ಗೋಕರ್ಣ ದೇವಾಲಯ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಮುಂದುವರೆಯಲಿದೆ: ಹೈಕೋರ್ಟ್

ಬೆಂಗಳೂರು: ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಪಡಿಸಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

2008ರ ಆಗಸ್ಟ್ 12ರಂದು ಅಂದಿನ ಸರ್ಕಾರ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಾಲಕೃಷ್ಣ ದೀಕ್ಷಿತ್ ಎನ್ನುವರು ಹೈಕೋರ್ಟ್‌ನಲ್ಲಿ
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರದ ಆದೇಶದಲ್ಲಿ ಲೋಪದೋಷಗಳಿವೆ. ಮಹಾಬಲೇಶ್ವರ ದೇವಸ್ಥಾನವನ್ನು ಧಾರ್ಮಿಕ ದತ್ತಿ ಪಟ್ಟಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ಹೀಗಾಗಿ, ಬಿಎಸ್​ವೈ ಸರಕಾರದ ಆದೇಶವನ್ನು ರದ್ದುಗೊಳಿಸುತ್ತಿದ್ದೇವೆ. ಗೋಕರ್ಣ ದೇವಸ್ಥಾನವು ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರಿಯಲಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

ಗೋಕರ್ಣ ದೇವಸ್ಥಾನಕ್ಕೆ ತತ್​ಕ್ಷಣವೇ ಡಿಸಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚನೆಯಾಗಬೇಕು ಎಂದು ಆದೇಶಿಸಿರುವ ನ್ಯಾಯಾಲಯ, ಸಮಿತಿಯ ಸಲಹೆಗಾರರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಿದೆ. ಸೆ. 10ರಂದು ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು, ಅಲ್ಲಿಯವರೆಗೂ ಗೋಕರ್ಣ ಕ್ಷೇತ್ರವು ರಾಮಚಂದ್ರಾಪುರ ಮಠದ ಸುಪರ್ದಿಯಲ್ಲೇ ಇರಲಿದೆ. ಅಷ್ಟರೊಳಗೆ ಗೋಕರ್ಣ ದೇವಸ್ಥಾನದ ಸ್ಥಿರಾಸ್ತಿ, ಚರಾಸ್ತಿ ಪಟ್ಟಿಯನ್ನು ತಯಾರಿಸಿ ಎರಡು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾ. ಅರವಿಂದ್ ಕುಮಾರ್ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ.

ಸಮಾಜ ಕಲ್ಯಾಣ ಇಲಾಖೆ ಅನುದಾನ ಬಳಕೆಯಾಗಿದೆ: ಪ್ರಿಯಾಂಕ್ ಖರ್ಗೆ

ರಾಯಚೂರು: ಪರಿಶಿಷ್ಟ ಜಾತಿ ಹಾಗು ಪಂಗಡ ಅನುದಾನದ ಖರ್ಚು ಆಗುತ್ತಿಲ್ಲ ಎನ್ನುವುದು ಸರಿ ಅಲ್ಲ ಅನುದಾನ ಬಳಕೆಯಾಗುತ್ತಿದೆ. ಈಗಾಗಲೇ ಶೇಕಡಾ 93 ರಷ್ಟು ಅನುದಾನ ಬಳಕೆಯಾಗಿದೆ ಎಂದು ಸಮಾಜ‌ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು,ವಿಶೇಷ ಘಟಕ ಯೋಜನೆಯಲ್ಲಿ ಹೆಚ್ಚು ಅನುದಾನ ಬಳಕೆ ಮಾಡಲಾಗುತ್ತಿದೆ.2013 ರಲ್ಲಿ ವಿಶೇಷ ಘಟಕದ ತಿದ್ದುಪಡಿ ಜಾರಿಗೆ ಬಂದ ನಂತರ ಏನಾಗಿದೆ ಎನ್ನುವದನ್ನು ಬಹಿರಂಗ ಪಡಿಸುತ್ತೇವೆ ಎಂದು ಅನುದಾನ ಬಳಕೆ ಕುರಿತ ಆರೋಪಕ್ಕೆ ತಿರುಗೇಟು ನೀಡಿದ್ರು.

