ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು  ಸಹಾಯವಾಣಿ!

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್‌ ವಿದ್ಯಾರ್ಥಿಗಳ ಯಾವುದೇ ದೂರುಗಳಿದ್ದರೂ ಸಮಾಜ ಕಲ್ಯಾಣ ಇಲಾಖೆ ನೂತನವಾಗಿ ತೆರೆದಿರುವ ಸಹಾಯವಾಣಿಗೆ ಕರೆ ಮಾಡುವ ಮೂಲಕ ಶೀಘ್ರವೇ ಸಮಸ್ಯೆ ಬಗೆಹರಿಸಿಕೊಳ್ಳಲು ವೇದಿಕೆ ಮಾಡಿಕೊಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ನೃಪತುಂಗಾ ರಸ್ತೆಯಲ್ಲಿರುವ ಯವನಿಕಾದಲ್ಲಿ ಸಮಾಜ ಕಲ್ಯಾಣ ಇಲಾಖೆ ತೆರೆದಿರುವ ನೂತನ ‘ಕಲ್ಯಾಣ ಕೇಂದ್ರ’ ಸಹಾಯವಾಣಿ‌ಗೆ ಚಾಲನೆ ನೀಡಿ‌ ಮಾತನಾಡಿದ ಪರಮೇಶ್ವರ್,  ಹಾಸ್ಟೆಲ್‌ನಲ್ಲಿರುವ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಒಟ್ಟು 2.5 ಸಾವಿರ ಹಾಸ್ಟೆಲ್‌ಗಳು ನಡೆಸುತ್ತಿವೆ.‌ ಈ ಹಾಸ್ಟೆಲ್‌‌ಗಳಲ್ಲಿ ಊಟದ ವ್ಯವಸ್ಥೆ, ಹಾಸಿಗೆ ದಿಂಬು, ವಸತಿ ಇತರೆ ಮೂಲಸೌಕರ್ಯದ ಸಮಸ್ಯೆಗಳಿದ್ದರೆ ವಿದ್ಯಾರ್ಥಿಗಳು ಈ‌ ಸಹಾಯವಾಣಿಗೆ ಕರೆ ಅಥವಾ ವಾಟ್ಸ್‌ಅಪ್‌ ಮಾಡುವ‌ ಮೂಲಕ ಸಮಸ್ಯೆ ತೋಡಿಕೊಳ್ಳಬಹುದು. ಜೊತೆಗೆ ಸಲಹೆಗಳನ್ನೂ ನೀಡಬಹುದು‌ ಎಂದರು.

ಈ ದೂರಿಗೆ ಮೊದಲಿಗೆ ತಹಶಿಲ್ದಾರರು ಸ್ಪಂದಿಸಲಿದ್ದಾರೆ.‌ ಇಲ್ಲದಿದ್ದರೆ ಜಿಲ್ಲಾಧಿಕಾರಿ, ರಾಜ್ಯ‌ಮಟ್ಟದವರೆಗೂ ಹೋಗಲಿದೆ. ಇಲ್ಲಿಯೂ ಪರಿಹಾರ ಸಿಗದಿದ್ದರೆ ಸಚಿವರ ಮಟ್ಟಕ್ಕೆ ಹೋಗಲಿದ್ದು, ಒಟ್ಟಾರೆ ಹಾಸ್ಟೆಲ್‌ನ ಎಸ್‌ಸಿ ಎಸ್‌ಟಿ ಮಕ್ಕಳ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಸಹಾಯವಾಣಿ ಸಂಖ್ಯೆ- 080- 22634300, ವಾಟ್ಸ್‌ಅಪ್ ಸಂಖ್ಯೆ- 9901100000 ಗಳ ಮೂಲಕ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳ ಬಹುದಾಗಿದೆ. ಇದು ದೇಶದಲ್ಲೇ ಮೊದಲ ಕೇಂದ್ರವಾಗಿದೆ ಎಂದರು.

