ಯಡಿಯೂರಪ್ಪ ರಾಜಿನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿ ಮಾಡಲಿ:ಸಿದ್ದರಾಮಯ್ಯ

ಮಂಗಳೂರು : ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಯಡಿಯೂರಪ್ಪ ರಾಜಿನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿ ಮಾಡಲಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸವಾಲು ಹಾಕುವೆ ಎಂದಿದ್ದಾರೆ.ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ದಲಿತರನ್ನು ಸಿಎಂ ಮಾಡುವ ಅವಕಾಶ ಈಗ ಬಿಜೆಪಿಗೆ ಬಂದಿದೆ ಎಂದರು.

ಸಿದ್ದರಾಮಯ್ಯ ದಲಿತರನ್ನ ಸಿಎಂ ಮಾಡಲಿ ಅಂತ ಕಟೀಲ್ ಅವರು ನನಗೆ ಹೇಳಿದ್ದರು.ನಮ್ಮಲ್ಲಿ ದಲಿತರು ಸಿಎಂ ಆಗಿದ್ದಾರೆ.‌ ಹೀಗಾಗಿ ಸದ್ಯ ಅವರಿಗೆ ಆ ಅವಕಾಶ ಇದೆ, ಕಟೀಲ್ ದಲಿತರನ್ನ ಸಿಎಂ ಮಾಡಲಿ.ಯಡಿಯೂರಪ್ಪರನ್ನ ಹೇಗಿದ್ದರೂ ತೆಗೀತಾರೆ, ಈಗ ದಲಿತರನ್ನ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಿ. ದಲಿತರ ಬಗ್ಗೆ ಕಟೀಲ್ ಗೆ ಪ್ರೀತಿ ಇದೆ ಅಲ್ವಾ, ಹಾಗಾದ್ರೆ ಸಿಎಂ ಮಾಡಲಿ ಎಂದ್ರು.

ಸಾಮಾಜಿಕ ನ್ಯಾಯ ಇದೆ ಅಂತ ಹೇಳ್ತಾರೆ, ಹೀಗಾಗಿ ತಕ್ಷಣ ಬಿಜೆಪಿಯವರು ದಲಿತರನ್ನ ಸಿಎಂ ಮಾಡಲಿ.ಜನಗಳ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೂ ಸಾದ್ಯವಿಲ್ಲ2019ರಲ್ಲಿ ಬಂದ ಪ್ರವಾಹದಿಂದ ಸಂತ್ರಸ್ತರಾದವರಿಗೇ ಇನ್ನೂ ಯಡಿಯೂರಪ್ಪ ಪರಿಹಾರ ಕೊಟ್ಟಿಲ್ಲ.ಈಗ ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರು ಕೊಚ್ಚಿ ಹೋಗಿವೆ. ಮನೆಗಳು ಬಿದ್ದಿವೆಈಗ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಬದಲು ಸಿಎಂ ಬದಲಾವಣೆ ಮಾಡುವ ಪ್ರಯತ್ನದಲ್ಲಿ ಇದ್ದಾರೆ.ಈಗ ಯಡಿಯೂರಪ್ಪರನ್ನ ಚೇಂಜ್ ಮಾಡ್ತಾರೆ, ಆದ್ರೆ ಮುಂದೆ ಸಿಎಂ ಆಗುವವರೂ ಭ್ರಷ್ಟರೇ ಆಗಿರುತ್ತಾರೆ ಎಂದ್ರು.

ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು.‌ ಇಲ್ಲಿ ಜನಾಭಿಪ್ರಾಯ ಬಹಳ ಮುಖ್ಯ, ಪಕ್ಷದ ಒಳಗಿನ ವಿಚಾರಕ್ಕೆ ಯಾರೂ ಕೈ ಹಾಕಬಾರದು.ಫೋನ್ ಕದ್ದಾಲಿಕೆಯಿಂದ ಸಮ್ಮಿಶ್ರ ಸರ್ಕಾರ ಪತನ ಆರೋಪ ವಿಚಾರ, ಫೋನ್ ಕದ್ದಾಲಿಕೆ ಇದೇ ಮೊದಲಲ್ಲ, ಬಿಜೆಪಿ ಇದಕ್ಕೂ ಮೊದಲು ಮಾಡಿದೆ.2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ.‌ ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ.ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಮಾಡಿದ್ದಾರೆ ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಗೆ ಆಗ್ರಹಿಸುತ್ತೇನೆ ಎಂದ್ರು.