ಸದಾಶಿವ ಆಯೋಗದ ವರದಿಯ ಬಗ್ಗೆ ಕಾನೂನು ಇಲಾಖೆಗೆ ಕಳುಹಿಸಿದ್ದೇವೆ.ಅಲ್ಲಿಂದ ಒಪ್ಪಿಗೆ ಬಂದ ನಂತರ ಜಾರಿಗೆ ನಿರ್ಧರಿಸುತ್ತೇವೆ. ಕೇಂದ್ರ ಸರಕಾರವು ಎಸ್ಸಿ ಎಸ್ಟಿ ಕಾಯ್ದೆ ವಿಧೇಯಕ ಜಾರಿಗೆ ತಂದಿದೆ.ಈಗಲಾದರೂ ಕೇಂದ್ರ ಸರಕಾರಕ್ಕೆ ಅನುಭವವಾಯಿತಲ್ಲ.ದಲಿತ ಸಂಘಟನೆಗಳ ಹೋರಾಟದಿಂದಾಗಿ ಹತ್ತು ದಿನಗಳಲ್ಲಿ ವಿಧೇಯಕಕ್ಕೆ ತಿದ್ದುಪಡಿ ತಂದಿದೆ ಎಂದ್ರು.

ರಾಜ್ಯದಲ್ಲಿರುವ ಎಲ್ಲಾ ಹಾಸ್ಟೆಲ್ ಗಳಲ್ಲಿ ಒಂದೇ ರೀತಿ ಸ್ಟಾಂಡರ್ಡ್ ಗೆ ತರಲು ಸಮಿತಿ ರಚಿಸಲಾಗಿದೆ.ಸಮಿತಿ ಸೂಕ್ತ ರೀತಿಯ ಶಿಫಾರಸ್ಸು ಮಾಡಲಿದ್ದು ಅದರಂತೆ ಸರಕಾರ ಕ್ರಮ ಕೈಗೊಳ್ಳಲಿದೆ.ಬಡ್ತಿ ಮೀಸಲಾತಿ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ ಅದು ತೀರ್ಪು ಬಂದ ನಂತರ ತೀರ್ಮಾನವಾಗುತ್ತೆ ಎಂದ್ರು.

ಉತ್ತರ ಕರ್ನಾಟಕ ಹೈದ್ರಾಬಾದ್ ಕರ್ನಾಟಕದವರು ಕಷ್ಟ ಪಟ್ಟು ಒಂದಾಗಿದ್ದೇವೆ.ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕಿಲ್ಲ.ಪ್ರತ್ಯೇಕ ರಾಜ್ಯ ಕೇಳಿದವರು ರಾಜ್ಯಕ್ಕಾಗಿ ಬೆವರು ಸುರಿಸಿದವರಲ್ಲ.ಅವರಿಗೆ ರಾಜ್ಯ ಒಗ್ಗೂಡಲೂ ಮಾಡಿದ ಪ್ರಯತ್ನ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

ಮಹಾನಗರ ಪಾಲಿಕೆಗಳ ಚುನಾವಣೆಗೆ “ಹೈ” ಗ್ರೀನ್ ಸಿಗ್ನಲ್!

ಬೆಂಗಳೂರು: ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿ ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆಗಳ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ.

ತುಮಕೂರು, ಶಿವಮೊಗ್ಗ ಮೈಸೂರು ಪಾಲಿಕೆಗಳ ಚುನಾವಣೆ ಸಂಬಂಧ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಸಲ್ಲಿಸಲಾಗಿತ್ತು. ಈ ರಿಟ್ ಅರ್ಜಿ ವಿಚಾರಣೆ ಮುಗಿದ್ದಿದ್ದು ರಿಟ್ ಅರ್ಜಿಯನ್ನ ಹೈಕೋರ್ಟ್ ನ್ಯಾಯಮೂರ್ತಿ ವೀರಪ್ಪ ವಜಾಗೊಳಿಸಿದ್ದಾರೆ. ಈ ಮೂಲಕ ತುಮಕೂರು, ಮೈಸೂರು. ಶಿವಮೊಗ್ಗ ಪಾಲಿಕೆಗೆಳ ಚುನಾವಣೆಗೆ ಇದ್ದ ತೊಡಕು ನಿವಾರಣೆಯಾದಂತಾಗಿದೆ.

