ಅವಧಿ ಪೂರ್ವ ಜನಿತ ಶಿಶುಗಳಿಗೆ ಮಿಲ್ಕ್ ಬ್ಯಾಂಕ್ ಆಶಾಕಿರಣ

ಬೆಂಗಳೂರು:ಭಾರತದಲ್ಲಿ ಅತೀ ಹೆಚ್ಚು ಪೂರ್ವಅವಧಿಯ ಶಿಶುಗಳು ಜನಿಸುತ್ತಿವೆ. ಸ್ತನ್ಯಪಾನ ಅವಧಿಪೂರ್ವ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತದ್ದು,ಮಿಲ್ಕ್ ಬ್ಯಾಂಕ್‍ಗಳು ಸ್ತನ್ಯಪಾನ ಮಾಡಿಸಲಾಗದ ತಾಯಂದಿರ ಆಶಾಕಿರಣವಾಗಿವೆ ಎಂದು ಫೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆ ನಿರ್ದೇಶಕಿ ಡಾ.ಪ್ರತಿಮಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ರಿಚ್ ಮಂಡ್ ಟೌನ್ ನಲ್ಲಿರುವ ಆಸ್ಪತ್ರೆಯಲ್ಲಿ ಮಾತನಾಡಿದ ಡಾ.ಪ್ರತಿಮಾ ರೆಡ್ಡಿ, ಕರ್ನಾಟಕದಲ್ಲಿ 6 ತಿಂಗಳಿಗಿಂತ ಕಿರಿದಾಗಿರುವ ಶಿಶುಗಳಿಗೆ ಸ್ತನ್ಯಪಾನ ಪ್ರಮಾಣ ಕಳೆದ ಒಂದು ದಶಕದಲ್ಲಿ ಶೇ.4.4ರಷ್ಟು ಕುಸಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ 6 ತಿಂಗಳಿಗಿಂತ ಕೆಳಗಿನ ಶೇ.54.2ರಷ್ಟು ಶಿಶುಗಳಿಗೆ ಎಕ್ಸ್‍ಕ್ಲ್ಯೂಸೀವ್ ಆಗಿ ಸ್ತನ್ಯಪಾನವಾಗುತ್ತಿದೆ. 2005-06ರಲ್ಲಿ ಈ ಪ್ರಮಾಣ ಶೇ.58.6ರಷ್ಟಿತ್ತು.ಭಾರತದಲ್ಲಿ ಶೇ.55ರಷ್ಟು ಪ್ರಮಾಣವಿದೆ ಎಂದ್ರು.

ಕುಟುಂಬದ ಸದಸ್ಯರಲ್ಲಿ ಹಾಗೂ ಸಾರ್ವಜನಿಕವಾಗಿ ಆರೋಗ್ಯಯುತ ಸ್ತನ್ಯಪಾನ ಜಾಗೃತಿ ಮತ್ತು ಉತ್ತೇಜನ ಅವಶ್ಯಕವಾಗಿದೆ.‘ಮಕ್ಕಳಿಗೆ ಸ್ತನ್ಯಪಾನ ಅತ್ಯವಶ್ಯವೆಂದು ಹಲವರಿಗೆ ತಿಳಿದಿದ್ದರೂ, ಅವಧಿಪೂರ್ವ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಸ್ತನ್ಯಪಾನ ಅತ್ಯವಶ್ಯ ಎಂಬ ಸಾಮಾನ್ಯ ಜ್ಞಾನವಿಲ್ಲ. ಭಾರತದಲ್ಲಿ ಅತೀ ಹೆಚ್ಚು ಪೂರ್ವಅವಧಿಯ ಶಿಶುಗಳು ಜನಿಸುತ್ತಿವೆ. ಭಾರತದಲ್ಲಿ 3.5 ಮಿಲಿಯನ್ ಶಿಶುಗಳು ಅವಧಿಪೂರ್ವವಾಗಿ ಜನಿಸಿವೆ. ಸ್ತನ್ಯಪಾನ ಅವಧಿಪೂರ್ವ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತದೆ. ಮಿಲ್ಕ್ ಬ್ಯಾಂಕ್‍ಗಳು ಸ್ತನ್ಯಪಾನ ಮಾಡಿಸಲಾಗದ ತಾಯಂದಿರ ಆಶಾಕಿರಣ. ಅಮರ ಮಿಲ್ಕ್ ಬ್ಯಾಂಕ್ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಇಂಥ ಜನರಲ್ಲಿ ದೊಡ್ಡ ಬದಲಾವಣೆ ತಂದಿದೆ’ ಎಂದ್ರು.