ಹಿಂದಿನಿಂದಲೂ ಎಸ್‌ಸಿ ಎಸ್‌ಟಿಗಳ ಸಮಸ್ಯೆ ಬಗ್ಗೆ ದೂರುಗಳು ಇದ್ದವು. ಸದನದಲ್ಲೂ ಸಾಕಷ್ಟು ಚರ್ಚೆಯಾಗಿವೆ.‌ ಆಯವ್ಯಯದಲ್ಲಿ ಬಿಡುಗಡೆಯಾಗುವ ಅಷ್ಟೂ ಅನುದಾನವೂ ಈ‌ಮಕ್ಕಳಿಗೆ ತಲುಪಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ‌ ಮಾಡುವುದೇ ಇಲಾಖೆ ಹಾಗೂ ಸರಕಾರದ ಉದ್ದೇಶ ಎಂದು ಹೇಳಿದರು.

ಸರಕಾರ ಹೆಚ್ಚುದಿನ ಉಳಿಯಲ್ಲ, ಅವರೇ ಕಚ್ಚಾಡಿಕೊಂಡು ಸರಕಾರ ಉರುಳಿಸುತ್ತಾರೆ: ಈಶ್ವರಪ್ಪ ಭವಿಷ್ಯ!

ಬೆಂಗಳೂರು: ಈ ಸರ್ಕಾರ ಜಾಸ್ತಿ ದಿನಗಳು ಉಳಿಯಲ್ಲ. ಅವರವರೇ ಜಗಳ ಆಡ್ಕೋತಾರೆ ಈ ಸರಕಾರ ಪರಸ್ಪರ ಜಗಳದಿಂದಲೇ ಬಿದ್ದು ಹೋಗುತ್ತದೆ. ಅವರು ಹಿಂಬಾಗಿಲ ಮೂಲಕ ಅಧಿಕಾರ ಹಿಡಿದಿದ್ದಾರೆ ಸರಕಾರ ಬಿದ್ದು ಹೋದ ಮೇಲೆ ಬಿಜೆಪಿ ಸರಕಾರ ಬರಲಿದೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ ಕಾರಾಗೃಹ ಜಮೀನು ವಿಚಾರ ಸಂಬಂಧ. ಡಿಸಿಎಂ, ಗೃಹ ಸಚಿವ ಡಾ.ಪರಮೇಶ್ವರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೀತು. ಕೆ.ಎಸ್.ಈಶ್ವರಪ್ಪ, ಡಿಜಿ ಐಜಿಪಿ ನೀಲಮಣಿ ರಾಜು ಮತ್ತು ಶಿವಮೊಗ್ಗ ಎಸ್ಪಿ ಜೊತೆ ಗೃಹ ಸಚಿವರು ಸಭೆ ನಡೆಸಿದ್ರು.

ಸಭೆ ಬಳಿಕ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ನಗರ ಸಾಂಸ್ಕೃತಿಕ ನಗರಿಯೂ ಹೌದು. ರಾಷ್ಟ್ರೀಯ ದಿನಾಚರಣೆಗಳ ಆಚರಣೆಗೆ ನಗರದಲ್ಲಿ ಸ್ಥಳ ಇರಲಿಲ್ಲ ಶಿವಮೊಗ್ಗದ ಹಳೇ ಜೈಲಿಗೆ ಸೇರಿದ 46 ಎಕರೆ ಜಾಗ ಇದೆ ಈ ಜಾಗದಲ್ಲಿ ವಿಜಯದಶಮಿ, ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಕೊಡುವಂತೆ ಕೇಳಿಕೊಂಡಿದ್ದೇವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕಾಮಗಾರಿ ಆರಂಭಿಸಲಿದ್ದಾರೆ. ಸರಕಾರ ಈ ಸ್ಥಳದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಒಪ್ಪಿಗೆ ಕೊಟ್ಟಿದೆ ಎಂದ್ರು.