ಇತ್ತೀಚೆಗೆ ರಾಜ್ಯ ಚುನಾವಣಾ ಆಯೋಗ ರಾಜ್ಯದ 105 ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.ಅದರಂತೆ ಆಗಸ್ಟ್ 29ಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನ ನಡೆಯಲಿದೆ. 29 ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ಆಗಸ್ಟ್‌ 17 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಆಗಸ್ಟ್ 29ಕ್ಕೆ ಮತದಾನ ನಡೆಯಲಿದ್ದು, ಸೆಪ್ಟೆಂಬರ್ 1 ಕ್ಕೆ ಮತ ಎಣಿಕೆ ನಡೆಯಲಿದೆ.

ಈ ನಡುವೆ ಹೈಕೋರ್ಟ್ ನಲ್ಲಿ ಚುನಾವಣೆ ಬಾಕಿ ಇದ್ದ ಹಿನ್ನೆಲೆ ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆಗಳಿಗೆ ಚುನಾವಣಾ ದಿನಾಂಕ ಘೋಷಿಸಿರಲಿಲ್ಲ.

ಚುನಾವಣೆ ಗೆಲ್ಲಲು ರಣನೀತಿ ರೂಪಿಸಿ: ಪರಮೇಶ್ವರ್

ತುಮಕೂರು: ಚಿಕ್ಕನಾಯಕನಹಳ್ಳಿ‌ ಸ್ಥಳೀಯ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌‌ ಪಕ್ಷವೇ ಅಧಿಕಾರಕ್ಕೆ ಬರುವ ರೀತಿಯಲ್ಲಿ ರಣನೀತಿ ರೂಪಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕರೆನೀಡಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್‌ ಸಮಿತಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವ ಶಕ್ತಿಯಿಂದಲೇ ಚುನಾವಣೆ ಎದುರಿಸಲು ಹೊರಟಿದ್ದೇವೆ. ೩೫ ವರ್ಷದ ಹಿಂದೆ ಕಾಂಗ್ರೆಸ್‌ ಈ ಭಾಗದಲ್ಲಿ ಅಧಿಕಾರಕ್ಕೆ ಏರಿದ್ದು ಬಿಟ್ಟರೆ ಈ ವರೆಗು ಮುನಿಸಿಪಾಲಿಟಿ ಅಧಿಕಾರ ಹಿಡಿದಿದ್ದು. ಬಹಳ ವರ್ಷಗಳಿಂದ ಇಲ್ಲಿ ಕಾಂಗ್ರೆಸ್‌ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಚುನಾವಣಾ ರಣತಂತ್ರ ರೂಪಿಸಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಬೇಕು.‌ ನಿಮ್ಮ‌ ಎಲ್ಲ ಬೇಡಿಕೆಯನ್ನು ಸರಕಾರದಿಂದ ಪೂರೈಸಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಗೆಲ್ಲುವವರಿಗೆ ಟಿಕೆಟ್ ನೀಡುವುದು ಮುಖ್ಯ. ಮುಲಾಜಿಲ್ಲದೇ ಗೆಲ್ಲುವವರಿಗೆ ಮಾತ್ರ ಟಿಕೆಟ್ ನೀಡಿ ಎಂದು ಹೇಳಿದರು.

ರಾಜ್ಯದ ಹಿತದೃಷ್ಟಿಯಿಂದ ಈ ಬಾರಿ ಸಮ್ಮಿಶ್ರ ಸರಕಾರ ರಚಿಸುವ ಅನಿವಾರ್ಯತೆ ಸೃಷ್ಟಿಯಾಯಿತು. ಬಿಜೆಪಿ‌ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಎಲ್ಲರಿಗೂ ತಿಳಿದಿದೆ. ಇಂಥವರಿಗೆ ಅಧಿಕಾರ ನೀಡಬಾರದು ಎಂಬ ಕಾರಣಕ್ಕೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ.

ಹಿಂದಿನ ಸರಕಾರ ಘೋಷಿಸಿದ ಕಾರ್ಯಕ್ರಮ ಮುಂದುವರೆಸುವ ಷರತ್ತಿನೊಂದಿಗೆ ಸಮ್ಮಿಶ್ರ ಸರಕಾರ ರಚಿಸಿದೆವು. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ಜಯಚಂದ್ರ ಇದ್ದರು.

