ಪಾಕಿಸ್ತಾನ ಧ್ವಜಾರೋಹಣ ಪ್ರಕರಣ: ಗೌರಿ ಹತ್ಯೆ ಆರೋಪಿ ವಾಗ್ಮೋರೆ ಖುಲಾಸೆ

ವಿಜಯಪುರ: ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜಾರೋಹಣ ಮಾಡಿದ ಆರೋಪದಲ್ಲಿ ಗೌರಿ ಲಂಕೇಶ್​ ಹತ್ಯೆ ಪ್ರಕರಣದ ಪರಶುರಾಮ ವಾಗ್ಮೋರೆ ಸೇರಿದಂತೆ 6 ಜನರನ್ನು ಖುಲಾಸೆ ಮಾಡಿ ವಿಜಯಪುರ 1ನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರುಶರಾಮ ವಾಗ್ಮೋರೆ 2012 ರಲ್ಲಿ ಸಿಂಧಗಿ ಪಟ್ಟಣದ ತಹಸೀಲ್ದಾರ್‌ ಕಚೇರಿ ಮೇಲೆ ಪಾಕಿಸ್ತಾನ ಧ್ವಜ ಹಾರಿಸಿ ಕೋಮು ಗಲಭೆ ಸೃಷ್ಟಿಸಿದ್ದ ಆರೋಪ ಕೇಳಿ ಬಂದಿತ್ತು. ಈತನನ್ನು ಬಂಧಿಸಿದ್ದ ಸಿಂಧಗಿ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯಕ್ಕೆ ಜಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಇಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿರುವ ವಿಜಯಪುರ 1ನೇ ಹೆಚ್ಚುವರಿ ನ್ಯಾಯಾಲಯ ಪಾಕ್ ಧ್ವಜ ಹಾರಿಸಿದ್ದ ಪ್ರಕರಣದಿಂದ ಪರುಶರಾಮ ವಾಗ್ಮೋರೆ ಸೇರಿದಂತೆ ಆರು ಮಂದಿಯನ್ನು ಆರೋಪಮುಕ್ತಗೊಳಿಸಿದೆ.

2012ರ ಜನವರಿ 1ರಂದು ಸಿಂಧಗಿಯ ತಹಶೀಲ್ದಾರ್​ ಕಚೇರಿ ಮೇಲೆ ಪರಶುರಾಮ್​ ವಾಗ್ಮೋರೆ, ಅನಿಲ ಸೋಲಂಕರ, ಮಲ್ಲನಗೌಡ ಪಾಟೀಲ, ರೋಹಿತ ನಾವಿ, ಸುನಿಲ ಅಗಸರ, ಅರುಣ ಪಾಕ್​ ಧ್ವಜ ಹಾರಿಸಿದ್ದರು. ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ 5ನೇ ಆರೋಪಿಯಾಗಿದ್ದ. ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ ಒಂದನೇ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಗೀತಾ ಕೆ. ಬಿ, ಪ್ರಕರಣದ ತನಿಖೆಯಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.

ಈ ಪ್ರಕರಣದ 5ನೇ ಆರೋಪಿಯಾಗಿರುವ ಹಿಂದೂಪರ ಸಂಘಟನೆ ಕಾರ್ಯಕರ್ತನಾಗಿರುವ ಪರಶುರಾಮ್ ವಾಗ್ಮೋರೆ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್​ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾನೆ. ಈಗಾಗಲೇ ಈತನನ್ನು ಎಸ್.ಐಟಿ ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.

ಶಿಮ್ಲಾ ಆಸ್ಪತ್ರೆಯಲ್ಲಿ ಮೈಸೂರು ಮೂಲದ ಮಹಿಳೆ: ವಾಪಸ್ ಕರೆತರಲು ಸಿಎಂ ಸೂಚನೆ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ಮೂಲದ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪತಿಯಿಂದ ಪರಿತ್ಯಕ್ತಳಾಗಿದ್ದ ಈ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿ ತನ್ನ ಅರಿವಿಗೆ ಬಾರದಂತೆ ಹಿಮಾಚಲ ಪ್ರದೇಶ ಸೇರಿದ್ದಳು. ಶಿಮ್ಲಾದ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

