ಶಿಕ್ಷಣ ಕ್ಷೇತ್ರದಲ್ಲಿ ಆದಿ ಚುಂಚನಗಿರಿ ಮಠ ಮಾದರಿ: ಡಿಸಿಎಂ ಪರಂ

ಬೆಂಗಳೂರು: ಧರ್ಮ‌ ಉಳಿವಿಗೆ ಆದಿಚುಂಚನಗಿರಿಯಂಥ ಸಂಸ್ಥಾನ ಮಠಗಳ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಬುಧವಾರ ನಾಗಮಂಗಲದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಗುರು ಪೂರ್ಣಿಮಾ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ 22ನೇ ರಾಜ್ಯಮಟ್ಟದ ಚುಂಚಾದ್ರಿ ಕಲೋತ್ಸವ -2018 ರಲ್ಲಿ ಪಾಲ್ಗೊಂಡು ಮಾತನಾಡಿದರು.

ಧರ್ಮದ ಜೊತೆಗೆ ಶಿಕ್ಷಣಕ್ಕೆ ಪ್ರಥಮ‌ ಆದ್ಯತೆ ನೀಡಿ, ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ದಾನ ಮಾಡುತ್ತಿದ್ದಾರೆ. ನಳಂದ ಶಿಕ್ಷಣ ಸಂಸ್ಥೆ ಬಗ್ಗೆ ಇರುವ ಗೌರವ, ಪ್ರತಿಷ್ಠೆಯಂತೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥಾನವೂ ಇತಿಹಾಸ ನಿರ್ಮಿಸಲಿದೆ ಎಂದರು.

ನಮ್ಮ‌ ದೇಶದಲ್ಲಿ ಪದವೀಧರರ ಕೊರತೆ ಇಲ್ಲ. ಆದರೆ ಈ‌ ದೇಶಕ್ಕೆ ಉತ್ತಮ ಪ್ರಜೆಗಳ ಅಗತ್ಯವಿದೆ. ಭಾರತ ಇಡೀ‌ ಪ್ರಪಂಚಕ್ಕೆ ಮಾನವ ಸಂಪತ್ತನ್ನು‌ ನೀಡಿದೆ. ಎಲ್ಲಾ ದೇಶದಲ್ಲೂ ನಮ್ಮ ಇಂಜಿನಿಯರ್ಸ್, ವೈದ್ಯರು, ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.

ಕೇವಲ ೨೦೦ ವರ್ಷದ ಇತಿಹಾಸ ಇರುವ ಅಮೆರಿಕಾಗೆ ನಾವು ಹೋಲಿಕೆ ಮಾಡಿಕೊಳ್ಳುತ್ತಿದ್ದೇವೆ.‌ ನಮ್ಮಲ್ಲಿರುವ ಕೀಳು ಭಾವನೆ ತ್ಯಜಿಸಿ, ಈ ದೇಶದಲ್ಲಿನ ಸಂಪತ್ತನ್ನು ಸೂಕ್ತ ರೀತಿ ಬಳಸಿಕೊಂಡರೆ, ಅಮೆರಿಕವನ್ನೇ ಮೆಟ್ಟಿ‌ ನಿಲ್ಲಬಹುದು‌ ಎಂದರು.

ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಸಾಧನೆ ಮಾಡುವತ್ತ ಗಮನ ಹರಿಸಿ, ನಿಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ಉಜ್ವಲಗೊಳಿಸಿ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಟ ರಮೇಶ್ ಅರವಿಂದ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕ ಸುರೇಶ್ ಗೌಡ ಉಪಸ್ಥಿತರಿದ್ದರು.

ಅಭಿಮಾನಿಗಳಿಗೆ ಸಿಹಿ ಸುದ್ಧಿ ನೀಡಿದ ಯಶ್ ದಂಪತಿ: ಯಶ್-ರಾಧಿಕ ಇದೀಗ ಮೂರು ಮಂದಿ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕ ಪಂಡಿತ್ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಹೌದು ಯಶ್-ರಾಧಿಕ ತಂದೆ, ತಾಯಿಗಳಾಗುತ್ತಿರುವ ವಿಚಾರನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಾಧಿಕ ಪಡಿಂತ್ ನಾವೀಗ ಮೂರು ಜನ ಎಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದರೆ, ಯಶ್ ಒಂದೊಳ್ಳೆ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಸಿಹಿ ಸುದ್ಧಿ ಹಂಚಿಕೊಂಡಿದ್ದಾರೆ.

