ಶಿಥಿಲಾವಸ್ಥೆ ತಲುಪಿರುವ ಹಾಸ್ಟೆಲ್‌ಗಳ ಹೊಸ ಕಟ್ಟಡ ನಿರ್ಮಾಣ: ಜಿ.ಟಿ.ದೇವೇಗೌಡ

ಮೈಸೂರು: ಶಿಥಿಲಾವಸ್ಥೆ ತಲುಪಿರುವ ಕಟ್ಟಡಕ್ಕೆ ಪುನರ್ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಕಲಾ, ವಾಣಿಜ್ಯ, ವಿಜ್ಞಾನಕ್ಕೆ ಪ್ರತ್ಯೇಕ ಕಟ್ಟಡ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಭರವಸೆ ನೀಡಿದರು.

ಮೂರು ದಿನಗಳ ಹಿಂದಷ್ಟೇ ಮೈಸೂರು ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಅಲಿಸಿದ್ದ ಸಚಿವ ಜಿಟಿ ದೇವೇಗೌಡ ಇಂದು ಅಧಿಕಾರಿಗಳ ಜತೆ ಮತ್ತೆ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನೀಯರ ಸಮಸ್ಯೆ ಆಲಿಸಿದರು. ಇಂದು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರ ಜೊತೆ ಕಾಲೇಜಿಗೆ ಭೇಟಿ ನೀಡಿದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಜೊತೆಯಲ್ಲು ಚರ್ಚೆ ನಡೆಸಿದ ಸಚಿವ ಜಿಟಿಡಿ, ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಕಾಲೇಜು ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.

ಬಳಿಕ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಶಿಥಿಲಾವಸ್ಥೆ ತಲುಪಿರೋ ಕಟ್ಟಡಕ್ಕೆ ಪುನರ್ ನಿರ್ಮಾಣ ಸಾಧ್ಯವಿಲ್ಲ. ಪ್ರತಿಯೊಂದು ವಿಭಾಗಕ್ಕೂ ಕಾಂಪ್ಲೆಕ್ಸ್ ಮಾದರಿಯಲ್ಲಿ ಪ್ರತ್ಯೇಕ ಕಟ್ಟಡ ಬೇಕಿದೆ. ಶಿಕ್ಷಣ ಇಲಾಖೆಗೆ ಸಿಎಂ ಹೆಚ್ಚಿನ ಅನುದಾನ ನೀಡಿದ್ದಾರೆ. ನಬಾರ್ಡ್, ವರ್ಲ್ಡ್ ಬ್ಯಾಂಕ್ ನಿಂದಲೂ ಅನುದಾನಕ್ಕೆ ಬೇಡಿಕೆ ಮಾಡಿದ್ದೇವೆ. ಕಲಾ, ವಾಣಿಜ್ಯ, ವಿಜ್ಞಾನಕ್ಕೆ ಪ್ರತ್ಯೇಕ ಕಟ್ಟಡ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ. ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ ಕಟ್ಟಡ ನಿರ್ಮಾಣ ಮಾಡ್ತೀವಿ ಎಂದು ತಿಳಿಸಿದರು.

ಪುರಾತನ ಕಟ್ಟಡದಲ್ಲಿ ಮುಂದಿನ ವರ್ಷದವರೆಗೆ ಮಾತ್ರ ಹೊಂದಾಣಿಕೆ ಮೂಲಕ ತರಗತಿ ನಡೆಸಿ ಎಂದು ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದ ಸಚಿವ ಜಿ.ಟಿಡಿ ಕಾಲೇಜು ನಿರ್ಮಾಣಕ್ಕೆ ಮುಂದಿನ ವರ್ಷದಲ್ಲಿ ನಗರದಲ್ಲಿ 5 ಎಕರೆ ಜಾಗ ಖರೀದಿಗೆ ಚಿಂತನೆ ನಡೆಸಲಾಗಿದೆ. ರಾಜ್ಯದ ಇತರೆ ಕಾಲೇಜುಗಳಿಗೂ ಮೂಲಭೂತ ಸೌಕರ್ಯ ಒದಗಿಸಲು ತೀರ್ಮಾನಿಸಿದ್ದೇವೆ ಎಂದರು.

ವಿಧಾನಸೌಧದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ವಿಧಾನಸೌಧದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ದಿನದ 24 ಗಂಟೆಯೂ ದಲ್ಲಾಳಿಗಳು ಓಡಾಡುತ್ತಿರುವುದನ್ನು ಗಮನಿಸಿದ್ದೇವೆ. ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹವರನ್ನು ನಿರ್ಬಂಧಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸೌಧದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ದಿನದ 24 ಗಂಟೆಯೂ ದಲ್ಲಾಳಿಗಳು ಓಡಾಡುತ್ತಿರುವುದನ್ನು ಗಮನಿಸಿದ್ದೇವೆ ಎಂದಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು ಇದನ್ನು ತಡೆಗಟ್ಟ ಬೇಕಾಗಿದೆ ಎಂದು ಹೇಳಿದ್ದರು.

ಮಾಧ್ಯಮಗಳವರು ಸಹ ಪದೇ ಪದೇ ಪ್ರತ್ಯೇಕ ಪ್ರತ್ಯೇಕವಾಗಿ ಬಂದು ಸಚಿವರು ಮತ್ತು ಅಧಿಕಾರಿಗಳನ್ಮು ಭೇಟಿ ಮಾಡುವುದರಿಂದ ಸುಗಮ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.

ಹೆಚ್.ಡಿ.ರೇವಣ್ಣ ಅವರಿಗೆ ನಿಯೋಜಿತವಾಗಿರುವ ಮನೆ ನವೀಕರಣ ಮಾಡುತ್ತಿಲ್ಲ. ಕುಮಾರಕೃಪಾದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಹರಿದು ಹೋಗುವ ಪೈಪ್ ಲೈನ್ ಒಡೆದು ಹೋಗಿತ್ತು. ಹಾಗಾಗಿ ಪೈಪ್ ಲೈನ್ ಬದಲಾವಣೆ ಕಾಮಗಾರಿ ಮಾಡಲಾಗುತ್ತಿದೆ. ಜತೆಗೆ ಡಿಸೆಂಬರ್ ನಿಂದಲೇ ಕಾಮಗಾರಿ ನಡೆಯುತ್ತಿದೆ. ವೆಚ್ವ ಕಡಿತ ಹಿನ್ನೆಲೆಯಲ್ಲಿ ಯಾವುದೇ ಸಚಿವರ ನಿವಾಸ ನವೀಕರಣಕ್ಕೆ ಅನುಮತಿ ನೀಡಿಲ್ಲ ಎಂದು ಹೇಳಿದರು.

ಗೌರಿ ಹತ್ಯೆ ದಿನ ಬೈಕ್ ರೈಡ್ ಮಾಡಿದ್ದ ಆರೋಪದಲ್ಲಿ ಬಂಧಿತವಾಗಿರುವ ಗಣೇಶ್ ಮಿಸ್ಕಿ ಪೊಲೀಸ್ ಕಸ್ಟಡಿಗೆ!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗಣೇಶ್ ಮಿಸ್ಕಿ ಮತ್ತು ಅಮಿತ್ ರಾಮಚಂದ್ರ ರನ್ನು ೩ ನೇ ಎಸಿಎಂಎಂ ನ್ಯಾಯಾಲಯ ೧೪ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ನಿನ್ನೆ ಹುಬ್ಬಳ್ಳಿ ಮೂಲದ ಇಬ್ಬರು ವ್ಯಕ್ತಿಗಳ ಬಂಧಿಸಿರುವ ಎಸ್ಐಟಿ ಪೊಲೀಸರು ಬಂಧಿಸಿದ್ದರು‌. ಈ ಇಬ್ಬರಲ್ಲಿ ಗಣೇಶ್ ಮಿಸ್ಕಿ ಹತ್ಯೆ ದಿನ ಬೈಕ್ ರೈಡ್ ಮಾಡಿದ್ದ ಎಂದು ತಿಳಿದು ಬಂದಿದೆ. ಇನ್ನೂ ಇತರೆ ಆರೋಪಿಗಳಿಗೆ ಸಹಾಯ ಮಾಡಿದ್ದ ಆರೋಪದಲ್ಲಿ ಅಮಿತ್ ರಾಮಚಂದ್ರ ಬದ್ದಿಯನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಗನ್ ಹಾಗು ಹತ್ಯೆ ದಿನ ಬಳಸಿದ್ದ ಬೈಕ್ ವಶಕ್ಕೆ ಪಡೆಯಲು ತಯಾರಿ ನಡೆಸಲಾಗಿದ್ದು, ಮಂಗಳೂರು, ಗೋವಾ ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಕರೆದೊಯ್ದು ಮಹಜರು ಮಾಡಲು ಸಿದ್ದತೆ ನಡೆಸಲಾಗಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಆದ ಹನ್ನೆರಡರ ಪೋರ!