ಮಾನ್ಯ ಮುಖ್ಯಮಂತ್ರಿಯವರು ಇಂದು ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು, ಸೂಕ್ತ ಚಿಕಿತ್ಸೆ ಕೊಡಿಸಿ, ಆಶ್ರಯ ಒದಗಿಸಲು ಸೂಚಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳು ಆ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹಿಮಾಚಲ ಪ್ರದೇಶದ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಮಹಿಳೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ಚಿಕಿತ್ಸೆಯ ನಂತರ ಆಕೆಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಈ ಮಹಿಳೆ ಪತಿಯಿಂದ ಪರಿತ್ಯಕ್ತಳಾಗಿದ್ದು, ಹಿಮಾಚಲ ಪ್ರದೇಶದ ಕಾಂಗ್ರಾದ ಬೀದಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಕಾಂಗ್ರಾದ ಡಾ. ರಾಜೇಂದ್ರಪ್ರಸಾದ್ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಾಖಲಿಸಲಾಗಿತ್ತು. ನಂತರ ಜೂನ್ 2016 ರಲ್ಲಿ ಹಿಮಾಚಲ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಆಸ್ಪತ್ರೆಗೆ ಸ್ಥಳಾಂತರಗೊಳಿಸಲಾಗಿತ್ತು. ಭಾಷೆಯ ಸಮಸ್ಯೆಯಿಂದಾಗಿ ಊರವರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಆಗಿರಲಿಲ್ಲ ಹಾಗೂ ಆಘಾತಗೊಂಡಿದ್ದರಿಂದ ಅವರು ಅಲ್ಲಿ ಹೇಗೆ ತಲುಪಿದರು ಎಂಬುದನ್ನು ಅವರಿಗೆ ತಿಳಿಸಲು ಸಾಧ್ಯವಾಗಿರಲಿಲ್ಲ.

ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ಗೆ ಬೇಕು: ಚುನಾವಣಾ ಪೂರ್ವ ಮೈತ್ರಿಗೆ ಎ.ಮಂಜು ಅಪಸ್ವರ

ಬೆಂಗಳೂರು: ಮಗು ಹುಟ್ಟೊಕ್ಕಿಂತ ಮುಂಚೆ ಡಿಎನ್ ಎ ಪರೀಕ್ಷೆಗೆ ನಿಷೇಧವಿದೆ ಎನ್ನುವ ಮೂಲಕ ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಕುರಿತು ಮಾಜಿ ಸಚಿವ ಎ.ಮಂಜು ಅಪಸ್ವರ ಎತ್ತಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಹಾಸನ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೇ ಹೆಚ್ಚಿನ ಮನ್ನಣೆ ಕೊಡಬೇಕು ಎಂದು ಹಾಸನ ಕಾಂಗ್ರೇಸ್ ಮುಖಂಡರು, ಮಾಜಿ ಸಚಿವರು, ಪದಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಮೈತ್ರಿ ಸರ್ಕಾರದ ವಿಚಾರದಲ್ಲಿ ನಮಗೆ ಸಾಕಷ್ಟು ನೋವಿದೆ ಅದೆಲ್ಲವನ್ನೂ ಪರಿಹರಿಸಿ ನಮ್ಮ ಅಭಿಪ್ರಾಯ ಪರಿಗಣಿಸಿ. ಹಾಸನದಲ್ಲಿ ಲೋಕಸಭೆಗೆ ಕಾಂಗ್ರೇಸ್ ಅಭ್ಯರ್ಥಿಯನ್ನೇ ಹಾಕಬೇಕು. ಇದು ಹಾಸನ ಕಾಂಗ್ರೇಸ್‌ನ ಹಕ್ಕು. ಇದೆಲ್ಲವನ್ನೂ ಪರಿಗಣಿಸಿದರೆ ಮಾತ್ರ ನಮ್ಮ ಕಾಂಗ್ರೇಸ್ ಪಕ್ಷಕ್ಕೆ ಉಳಿಗಾಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ, ಆದರೆ ನಮ್ಮ ನೋವುಗಳನ್ನೂ ನಿವಾರಿಸಿ ಎಂದು ಹಾಸನ ಕಾಂಗ್ರೇಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ತೀವ್ರ ಒತ್ತಾಯಿಸಿದ್ದಾರೆ.

ಸಭೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎ ಮಂಜು, ಮಗು ಹುಟ್ಟೊಕ್ಕಿಂತ ಮುಂಚೆ ಡಿಎನ್ ಎ ಪರೀಕ್ಷೆಗೆ ನಿಷೇಧವಿದೆ. ಹಾಗೆಯೇ ಲೋಕಸಭೆ ಚುನಾವಣಾ ಮೈತ್ರಿ ಬಗ್ಗೆ‌ ಹೈಕಮಾಂಡ್ ನಿರ್ಧಾರ ಫೈನಲ್. ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ಪಕ್ಷವನ್ನ ಬಲಪಡಿಸುವುದಷ್ಟೇ ನಮ್ಮ ಜವಾಬ್ದಾರಿ. ಚುನಾವಣೆ ಇನ್ನೂ ದೂರವಿದೆ ಈಗಲೇ ಏನೂ ಹೇಳಲಿಕ್ಕಾಗದು ಎಂದರು.

ಡಿಸಿಎಂ ತವರಲ್ಲಿ ಬೀಡು ಬಿಟ್ಟ ಹಂಟರ್ ಫ್ಯಾಮಿಲಿ: ಬೆಸ್ತು ಬಿದ್ದ ಗ್ರಾಮಸ್ಥರು

ತುಮಕೂರು:ಈ ಊರಲ್ಲಿ ಮೇಯಲು ಹೋದ ಕುರಿಮಂದೆಯಲ್ಲಿ ಪ್ರತಿ ದಿನ ಒಂದೊಂದೇ ಕುರಿ,ಮೇಕೆಗಳು ನಾಪತ್ತೆಯಾಗುತ್ತಿವೆ.ಕುರಿಗಳ ಕಾಣೆಯ ನಿಗೂಢ ಭೇದಿಸಲು ಹೊರಟ ಗ್ರಾಮಸ್ಥರು ಪರಿವಾರದೊಂದಿಗೆ ಬೀಡುಬಿಟ್ಟಿದ್ದ ಹಂಟರ್ ಫ್ಯಾಮಿಲಿ ನೋಡಿ ಬೆಸ್ತು ಬಿದ್ದಿದ್ದಾರೆ.ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸ್ವ
ಕ್ಷೇತ್ರ ಕೊರಟಗೆರೆ ತಾಲ್ಲೂಕಿನ ಬುರುಗನಹಳ್ಳಿ ಕುರಿ ಮೇಕೆಗಳು ನಿಗೂಢ ರೀತಿಯಲ್ಲಿ ಕಾಣೆಯಾಗುತ್ತಿವೆ.ಗ್ರಾಮದ ಬೆಟ್ಟಕ್ಕೆ ಮೇಯಲು ಹೋದ ಕುರಿಗಳು ಒಂದೊಂದೇ ನಾಪತ್ತೆಯಾಗುತ್ತಿವೆ.ಇದರಿಂದ ಆತಂಕಕ್ಕೆ‌ ಸಿಲುಕಿದ ಗ್ರಾಮಸ್ಥರು ಯಾರೋ ಕುರಿ,ಮೇಕೆಗಳನ್ನು ಕದಿಯುತ್ತಿದ್ದಾರೆ ಎಂದು ಅನುಮಾನಗೊಂಡು ಕುರಿಮಂದೆಯ ಹಿಂದೆ ಪತ್ತೆದಾರಿ ಕೆಲಸ ನಡೆಸಿದರು.

ಬೆಟ್ಟದ ಮೇಲೆ ಹೋಗುತ್ತಿದ್ದಂತೆ ಅಣತಿ ದೂರದಲ್ಲಿ ಹಂಟರ್ ಫ್ಯಾಮಿಲಿ ಕಂಡಿತು.ಇದು ಬೇರೆ ಯಾವುದೋ ಆಗಂತಕರ ತಂಡವಲ್ಲ.ಚಿರತೆಯೊಂದು ತನ್ನ ಮರಿಗಳೊಂದಿಗೆ ಗುಡ್ಡದ ಬಿಲದಲ್ಲಿ ವಾಸ್ತವ್ಯ ಹೂಡಿತ್ತು.ಚಿರತೆ ಫ್ಯಾಮಿಲಿ ನೋಡಿದ ಗ್ರಾಮಸ್ಥರು ಬೆಸ್ತು ಬೀದ್ದು ಗ್ರಾಮಕ್ಕೆ ಓಡಿದರು.

