ಸ್ವಚ್ಛತೆಯಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆಯಲಿದೆ: ಡಿಸಿಎಂ ಪರಂ

We ಬೆಂಗಳೂರು: ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛತೆ ಬಗ್ಗೆ ನಡೆಸುತ್ತಿರುವ ಸಮೀಕ್ಷೆಯಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಗುರುವಾರ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 “ಸ್ವಚ್ಛ ಮೇವ ಜಯತೆ” ಎಂಬ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಚ್ಛತೆ ಎಂಬುದು ನಮ್ಮ ಜೀವನದ ಭಾಗವಾಗಿರಬೇಕು. ಮನೆ, ಸುತ್ತಲಿನ ಪರಿಸರ, ಬೀದಿ ಹೀಗೆ ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಇಡೀ ಸಮಾಜ ಸ್ವಚ್ಛ ಮತ್ತು ಶುಭ್ರವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.

2014ರ ಅಕ್ಟೋಬರ್ 2, ಗಾಂಧಿ ಜಯಂತಿ ದಿನದಂದು ಕೇಂದ್ರ ಸರಕಾರ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮ ಪ್ರಾರಂಭಿಸಿದರು. ಈ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಕೇಂದ್ರ ಸರಕಾರ ಈಗ 680 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ. ನಮ್ಮ ರಾಜ್ಯ ಅಭಿವೃದ್ಧಿ ಪಥದಲ್ಲಿರುವ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿದೆ. ಈಗಾಗಲೇ ರಾಜ್ಯಾದ್ಯಂತ 22 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಉಳಿಕೆ 5 ಲಕ್ಷ ಶೌಚಾಲಯವನ್ನು ಇದೇ ಅಕ್ಟೋಬರ್ 2ರೊಳಗೆ ಪೂರ್ಣಗೊಳಿಸಲಿದ್ದೇವೆ. ಕೇಂದ್ರ ಸರಕಾರ ಬಯಲು ಬಹೀರ್ದೆಸೆ ಮುಕ್ತ ರಾಜ್ಯಗಳ ಘೋಷಣೆಯಲ್ಲಿ ನಮ್ಮ ರಾಜ್ಯವೂ ಸೇರ್ಪಡೆಗೊಳ್ಳುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಸ್ವಚ್ಛತೆ ಎಂಬುದು ದೊಡ್ಡ ಸವಾಲು. ಅದಕ್ಕಾಗಿಯೇ ಕಾರ್ಯಕ್ರಮದ ಅನುಷ್ಠಾನಕ್ಕೆ ಮಕ್ಕಳನ್ನು ರಾಯಭಾರಿಯನ್ನಾ ಮಾಡಿದ್ದೇವೆ. ಹೊರರಾಷ್ಟ್ರಗಳಲ್ಲಿ ಪೋಷಕರು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಪಾಠ ಹೇಳುತ್ತಾರೆ. ನಾವು ಮಕ್ಕಳಿಂದಲೇ ಪೋಷಕರಿಗೆ ಪಾಠ ಹೇಳಿಸುವ ಮೂಲಕ ಪ್ರಬಲವಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಞಭೈರೇಗೌಡ ಇದ್ದರು.

ಐಟಿ ರೈಡ್ ಪ್ರಕರಣ: ಡಿಕೆಶಿ ಸೇರಿ ಐವರಿಗೆ ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು: ಡಿ.ಕೆ.ಶಿವಕುಮಾರ್ ನಿವಾಸ ಹಾಗೂ ಕಛೇರಿಗಳ ಮೇಲೆ ಐಟಿ ರೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲಾ ಐದು ಆರೋಪಿಗಳಿಗೆ ಆರ್ಥಿಕ ಅಪರಾಧಗಳ ನ್ಯಾಯಾಲಯ ಷರತ್ತುಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ಖಾಸಗಿ ದೂರು ಸಲ್ಲಿಸಲಾಗಿತ್ತು. ಆದರೆ, ಐಟಿ ದೂರು ಕುರಿತು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಐಟಿಗೆ ದೂರು ನೀಡಲು ಆಯುಕ್ತರ ಬದಲು ನಿರ್ದೇಶಕ ರಿಂದ ಪೂರ್ವಾನುಮತಿ ಪಡೆಯಲಾಗಿತ್ತು ಎಂಬ ತಾಂತ್ರಿ ಅಂಶವನ್ನು ಮುಂದಿಟ್ಟುಕೊಂಡು ಆರೋಪಿಗಳ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ, ನಂಜುಂಡ ರೆಡ್ಡಿ, ಶಶಿ ಕಿರಣ್ ಶೆಟ್ಟಿ  ಐಟಿ ಕಾಯ್ದೆಯ ಉಲ್ಲಂಘನೆಯಾಗಿದೆ ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.