ಮಹದಾಯಿ ವಿಚಾರದಲ್ಲಿ ಕಾನೂನು ಚೌಕಟ್ಟು ಮೀರಿಲ್ಲ , ಆಗಸ್ಟ್‌‌ ಒಳಗೆ ನ್ಯಾಯಬದ್ಧ ತೀರ್ಪು ಬರಲಿದೆ: ಡಿಕೆಶಿ

ಬೆಂಗಳೂರು: ಮಹದಾಯಿ ನದಿ ನೀರು ವಿಚಾರದಲ್ಲಿ ನಾವು ಕಾನೂನು ಚೌಕಟ್ಟಿನಲ್ಲೇ ಇದ್ದೇವೆ. ಲೀಕೇಜ್ ನೀರಿನ ಬಗ್ಗೆಯೂ ಫೋಟೋ ಸಮೇತ ನ್ಯಾಯಧೀಕರಣ ಗಮನಕ್ಕೆ ತಂದಿದ್ದು, ನಾವು ಎಲ್ಲೂ ನೀರನ್ನು ಬಳಕೆ ಮಾಡ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಗೋವಾ ಸಣ್ಣ ರಾಜ್ಯ, ಅವರ ಜತೆ ಯುದ್ಧ, ಜಗಳ ಮಾಡೋದಕ್ಕೆ ಇಷ್ಟ ಇಲ್ಲ. ಆಗಸ್ಟ್ ಒಳಗೆ ನ್ಯಾಯಬದ್ಧವಾದ ತೀರ್ಪು ಬರುವ ನಂಬಿಕೆ ಇದೆ ಎಂದರು.

ಗೋವಾದ ಬಗ್ಗೆ ನಮಗೇನು ಬೇಜಾರು ಇಲ್ಲ. ಸಮುದ್ರಕ್ಕೆ ಹೋಗುವ ನೀರನ್ನು ಅವರು ಬೇಕಿದ್ರೆ ಬಳಸಿಕೊಳ್ಳಲಿ. ನಮ್ಮ ಜನರಿಗೆ ಎಷ್ಟು ನೀರು ಸಿಗಬೇಕೋ ಅಷ್ಟು ಸಿಗಬೇಕೆಂಬುದು ನಮ್ಮ ಬೇಡಿಕೆ ಅಷ್ಟೇ. ಆ ಭಾಗದ ಜನರಿಗೆ ನೀರು ಸಿಗಬೇಕು ಅದಿಕ್ಕೆ ನೀರು ಕೊಡಿ ಎಂದು ಕೇಳ್ತಿದ್ದೇವೆ. ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಲಿ. ಅದನ್ನು ತಪ್ಪು ಅಂತಾ ಹೇಳುವುದಿಲ್ಲ ಎಂದು ಹೇಳಿದರು.

ನಾನು ಕೂಡ ಸೈಟ್ ವಿಸಿಟ್ ಮಾಡಲು ಅಲ್ಲಿಗೆ ಹೋಗಿದ್ದೆ. ಆದರೆ, ಸೈಟ್ ವಿಸಿಟ್ ಮಾಡಿದ್ರೆ ಬೇರೆ ಅಪಾರ್ಥಕ್ಕೆ ಕಾರಣವಾಗುತ್ತದೆ ಎಂದು ಧಾರವಾಡಕ್ಕೆ ಹೋಗಿದ್ದವನು‌ ವಾಪಸ್ ಬಂದಿದ್ದೇನೆ. ಆಗಸ್ಟ್ ನಲ್ಲಿ ಒಳ್ಳೆಯ ತೀರ್ಪು ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೈವಾನ್ ಕಂಪನಿಯಿಂದ ರಾಜ್ಯದಲ್ಲಿ 3000 ಕೋಟಿ ರೂ.ಹೂಡಿಕೆ: ಕನ್ನಡಿಗರಿಗೆ ಉದ್ಯೋಗ ನೀಡಲು ಒಪ್ಪಿದಲ್ಲಿ 7 ದಿನಗಳಲ್ಲಿ ಒಡಂಬಡಿಕೆಗೆ ಸಹಿ: ದೇಶಪಾಂಡೆ

ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತೈವಾನ್ನಿನ ಮೆ: ವಿಸ್ಟ್ರನ್ ಟೆಕ್ನಾಲಜೀಸ್ ಕಂಪನಿ 3000 ಕೋಟಿ ರೂ.ಗಳ ಹೂಡಿಕೆಯನ್ನು ಮಾಡಲಿದೆ.

ಮೆ: ವಿಸ್ಟ್ರನ್ ಟೆಕ್ನಾಲಜೀಸ್ ಕಂಪನಿಯ ತಂಡವು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿತು. ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡಲು ನಿರ್ಧರಿಸಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು, ಯೋಜನೆಯ ವಿಸ್ತರಣೆಗೆ ಅಗತ್ಯವಿರುವ ಸ್ಥಳದ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು. ಸಂಸ್ಥೆಗೆ ವಿಶೇಷ ಉತ್ತೇಜನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಮೊಬೈಲ್ ಫೋನ್ಗಳ ದುರಸ್ತಿ ಮತ್ತು ನವೀಕರಣ ತಂತ್ರಜ್ಞಾನಕ್ಕೂ ಹೆಚ್ಚಿನ ಬೇಡಿಕೆ ಇದೆ. ಚಿಕ್ಕಬಳ್ಳಾಪುರದಲ್ಲಿ ಈ ನಿಟ್ಟಿನಲ್ಲಿ ತರಬೇತಿ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಗಮನಹರಿಸಬಹುದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ನರಸಾಪುರದಲ್ಲಿ 43 ಎಕರೆ ಸ್ಥಳದಲ್ಲಿ ಪ್ರಾರಂಭವಾಗಲಿರುವ ಐಫೋನ್ ತಯಾರಕ ಕಂಪನಿಯು ರಾಷ್ಟ್ರದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಪ್ರಾರಂಭದಲ್ಲಿ 10500 ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದೆ. ಕಂಪನಿಯ ವಿಸ್ತರಣೆಯನ್ನೂ ರಾಜ್ಯದಲ್ಲಿಯೇ ಮಾಡಲು ಉದ್ದೇಶಿಸಲಾಗಿದ್ದು. ಇದಕ್ಕಾಗಿ ಸ್ಥಳದ ಅವಶ್ಯಕತೆಯಿದೆ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಗುರುರಾಜ್ ತಿಳಿಸಿದರು.