ನಮ್ದು ಹಿಂಭಾಗಿಲಿನ ರಾಜಕೀಯವಲ್ಲ ಅವರವರೇ ಹೊಡೆದಾಟ್ಕೊಂಡು ಜೀವ ಕಳೆದುಕೊಳ್ತಾರೆ ಅವರ ಹೊಡೆದಾಟದಿಂದ ಸರ್ಕಾರ ಅತಿಬೇಗ ಬಿದ್ದೋಗುತ್ತೆ ಅದು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೂ ಚೆನ್ನಾಗಿಗೊತ್ತು. ಚುನಾವಣೆಗೂ ಮೊದಲು ಕಾಂಗ್ರೆಸ್ ತಾವೇ ಸರ್ಕಾರ ಮಾಡೋದು ಅಂತ ಬೊಗಳೆ ಬಿಡ್ತಿದ್ದರು.ರಾಜ್ಯ, ಧರ್ಮ ಎಲ್ಲವನ್ನೂ ಒಡೆಯೋ ಕೆಲಸ ಮಾಡಿದ್ದಾರೆ. ಸಮಾಜವನ್ನು ತುಂಡು ಮಾಡೋ ಪ್ರಯತ್ನ ಮಾಡಿದ್ರು.ಹಿಂದುಗಳ ಮೇಲೆ ದೌರ್ಜನ್ಯ ಮಾಡಿಸಿದರು.ನಾಚಿಕೆ ಇಲ್ಲದೆಯೇ ಹಿಂಬಾಗಿಲಿನಿಂದ ಜೆಡಿಎಸ್ ಜೊತೆ ಕೈ ಜೋಡಿಸಿದ್ದಾರೆ.ವಿರೋಧ ಪಕ್ಷದಲ್ಲಿ ಸಂತೋಷವಾಗಿದ್ದೇವೆ. ನಾವೇನೂ ಮಾಡಬೇಕಾಗಿಲ್ಲ.ಅವರವರೇ ಕಚ್ಚಾಡಿಕೊಂಡು ಸರ್ಕಾರ ಬಿದ್ದುಹೋಗತ್ತೆ.ಆಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರತ್ತೆ ಎಂದ್ರು.

ಲೋಕೋಪಯೋಗಿ ಇಲಾಖೆಯ ವರ್ಗಾವಣೆಗೆ ಶಿಫಾರಸ್ಸು ಮಾಡಿರೋದು ನಿಜ ಒಬ್ಬ ಶಾಸಕನಾಗಿ ಉತ್ತಮ ಅಧಿಕಾರಿ ಹಾಕಿ ಕೊಡಿ ಅಂತಾ ಕೇಳುವ ಅಧಿಕಾರ ಇದೆ‌ ಅದನ್ನ ರೇವಣ್ಣ ಪ್ರಶ್ನೆ ಮಾಡೋದಕ್ಕೆ ಆಗಲ್ಲ ಆದ್ರೆ ರೇವಣ್ಣ ಎಲ್ಲ ಇಲಾಖೆ ವರ್ಗಾವಣೆಗೆ ಕೈ ಹಾಕೋದು ಏಕೆ.? ದೇಶದ ವರ್ಗಾವಣೆಯಲ್ಲಿ ಕೈ ಹಾಕ್ತಾರೆ ಎಂದುಸ ಚಿವ ಹೆಚ್.ಡಿ. ರೇವಣ್ಣಗೆ ಮಾಜಿ ಡಿಸಿಎಂ ಈಶ್ವರಪ್ಪ ತಿರುಗೇಟು ನೀಡಿದ್ರು.

ಇಷ್ಟು ದಿನ ಉದ್ಯೋಗ ಇಲ್ಲದೆ ಇದ್ದವರು‌ ಅವರು ಬಿಜೆಪಿ ಬಗ್ಗೆ ಮಾತ‌ನಾಡಬಾರದು.ಸಿದ್ದರಾಮಯ್ಯ ಅವರನ್ನ ಹೊರಗೆ ಹಾಕಿದ ನಂತ್ರ ಅವರಿಗೆ ಉದ್ಯೋಗ ಇರಲಿಲ್ಲ ದೇವೇಗೌಡರ ಹತ್ರ ಹೋಗಿ ಶಾಸಕರಾಗಿದ್ದಾರೆ ಅವರು ಬಿಜೆಪಿ ಬಗ್ಗೆ ಮಾತಾಡಬಾರದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ರು.