ಅಲ್ಲದೆ ಈಗಾಗಲೇ ಸಚಿನ್ ನಾರಾಯಣ್ ನೀಡಿರುವ ದೂರಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ ತಡೆಯಾಜ್ಞೆ ನೀಡಿದೆ ಎಂದು ವಾದ ಮಂಡಿಸಿದರು. ಆರೋಪಿಗಳ ಪರ ವಾದ ಪುರಸ್ಕರಿಸಿದ ಆರ್ಥಿಕ ಅಪರಾಧಗಳ ನ್ಯಾಯಾಲಯ ಡಿ.ಕೆ.ಶಿವಕುಮಾರ್,
ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಹಾಗೂ ರಾಜೇಂದ್ರ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂಪಾಯಿ ಬಾಂಡ್
ನೀಡುವಂತೆ ಷರತ್ತು ವಿಧಿಸಿದೆ.

ಮುಂದಿನ ವಿಚಾರಣೆ ವೇಳೆ ಹೈಕೋರ್ಟ್ ಅರ್ಜಿಯ ಸ್ಟೇಟಸ್ ತಿಳಿಸಿ ಎಂದು ಸೂಚಿಸಿರುವ ನ್ಯಾಯಾಲಯ ಸೆ.20ಕ್ಕೆ ವಿಚಾರಣೆ ಮುಂದೂಡಿದೆ.

ಕಾಯಿದೆ ಜಾರಿಗೆ ಅನುಮತಿ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ: ಡಾ.ಜಿ. ಪರಮೇಶ್ವರ್

ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಂಬಡ್ತಿ ಸಂಬಂಧ, ಸರಕಾರದ ತಂದಿರುವ ಕಾಯಿದೆ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸುವಂತೆ ಅಥವಾ ಶೀಘ್ರವೇ ತೀರ್ಪು‌ ನೀಡುವಂತೆ ಸುಪ್ರೀಂಕೋರ್ಟ್‌ಗೆ ಇನ್ನೆರಡು ದಿನಗಳಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು. ಸಭೆ ನಂತ್ರ ಮಾತನಾಡಿದ ಡಿಸಿಎಂ, ಪರಿಶಿಷ್ಟ ಜಾತಿ ಅವರಿಗೆ ಎಂದೂ ಮೋಸವಾಗದ ರೀತಿ ನಮ್ಮ ಸರಕಾರ ನೋಡಿಕೊಳ್ಳಲಿದೆ. ಬಡ್ತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಆ.೧೪ಕ್ಕೆ ವಿಚಾರಣೆ ಬರಲಿದೆ. ಅಲ್ಲಿವರೆಗೂ ಕಾಯಲು ಸಾಧ್ಯವಿಲ್ಲ.‌ಅದಕ್ಕಾಗಿ ಹಿಂದಿನ‌ ಸರಕಾರದಲ್ಲಿ ತಂದ ಕಾಯಿದೆಯನ್ನು ಅನುಷ್ಠಾನ ಮಾಡಲು‌ ಸುಪ್ರೀಂಕೋರ್ಟ್‌‌ಗೆ ಒಂದೆರಡು ದಿನದಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ.‌ ಇಲ್ಲದಿದ್ದರೆ ಕನಿಷ್ಠ ಈ ಪ್ರಕರಣದ ತೀರ್ಪನ್ನು ಶೀಘ್ರವಾಗಿ ನೀಡುವಂತೆ ಕೇಳಿಕೊಳ್ಳಲಾಗುವುದು ಎಂದರು.

