ಶ್ರೀರಂಗಪಟ್ಟಣ ಶಾಸಕರ ಬೆಂಬಲಿಗರಿಂದ ಹಲ್ಲೆ: ಮನನೊಂದ ಯುವಕ ನೇಣಿಗೆ ಶರಣು!

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಹಲ್ಲೆಯಿಂದ ಮನನೊಂದು ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಶರಣಾಗಿದ್ದಾನೆ.

ಶಾಸಕರ ವಿರುದ್ದ ಮಾತನಾಡಿದ ಮಾಜಿ ಶಾಸಕನ ಬೆಂಬಲಿಗ ಗೊಬ್ಬರಗಾಲ ಗ್ರಾಮದ ನಾಗೇಂದ್ರ(೨೮) ಹಲ್ಲೆಯಿಂದ ಮನನೊಂದು ಆತ್ಮಹತ್ಯೆ ಶರಣಾಗಿದ್ದು, ಯುವಕನ ಸಾವಿನಿಂದ ಗೊಬ್ಬರಗಾಲ ಗ್ರಾಮದಲ್ಲಿ ಉಧ್ವಿಗ್ನ ವಾತವರಣ ನಿರ್ಮಾಣವಾಗಿದೆ.

ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಾದ ದಿಲೀಪ, ರವಿ, ಮಧು, ಸೇರಿದಂತೆ 7 ಜನರ ವಿರುದ್ಧ ಅರೆಕೆರೆ ಪೊಲೀಸರು ತಡರಾತ್ರಿ ಪ್ರಕರಣ ದಾಖಲಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆಯಡಿ ipc ಸೆಕ್ಷನ್ 306 ಅಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಗ್ರಾಮದಲ್ಲಿ ಉದ್ವಿಗ್ನ‌ ವಾತಾವರಣ ಹಿನ್ನಲೆಯಲ್ಲಿ ಗ್ರಾಮಕ್ಕೆ ಒಂದು ಡಿ.ಆರ್. ಪೊಲೀಸ್ ತುಕುಡಿ ನಿಯೋಜನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆ ರವಾನಿಸಲಾಗಿದೆ.

ಎತ್ತಿನಹೊಳೆ ಯೋಜನೆ: 527 ಕೆರೆಗಳ ಹೂಳೆತ್ತಲು ಸಿಎಂ ಸೂಚನೆ

ಬೆಂಗಳೂರು: ಎತ್ತಿನಹೊಳೆ ಯೋಜನೆಯಡಿ 5 ಜಿಲ್ಲೆಗಳ ವ್ಯಾಪ್ತಿಯಲ್ಲಿನ 527 ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಈ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ, ಪಶ್ಚಿಮ ಘಟ್ಟಗಳಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಎತ್ತಿನಹೊಳೆ ಮತ್ತು ಅದರ ಉಪನದಿಗಳ ನೀರನ್ನು ಪೂರ್ವಾಭೀಮುಖವಾಗಿ ಹರಿಸಿ, ಬರ ಪೀಡಿತ ಜಿಲ್ಲೆಗಳಾದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು ಮತ್ತು ಅಂತರ್ಜಲ ಮರುಪೂರಣಕ್ಕಾಗಿ ಎತ್ತಿನಹೂಳೆ ಯೋಜನೆಯನ್ನು ರೂಪಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯು, ಯೋಜನೆಯಡಿ ನೀರು ಪೂರೈಸಲು ಉದ್ದೇಶಿಸಿರುವ ಕೆರೆಗಳ ಪುನಶ್ಚೇತನವನ್ನು ಹಂತ ಹಂತವಾಗಿ ಯೋಜನೆಯ ಜೊತೆ ಸಮಾನಾಂತರವಾಗಿ ಕೈಗೊಳ್ಳಲು ಹಾಗೂ ಈ ನೀರನ್ನು ಬಳಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆಯು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಎತ್ತಿನ ಹೊಳೆ ಯೋಜನೆಗೆ ಮೂರು ಭೂಸ್ವಾಧೀನಾಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ಇವರನ್ನು ತುರ್ತಾಗಿ ನೇಮಕ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದರು.

