂರು ಟೆಕ್ ಸಮ್ಮಿಟ್, ಮೇಧಾಶಕ್ತಿಯ ಸಮರ್ಥ ಬಳಕೆಗೆ ರಾಜ್ಯಕ್ಕೆ ಬನ್ನಿ: ಸಿಎಂ ಆಹ್ವಾನ

ಬೆಂಗಳೂರು, ನವೆಂಬರ್ 17: ಮನುಷ್ಯನ ಮೇಧಾಶಕ್ತಿಯ ಸಮರ್ಥ ಬಳಕೆಗೆ ಪೂರಕ ವಾತಾವರಣ ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯದಲ್ಲಿದೆ. ಆದ್ದರಿಂದ ರಾಜ್ಯದಲ್ಲಿ ನಾವಿನ್ಯತೆಯನ್ನು ಅನ್ವೇಷಿಸಿ, ಸಾಧನೆಯ ಉತ್ತುಂಗಕ್ಕೇರುವಂತೆ ತಂತ್ರಜ್ಞಾನ ಕ್ಷೇತ್ರದ ಭಾಗೀದಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಕ್ತವಾಗಿ ಕರೆ ನೀಡಿದರು.

ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಇಂದು ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ನಾಯಕರಿದ್ದಾರೆ. ಕಿರಣ್ ಮಜುಂದಾರ್ ಷಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಪ್ರತಿಭಾವಂತರಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯುಳ್ಳ 300 ಕ್ಕೂ ಹೆಚ್ಚು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಏರೋಸ್ಪೇಸ್, ರಕ್ಷಣಾ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ,ಸೆಮಿ ಕಂಡಕ್ಟರ್, ನವೀಕರಿಸಬಹುದಾದ ಇಂಧನ, ಐ.ಟಿ.ಬಿ.ಟಿ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಎಲ್ಲರಿಗೂ ತಂತ್ರಜ್ಞಾನ:

ಬೆಂಗಳೂರು ಟೆಕ್ ಸಮ್ಮಿಟ್ ಹಿಂದಿನಿಂದಲೂ ಯಶಸ್ವೀ ಸಮಾವೇಶವಾಗಿದ್ದು, ಈ ಬಾರಿಯ ಸಮಾವೇಶ ಇನ್ನಷ್ಟು ಫಲಪ್ರದವಾಗಬೇಕು. ತಂತ್ರಜ್ಞಾನದ ಕ್ಷೇತ್ರದ ಮುನ್ನಡೆಯಲ್ಲಿ, ತಂತ್ರಜ್ಞಾನವನ್ನು ಪ್ರತಿಯೊಬ್ಬರಿಗೂ ಹಾಗೂ ಸಂಪೂರ್ಣ ವ್ಯವಸ್ಥೆಗೆ ತಲುಪಿಸುವಲ್ಲಿ ಈ ಸಮಾವೇಶದಿಂದ ನಿಖರ ಹಾಗೂ ಜವಾಬ್ದಾರಿಯುತ ಕೊಡುಗೆ ದೊರೆಯುವುದು ಎಂಬ ಆಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಎಲ್ಲ ನಾವೀನ್ಯತೆದಾರರು ತಮ್ಮ ಬುದ್ಧಿಶಕ್ತಿಯನ್ನು ಪ್ರದರ್ಶಿಸಲು ಅಗತ್ಯವಿರುವ ವಾತಾವರಣವನ್ನು ಕರ್ನಾಟಕ ಹೊಂದಿದೆ. ವಲಯ ನಿರ್ದಿಷ್ಟ, ಪ್ರಗತಿಪರ ನೀತಿಗಳು, ವಿವಿಧ ಕ್ಷೇತ್ರಗಳ ಅಭ್ಯುದಯಕ್ಕೆ ದಾರ್ಶನಿಕ ತಂಡಗಳು, ವಿವಿಧ ಕ್ಷೇತ್ರಗಳ ನಾಯಕರ ಬೆಂಬಲ ಕರ್ನಾಟಕದಲ್ಲಿದೆ. ಇದರಿಂದಾಗಿ ಕರ್ನಾಟಕವು ಅತ್ಯಂತ ಶ್ರೀಮಂತ, ಉನ್ನತ ಚಿಂತನೆಯ ನಾಯಕತ್ವ, ಪ್ರತಿಭಾವಂತ ಮತ್ತು ಕುಶಲ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಬೊಮ್ಮಾಯಿ ಅವರು ತಿಳಿಸಿದರು.