ಅರ್ಜಿ‌ ಸಲ್ಲಿಕೆ ವಿಚಾರದ ಬಗ್ಗೆ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ.ಕೆಲವರಿಗೆ ಹಿಂಬಡ್ತಿಯಾಗಿದೆ. ಯಾವ ಇಲಾಖೆಯಲ್ಲೂ ಹಿಂಬಡ್ತಿ ಹಾಗೂ ಮುಂಬಡ್ತಿ ನೀಡದಂತೆ ಮುಖ್ಯಮಂತ್ರಿಗಳು ಮತ್ತೊಮ್ಮೆ ಆದೇಶ ನೀಡಿದರೆ ಸಮಸ್ಯೆ ತೀವ್ರತೆ ಕಡಿಮೆ ಆಗಲಿದೆ.ಹಿಂಬಡ್ತಿ ಮುಂಬಡ್ತಿ ಗೊಂದಲದಲ್ಲಿ ಸಾಕಷ್ಟು ಅಧಿಕಾರಿಗಳಿಗೆ ಮೂರು ನಾಲ್ಕು ತಿಂಗಳಿಂದ ವೇತನ ನೀಡದೇ ಇರುವುದು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ವೇತನ ನೀಡುವಂತೆ ನಿರ್ದೇಶನ‌ ನೀಡಲಾಗುವುದು ಎಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಶಿಕ್ಷಣ ಸಚಿವ ಎನ್. ಮಹೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಕಾನೂನು ಕಾರ್ಯದರ್ಶಿ ಶ್ರೀನಿವಾಸ, ಸಮಾಜ ಕಲ್ಯಾಣ ಇ ಲಾಖೆ ಅ ಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ , ವಿವಿಧ ದಲಿತ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಅನಧಿಕೃತ ಪ್ಲೆಕ್ಸ್ ತೆರವು ಮಾಡದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಗರಂ!

ಬೆಂಗಳೂರು: ಕೆಲಸ ಮಾಡಲು ಆಗದಿದ್ದರೆ‌ ಬಿಬಿಎಂಪಿಯನ್ನು ಮುಚ್ಚಿಕೊಂಡು ಹೋಗಿ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ನೇತೃತ್ವದ

ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿಗೆ ಚಾಟಿ ಬೀಸಿದೆ.

ನಗರದ ರಿಚ್ ಮಂಡ್ ವೃತ್ತ ಸೇರಿದಂತೆ ಬೆಂಗಳೂರಿನಲ್ಲಿ ಇರುವ ಅನಧಿಕೃತ ಫ್ಲೆಕ್ಸ್‌ ಗಳನ್ನು ತೆರವು ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಣ್ಣಪುಟ್ಟ ಸಮಸ್ಯೆಗಳಿಗೂ ಜನ ಹೈಕೋರ್ಟ್ ಗೆ ಪಿಐಎಲ್ ಹಾಕಿಕೊಂಡು ಬರಬೇಕೇ? ನಿಮಗೆ ಕೋರ್ಟ್ ಸೂಚನೆ ನೀಡದೆ ಕೆಲಸ ಮಾಡಲು ಬರುವುದಿಲ್ಲವೇ? ಕೆಲಸ ಮಾಡಲು ಆಗದಿದ್ದರೆ ಬಿಬಿಎಂಪಿ ಮುಚ್ಚಿಕೊಂಡು ಹೋಗಿ ಎಂದು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಮತ್ತು ನಗರದಾದ್ಯಂತ ಗಿಜಿಗುಟ್ಟುತ್ತಿರುವ ಫ್ಲೆಕ್ಸ್ ಗಳನ್ನು ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಆದೇಶಿಸಿತ್ತು.

ಮಧ್ಯಾಹ್ನದ ವಿಚಾರಣೆ ವೇಳೆ ನಗರಾದಾದ್ಯಂತ 5 ಸಾವಿರ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್ ಗೆ ತಿಳಿಸಿತು. ಬಿಬಿಎಂಪಿ ಪರ ಹಾಜರಿದ್ದ ವಕೀಲ ವಿ.ಶ್ರೀನಿಧಿ, ಮಧ್ಯಾಹ್ನದ ವೇಳೆಗೆ 5 ಸಾವಿರ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ‌ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, “ಹಾಗಾದರೆ ಉಳಿದವುಗಳನ್ನು ರಾತ್ರಿಯೊಳಗೆ ತೆರವುಗೊಳಿಸುತ್ತೀರಾ” ಎಂದು ಪ್ರಶ್ನಿಸಿದರು. ಈ ಮಧ್ಯೆ “ನಾವು ಅಧಿಕೃತವಾಗಿ ಪರವಾನಗಿ ಪಡೆದು ಹಾಕಲಾಗಿರುವ ಫ್ಲೆಕ್ಸ್ ಗಳನ್ನೂ ತೆರವುಗೊಳಿಸಲಾಗುತ್ತಿದೆ” ಎಂದು ದೂರಿ ತೆರವು ಪ್ರಕ್ರಿಯೆ ಸ್ಥಗಿತಕ್ಕೆ ಜಾಹೀರಾತುದಾರರ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ತೀವ್ರ ಅಕ್ರೋಶ ವ್ಯಕ್ಯಪಡಿಸಿದ ನ್ಯಾಯಪೀಠ ನಿಮ್ಮದು ಅಧಿಕೃತವೋ ಅನಧಿಕೃತವೋ ಆಮೇಲೆ‌ ನಿರ್ಧರಿಸೋಣ. ಮೊದಲು ಬೆಂಗಳೂರಿನ ವೈಭವ ಮರುಕಳಿಸಲಿ. ನೀವು ಪರವಾನಗಿ ಪಡೆದು ಅಧಿಕೃತವಾಗಿಯೇ ಫ್ಲೆಕ್ಸ್ ಗಳನ್ನು ಹಾಕಿದ್ದರೆ ಅವುಗಳನ್ನು ಪುನಃ ತೂಗುಹಾಕುವ ಬಗ್ಗೆ ನಂತರ ನಿರ್ಧರಿಸೋಣ ಎಂದರು.

ನಗರದಲ್ಲಿ ಫ್ಲೆಕ್ಸ್ , ಬ್ಯಾನರ್ ಗಳ ಹಾವಳಿ ಹೆಚ್ಚಾಗಿದೆ. ಇದೊಂದು ತೊಂದರೆ ದಾಯಕ ವಿಚಾರ. ಈ ಸಮಸ್ಯೆಗೆ ಒಂದು ಇತಿಶ್ರೀ ಹಾಡಲೇಬೇಕು‌ ಇದು ಕೇವಲ ಇಂದು ತೆರವು ಮಾಡಿ ಪುನಃ ನಾಳೆ‌ ಹಾಕುವುದಲ್ಲ. ಇದಕ್ಕೆ ಶಾಶ್ವತವಾಗಿ ತೆರೆ ಎಳೆಯಲು ಒಂದು ನೀತಿ ರೂಪಿಸಬೇಕು. ಆ ನೀತಿ ಹೇಗಿರುತ್ತದೆ ಎನ್ನುವುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಿ ಎಂದು ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 8ಕ್ಕೆ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಜರಿದ್ದರು.

ಹಿಂದೆಯೂ ನಗರದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಹಾಗು ನಗರದ ಅಂದ ಕೆಡಿಸುವ ರೀತಿಯಲ್ಲಿ ಎಲ್ಲೆಂದರಲ್ಲಿ ಅಳವಡಿಸುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ತೆರವು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸೂಕ್ತ ಜಾಹೀರಾತು ನೀತಿ ರೂಪಿಸಲು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಬಿಬಿಎಂಪಿ ಜಾಹೀರಾತು ನೀತಿ ರೂಪಿಸುವುದಾಗಿ ತಿಳಿಸಿತ್ತು. ಆದರೆ ಹೊಸದಾಗಿ ನಿಯಮಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ಬಿಬಿಎಂಪಿ ವಿಳಂಬ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಕೂಡಲೇ ನಗರದಲ್ಲಿ ಇರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗು ಹೋರ್ಡಿಂಗ್ಸ್ ಗಳನ್ನು ತೆರವು ಮಾಡಲು ಬಿಬಿಎಂಪಿ ಗೆ ನಿರ್ದೇಶನ ನೀಡಿದೆ.

ಅರಣ್ಯ ಅವಲಂಬಿತ ಬುಡಕಟ್ಟು ಜನರ ಮನೆ ಬಾಗಿಲಿಗೆ ಸಂಚಾರಿ ಆರೋಗ್ಯ ಘಟಕ

ಬೆಂಗಳೂರು:ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಅರಣ್ಯ ಅವಲಂಬಿತ ಮೂಲ ನಿವಾಸಿ ಬುಡಕಟ್ಟು ಜನಾಂಗದವರಿಗೆ ಮನೆ ಬಾಗಿಲಲ್ಲಿಯೇ ವೈದ್ಯಕೀಯ ಸೌಲಭ್ಯ ನೀಡುವ ವಿನೂತನ ಯೋಜನೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಲೋಕಾರ್ಪಣೆಗೊಳಿಸಲಾಯಿತು.