ಮುಂಚಿತವಾಗಿ ಎದೆಹಾಲು ಕುಡಿಸುವುದು ಡಯೇರಿಯಾ ಮತ್ತು ನ್ಯುಮೇನಿಯಾಗಳಿಂದ ಸಂಭವಿಸುವ ಸಾವನ್ನು ತಪ್ಪಿಸುತ್ತದೆ. ಸೂಕ್ತವಾದ ಎದೆಹಾಲು ಸಿಗದೆ ಮಕ್ಕಳು ಸಾಯುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ತಾಯಿ ಹಾಲನ್ನು ಫ್ರೀಜರ್‍ನಲ್ಲಿ -20ಡಿಗ್ರಿ ಸೆಲ್ಸಿಯಸ್‍ನಲ್ಲಿ 6 ತಿಂಗಳು ಸಂಗ್ರಹಿಸಿಡಬಹುದು. ಕೋಣೆಯ ತಾಪಮಾನದಲ್ಲಿ 3-4 ಗಂಟೆಗಳ ಕಾಲ ಬಳಸಬಹುದು‌ ಎಂದ್ರು.

‘ಮಹಿಳೆಯರ ಆರೋಗ್ಯ ಕೇಂದ್ರಿತ ಸಂಸ್ಥೆಯಾಗಿ ಸ್ತನ್ಯಪಾನ ಉತ್ತೇಜಿಸುವುದು ನಮ್ಮ ಕರ್ತವ್ಯ. ಯುನಿಸೆಫ್ ವರದಿ ಪ್ರಕಾರ ಭಾರತದಲ್ಲಿ ಸ್ತನ್ಯಪಾನ ಪ್ರಮಾಣ ಶೇ.41.5ರಷ್ಟಿದ್ದು, ಫೋರ್ಟಿಸ್ ಲಾಫೆಮ್ಮೆಯಲ್ಲಿನ ನಮ್ಮ ಎಲ್ಲ 4 ಘಟಕಗಳಲ್ಲಿ ಶೇ.80ರಷ್ಟಿದೆ. ಬೆಂಗಳೂರು ಘಟಕದಲ್ಲಿ ಸ್ತನ್ಯಪಾನ ಪ್ರಮಾಣ ಶೇ.89ರಷ್ಟಿದೆ. ಸರ್ಕಾರ ಕೂಡ ಸ್ತನ್ಯಪಾನ ಉತ್ತೇಜನಕ್ಕೆ ನೀತಿನಿಯಮಗಳನ್ನು ಸಿದ್ಧಪಡಿಸುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಸ್ತನ್ಯಪಾನ ಸಲಹೆಗೆ ತರಬೇತಿ ಹೊಂದಿರುವ ಕೌನ್ಸಿಲರ್‍ಗಳಿದ್ದಾರೆ. ಹೊರಗಿನ ರೋಗಿಗಳಿಗೆ ಸ್ತನ್ಯಪಾನ ಕುರಿತು ಮಾಹಿತಿ ಒದಗಿಸುವ ಸಂಘಗಳಿವೆ. ನಾವು ಎಲ್ಲ ದಿಸೆಯಿಂದಲೂ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದೇವೆ ಎಂದ್ರು.

ಸ್ತನ್ಯಪಾನದಿಂದ ಮಕ್ಕಳಿಗೆ ಹಲವು ಲಾಭಗಳಿವೆ. ಮಕ್ಕಳಿಗೆ ಅಗತ್ಯ ಎಲ್ಲ ಪೌಷ್ಠಿಕಾಂಶಗಳನ್ನು ಹೊಂದಿರುತ್ತದೆ. ಸುಲಭವಾಗಿ ಜೀರ್ಣವಾಗುತ್ತದೆ. ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ತಾಯಿ ಹಾಗೂ ಮಗುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ ಎಂದ್ರು.

