ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಸಿಎಂ ಕೈ ತಪ್ಪಿದ ರಾಮನಗರ

ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಕಡೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ.ಮೂವರು ಸಚಿವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ಸಿಕ್ಕಿದ್ದು,ಡಿಸಿಎಂ ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ ಪಾಲಿಗೆ ಹೆಚ್ಚುವರಿ ಉಸ್ತುವಾರಿ ಸಿಕ್ಕಿದೆ.

ಡಿಸಿಎಂ ಪರಮೇಶ್ವರ್- ಬೆಂಗಳೂರು ನಗರ, ತುಮಕೂರು
ಆರ್,ವಿ ದೇಶಪಾಂಡೆ-ಉತ್ತರ ಕನ್ನಡ ಮತ್ತು ಧಾರವಾಡ
ಡಿ.ಕೆ ಶಿವಕುಮಾರ್ ರಾಮನಗರ,ಬಳ್ಳಾರಿ
ಕೃಷ್ಣಬೈರೇಗೌಡ- ಬೆಂಗಳೂರು ಗ್ರಾಮಾಂತರ, ಕೋಲಾರ
ಕೆ.ಜೆ ಜಾರ್ಜ್-ಚಿಕ್ಕಮಗಳೂರು
ಶಿವಾನಂದಪಾಟೀಲ್ -ಬಾಗಲಕೋಟೆ
ರಮೇಶ್ ಜಾರಕಿಹೋಳಿ – ಬೆಳಗಾವಿ
ಪ್ರಿಯಾಂಕ್ ಖರ್ಗೆ-ಕಲಬುರಗಿ
ವೆಂಕಟರಾವ್ ನಾಡಗೌಡ- ರಾಯಚೂರು
ಸಿ ಎಸ್ ಪುಟ್ಟರಾಜು – ಮಂಡ್ಯ
ಹೆಚ್ ಡಿ ರೇವಣ್ಣ- ಹಾಸನ
ಎಸ್ ಆರ್ ಶ್ರೀನಿವಾಸ್(ವಾಸು)-ದಾವಣಗೆರೆ
ಬಂಡೆಪ್ಪ ಕಾಶೆಂಪೂರ್-ಬೀದರ್
ವೆಂಕಟರಮಣಪ್ಪ-ಚಿತ್ರದುರ್ಗ
ರಾಜಶೇಖರ ಪಾಟೀಲ್-ಯಾದಗಿರಿ
ಎನ್ ಹೆಚ್ ಶಿವಶಂಕರ ರೆಡ್ಡಿ- ಚಿಕ್ಕಬಳ್ಳಾಫುರ
ಸಾ ರಾ ಮಹೇಶ್-ಕೊಡಗು
ಎಮ್ ಸಿ ಮನಗೂಳಿ- ವಿಜಯಪುರ
ಡಿ ಸಿ ತಮ್ಮಣ್ಣ – ಶಿವಮೊಗ್ಗ
ಜಿ ಟಿ ದೇವೇಗೌಡ -ಮೈಸೂರು
ಯು ಟಿ ಖಾದರ್- ದಕ್ಷಿಣಕನ್ನಡ
ಎನ್ ಮಹೇಶ್-ಗದಗ
ಆರ್ ಶಂಕರ್ – ಕೊಪ್ಪಳ
ಜಯಮಾಲ-ಉಡುಪಿ
ಸಿ ಪುಟ್ಟರಂಗಶೆಟ್ಟಿ-ಹಾವೇರಿ

ಸದ್ಯದಲ್ಲೇ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವೆ: ಸಿಎಂ

ಬೆಂಗಳೂರು: ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಹತ್ತು ವರ್ಷದ ಹಿಂದೆಯೇ ಘೋಷಿಸಲಾಗಿದೆ. ಈಗ ಅದನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ. ಸುವರ್ಣಸೌಧದಕ್ಕೆ ಕೆಲವು ಇಲಾಖೆಗಳನ್ನು ವರ್ಗಾವಣೆ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತ್ ಸಿಇಓಗಳ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸುವರ್ಣ ಸೌಧದಲ್ಲಿ ವರ್ಷದ 365 ದಿನವೂ ಕೆಲಸ ಮಾಡುವಂತೆ ವ್ಯವಸ್ಥೆ ಮಾಡುತ್ತೇವೆ. ನಾನು ಅಖಂಡ ಕರ್ನಾಟಕದ ಅಭಿವೃದ್ಧಿ ಪರವಾಗಿದ್ದೇನೆ. ಇಷ್ಟರಲ್ಲೇ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಿಸುತ್ತೇನೆ. ಗ್ರಾಮ ವಾಸ್ತವ್ಯ ಮಾಡುವ ಬಗ್ಗೆ ಮುಂದಿನ‌ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದರು.