ಯಶಸ್ಸು ಸಾಧನೆಯ ಭಾಗವಾಗಿದ್ದು, ದೇಶ ಹಾಗೂ ವಿಶ್ವದ ಏಳಿಗೆಗೆ ಹಾಗೂ ಅಂತಿಮವಾಗಿ ಮನುಕುಲದ ಒಳಿತಿಗೆ ಕಾರಣವಾಗಬಲ್ಲದು. ಎಲ್ಲ ದೇಶಗಳ ಪ್ರತಿನಿಧಿಗಳು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಹೂಡಿಕೆ ಮಾಡಿ, ಯಶಸ್ಸು ಗಳಿಸಿ ಸಾಧನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕವೇ ಭವಿಷ್ಯ:

ನಾವೀನ್ಯತೆ ಸರಸ್ವತಿಯಂತೆ. ಬೆಂಗಳೂರು ಸರಸ್ವತಿಯ ವಾಹನ ಹಂಸದಂತೆ. ಹಂಸ ಭಾರಿ ಗಾತ್ರ, ತೂಕದ ಪಕ್ಷಿಯಾಗಿದ್ದರೂ, ಅತಿ ಎತ್ತರಕ್ಕೆ ಏರಬಲ್ಲ ಪಕ್ಷಿಯಾಗಿದೆ. ಅಂತೆಯೇ ಬೆಂಗಳಳೂರು ನಾವಿನ್ಯತೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.
ಪ್ರಧಾನಮಂತ್ರಿಗಳ ಆತ್ಮನಿರ್ಭರ್ ಕಾರ್ಯಕ್ರಮವನ್ನು ಅಕ್ಷರಶಃ ನಿಜ ಮಾಡಲು ಕರ್ನಾಟಕ ಸಿದ್ಧವಾಗಿದೆ ಎಂದರು. ಪ್ರಧಾನಿಯವರು ಸದಾ ದೇಶದ ಭವಿಷ್ಯದ ಕುರಿತು ಚಿಂತನೆ ನಡೆಸುತ್ತಿದ್ದು, ನವಕರ್ನಾಟಕದಿಂದ ನವಭಾರತ ನಿರ್ಮಾಣ ನಮ್ಮ ಧ್ಯೇಯವಾಗಿದೆ ಎಂದರು.

ಮಾನವನ ಬುದ್ಧಿಶಕ್ತಿಯನ್ನು ಗುರುತಿಸಿ, ಗೌರವಿಸಿ:

ವಿಶ್ವ ನಾಗರಿಕತೆಯ ಪರಿಕಲ್ಪನೆ ಇಂದಿನ ಮಂತ್ರ. ಮನುಷ್ಯನ ವಿಕಾಸಗೊಂಡಂತೆ, ತಂತ್ರಜ್ಞಾನವೂ ವಿಕಾಸಗೊಂಡಿವೆ.ಮಾನವನ ಮೆದುಳಿನ ಶಕ್ತಿಯಿಂದ ಮನುಕುಲದ ಚರಿತ್ರೆಯಲ್ಲಿ ಅದ್ಭುತ ನಾವೀನ್ಯತೆಯನ್ನು ಸಾಧಿಸಲಾಗಿದೆ. ತಾಂತ್ರಿಕತೆಯಲ್ಲಿನ ನಾವೀನ್ಯತೆಗಳನ್ನು ಸಂಸ್ಥೆಗಳಿಗಿಂತಲೂ ಕೆಲವೇ ವ್ಯಕ್ತಿಗಳು ಹೆಚ್ಚಾಗಿ ಮಾಡಿದ್ದಾರೆ. ಆದ್ದರಿಂದ ಮಾನವನ ಬುದ್ಧಿಶಕ್ತಿಯನ್ನು ಗುರುತಿಸಿ, ಗೌರವಿಸಿ, ಸನ್ಮಾನಿಸಬೇಕು ಎಂದರು.
ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉದ್ಘಾಟಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ,ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐ.ಟಿ.ಬಿ.ಟಿ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಭಾಗವಹಿಸಿದ್ದರು.

ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗ ಆರಂಭ, ತಾಂತ್ರಿಕ ಬೆಳವಣಿಗೆಯಲ್ಲಿ ಕೃಷಿಗೆ ಒತ್ತು: ವೆಂಕಯ್ಯನಾಯ್ಡು ಕರೆ

ಬೆಂಗಳೂರು: ಆಧುನಿಕ ತಂತ್ರಜ್ಞಾನ, ನಾವೀನ್ಯತೆ , ಸಂಶೋಧನೆ ಮತ್ತು ಜ್ಞಾನದ ಬೆಳವಣಿಗೆಗಳು ದೇಶದ ಕೃಷಿ ಸ್ಥಿತಿಯ ಸುಧಾರಣೆಗೂ‌ ಹೆಚ್ಚು ಒತ್ತು ಕೊಟ್ಟು ಮುನ್ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

‘ಭವಿಷ್ಯವನ್ನು ಮುನ್ನಡೆಸು’ (ಡ್ರೈವಿಂಗ್ ದ ನೆಕ್ಸ್ಟ್) ಘೋಷವಾಕ್ಯದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, `ಐ.ಟಿ. ಮತ್ತು ಬಿ.ಟಿ.ಯೊಂದಿಗೆ ಎಲ್ಲರೂ ಕರ್ತವ್ಯಪ್ರಜ್ಞೆಯನ್ನು (ಡ್ಯೂಟಿ) ಮೈಗೂಡಿಸಿಕೊಂಡಾಗ ದೇಶವು ಶಕ್ತಿಶಾಲಿಯಾಗಿ (ಮೈಟಿ) ಹೊರಹೊಮ್ಮುತ್ತದೆ. ಕೃಷಿಯು ದೇಶದ ಪ್ರಧಾನ ಕಸುಬಾಗಿರುವುದರಿಂದ ತಾಂತ್ರಿಕತೆಯು ಅದಕ್ಕೆ ಪೂರಕವಾಗಿರಬೇಕು’ ಎಂದರು.

ಜಗತ್ತು ಈಗ ಜ್ಞಾನಾಧಾರಿತವಾಗಿ ರೂಪುಗೊಳ್ಳುತ್ತಿದ್ದು, ಕೋವಿಡ್ ನಂತರ ಡಿಜಿಟಲೀಕರಣಗೊಳ್ಳುತ್ತಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನೀತಿಗಳು ಎಷ್ಟೇ ಚೆನ್ನಾಗಿದ್ದರೂ ಅಂತಿಮವಾಗಿ ತಂತ್ರಜ್ಞಾನದ ಲಾಭಗಳನ್ನು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ತಲುಪಿಸಬೇಕಾದ್ದು ಮುಖ್ಯ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಇದನ್ನು ಸಾಧಿಸಿಕೊಂಡು ಬಂದಿದೆ. ತಂತ್ರಜ್ಞಾನದ ಮೂಲಕ ಇಡೀ ವ್ಯವಸ್ಥೆಯನ್ನು ಪರಿವರ್ತಿಸಬೇಕೆಂಬುದೇ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯೂ ಆಗಿದೆ ಎಂದರು.

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯದ ಪಾತ್ರ ಬಹುಮುಖ್ಯ. ಇದಕ್ಕೆ ಪೂರಕವಾಗಿ ಪ್ರಧಾನಿಯವರು `ಸುಧಾರಣೆ-ಸಾಧನೆ-ಪರಿವರ್ತನೆ’ ಎಂಬುದನ್ನೇ ಮಂತ್ರವಾಗಿಸಿಕೊಂಡು ನೀತಿಗಳನ್ನು ರೂಪಿಸುತ್ತಿದ್ದಾರೆ. ಜಗತ್ತಿನ ವಿಖ್ಯಾತ ಉದ್ದಿಮೆಗಳಲ್ಲೆಲ್ಲ ಭಾರತೀಯರು ನಾಯಕತ್ವ ವಹಿಸಿಕೊಂಡಿರುವುದು ಭಾರತೀಯರಾದ ನಮ್ಮ ಬೌದ್ಧಿಕ ಪ್ರಗತಿಯನ್ನು ದೃಢಪಡಿಸುತ್ತದೆ ಎಂದು ನಾಯ್ಡು ನುಡಿದರು.