ತಲಾ 50 ಲಕ್ಷ ರೂ ವೆಚ್ಚದಲ್ಲಿ ಒಟ್ಟು 8 ಕೋಟಿ ರೂ. ಮೌಲ್ಯದ 16 ಸಂಚಾರಿ ಆರೋಗ್ಯ ಘಟಕಗಳನ್ನು ವಿಧಾನಸೌಧದ ಮುಂಭಾಗದಲ್ಲಿ ಡಿಸಿಎಂ ಡಾ.ಜಿ ಪರಮೇಶ್ವರ್ ಉದ್ಘಾಟಿಸಿದ್ರು.ನಂತರ ಮಾತನಾಡಿದ ಅವರು,ಮೂಲನಿವಾಸಿ ಬುಡಕಟ್ಟು ಪಂಗಡಗಳಾದ ಜೇನು ಕುರುಬ, ಕೊರಗ ಮತ್ತು ಅರಣ್ಯ ಅವಲಂಬಿತ ಬುಡಕಟ್ಟು ಜನರು ರಾಜ್ಯದ ಎಂಟು ಜಿಲ್ಲೆಗಳಲ್ಲಿ ನೆಲೆಸಿದ್ದು, ಈ ಜಿಲ್ಲೆಗಳಲ್ಲಿ ತಲಾ ಎರಡು ಸಂಚಾರಿ ಘಟಕಗಳು ಕಾರ್ಯೋನ್ಮುಖವಾಗಲಿವೆ. ಮೊದಲನೇ ಹಂತದಲ್ಲಿ ಕೊಡಗು ಜಿಲ್ಲೆಯ ಸೋಮವಾರ ಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕುಗಳು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹೆಗ್ಗಡದೇವನಕೋಟೆ ಮತ್ತು ಹುಣಸೂರು ತಾಲ್ಲೂಕುಗಳು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಸಂಚಾರಿ ಆರೋಗ್ಯ ಘಟಕಗಳ ಸೇವೆ ಆರಂಭಗೊಳ್ಳಲಿದೆ ಎಂದ್ರು.

ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಂಟ್ವಾಳ ಹಾಗೂ ಪುತ್ತೂರು ತಾಲ್ಲೂಕುಗಳು, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ತರಿಕೆರೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕುಗಳಲ್ಲಿ ಉಳಿದ ಎಂಟು ಸಂಚಾರಿ ಘಟಕಗಳು ಕಾರ್ಯಾರಂಭಿಸಲಿವೆ ಎಂದ್ರು.

ಸಾಮಾನ್ಯವಾಗಿ ಜನನಿಬಿಡ ಪ್ರದೇಶಗಳಿಂದ ದೂರವಿದ್ದು ತುರ್ತು ಚಿಕಿತ್ಸೆಗಳಿಂದ ವಂಚಿತರಾಗಿರುವ ಅರಣ್ಯ ಅವಲಂಬಿತ ಬುಡಕಟ್ಟು ಮೂಲ ನಿವಾಸಿಗಳ ಮನೆ ಬಾಗಿಲಿನಲ್ಲೇ ಆರೋಗ್ಯ ಚಿಕಿತ್ಸೆ ನೀಡುವ ಈ ಯೋಜನೆ ದುರ್ಬಲವರ್ಗದವರ ಬಗೆಗೆ ನಮ್ಮ ಸರ್ಕಾರಕ್ಕಿರುವ ಬದ್ಧತೆಯನ್ನು ಬಿಂಬಿಸುತ್ತದೆ.ಸಮಾಜ ಕಲ್ಯಾಣ ಇಲಾಖೆ ಇಂತಹ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದ ಸೌಲಭ್ಯವಂಚಿತ ಕುಟುಂಬಗಳಿಗೆ ಪೂರಕವಾಗುವ ಹಾದಿಯಲ್ಲಿ ಸಾಗಲಾರಂಭಿಸಿದೆ ಎಂದೂ ಹೇಳಿದ್ರು.