ಯೋಜನೆಗೆ ಅವಶ್ಯವಿರುವ 21 ಹಳ್ಳಿಗಳ 5000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಹಾಗೂ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್, ಕೃಷಿ ಸಚಿವ ಶಿವಶಂಕರ ರೆಡ್ಡಿ, ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜೆಡಿಎಸ್‌ಗೆ ನೂತನ ಸಾರಥಿ: ಎಚ್.ವಿಶ್ವನಾಥ್ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ!

ಬೆಂಗಳೂರು: ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಆಯ್ಕೆಯಾಗಿದ್ದು, ಪಕ್ಷದ ಬಾವುಟ ನೀಡುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ,ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಿದರು.

ರಾಜ್ಯಾಧ್ಯಕ್ಷರ ಆಯ್ಕೆ ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ, ಸರ್ವಾನುಮತದಿಂದ ವಿಶ್ವನಾಥರನ್ನ ಆಯ್ಕೆ ಮಾಡಿದ್ದೇವೆ. ಸಿದ್ದರಾಮಯ್ಯ ಅವಧಿಯಲ್ಲಿ ಎಂ.ಪಿ.ಪ್ರಕಾಶ್ ಆಯ್ಕೆಮಾಡಿದ್ದೆವು, ಮುಖ್ಯಮಂತ್ರಿಗಳಾದ ಬಳಿಕ ಕುಮಾರಸ್ವಾಮಿ ಎರಡೂ ಜವಾಬ್ದಾರಿ ಬೇಡ ಅಂದಿದ್ದರು. ಒಂದೂವರೆ ತಿಂಗಳ‌ ಹಿಂದೆಯೇ ಹೇಳಿದ್ದರು. ಈಗ ಎಲ್ಲರೂ ಒಮ್ಮತದಿಂದ ತೀರ್ಮಾನಿಸಿದ್ದೇವೆ. ಹೀಗಾಗಿ ಹೆಚ್.ವಿಶ್ವನಾಥ್ ರನ್ನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು.

ಹೊಸದಾಗಿ ಪದಾಧಿಕಾರಿಗಳನ್ನೂ ಆಯ್ಕೆ ಮಾಡುತ್ತೇವೆ. ಯುವಕರಿಗೆ ಹೆಚ್ಚಿನ ಅವಕಾಶ ಮಾಡಿಕೊಡುತ್ತೇವೆ. ಹಿಂದುಳಿದವರು, ಮುಸ್ಲಿಂರು, ಲಿಂಗಾಯುತರು ಹಾಗೂ ಇತರರಿಗೂ ಪಕ್ಷದ ವಿವಿಧ ಹುದ್ದೆಗಳಲ್ಲಿ ಅವಕಾಶ ನೀಡುತ್ತೇವೆ. ಈ ಬಾರಿ ಸಂಪೂರ್ಣವಾಗಿ ಯುವಕರಿಗೆ ಹೆಚ್ಚಿನ ಆಧ್ಯತೆ ನೀಡುತ್ತೇವೆ ಹಾಗೆ ಎಂದ ಮಾತ್ರಕ್ಕೆ ಹಿರಿಯರನ್ನೂ ನಾವು ಕಡೆಗಣಿಸುವುದಿಲ್ಲ ಹಿರಿಯರನ್ನ ವಿಶ್ವಾಸಕ್ಕೆ ತೆಗೆದುಕೊಂಡೇ ಪಕ್ಷವನ್ನ ಮುಂದುವರಿಯುತ್ತೇವೆ ಎಂದು ಹೇಳಿದರು.