ನಿರ್ದಿಷ್ಟವಾಗಿ ಬೆಂಗಳೂರು ಮತ್ತು ಒಟ್ಟಾರೆ ಭಾರತ ದೇಶವು ಅತ್ಯಂತ ಕ್ರಿಯಾಶೀಲವಾಗಿವೆ. ಇದಕ್ಕೆ ತಕ್ಕಂತೆ ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಸಾರವಾದ `ಹಂಚಿಕೊಳ್ಳುವಿಕೆ ಮತ್ತು ಇನ್ನೊಬ್ಬರ ಬಗ್ಗೆ ಗಮನ ಹರಿಸುವಿಕೆ (ಕಾಳಜಿ)’ ಎರಡನ್ನೂ ನಾವು ತಂತ್ರಜ್ಞಾನದ ಧಾರೆಗಳ ಮೂಲಕ ಮುಂದುವರಿಸಿಕೊಂಡು ಹೋಗಬೇಕು. ತಾಂತ್ರಿಕತೆ ಹಾಗೂ ನಾವೀನ್ಯತೆಯು ಅಂತಿಮ ಸಮಾಜದಲ್ಲಿ ಸಂತೋಷವನ್ನುಂಟು ಮಾಡುವ ಉದ್ದೇಶ ಹೊಂದಿರಬೇಕು ಎಂದರು.

ರಾಜ್ಯಕ್ಕೆ ಮುಕ್ತ ಸ್ವಾಗತ: ಬೊಮ್ಮಾಯಿ

ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ಬೆಂಗಳೂರು ಮತ್ತು ಒಟ್ಟಾರೆಯಾಗಿ ರಾಜ್ಯದಲ್ಲಿ ಮನುಷ್ಯನ ಪ್ರತಿಭೆಯ ವಿಕಸನಕ್ಕೆ ತಕ್ಕ ವಾತಾವರಣವಿದ್ದು, ಉದ್ಯಮಗಳ ಬೆಳವಣಿಗೆಗೆ ಪೂರಕವಾದ ರಚನಾತ್ಮಕ ನೀತಿಗಳಿವೆ. ಪ್ರತಿಯೊಂದು ಉದ್ಯಮವನ್ನೂ ರಾಜ್ಯವು ಮುಕ್ತವಾಗಿ ಸ್ವಾಗತಿಸಲಾಗುವುದು’ ಎಂದರು.

ರಾಜ್ಯವು ಐಟಿ-ಬಿಟಿ ತಂತ್ರಜ್ಞಾನ, ಬಾಹ್ಯಾಕಾಶ, ವೈಮಾಂತರಿಕ್ಷ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಹೀಗೆ ಎಲ್ಲದರಲ್ಲೂ ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯಲ್ಲೂ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ರಾಜ್ಯವು ತಂತ್ರಜ್ಞಾನದ ಭವಿಷ್ಯದ ಬೆಳವಣಿಗೆಗೆ ಪ್ರಶಸ್ತ ತಾಣವಾಗಿದೆ ಎಂದು ವಿವರಿಸಿದರು.

ಹೊಸ ಕರ್ನಾಟಕದಿಂದ ಹೊಸ ಭಾರತವನ್ನು ಕಟ್ಟಬಹುದು. ಪ್ರಧಾನಿ ನೀಡಿರುವ ‘ಆತ್ಮನಿರ್ಭರ ಭಾರತ’ ನಿರ್ಮಾಣದ ಕನಸು ನನಸಾಗಬೇಕು. ಮೇಕ್ ಇನ್ ಕರ್ನಾಟಕ’ದ ಮೂಲಕ ನಾವು `ಮೇಕ್ ಇನ್ ಇಂಡಿಯಾ’ವನ್ನು ಸಾಕಾರಗೊಳಿಸಬೇಕು. ಯಶಸ್ಸು ಎಂಬುದು ಸಾಧನೆಯ ಒಂದಂಶ ಮಾತ್ರ. ಹೀಗಾಗಿ ಯಶಸ್ಸಿಗಿಂತ ಸಾಧನೆ ಮುಖ್ಯವಾಗಿದ್ದು, ತಂತ್ರಜ್ಞಾನ ವಲಯದಲ್ಲಿರುವವರು ಸಾಧನೆಯನ್ನೇ ಗುರಿಯಾಗಿಸಿಕೊಳ್ಳಬೇಕು. ತಂತ್ರಜ್ಞಾನವು ಕೊನೆಗೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ತಂತ್ರಜ್ಞಾನದ ತೊಟ್ಟಿಲು: ಅಶ್ವತ್ಥನಾರಾಯಣ