ವಕೀಲರಿಗೆ ನ್ಯಾಯ ಕೊಡಿಸಲು ಬದ್ಧ: ಡಿಸಿಎಂ ಪರಂ

ಬೆಂಗಳೂರು: ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ದಾಂಡೇಲಿಯಾ ವಕೀಲ ಅಜಿತ್‌ ನಾಯಕ್ ಪ್ರಕರಣದ ತನಿಖೆ ನಡೆಯುತ್ತಿದ್ದು, ನ್ಯಾಯ ಸಿಗದೇ ಹೋದರೆ ವಿಶೇಷ ತನಿಖೆಗೆ ವಹಿಸುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಬೆಂಗಳೂರು ವಕೀಲರ ಘದ ಅಧ್ಯಕ್ಷ ರಂಗನಾಥ್ ನೇತೃತ್ವದಲ್ಲಿ ವಕೀಲರು ವಿಧಾನಸೌಧದಲ್ಲಿ ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭೇಟಿ ಮಾಡಿ ಅಜಿತ್‌ ನಾಯಕ್‌ ಕೊಲೆ ಪ್ರಕರಣವನ್ನು ಸಿಐಡಿ ಅಥವಾ ವಿಶೇಷ ತನಿಖೆ‌ಗೆ ವಹಿಸುವಂತೆ ಮನವಿ‌‌ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪರಮೇಶ್ವರ್, ಅಜಿತ್‌ ನಾಯಕ್ ಪ್ರಕರಣದ ತನಿಖೆ ಈಗಾಗಲೇ ನಡೆಯುತ್ತಿದೆ. ಈ ತನಿಖೆಯಲ್ಲಿ‌ ನ್ಯಾಯ ಸಿಗದೇ ಹೋದರೆ ಮುಂದಿನ‌ ಕ್ರಮ ತೆಗೆದುಕೊಳ್ಳುತ್ತೇವೆ. ನ್ಯಾಯವಾದಿಗಳಿಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ಧಾರಿ ಎಂದರು.

ಮೈತ್ರಿ ಸರ್ಕಾರದಿಂದ ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ!

ಬೆಂಗಳೂರು: ಆಡಳಿತ ವರ್ಗಕ್ಕೆ ಮೈತ್ರಿ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, ೨೦ ಐಎಎಸ್‌ ಅಧಿಕಾರಿಗಳನ್ನು ನಿನ್ನೆ ವರ್ಗಾವಣೆ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಇಷ್ಟೇ ಪ್ರಮಾಣದಲ್ಲಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿತ್ತು.

ಇದೀಗ ಪುನಃ ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕೆಲವು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.

ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ

ಸೆಲ್ವಕುಮಾರ್- ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.

ಎಂ‌.ವಿ. ಸಾವಿತ್ರಿ- ಕಾರ್ಯಾದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಇಲಾಖೆ.

ಆರ್. ವಿಶಾಲ್- ಆಯುಕ್ತರು, ಗ್ರಾಮೀಣ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಶೌಚಾಲಯ ಸಂಸ್ಥೆ.

ಸಿ. ಶಿಖಾ- ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ.

ಬಿ.ಎಸ್. ಶೇಖರಪ್ಪ- ನಿರ್ದೇಶಕರು, ಪೌರಡಳಿತ ಇಲಾಖೆ.

ಮನೋಜ್ ಜೈನ್- ವ್ಯವಸ್ಥಾಪಕ ನಿದೇರ್ಶಕರು, ಕರ್ನಾಟಕ ಲೋಕೋಪಯೋಗಿ ಭೂ ನಿಗಮ.

ಪಿ. ರಾಜೇಂದ್ರ ಚೋಳನ್- ವ್ಯವಸ್ಥಾಪಕ ನಿದೇರ್ಶಕರು, ಅಗ್ನೇಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ.

ಟಿ.ಹೆಚ್.ಎಂ .ಕುಮಾರ್- ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ.

ಎಂ. ಕನಗವಲ್ಲಿ. ನಿದೇರ್ಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ.

ಎಂ.ಜಿ.ಹಿರೇಮಠ- ಜಿಲ್ಲಾಧಿಕಾರಿ, ಗದಗ.

ಕೆ.ಎ. ದಯಾನಂದ- ಜಿಲ್ಲಾಧಿಕಾರಿ, ಚಿಕ್ಕಮಗಳೂರು.

ಪಮ್ಮಳ ಸುನಿಲ್ ಕುಮಾರ್- ಜಿಲ್ಲಾಧಿಕಾರಿ- ಕೊಪ್ಪಳ

ಸುದರ್ಶನ್ ಬಾಬು. ಎಂ- ವ್ಯವಸ್ಥಾಪಕ ನಿದೇರ್ಶಕರು, ಹೆಸ್ಕಾಂ( ಹುಬ್ಬಳ್ಳಿ)

ಚಾರುಲತಾ ಸೋಮಲ್- ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ.