10 ದಿನದೊಳಗೆ ಮತ್ತೆ ಸಭೆ ನಡೆಸಿ ಹೊಸ ಲೀಸ್ಟ್ ರಿಲೀಸ್ ಮಾಡ್ತೇವೆ. ಆಗಸ್ಟ್ 11 ರಿಂದ ರಾಜ್ಯ ಪ್ರವಾಸ ಮಾಡುತ್ತೇವೆ. ನಿಷ್ಕ್ರಿಯ ಘಟಕಗಳನ್ನ ಆ ಸಂದರ್ಭದಲ್ಲಿ ಬದಲಾಯಿಸುತ್ತೇವೆ. ಅಲ್ಲಿಯೂ ಹೊಸಬರಿಗೆ ಅವಕಾಶ ನೀಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ
ಆಗಸ್ಟ್ ೧೭ ರಿಂದ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಸಾಲಮನ್ನಾ ವಿಚಾರದ ಬಗ್ಗೆ ಬೇರೆ ಅರ್ಥ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷವೊಂದು ಗೊಂದಲ ಸೃಷ್ಟಿಸುತ್ತಿದೆ. ಕುಮಾರಸ್ವಾಮಿ ಬಜೆಟ್ ಮೂರೇ ಜಿಲ್ಲೆಗೆ ಸೀಮಿತವಾಗಿಲ್ಲ ಅದನ್ನ ನಾವು ಸಾಬೀತಿ ಪಡಿಸುತ್ತೇವೆ ಆ ಆರೋಪ ತೊಡೆಯಲು ಕಿರುಹೊತ್ತಿಗೆ ರಿಲೀಸ್ ಮಾಡಿಸುತ್ತೇವೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಮೈತ್ರಿ ವಿಚಾರವಾಗಿ ಮಾತನಾಡಿದ ಎಚ್ಡಿಡಿ, ಕಾಂಗ್ರೆಸ್ ಜೊತೆ ನಮಗೆ ಯಾವುದೇ ತಿಕ್ಕಾಟವಿಲ್ಲ. ಏಕಾಂಗಿಯಾಗಿಯೇ ನಾವು ಸ್ಪರ್ಧಿಸುತ್ತೇವೆ. ಸಂಘರ್ಷಕ್ಕೆ ಅವಕಾಶವಿಲ್ಲದೆ ಚುನಾವಣೆ ಎದುರಿಸುತ್ತೇವೆ ಕಾಂಗ್ರೆಸ್ ನಾಯಕರು ಇದನ್ನೇ ಹೇಳಿದ್ದಾರೆ. ದಿನೇಶ್ ಗುಂಡೂರಾವ್ ನನ್ನ ಜೊತೆ ಚರ್ಚಿಸಿದ್ದಾರೆ. ಅವರೂ ಇದನ್ನೇ ಹೇಳಿದ್ದಾರೆ ಇದು ನಮಗೂ ಅರ್ಥವಾಗಿದೆ ಹೀಗಾಗಿ ಏಕಾಂಗಿಯಾಗಿ ಸ್ಪರ್ಧೆಗೆ ನಿರ್ಧರಿಸಿದ್ದೇವೆ ಇದರಿಂದ ಸಮ್ಮಿಶ್ರ ಸರ್ಕಾರದ ಮೈತ್ರಿಗೆ ತೊಂದರೆಯಿಲ್ಲ ಎಂದು ಸ್ಪಷ್ಟ ಪಡಿಸಿದರು.