ಸ್ವಾಗತ ಭಾಷಣ ಮಾಡಿದ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, `ಕೋವಿಡ್ ಪಿಡುಗಿನ ನಂತರ ಅಭಿವೃದ್ಧಿಯ ಮಾನದಂಡಗಳು ಬದಲಾಗಿದ್ದು, ರಾಜ್ಯವು ಈ ಪರಿಸ್ಥಿತಿಯನ್ನು ತಂತ್ರಜ್ಞಾನದ ಬಲದಿಂದ ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿದೆ’ ಎಂದರು.

ಉದ್ದಿಮೆಗಳ ಬೆಳವಣಿಗೆಗೆ ಸರಕಾರವು ಹಲವು ಅನುಕೂಲಕರ ನೀತಿಗಳನ್ನು ರೂಪಿಸಿದೆ. ಇದರಿಂದಾಗಿ ಐಟಿ, ಬಿಟಿ, ಯೂನಿಕಾರ್ನ್ ಉದ್ದಿಮೆಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವೋದ್ಯಮಗಳ ಸ್ಥಾಪನೆಯಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿದೆ. ನೀತಿ ಆಯೋಗದ ಸಮೀಕ್ಷೆಯಲ್ಲಿ ರಾಜ್ಯವು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಐಟಿ ರಫ್ತಿನಲ್ಲಿ ಕರ್ನಾಟಕವು ದೇಶದ ಶೇ.40ರಷ್ಟು ಕೊಡುಗೆಯ ಸಿಂಹಪಾಲನ್ನು ನೀಡುತ್ತಿದೆ ಎಂಬುದರ ಬಗ್ಗೆ ಗಮನಸೆಳೆದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್ ಗಳ ಮುಖ್ಯಸ್ಥರಾದ ಕ್ರಮವಾಗಿ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂದಾರ್ ಷಾ ಮತ್ತು ಪ್ರಶಾಂತ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಉಳಿದಂತೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಕಿಂಡ್ರೆಲ್ ಕಂಪನಿಯ ಸಿಇಓ ಮಾರ್ಟಿನ್ ಶ್ರೋಟರ್ ಶೃಂಗವನ್ನು ಉದ್ದೇಶಿಸಿ ವರ್ಚುಯಲ್ ಮೂಲಕ ಮಾತನಾಡಿದರು.

‘ಬಿಟಿಎಸ್ ಶೃಂಗದಲ್ಲಿ ನೆರೆದಿರುವವರನ್ನು ನೋಡಿದರೆ ನನಗೆ ಗಗನನೌಕೆಯಲ್ಲಿ ಕುಳಿತು ಭವಿಷ್ಯ ಯಾನ ಮಾಡುತ್ತಿದ್ದೇನೆ ಅನ್ನಿಸುತ್ತಿದೆ. ಕರ್ನಾಟಕವು ಜ್ಞಾನದ ಅಧಿದೇವತೆಯಾದ ಸರಸ್ವತಿಯ ನೆಲೆವೀಡು. ಸರಸ್ವತಿಯನ್ನು ಹೊತ್ತಿರುವ ಹಂಸಪಕ್ಷಿಗಳು ಮಾನಸ ಸರೋವರದ ಎತ್ತರವನ್ನು ತಲುಪಬೇಕು. ಇದು ಉದ್ಯಮಿಗಳ ಗುರಿಯಾಗಬೇಕು’.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

ಐಟಿ, ಬಿಟಿಗಳ ಜೊತೆಗೆ ನಮ್ಮ ಡ್ಯೂಟಿ ಸೇರಿಕೊಳ್ಳಬೇಕು ಆಗ ನಾವೆಲ್ಲರೂ ಮೈಟಿ (ಶಕ್ತಿಶಾಲಿ) ಆಗಬಹುದು.
-ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ.