ಫೋರ್ಟಿಸ್ ಲಾಫೆಮ್ಮೆ ಆಸ್ಪತ್ರೆಯ ಡಾ.ಶ್ರೀನಾಥ್ ಮಣಿಕಂಟಿ ಮಾತನಾಡಿ, ಈವರೆಗೂ 269 ಲೀಟರ್ ಹಾಲು ಸಂಗ್ರಹಿಸಲಾಗಿದೆ. ಈ ಪೈಕಿ 229 ಲೀಟರ್ ಹಾಲನ್ನು ಅಗತ್ಯವಿರುವ ಶಿಶುಗಳಿಗೆ ಒದಗಿಸಲಾಗಿದೆ.ಆರು ತಿಂಗಳಿಗಿಂತ ಕಡಿಮೆಯಿರುವ ಹಾಗೂ ಒಂದು‌ ಕೆ‌.ಜಿ. ತೂಕ ಕಡಿಮೆ ಇರುವ ಶಿಶುವಿಗೆ ತಾಯಿ ಎದೆ ಹಾಲು ಅಗತ್ಯವಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಶಿಶುವಿಗೆ ಅಮರ ಮಿಲ್ಕ್ ಬ್ಯಾಂಕ್ ವತಿಯಿಂದ ಉಚಿತವಾಗಿ ಹಾಲು ಒದಗಿಸುವ ಕೆಲಸ ಮಾಡುತ್ತಿದೆ. ಅನ್ಯರಿಗೆ ಪ್ರತಿ ಎಂಎಎಲ್ ಗೆ 2 ರೂ. ನಿಗದಿಪಡಿಸಲಾಗಿದೆ. ಈವರೆಗೂ 62 ಮಂದಿ ತಾಯಂದಿರು ತನ್ನ ಎದೆಹಾಲನ್ನು ದಾನ ಮಾಡಿದ್ದಾರೆ ಎಂದ್ರು.

ಡಾ.ಅರುಣಾ ಮುರುಳೀಧರ್ ಮಾತನಾಡಿ, ಹಾಲು ದಾನ ಮಾಡಿದರೆ ತಮ್ಮ ಮಗುವಿಗೆ ಹಾಲಿನ ಕೊರತೆಯಾಗಲಿದೆ ಎನ್ನುವುದು ತಪ್ಪು ಕಲ್ಪನೆ.ಹಾಗಾಗಿ ಎದೆಹಾಲು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ರು.

ಅಧಿಕಾರಿಗಳ ಮೈ ಮುಟ್ಟಿದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ: ಹೈಕೋರ್ಟ್ ಕಡಕ್ ಎಚ್ಚರಿಕೆ

ಬೆಂಗಳೂರು: ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯಾರಾದರೂ ಅಧಿಕಾರಿಗಳ ಮೈ ಮುಟ್ಟಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ಕೋರ್ಟ್ ಗೆ ಕರೆಸಿಕೊಂಡ ಮುಖ್ಯ ನ್ಯಾಯಮೂರ್ತಿಗಳು, ಮೊದಲು ಬೆಂಗಳೂರಿನಲ್ಲಿರುವ ಎಲ್ಲ ರೀತಿಯ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ತೆರವುಗೊಳ್ಳಬೇಕು. ಅದು ಯಾರದ್ದೇ ಆಗಿರಲಿ. ಮುಲಾಜಿಲ್ಲದೇ ಅವುಗಳನ್ನ ತೆಗೆದು ಹಾಕಬೇಕು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕೋರ್ಟ್‌ನಲ್ಲಿ ಇಂದು ಏನೆಲ್ಲಾ ನಡೆಯಿತು ಅದರ ಫುಲ್ ಡಿಟೈಲ್ಸ್ ಇಲ್ಲಿದೆ……

* ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೀರಾ ಎಂದು ರಾಜ್ಯ ಪ್ರಾಸಿಕ್ಯೂಟರ್ ಎಚ್.ಎಸ್. ಚಂದ್ರಮೌಳಿ, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್‌ಗೆ ಸಿಜೆ ಪ್ರಶ್ನಿಸಿದರು.