ಕೈಗಾರಿಕೆಗಳನ್ನು ಬೆಂಗಳೂರು ನಗರಕ್ಕೆ ಸೀಮಿತ ಮಾಡದೆ ಗುಲ್ಬರ್ಗ, ಬೀದರ್ ನಂತಹಾ ಜಿಲ್ಲೆಗಳಲ್ಲೂ ಕೈಗಾರಿಕಾ ಕ್ಲಸ್ಟರ್ ನಿರ್ಮಾಣಕ್ಕೆ ಭೂಮಿ ಗುರ್ತಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಹಣವನ್ನು ಗುಣಾತ್ಮಕ ವಾಗಿ ಸದ್ಬಳಕೆ ಮಾಡಿಕೊಳ್ಳುವ ಜತೆಯಲ್ಲಿ ಮಾನವೀಯ ನೆಲೆಯಲ್ಲಿ ಸರ್ಕಾರ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 1112 ವಸತಿ ಶಾಲೆಗಳಿವೆ. ಎರಡು ತಿಂಗಳಲ್ಲಿ ಜಿಲ್ಲಾಧಿಕಾರಿಗಳು ಭೂಮಿ ಗುರ್ತಿಸಿ ಸ್ವಂತ ಕಟ್ಟಡಗಳಲ್ಲಿ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಕಾಧಿಕಾರಿಗಳು ದಿಢೀರ್ ತಪಾಸಣೆ ಮಾಡಬೇಕು. ವಿವಿಧ ಜಾತಿ ಧರ್ಮಗಳ ಹೆಸರಲ್ಲಿ ವಸತಿ ನಿಲಯಗಳನ್ನು ಸೂಚಿಸದೆ, ಸಾರ್ವಜನಿಕ ವಸತಿ ನಿಲಯಗಳನ್ನು ಪ್ರಾರಂಭಿಸಲು ಸೂಚಿಸಲಗಿದೆ ಎಂದು ಹೇಳಿದರು.

ಜನತಾ ದರ್ಶನದಲ್ಲೂ ಅಂಗವಿಕಲರು ಮತ್ತು ಮಹಿಳೆಯರೊಂದಿಗೆ ಮಾನವೀಯತೆಯಿಂದ ಸ್ಪಂದಿಸಬೇಕು. ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಪರಿಹರಿಸಬೇಕು. ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ ಎರಡು ಮೂರು ಕೋಟಿ ರೂ ಹಣ ಇರುವಂತೆ ನೋಡಿಕೊಂಡು, ವಿಪತ್ತು ನಿರ್ವಹಣೆ ಮಾಡುವಂತೆ ಸೂಚಿಸಿದ್ದೇವೆ ಎಂದರು.

ಸಬ್ ರಿಜಿಸ್ಟ್ರಾರ್ ವರ್ಗಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆಯಾ ಸಚಿವರಿಗೆ ವರ್ಗಾವಣೆ ಜವಾಬ್ದಾರಿ ಕೊಟ್ಟಿದ್ದೇನೆ. ನನ್ನ ಮನೆ ಬಳಿ ಸೂಟ್ ಕೇಸ್ ಹಿಡಿದುಕೊಂಡು ಬರುತ್ತಾರೆ ಎಂದು ಶ್ರೀರಾಮುಲು ಹೇಳಿದ್ದಾರೆ. ಅವರು ನಮ್ಮ ಮನೆ ಬಳಿ ಬಂದು ನೋಡಿದ್ದಾರಾ. ನಾಲಿಗೆ ಮೇಲೆ ಅವರು ಸ್ವಲ್ಪ ಹಿಡಿತ ಇಟ್ಟುಕೊಂಡು ಮಾತನಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಚುನಾವಣಾ ರಾಜಕೀಯಕ್ಕೆ ಕಾಗೋಡು ತಿಮ್ಮಪ್ಪ‌ ಗುಡ್ ಬೈ