ಇದೊಂದು ಪ್ರಜಾಪ್ರಭುತ್ವದ ಕೊಲೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳದ್ದೇ ಫೋನ್ ಕದ್ದಾಲಿಸೋದು ದೇಶದ್ರೋಹದ ಕೆಲಸ.ಇವರಿಗೆ ಸರ್ಕಾರ ಮಾಡೋಕೆ ಯೋಗ್ಯತೆ ಇಲ್ಲ, ನಾಲಾಯಕ್ ಗಳು ಇವರು.ವಲಸಿಗ ಸಚಿವರನ್ನ ಮತ್ತೆ ಕಾಂಗ್ರೆಸ್ ಗೆ ಪಡೆದುಕೊಳ್ಳೋ ವಿಚಾರ, ಅವರು ನಮ್ಮ‌ಪಕ್ಷಕ್ಕೆ ಬರ್ತಾರೆ ಅನ್ನೋದು ನನಗಂತೂ ಗೊತ್ತಿಲ್ಲ. ಪಕ್ಕಕ್ಕೆ ಅವರನ್ನ ವಾಪಾಸ್ ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲೇ ಹೇಳಿದ್ದೇನೆ. ಅದಕ್ಕೆ ಈಗಲೂ ಬದ್ಧ.ಎಲ್ಲರೂ ಒಟ್ಟಾಗಿ ಭ್ರಷ್ಡ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ.ನಾನು ತಿಂಗಳ ಹಿಂದೆಯೇ ಯಡಿಯೂರಪ್ಪ ಬದಲಾಗ್ತಾರೆ ಅಂದಿದ್ದೆ.ನನಗೆ ಹೈಕಮಾಂಡ್ ಮೂಲದ ಮಾಹಿತಿ ಇತ್ತು, ಆದ್ರೆ ಯಾರು ಹೊಸದಾಗಿ ಸಿಎಂ ಆಗಲಿದ್ದಾರೆ ಅನ್ನೋ ಮಾಹಿತಿಯಿಲ್ಲ‌ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Video-ಅಧಿಕಾರ ಯಾರಿಗೂ ಶಾಶ್ವತವಲ್ಲ; ಯೋಗೀಶ್ವರ್

ಚಿಕ್ಕಬಳ್ಳಾಪುರ: ಅಧಿಕಾರ ಯಾರಿಗೂ ಶಾಶ್ವತವಲ್ಲ, ಮುಖ್ಯಮಂತ್ರಿ ಸ್ಥಾನ,ಮಂತ್ರಿ ಸ್ಥಾನವೂ ಯಾರಿಗೂ ಶಾಶ್ವತವಲ್ಲ ಎಂದು ಸಚಿವ ಸಿ.ಪಿ ಯೋಗೀಶ್ವರ್ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಂದಿಬೆಟ್ಟದಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಮುಖ್ಯ ಮಂತ್ರಿಗಳ ಬದಲಾವಣೆಗೆ ಸಂಭಂದಿಸಿದಂತೆ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿಕೆ ನೀಡುತ್ತಿದ್ದಾರೆ.ನಿನ್ನೆ ಹಾಗೂ ಮೊನ್ನೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ .ಯಡಿಯೂರಪ್ಪ ಅವರು ಹಿರಿಯರಿದ್ದಾ .ಈ ನಿಟ್ಟಿನಲ್ಲಿ ನನಗೆ ಹೆಚ್ಚಿನ ಮಾಹಿತಿಯಿಲ್ಲ.ಮುಖ್ಯ ಮಂತ್ರಿಗಳೇ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟಪಡಿಸುತ್ತಿದ್ದಾರೆ.ನಾನು ಗಮನಿಸುತ್ತೇದ್ದೇನೆ ಎಂದರು .

ನನ್ನ ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಾಗೂ ನನಗೆ ಇತರ ಪಕ್ಷಗಳು ನೀಡಿರುವ ತೊಂದರೆ ಬಗ್ಗೆ ಮಾತನಾಡಿದ್ದೇನೆ .ನಮ್ಮ ವರಿಷ್ಠರು ಹಾಗೂ ಹಿರಿಯರು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ . ನಾಯಕತ್ವ ಬದಲಾವಣೆ ಆದ ಮೇಲೆ ಕಾಂಗ್ರೆಸ್ ನಿಂದ ಬಂದಿರುವ ಹತ್ತಕ್ಕೂ ಹೆಚ್ಚು ಶಾಸಕರಿಗೆ ಹೊಸ ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನ ಕೊಡುವುದಿಲ್ಲ ಎಂಬ ಮಾಹಿತಿಯಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ ಊಹಾಪೋಹಗಳಿಗೆ ಉತ್ತರ ನೀಡುವ ಹಕ್ಕು ನನಗಿಲ್ಲ .ಯಾರಿಗೂ ಮಂತ್ರಿ ಸ್ಥಾನ ಶಾಶ್ವತವಲ್ಲ ಎಂದು ಸಚಿವ ಯೋಗೇಶ್ವರ್ ಇದೇ ವೇಳೆ ಮಾರ್ಮಿಕವಾಗಿ ನುಡಿದರು.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನನ್ನ ರಾಜಕೀಯ ವಿರೋಧಿ ಅವರ ನಿಲುವಿನಲ್ಲಿ ಸದಾ ದ್ವಂದ್ವ ಇರುತ್ತದೆ.ಬೆಳಿಗ್ಗೆ ಮುಖ್ಯಮಂತ್ರಿಗಳ ಮನೆಗೆ ಹೋಗಿ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ನಂತರ ಮುಖ್ಯಮಂತ್ರಿಗಳನ್ನೇ ದೂರುತ್ತಾರೆ ಹೀಗಾಗಿ ಕುಮಾರಸ್ವಾಮಿಯವರನ್ನು ದೂರ ಇಡಿ ಅವರನ್ನು ನಂಬಬೇಡಿ ಅವರನ್ನು ಹತ್ತಿರ ಇಟ್ಟುಕೊಳ್ಳಬೇಡಿ ಎಂದು ನಾನು ಹೇಳಿದ್ದೇನೆ ಹಾಗೂ ಪಕ್ಷವೂ ಹೇಳಿದೆ ಎಂದ್ರು.

ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲ ಕೆಲಸ ಮಾಡಿಸಿಕೊಂಡು ಮತ್ತೆ ಅವರನ್ನೇ ಟೀಕಿಸುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಯೋಗೇಶ್ವರ್ ರಾಜ್ಯದಲ್ಲಿ ಇನ್ನು ಮುಂದೆ ಒಂದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಲೋಕಸಭಾ ಸದಸ್ಯ ಡಿಕೆ ಸುರೇಶ್ ನಿಮ್ಮನ್ನ
ಸಿಡಿ ಯೋಗೇಶ್ವರ್ ಎಂದು ಕರೆದಿದ್ದಾರೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಸುರೇಶ್ ಅವರಿಗೆ ನಾನು ಸಹ ಕೆಡಿ ಸುರೇಶ್ ಎಂದು ಕರೆಯಬಹುದು .
ಈ ತರಹದ ವಿರೋಧ ನಾನು ಎದುರಿಸುತ್ತೇನೆ . ನನಗೆ ಕಪ್ಪುಚುಕ್ಕೆ ತರಲು ಸುರೇಶ್ ಅವರು ಬಯಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಅಧಿಕಾರವನ್ನು ಹಿಡಿಯಲು ಹೊಸ ಬಟ್ಟೆಗಳನ್ನು ಒಲಿಸಿಕೊಂಡಿದ್ದರು.ಈಗಾಗಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಡಿ.ಕೆ. ಸುರೇಶ್ ಹೇಳಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದರು .

ಮಠಾಧೀಶರುಗಳು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರಲ್ಲ ಎಂಬ ಪ್ರಶ್ನೆಗೆ ಮಠಾಧೀಶರು ತುಂಬಾ ದೊಡ್ಡವರು ಅದರ ಬಗ್ಗೆ ನನಗೆ ಗೊತ್ತಿಲ್ಲ ನಾನು ಈ ನಿಟ್ಟಿನಲ್ಲಿ ಮಾತನಾಡುವುದಿಲ್ಲ ಎಂದು ಯೋಗೀಶ್ವರ್ ಇದೇವೇಳೆ ತಿಳಿಸಿದರು.

ಗುರುಪೂರ್ಣಿಮೆ ಅಂಗವಾಗಿ ಜೆಪಿನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆಗಳನ್ನು ಬಳಸಿ ವಿಶೇಷ ಅಲಂಕಾರ

ಬೆಂಗಳೂರು ಜುಲೈ 22: ಕರೋನಾ ಸಾಂಕ್ರಾಮಿಕ ರೋಗ ಎಲ್ಲರನ್ನು ಹೈರಾಣಾಗಿಸಿದೆ. ಮೂರನೇ ಅಲೆಗೆ ಜನರನ್ನು ಸಿದ್ದಗೊಳಿಸಬೇಕು ಹಾಗೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಹಿನ್ನಲೆಯಲ್ಲಿ, ಜೆ.ಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆಗಳನ್ನು ಬಳಸಿ ವಿಶೇಷ ಅಲಂಕಾರವನ್ನು ಮಾಡಲಾಗಿದೆ.

ಕರೋನಾ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಟದಲ್ಲಿ ಪ್ರಮುಖವಾಗಿ ಬಳಕೆ ಆಗಿರುವಂತಹ ವಸ್ತುಗಳಾದ ಮಾಸ್ಕ್‌, ಪ್ಯಾರಾಸಿಟಮಾಲ್‌, ವಿಟಮಿನ್‌ ಸಿ, ಆಲ್ಕಾಫ್‌, ಬಿ ಕಾಂಫ್ಲೆಕ್ಸ್‌ ನಂತಹ ಮಾತ್ರೆಗಳನ್ನೇ ಬಳಸಿಕೊಂಡು ಬೇರೆ ಯಾರೂ ಮಾಡದಂತಹ ವಿಶಿಷ್ಟವಾದ ಆಲಂಕಾರವನ್ನು ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ಮಾಡಲಾಗಿದೆ.