* ತನಿಖೆ ಮುಗಿಸಿ ನಾಳೆಯೇ ಚಾರ್ಜ್‌ಶೀಟ್ ಸಲ್ಲಿಸಿ. ಹಲ್ಲೆ ಮಾಡಿದವರು ಕಾನೂನು, ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ. ಆರೋಪಿಗಳೇನಾದರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆಯೇ? ಇವರ ವಿರುದ್ಧ ಸಮಾಜದ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸಿ ಅವರಿಗೆ ತಕ್ಕ ಪಾಠ ಕಲಿಸಿ ಎಂದು ಸಿಜೆ ಸೂಚನೆ ನೀಡಿದರು.

* ಹಲ್ಲೆ ಮಾಡಿರುವುದು ವ್ಯವಸ್ಥೆ ‌ಮೇಲೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ ಎಂದರೆ ಅದು ಸಂಪೂರ್ಣ ವ್ಯವಸ್ಥೆ ವೈಫಲ್ಯ. ಸರ್ಕಾರಿ ಅಧಿಕಾರಿಗಳ ಮೈಮುಟ್ಟವುದು ಎಂದರೆ ಏನೆಂದುಕೊಂಡಿದ್ದಾರೆ? ಇಂಥವರಿಗೆಲ್ಲ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ. ಪೊಲೀಸರು ಯಾವುದೇ ಕಾರಣಕ್ಕೂ ಹಿಂಜರಿಯದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಆರೋಪಿಗಳ ಜಾಮೀನು ಅರ್ಜಿಯನ್ನು ಸಂಬಂಧಿಸಿದ ರೋಸ್ಟರ್ ಬೆಂಚ್‌ಗಳು ವಿಶೇಷ ನಿಗಾವಹಿಸಿ, ಅಪರೂಪದ ಪ್ರಕರಣಗಳೆಂದು ಪರಿಗಣಿಸಿ ವಿಚಾರಣೆ ನಡೆಸುತ್ತವೆ. ಅಗತ್ಯ ಬಿದ್ದರೆ ಈ ಪ್ರಕರಣಗಳ ವಿಚಾರಣೆಗೆ ವಿಶೇಷ ಮ್ಯಾಜಿಸ್ಟ್ರೇಟ್ ನೇಮಕ ಮಾಡುತ್ತೇನೆ. ಶೀಘ್ರ ಅವುಗಳ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಸರಿಯಾದ ಜಾಗಕ್ಕೆ ಕಳಿಸುತ್ತೇವೆ ಎಂದರು.

* ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದೆಂದರೆ ಅದು ಬಹು ದೊಡ್ಡ ಅಪರಾಧ. ಇದೊಂದು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಒಳಪಡುವ ವಿಚಾರವೂ ಆಗುತ್ತದೆ. ಕೋರ್ಟ್ ಈ ಪ್ರವೃತ್ತಿಯ ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅಧಿಕಾರಿಗಳಿಗೆ ತಮ್ಮ ಕೆಲಸ ಏನೆಂದು ಗೊತ್ತಿರಬೇಕು. ಒಂದು ವೇಳೆ ಗೊತ್ತಿಲ್ಲದೆ ಹೋದರೆ ಹೇಗೆ ಗೊತ್ತು ಮಾಡಿಕೊಳ್ಳುವುದು ಎಂದು ನಾವು ತೋರಿಸುತ್ತೇವೆ.

* ಫ್ಲೆಕ್ಸ್ ಹಾಕುವವರಲ್ಲಿ ಕ್ರಿಮಿನಲ್ ಮನೋಭಾವದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಈ ರೀತಿಯ ಅಪರಾಧಕ್ಕೆ ಯಾರಾದರೂ ಕುಮ್ಮಕ್ಕು ನೀಡುತ್ತಿರಬಹುದೇ? ಹಾಗೇನಾದರೂ ಇದ್ದರೆ ನಾನದನ್ನು ಸ್ವಲ್ಪವೂ ಸಹಿಸುವುದಿಲ್ಲ. ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಪ್ರವೃತ್ತಿ ಕೊನೆಗೊಳ್ಳಬೇಕು. ಇನ್ನುಮುಂದೆ ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಣ್ಣಿಗೆ ಬಿದ್ದರೂ ಸಹಿಸುವುದಿಲ್ಲ. ಈ ದಿಸೆಯಲ್ಲಿ ಪೊಲೀಸರು ಹಾಗೂ ಬಿಬಿಎಂಪಿ 24×7 ಕೆಲಸ ಮಾಡಬೇಕು.