ಬೆಂಗಳೂರು: ಚುನಾವಣಾ ರಾಜಕೀಯಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕ,ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಗುಡ್ ಬೈ ಹೇಳಿದ್ದಾರೆ.ಚುನಾವಣೆ ರಾಜಕೀಯ ಸಾಕಾಗಿದೆ.ಇಷ್ಟು ವರ್ಷ ಹೋರಾಟ ಮಾಡಿದ್ದಾಯ್ತು.ಈಗ ವಯಸ್ಸಾಗಿದೆ. ಹೋರಾಟ ಸಾಧ್ಯವಿಲ್ಲ.ಹಾಗಾಗಿಯೇ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸಂಘಟನೆಗೆ ಹಿನ್ನೆಡೆಯಾಗುವ ಸೂಚನೆ ಸಿಕ್ಕಿದೆ.ಲೋಕಸಭೆ ಚುನಾವಣೆ ಸನಿಹದಲ್ಲಿ ಕೈ ಪಡೆ ಸಂಕಷ್ಠಕ್ಕೆ ಸಿಲುಕುವ ಸಾಧ್ಯತೆ ಎದುರಾಗಿದೆ.ಯಾಕಂದ್ರೆ ಸಕ್ರೀಯ ರಾಜಕೀಯದಿಂದ ಕೈ ನಾಯಕರು ದೂರವಾಗ್ತಿದ್ದಾರಾ ಎನ್ನುವ ಅನುಮಾನಕ್ಕೆ ಸಕ್ರೀಯ ರಾಜಕಾರಣದಿಂದ ದೂರ ಸರಿದ ಕಾಗೋಡು ನಿರ್ಧಾರ ಎಡೆಮಾಡಿಕೊಟ್ಟಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಇಂದು ವಿಧಾನಸೌಧದಲ್ಲಿ ಸ್ಪಷ್ಟಪಡಿಸಿದ್ರು. ಸಂಪೂರ್ಣವಾಗಿ ರಾಜಕೀಯ ನಿವೃತ್ತಿ ಘೋಷಿಸಿದ ಅವರು,ನನಗೆ ವಯಸ್ಸಾಯ್ತು. ಬೇರೆ ರೂಪದಲ್ಲಿ ಸಮಾಜದಲ್ಲಿ ತೊಡಗಿಸಿಕೊಳ್ತೀನಿ ಎಂದ್ರು.

ಈಡಿಗ ಸಮೂದಾಯದ ಪ್ರಬಲ ಮುಖಂಡ ಕಾಗೋಡು‌ ತಿಮ್ಮಪ್ಪ ಆಗಿದ್ದು ಇದೀಗ ಕಾಂಗ್ರೆಸ್ ನಲ್ಲಿ ಈಡಿಗ ಸಮಾಜದ ನಾಯಕರೇ ಇಲ್ಲದಂತಾಗಿದೆ.ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಈಡಿಗ ಸಮುದಾಯದ ಪ್ರಮುಖ ನಾಯಕರಾಗಿದ್ದು,ಬಂಗಾರಪ್ಪ ನಂತರ ಕಾಗೋಡು ತಿಮ್ಮಪ್ಪ ನಾಯಕರಾಗಿದ್ರು.ಇದೀಗ ಅವರು ನಿವೃತ್ತಿ ಘೋಷಿಸಿದ್ದಾರೆ.ಬಂಗಾರಪ್ಪ ಪುತ್ರ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿ ಸೇರಿದ್ದು ಮಧು ಬಂಗಾರಪ್ಪ ಜೆಡಿಎಸ್ ನಲ್ಲಿದ್ದಾರೆ.ಹರತಾಳು ಹಾಲಪ್ಪ ಕೂಡ ಬಿಜೆಪಿಯಲ್ಲಿದ್ದು ಸಧ್ಯ ಬೇಳೂರು ಗೋಪಾಲಕೃಷ್ಣ ಮಾತ್ರ ಕಾಂಗ್ರೆಸ್ ನಲ್ಲಿರುವ ಈಡಿನ ನಾಯಕರಾಗಿದ್ದಾರೆ.

ಕಾಗೋಡು ತಿಮ್ಮಪ್ಪ ಅವರ ಪುತ್ರಿ ರಾಜಕೀಯ ಪ್ರವೇಶಿಸುತ್ತಾರೆ, ಕಾಗೋಡು ಉತ್ತರಾಧಿಕಾರಿಯಾಗಲಿದ್ದಾರೆ ಎನ್ನುವ ಮಾತುಗಳು‌ ಹರಿದಾಡಿದ್ದವಾದರೂ ಕೂಡ ಅದು ಅಲ್ಲಿಗೆ ನಿಂತಿದೆ.ಇದೀಗ ಕಾಗೋಡು ರಾಜಕೀಯಕ್ಕೆ ಗುಡ್ ಬೈ ಹೇಳಿದ್ದು ಕೈ ಪಾಳಯದಲ್ಲಿ ಈಡಿಗ ಸಮುದಾಯದ ನಾಯಕ ಯಾರು ಎನ್ನುವ ಪ್ರಶ್ನೆ ಹುಟ್ಟಿಸಿದೆ.

ಮಾಲಿನ್ಯ‌ ನಿಯಂತ್ರಣಕ್ಕೆ ಕಠಿಣ ಕಾನೂನು‌ಜಾರಿ ಅಗತ್ಯ: ಉಪಮುಖ್ಯಮಂತ್ರಿ ಡಾ.ಜಿ.‌ಪರಮೇಶ್ವರ್

ಬೆಂಗಳೂರು:ನಮ್ಮ ಮಹಾನಗರ ವಾಯುಮಾಲಿನ್ಯದಲ್ಲಿ ಟಾ‌ಪ್‌ ೧೦ ಪಟ್ಟಿಯಲ್ಲಿ ಇಲ್ಲದೆ ಇದ್ದರೂ, ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ತರುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಸಿ-40 ಸಿಟಿ ಗ್ಲೋಬಲ್ ಏರ್ ಕ್ವಾಲಿಟಿ ಫೋರಮ್ ಹಾಗೂ ಬಿಬಿಎಂಪಿ ವತಿಯಿಂದ ಮಂಗಳವಾರ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸಭೆ ಹಾಗೂ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಳೆದ ೩೦ ವರ್ಷದಲ್ಲಿ ಇಡೀ ಪ್ರಪಂಚದ ಚಿತ್ರಣ ಬದಲಾಗಿದೆ.‌ ಜಾಗತೀಕರಣದ ಬಳಿಕ ಸಾಕಷ್ಟು ಅಭಿವೃದ್ಧಿ ಕಂಡಿದ್ದೇವೆ. ಇದರೊಟ್ಟಿಗೆ ಪರಿಸರ, ವಾಯು ಮಾಲಿನ್ಯ ಮಿತಿ‌ ಮೀರಿದೆ. ಭಾರತದಲ್ಲಿ ಮಾಲಿನ್ಯ ಪ್ರಮಾಣ 60 ಯುನಿಟ್ ಮೀರಿರಬಾರದು. ಆದರೆ, ದೆಹಲಿ 292, ಫರಿದಾಬಾದ್ 272, ವಾರಣಾಸಿ 262 ಯುನಿಟ್ ಇದೆ. ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಮಾಲಿನ್ಯದಿಂದ ಈ ರಾಜ್ಯಗಳು ಮಾಲಿನ್ಯದ ಸಮಸ್ಯೆ ಎದುರಿಸುತ್ತಿವೆ. ಸಂತಸದ ವಿಚಾರವೆಂದರೆ ಬೆಂಗಳೂರು ಟಾಪ್‌ ೧೦ ಮಾಲಿನ್ಯ ಪಟ್ಟಿ ನಗರದಲ್ಲಿ ಇಲ್ಲ‌. ೬೦-೭೦ ಪ್ರಮಾಣದಲ್ಲಿ ಮಾತ್ರ ಬೆಂಗಳೂರು ಇದೆ. ಹಾಗೆಂದು, ಮಾಲಿನ್ಯದಲ್ಲಿ ಸುರಕ್ಷತಾ ನಗರದ ಪಟ್ಟಿಯಲ್ಲೂ ಇಲ್ಲದಿರುವುದು ಆತಂಕದ ಸಂಗತಿ ಎಂದರು.

೬೦ ಯುನಿಟ್ ನೊಳಗೆ ಇರುವ ನಗರಗಳ ಪೈಕಿ ಮಂಡ್ಯ, ಮಂಗಳೂರು, ಭದ್ರಾವತಿ ಕೂಡ ಇದೆ. ಈ ನಗರದಲ್ಲಿ‌ ಮಾಲಿನ್ಯ ಸಮತಟ್ಟಾಗಿದೆ. ಬೆಂಗಳೂರು‌ನಗರ ಕಳೆದ ೧೦ ವರ್ಷದಲ್ಲಿ ಸಾಕಷ್ಟು ಬೆಳೆದಿದೆ. ಶೇ.23ರಷ್ಟಿದ್ದ ಜನಸಂಖ್ಯೆ ,ಈಗ 36 %ಗೆ ಹೆಚ್ಚಳವಾಗಿದೆ. ಇದರೊಂದಿಗೆ ನಗರದ ಮೂಲಸೌಕರ್ಯ ಕೂಡ ಹೆಚ್ಚಿಸಿದ್ದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ ಎಂದರು.

ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಸುತ್ತಲೂ ಮರಗಳೇ ಕಾಣುತ್ತಿದ್ದವು. ಸ್ವಚ್ಛಂದ ವಾತಾವರಣವಿತ್ತು. ಉಷ್ಣಾಂಶ ಗರಿಷ್ಟವೆಂದರೆ ಶೇ.27 ಇರುತ್ತಿತ್ತು. ಸಾಮಾನ್ಯವಾಗಿ ಶೇ.23 ರಷ್ಟು ಇರುತ್ತದೆ.‌ಇದರಿಂದ ಇತರೆ ಜಿಲ್ಲೆ, ರಾಜ್ಯಗಳಿಂದ‌ ಜನರು ಇಲ್ಲಿಗೆ ನೆಮ್ಮದಿಯಿಂದ ಜೀವನ‌ ನಡೆಸಲು ಬರುತ್ತಿದ್ದರು. ಈ 10 ವರ್ಷದ ಬಳಿಕ ಸಾಕಷ್ಟು ಬದಲಾಗಿದೆ. ಜನರ ವಲಸೆಯಿಂದ ಜನಸಂಖ್ಯೆ ಇಂದು 1.3 ಕೋಟಿ ಇದೆ. ನಿತ್ಯ 72 ಲಕ್ಷ ವಾಹನ ಸಂಚರಿಸುತ್ತಿವೆ. ಇದರಿಂದ ಮೂಲಸೌಕರ್ಯ ಹೆಚ್ಚಿಸುವ ಭರದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಇದನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ‌ಬುತ್ತಿ ಎಂದರು.

ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕಾನೂನು ತರುವ ಅಗತ್ಯವಿದೆ. ಜನರಿಗೆ ಜಾಗೃತಿ ಮೂಡಿಸಬೇಕಿದೆ. ಇಂದು ನಿಯಂತ್ರಣ ಮಾಡದಿದ್ದರೆ ಮುಂದೆ ದೊಡ್ಡ ಗಂಡಾಂತರವನ್ನು‌ ನಾವೇ ಅನುಭವಿಸಬೇಕು. ಶಾಲೆಗಳಲ್ಲಿಯೇ ಜಾಗೃತಿ ಮೂಡಿಸು ಕೆಲಸ‌ ಮಾಡಿಸಬೇಕು.ಟ್ರಾಫಿಕ್ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ. ಈ ಮೂಲಕವೂ ಕೂಡ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಒಟ್ಟಾರೆ, ಶಾಂತಿಯುತ ಹಾಗೂ ಮಾಲಿನ್ಯ ಮುಕ್ತ ನಗರವನ್ನು‌ ನಾವೆಲ್ಲಾ‌ ನಿರ್ಮಿಸಬೇಕು.ಈ ನಿಟ್ಟಿನಲ್ಲಿ ಸಿ-40 ಸಿಟಿ ಅವರು ಈ ವಿಚಾರಗೋಷ್ಠಿ ನಡೆಸುತ್ತಿರುವುದು ಪ್ರಸ್ತುತವಾಗಿದೆ. ಉತ್ತಮ ಚರ್ಚೆ ಬಳಿಕ ಇದನ್ನು ಸರಕಾರಕ್ಕೆ ಮಾಹಿತಿ ನೀಡಿ‌ ಎಂದರು.