ಸುರಲ್ಕರ್ ವಿಕಾಸ್ ಕಿಶೋರ್- ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ( ಕಲಬುರಗಿ).

ಡಾ. ಅರುಂಧತಿ ಚಂದ್ರಶೇಖರ್- ನಿದೇರ್ಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಸಿ.ಎನ್. ಮೀರಾ ನಾಗರಾಜ್- ಉಪ ಕಾರ್ಯದರ್ಶಿ, ಮುಖ್ಯ ಮಂತ್ರಿಗಳು.

ಗಂಗೂಬಾಯಿ ರಮೇಶ್ ಮಣಕರ್- ಸಿಇಓ, ಬಾಗಲಕೋಟ ಜಿಲ್ಲಾ ಪಂಚಾಯತ್.

ಮಹೇಂತೇಶ್ ಬಿಳಗಿ- ಸಿಇಓ, ವಿಜಯಪುರ ಜಿಲ್ಲಾ ಪಂಚಾಯತ್.

ಸೋಮವಾರ ಸಂಜೆ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಸಂಜೆ ಹೊರಡಿಸಿದ್ದ ಆದೇಶವನ್ನು ತಡರಾತ್ರಿ ಬದಲಾಯಿಸಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಶ್ರೀರಂಗಯ್ಯ ಮುಂದುವರೆದಿದ್ದಾರೆ. ಈ ಹುದ್ದೆಗೆ ವರ್ಗಾಯಿಸಿದ್ದ ಕೆ.ಎ.ದಯಾನಂದ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸದ್ಯ ಶಿವಮೊಗ್ಗ ಡಿ.ಸಿ.ಯಾಗಿರುವ ಲೋಕೇಶ್ ಅವರಿಗೆ ಯಾವುದೇ ಸ್ಥಾನ ತೋರಿಸಿಲ್ಲ. ದಯಾನಂದ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಂತಹ ಮಹತ್ವದ ಹುದ್ದೆಯಲ್ಲಿದ್ದವರು.

ಕೆರೆ ಅಭಿವೃದ್ಧಿ: ಸಮಗ್ರ ಪ್ರಸ್ತಾವನೆ ಸಲ್ಲಿಸಲು ಸಿಎಂ ಸೂಚನೆ

ಬೆಂಗಳೂರು: ರಾಜ್ಯದ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವ ಕುರಿತು ಸಮಗ್ರ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಹಣೆ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಗಳು ಈ ಸೂಚನೆ ನೀಡಿದರು.

ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಖುದ್ದು ಆಸಕ್ತಿ ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಹೂಳೆತ್ತುವ ಹೆಸರಲ್ಲಿ ಅನುದಾನ ದುರುಪಯೋಗ ಆಗಬಾರದು. ಕೆರೆಗಳ ಸಂಗ್ರಹಣಾ ಸಾಮರ್ಥ್ಯ ಹೆಚ್ಚಳವಾಗಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಇಲಾಖೆಯನ್ನು ಬಲಪಡಿಸಿ ಕೆರೆಗಳ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಅರಣ್ಯ ಸಚಿವ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ದೆಹಲಿಯಲ್ಲಿ ಸರ್.ಎಂ.ವಿ ಮೆಟ್ರೋ ನಿಲ್ದಾಣ ಉದ್ಘಾಟನೆ: ಕನ್ನಡದಲ್ಲಿ ಅಭಿನಂದನೆ ಸಲ್ಲಿಸಿದ ಸಚಿವ ಅನಂತಕುಮಾರ್

ನವದೆಹಲಿ: ಮೋತಿಬಾಗ್‌ನ ಕರ್ನಾಟಕ ಸಂಘದ ಪಕ್ಕದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಟ್ಟಿರುವುದಕ್ಕೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ಬಾರಾ ಖಾಂಭಾ ಮೆಟ್ರೋ ನಿಲ್ದಾಣದಲ್ಲಿ ಇಂದು ನಡೆದ ಸರ್ ಎಂ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಆರುವರೆ ಕೋಟಿ ಜನರ ಪರವಾಗಿ ಕನ್ನಡದಲ್ಲಿ ಅಭಿನಂದನೆ ಸಲ್ಲಿಸಿ ವಿಶೇಷತೆ ಮೆರೆದರು.