* ಈಗಾಗಲೇ ಗಸ್ತು ತಿರುಗುತ್ತಿರುವ ಪೊಲೀಸ್ ಕಾರ್ಯಪಡೆಗಳು ಫ್ಲೆಕ್ಸ್ ಹಾಕುವವರ ಬಗ್ಗೆ ನಿಗಾವಹಿಸಬೇಕು. ಸಿಸಿಟಿವಿ ಕ್ಯಾಮರಾಗಳಲ್ಲಿ ಈ ರೀತಿಯ ಚಟುವಟಿಕೆಗಳನ್ನು ಪರಿಶೀಲಿಸಿ, ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

* ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಅಥವಾ ಶಾಶ್ವತವಾಗಿ ಉಳಿಸಿಕೊಳ್ಳುವಂಥ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಪೊಲೀಸರು ಗಮನ ಹರಿಸಬೇಕು.

* ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಂಡು ಬಂದರೆ ಅದರ ಉತ್ತರದಾಯಿ ಪೊಲೀಸ್ ಆಯುಕ್ತರೇ ಆಗಿರುತ್ತಾರೆ.

* ಫ್ಲೆಕ್ಸ್ ತೆರವಿಗೆ ಮುಂದಾಗದ ಗುತ್ತಿಗೆದಾರರನ್ನು ಇಟ್ಟುಕೊಳ್ಳಬೇಡಿ. ಕೆಲಸ ಮಾಡುವ ಗುತ್ತಿಗೆದಾರರು ಸಾಕಷ್ಟಿದ್ದಾರೆ.

* ಬೆಂಗಳೂರಿನಲ್ಲಿ ಬಹಳಷ್ಟು ಸಮಸ್ಯೆಗಳಿಗೆ. ಅವುಗಳನ್ನು ಮೂಲದಿಂದಲೇ ಬಗೆ ಹರಿಸಬೇಕು. ಆ ದಿಸೆಯಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಕಾರ್ಯಾಚರಣೆ ಆರಂಭಿಕ ಹೆಜ್ಜೆ. ನಾವು ಬೆಂಗಳೂರಿನ ಸೌಂದರ್ಯ ಮರುಕಳಿಸುವ ಪ್ರಕ್ರಿಯೆಗೆ ಬದ್ಧವಾಗಿದ್ದೇವೆ.

* ಬೆಂಗಳೂರು ಶಿಸ್ತಿನ ನಗರ. ಇಲ್ಲಿ ಪುಂಡಾಟಿಕೆ, ಗೂಂಡಾಗಿರಿ, ಕ್ರಿಮಿನಲ್ ಪ್ರವೃತ್ತಿಗೆ ಜಾಗವಿಲ್ಲ. ಅಧಿಕಾರಿಗಳಿಗೆ ಭದ್ರತೆ ಕೊಡಿ, ಕಟ್ಟೆಚ್ಚರ ವಹಿಸಿ. ಈ ಬಗ್ಗೆ ಪೊಲೀಸ್ ಆಯುಕ್ತರೇ ಪ್ರಮಾಣಪತ್ರ ಸಲ್ಲಿಸಲಿ ಆ.7 ರಂದು ತನಿಖೆಯ ಫಲಿತಾಂಶವೇನು ತಿಳಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಲಾಗಿದೆ‌

ಬೆಂಗಳೂರಿನಿಂದಾಚೆ ಹೂಡಿಕೆ ಮಾಡಿ: ಹೂಡಿಕೆದಾರರಿಗೆ ಸಿಎಂ ಮನವಿ!

