ಪಿಯುಸಿ ಉತ್ತೀರ್ಣರಾದ ಎಲ್ಲರಿಗೂ ಪದವಿಗೆ ಅವಕಾಶ : ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಪ್ರಸರಣ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ್ದರಿಂದ ಅವರ ಹಿಂದಿನ ಶೈಕ್ಷಣಿಕ ಸಾಧನೆಗಳನ್ನು ಆಧರಿಸಿ ಫಲಿತಾಂಶ ಘೋಷಿಸಿ ಎಲ್ಲರನ್ನು ಉತ್ತೀರ್ಣಗೊಳಿಸಿರುವುದರಿಂದ ಎಲ್ಲರಿಗೂ ಪದವಿ ತರಗತಿಗಳಲ್ಲಿ ಸೀಟುಗಳನ್ನು ದೊರೆಯುವ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಮಂಗಳವಾರ ಪಿಯುಸಿ ಫಲಿತಾಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿ ಮಾತನಾಡಿದ ಅವರು, ಪದವಿ ಕಾಲೇಜುಗಳಿಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಪಿಯುಸಿ ಉತ್ತೀರ್ಣರಾಗುವ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಪದವಿ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲು ಕಾಲೇಜು ಶಿಕ್ಷಣ ಇಲಾಖೆ ಪದವಿ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳಿಗೆ ಅವಕಾಶ ಕಲ್ಪಿಸಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ ಅವರೂ ಸಹ ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ವೈಜ್ಞಾನಿಕ ಆಧಾರದಲ್ಲಿ ಫಲಿತಾಂಶ ಘೋಷಣೆ:
ಈಗ ಪಾಸಾಗುತ್ತಿರುವ ಎಲ್ಲ ಮಕ್ಕಳು ಕಳೆದ ವರ್ಷ ಮೊದಲ ಪಿಯುಸಿ ತರಗತಿಗಳನ್ನು ಪರೀಕ್ಷೆಯ ಮೂಲಕ ಉತ್ತೀರ್ಣರಾಗಿದ್ದು, ಆ ಅಂಕಗಳು ಮತ್ತು ಅವರ 10ನೇ ತರಗತಿ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯು ಫಲಿತಾಂಶಗಳನ್ನು ಘೋಷಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

2019-20ನೇ ಸಾಲಿನಲ್ಲಿ ನಡೆದ ಮೊದಲ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಅವರ ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದ ಮೇಲೆ ಈ ಬಾರಿಯ ದ್ವಿತೀಯ ಪಿಯುಸಿ ಅಂಕಗಳನ್ನು ನಿರ್ಧರಿಸಲಾಯಿತು. ಆ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತಿದೆ. ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಕುರಿತಂತೆ ಅಧಿಕೃತ ಸರ್ಕಾರದ ಆದೇಶ ಪ್ರಕಟಣೆ ಮೂಲಕ ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.

ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೆ ಅನುಗುಣವಾಗಿ ಫಲಿತಾಂಶಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದೂ ಸಚಿವರು ಹೇಳಿದರು.

ಎಸ್ಸೆಸ್ಸೆಲ್ಸಿ ಅಥವಾ ಇತರೆ ಮಂಡಳಿಗಳ 10ನೇ ತರಗತಿಯಲ್ಲಿ ಪಡೆದ ವಿಷಯವಾರು ಅಂಕಗಳಲ್ಲಿ ಶೇ. 45ರಷ್ಟು ಅಂಕಗಳು, ಪ್ರಥಮ ಪಿಯುಸಿಯಲ್ಲಿ ಪಡೆದಿರುವ ಶೇ. 45ರಷ್ಟು ಅಂಕಗಳು, ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚುಟುವಟಿಕೆಗಳಿಗೆ ಶೇ. 10ರಷ್ಟು ಅಂಕಗಳು ಮತ್ತು ಪ್ರಥಮ ಪಿಯುಸಿ ಪಡೆದ ಅಂಕಗಳಿಗೆ ಶೇ. 5 ಅಂಕಗಳನ್ನು ಸಿದ್ಧಪಡಿಸಿ ಫಲಿತಾಂಶವನ್ನು ನಿರ್ಣಯಿಸಲಾಗಿದೆ ಎಂದು ಸುರೇಶ್ ಕುಮಾರ್ ಫಲಿತಾಂಶ ಘೋಷಣೆಯ ವಿವರಗಳನ್ನು ನೀಡಿದರು.

ಒಂದು ವೇಳೆ ಘೋಷಿತ ಫಲಿತಾಂಶದಿಂದ ಪಡೆದ ಅಂಕಗಳು ತೃಪ್ತಿಕರವೆನಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳೂ ಮುಂದಿನ ದಿನಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.

ನಾವು ಘೋಷಿಸಿದಂತೆ ನಿಗದಿತ ಅವಧಿಯಲ್ಲೇ ಫಲಿತಾಂಶ ಪ್ರಕಟಿಸಿದ್ದೇವೆ. ಸಿಬಿಎಸ್‍ಇನವರಿಗಿಂತ ಫಲಿತಾಂಶ ಘೋಷಿಸಬೇಕೆಂಬುದು ನಮ್ಮ ಮಕ್ಕಳ ಇಚ್ಛೆಯಾಗಿತ್ತು ಎಂದು ಸಚಿವರು ಹೇಳಿದರು.

ಪುನರಾವರ್ತಿತ ಅಭ್ಯರ್ಥಿಗಳ ತೇರ್ಗಡೆ:
ಕೋವಿಡ್-19 ಸೋಂಕು ಪ್ರಸರಣದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ ಪುನರಾವರ್ತಿತ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲಾಗುತ್ತಿದೆ. ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ಮತ್ತು ಶೇ. 5ರಷ್ಟು ಕೃಪಾಂಕಗಳನ್ನು ನೀಡಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಪಿಯುಸಿ ಪರೀಕ್ಷಾ ಫಲಿತಾಂಶ ವಿವರ: ಒಟ್ಟು ವಿದ್ಯಾರ್ಥಿಗಳು 666497, ಬಾಲಕರು – 335138, ಬಾಲಕಿಯರು- 331359. ಹೊಸ ವಿದ್ಯಾರ್ಥಿಗಳು – 590153, ಪುನರಾವರ್ತಿತ ವಿದ್ಯಾರ್ಥಿಗಳು- 76344. ವಾಣಿಜ್ಯ ವಿಭಾಗ- 251686, ವಿಜ್ಞಾನ ವಿಭಾಗ- 219777, ಕಲಾ ವಿಭಾಗ- 195034 ವಿದ್ಯಾರ್ಥಿಗಳಿದ್ದಾರೆ.