ರಾಜಕಾರಣಿಗಳಿಂದ ದೇಶದ ಉದ್ದಾರ ಸಾಧ್ಯವಿಲ್ಲ : ಜಿ.ಟಿ ದೇವೇಗೌಡ

ಬೆಂಗಳೂರು: ರಾಜಕಾರಣಿಗಳಿಂದ ಈ ದೇಶ ಮುಂದೆ ಬರಲು ಸಾಧ್ಯವಿಲ್ಲ. ದೇಶವನ್ನು ಅವರು ಉದ್ದಾರ ಮಾಡುವುದೂ ಇಲ್ಲ

ದೇಶ ಅಭಿವೃದ್ಧಿ ಆಗಬೇಕಾದರೆ ನಿಮ್ಮಂತ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.

ರೇವಾ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡ ಭಾಗವಹಿಸಿದರು.ವಿದ್ಯಾರ್ಥಿಗಳಿಗೆ ಪದವಿ ಪ್ರದಾನಿಸಿ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಡಾ ಬಿ.ಆರ್ ಅಂಬೇಡ್ಕರ್ ಒಬ್ಬರಿಗೆ ಒಂದೇ ಮತ ನೀಡುವ ಅವಕಾಶವನ್ನು ನೀಡಿದ್ದಾರೆ. ಆದ್ದರಿಂದ ನೀವು ಜನಪ್ರತಿನಿಧಿಗಳನ್ನ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ ಎಂದ್ರು.

ಎಪಿಜೆ ಅಬ್ದುಲ್ ಕಲಾಂ ಅವರನ್ನೂ ಕೂಡ ಈ ವೇಳೆ ಸ್ಮರಿಸಿದ ಸಚಿವರು ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಕಲಾಂ ಅವರು‌ ಸಾವನ್ನಪ್ಪಿದರು .ಶಿಕ್ಷಣದ ಮಹತ್ವ ಇದು, ರಾಜಕಾರಣಿಗಳಿಂದ ಇದು ಸಾಧ್ಯವಿಲ್ಲ ಎಂದ್ರು.

ಸರ್ಕಾರಿ ಕಾಲೇಜುಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ವಿವಿಧ ವಿವಿಗಳ ಉಪಕುಲಪತಿಗಳು, ಅಧಿಕಾರಿಗಳ ವಿರುದ್ದ ಗರಂ ಆದ ಸಚಿವರು ಸರ್ಕಾರಿ ಕಾಲೇಜುಗಳಲ್ಲಿ ಎಲ್ಲವೂ ಸಮಸ್ಯೆಯಾಗಿರುತ್ತದೆ.ಕಟ್ಟಡಗಳೇ ಇಲ್ಲದೆ ಕಾಲೇಜುಗಳನ್ನು ನಡೆಸಬೇಕಾದ ಸ್ಥಿತಿ ಇರುತ್ತದೆ. ಸರ್ಕಾರ ಕೋಟಿ ಕೋಟಿ ಹಣ ಅನುದಾನ ನೀಡುತ್ತದೆ. ಆದರೂ ನಮ್ಮ ಸರ್ಕಾರಿ ಕಾಲೇಜುಗಳ ಸ್ಥಿತಿ ಯಾಕೆ ಹೀಗಿದೆ? ನಮ್ಮ ವಿಸಿಗಳನ್ನ ನಿಮ್ಮ ಕಾಲೇಜುಗಳಿಗೆ ಕಳುಹಿಸಿಕೊಡುತ್ತೇನೆ.ನಿಮ್ಮಿಂದ ನೋಡಿ ಕಲಿಯಲಿ. ಸರ್ಕಾರಿ ಕಾಲೇಜುಗಳನ್ನು ಉನ್ನತ ದರ್ಜೆಗೆ ಏರಿಸಲು ಕೆಲಸ ಮಾಡಲಿ. ಖಾಸಗಿ ಯೂನಿವರ್ಸಿಟಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ನಮ್ಮ ಅಧಿಕಾರಿಗಳು, ವಿಸಿ ಗಳು ಸರ್ಕಾರಿ ಕಾಲೇಜುಗಳ ಹೆಸರು ಕೆಡಿಸುತ್ತಿದ್ದಾರೆ ಎಂದು ಜಿ.ಟಿ ದೇವೇಗೌಡ ಅಸಮಧಾನ ವ್ಯಕ್ತಪಡಿಸಿದ್ರು.