ಬೆಂಗಳೂರು: ಹೂಡಿಕೆದಾರರು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ಬೆಂಗಳೂರು ಟೆಕ್ ಸಮ್ಮಿಟ್ 2018ರ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಐಟಿ ಬಿಟಿ ಕಂಪೆನಿ ಸಿಇಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯ ಸರ್ಕಾರವು ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮಗಳ ಸ್ಥಾಪನೆಯ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಲು ಉತ್ಸುಕವಾಗಿದೆ. ಈ ನಗರಗಳಲ್ಲಿ ಹೂಡಿಕೆ ಮಾಡುವ ಕಂಪೆನಿಗಳಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ
ಕೌಶಲ್ಯ ತರಬೇತಿಗೂ ಆದ್ಯತೆ ನೀಡಲಿದೆ ಈ ವರ್ಷ ಆಯವ್ಯಯದಲ್ಲಿ ಇದಕ್ಕಾಗಿ 500 ಕೋಟಿ ರೂ. ಮೀಸಲಿಡಲಾಗಿದೆ. ಈ ಭಾಗದಲ್ಲಿ ಉದ್ಯಮಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ನೆರವಾಗಿ ಎಂದು ಕರೆ ನೀಡಿದರು.

ವಿವಿಧ ಕಂಪೆನಿಗಳ ಮುಖ್ಯಸ್ಥರ ಸಲಹೆಗಳನ್ನು ಆಲಿಸಿದ ಮುಖ್ಯಮಂತ್ರಿಯವರು, ಸರ್ಕಾರವು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಿದ್ಧವಿದೆ. ಕೈಗಾರಿಕೆಗಳ ಸ್ಥಾಪನೆಗೆ ಇರುವ ತೊಡಕುಗಳನ್ನು ನಿವಾರಿಸಲು ಮುಖ್ಯಮಂತ್ರಿಗಳ ಕಚೇರಿಯಲ್ಲಿಯೇ ವಿಶೇಷ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಈ ವರ್ಷ ಆಯವ್ಯಯದಲ್ಲಿ ಘೋಷಿಸಿದಂತೆ ಚೀನಾದೊಂದಿಗೆ ಆರೋಗ್ಯಕರ ಸ್ಪರ್ಧೆ ಎಂಬ ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಬೀದರ್‍ನಲ್ಲಿ ಕೃಷಿಗೆ ಪೂರಕ ಯಂತ್ರೋಪಕರಣಗಳ ತಯಾರಿಕೆ, ಕಲಬುರಗಿಯಲ್ಲಿ ಸೌರ ವಿದ್ಯುತ್ ಉಪಕರಣಗಳ ಉದ್ಯಮ, ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿತ್ರದುರ್ಗದಲ್ಲಿ ಎಲ್‍ಇಡಿ ಹೀಗೆ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕೆಗಳ ಕ್ಲಸ್ಟರ್ ಸ್ಥಾಪಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಉದ್ಯಮಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ಕರ್ನಾಟಕ ಇನ್ನೋವೇಷನ್ ಹಬ್ ಎಂದು ಹೆಸರಾಗಿದೆ. ಈ ವಲಯಕ್ಕೆ ಬೆಂಬಲ ನೀಡಲು, ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ಇನ್ನೊವೇಷನ್ ಅಥಾರಿಟಿಯನ್ನು ಸ್ಥಾಪಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ತಿಳಿಸಿದರು.

ಬೃಹತ್ ಕೈಗಾರಿಕೆ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, ಸರ್ಕಾರ ಐಟಿ ಬಿಟಿ ಉದ್ಯಮಗಳ ಬೆಳವಣಿಗೆಗೆ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ರಾಜ್ಯ ಸರ್ಕಾರವು ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಇದಕ್ಕೆ ಐಟಿ ಬಿಟಿ ವಲಯದ ದಿಗ್ಗಜರು ಬೆಂಬಲ ನೀಡುವಂತೆ ಮನವಿ ಮಾಡಿದರು.

ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಐಟಿ ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕರ್ನಾಟಕ ಐಟಿ ವಿಷನ್ ಗ್ರೂಪ್‍ನ ಅಧ್ಯಕ್ಷ, ಕ್ರಿಸ್ ಗೋಪಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.