ದೇವಸ್ಥಾನದಲ್ಲಿ ಫಲ ಪುಷ್ಪಗಳನ್ನು ಬಳಸಿಕೊಂಡು ವಿಶೇಷ ಅಲಂಕಾರ ಮಾಡುವುದು ಸಾಮಾನ್ಯ. ಅಂತಹ ಸಾಮಗ್ರಿಗಳನ್ನು ಬಳಸಿಕೊಂಡು ಮಾಡುವ ಆಲಂಕಾರದಲ್ಲಿ ಬಳಸಲಾಗಿರುವ ವಸ್ತುಗಳನ್ನು ಮತ್ತೊಮ್ಮೆ ಉಪಯೋಗಿಸಲು ಸಾಧ್ಯವಿಲ್ಲ. ಅಪಾರ ವೆಚ್ಚ ಮಾಡಿ ಮಾಡುವ ಆಲಂಕಾರ ಜನರಿಗೆ ಉಪಯೋಗವಾಗುವಂತಿರಬೇಕು ಹಾಗೂ ವಿಭಿನ್ನವಾಗಿರಬೇಕು ಎನ್ನುವ ಉದ್ದೇಶದಿಂದ ಕರೋನಾ ವಿರುದ್ದದ ಹೋರಾಟದಲ್ಲಿ ಪ್ರಮುಖವಾಗಿ ಬಳಸಲಾಗುತ್ತಿರುವ ವಸ್ತುಗಳನ್ನು ಬಳಸಿಕೊಂಡು ಆಲಂಕಾರ ಮಾಡಲಾಗಿದೆ. ಈ ಆಲಂಕಾರದಲ್ಲಿ ಬಳಸಿಕೊಂಡಿರುವ ಎಲ್ಲಾ ಔಷದ ಹಾಗೂ ರೇಷನ್‌ ಕಿಟ್‌ ನ ಪದಾರ್ಥಗಳನ್ನು ಮಾನವರು, ಹಸುಗಳು ಹಾಗೂ ನಾಯಿಗಳಿಗೆ ದಾನದ ರೂಪದಲ್ಲಿ ನೀಡಲಾಗುತ್ತದೆ.
ಜುಲೈ 24 ರಿಂದ ಒಂದು ವಾರಗಳ ಕಾಲ ಈ ಆಲಂಕಾರ ವಿರಲಿದ್ದು ನಂತರ ಇದನ್ನು ಬಡಜನರಿಗೆ ಉಚಿತವಾಗಿ ಹಂಚಲಾಗುವುದು ಎಂದು *ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮ್‌ ಮೋಹನ ರಾಜ್‌* ತಿಳಿಸಿದರು.

ಆಲಂಕಾರದಲ್ಲಿ ಬಳಸಲಾಗಿರುವ ವಸ್ತುಗಳು:
ಮಾತ್ರೆಗಳ ಒಟ್ಟು 3,00,000 (3 ಲಕ್ಷ ಮಾತ್ರೆಗಳು)
– ಡೋಲೋ 650
– ವಿಟಮಿನ್‌ ಸಿ ಮಾತ್ರೆಗಳು
– ಕಾಫ್‌ಸಿಲ್‌ ಮಾತ್ರೆಗಳು
– ಬಿ ಕಾಂಪ್ಲೆಕ್ಸ್‌ ಮಾತ್ರೆಗಳು
– ಪ್ಯಾರಸಿಟಮಾಲ್‌
– ಈಸಿಬ್ರೀಥ್‌
2 ಸಾವಿರ ಕ್ಕೂ ಹೆಚ್ಚು ಸ್ಯಾನಿಟೈಸರ್‌ ಮಾತ್ರೆಗಳು
10 ಸಾವಿರ 8 ವಿವಿಧ ಬಣ್ಣದ ಮಾಸ್ಕ್‌ಗಳು
3 ಸಾವಿರಕ್ಕೂ ಹೆಚ್ಚು ಮೆಡಿಮಿಕ್ಸ್‌ ಹಾಗೂ ಡೆಟಾಲ್‌ ಸೋಪುಗಳು
500 ಕ್ಕೂ ಹೆಚ್ಚು ಟೆನ್ನಿಸ್‌ ಬಾಲ್‌
ರೇಷನ್‌ ಕಿಟ್‌ ವಸ್ತುಗಳಾದ
ಅಕ್ಕಿ, ಬೇಳೆ ಗೋಧಿ ಹಿಟ್ಟು, ಮೈದಾ ಹಿಟ್ಟು, ಸಕ್ಕರೆ, ಉಪ್ಪು, ರವೆ, ಎಣ್ಣೆ, ಈರುಳ್ಳಿ, ಮೆಕ್ಕೆ ಜೋಳ, ಬಿಸ್ಕತ್‌, ತೆಂಗಿನಕಾಯಿ

ಈ ಎಲ್ಲಾ ಸಾಮಗ್ರಿಗಳನ್ನು ಪ್ರಸಾದದ ರೂಪದಲ್ಲಿ ಅಗತ್ಯವಿರುವ ಜನರಿಗೆ ಹಂಚಲಾಗುವುದು.

ಎಲ್ಲ ಅಭ್ಯರ್ಥಿಗಳಿಗೂ ಪಿಯು ಪ್ರವೇಶ ಲಭ್ಯ: ಸುರೇಶ್ ಕುಮಾರ್

ಬೆಂಗಳೂರು: ಈ ಬಾರಿ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ಕೊನೆದಿನದ ಪರೀಕ್ಷೆಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕೊನೆದಿನ ದಿನದ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗದಂತೆ ಎಲ್ಲರಿಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.

ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪಿಯು ಕಾಲೇಜುಗಳಲ್ಲಿ ಒಟ್ಟಾರೆ 12 ಲಕ್ಷ ಸೀಟುಗಳು ಲಭ್ಯವಿವೆ. ಜಿಲ್ಲಾವಾರು ಅಂಕಿಅಂಶಗಳನ್ನು ಸಂಗ್ರಹಿಸಿದ್ದು ಅದಕ್ಕಾಗಿ ಅಧಿಕಾರಿಗಳ ಸಮನ್ವಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಯಾವುದೇ ವಿದ್ಯಾರ್ಥಿಗೂ ಪಿಯು ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಯಾವುದೇ ಸಂಸ್ಥೆಗಳು ಸೀಟು ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಅವರ ಬೇಡಿಕೆಯನ್ನು ಪುರಸ್ಕರಿಸಲಾಗುವುದು ಎಂದು ಅವರು ಹೇಳಿದರು.

ಆಗಸ್ಟ್ 10ರ ವೇಳೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಪ್ರಶಾಂತ ವಾತಾವರಣದಲ್ಲಿ ನಡೆದವು. ಇಂದು ಬೆಂಗಳೂರಿನ ದೂರವಾಣಿನಗರದ ಐಟಿಐ ವಿದ್ಯಾಮಂದಿರ ಪ್ರೌಢಶಾಲೆ, ವಿದ್ಯಾಮಂದಿರ ಸೆಂಟ್ರಲ್ ಶಾಲೆ, ಕೆ.ಆರ್.ಪುರಂ ಕರ್ನಾಟಕ ಪಬ್ಲಿಕ್ ಶಾಲೆ, ವೆಂಕಟೇಶ್ವರ ಪ್ರೌಢಶಾಲೆ, ದೇವಸಂದ್ರದ ಭಾರತೀಯ ವಿದ್ಯಾನಿಕೇತನ ಪ್ರೌಢಶಾಲೆ, ಅವಲಹಳ್ಳಿಯ ಗ್ರೇಟ್ ಇಂಟರ್ನ್ಯಾಷನಲ್ ಸ್ಕೂಲ್, ವಿದ್ಯಾನಿಕೇತನ ಆಂಗ್ಲಪ್ರೌಢಶಾಲೆ, ಕಾಡುಗೋಡಿಯ ಶಾರದಾ ವಿದ್ಯಾಮಂದಿರ ಪ್ರೌಢಶಾಲೆ, ವೈಟ್ಫೀಲ್ಡ್ ನ ಉಜ್ವಲ ವಿದ್ಯಾಲಯ ಪ್ರೌಢಶಾಲೆ ಸೇರಿದಂತೆ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಲ್ಲ ಕಡೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳು ಅತ್ಯಂತ ಶಿಸ್ತಿನಿಂದ ಪರೀಕ್ಷೆಗೆ ಹಾಜರಾಗಿದ್ದರು. ನಮ್ಮ ವಿದ್ಯಾರ್ಥಿಗಳ ಶಿಸ್ತು ನನ್ನ ಮನಸೂರೆಗೊಂಡಿತು. ಮಕ್ಕಳ ಶಿಸ್ತು ಮತ್ತು ಧೈರ್ಯ ಪರೀಕ್ಷೆಯ ಯಶಸ್ಸಿನ ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಇಂದೂ ಸಹ ಕೆಲವೆಡೆ ಶಾಸಕರು ಮತ್ತು ಸಚಿವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಖುದ್ದಾಗಿ ಭೇಟಿ ನೀಡಿದ್ದಾರೆ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಹಲವಾರು ಕಡೆಗಳಲ್ಲಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ ಸಚಿವರು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇ. ಹಾಜರಾತಿಯೂ ಸಹ ಈ ಬಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಭಾಷಾ-1 ವಿಷಯಕ್ಕೆ 8,19,694 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,16,544 ಅಭ್ಯರ್ಥಿಗಳು ಹಾಜರಾಗಿ 3150 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.41 ಇತ್ತು.

ಭಾಷಾ -2 ವಿಷಯಕ್ಕೆ 8,27,988 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,24,686 ಅಭ್ಯರ್ಥಿಗಳು ಹಾಜರಾಗಿ 3302 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.60 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು.
ಭಾಷಾ -3 ವಿಷಯಕ್ಕೆ 8,17,640 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,14,538 ಅಭ್ಯರ್ಥಿಗಳು ಹಾಜರಾಗಿ 3102 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು.

ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖಾ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಎಲ್ಲ ಅಭ್ಯರ್ಥಿಗಳು ಮಾಸ್ಕ್ ಗಳನ್ನು ಧರಿಸಿದ್ದರು. ಮಾಸ್ಕ್ ಧರಿಸದೇ ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ನೀಡಲಾಯಿತು ಎಂದು ಅವರು ವಿವರಿಸಿದರು.

ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಪರೀಕ್ಷಾ ಸಮಯದಲ್ಲಿ ಕಂಡು ಬಂದ ವಿಶೇಷತೆಗಳನ್ನು ಸಚಿವರು ಈ ಸಂರ್ಭದಲ್ಲಿ ವಿವರಿಸಿದರು.

⚫ ಮೂಳೆ ಸವೆತ ರೋಗದಿಂದ ಬಳಲುತ್ತಿರುವ ಕುಮಾರಿ ಯಶಸ್ವಿನಿ ಎಂಬ ವಿದ್ಯಾರ್ಥಿನಿ ಬೆಂಗಳೂರಿನ ಕಾವೇರಿಪುರದ ಆರ್ ಎ ಎಸ್ ಕಾನ್ವೆಂಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ. ಅವರ ಜೀವನೋಲ್ಲಾಸ ಮೆಚ್ಚುವಂತಹುದು.