ತಕ್ಷಣ ಹಣ ಕೊಡಲು ದುಡ್ಡಿನ ಗಿಡ ಹಾಕಿಲ್ಲ: ಸಿಎಂ

ಬೆಂಗಳೂರು: ರೈತರ ಸಾಲ ಮನ್ನಾ ಘೋಷಿಸಿದ್ರು ಆದೇಶ ಹೊರಡಿಸಿಲ್ಲ ಎಂದು ಟೀಕಿಸುತ್ತಾರೆ. ಆದರೆ ತಕ್ಷಣ ಹಣ ಕೊಡೋದಕ್ಕೆ ನಾನೇನು ದುಡ್ಡಿನ‌ಗಿಡ ಹಾಕಿದ್ದೀನಾ? ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು. ಅದಕ್ಕೆ ಸ್ವಲ್ಪ ವಿಳಂಬವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

24ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಬಾರದ ಕಾರಣಕ್ಕೆ ಉದ್ಘಾಟನೆಯೇ ಇಲ್ಲದೆ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಕಾರ್ಯಕ್ರಮ ನಡೆಸಿತು.ಅಂತಿಮವಾಗಿ ಬೆಳಗ್ಗೆ 11:30ಕ್ಕೆ ಬರಬೇಕಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನ 2 ಗಂಟೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ್ರು.

ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರುತ್ತೇನೆ ಎನ್ನುತ್ತಾ ಮಾತು ಆರಂಭಿಸಿದ ಸಿಎಂ,ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗುವುದರ ಜತೆಗೆ ವೈಯಕ್ತಿಕ‌ ಕಾರ್ಯಕ್ರಮಕ್ಕೂ ಹೋಗಲೇಬೇಕಿತ್ತು.ಇದಕ್ಕೆ ಬರಲು ಸಮಯ ಹೊಂದಾಣಿಕೆ ಕಷ್ಟವಾಗಿತ್ತು.ಸಚಿವರಿಗೆ ಹೋಗಿ ಬರಲು ತಿಳಿಸಿದ್ದೆ.ಆದರೆ ಎಲ್ಲಿ ಅಲೆಮಾರಿ ಬುಡಕಟ್ಟು ಜನರಿಗೆ ಮುಖ್ಯಮಂತ್ರಿಗಳು ಅಪಮಾನ ಮಾಡಿದ್ರು ಎಂದು ಕೆಲವರು ಪ್ರಚಾರ ಮಾಡಿ ಯಶಸ್ವಿಯಾಗುತ್ತಾರೆ ಎಂಬ ಆತಂಕದಿಂದ ನಾನೇ ಓಡಿ ಬಂದೆ‌ ಎಂದು ಸಮಜಾಯಿಷಿ ನೀಡಿದ್ರು.

ಆದಿವಾಸಿ ಅಲಮಾರಿ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಇರುವುದಕ್ಕೆ ನಮ್ಮೆಲ್ಕರ ತಪ್ಪುಗಳೂ ಕಾರಣವಾಗಿವೆ. ನೀವು ನಿಖರವಾದ ಸ್ಥಳವಿಲ್ಲ,ನೆಲೆ ಇಲ್ಲ ಊರೂರು ಅಲೆಯುತ್ತೀರಿ.ನೀವು ಒಂದು ಕಡೆ ನೆಲೆಯೂರಲು ಬೇಕಾದ ಮೀಸಲಾತಿ ಸೇರಿದಂತೆ ಯಾವುದೇ ಸೌಲಭ್ಯ ಸಿಕ್ಕಿಲ್ಲ.ನಿಮಗೆ ಅನ್ಯಾಯವಾಗಿದೆ.ಮೊದಲು ಊರೂರು ಅಲೆಯುವುದನ್ನು ನಿಲ್ಲಿಸಿ, ನೀವು ಒಗ್ಗಟ್ಟಾಗಿ.ಆಗ ನಿಮಗೆ ಮೀಸಲು ಸೌಲಭ್ಯ,ಶೈಕ್ಷಣಿಕ ಸೌಲಭ್ಯ ಕೊಡಲು ನಾವು ಸಿದ್ದ.ನಿಮ್ಮ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರೆಯಲು ನಾವು ಸಿದ್ದ.ಇದುವರಗೆ ಯಾವುದೇ ಸೌಲಭ್ಯ ಶೇ.10ರಷ್ಟೂ ನಿಮಗೆ ತಲುಪಿಲ್ಲ ಎಂದ್ರು.