ದೇಶದಲ್ಲಿ ಮೆಟ್ರೋ ರೈಲಿನ ಯೋಜನೆ ಸಾಕಾರಗೊಳ್ಳಲು ಮೊದಲನೇ ದಿನದಿಂದಲೂ ಜಪಾನ್ ನೀಡುತ್ತಿರುವ ಸಹಾಯಕ್ಕೆ ಜಪಾನ್ ದೇಶದ ರಾಯಭಾರಿಗೆ ತಮ್ಮ ಅಭಿನಂದನೆ ಸಲ್ಲಿಸಿದರು. ಸರ್ ಎಂ ವಿಶ್ವೇಶ್ವರಯ್ಯ ಅವರು ಕರ್ನಾಟಕ ರಾಜ್ಯದವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ. ಅವರು ಮೈಸೂರಿನ ದಿವಾನರಾಗಿ ಹಾಗೂ ಜನಪ್ರಸಿದ್ದ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ವಿಶ್ವದಾದ್ಯಂತ ಸುಮಾರು 70 ಕ್ಕೂ ಹೆಚ್ಚು ನೀರಾವರಿ ಯೋಜನೆಗಳ ಹರಿಕಾರ ಅವರು ಎಂದು ಶ್ಲಾಘಿಸಿದರು.

ಕರ್ನಾಟದ ರಾಜ್ಯದ ಅಳಿಯ ಕೇಂದ್ರದ ನಗರಾಭಿವೃದ್ದಿ ಮಂತ್ರಿ ಹರದೀಪ್ ಸಿಂಗ್ ಪೂರಿ ಇಂದು ಈ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನಿಡುವ ಮೂಲಕ ಆರೂವರೆ ಕೋಟಿ ಜನರಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. 2001 ನೇ ಸಾಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರಕಾರದಲ್ಲಿ ತಾವು ಕೇಂದ್ರ ನಗರಾಭಿವೃದ್ದಿ ಇಲಾಖೆಯ ಚುಕ್ಕಾಣಿ ಹಿಡಿದಿದ್ದನ್ನು ನೆನೆಪಿಸಿಕೊಂಡ ಅವರು, ರಾಷ್ಟ್ರೀಯ ನಗರ ಸಾರಿಗೆ ನೀತಿ ರೂಪಿಸಲು ಜವಾಬ್ದಾರಿಯನ್ನು ನೀಡಲಾಗಿತ್ತು. ಆ ನೀತಿಯಲ್ಲಿ ದೆಹಲಿ, ಬೆಂಗಳೂರು, ಕೋಚಿನ್, ಹೈದರಾಬಾದ್, ಅಹ್ಮದಾಬಾದ್, ಲಕ್ನೋ ಮತ್ತು ಮುಂಬಯಿ ನಗರಗಳಲ್ಲಿ ಮೆಟ್ರೋ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು. ದೆಹಲಿ ಮೆಟ್ರೋ ಯೋಜನೆ ಅಟಲ್ ಬಿಹಾರಿ ವಾಜಪೇಯಿ ಅವರಿಂದಲೇ ಉದ್ಘಾಟನೆಗೊಂಡಿದ್ದನ್ನು ಸ್ಮರಿಸಿಕೊಂಡರು.

ರಾಷ್ಟ್ರೀಯ ನಗರ ಸಾರಿಗೆ ನೀತಿಯ ರಚನೆಯನ್ನು ಪ್ರಾರಂಭಿಸಿದ ವ್ಯಕ್ತಿಯಾಗಿ, ಇಂದು ದೇಶದಲ್ಲಿ 1 ರಿಂದ 500 ಕಿಲೋಮೀಟರ್ ಗಳಿಗೂ ಹೆಚ್ಚು ಮೆಟ್ರೋ ಮಾರ್ಗ ರಚನೆಯಾಗಿರುವುದನ್ನು ನೋಡಲು ಸಂತಸವಾಗುತ್ತದೆ ಎಂದರು. ಈ 500 ಕಿಲೋಮೀಟರ್ 1000 ಕಿಲೋಮೀಟರ್ ಗಳನ್ನು ತಲುಪಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು.