ಇರುಮುಡಿ ಕಟ್ಟಿದ ಡಿ.ಕೆ ಶಿವಕುಮಾರ್

ರಾಮನಗರ: ರಾಜ್ಯ ಕಾಂಗ್ರೆಸ್ ನಲ್ಲಿ ಮ್ಯಾರಥಾನ್ ಸಭೆಗಳು ನಡೆಯುತ್ತಿದ್ದರೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ಮಾಲೆ ಧರಿಸಿ ಸ್ವಾಮಿಯೈ ಶರಣಂ ಅಯ್ಯಪ್ಪ ಎನ್ನುತ್ತಾ ಇರುಮುಡಿ ಕಟ್ಟಿ ಶಬರಿಮಲೈಗೆ ತೆರಳಿದ್ದಾರೆ.

ಸಿ.ಎಂ.ಕುಮಾರಸ್ವಾಮಿ ಜೊತೆಯಲ್ಲಿ ಹಲವು ಪ್ರಮುಖ ರಾಜ್ಯದ ಜಲಾಶಯಗಳಿಗೆ ಬಾಗೀನ ಅರ್ಪಿಸಿದ್ದ ಡಿ.ಕೆ.ಶಿವಕುಮಾರ್ ಅಲ್ಲಿಂದ ನೇರವಾಗಿ ಮೈಸೂರಿಗೆ ಆಗಮಿಸಿ ಕೇರಳದತ್ತ ಪ್ರಯಾಣ ಬೆಳೆಸಿದರು ಪಂಪಾದಲ್ಲಿ ಅಯ್ಯಪ್ಪಸ್ವಾಮಿ ಮಾಲೆ‌ ಧರಿಸಿ ಇರುಮುಡಿ ಕಟ್ಟಿದರು.ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಾ ಶಬರಿಮಲೈ ಬೆಟ್ಟ ಏರಿದರು.ಆಪ್ತ ಸ್ನೇಹಿತರ ಜೊತೆ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದರು.

ಇಂದು ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಮತ್ತೆ ವಾಪಸ್ ಆಗುತ್ತಿದ್ದಾರೆ.ಬಿಡುವಿಲ್ಲದ ರಾಜಕೀಯದ ನಡುವೆಯೂ ಡಿಕೆಶಿ ಇರುಮುಡಿ ಕಟ್ಟಿದ್ದು ಅಚ್ಚರಿ ಮೂಡಿಸಿದೆ.ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ಸಂಕಷ್ಟದಿಂದ ಪಾರು ಮಾಡುವಂತೆ ಸಚಿವ ಡಿಕೆಶಿ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದು ಅದರಂತೆ ಇಂದು ಹರಕೆ ತೀರಿಸಿದ್ದಾರೆ ಎಂದು ಸಚಿವರ ಆಪ್ತರು ತಿಳಿಸಿದ್ದಾರೆ.

ಕಟ್ಟಡ ಕುಸಿತ: ಐವರು ಸಾವು, ಹಲವರಿಗೆ ಗಂಬೀರ ಗಾಯ

ಪುಣೆ : ಇಲ್ಲಿನ ಮುಂಧ್ವಾ ಪ್ರದೇಶದಲ್ಲಿ ಇಂದು ಬೆಳಗ್ಗೆ 30 ವರ್ಷದ ಹಳೆಯ ಕಟ್ಟಡ ಕುಸಿದು ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಟ್ಟಡ ಕುಸಿದ ಸುದ್ಧಿ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಕಟ್ಟಡದ ಅವಶೇಷಗಳಡಿಯಿಂದ ಹಲವು ಮಂದಿಯನ್ನು ಮೇಲಕ್ಕೆತ್ತಿ ರಕ್ಷಿಸಲಾಗಿದೆ.

ಕಟ್ಟಡ 30 ವರ್ಷದ ಹಳೆಯದಾಗಿರುವುದರಿಂದ ಕಟ್ಟಡವನ್ನು ಕೆಡವಬೇಕೆಂದು ಸಿಟಿ ಮುನಿಸಿಪಲ್‌ ಕೌನ್ಸಿಲ್‌ ನೊಟೀಸ್‌ ನೀಡಿತ್ತು ಎಂದು ತಿಳಿದು ಬಂದಿದೆ.