ಪ್ರತ್ಯೇಕ‌ ಉತ್ತರ ಕರ್ನಾಟಕ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಅವರ ಹೇಳಿಕೆಯಿಂದ ನಮಗೆ ಆತಂಕವೇನಿಲ್ಲ. ನೀರಾವರಿ ಮಂತ್ರಿ, ಸಿಎಂ ಹಾಗೂ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ ನಾನು ಜಾತಿ ಇಟ್ಟುಕೊಂಡು ಕೆಲಸ ಮಾಡಿದವನಲ್ಲ ಪಾಪ ಅವರಿಗೆ ಇದನ್ನ ಜ್ಞಾಪಕ ಮಾಡಿಕೊಡುತ್ತೇನೆ. ಅವರ ಜೊತೆ ಮಾತನಾಡುವುದೇನಿದೆ ನನ್ನ ಜನತೆಯ ಮುಂದೆ ಕೂತು ನಾನೇ ಮಾತನಾಡುತ್ತೇನೆ. ಸಿದ್ದರಾಮಯ್ಯ ಏನು ಬಜೆಟ್ ನಲ್ಲಿ ಇಟ್ಟಿದ್ದಾರೆ. ನಾವು ಏನು ಬಜೆಟ್ ನಲ್ಲಿ ಏನು ಘೋಷಿಸಿದ್ದೆವು, ಅವರೆಡನ್ನೂ ನಾವೇ ಕಿರುಹೊತ್ತಿಗೆ ಮೂಲಕ ತರುತ್ತೇವೆ ಬಿಜೆಪಿಯವರು ಇದರಲ್ಲಿ ಹೇಳುವುದೇನಿದೆ ಎಂದರು.

ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ವಿಶ್ವನಾಥ್ ಮಾತನಾಡಿ, ದೊಡ್ಡವರು ನನಗೆ ಉತ್ತಮ ಅವಕಾಶ ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. ದೊಡ್ಡ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ಅದನ್ನ ಎಲ್ಲರ ಜೊತೆ ಸೇರಿ ನಿಭಾಯಿಸುತ್ತೇನೆ ಎಂದು ಹೇಳಿದರು.

ನಮ್ಮ ಮುಂದೆ ಇರುವುದು ನಮ್ಮ ಸರ್ಕಾರದ ತೀರ್ಮಾನ. ಸರ್ಕಾರದ ತೀರ್ಮಾನಗಳನ್ನ‌ ಜನರಿಗೆ ಅರ್ಥೈಸುವ ಕೆಲಸ ಮಾಡುತ್ತೇನೆ. ಜನರಿಗೆ ಸತ್ಯ ಮುಟ್ಟಿಸುವ ಕೆಲಸ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಅತಿ‌ಹೆಚ್ಚು ಸ್ಥಾನ ಗಳಿಸುತ್ತೇವೆ. ಈ ನಿಟ್ಟಿನಲ್ಲಿ ಹೆಚ್ಷು ಕ್ರಿಯಾಶೀಲ ಕೆಲಸ ಮಾಡುತ್ತೇವೆ. ಮುಂದೆ ಎಲ್ಲಾ ಜಾತಿ, ಧರ್ಮದ ಯುವಕ-ಯುವತಿಯರಿಗೆ ಅವಕಾಶ ನೀಡಿ ನಮ್ಮ ಜೊತೆಯಲ್ಲೇ ಕರೆದೊಯ್ಯುವ ಕೆಲಸ ಮಾಡುತ್ತೇನೆ. ಕೊನೆಯ ಉಸಿರಿರುವರೆಗೆ ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷದ ಜೊತೆಯಲ್ಲೇ ನಾನು ಸಾಗುತ್ತೇನೆ ಎಂದರು.

ತಡವಾದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌, ಡಿಎಆರ್ ಮರು ಪರೀಕ್ಷೆಗೆ ಅನುವು: ಸಿಎಂ