ಬೆಂಗಳೂರು: ಹನ್ನೆರಡು ವರ್ಷದ ಬಾಲಕನೊಬ್ಬ ಈಗ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾನೆ. ಇದು ಹೇಗೆ ಅಂತಾ ಯೋಚಿಸ್ತೀದ್ದೀರಾ ಹಾಗಾದ್ರೆ ಈ ಸ್ಟೋರಿ ಓದಿ.

ಚಿಂತಾಮಣಿ ಮೂಲದ ಸುಜಾತ ಮುನಿರಾಜು ದಂಪತಿ ಪುತ್ರನಾದ ಶಶಾಂಕ್‌ಗೆ ಪೊಲೀಸ್ ಇನ್ಸ್‌ಪೆಕ್ಟರ್ ಆಗುವ ಕನಸು. ಆದರೆ, ಆತನ ಆರೋಗ್ಯ ಪೊಲೀಸ್ ಇನ್ಸ್‌ಪೆಕ್ಟರ್ ಆಗುವ ಅವನ ಕನಸಿಗೆ ತಣ್ಣಿರೆಚಿದೆ. ಶಶಾಂಕ್ ಮಾರಕ ರೋಗದಿಂದ ಬಳಲುತ್ತಿದ್ದು. ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶಶಾಂಕ್ ಕನಸನ್ನು ಪೊಲೀಸ್ ಇಲಾಖೆ ನನಸು ಮಾಡಿದೆ. ಆತನ ಕೊನೆಯ ಆಸೆಯಂತೆ ವಿವಿ ಪುರಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಳ್ಳುವ ಮೂಲಕ ಬಾಲಕ ಶಶಾಂಕ್‌‌ನ ಆಸೆ ಈಡೇರಿದೆ. ಸುಮಾರು ಒಂದು ಗಂಟೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಶಶಾಂಕ್ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

ಬಾಲಕನ ಆಸೆಯಂತೆ ವಿವಿಪುರಂ ಠಾಣೆ ಇನ್ಸ್‌ಪೆಕ್ಟರ್ ಟಿ.ಡಿ. ರಾಜು ಬಾಲಕ ಶಶಾಂಕ್‌ನನ್ನ ಇನ್ಸ್‌ಪೆಕ್ಟರ್ ಚೇರ್ನಲ್ಲಿ ಕುರಿಸಿ ಪೊಲೀಸ್ ಕ್ಯಾಪ್, ನಕಲಿ ಗನ್, ವಾಕಿ ಟಾಕಿ ನೀಡಿದರು.

ಮೈತ್ರಿ ಸರ್ಕಾರದ ವಿರುದ್ಧ ಮಾತನಾಡಿದ ಕಾಂಗ್ರೆಸ್ ನಾಯಕರಿಗೆ ನೋಟೀಸ್!