ರಾಜ್ಯವು ಮುಂಬರುವ ದಿನಗಳಲ್ಲಿ ಬಯೋಎಕಾನಮಿಯಲ್ಲೂ ದೇಶಕ್ಕೆ ಅಗ್ರ ಸ್ಥಾನವನ್ನು ಅಲಂಕರಿಸಲಿದೆ. ಜೀವವಿಜ್ಞಾನವನ್ನು ಉತ್ತೇಜಿಸಲು ಸದ್ಯದಲ್ಲೇ ಎಲಿಕ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಸಚಿವ

ಇಸ್ರೇಲ್‌ ನ ಪ್ರಾಯೋಗಿಕತೆ ಹಾಗೂ ಭಾರತದ ಕಲ್ಪನೆ ಎರಡೂ ಸೇರಿದರೆ ನಾವೀನ್ಯತೆಯಲ್ಲಿ ಕ್ರಾಂತಿ ಉಂಟುಮಾಡಬಹುದು. ಎರಡೂ ದೇಶಗಳು ಸೇರಿಕೊಂಡು ಜಗತ್ತಿನ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಆಧರಿಸಿ ಪರಿಹಾರ ಕಂಡುಹಿಡಿಯಲು ಸಾಧ್ಯವಿದೆ. ಯಾರು ನಾವೀನ್ಯತೆಗೆ ತೆರೆದುಕೊಳ್ಳುತ್ತಾರೋ ಅವರದೇ ಮುಂದಿನ ಭವಿಷ್ಯ.
-ನಫ್ತಾಲಿ ಬೆನೆಟ್, ಇಸ್ರೇಲ್ ಪ್ರಧಾನಿ.

ಬೆಂಗಳೂರು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ನೆಲೆಯಾಗಿದೆ. ಇಲ್ಲಿ ನಾವು ನಮ್ಮ ಕಾನ್ಸುಲೇಟ್ ಕಚೇರಿ ತೆರೆಯಲಿದ್ದೇವೆ.
-ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾ ಪ್ರಧಾನಿ.

ಭಾರತದಲ್ಲೆ ನಡೆಯುತ್ತಿರುವ ತಾಂತ್ರಿಕ ಆವಿಷ್ಕಾರಗಳು ಇಡೀ ಜಗತ್ತಿನ ಉದ್ದಿಮೆಗಳನ್ನು ಬದಲಿಸುತ್ತಿವೆ. ನಾವು ಕರ್ನಾಟಕದೊಂದಿಗೆ ಬ್ಯಾಂಕಿಂಗ್ ಮತ್ತು ಟೆಲಿಕಾಂ ವಲಯಗಳಲ್ಲಿ ಸಹಕರಿಸಲು ಉತ್ಸುಕರಾಗಿದ್ದೇವೆ.
-ಮಾರ್ಟಿನ್ ಶ್ರೋಟರ್, ಸಿಇಒ, ಅಮೆರಿಕದ ಕಿಂಡ್ರೆಲ್ ಕಂಪನಿ

ಸಂತಾಪ:

ಕನ್ನಡದಲ್ಲಿ ಭಾಷಣ, ಪುನೀತ್ ನಿಧನಕ್ಕೆ ಸಂತಾಪ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕನ್ನಡದಲ್ಲೇ ಸರಾಗವಾಗಿ ತಮ್ಮ ಭಾಷಣ ಆರಂಭಿಸಿ, ಕೆಲಸಾಲುಗಳನ್ನು ಮಾತನಾಡಿ ಗಮನ ಸೆಳೆದರು. ಬಳಿಕ ಅವರು, ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಸಮಾಜಮುಖಿ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