ಶಿಮ್ಲಾ ಆಸ್ಪತ್ರೆಯಲ್ಲಿ ಪತ್ತೆಯಾದ ಮಹಿಳೆಗೆ ನೆರವು: ಸಿಎಂ ಭರವಸೆ

ಬೆಂಗಳೂರು: ಶಿಮ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಮೂಲದ ಮಹಿಳೆಯನ್ನು ಇಂದು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ವಾಪಸ್ ಕರೆತಂದಿದ್ದಾರೆ. ಆ ಮಹಿಳೆಗೆ ಉತ್ತಮ ರೀತಿಯಲ್ಲಿ ಬದುಕಲು ಅಗತ್ಯ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ರಾಜ್ಯಕ್ಕೆ ವಾಪಸ್ಸಾಗಿರುವ ಮಹಿಳೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಮಹಿಳೆ ಚಿಕಿತ್ಸೆಗೆ ಹಾಗೂ ಉತ್ತಮ ರೀತಿಯಲ್ಲಿ ಬದುಕಲು ಅಗತ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ತಮ್ಮ ಮನೆ ಬಿದ್ದು ಹೋಗಿದ್ದು, ಮನೆ ಕಟ್ಟಿಸಿಕೊಡುವಂತೆ ಹಾಗೂ ತನ್ನ ಪತಿಯನ್ನು ಹುಡುಕಿಕೊಡುವಂತೆ ಮಹಿಳೆಯು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಹಿಳೆಯನ್ನು ವಾಪಸ್ ಕರೆತರುವಲ್ಲಿ ಶ್ರಮಿಸಿದ ಅಧಿಕಾರಿಗಳ ತಂಡದಲ್ಲಿದ್ದ ಆರೋಗ್ಯ ಇಲಾಖೆ ಉಪನಿರ್ದೇಶಕರಾದ ಡಾ. ರಜನಿ, ಮೈಸೂರು ಜಿಲ್ಲೆಯ ಮಾನಸಿಕ ಆರೋಗ್ಯ ಅಧಿಕಾರಿ ಡಾ. ಮಂಜುಪ್ರಸಾದ್,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೇ ಅಧಿಕಾರಿ ಮಂಜುಳಾ ಹಾಗೂ ಮಹಿಳಾ ಪೊಲೀಸ್ ನಗೀನಾ ಅವರನ್ನು ಅಭಿನಂದಿಸಿದರು.

ಮಹಿಳೆಗೆ ಸದ್ಯ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ನೀಡಿ ಚಿಕಿತ್ಸೆ ನೀಡಲಾಗುವುದು. ನಂತರ ಅವರ ಮನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಜೊತೆಗೆ ಮಹಿಳೆಯನ್ನು ಹಾಗೂ ಅಧಿಕಾರಿಗಳ ತಂಡವನ್ನು ಆಹ್ವಾನಿಸಿ ಸತ್ಕರಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹಾಗೂ ಅವರ ಕನ್ನಡತಿ ಪತ್ನಿ ಸಾಧನಾ ಠಾಕೂರ್ ಅವರಿಗೆ ಕ್ರತಜ್ಞತೆ ಸಲ್ಲಿಸಿದರು.

ವಿದ್ಯುತ್ ಪೂರೈಕೆ ಸಂಬಂಧ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ!

ಬೆಂಗಳೂರು: ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ಕುರಿತು ಮೂಲ ಸೌಕರ್ಯ ಗಳನ್ನು ಸುಧಾರಿಸಲು ಉನ್ನತ ಮಟ್ಟದ ಸಭೆ ಕರೆಯಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಪೂರೈಕೆಗೆ ತೊoದರೆ ಆಗಬಾರದು. ವಿದ್ಯುತ್ ಸೋರಿಕೆ ಆಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಲೈನ್ ಗಳನ್ನು ಹಾಕಬೇಕು ಎಂದು ತಿಳಿಸಿದರು. ಮರಗಳನ್ನು ಕಡಿಯುವುದನ್ನು ನಿಯಂತ್ರಿಸಲು ಸೂಚಿಸಿದರು.