5,18,903 ನಗರ ಅಭ್ಯರ್ಥಿಗಳಿದ್ದರೆ, 1,47,594 ಗ್ರಾಮೀಣ ಅಭ್ಯರ್ಥಿಗಳಿದ್ದಾರೆ. ಒಟ್ಟು ಅಭ್ಯಥಿ೵ಗಳಲ್ಲಿ 4,50,706 ವಿದ್ಯಾರ್ಥಿಗಳು ಮೊದಲ ಶ್ರೇಣಿ ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದರೆ, 1,47,055 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 68,729 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

1428 ವಿಕಲಚೇತನ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, ಅದರಲ್ಲಿ 84 ಮಂದಿ ಉನ್ನತ ಶ್ರೇಣಿ, 603 ಪ್ರಥಮ ಶ್ರೇಣಿ, 459 ಮಂದಿ ದ್ವಿತೀಯ ಶ್ರೇಣಿ ಮತ್ತು 310 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಕನ್ನಡ ಮಾಧ್ಯಮದ 2,75,599 ಮಕ್ಕಳು ಕನ್ನಡ ಮಾಧ್ಯಮ ಮತ್ತು 3,90,898 ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದವರು.

600ಕ್ಕೆ 600 ಅಂಕಗಳ ಫಲಿತಾಂಶ ಪಡೆದ ಮಕ್ಕಳು:
ರಾಜ್ಯದ ಎಲ್ಲ 32 ಶೈಕ್ಷಣಿಕ ಜಿಲ್ಲೆಗಳ ಹಲವಾರು ಪದವಿ ಪೂರ್ವ ಕಾಲೇಜುಗಳ ಮಕ್ಕಳು 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 2239 ಫ್ರೆಶ್ ವಿದ್ಯಾರ್ಥಿಗಳು ಪೂರ್ಣ ಅಂಕ ದಾಖಲಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ 445, ಬೆಂಗಳೂರು ದಕ್ಷಿಣ-302, ಬೆಂಗಳೂರು ಉತ್ತರ-261, ಉಡುಪಿ-149, ಕೊಡಗು-04, ರಾಯಚೂರು/ಚಿಕ್ಕೋಡಿ-07, ಚಾಮರಾಜನಗರ-03, ಯಾದಗಿರಿ ಜಿಲ್ಲೆ-02 ಮಕ್ಕಳು ಪೂಣ೵ ಅಂಕಗಳನ್ನು ಗಳಿಸಿದ್ದಾರೆ.

ಆಗಸ್ಟ್‌ನಲ್ಲಿ ವಾರ್ಷಿಕ ಪರೀಕ್ಷೆ:
ಈ ಬಾರಿಯ ದ್ವಿತೀಯ ಪಿಯು ಫಲಿತಾಂಶವನ್ನು ಒಪ್ಪಿಕೊಳ್ಳಲು ಇಲ್ಲವೇ ತಿರಸ್ಕರಿಸಲು ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿದ್ದ ಫ್ರೆಷರ್ಸ್ ಮತ್ತು ರಿಪೀಟರ್ಸ್ ಅಭ್ಯ‌ರ್ಥಿಗಳಿಗೆ ಅವಕಾಶವಿದ್ದು, ವಾರ್ಷಿಕ ಪರೀಕ್ಷೆಗೆ ಹಾಜರಾಗಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.

ಅದರಂತೆ ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿ ಪರೀಕ್ಷೆಗೆ ಹಾಜರಾಗಿ ಈ ಫಲಿತಾಂಶ ತಿರಸ್ಕರಿಸುವ ಹೊಸ ವಿದ್ಯಾರ್ಥಿಗಳಿಗೆ (ಫ್ರೆಷರ್ಸ್) ಮತ್ತು ಪುನರಾವರ್ತಿತ (ರಿಪೀಟರ್ಸ್) ಅಭ್ಯ‌ರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ.

ಈ ಎರಡು ವರ್ಗದ ಅಭ್ಯರ್ಥಿಗಳು ಫಲಿತಾಂಶ ತಿರಸ್ಕರಿಸಿ ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಜುಲೈ 30ರಂದು ಕೊನೆಯ ದಿನವಾಗಿದೆ.

ಹಾಗೆಯೇ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ಖಾಸಗಿ (ಪ್ರೈವೇಟ್) ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಬೇಕಿದೆ. ಈ ಖಾಸಗಿ ಅಭ್ಯರ್ಥಿಗಳು ಈಗಾಗಲೇ ಪರೀಕ್ಷೆಗೆ ನೊಂದಾಯಿಸಿಕೊಂಡಿರುವುದರಿಂದ ಅವರು ಮತ್ತೆ ಪರೀಕ್ಷೆಗೆ ನೊಂದಾಯಿಸಬೇಕಾದ ಅಗತ್ಯವಿಲ್ಲ.

ಈ ಮೂರು ವರ್ಗದ ಅಭ್ಯರ್ಥಿಗಳಿಗೆ ಆಗಸ್ಟ್ ತಿಂಗಳ ಉತ್ತರಾರ್ಧದಲ್ಲಿ ಪರೀಕ್ಷೆ ನಡೆಸಲಾಗುವುದು. ಆಗಸ್ಟ್‍ನಲ್ಲಿ ನಡೆಯುವ ಪರೀಕ್ಷೆ ಸಹ ವಾರ್ಷಿಕ ಪರೀಕ್ಷೆಯೇ ಆಗಿರುತ್ತದೆ. ಈ ಬಾರಿಯ ಫಲಿತಾಂಶ ತಿರಸ್ಕರಿಸಿ ಆಗಸ್ಟ್‍ನಲ್ಲಿ ಪರೀಕ್ಷೆಗೆ ಹಾಜರಾಗುವ ಫ್ರೆಷರ್ ಅಭ್ಯರ್ಥಿಗಳನ್ನು ಫ್ರೆಷರ್ ಎಂದೇ ಪರಿಗಣಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿವೆ ಎಂದು ಸಚಿವರು ಪರೀಕ್ಷೆಯ ವಿವರಗಳನ್ನು ಒದಗಿಸಿದರು.

ಯಾರೂ ಅಧೀರರಾಗಬಾರದು:
ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಬಂದ ನಂತರ ತನಗೆ ಕಡಿಮೆ ಅಂಕಗಳು ಬರಬಹುದೆಂದು ಹೊಸನಗರ ಜಿಲ್ಲೆಯ ರಿಪ್ಪನ್‍ಪೇಟೆಯ ವಿದ್ಯಾರ್ಥಿನಿ ಕೆಂಚನಾಲ ಚೇತನ ಆತ್ಮಹತ್ಯೆಗೆ ಯತ್ನ ಮಾಡಿದ್ದನ್ನು ಪ್ರಸ್ತಾಪಿಸಿದ ಸಚಿವರು, ಯಾರೂ ಅಧೀರರಾಗಬಾರದು. ಜೀವನದಲ್ಲಿ ಇದೇ ಮೊದಲ ಪರೀಕ್ಷೆಯಲ್ಲ, ಅನೇಕ ಕಷ್ಟನಷ್ಟಗಳು, ಪರೀಕ್ಷೆಗಳು ಎದುರಾಗಲಿವೆ. ಎಲ್ಲದನ್ನೂ ಧೈರ್ಯದಿಂದ ಎದುರಿಸಬೇಕು. ಹಾಗಾಗಿ ಯಾವೊಬ್ಬ ಮಕ್ಕಳು ಪರೀಕ್ಷಾ ಫಲಿತಾಂಶದಿಂದ ಎದೆಗುಂದಬಾರದು. ಪೋಷಕರೂ ಸಹ ಮಕ್ಕಳಿಗೆ ಧೈರ್ಯ ಹೇಳಲು ಮುಂದಾಗಬೇಕು ಎಂದು ಎಂದು ಸುರೇಶ್ ಕುಮಾರ್ ಮನವಿ ಮಾಡಿದರು. ಚೇತಾನ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಗುರುವಾರದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ ಚೆನ್ನಾಗಿ ಬರೆಯಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಚಿವರು ಅಭಿನಂದಿಸಿದರು.

ಸಚಿವರು ಫಲಿತಾಂಶ ಘೋಷಿಸಲು ಆರಂಭಿಸುತ್ತಿದ್ದಂತೆಯೇ ಪಿಯು ಮಂಡಳಿಯ ಸ್ಯಾಟ್ಸ್ ಪೋಟ೵ಲ್‍ನಲ್ಲಿ ನೊಂದಾಯಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಅವರ ನೊಂದಾಯಿತ ದೂರವಾಣಿ ಸಂಖ್ಯೆಗೆ ಫಲಿತಾಂಶಗಳು ರವಾನೆಯಾದವು.

762 ಮಕ್ಕಳು ಈ ಬಾರಿ ಪರೀಕ್ಷೆಗೆ ಹಾಜರಾಗಬಹುದು:
ಈ ಬಾರಿಯ ದ್ವಿತೀಯ ಪಿಯುಸಿ ತರಗತಿಗಳಿಗೆ ನೊಂದಾಯಿಸಿದ್ದರೂ ಪಿಯುಸಿ ಪರೀಕ್ಷೆಗೆ ನೊಂದಾಯಿಸದೇ ಇದ್ದ 762 ಮಕ್ಕಳು ಆಗಸ್ಟ್‍ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೊಂದಾಯಿಸಿಕೊಂಡು ಹಾಜರಾಗಬಹುದು ಎಂದು ಸುರೇಶ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಪಿಯು ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್ ಭಾಗವಹಿಸಿದ್ದರು.

ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಿರುಕಿಲ್ಲ: ಸಿದ್ದರಾಮಯ್ಯ

ದೆಹಲಿ: ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿ ಒಡಕು ಇದೆ ಎಂಬ ಮಾತುಗಳು ಸತ್ಯಕ್ಕೆ ದೂರ ಎಂದರು.

ನಾವೀಗ ಪ್ರತಿಪಕ್ಷದಲ್ಲಿ ಇದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಿರುವಾಗ ಒಡಕಿನ ಮಾತೇಕೆ ಬರುತ್ತದೆ ಎಂದರು.

ರಾಜ್ಯ ಕಾಂಗ್ರೆಸ್ ಪ್ರಸ್ತುತ ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದೆ.

ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆಯಲು ಎಲ್ಲರೂ ಸೇರಿ ಹೋರಾಟ ಮಾಡುತ್ತಿದ್ದೇವೆ.

ಮುಂದಿನ ಮುಖ್ಯಮಂತ್ರಿ ವಿಷಯದ ಬಗ್ಗೆ ಚರ್ಚೆ ಅಪ್ರಸ್ತುತ. ಚುನಾವಣೆ ಬಳಿಕ‌ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ವರಿಷ್ಠರ ತೀರ್ಮಾನವೇ ಅಂತಿಮ. ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧ.

ಇಂದು ಸಂಜೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಅಧಿಕಾರದಿಂದ ಬಿಜೆಪಿ ತೆಗೆದು ಕಾಂಗ್ರೆಸ್ ಕೂರಿಸಲು ಜನ ತೀರ್ಮಾನಿಸಿದ್ದಾರೆ; ಡಿ.ಕೆ. ಶಿವಕುಮಾರ್

ಬೆಂಗಳೂರು:’ರಾಜ್ಯದ ಜನ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಕಾಂಗ್ರೆಸ್ ಅನ್ನು ಕೂರಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಬಿಜೆಪಿಯವರು ಏನೇ ಸರ್ಕಸ್ ಮಾಡಿದರೂ ಪ್ರಯೋಜನವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ವೈರಲ್ ಆಗಿರುವ ಆಡಿಯೋ ತಮ್ಮದಲ್ಲ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಯಾರಿಗೂ ಗೊತ್ತಿಲ್ಲದ ಹಳ್ಳಿ ಜನ ಮಾತನಾಡಿದ್ದರೆ ಅದು ಬೇರೆ ವಿಚಾರ ಆಗುತ್ತಿತ್ತು. ಆಡಿಯೋ, ವಿಡಿಯೋ ಯಾರ್ಯಾರದು ಅನ್ನುವುದು ಬಗ್ಗೆ ಮಾಧ್ಯಮಗಳಿಗೆ ಚೆನ್ನಾಗಿ ಗೊತ್ತಿದೆ. ಯಾರ ಧ್ವನಿ ಯಾರ ದೇಹ ಎಂಬುದು ಎಲ್ಲರಿಗೂ ತಿಳಿದಿದೆ. ನನ್ನ ಧ್ವನಿ ಯಾವುದು, ಸಿದ್ದರಾಮಯ್ಯನವರದು, ಕುಮಾರಸ್ವಾಮಿಯವರದು, ದೇವೇಗೌಡರದು, ಯಡಿಯೂರಪ್ಪನವರದು, ಕಟೀಲ್ ಅವರ ಧ್ವನಿ ಏನು, ಹೇಗೆ ಅಂತಾ ಎಲ್ಲರಿಗೂ ಗೊತ್ತಿದೆ. ಅದನ್ನು ನಕಲು ಮಾಡಲು ಸಾಧ್ಯವೇ?” ಎಂದು ಮರುಪ್ರಶ್ನಿಸಿದರು.

“ಇದು ಬಿಜೆಪಿಯ ಆಂತರಿಕ ವಿಚಾರ. ಅವರು ಬೇಕಾದ್ದನ್ನು ಅವರು ಹೇಳಿಕೊಳ್ಳಬಹುದು. ಸತ್ಯ ಎಲ್ಲರಿಗೂ ಗೊತ್ತಿದೆ. ನಾವ್ಯಾಕೆ ಅದರ ಬಗ್ಗೆ ಮಾತನಾಡಬೇಕು? ನಮಗೂ ಅದಕ್ಕೂ ಸಂಬಂಧ ಇಲ್ಲ” ಎಂದೂ ಹೇಳಿದರು.

ನಾವು ಇದರ ಬಗ್ಗೆ ಮಾತನಾಡಿದರೆ, ಇದರ ಬಗ್ಗೆ ನಿಮಗೇನು ಗೊತ್ತು ಎಂದು ಕೇಳುತ್ತಾರೆ. ಯಾವುದೋ ಅಧಿಕಾರಿಯಿಂದ ಇದನ್ನು ನಕಲಿ ಎಂದು ಹೇಳಿಸುತ್ತಾರೆ. ಹಿಂದೆ ಯಡಿಯೂರಪ್ಪ ಅವರ ಆಡಿಯೋದಿಂದ ಮೊನ್ನೆ ನಡೆದ ವಿಡಿಯೋ ಪ್ರಕರಣದವರೆಗೂ ಆಗಿದ್ದು ಇದೇ. ಆಮೇಲೆ ಏನಾಯ್ತು? ನನ್ನದಲ್ಲ ಎಂದವರೆಲ್ಲ ಆಮೇಲೆ ಏನು ಹೇಳಿದರು? ಹೀಗಾಗಿ ಈ ವಿಚಾರವಾಗಿ ನಾನು ಮಾತನಾಡಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು.

ಬಿಜೆಪಿಯವರು ಏನೇ ಮಾಡಿದರೂ ರಾಜ್ಯದಲ್ಲಿ ಅವರ ಸರ್ಕಾರ ತೆಗೆಯಲು ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದು, ನಾವು ಜನರಿಗೆ ಸಾಧ್ಯವಾದಷ್ಟು ನೆರವಾಗಲು ಸರಿಯಾದ ಕಾರ್ಯಕ್ರಮ ರೂಪಿಸುವತ್ತ ಗಮನ ಹರಿಸಿದ್ದೇವೆ’ ಎಂದು ತಿಳಿಸಿದರು.

ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ: ಸುರೇಶ್ ಕುಮಾರ್

ಬೆಂಗಳೂರು: ಮೊದಲ ದಿನ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ಅತ್ಯಂತ ಉತ್ಸಾಹ ಮತ್ತು ಲವಲವಿಕೆಯಿಂದ ಪರೀಕ್ಷೆ ಬರೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರ ಪರೀಕ್ಷೆಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೊದಲ ದಿನದ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಪ್ರಶಾಂತ ವಾತಾವರಣದಲ್ಲಿ ನಡೆದವು.

ಇಂದು ಮೂರು ಕೋರ್ ವಿಷಯಗಳ ಪರೀಕ್ಷೆಗಳು ನಡೆದವು. ಮಕ್ಕಳು ಹೊಸ ಮಾದರಿ ಪರೀಕ್ಷಾ ಪದ್ಧತಿಯನ್ನು ಸುಲಭವಾಗಿ ಅರ್ಥೈಸಿಕೊಂಡು ಒಎಂಆರ್ ಶೀಟ್‍ಗಳಲ್ಲಿ ಗುರುತು ಮಾಡಿದರು. ಕೊಠಡಿ ಮೇಲ್ವಿಚಾಕರ ಮಾ‌ರ್ಗದರ್ಶನದಂತೆ ಒಎಂಆರ್ ಶೀಟ್‍ಗೆ ಮೊದಲು ರಿಜಿಸ್ಟರ್ ನಂಬರ್ ದಾಖಲಿಸಿ ಕೆಳಗಡೆ ಸಹಿ ಮಾಡಿ ನಂತರ ಸರಿಯುತ್ತರಗಳನ್ನು ಗುರುತಿಸಲಾರಂಭಿಸಿದರು.

ಇಂದು ಬೆಂಗಳೂರಿನ ರಾಜಾಜಿನಗರದ ಫ್ಲಾರೆನ್ಸ್, ಕಡಾಂಬಿ, ಜಯನಗರದ ವಿಜಯಾ ಪ್ರೌಢಶಾಲೆ, ಬಿಇಎಸ್ ಪ್ರೌಢಶಾಲೆ, ಕಾರ್ಮಂಟ್ ಕಾನ್ವೆಂಟ್ ಶಾಲೆ, ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ಸಾರಕ್ಕಿ ಪಬ್ಲಿಕ್ ಶಾಲೆ ಕೋಟೆ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಲ್ಲ ಕಡೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳು ಅತ್ಯಂತ ಶಿಸ್ತಿನಿಂದ ಪರೀಕ್ಷೆಗೆ ಹಾಜರಾಗಿದ್ದರು ಎಂದು ಅವರು ತಿಳಿಸಿದರು.

ಕೆಲವೆಡೆ ಶಾಸಕರು ಮತ್ತು ಸಚಿವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಖುದ್ದಾಗಿ ಭೇಟಿ ನೀಡಿದ್ದಾರೆ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಹಲವಾರು ಕಡೆಗಳಲ್ಲಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ ಸಚಿವರು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಮಕ್ಕಳು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ನೇರವಾಗಿ ಪರೀಕ್ಷಾ ಕೇಂದ್ರದ ಆರೋಗ್ಯ ತಪಾಸಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಜ್ವರ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಮುಂದೆ ಹಾಕಲಾಗಿದ್ದ ಫಲಕದಲ್ಲಿ ತಮ್ಮ ಕೊಠಡಿ ಸಂಖ್ಯೆಯನ್ನು ನೋಡಿಕೊಂಡು ಪರೀಕ್ಷಾ ಕೊಠಡಿಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದಿಂದ ಹೋಗುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ ಎಂದು ಸಚಿವರು ಹೇಳಿದರು.

ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇ. ಹಾಜರಾತಿಯೂ ಸಹ ಈ ಬಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಗಣಿತ ವಿಷಯಕ್ಕೆ 8,52,191 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,49,199 ಅಭ್ಯರ್ಥಿಗಳು ಹಾಜರಾಗಿ 2992 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.64 ಹಾಜರಾತಿ ಇದೆ. ಕಳೆದ ವರ್ಷ ಇದು 98.30 ಇತ್ತು.

ವಿಜ್ಞಾನ ವಿಷಯಕ್ಕೆ 8,43,976 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,40,841 ಅಭ್ಯಥಿ೵ಗಳು ಹಾಜರಾಗಿ 3127 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.36 ಇತ್ತು.

ಸಮಾಜ ವಿಜ್ಞಾನ ವಿಷಯಕ್ಕೆ 8,24,689 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,21,823 ಅಭ್ಯಥಿ೵ಗಳು ಹಾಜರಾಗಿ 2867 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.65 ಹಾಜರಾತಿ ಇದೆ. ಕಳೆದ ವರ್ಷ ಇದು 98.43 ಇತ್ತು.

ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖಾ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಎಲ್ಲ ಅಭ್ಯರ್ಥಿಗಳು ಮಾಸ್ಕ್‍ಗಳನ್ನು ಧರಿಸಿದ್ದರು. ಮಾಸ್ಕ್ ಧರಿಸದೇ ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ನೀಡಲಾಯಿತು ಎಂದು ಅವರು ವಿವರಿಸಿದರು.

ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

*ಪರೀಕ್ಷಾ ಸಮಯದಲ್ಲಿ ಕಂಡು ಬಂದ ವಿಶೇಷತೆಗಳನ್ನು ಸಚಿವರು ಈ ಸಂರ್ಭದಲ್ಲಿ ವಿವರಿಸಿದರು.*
⚫ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಶಿಲ್ಪಾ ಮತ್ತು ಕಕು. ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್‍ನಲ್ಲಿಯೇ ಹಿಂದಿರುಗಿದರು.

⚫ ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ತೊಕ್ಕಟ್ಟು ಗ್ರಾಮದ ಖಾಸಗಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್ ಶಾರ್ಟ್ ಸ‌ರ್ಕ್ಯೂಟ್‍ನಿಂದ ಸ್ವಲ್ಪ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಆ ಪ್ರಯೋಗಾಲಯದ ಅಕ್ಕ ಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿಗಳನ್ನು ಅದೇ ಪರಿಸರದಲ್ಲಿರುವ ಅದೇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 3 ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಈ ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವನ್ನು ಹೆಚ್ಚುವರಿಯಾಗಿ ಈ 3 ಕೊಠಡಿಯ ಅಭ್ಯರ್ಥಿಗಳಿಗೆ ನೀಡಲಾಯಿತು.

⚫ ಬೆಂಕಿ ಪ್ರಕರಣದಿಂದ ಯಾವುದೇ ತೊಂದರೆಯಾಗಲೀ ಹಾನಿಯಾಗಲಿ ಸಂಭವಿಸಿಲ್ಲ. ಸದರಿ ಪರೀಕ್ಷಾ ಕೇಂದ್ರಕ್ಕೆ ಜಿಪಂ ಸಿಇಒ ಅಗ್ನಿಶಾಮಕದಳದ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಡಿಡಿಪಿಐ ಪರಿಶೀಲಿಸಿದರು.

⚫ ದಕ್ಷಿಣ ಕನ್ನಡ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಹಲವಾರು ಗಡಿ ಭಾಗದ ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಒಟ್ಟು 770 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಒಬ್ಬ ನೊಂದಾಯಿತ ಅಭ್ಯರ್ಥಿ ಗೈರು ಹಾಜರಾಗಿದ್ದಾನೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

⚫ ಕಲಬುರ್ಗಿ ಜಿಲ್ಲೆಯ ಚಿಮ್ಮನಚೋಡ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ತೀವ್ರ ಮಳೆಯಿಂದ ಶಾಲೆಗೆ ಹಾದು ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿ ರಸ್ತೆ ಬಂದ್ ಅಗಿತ್ತು. ಅದನ್ನು ನಿಗದಿತ ಅವಧಿಯಲ್ಲಿ ಸರಿಪಡಿಸಲಾದ ಬಳಿಕ ಎಲ್ಲ ಮಕ್ಕಳು ರಸ್ತೆಯಲ್ಲಿ ಸಾಗಿ ಪರೀಕ್ಷೆ ಬರೆದರು.

⚫ ಕೋಲಾರದ ಕುರುಬರ ಪೇಟೆಯ ನಿವಾಸಿ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 55 ವರ್ಷ ವಯಸ್ಸಿನ ಪರೀಕ್ಷೆಗೆ ಹಾಜರಾಗಿದ್ದುದು ವಿಶೇಷವಾಗಿತ್ತು. ಖಾಸಗಿ ಅಭ್ಯರ್ಥಿಯಾದ ಅವರು ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿದ್ದರಿಂದ ಈ ಬಾರಿ ಪುನರಾವರ್ತಿತ ಅಭ್ಯರ್ಥಿಯಾಗಿ ಕೋಲಾರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.

⚫ ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿದ್ದರು.

⚫ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪರೀಕ್ಷೆ ಬರೆದ ಮಕ್ಕಳ ಉತ್ತರ ಪತ್ರಿಕೆಗಳನ್ನು ಪೊಲೀಸ್ ಕಣ್ಗಾವಲಿನಲ್ಲಿ ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಂದು ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಲಾಗಿದೆ.

⚫ ಹಲವಾರು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಳಿರು ತೋರಣ ಕಟ್ಟಲಾಗಿತ್ತು. ನಂಜನಗೂಡು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಲವಾರು ಕಡೆಗಳಲ್ಲಿ ರಂಗೋಲಿ ಹಾಕಲಾಗಿತ್ತು.

⚫ ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.

⚫ ಪರೀಕ್ಷಾ ಪ್ರಕ್ರಿಯೆಯಲ್ಲಿ ನಿಯೋಜಿತರಾಗುವ 1,19,469 ಮಂದಿ ಎಲ್ಲ ಸ್ತರದ ಸಿಬ್ಬಂದಿ ಲಸಿಕೆ ಪಡೆದಿದ್ದರು.

⚫ ಹಲವಾರು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಳಿರು ತೋರಣ ಕಟ್ಟಲಾಗಿತ್ತು. ನಂಜನಗೂಡು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಲವಾರು ಕಡೆಗಳಲ್ಲಿ ರಂಗೋಲಿ ಹಾಕಲಾಗಿತ್ತು.

⚫ ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.

⚫ ಯಾವುದೇ ಅಭ್ಯರ್ಥಿ ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಲ್ಲ.

⚫ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ ಬರೆದ ಅಭ್ಯರ್ಥಿಗಳು- 111

⚫ ಸನಿಹದ ಪರೀಕ್ಷಾ ಕೇಂದ್ರಗಳನ್ನು ಆರಿಸಿಕೊಂಡ ವಲಸೆ ವಿದ್ಯಾರ್ಥಿಗಳು-10693

⚫ ವಸತಿ ನಿಲಯಗಳಲ್ಲಿದ್ದು ಪರೀಕ್ಷೆ ಬರೆದವರು -2870

⚫ ಮುಖ್ಯೋಪಾಧ್ಯಾಯರ ಲಾಗಿನ್‍ನಿಂದ ಪ್ರವೇಶ ಪತ್ರಗಳನ್ನು ವಿತರಿಸಲಾಗಿದೆ. ಶುಲ್ಕ ಪಾವತಿಸದ ಅಭ್ಯರ್ಥಿಗಳಿಗೂ ಬಿಇಒ ಮತ್ತು ಡಿಡಿಪಿಐ ಹಂತದಲ್ಲಿ ಪ್ರವೇಶ ಪತ್ರ ವಿತರಿಸಲಾಗಿದೆ.

⚫ ಹಾವೇರಿ ಜಿಲ್ಲೆಯ ಚಿಕ್ಕೇರೂರು ಶಾಲೆಯ 30 ವಿದ್ಯಾರ್ಥಿಗಳು ಪರೀಕ್ಷಾ ಅರ್ಜಿ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಿದ್ದರೂ ಶಾಲೆಯ ಶಿಕ್ಷಕರೊಬ್ಬರು ಶುಲ್ಕವನ್ನು ಮಂಡಳಿಗೆ ಪಾವತಿಸದೇ ಇರುವುದರಿಂದ 30 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಾಗಿಲ್ಲ. ಆ 30 ವಿದ್ಯಾರ್ಥಿಗಳು, ಬಾಗಲಕೋಟೆ ಜಿಲ್ಲೆಯ 3 ಮತ್ತು ಕೊರಟಗೆರೆ ವಿದ್ಯಾರ್ಥಿನಿ ಗ್ರೀಷ್ಮಾ ಎನ್. ನಾಯಕ್ ಅವರಿಗೆ ಮುಂದೆ ಆಗಸ್ಟ್‍ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು.

⚫ ಮಕ್ಕಳು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ನೇರವಾಗಿ ಪರೀಕ್ಷಾ ಕೇಂದ್ರದ ಆರೋಗ್ಯ ತಪಾಸಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಜ್ವರ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಮುಂದೆ ಹಾಕಲಾಗಿದ್ದ ಫಲಕದಲ್ಲಿ ತಮ್ಮ ಕೊಠಡಿ ಸಂಖ್ಯೆಯನ್ನು ನೋಡಿಕೊಂಡು ಪರೀಕ್ಷಾ ಕೊಠಡಿಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು.

⚫ ಪರೀಕ್ಷಾ ಕೇಂದ್ರದಿಂದ ಹೋಗುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

⚫ ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

⚫ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಶಿಲ್ಪಾ ಮತ್ತು ಕಕು. ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್‍ನಲ್ಲಿಯೇ ಹಿಂದಿರುಗಿದರು.

⚫ ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ತೊಕ್ಕಟ್ಟು ಗ್ರಾಮದ ಖಾಸಗಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್ ಶಾರ್ಟ್ ಸ‌ರ್ಕ್ಯೂಟ್‍ನಿಂದ ಸ್ವಲ್ಪ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಆ ಪ್ರಯೋಗಾಲದಯ ಅಕ್ಕ ಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿಗಳನ್ನು ಅದೇ ಪರಿಸರದಲ್ಲಿರುವ ಅದೇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 3 ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಈ ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವನ್ನು ಹೆಚ್ಚುವರಿಯಾಗಿ ಈ 3 ಕೊಠಡಿಯ ಅಭ್ಯರ್ಥಿಗಳಿಗೆ ನೀಡಲಾಯಿತು.

⚫ ಬೆಂಕಿ ಪ್ರಕರಣದಿಂದ ಯಾವುದೇ ತೊಂದರೆಯಾಗಲೀ ಹಾನಿಯಾಗಲಿ ಸಂಭವಿಸಿಲ್ಲ. ಸದರಿ ಪರೀಕ್ಷಾ ಕೇಂದ್ರಕ್ಕೆ ಜಿಪಂ ಸಿಇಒ ಅಗ್ನಿಶಾಮಕದಳದ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಡಿಡಿಪಿಐ ಪರಿಶೀಲಿಸಿದರು.

⚫ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಮಹಾರಾಷಚವ್ರದ ಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳದ 441 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

⚫ ನಾಲ್ಕು ಪರೀಕ್ಷಾ ಕೇಂದ್ರಗಳಿಗೆ ಮಹಾರಾಷ್ಟ್ರ ಭಾಗದ 152 ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದರು. ಅವರೆಲ್ಲರಿಗೂ ಗಡಿ ಭಾಗದಿಂದ ವಾಹನ ವ್ಯವಸ್ಥೆ ಮಾಡಲಾಗಿತ್ತು.

⚫ ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.

ಹೊನ್ನಾಳಿ ತಾಲ್ಲೂಕು ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ಇಂದಿಗೆ ಮುಕ್ತಾಯ; ರೇಣುಕಾಚಾರ್ಯ

ದಾವಣಗೆರೆ: ನನ್ನ ಮತ ಕ್ಷೇತ್ರದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಕೋವಿಡ್ ಎರಡನೇ ಅಲೆ ಗಣನೀಯವಾಗಿ ಕಡಿಮೆಯಾಗಿದ್ದು ಅರಬಗಟ್ಟೆ ಕೋವಿಡ್ ಆರೈಕೆ ಕೇಂದ್ರವನ್ನು ಇಂದಿಗೆ ಮುಕ್ತಾಯಗೊಳಿಸಲಾಯಿತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ರು.

ಕಳೆದ ಮೂರು ತಿಂಗಳಿನಿಂದ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಹಗಲಿರುಳು ನಿರಂತರವಾಗಿ ನನ್ನ ಬಂಧುಗಳ ರಕ್ಷಣೆಗಾಗಿ ಶ್ರಮಿಸಿದ್ದು, ಅನೇಕ ಸಾವುನೋವುಗಳು ಸಂಭಾವಿಸಿದ್ದು ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ.
ಎರಡನೇ ಅಲೆಯ ಸಂದರ್ಭದಲ್ಲಿ ವೈಯಕ್ತಿಕವಾಗಿ 4 ಆಂಬುಲೆನ್ಸ್, 50 ಕಾಟ್ & ಬೆಡ್ ಹಾಗೂ ಪ್ರತಿದಿನ ಹೊನ್ನಾಳಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೊಂಕಿತರಿಗೆ, ಚಿಕಿತ್ಸೆ ಪಡೆಯಲು ಆಗಮಿಸುವ ಸಾರ್ವಜನಿಕ ಬಂಧುಗಳಿಗೆ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಸಾವಿರಾರು ಸಾರ್ವಜನಿಕ ಬಂಧುಗಳಿಗೆ ಬೆಳಗ್ಗಿನ ಮತ್ತು ಮಧ್ಯಾಹ್ನದ ಉಪಹಾರ ಸೇವೆಕಾರ್ಯವನ್ನು ಮಾಡಿದ್ದೇನೆ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಸೇವೆಸಲ್ಲಿಸಿದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಸತಿ ಶಾಲೆಯ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬ ಕೋವಿಡ್ ಸೊಂಕಿತ ಬಂಧುಗಳಿಗೆ, ನನ್ನ ಆಪ್ತ ಸಹಾಯಕ ಸಿಬ್ಬಂದಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಪರಿಶೀಲಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು:ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಇಂದು ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ಪ್ರೌಢಶಾಲೆ, ರಾಮನಗರದ ಶಾಂತಿನಿಕೇತನ ಶಾಲೆ, ಭಾರತೀಯ ಸಾಂಸ್ಕೃತಿ ವಿದ್ಯಾಪೀಠ, ಸರ್ಕಾರಿ ಪದವಿ ಪೂರ್ವ ಕಾಲೇಜು, ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೆಂಟ್ ಆನ್ಸ್ ಪ್ರೌಢಶಾಲೆ ಹಾಗೂ ಚನ್ನಪಟ್ಟಣದ ಚೆಕ್ಕೆರೆಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳ ಪರಿಶೀಲನೆ ನಡೆಸಿದರು.

ಪರೀಕ್ಷಾ ಕೇಂದ್ರದಲ್ಲಿ ಸಚಿವರೆ ಖುದ್ದು ಬೆಂಚ್ ಮೇಲೆ ಕುಳಿತು ಪರಿಶೀಲನೆ ನಡೆಸಿದರು.ಪರಿಶೀಲನೆಯ ಸಂದಭ೯ದಲ್ಲಿ ಸಾವ೯ಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಯಾಗಬೇಕು. ಪರೀಕ್ಷಾ ನೋಂದಣಿ ಸಂಖ್ಯೆ ವಿದ್ಯಾಥಿ೯ಗಳಿಗೆ ಗೋಚರವಾಗುವ ರೀತಿ ಪ್ರದಶ೯ನ ವಾಗಬೇಕು. ಈ ಬಾರಿ ಪರೀಕ್ಷೆ ಒ.ಎಮ್.ಆರ್ ಶೀಟ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಪರೀಕ್ಷಾ ನೋಂದಣಿ ಸಂಖ್ಯೆ ಸರಿಯಾಗಿ ವಿದ್ಯಾಥಿ೯ ಗಳು ನಮೂದಿಸಿರುವ ಬಗ್ಗೆ ಪರೀಕ್ಷಾ ಮೇಲ್ವಿಚಾರಕರು ಪರಿಶೀಲಿಸುವಂತೆ ತಿಳಿಸಿದರು.

ಮಳೆ ಇರುವ ಹಿನ್ನೆಲೆಯಲ್ಲಿ ವಿದ್ಯಾಥಿ೯ ಗಳು ಪರೀಕ್ಷಾ ಕೇಂದ್ರ ಗಳಿಗೆ ಬೇಗ ಆಗಮಿಸಿದರೆ ಅವರಿಗೆ ಪರೀಕ್ಷಾ ಕೇಂದ್ರದ ಒಳಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು.
ಪರೀಕ್ಷೆ ಬರೆಯಲು ಡೆಸ್ಕ್ ಗಳು ಉತ್ತಮ ವಾಗಿರಬೇಕು ಈ ಬಗ್ಗೆ ಪರೀಕ್ಷಾ ಕೇಂದ್ರಗಳಲ್ಲಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.

ಕಳೆದ ಬಾರಿ 6 ದಿನಗಳು 10 ನೇ ತರಗತಿ ಪರೀಕ್ಷೆ ಮಾಡಿದ ಅನುಭವವಿದೆ. ಈ ಬಾರಿ ಕೋವಿಡ್ ಕಾರಣದಿಂದ 2 ದಿನಗಳ ಕಾಲ ಪರೀಕ್ಷೆ ಮಾಡುತ್ತಿರುವುದರಿಂದ ಕಳೆದ ಬಾರಿಗಿಂತ ಉತ್ತಮವಾಗಿ ಈ ಬಾರಿ ಇಲಾಖೆಯಿಂದ ಪರೀಕ್ಷೆ ನಡೆಸಲಾಗುವುದು ಎಂದರು.

ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿಗಳಿಗೆ ಹತ್ತಿರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜ್ವರ ಕೆಮ್ಮು ನೆಗಡಿ ಅಂತಹ ಲಕ್ಷಣ ಕಂಡುಬಂದ ವಿದ್ಯಾಥಿ೯ ಗಳಿಗೆ
ಪರೀಕ್ಷಾ ಕೇಂದ್ರಗಳಲ್ಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಅವರಿಗೆ ಎನ್ 95 ಮಾಸ್ಕ್ ನೀಡಲಾಗುವುದು. ಮಾಸ್ಕ್ ಮರೆತು ಬಂದ ವಿದ್ಯಾಥಿ೯ ಗಳಿಗೂ ಸಹ ಮಾಸ್ಕ್ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾಥಿ೯ ಗಳಿಗೆ ಸ್ಯಾನಿಟೈಜರ್, ಕುಡಿಯುವ ನೀರು, ಶೌಚಾಲಯ ಹಾಗೂ ಇನ್ನಿತರ ಮೂಲಭೂತ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮುಂದಿನ ವರ್ಷದ ಶೈಕ್ಷಣಿಕ ಸಾಲು ಆರಂಭಿಸುವ ಬಗ್ಗೆ ಸಾವ೯ಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಕಾಯ೯ಪಡೆ ರಚಿಸಲಾಗಿದ್ದು , ಕಾಯ೯ಪಡೆಯಲ್ಲಿ ಶಾಲೆಗಳ ಪ್ರತಿನಿಧಿಗಳು, ಶಿಕ್ಷಣ ಕ್ಷೇತ್ರದಲ್ಲಿ ಕಾಯ೯ ನಿವ೯ಹಸುತ್ತಿರುವ ಸಂಘ ಸಂಸ್ಥೆಗಳು, ನಿಮ್ಹಾನ್ಸ್ ವೈದ್ಯರು, ಜಯದೇವ ಆಸ್ಪತ್ರೆಯ ವೈದ್ಯರು, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಪ್ರತಿನಿಧಿಗಳು ಸಭೆ ನಡೆಸಿದ್ದು, ಯಾವ ತರಗತಿಗಳನ್ನು ಮೊದಲು ಪ್ರಾರಂಭಿಸಬೇಕು, ಯಾವಾಗ ಪ್ರಾರಂಭಿಸಬೇಕು, ಯಾವ ರೀತಿ ಪ್ರಾರಂಭಿಸಬೇಕೆಂಬುದನ್ನು ಈ ತಿಂಗಳ ಅಂತ್ಯದಲ್ಲಿ ವರದಿ ನೀಡಲಿದ್ದಾರೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ನೀಡಿರುವ ಎಸ್.ಒ.ಪಿಯನ್ನು ಪಾಲಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ‌ಸರಳೀಕೃತ ಮಾಡಿ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.ಶಿಕ್ಷಣ ಇಲಾಖೆ ನಾಳೆ ಪರೀಕ್ಷೆ ನಡೆಸಲು ಪೂರ್ಣವಾಗಿ ಸಜ್ಜಾಗಿದೆ ಎಂದರು.

ಸುರಕ್ಷಾ ಕೇಂದ್ರ: ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ ಯಾವುದೇ ರೀತಿ ತೊಂದರೆಯಾಗದಂತೆ ಸುರಕ್ಷತೆ ನೀಡಿ ಪರೀಕ್ಷೆ ನಡೆಸಲಾಗುವುದು.ಈ ಬಾರಿ ಪರೀಕ್ಷಾ ಕೇಂದ್ರ, ಕೊಠಡಿ ಹಾಗೂ ಸಿಬ್ಬಂದಿ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.ಮಕ್ಕಳು ಮತ್ತು ಪೋಷಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಪರೀಕ್ಷೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಲಿದ್ದಾರೆ ಎಂದರು.

ಗ್ರಾಮೀಣ ಭಾಗದಿಂದ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಯಾವ ರೀತಿಯ ವಾಹನದ ವ್ಯವಸ್ಥೆ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಬರಲಿದ್ದಾರೆ ಎಂಬ ಮಾಹಿತಿಯನ್ನು ಮುಖ್ಯ ಶಿಕ್ಷಕರಿಂದ ಸಂಗ್ರಹಿಸಲಾಗಿದೆ. ಬೇಕಿರುವ ಕಡೆ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕವಿದ್ದಲ್ಲಿ ಸರ್ಕಾರಿ ವಾಹನ, ಎಸ್.ಡಿ.ಎಂ.ಸಿ ಅವರ ವಾಹನ ಸಹ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ‌ ಎಂದರು.

ಕಳೆದ ಬಾರಿ 3310 ಇದ್ದ ಪರೀಕ್ಷಾ ಕೇಂದ್ರಗಳನ್ನು 4885 ಹಾಗೂ 48000 ಪರೀಕ್ಷಾ ಕೊಠಡಿಗಳನ್ನು 73064 ಕ್ಕೆ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆದಷ್ಟು ಅವರಿಗೆ ಹತ್ತಿರವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಪರೀಕ್ಷಾ‌ ಪ್ರವೇಶ ಪತ್ರ ಸಿಗಲಿಲ್ಲ ಎಂದು ಬಂದಿರುವ ದೂರುಗಳನ್ನು ಬಿ.ಇ.ಒ ಹಂತದಲ್ಲೇ ಪರಿಹರಿಸಲಾಗಿದೆ ಬಂದಿರುವ ಎಲ್ಲಾ ದೂರುಗಳನ್ನು ಪರಿಹರಿಸಲಾಗಿದೆ.

ಗ್ರೀಷ್ಮ ಎಂಬ ಬಾಲಕಿಗೆ ಸಂಬಂಧಿಸಿದಂತೆ ಇದ್ದ ದೂರಿನಲ್ಲಿ ತಾಂತ್ರಿಕಾ ಸಮಸ್ಯೆ ಇದ್ದು, ಬಾಲಕಿ 10 ನೇ ತರಗತಿ ಪರೀಕ್ಷೆಗೆ ಅರ್ಜಿ ಸಹ ಸಲ್ಲಿಕೆಯಾಗಿರಲಿಲ್ಲ. ಬಾಲಕಿಗೆ ದೈರ್ಯ ತುಂಬಿ ಆಗಸ್ಟ್ ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯರ್ಥಿ ಎಂದು ಪರಿಗಣಿಸಿ ಪರೀಕ್ಷೆ ನೀಡಲಾಗುವುದು ಎಂದರು.

ಹಾವೇರಿಲ್ಲಿ 30 ಬಾಲಕರು ಪರೀಕ್ಷಾ ಶುಲ್ಕ ಪಾವತಿಸಿದ್ದು, ಶಿಕ್ಷಕ ದುರುಪಯೋಗ ಪಡಿಸಿಕೊಂಡಿರುತ್ತಾರೆ, ಶಿಕ್ಷಕನನ್ನು ಅಮಾನತ್ತು ಮಾಡಿ, ಆಗಸ್ಟ್ ನಲ್ಲಿ ನಡೆಯುವ ಪರೀಕ್ಷೆ ಯಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು‌ ಅವಕಾಶ ನೀಡಲಾಗಿದೆ ಎಂದರು.

ಈ ಸಂದಭ೯ದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿವಾ೯ಹಣಾಧಿಕಾರಿ ಇಕ್ರಂ ಹಾಗೂ ಇನ್ನಿತರರು ಉಪಸ್ಥಿತರಿದ್ದರು.