ಬೆಂಗಳೂರು: ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ರೈಲ್ವೆ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕೊಲ್ಲಾಪುರದಿಂದ ಬೆಂಗಳೂರಿಗೆ ಆಗಮಿಸುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ 6.30ಕ್ಕೆ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ, ಕೊಲ್ಹಾಪುರದಿಂದ ಹೊರಟ ಈ ಟ್ರೈನ್ ಬೆಳಗಾವಿ ದಾಟಿದ ಬಳಿಕ ಧಾರವಾಡಕ್ಕೂ ಮುಂಚೆ ಬರುವ ಕಂಬಾರ ಗಣವಿ ನಿಲ್ದಾಣದಲ್ಲಿ ನಿಂತು ಬಿಟ್ಟಿತ್ತು. ಸುಮಾರು 9 ಗಂಟೆ ಹೊತ್ತಿಗೆ ಟ್ರೈನ್‍ನ ಎಲ್ಲ ಬೋಗಿಗಳನ್ನು ಕಂಬಾರ ಗಣವಿ ನಿಲ್ದಾಣದಲ್ಲಿ ಬಿಟ್ಟು ಇಂಜಿನ್‌ನ್ನು ಮಾತ್ರ ತೆಗೆದುಕೊಂಡು ಹೋಗಿ ಮುಂದಿನ ಮಾರ್ಗದಲ್ಲಿ ಕೆಟ್ಟು ನಿಂತಿದ್ದ ಗೂಡ್ಸ್ ಟ್ರೇನ್ ತೆರವುಗೊಳಿಸಲು ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ನ ಇಂಜಿನ್ ಬಳಸಿದ್ರು.

ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಇಂಜಿನ್, ಗೂಡ್ಸ್ ರೈಲನ್ನು ಧಾರವಾಡಕ್ಕೆ ತಲುಪಿಸಿ ಮರಳಿ ಬೋಗಿಗೆ ಬಂದು ಸೇರಿದ್ದು, ನಸುಕಿನ ಜಾವ 2 ಗಂಟೆಗೆ. ಅಲ್ಲಿಯವರೆಗೂ ಯಾವುದೇ ಸರಿಯಾದ ವ್ಯವಸ್ಥೆಯೂ ಇಲ್ಲದ ಕಂಬಾರಗಣವಿಯ ಪುಟ್ಟ ನಿಲ್ದಾಣದಲ್ಲಿಯೇ ಪ್ರಯಾಣಿಕರು ಪರದಾಡಬೇಕಾಯಿತು.

ಬೆಳಗ್ಗೆ 6.30 ಕ್ಕೆ ಬೆಂಗಳೂರಿಗೆ ತಲುಪಬೇಕಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಸುಮಾರು ಇನ್ನೂ ಕೂಡ ಬೆಂಗಳೂರು ತಲುಪಿಲ್ಲ. ಸುಮಾರು 1 ಗಂಟೆಗೆ ರೈಲು ಬೆಂಗಳೂರು ತಲುಪುವ ಸಾಧ್ಯತೆ ಇದೆ.

ಬೆಳಗಾವಿ ಹಾಗೂ ಧಾರವಾಡ ಭಾಗದಿಂದ ಬೆಂಗಳೂರಿಗೆ ಡಿ.ಆರ್ ಪರೀಕ್ಷೆ ಬರೆಯಲು ಇದೇ ರೈಲಿನಲ್ಲಿ ಬರುತ್ತಿದ್ದ ಸಾವಿರಾರೂ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಲಾಗದೇ ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ, ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ರೈಲ್ವೆ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ. ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೂ ಅವಕಾಶ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ರೀತಿ‌ ಘಟನೆಗಳಾಗದಂತೆ ನಿಗಾ ವಹಿಸಲು ರೈಲ್ವೆ ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರಿಂದ ಡ್ರಗ್ ಮಾಫಿಯಾ ಹೆಚ್ಚಿದೆ: ಆರ್.ಅಶೋಕ್