ಕಾರ್ಯಕ್ರಮದಲ್ಲಿ ಮೇಯರ್ ಸಂಪತ್ ರಾಜ್, ಉಪಮೇಯರ್ ಪದ್ಮಾವತಿ, ಶಾಲಿನಿ ರಜನೀಶ್ ಇದ್ದರು.

ಸರಕಾರಕ್ಕೆ ಏನೂ ಆಗಲ್ಲ, ಡೋಂಟ್ ವರಿ, ಕೆಲಸ ಮಾಡಿ: ಸಿಎಂ

ಬೆಂಗಳೂರು: ಸರಕಾರದಲ್ಲಿ ಸಾಕಷ್ಟು ಸಮಸ್ಯೆಗಳಿರಬಹುದು. ಆದರೆ ಈ ಸರ್ಕಾರ ಎಷ್ಟು ದಿನ ಇರುತ್ತೆ ಎಂಬ ಭಾವನೆ ಬೇಡ. ಎಲ್ಲ ಅಧಿಕಾರಿಗಳಿಗೆ ಆ ಭಾವನೆ ಇದೆ ಅಂತ ಹೇಳೊಲ್ಲ. ಮಾಧ್ಯಮಗಳಲ್ಲಿ ಅಂತ ಸುದ್ದಿ ಬಿತ್ತರ ಆಗ್ತಿದೆಯಷ್ಟೇ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡಿ ಎಂದು ಅಧಿಕಾರಿ ವರ್ಗಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ‌ ಜಿಲ್ಲಾ ಪಂಚಾಯಿತಿ ಸಿಇಓಗಳ ಸಭೆ ನಡೆಸಿ ಮಾತನಾಡಿದ ಸಿಎಂ,ಸರ್ಕಾರ ಸುಭದ್ರವಾಗಿರುತ್ತೆ, ಅದರ ಬಗ್ಗೆ ವರಿ ಮಾಡಬೇಡಿ ಸರ್ಕಾರ ಎಷ್ಟು ದಿನ ಇರುತ್ತೋ? ಸುಮ್ನೆ ಆಟ ಆಡ್ಕೊಂಡು ಹೋಗೋಣ ಅಂತಾ ಕೆಲ ಅಧಿಕಾರಿಗಳಿಗೆ ಭಾವನೆ ಇದೆ ಆ ಭಾವನೆ ಬೇಡ, ಜನಪರ ಕೆಲಸಗಳತ್ತ ಗಮನ ಕೊಡಿ ಮಾಧ್ಯಮಗಳಲ್ಲಿ ಬರೋದಕ್ಕೆ ತಲೆಕೆಡಿಸಿಕೊಳ್ಳಬೇಡಿ ನೀವು ಕೆಲಸ ಮಾಡುವ ಅಧಿಕಾರ ಸ್ಥಳ ದೇವಸ್ಥಾನ ಇದ್ದಂಗೆ ಜನರು, ಅಧಿಕಾರ ವರ್ಗದ ನಡುವೆ ಕಂದಕ ಸೃಷ್ಟಿ ಮಾಡಬೇಡಿ ಜಿಲ್ಲಾಧಿಕಾರಿಗಳು ಜಿಲ್ಲಾ ಕಚೇರಿಗಳಲ್ಲೇ ಕುಳಿತರೇ ಆಗಲ್ಲ‌ ತಿಂಗಳಿಗೆ ಒಂದು ಬಾರಿಯಾದರೂ ತಾಲ್ಲೂಕುಗಳಿಗೆ ತೆರಳಿ ಸಭೆ ನಡೆಸಿ ಎಂದರು.

ಚುನಾವಣೆಯಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತ ಆಗಿದೆ. ನಮಗಿರುವ ಸಮಯದಲ್ಲಿ ರಾಜ್ಯ ಸರ್ಕಾರದ ಪೂರ್ಣ ಬಜೆಟ್ ಮಂಡನೆಯಾಗಿದೆ. ಈ ಸರ್ಕಾರದ ಯೋಜನೆಗಳ ಅನುಷ್ಟಾನ ಅಗತ್ಯವಿದೆ. ನಿರುದ್ಯೋಗ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕೊಡಲು ಸಾಧ್ಯವಿಲ್ಲ ಕೌಶಲ್ಯಾಭಿವೃದ್ದಿ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಒಂದು ಟೀಂ ಮಾಡಿಕೊಂಡು ನಿರುದ್ಯೋಗಿಗಳಿಗೆ ಕೆಲಸ ಕೊಡಿಸಬೇಕು. ಮೂವತ್ತೂ ಜಿಲ್ಲಾಧಿಕಾರಿಗಳು ಜನ ಸಂಪರ್ಕ ಕಾರ್ಯಕ್ರಮಗಳನ್ನ ಮಾಡಬೇಕು‌ ಸರ್ಕಾರ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಬೇಕ‌ ಯಾವುದೇ ಕಾರ್ಯಕ್ರಮಗಳಲ್ಲಿ ರಾಜಕೀಯ ಇರಬಾರದು, ಪಕ್ಷಕ್ಕೆ ಸೀಮಿತವಾಗಬಾರದು ಜನರ ವರಮಾನವನ್ನ ದ್ವಿಗುಣಗೊಳಿಸಬೇಕು ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಕಾರ್ಯಕ್ರಮ ತಲುಪಬೇಕು ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಸೌಕರ್ಯಗಳು, ಸ್ವಚ್ಚತೆ ಕಾಪಾಡುವ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಪ್ರೈಸ್ ಪರಿಶೀಲನೆ ಮಾಡಬೇಕು. ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಬೇಕು ನಮ್ಮಿಂದ ನಿಮಗೆ ಯಾವುದೇ ಅನಾನುಕೂಲವಾಗಲ್ಲ ನಿಮಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ‌ ಹಲವಾರು ಜಿಲ್ಲೆಗಳಲ್ಲಿ ಬರಗಾಲ ಇದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಚಿತ್ರದುರ್ಗ ರೈತರಿಗೆ ಸಮಸ್ಯೆಗೊಳಗಾಗಿದ್ದಾರೆ
ನಾಲ್ಕು ಜಿಲ್ಲೆಗಳಿಗೆ ಮಾತ್ರ ಸಿಎಂ ಅಂತ ಕೆಲವು ಮಾಧ್ಯಮದವರು ಹೇಳ್ತಾರೆ ಇದು ಸಣ್ಣ ತನ, ನೀವು ದಾರಿ ತಪ್ಪಬೇಡಿ. ಉತ್ತರ ಕರ್ನಾಟಕದ ವಿರೋಧಿ ಸರಕಾರ ಉತ್ತರ ಕರ್ನಾಟಕಕ್ಕೆ ಏನೂ ಮಾಡಿಲ್ಲ ಅಂತಾರೆ ಬಂಡವಾಳ ಹೂಡಿಕೆದಾರರಿಗೆ ಮುಕ್ತವಾದ ಅವಕಾಶ ಕಲ್ಪಿಸಿಕೊಟ್ಟಿದ್ದೀವಿ, ಬಳ್ಳಾರಿ, ಯಾದಗಿರಿಗೆ ವಿಶೇಷ ಆಧ್ಯತೆ ಕೊಟ್ಟಿದ್ದೀವಿ ಅಲ್ಲೇ ಉದ್ಯೋಗ ಸೃಷ್ಠಿಗೆದಾಗಿದ್ದೇವೆ.