ಪ್ರತಿ ಸಂಚಾರಿ ಆರೋಗ್ಯ ಘಟಕವು ವೈದ್ಯರು ಶುಶ್ರೂಷಕರು, ಪ್ಯಾರಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಕಿರಿಯ ಆರೋಗ್ಯ ಸಹಾಯಕಿ ಹಾಗೂ ಚಾಲಕರ ತಂಡವನ್ನು ಒಳಗೊಂಡಿರುತ್ತದೆ. ಈ ಸಂಚಾರಿ ಘಟಕವು ಪ್ರತಿನಿತ್ಯ ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಗ್ರಾಮಗಳಿಗೆ ಭೇಟಿ ನೀಡಿ ಮೂಲನಿವಾಸಿ ಪಂಗಡಗಳಾದ ಜೇನು ಕುರುಬ, ಕೊರಗ ಮತ್ತು ಅರಣ್ಯ ಅವಲಂಬಿತ ಬುಡಕಟ್ಟು ಜನರು ವಾಸಿಸುವ ಜಿಲ್ಲೆಗಳಲ್ಲಿ ಆರೋಗ್ಯ ತಪಾಸಣೆ, ಆರೋಗ್ಯ ಜಾಗೃತಿ ಮತ್ತು ಸರಳ ಆರೋಗ್ಯ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ರೋಗಿಗಳಿಗೆ ಅವಶ್ಯವಿರುವ ಔಷಧ ಸಾಮಗ್ರಿಗಳು ಈ ಸಂಚಾರಿ ಘಟಕದಲ್ಲಿ ಲಭ್ಯವಿರಲಿದ್ದು, ಅವಶ್ಯವಿರುವ ರೋಗಿಗಳಿಗೆ ಗುಳಿಗೆ ಮುತಾದ ಔಷಧಗಳನ್ನೂ ಸ್ಥಳದಲ್ಲಿಯೇ ವಿತರಿಸಲಾಗುವುದು ಎಂದರು.

ಈ ಸಂಚಾರಿ ಘಟಕಗಳು ಜಿ.ಪಿ.ಎಸ್. ಹಾಗೂ ಡಿಜಿಟಲ್ ಪೇಷಂಟ್ ರೆಕಾರ್ಡ್ ಸಿಸ್ಟಮ್ ಒಳಗೊಂಡಿರುತ್ತದೆ. ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸ್ಥಳದಲ್ಲಿಯೇ ಔಷೋಧೋಪಚಾರ ಮಾಡಲಾಗುವುದು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅವಶ್ಯವಿರುವ ರೋಗಿಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಒಳಗೊಂಡಿದೆ.

ನಟ ಸುದೀಪ್ ವಿರುದ್ಧ ವಂಚನೆ ಆರೋಪದಡಿ ದೂರು!

ಬೆಂಗಳೂರು: ಕಾಫೀ ಎಸ್ಟೇಟ್​ನಲ್ಲಿ ಶೂಟಿಂಗ್ ಮಾಡುವುದಾಗಿ ಅದನ್ನು ಬಳಸಿಕೊಂಡು ಬಾಡಿಗೆ ಹಣ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ನಟ, ನಿರ್ಮಾಪಕ ಕಿಚ್ಚ ಸುದೀಪ್​ ವಿರುದ್ಧ ದೂರು ದಾಖಲಾಗಿದೆ.

ವಂಚಿತ ದೀಪಕ್​ ಎಂಬುವರು ಫಿಲ್ಮ್ ಚೇಂಬರ್​ನಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ಸುದೀಪ್​ ನಿರ್ಮಾಣದಲ್ಲಿ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿದ್ದ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ಕಾಫೀ ಎಸ್ಟೇಟ್​ನ್ನು ಬಾಡಿಗೆಗೆ ಪಡೆಯಲಾಗಿತ್ತು. ಅಲ್ಲದೆ, 500 ವರ್ಷದ ಹಿಂದಿನ ಮನೆಯನ್ನು ಶೂಟಿಂಗ್​ಗೆ ಬಳಸಿಕೊಂಡಿದ್ದರು.

ಆದರೆ, ಶೂಟಿಂಗ್​ ಮಾಡಿಕೊಂಡು ಯಾವುದೇ ಬಾಡಿಗೆ ನೀಡಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವಂಚಿತ ದೀಪಕ್​ ಚಲನಚಿತ್ರ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ. ಅಧ್ಯಕ್ಷರಾದ ಚಿನ್ನೇಗೌಡರು ದೂರು ಸ್ವೀಕರಿಸಿದ್ದಾರೆ.