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ದ ಹೇಳಿಕೆ ನೀಡಿದ್ದ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ಮಾಜಿ ಸ್ಪೀಕರ್ ಕೋಳಿವಾಡ ಅವರಿಗೆ ಕಾರಣ ಕೇಳಿ ಕೆಪಿಸಿಸಿ ನೋಟೀಸ್ ಜಾರಿ ಮಾಡಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ವಿ.ವೈ.ಘೋರ್ಪಡೆ ಇಬ್ಬರು ನಾಯಕರಿಗೆ ನೋಟೀಸ್ ಜಾರಿ ಮಾಡಿದ್ದಾರೆ.  ಮೈತ್ರಿ ಸರ್ಕಾರಕ್ಕೆ ವಿರುದ್ದವಾಗಿ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನ ನೀಡುತ್ತಿದ್ದೀರಿ. ಒಂದು ವಾರದಲ್ಲಿ ಈ ಬಗ್ಗೆ ಉತ್ತರ ಕೊಡಬೇಕು ಇಲ್ಲದಿದ್ದರೇ ಪಕ್ಷದ ವತಿಯಿಂದ  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ವಿ.ವೈ. ಘೋರ್ಪಡೆ ನೋಟೀಸ್ ನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಮಾಜಿ ಸ್ಪೀಕರ್ ಕೋಳಿವಾಡ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕಲು ಕಾಂಗ್ರೆಸ್ ಕಾರಣ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡಸಿ ಹೆಚ್.ಡಿ ಕುಮಾರಸ್ವಾಮಿ ಪೂರ್ಣಾವಧಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ ಎಂದಿದ್ದರು.

ಇನ್ನು ಮಾಜಿ ಶಾಸಕ ಕೆ.ಎನ್ ರಾಜಣ್ಣ ಮಾತನಾಡಿ ಮೈತ್ರಿ ಸರ್ಕಾರಕ್ಕೆ ಹೆಚ್ಚು ಆಯುಷ್ಯ ಇಲ್ಲ. ಬೇಗ ಪತನಗೊಳ್ಳುತ್ತದೆ ಎಂದು ಸಮ್ಮಿಶ್ರ ಸರ್ಕಾರವನ್ನ ಟೀಕೆ ಮಾಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಯಾರ ವಿರೋಧವೂ ಇಲ್ಲ: ಸಿದ್ದರಾಮಯ್ಯ

ನವದೆಹಲಿ: ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್​ ಮತ್ತು ಜೆಡಿಎಸ್​ ಒಟ್ಟಾಗಿ ಎದುರಿಸುವ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ ಮಾಜಿ ಮುಖ್ಯಮಂತ್ರಿ ಸುದ್ಧರಾಮಯ್ಯ ತಿಳಿಸಿದ್ದಾರೆ‌.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಆಷಾಡ ಮಾಸದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕಿತ್ತು. ಆದರೆ, ಆಷಾಡ ಮಾಸ ಬಂದದ್ದರಿಂದ ಮಾಡಲಾಗಲಿಲ್ಲ. ಆಷಾಡ ಮಾಸದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಿದರು.

ಉಳಿದಂತೆ ಮೊದಲ ಹಂತದಲ್ಲಿ 30 ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಮಾಡಲು ತಿರ್ಮಾನಿಸಲಾಗಿದ್ದು, ಕಾಂಗ್ರೆಸ್ಗೆ 20 ಮತ್ತು ಜೆಡಿಎಸ್ ಪಕ್ಷಕ್ಕೆ 10 ಸ್ಥಾನಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಟ್ಟಾಗಿ ಮಾಡಿಕೊಳ್ಳುತ್ತಿರುವ ಮೈತ್ರಿ ಬಗ್ಗೆ ಪಕ್ಷದಲ್ಲಿ ಯಾರ ಆಕ್ಷೇಪವೂ ಇಲ್ಲ. ಮೈತ್ರಿಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಇನ್ನು ಪರಿಷತ್​ ಸಭಾಪತಿ ಸ್ಥಾನದ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.