ಬೆಂಗಳೂರು: ಪ್ರತಿದಿನ ಬೆಂಗಳೂರಿಗೆ ಅಕ್ರಮ ಬಾಂಗ್ಲಾ ವಲಸಿಗರು ಬಂದಿಳಿಯುತ್ತಿದ್ದಾರೆ. ಅವರಿಗೆಲ್ಲಾ ಓಟರ್ ಐಡಿ ಕೊಟ್ಟು ಪಶ್ಚಿಮ ಬಂಗಾಳದವರು ಎಂದು ಬಿಂಬಿಸಲಾಗುತ್ತಿದೆ. ಮುಂದೊಂದು ದಿನ ಅಸ್ಸಾಂಗೆ ಆದ ಪರಿಸ್ಥಿತಿಯೇ ಬೆಂಗಳೂರಿಗೂ ಆಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್,
ಮುಂದೊಂದು ದಿನ ನಮ್ಮೆಲ್ಲಾ ಆಸ್ತಿಪಾಸ್ತಿ ಬಾಂಗ್ಲಾ ವಲಸಿಗರ ಪಾಲಾಗುತ್ತವೆ. ಬೆಂಗಳೂರಿನ ಡ್ರಗ್ ಮಾಫಿಯಾದಲ್ಲಿ ಇರುವವರೆಲ್ಲಾ ಅಕ್ರಮ ಬಾಂಗ್ಲಾ ವಲಸಿಗರು ಮತ್ತು ನೈಜೀರಿಯಾದವರು. ಈಗ ನಾವು ಇದರ ವಿರುದ್ದ ದೊಡ್ಡ ಹೋರಾಟ ರೂಪಿಸಬೇಕಾಗಿದೆ. ಕಾರ್ಪೋರೇಟರ್‌ಗಳು ನಮ್ಮ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನಲ್ಲಿ ಡ್ರಗ್ ಮಾಫಿಯಾ ಮಿತಿ ಮೀರಿದೆ. ಶಾಲಾ ಕಾಲೇಜುಗಳಲ್ಲಿ ಹಾಗೂ ಬೀದಿ ಬೀದಿಗಳಲ್ಲಿ ತರಕಾರಿ ಸಿಗುವಂತೆ ಡ್ರಗ್ ಮಾರಾಟವಾಗುತ್ತಿದೆ. ಈ ಸಂಬಂಧ ನಾವು ಸೋಮವಾರ ಪೊಲೀಸ್ ಕಮೀಷನರ್ ರನ್ನು ಭೇಟಿ ಮಾಡಿ ಡ್ರಗ್ ಮಾಫಿಯಾ ವಿರುದ್ದ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದರು.

ಈಗ ಅಕ್ರಮ ಬಾಂಗ್ಲಾ ವಲಸಿಗರು ದೇಶದಲ್ಲಿ ಇದ್ರೆ ಏನು ತಪ್ಪು ಎಂದು ಕೇಳುತ್ತಿರುವ ಮಮತಾ ಬ್ಯಾನರ್ಜಿ ಮುಂದೆ ಪಾಕಿಸ್ತಾನೀಯರು, ಐಎಸ್ ಐಎಸ್ ನವರು ಭಾರತದಲ್ಲಿ ಇದ್ರೆ ಏನು ತಪ್ಪು ಎಂದು ಕೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ದೀವಾಳಿಯಾಗಿದೆ. ಬೆಂಗಳೂರಿಗೆ ಕೊಟ್ಟ ಅನುದಾನಗಳೆಲ್ಲವನ್ನು ವಾಪಸ್ ಪಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಬೆಂಗಳೂರಿಗೆ ಎಲಿವೇಟೆಡ್ ಕಾರಿಡಾರ್ ಘೋಷಣೆ ಮಾಡಿದ್ರು.16,000 ಕೋಟಿಯ ಈ ಪ್ರಾಜೆಕ್ಟ್ ಗೆ ಬಜೆಟ್ ನಲ್ಲಿ ಕೇವಲ 1000 ಕೋಟಿ ಇಟ್ಟಿದ್ದಾರೆ‌. ಅದೂ ಕೂಡ ಯಾರೋ ವಿರೋಧ ಮಾಡ್ತಾರೆ ಎಂದು ಯೋಜನೆಯನ್ನು ಕೈ ಬಿಡಲು ಹೊರಟಿದ್ದಾರೆ. ಕಸದ ಮಾಫಿಯಾ ಮಿತಿ ಮೀರಿದೆ ಎಂದು ಹೇಳಿದರು.