Video-ಪುನೀತ್ ರಾಜಕುಮಾರ್ ಹೆಸರಲ್ಲಿ ಕಲಾವಿದರ ತರಬೇತಿ ಕೇಂದ್ರ ಸ್ಥಾಪಿಸಲು ಸಿಎಂಗೆ ಡಿ.ಕೆ. ಶಿವಕುಮಾರ್ ಆಗ್ರಹ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹೊಸ ಕಲಾವಿದರ ತರಬೇತಿ ಸಂಸ್ಥೆ ಆರಂಭಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ. ಅದೇ ರೀತಿ ಅವರು ಹೊಸ ಕಲಾವಿದರಿಗಾಗಿ ತರಬೇತಿ ಸಂಸ್ಥೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ಹಿಂದೆ ಬಂಗಾರಪ್ಪನವರ ಸರಕಾರವಿದ್ದಾಗ ಕರ್ನಾಟಕದಲ್ಲಿ ಮೊದಲ ಬಾರಿ ಡಾ. ರಾಜಕುಮಾರ್ ಅವರಿಗೆ ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ನಾನು ಆಗ ಬಂಗಾರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಆ ಪ್ರಶಸ್ತಿ ಪ್ರಕಟಣೆಯ ಭಾಗವಾಗಿದ್ದೆ. ನಾನು ಆಗಾಗ ಹೇಳುತ್ತಿರುತ್ತೇನೆ. ಹುಟ್ಟು ಆಕಸ್ಮಿಕ, ಸಾವು ಖಚಿತ. ಈ ಹುಟ್ಟು ಸಾವಿನ ನಡುವೆ ಮನುಷ್ಯ ಏನು ಸಾಧನೆ ಮಾಡಿದ ಎಂಬುದು ಮುಖ್ಯವಾಗುತ್ತದೆ. ನಮ್ಮ ಪುನೀತ್ ಅವರು ಆ ಸಾಧನೆಯ ಮೂಲಕ ಈಗ ಮನೆ ಮಾತಾಗಿದ್ದಾರೆ ಎಂದರು.

ಈಗ ತಾನೇ ಹಾಡಿನ ಮೂಲಕ ಪುನೀತ್ ಅವರಿಗೆ ನಮನ ಸಲ್ಲಿಸಿದ ಮೈಸೂರಿನ ಶಕ್ತಿಧಾಮದ ಮಕ್ಕಳು ಪುನೀತ್ ಅವರ ಸಾಧನೆ ಮತ್ತು ರಾಜಕುಮಾರ್ ಕುಟುಂಬದ ಸಾಮಾಜಿಕ ಕಳಕಳಿಗೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ರಾಜಕುಮಾರ್ ಅವರ ಕುಟುಂಬ ಸಾಮಾಜಿಕ ಬದ್ಧತೆಗೆ ಹೆಸರುವಾಸಿ. ರಾಜಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲೇ ಪುನೀತ್ ಅವರು ನಡೆದರು. ಅವರು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿ. ಪುನೀತ್ ಅವರ ಸಾವಿನ ಸುದ್ದಿ ಬಂದಾಗ ನನಗೆ ನಂಬಲು ಆಗಲಿಲ್ಲ. ಪುನೀತ್ ಅವರ ಜಿಮ್ ತರಬೇತಿದಾರನೇ ನನಗೂ ತರಬೇತಿದಾರ. ಅವರೇ ಪುನೀತ್ ಅವರಿಗೆ ಏನೋ ಹೆಚ್ಚುಕಮ್ಮಿಯಾಗಿದೆ ಎಂದು ತಿಳಿಸಿ, ಅವಸರದಿಂದ ಹೊರಟ. ನಂತರ ಪುನೀತ್ ಇನ್ನಿಲ್ಲ ಎಂಬ ಸುದ್ದಿ ಖಚಿತವಾಯಿತು. ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಪುನೀತ್ ಅವರು ಇನ್ನಿಲ್ಲ ಎಂಬುದನ್ನು ಇಡೀ ನಾಡಿಗೇ ಅರಗಿಸಿಕೊಳ್ಳಲು ಆಗಿಲ್ಲ. ಇನ್ನೂ ಅವರ ಕುಟುಂಬದವರಿಗೆ, ಪತ್ನಿ ಅಶ್ವಿನಿ ಅವರಿಗೆ, ಅವರ ಮಕ್ಕಳಿಗೆ ಹೇಗಾಗಿರಬೇಡ. ಭಗವಂತ ಅವರಿಗೆ ನೋವು ಭರಿಸುವ ಶಕ್ತಿ ನೀಡಲಿ.ನನಗೂ ಚಲನಚಿತ್ರರಂಗಕ್ಕೂ ಮೊದಲಿಂದಲೂ ನಂಟು. ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರು ನನ್ನನ್ನೂ ಈ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು.