⚫ ಮೊದಲ ದಿನ ಪರೀಕ್ಷೆ ಬರೆದು ಕಡಿಮೆ ಅಂಕಗಳು ಬರಬಹುದೆಂಬ ಭೀತಿಯಿಂದ ತನ್ನ ಅಜ್ಜಿಗೆ ತಂದಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಕೆಂಚನಾಲಾ ಗ್ರಾಮದ ಚೇತನಾ ಆರೋಗ್ಯವಾಗಿದ್ದು, ಇಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ಇದು ಖುಷಿಯ ಸಂಗತಿಯಾಗಿದೆ.

⚫ ಮಳೆ ತೀವ್ರವಾಗಿದ್ದರಿಂದ ಪಾಲಕರ ದ್ವಿಚಕ್ರ ವಾಹನಗಳಲ್ಲಿ ಬರಲು ತೊಂದರೆಯಾದ್ದರಿಂದ ದಾವಣಗೆರೆ ತಾಲೂಕಿನ ಚಿಕ್ಕ ಬಿದರೆ ಗ್ರಾಮದ ಆರು ಮಕ್ಕಳಿಗೆ ಅಧಿಕಾರಿಗಳು ಆಟೋ ಸೌಲಭ್ಯ ಒದಗಿಸಿದರು.

⚫ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ತೀವ್ರವಾದ ಮಳೆ ಹಿನ್ನೆಲೆಯಲ್ಲಿ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಕೆಲ ಗ್ರಾಮೀಣ ಪ್ರದೇಶದ ಮಕ್ಕಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಅವರ ವಾಹನದಲ್ಲಿ ಕರೆ ತಂದಿದ್ದಾರೆ. ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ಹಳ್ಳ ತುಂಬಿದ್ದು ಗೊತ್ತಾಗಿ ಮಕ್ಕಳ ಚಲನವಲನಕ್ಕೆ ತೊಂದರೆಯಾಗಿರುವುದು ಇಂಟಲಿಜೆಂಟ್ ನವರಿಂದ ಗೊತ್ತಾಗಿ ನಮ್ಮ ಅಧಿಕಾರಿಗಳು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಿದರು.

⚫ ಅಥಣಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಬೈಕ್ ಸ್ಕಿಡ್ ಆಗಿ ಬಿದ್ದರು. ಅದರಲ್ಲಿ ಮಲ್ಲಿಕಾರ್ಜುನ ಸದಾಶಿವ ಕವಟಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಾದ್ದರಿಂದ ಪರೀಕ್ಷೆಗೆ ಬರಲಾಗಲಿಲ್ಲ. ಅವನೊಂದಿಗೆ ಬರುತ್ತಿದ್ದ ಸಹಪಾಠಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದಾನೆ.

⚫ ಇಂದೂ ಸಹ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಶಿಲ್ಪಾ ಮತ್ತು ಕು. ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್ನಲ್ಲಿಯೇ ಹಿಂದಿರುಗಿದರು.

⚫ ಮಳೆಯಿಂದಾಗಿ ಮರ ಬಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶೆಂಡೂರಿನ 44 ಮಕ್ಕಳಿಗೆ ಪರೀಕ್ಷೆಗೆ ಬರಲು ತೊಂದರೆಯಾಗಿತ್ತು. ನಮ್ಮ ಅಧಿಕಾರಿಗಳು ಪೊಲೀಸರ ನೆರವಿನಿಂದ ರಸ್ತೆಯಿಂದ ಮರವು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು.

⚫ ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಡಿಕೆಕುಳೀ ಮತ್ತು ಮಜಿರೆ ಗ್ರಾಮದ ಕೆಪಿಎಸ್ ಮಂಕಿ ಪರೀಕ್ಷಾ ಕೇಂದ್ರಕ್ಕೆ ಬರುವ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಸಿಆರ್ಪಿಗಳು ಮತ್ತು ಶಿಕ್ಷಕರ ವಾಟ್ಸ್ ಆಪ್ ಮೂಲಕ ವಿಷಯ ವಿನಿಮಯವಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಎಲ್ಲ 36 ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆ ತಂದರು.

⚫ ಶಿರಸಿ ತಾಲೂಕಿನ ಬಸ್ ಸೌಲಭ್ಯವಿಲ್ಲದ ಗ್ರಾಮಗಳ ಮಕ್ಕಳಿಗಾಗಿ ಶಿರಸಿಯ ಮಾರಿಕಾಂಬ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ 25 ಆಟೋ ಮತ್ತು 3 ವ್ಯಾನ್ಗಳ ಉಚಿತ ವ್ಯವಸ್ಥೆ ಮಾಡಿ 109 ವಿದ್ಯಾರ್ಥಿಗಳನ್ನು ಕರೆತಂದು ಮತ್ತು ಮನೆಗೆ ವಾಪಾಸು ಕಳಿಸಿ ಔದಾರ್ಯ ತೋರಿದ್ದಾರೆ.