ಬೆಟ್ಟದಲ್ಲಿ ಬಿಡಾರ ಹೂಡಿರುವ ಚಿರತೆ ಪ್ರತಿದಿನ ಬೆಟ್ಟಕ್ಕೆ ಬರುವ ಕುರಿ,ಮೇಕೆಗಳ ಹಿಂಡಿನಿಂದ ಒಂದೊಂದೇ ಕುರಿಯನ್ನು ಭೇಟೆಯಾಡುತ್ತಿದೆ ಎನ್ನುವುದು ಖಾತರಿಯಾಗಿದ್ದು ಗ್ರಾಮಸ್ಥರು ನೆರವು ಕೋರಿ ಅರಣ್ಯ ಇಲಾಖೆ ಮೊರೆ ಹೋಗಿದ್ದಾರೆ.ತಮ್ಮ ಕುರಿ ಮೇಕೆಗಳನ್ನು ಉಳಿಸಿಕೊಡುವ ಜೊತೆ ಜನರ ಜೀವವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.

ಆದರೆ ಗ್ರಾಮಸ್ಥರ ಮನವಿಗೆ ಅರಣ್ಯ ಇಲಾಖೆ ಸ್ಪಂಧಿಸುತ್ತಿಲ್ಲ ಎಂದು ಜನರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬಂದು ಚಿರತೆ ಹಾಗು ಮರಿಗಳನ್ನು ಹಿಡಿದು ಗ್ರಾಮಸ್ಥರಿಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ವತಃ ಗೃಹ ಖಾತೆ ಹೊಂದಿರುವ ಡಿಸಿಎಂ ಪರಮೇಶ್ವರ್ ತವರಿನಲ್ಲೇ ಜನರು ಆತಂಕದಲ್ಲಿ ಬದುಕುವ ಸ್ಥಿತಿ ವಿಪರ್ಯಾಸವಾಗಿದೆ.

ಮಾಜಿ ಸಚಿವೆ ವಿಮಲಾಬಾಯಿ ನಿಧನ:ಗಣ್ಯರ ಸಂತಾಪ

ವಿಜಯಪುರ:ಮಾಜಿ ಸಚಿವೆ ವಿಮಲಾಬಾಯಿ ಎಸ್.ದೇಶಮುಖ್ ವಿಜಯಪುರದ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಜೆ.ಎಚ್.ಪಟೇಲ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ವಿಮಲಾಬಾಯಿ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಮಲಾಬಾಯಿ ಅವರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ . ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಇಂದು ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 12 ಗಂಟೆಗೆ ನಾಲತವಾಡದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ವಿಮಲಾಬಾಯಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ,ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ವಿಮಲಾಬಾಯಿ ಅವರ ನಿಧನದಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಈ ದಿನ ನಾವು ಜನತಾಪರಿವಾರದ ಹಿರಿಯ ನಾಯಕಿ ಒಬ್ಬರನ್ನು ಕಳೆದುಕೊಂಡಿದ್ದೇವೆ. ವಿಮಲಾಬಾಯಿ ದೇಶಮುಖ್ ಅವರು ರಾಜ್ಯ ಕಂಡ ಉತ್ತಮ ರಾಜಕಾರಣಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.

ಲಾಲ್‌ಬಾಗ್ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ ಕಣ್ಣುದಾನ!

ಬೆಂಗಳೂರು: ಸ್ಕೂಟಿಗೆ ಕಾಂಕ್ರೇಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿ ತೆರಳುತ್ತಿದ್ದ ಓರ್ವ ಯುವತಿ ಸಾವನ್ನಪ್ಪಿದ್ದು, ಮತ್ತೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಾಲ್ ಬಾಗ್‌ ಬಳಿ ರಸ್ತೆಯಲ್ಲಿ ನಡೆದಿದೆ.

ಬೆಳಗ್ಗೆ ಸಹೋದರಿಯರಿಬ್ಬರು ವಾಕಿಂಗ್ ಹೋಗಿದ್ದಾಗ ಅಪಘಾತ ಸಂಭವಿಸಿದೆ ಪ್ರೀತಿ (19) ಸ್ಥಳದಲ್ಲೇ ಸಾವನ್ನಪ್ಪಿದ್ದು, ಲಾವಣ್ಯ (24) ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ಯುವತಿಯ ಕಣ್ಣುಗಳನ್ನು ದಾನ ಮಾಡಲಾಗಿದೆ.

ವಿ.ವಿ.ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.