Video-ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ : ಸಿಎಂ ಘೋಷಣೆ

ಬೆಂಗಳೂರು, ನವೆಂಬರ್ 16 : ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

ಅವರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಕೆ ಮಾಡುತ್ತಿರುವ ಗಣ್ಯರು

ಪುನೀತ್ ರಾಜ್‌ಕುಮಾರ್‌ರವರಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ಘೋಷಣೆ ಮಾಡಿದ ಮುಖ್ಯಮಂತ್ರಿಗಳು, ವಿವಿಧ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.ಯುವರತ್ನ ಪುನೀತ್‌ರ ನೆನಪನ್ನು ಚಿರಸ್ಥಾಯಿಯಾಗಿಸಲು ಪುನೀತ್ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಚಿಕ್ಕವಯಸ್ಸಿನಲ್ಲಿಯೇ ಸಾಧನೆಯ ಶಿಖರ ಏರಿದ ಪುನೀತ್:

ಅಪ್ಪು ನನಗೆ ಆತ್ಮೀಯ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ, ಕರ್ನಾಟಕ ಇತಿಹಾಸದಲ್ಲಿ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕಮೇವ ನಟ. ತಂದೆಯೊಂದಿಗೆ ನಟಿಸುವಾಗ ತಂದೆ ಮಗನ ಸಂಬಂಧ ಮೀರಿ ಅಪ್ಪು ಪಾತ್ರದಲ್ಲಿ ಲೀನವಾಗುತ್ತಿದ್ದ ಪರಿ ಅದ್ಭುತವಾದುದು. ತಮ್ಮ ನಟನೆಯಿಂದ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಣೆ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್‌ರ ವಿನಯಭರಿತ ನಡೆ, ನುಡಿಯಲ್ಲಿ ಡಾ|| ರಾಜ್‌ರವರನ್ನು ಕಾಣಬಹುದು. ‘ಶರಣರನ್ನು ಮರಣದಲ್ಲಿ ನೋಡು’ ಎನ್ನುವಂತೆ ಪುನೀತ್‌ರ ಅಗಲಿಕೆಗೆ ಅಭಿಮಾನಿಗಳು ಸ್ಪಂದಿಸಿದ ರೀತಿ ಪುನೀತ್‌ರ ಮೇರು ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ದೇಶಕ್ಕೆ ಅಗಾಧವಾದ ಚಾರಿತ್ರಿಕ ಹಿನ್ನೆಲೆ ಇದೆ. ಚಾರಿತ್ರ್ಯ ಇರುವವರು ಕಡಿಮೆ. ಅಪ್ಪು ಚಾರಿತ್ರ್ಯವಂತನಾಗಿ ಚರಿತ್ರೆಗೆ ಸೇರಿದ್ದಾರೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

ಅಂತಿಮ ದರ್ಶನದ ಸಂದರ್ಭದಲ್ಲಿ ತಾವು ಅಪ್ಪುವಿಗೆ ಮುತ್ತು ನೀಡಿದ ಕುರಿತು ಹಲವಾರು ಜನ ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಆ ಮುತ್ತನ್ನು ನಾನು ಹೃದಯದಿಂದ ನೀದಿದ್ದೇನೆ. ಮುತ್ತುರಾಜನ ಮುತ್ತಿಗೆ ನಾನು ರಾಜ್ಯದ ಆರೂವರೆ ಕೋಟಿ ಜನರ ಪರವಾಗಿ ಮುತ್ತು ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್‌ನ ಅಂತ್ಯಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಸಹಕರಿಸಿದ ರಾಜ್‌ಕುಟುಂಬ, ಅಭಿಮಾನಿಗಳು ಹಾಗೂ ಸರ್ಕಾರದ ಇಲಾಖೆಗಳಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.