ಬೆಂಗಳೂರು ನಗರದಲ್ಲಿ 3 ಸಾವಿರ ಮೆಗಾ ವ್ಯಾಟ್ ದಾಖಲಾದ ವಿದ್ಯುತ್ ಬೇಡಿಕೆ ಇದೆ. ನಗರದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿ ನಿರ್ವಹಿಸಲು ಭೂಗತ ಕೇಬಲ್ ಅಳವಡಿಸಲಾಗುತ್ತಿದೆ. ಈ ಸಂಬಂಧ ಇರುವ ತೊಡಕುಗಳನ್ನು ಪರಿಹರಿಸಲು, ಲೋಕೋಪಯೋಗಿ ಇಲಾಖೆ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಹಾಗೂ ಪೊಲೀಸ್ ಆಯುಕ್ತರನ್ನು ಒಳಗೊoಡ ಸಭೆ ಕರೆಯಲು ಮುಖ್ಯಮಂತ್ರಿ ಗಳು ಸೂಚಿಸಿದರು.

ಸಭೆಯಲ್ಲಿ ಆರ್ಥಿಕ ಇಲಾಖೆ , ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್ ಪ್ರಸಾದ್, ಇoಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ , ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿ ರಾಜಕೀಯಕ್ಕಾಗಿ ರಾಜ್ಯ ಒಡೆಯುವ ಮಾತನ್ನಾಡುತ್ತಿದೆ: ಪರಂ

ಬೆಂಗಳೂರು: ನಮ್ಮ ಸರಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದು, ಬಿಜೆಪಿ ರಾಜಕೀಯ ಮಾಡಲೆಂದೇ ರಾಜ್ಯ ಒಡೆಯುವ ಮಾತನ್ನಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕಾರ್ಯಕ್ರಮದ ಬಳಿಕ‌ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಅಖಂಡ ಕರ್ನಾಟಕ. ರಾಜ್ಯವನ್ನು ಒಡೆಯುವ ಮಾತನ್ನು ಯಾರೂ ಆಡಬಾರದು. ಬಿಜೆಪಿಯವರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಂದ ಎಲ್ಲ‌ ಸರಕಾರಗಳು ಉತ್ತರ ಕರ್ನಾಟಕಕ್ಕೆ ಅವರದ್ದೇ ಆದ ಕೊಡುಗೆ ನೀಡಿವೆ. ನಮ್ಮ ಸರಕಾರ ಆ ಭಾಗದವರಿಗೆ ವ್ಯತಿರಿಕ್ತವಾಗಿ ಯಾವ ಕೆಲಸ ಮಾಡುವುದಿಲ್ಲ. ಎಸ್‌.ಎಂ. ಕೃಷ್ಞ ಅವರ ಕಾಲದಲ್ಲಿ ಹಿಂದುಳಿದ ತಾಲೂಕುಗಳಿಗೆ ಬಿಡುಗಡೆ ಮಾಡಿದ ಅನುದಾನದಿಂದ ಸಾಕಷ್ಟು ಕೆಲಸವಾಗಿದೆ. ಈ ಕಾರ್ಯಕ್ರಮಗಳನ್ನು ನಮ್ಮ ಸರಕಾರವೂ ಮುಂದುವರೆಸಿಕೊಂಡು ಹೋಗುತ್ತಿವೆ. ನಮ್ಮೆಲ್ಲರದ್ದೂ ಒಂದೇ ಭಾಷೆ, ನೆಲ. ಎಲ್ಲರೂ ಕನ್ನಡಿಗರೇ ಎಂದು ಹೇಳಿದರು.

ಅಕ್ರಮ ವಲಸಿಗರ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ಪೊಲೀಸರು ಇಂಥವರನ್ನು ಹುಡುಕುವ ಕೆಲಸದಲ್ಲಿದ್ದಾರೆ. ಆಫ್ರಿಕಾ ದೇಶದ ೧೦೭ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದ್ದರೂ ಇಲ್ಲೇ ಇರುವುದು ಗಮನಕ್ಕೆ ಬಂದಿದ್ದು,ವಾಪಾಸ್ ಕಳುಹಿಸುವ ಕೆಲಸ ಮಾಡಲಾಗಿದೆ‌.. ಈ ರೀತಿ ಅಧಿಕೃತ ಕಾಗದಪತ್ರ ಇಲ್ಲದಿರುವವರನ್ನು ವಾಪಸ್ ಕಳುಹಿಸಲಾಗುವುದು ಎಂದರು.