ದೇವೇಗೌಡರು ಮಗನ ಕಿವಿ ಹಿಂಡಿ ಬುದ್ಧಿ ಹೇಳುವ ಬದಲು ನನ್ನ ಬಗ್ಗೆ ಟೀಕೆ ಮಾಡುತ್ತಾರೆ: ಬಿಎಸ್ವೈ ವ್ಯಂಗ್ಯ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಗೌರವವಿದೆ. ಆದರೆ, ಅವರು ತಮ್ಮ ಮಗ ಕುಮಾರಸ್ವಾಮಿಗೆ ಕಿವಿ ಹಿಂಡಿ ಬುದ್ದಿ ಹೇಳದೆ ನನ್ನ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಅವರಿಗೆ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಮೂರು ಪ್ರಶ್ನೆ ಕೇಳಿದ್ದೇನೆ. ಈ ಪ್ರಶ್ನೆಗಳಿಗೆ ಕುಮಾರಸ್ವಾಮಿ ಯವರಾಗಲೀ ದೇವೇಗೌಡರಾಗಲೀ ಉತ್ತರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.

ಬಿಜೆಪಿ ಬೆಂಗಳೂರು ನಗರ ಜಿಲ್ಲೆ ಕಾರ್ಯಕಾರಿಣಿ ಸಭೆಗೆ ಮುನ್ನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಬೆಳಗಾವಿಯಲ್ಲಿ ಸ್ವಾಮೀಜಿಗಳು ಪ್ರತಿಭಟನೆ ಮಾಡುತ್ತಿದ್ದಾಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಲ್ಲಿಗೆ ಹೋಗಿ ಮನವೊಲಿಸಬೇಕಿತ್ತು. ಆದರೆ, ಪ್ರತಿಪಕ್ಷ ನಾಯಕನಾಗಿ ನಾನು ಅಲ್ಲಿಗೆ ಹೋಗಿ ರಾಜ್ಯ ಒಡೆಯದಂತೆ ಮನವಿ ಮಾಡಿದೆ. ಆದರೆ, ಅದಕ್ಕೆ ಪ್ರತಿಯಾಗಿ ನನ್ನನ್ನೇ ಟೀಕೆ ಮಾಡಿದ್ರು ಎಂದರು.

ಬೆಂಗಳೂರು ಮಹಾನಗರದ ಜನತೆ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಬಿಜೆಪಿಯ ಬೆಂಗಳೂರಿನ ಶಾಸಕರು ಬಿಬಿಎಂಪಿ ಕಾರ್ಪೋರೇಟರ್ ಗಳು ಹೋರಾಟ ಹಮ್ಮಿಕೊಳ್ಳಬೇಕು. ಒತ್ತುವರಿಯಾಗುತ್ತಿರುವ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡಬೇಕು ಎಂದು ಕರೆ ನೀಡಿದರು.

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಆದ ಹಿನ್ನಡೆ ಮರುಕಳಿಸಬಾರದು. ಬೆಂಗಳೂರಿನ ಶಾಸಕರು, ಬಿಬಿಎಂಪಿ ಸದಸ್ಯರು ಏನು ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗೆ ಅವರ ಕೊಡುಗೆ ಏನು ಎಂಬುದು ಚರ್ಚೆಯಾಗಬೇಕು. ಪಕ್ಷ ಸಂಘಟನೆಗೆ ಕೆಲಸ ಮಾಡದ ಬಿಬಿಎಂಪಿ ಸದಸ್ಯರಿಗೆ ಯಾವುದೇ ಕಾರಣಕ್ಕೂ ಮತ್ತೆ ಟಿಕೆಟ್ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.