ಸಾಲಮನ್ನಾ ಮಾಡಿದ್ದೇನೆ,ಇದ‌ರ‌ ಜಾರಿ ಪ್ರಕ್ರಿಯೆಯೂ ನಡೆಯುತ್ತಿದೆ ಆದರೂ ಮಾಧ್ಯಮಗಳಲ್ಲಿ ಯಾಕೆ ನನ್ನ ವಿರುದ್ದ ಪ್ರಚಾರ ಮಾಡುತ್ತಿದ್ದಾರೋ ತಿಳಿಯದು.ಅದೇನು ಅಪ ಪ್ರಚಾರ ಮಾಡುತ್ತಾರೋ ಮಾಡಿಕೊಳ್ಳಲಿ ಎರಡು ದಿನ ಆದ್ರೆ ಜನ ಮರೆತು ಹೋಗುತ್ತಾರೆ ಎಂದ್ರು.

ಶಾದಿ ಭಾಗ್ಯ ಯೋಜನೆಗೆ ಕುಮಾರಸ್ವಾಮಿ ಅನುದಾನ ಕಡಿತ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಿದ್ದಾರೆ.ನನಗೆ ಅದರ ಬಗ್ಗೆ ಗೊತ್ತೇ ಇಲ್ಲ.ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಯಾವುದೇ ಯೋಜನೆಗೆ ಹಣಕಾಸು ಕಡಿತ ಮಾಡಿಲ್ಲ.ನಾನು ತಪ್ಪೇ ಮಾಡದೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.ಬಡವರಿಗಾಗಿ ನಾನು ಮುಖ್ಯಮಂತ್ರಿ ಯಾಗಿದ್ದೇನೆ‌ ಎಂದ್ರು.

ಬಡವರ ಮಕ್ಕಳಿಗೆ ಈ ರಾಜ್ಯದಲ್ಲಿ ಯಾವುದಾದರೂ ಒಂದು ಬ್ಯಾಂಕ್ ವಿದ್ಯಾಭ್ಯಾಸಕ್ಕೆ ಸಾಲ ಕೊಟ್ಟ ಉದಾಹರಣೆಗೆ ಇಲ್ಲ.
ಜನತಾದಳದ ಕಾರ್ಯಕರ್ತರಿಗೆ ವಿಧಾನಸೌಧ ಪ್ರವೇಶ ನಿಷೇಧ ಎಂದು ಟಿವಿ ಚಾನಲ್ ಒಂದು ಪ್ರಸಾರ ಮಾಡುತ್ತಿತ್ತು.ನಾನು ಯಾರನ್ನೂ ನಿಷೇಧಿಸಿಲ್ಲ.ಕೃಷ್ಣಾದಲ್ಲಾಗಲಿ,ವಿಧಾನಸೌಧಕ್ಕಾಗಲಿ ಜನ ನನ್ನ ಬಳಿಗೆ ಯಾಕೆ ಬರುತ್ತಾರೆ.ನೀವು ಅಷ್ಟೇ ನನ್ನ ಉಪಯೋಗ ಮಾಡಿಕೊಳ್ಳಿ.ನಿಮ್ಮ ಜತೆ ಮಾತನಾಡುತ್ತೇನೆ. ಒಬ್ಬ ತಂದೆಯಾಗಿ ಮಗನ ಜೀವನ ರೂಪಿಸಬೇಕಾದ ಕರ್ತವ್ಯವೂ ನಮ್ಮ ಮೇಲಿದೆ.ದಿನದ 24 ಗಂಟೆಯಲ್ಲಿ ಮಗನ ಮುಖ ನೋಡಲೂ ಆಗುತ್ತಿಲ್ಲ.ನನ್ನ ಕಷ್ಟ ನನಗೆ ಗೊತ್ತು ಎಂದ್ರು.