ಕನ್ನಡದವರಿಗೆ ಉದ್ಯೋಗಾವಕಾಶ ನೀಡಲು ಒಪ್ಪಿದಲ್ಲಿ 7 ದಿನಗಳಲ್ಲಿ ಒಡಂಬಡಿಕೆಗೆ ಸಹಿಮಾಡಿಕೊಳ್ಳುವುದಾಗಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಮೂಲ ಸೌಕರ್ಯ: ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ-ಕಾಲೇಜುಗಳು, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯ ಸೌಕರ್ಯ ಒದಗಿಸುವ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಸಭೆಯಲ್ಲಿ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಕೊಠಡಿಗಳು, ಪ್ರಯೋಗಾಲಯ, ಶೌಚಾಲಯ, ಗ್ರಂಥಾಲಯ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹಣಕಾಸಿನ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ತಾವು ಹಿಂದೆ ಮುಖ್ಯಮಂತ್ರಿ ಯಾಗಿದ್ದಾಗ ಮಂಜೂರು ಮಾಡಿದ್ದ ಶಾಲೆ-ಕಾಲೇಜುಗಳಿಗೆ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ಕೂಡಲೇ ಸೌಲಭ್ಯ ಒದಗಿಸಲು ಸೂಚಿಸಿದರು.

ಶಾಲೆಗಳ ಮೂಲ ಸೌಕರ್ಯ ಒದಗಿಸಲು ಹಿರಿಯ ವಿದ್ಯಾರ್ಥಿಗಳ ನೆರವು ಪಡೆಯಲು ಪೂರಕವಾಗಿ ಹಿರಿಯ ವಿದ್ಯಾರ್ಥಿಗಳ ಸಂಘಗಳನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು.

ಸಿಎಂ ಭೇಟಿಯಾದ ಅಜೀಂ ಪ್ರೇಮ್‌ಜೀ ಹಲವು ವಿಚಾರಗಳ ಬಗ್ಗೆ ಚರ್ಚೆ!

ಬೆಂಗಳೂರು: ನೆರೆಯ ಆಂಧ್ರಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿಪ್ರೋ ಸಂಸ್ಥೆ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಕೆಲಸ ಮಾಡಲು ನಮ್ಮ ಸಂಸ್ಥೆ ಉತ್ಸುಕವಾಗಿದೆ ಎಂದು ವಿಪ್ರೋ ಅಧ್ಯಕ್ಷರಾದ ಅಜೀಂ ಪ್ರೇಮ್‍ಜೀ ತಿಳಿಸಿದರು.

ಖಾಸಗಿ ವಲಯ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂಬ ಮುಖ್ಯಮಂತ್ರಿಗಳ ಆಶಯಕ್ಕೆ ಸ್ಪಂದಿಸಿರುವ ವಿಪ್ರೋ ಕಂಪನಿ ಅಧ್ಯಕ್ಷರಾದ ಡಾ.ಅಜೀಂ ಪ್ರೇಮ್‍ಜೀ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣದ ಕಾರ್ಯದಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸುವುದಾಗಿ ತಿಳಿಸಿದ ಅಜಿಂ ಪ್ರೇಮ್‍ಜೀ, ಈ ಕಾರ್ಯದಲ್ಲಿ ಸಮನ್ವಯ ಸಾಧಿಸಿಲು ಸರ್ಕಾರದ ಪರವಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲು ಕೋರಿದರು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿಗಳು ಅರಣ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದಾಗಿ ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ವಿಪ್ರೋ ಈಗಾಗಲೇ ರಾಜ್ಯದ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ಪ್ರಗತಿಯ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಸಂಸ್ಥೆ ಸಿದ್ಧವಿದೆ ಎಂದರು.

ಬೆಂಗಳೂರಿನ ಸರ್ಜಾಪುರ ರಸ್ತೆಯ ಸ್ಥಿತಿಯ ಬಗ್ಗೆ ಅಜೀಂ ಪ್ರೇಮ್‍ಜೀ ಮುಖ್ಯಮಂತ್ರಿಗಳ ಗಮನ ಸೆಳೆದಾಗ, ಈಗಾಗಲೇ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸರ್ಜಾರಪುರ ರಸ್ತೆಯ ದುರಸ್ಥಿ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.