ಔಷಧ ನಿಯಂತ್ರಣ ಕಟ್ಟಡ ಉದ್ಘಾಟನೆ ಮಾಡಿದ: ಡಿಸಿಎಂ ಪರಂ

ಬೆಂಗಳೂರು: ಗುಣಮಟ್ಟದ ಔಷಧ ಉತ್ಪಾದನೆ ಹೆಚ್ಚಿಸಿ, ವಾಣಿಜ್ಯೀಕರಣಗೊಳಿಸಿದರೆ ‘ಬೆಂಗಳೂರು ಔಷಧ ಹಬ್’ ಆಗುವುದರಲ್ಲಿ ಅನುಮಾನವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಅರಮನೆ ರಸ್ತೆಯಲ್ಲಿ ನಿರ್ಮಿಸಿರುವ ಔಷಧ ನಿಯಂತ್ರಣ ಇಲಾಖೆಯ ಬೃಹತ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಔಷಧ ತಯಾರಕರ ಜವಾಬ್ಧಾರಿ ದೊಡ್ಡದು. ನಿಮ್ಮ ಔಷಧಿಗೆ ಪ್ರತ್ಯೇಕ ಲ್ಯಾಬರೇಟರಿ ಇರಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿರುವುದು ಒಳ್ಳೆಯದು. ಡ್ರಗ್ ಕಂಟ್ರೋಲ್ ಡಿಪಾರ್ಟ್‌ಮೆಂಟ್ ಜವಾಬ್ಧಾರಿ ದೊಡ್ಡದಿದೆ. ನಿಮ್ಮ ಗಮನಕ್ಕೆ ಬಾರದೇ ಯಾವುದೇ ಔಷಧ ಮಾರುಕಟ್ಟೆಗೆ ಬರಬಾರದು ಎಂದು ಸಲಹೆ ನೀಡಿದರು.

ಇನ್ನು, ಕೆಲವು ಮೆಡಿಕಲ್ ಶಾಪ್‌ಗಳು ಲೈಸೆನ್ಸ್ ಇಲ್ಲದೇ ನಡೆಸುತ್ತಿದ್ದಾರೆ.‌ ಕೆಲವು ಅವಧಿ ಮುಗಿದ ಔಷಧಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಗಮನವಹಿಸಿ ನಿಯಂತ್ರಣಕ್ಕೆ ತರಬೇಕು ಎಂದು ಹೇಳಿದರು.

ಇನ್ನು, ಡ್ರಗ್ಸ್ ಕೂಡ ದೊಡ್ಡ ಜಾಲವಾಗಿದೆ. ಈ ಡ್ರಗ್ಸ್ ನಿಯಂತ್ರಣ ಮಾಡದಿದ್ದರೆ ಯುವ ಪೀಳಿಗೆ ತೊಂದರೆಗೆ ಸಿಲುಕುತ್ತಾರೆ. ಔಷಧ ನಿಯಂತ್ರಕರು ಇಂಥವರ ಬಗ್ಗೆ ಮಾಹಿತಿ‌ ನೀಡಿದರೆ ಪೊಲೀಸ್‌ ಇಲಾಖೆಗೆ ಸುಲಭವಾಗಲಿದೆ‌ ಎಂದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟು ತಿರುಪತಿ: ಫ್ಲೈ ಬಸ್ ಸೇವೆ

ಬೆಂಗಳೂರು: ಬೆಂಗಳೂರಿಗೆ ವಿಮಾನದ ಮೂಲಕ ಬರುವ ಪ್ರಯಾಣಿಕರು ತಿರುಪತಿಗೆ ತೆರಳಲು ನೇರ ಬಸ್ ಸಂಪರ್ಕವನ್ನು ಕೆಎಸ್ಆರ್‌ಟಿಸಿ ಕಲ್ಪಿಸಿದೆ.ಪ್ರತಿದಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿ ಮಾರ್ಗದಲ್ಲಿ ಹೊಸದಾಗಿ ಕೆಎಸ್ಆರ್‌ಟಿಸಿ ಫ್ಲೈಬಸ್ ಸೇವೆಯನ್ನು ಪರಿಚಯಿಸಿದೆ.

ಪ್ರತಿದಿನ ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ‌ ಹೊರಡುವ ಫ್ಲೈ ಬಸ್ ಮಧ್ಯಾಹ್ನ 3 ಗಂಟೆಗೆ ತಿರುಪತಿ ತಲುಪಲಿದೆ.ಎರಡನೇ ಬಸ್ ರಾತ್ರಿ 10 ಗಂಟೆಗೆ ಹೊರಟು ತಡರಾತ್ರಿ 03 ಗಂಟೆಗೆ ತಲುಪಲಿದೆ.ಅದೇ ರೀತಿ ರಾತ್ರಿ 9 ಗಂಟೆಗೆ ತಿರುಪತಿಯಿಂದ ಹೊರಡುವ ಫ್ಲೈ ಬಸ್ ಮಧ್ಯರಾತ್ರಿ 02 ಗಂಟೆಗೆ ಬೆಂಗಳೂರು ತಲುಪಲಿದೆ.ಎರಡನೇ ಬಸ್ ಬೆಳಗ್ಗಿನ 11 ಗಂಟೆಗೆ ಹೊರಡು ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದ.

ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಏಳು ಫ್ಲೈ ಬಸ್ ಸೇವೆ ನೀಡುತ್ತಿದ್ದು ಎರಡು ಫ್ಲೈ ಬಸ್ ಸೇವೆಯನ್ನು ಮಡಿಕೇರಿಗೆ ಹಾಗು ಒಂದು ಫೈ ಬಸ್ ಕುಂದಾಪುರಕ್ಕೆ ಮತ್ತು ಒಂದು ಫ್ಲೈ ಬಸ್ ಸಾರಿಗೆಯನ್ನು ಕೊಯಮತ್ತೂರಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ.ಇದೀಗ ಮುಂದುವರೆದ ಭಾಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿ ಮಾರ್ಗದಲ್ಲಿ ಹೊಸದಾಗಿ ಫ್ಲೈಬಸ್ ಆರಂಭಿಸಿದೆ.

ವಿಧಾನಸಭೆ ಸೋಲು ಮರೆತು ಲೋಕಸಭೆ ಚುನಾವಣೆಗೆ ತಯಾರಾಗಿ: ಪದಾಧಿಕಾರಿಗಳಿಗೆ ಸಿದ್ದು ಕರೆ

ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡಬೇಡಿ. ರಿಚಾರ್ಜ್ ಆಗುವ ಮೂಲಕ ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ ಎಂದು ಶಾಸಕಾಂಗ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ಕರೆ ನೀಡಿದರು.

ನಗರದ ಗುರುನಾನಕ್ ಭವನದಲ್ಲಿ ಇಂದು ಆಯೋಜಿಸಿದ್ದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ನೂರಕ್ಕೆ ನೂರರಷ್ಟು ಇತ್ತು. ಆದರೆ ಬಿಜೆಪಿಯವರು ಮಾಡಿದ ಅಪಪ್ರಚಾರದಿಂದಾಗಿ ನಮಗೆ ಸೋಲಾಯಿತು. ಶೇಕಡಾವಾರು ಮತಗಳಿಕೆಯಲ್ಲಿ ನಾವು ಬಿಜೆಪಿಗಿಂತ ಮುಂದೆ ಇದ್ದೇವೆ. ಆದರೂ ಹೆಚ್ಚು ಸ್ಥಾನಗಳನ್ನು ಗಳಿಸಲು ಆಗಿಲ್ಲ ಎಂದರು.

ಮುಂಬರುವ ಲೋಕಸಭೆ ಚುನಾವಣೆಗೆ ನಾವು ಈಗಿನಿದಲೇ ಸಜ್ಜಾಗೋಣ. ಆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಆಗಬೇಕು ಎಂದು ಹೇಳಿದರು.