⚫ ಜಾಂಡೀಸ್ನಿಂದಾಗಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಶಕ್ತಿವೇಲ್ಗೆ ವೈದ್ಯರ ಸಲಹೆಯಂತೆ ಎರಡೂ ದಿನವೂ ಆಸ್ಪತ್ರೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

⚫ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬೂರದೂರ ಹುಂಡಿ ಗ್ರಾಮದ ಬುಡಕಟ್ಟು ಜನಾಂಗದ ಪ್ರಿಯಾ ಎಂಬ ವಿದ್ಯಾರ್ಥಿನಿ ಕೆಪಿಎಸ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬಂದಿರಲಿಲ್ಲ. ಇದನ್ನು ಗಮನಿಸಿದ ಮಾರ್ಗಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ವಾಹನ ಕಳಿಸಿ ಪರೀಕ್ಷೆಗೆ ಕರೆತಂದರು.

⚫ ವಿಭಿನ್ನ ಸಾಮಥ್ರ್ಯದ ವಿದ್ಯಾರ್ಥಿ ಬೆಂಗಳೂರಿನ ಕುಮಾರಪಾರ್ಕ್ ವಿದ್ಯಾನಿಕೇತನ ಪ್ರೌಢಶಾಲೆಯ ಎಸ್. ಭರತ್ಗೆ ಮಲ್ಲೇಶ್ವರಂನ ಸ್ಟೆಲ್ಲಾ ಮೆರಿಸ್ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ನೆಲಮಹಡಿಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಯಿತು. ನರ್ಸ್ ಒಬ್ಬರ ಸಹಾಯ ಒದಗಿಸಿ ಒಂದು ಗಂಟೆ ಹೆಚ್ಚಿನ ಸಮಯಾವಕಾಶ ನೀಡಲಾಯಿತು.

⚫ ಹೀಗೆ ಹಲವಾರು ವಿಶೇಷ ಪ್ರಕರಣಗಳು ನಡುವೆಯೂ ನಮ್ಮ ವಿದ್ಯಾರ್ಥಿಗಳು ಸೇನಾನಿಗಳಾಗಿ ಯುದ್ಧ ಗೆದ್ದಿದ್ದಾರೆ. ಮಕ್ಕಳು- ಪೋಷಕರು ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

⚫ ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿದ್ದರು.

⚫ ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.

⚫ ಯಾವುದೇ ಅಭ್ಯರ್ಥಿ ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಲ್ಲ.

⚫ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ ಬರೆದ ಅಭ್ಯರ್ಥಿಗಳು- 152

⚫ ಸನಿಹದ ಪರೀಕ್ಷಾ ಕೇಂದ್ರಗಳನ್ನು ಆರಿಸಿಕೊಂಡ ವಲಸೆ ವಿದ್ಯಾರ್ಥಿಗಳು- 10693

⚫ ವಸತಿ ನಿಲಯಗಳಲ್ಲಿದ್ದು ಪರೀಕ್ಷೆ ಬರೆದವರು – 2870

⚫ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

⚫ ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

⚫ ಮೊನ್ನೆಯ ರೀತಿಯಲ್ಲಿಯೇ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ದಿಂದ ಒಟ್ಟು 706 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. 4 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.

⚫ ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.

⚫ ಕೋವಿಡ್-19 ಸೋಂಕು ಪ್ರಸರಣದಿಂದಾಗಿ ಎಲ್ಲರ ಸಹಕಾರದೊಂದಿಗೆ ಸರಳೀಕೃತವಾಗಿ ಎರಡು ದಿನಗಳ ಕಾಲ ನಡೆಸಲಾದ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯಲ್ಲಿ ಕೈಗೊಂಡ ಉಪಕ್ರಮಗಳ ಕುರಿತು ಯಶೋಗಾಥೆ ಪುಸ್ತಿಕೆ ಹೊರತರಲಾಗುವುದು.

ಶಾಲಾರಂಭ:-
ಶಾಲಾರಂಭದ ಕುರಿತ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್ ಈ ಸಂಬಂಧ ಇಲಾಖೆ ರಚಿಸಿರುವ ಟಾಸ್ಕ್ ಫೋರ್ಸ್ ತನ್ನ ಹಂತದಲ್ಲಿ ಸವಿವರವಾಗಿ ಚರ್ಚಿಸಿದ್ದು, ಈ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆ ಸೇರಿ ಎಲ್ಲ ಆಯಾಮಗಳನ್ನು ಅವಲೋಕಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ನಂಗೂ ಯಡಿಯೂರಪ್ಪ ಅಷ್ಟು ಅನುಭವ ಆಗಿದೆ, ನಾನೂ ರಾಜ್ಯವಾಳಬೇಕು; ಉಮೇಶ್ ಕತ್ತಿ

ಬೆಂಗಳೂರು: ನಾನೂ 8 ಬಾರಿ ಶಾಸಕನಾಗಿದ್ದೇನೆ. ನಾನೂ ಸಿಎಂ ಆಗಿ ರಾಜ್ಯ ಆಳಬೇಕು ಅಂತ ಆಸೆ ಇದೆ.ನಾನೂ ಯಡಿಯೂರಪ್ಪ ಸಮನಾಗಿದ್ದೇನೆ. ನನಗೆ ಇನ್ನೂ 15 ವರ್ಷ ಅವಕಾಶ ಇದೆ. ಯಾವತ್ತಾದರೂ ಒಂದು ಒಂದು ದಿನ ಸಿಎಂ ಆಗ್ತಿನಿ ಅನ್ನೊ ಭರವಸೆ ಇದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತಾಡ್ತಾ,
ಪಕ್ಷದ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಮುಖ್ಯಮಂತ್ರಿ ಗಳು ಪಾಲನೆ ಮಾಡುತ್ತಾರೆ. ನಾವೂ ಮಾಡುತ್ತೇವೆ.
ಯಡಿಯೂರಪ್ಪ ಅವರಿಗೆ ಗೌರವಯುತ ನಿರ್ಗಮನವಾಗಬೇಕು. ಅವರು ಪಕ್ಷದ ತೀರ್ಮಾನವನ್ನು ಗೌರವಿಸುತ್ತಾರೆ. ಅವರು ಪಕ್ಷಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಪಕ್ಷವೂ ಅವರಿಗೆ ಗೌರವ ಕೊಡುತ್ತದೆ ಎಂದ್ರು.

ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಬೇಕು ಎನ್ನುವ ಬೇಡಿಕೆ ಇದೆ. ಆ ಭಾಗದ. ಯಾವುದೇ ಸಮುದಾಯದವರು ಸಿಎಂ ಆದರೂ ಸಹಕಾರ ನೀಡುತ್ತೇವೆ. ಆ ಭಾಗದಲ್ಲಿ ಲಿಂಗಾಯತ ಸಮುದಾಯ ಶಾಸಕರು ಹೆಚ್ಚಿದ್ದಾರೆ. ಯಾರನ್ನೇ ಸಿಎಂ ಮಾಡಿದರೂ ಸ್ವಾಗತವಿದೆ ಎಂದ್ರು.

ನಾನು ಈಗ ಹೈಕಮಾಂಡ್ ಭೇಟಿಗೆ ಹೋಗಲ್ಲ.
ಬಿಜೆಪಿಯಲ್ಲಿ 75 ವರ್ಷದ ಲಿಮಿಟ್ ಇದೆ. ಯಡಿಯೂರಪ್ಪ ಅವರಿಗೆ 80 ವರ್ಷ ಹತ್ತಿರ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಅವರೂ ಬದ್ದರಾಗಿತ್ತಾರೆ. ನಾವೂ ಬದ್ದರಾಗಿರುತ್ತೇವೆ ಎಂದ್ರು.

ಸಿಎಂ ರಾಜೀನಾಮೆ ನೀಡುವುದು ಪಕ್ಕಾ ಆಯ್ತು..!

ಬೆಂಗಳೂರು: ಜುಲೈ 25 ರಂದು ಹೈಕಮಾಂಡ್ ನೀಡುವ ಸೂಚನೆ ಪಾಲನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಎರಡು ವರ್ಷ ತುಂಬುವ ದಿನದಂದೇ ರಾಜೀನಾಮೆ ಖಚಿತವಾಗಿದೆ.

ಕಾಚರಕನಹಳ್ಳಿಯಲ್ಲಿ ಧನ್ವಂತರಿ ಯಾಗದಲ್ಲಿ ಯಡಿಯೂರಪ್ಪ ಭಾಗಿಯಾಗದ್ರು.ಲೋಕಕಲ್ಯಾಣಾರ್ಥವಾಗಿ ನಡೆದ ಹೋಮದಲ್ಲಿ ಪ್ರಾರ್ಥನೆ ಸಲ್ಲಿಸಿದ್ರು. ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ ರಾಜೀನಾಮೆ ಸಾಧ್ಯತೆ ಪ್ರಸ್ತಾಪಿಸಿದ್ರು. ನಮ್ಮ ಹೈಕಮಾಂಡ್ ದೇಶದ ಯಾವ ರಾಜ್ಯದಲ್ಲಿಯೂ ಕೊಡದ ಅವಕಾಶ ನನಗೆ ಕೊಟ್ಟಿದೆ.75 ವರ್ಷ ದಾಟಿದ್ರೂ ಸಿಎಂ ಆಗೋ ಅವಕಾಶ ಕೊಟ್ಟಿದ್ದರಿಂದ ಎರಡು ವರ್ಷ ಆಳ್ವಿಕೆ ಮಾಡಿದ್ದೇನೆ, ಈಗ ಅವರು ಏನು ಹೇಳಿತ್ತಾರೋ ಹಾಗೆ ಮಾಡುತ್ತೇನೆ ಎಂದ್ರು.

ಜುಲೈ 25 ರಂದು ಹೈಕಮಾಂಡ್ ಏನು ಸೂಚನೆ ನೀಡುತ್ತದೆಯೋ ಅದರಂತೆ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ರಾಜೀನಾಮೆ ಫಿಕ್ಸ್ ಅಂತಾ ಸುಳಿವು ಕೊಟ್ರು. ಅಲ್ದೆ ಯಾರೂ ಪ್ರತಿಭಟನೆ ಮಾಡದಂತೆ ಮನವಿ ಮಾಡಿದ್ರು.