ಎಂಟತ್ತು ದಿನಗಳ ನಂತರ ಪ್ರತೀ ಜಿಲ್ಲೆ ಪ್ರವಾಸ ಮಾಡುತ್ತೇವೆ ಎರಡು ದಿನ ಆಯಾ ಜಿಲ್ಲೇಗಳಲ್ಲೇ ಇರ್ತೀನಿ ಅಷ್ಟರೊಳಗೆ ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನ ಬಗೆ ಹರಿಸಬೇಕು. ತೆರಿಗೆ ಸಂಗ್ರಹದಲ್ಲಿ ಸರಕಾರ ವಿಫಲವಾಗಿದೆ ಅಂತಾರೆ ಮಾಧ್ಯಮಗಳು ಮಿಸ್ ಗೈಡ್ ಮಾಡ್ತಿವೆ ಇಂಥ ಮಾಹಿತಿ ಮಾಧ್ಯಮದವರಿಗೆ ಯಾರು ಕೊಡ್ತಾರೋ ಗೊತ್ತಿಲ್ಲ ಹಣದ ಕೊರತೆ ನಮ್ಮ ಸರ್ಕಾರದಲ್ಲಿಲ್ಲ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಶಾಲಾ ಕಾಲೇಜುಗಳ ಕಟ್ಟಡಗಳು, ಲ್ಯಾಬ್ ಗಳ ನಿರ್ಮಾಣ ಮಾಡ್ತಿದ್ದೇವೆ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ನೀರಾವರಿ ಯೋಜನೆಗಳ ಜಾರಿಗೆ ತರ್ತಿದ್ದೇವೆ ಸರ್ಕಾರದಿಂದ ನಿಮಗೇನು ಸವಲತ್ತು ಬೇಕೋ ಕೊಡ್ತೀವಿ ಒಳ್ಳೆಯ ಟೀಂ ಲೀಡರ್ (ವಿಜಯ್ ಭಾಸ್ಕರ್) ನಿಮಗೆ ಸಿಕ್ಕಿದ್ದಾರೆ ಕೃಷಿ, ಕಾರ್ಮಿಕ, ತೋಟಗಾರಿಕೆ, ಕಂದಾಯ ಒಂದು ಸಾವಿರ ಕಿ.ಲೋ ಮೀಟರ್ ರಸ್ತೆಯನ್ನ ಪೂರ್ಣ ಮಾಡಬೇಕಿದೆ ಭೂಸ್ವಾಧೀನ ಇಲಾಖೆಯಲ್ಲಿ ಸ್ವಲ್ಪ ಅನಾನುಕೂಲವಾಗಿದೆ ಏನೇ ಕೊರತೆ ಇದ್ರೂ ನಮ್ಮ ಗಮನಕ್ಕೆ ತನ್ನಿ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ ಇದ್ರೆ ಸರಿಪಡಿಸೋಣ ಒಳ್ಳೆಯ ರೀತಿಯಲ್ಲಿ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡದೇ, ಪ್ರಾಮಾಣಿಕವಾಗಿ ಕೆಲಸ ಮಾಡಿ. ವಸತಿ ಸೌಲಭ್ಯ ಕಲ್ಪಿಸಿಕೊಡುವ ದೊಡ್ಡ ಯೋಜನೆ ಹಾಕಿಕೊಂಡಿದ್ದೇವೆ ಸರ್ಕಾರಿ ಭೂಮಿ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಆದ್ಯತೆ ಮೇರೆಗೆ ಭೂಮಿ ಲಭ್ಯತೆ ಇದೆ. ರಸ್ತೆ, ವಿದ್ಯಾರ್ಥಿನಿಲಯ, ಆಸ್ಪತ್ರೆ, ಶಾಲಾ ಕಾಲೇಜು ನಿರ್ಮಾಣ ಮಾಡೋದಕ್ಕೆ ಆಧ್ಯತೆ ಕೊಡಬೇಕಾಗಿದೆ ಎಂದ ಸಭೆಯಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಕಂದಕಕ್ಕೆ ಉರುಳಿದ ಬಸ್: 33 ಮಂದಿ ಉಪನ್ಯಾಸಕರು ದುರ್ಮರಣ

ಮಹಾರಾಷ್ಟ್ರ: ಪ್ರವಾಸಕ್ಕೆ ತೆರಳಿದ 34 ಉಪನ್ಯಾಸಕರಿದ್ದ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಬಿದ್ದು 33 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪವಾಡದ ರೀತಿಯಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾಪೋಲಿ ಕೃಷಿ ವಿವಿಯ ಉಪನ್ಯಾಸಕರು ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಮಹಾಬಲೇಶ್ವರದ ಪೋಲಾದ್‌ಪುರ್‌ ಘಾಟ್‌ನಲ್ಲಿ ಕಂದಕಕ್ಕೆ ಉರುಳಿದೆ. ಸುಮಾರು 300 ಅಡಿ ಆಳಕ್ಕೆ ಬಸ್ ಬಿದ್ದಿರುವುದರಿಂದ ಹಲವು ಜನರು ಬಂಡೆಗಳ ಕೆಳಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡ‌ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.