ಹಿಂದಿನ ಸರ್ಕಾರ ಜನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿತ್ತು. ಆದರೆ ಬಿಜೆಪಿಯವರು ಹಿಂದುತ್ವದ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡಿ ಹೇಳಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದರು.

ಆದರೆ ಲೋಕಸಭೆ ಚುನಾವಣೆ ವೇಳೆ ಆ ರೀತಿ ಆಗುವುದಿಲ್ಲ. ನರೇಂದ್ರ ಮೋದಿಯವರು ಕಳೆದ ಐದು ವರ್ಷದಲ್ಲಿ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ಜನರಿಗೆ ವಿವರಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ಎಲ್ಲ ವರ್ಗದವರ ಪರವಾಗಿ ಕೆಲಸ ಮಾಡಿದ ಸರ್ಕಾರ ನಮ್ಮದಾಗಿತ್ತು. ಆದರೆ ಬಿಜೆಪಿಯವರು ಎಲ್ಲ ವರ್ಗದವರ ಪರವಾಗಿ ಇಲ್ಲ. ಸಾಮಾಜಿಕ ನ್ಯಾಯದಲ್ಲಿ ಅವರಿಗೆ ನಂಬಿಕೆಯೇ ಇಲ್ಲ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.

ಬಿಜೆಪಿಗೆ ಒಂದು ಸಿದ್ಧಾಂತವೇ ಇಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಿ ಆ ಮೂಲಕ ಗಲಭೆ ಸೃಷ್ಟಿಮಾಡುವುದೇ ಅವರ ಕೆಲಸ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ನಾಟಕಕಾರ : ಪ್ರಧಾನಿ ನರೇಂದ್ರ ಮೋದಿ ಒಬ್ಬ ನಾಟಕಕಾರ. ಅಂತಹ ನಾಟಕಕಾರರನ್ನು ನಾನು ನೋಡಿಯೇ ಇಲ್ಲ. ಆದರೆ, ಮಾತುಗಳಿಂದ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. ಮನ್ ಕೀ ಬಾತ್ ಅಲ್ಲವೇ ಅಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಕಳೆದ ಐದು ವರ್ಷದಲ್ಲಿ ರಾಜ್ಯದ ರೈತರಿಗೆ ಆಗಿರುವ ಅನ್ಯಾಯ ಅಷ್ಟಿಷ್ಟಲ್ಲ. ರೈತರ ವಿಚಾರದಲ್ಲಿ ಹಲವಾರು ಬಾರಿ ಬರೆದ ಪತ್ರಗಳಿಗೆ ಪ್ರಧಾನಿಯವರಿಂದ ಉತ್ತರವೇ ಬರಲಿಲ್ಲ. ಇನ್ನೂ ಕೇಂದ್ರದ ಕಾರ್ಯಕ್ರಮಗಳೆಲ್ಲ ಬೋಗಸ್. ಅದರಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿಯವರು ಘೋಷಿಸಿದ್ದು, ಬಳಿಕ ಜಾರಿಗೆ ತಂದ ಕಾರ್ಯಕ್ರಮಗಳೇನು ? ಯಾವ ಯಾವ ವಿಷಯದಲ್ಲಿ ಅವರು ಯೂ ಟರ್ನ್ ತೆಗೆದುಕೊಂಡರು ಎಂಬುದನ್ನು ನಾವು ಜನರಿಗೆ ವಿವರಿಸುವ ಕೆಲಸ ಮಾಡಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಇಲ್ಲಿಗೆ ಬಂದು ನಮ್ಮ ಸರ್ಕಾರವನ್ನು ಪರ್ಸಂಟೇಜ್ ಸರ್ಕಾರ ಎಂದು ಟೀಕಿಸಿದರು. ಆದರೆ ಲೋಕಪಾಲ ಮಸೂದೆ ಕುರಿತು ಈ ವರೆಗೆ ಚಕಾರ ಎತ್ತಿಲ್ಲ. ಒಟ್ಟಾರೆ ಬಿಜೆಪಿ ಸಮಾಜಕ್ಕೆ ಶಾಪ. ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿಯಾಗಬೇಕು ಎಂದರು.

ಕರ್ನಾಟಕದ ಕಣ್ತಪ್ಪಿದ ನಿಗೂಢಗಳು ಕೃತಿ ಬಿಡುಗಡೆ!

ಬೆಂಗಳೂರು: ಬೆಂಗಳೂರಿನ ಮೂಲ‌ ಹೆಸರು ಎಂದರೆ ತಕ್ಷಣೆ ನೆನಪಾಗುವುದು ಬೆಂದಕಾಳೂರು. ಬೆಂದಕಾಳೂರೇ ಮುಂದೆ ಬೆಂಗಳೂರು ಆಯಿತು ಎನ್ನುವುದು ಈಗಿರುವ ಇತಿಹಾಸ. ಆದರೆ 8 ನೇ ಶತಮಾನದಲ್ಲೇ ಬೆಂಗಳೂರು ಎನ್ನುವ ಹೆಸರು ಇತ್ತು ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಹೆಮ್ಮರ ಪ್ರಕಾಶನ ಹೊರತಂದಿರುವ ನಿಗೂಢ ಕರ್ನಾಟಕ ಕೃತಿಯನ್ನು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಲಾಯಿತು. ಪತ್ರಕರ್ತ ಎಸ್.ಶ್ಯಾಮ್ ಪ್ರಸಾದ್ ಬರೆದಿರುವ ಆಂಗ್ಲ ಕೃತಿ ಹಾಗು ಡಾ.ಎಸ್.ಚಂದ್ರಮೋಹನ್ ಅನುವಾದಿಸಿರುವ ಕನ್ನಡ ಅವತರಣಿಕೆಯನ್ನು ಸಾಹಿತಿ ಸಿದ್ದಲಿಂಗಯ್ಯ ಬಿಡಿಗಡೆಗೊಳಿಸಿದರು.

ನಂತರ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಸಿದ್ದಲಿಂಗಯ್ಯ ಮಾತನಾಡಿ, ಸಂಶೋಧಕ,ಲೇಖಕನಾಗಿ ಸಮಾಜದ ಚರಿತ್ರಯ ಬಗ್ಗೆ ಅದಮ್ಯ‌ ಕುತೂಹಲ ಉಳಿಸಿಕೊಂಡು ಪ್ರಜ್ಞೆಯಿಂದ ಕೃತಿ ಬರೆದಿದ್ದಾರೆ.
ಅನೇಕ‌ ಸಿದ್ದ ನಂಬಿಕೆಗಳನ್ನು ಬುಡಮೇಲು ಮಾಡಿದ್ದಾರೆ. ಅದಕ್ಕೆ ಆಧಾರಗಳನ್ನೂ ನೀಡಿದ್ದಾರೆ. ಪ್ರಚಾರಕ್ಕೆ ಇಲ್ಲವೇ ಜನರಲ್ಲಿ‌ ಆಶ್ಚರ್ಯ ಹುಟ್ಟಿಸಲು ಈ ಕೃತಿ ಬರೆದಿಲ್ಲ. ಕೋಪದ ಕಾರಣದಿಂದ ಶುರುವಾದ ಬರವಣಿಗೆ ಕರ್ನಾಟಕಕ್ಕ‌ ಮೌಲ್ಯವಾದ ಮಾಹಿತಿ ನೀಡಿದೆ. ಇದರಲ್ಲಿನ ಅಂಶಗಳು ಕೆಲವರಿಗೆ ಆತಂಕ ತರಬಹುದು, ಆಶ್ಚರ್ಯ ಆಗಬಹುದು, ಅಭಿಪ್ರಾಯ ಬೇಧವೂ ಆಗಬಹುದು, ಆದರೆ ಎಲ್ಲರಿಗೂ ಹೊಸ ವಿಷಯ ತಿಳಿಸಿದಂತಾಗಲಿದೆ. ವಿಶೇಷ ಮಾಹಿತಿ ಉಳ್ಳ ಕೃತಿ ಇದಾಗಿದೆ ಎಂದರು.

ಕನ್ನಡ ಅನುವಾದವನ್ನು ಚಂದ್ರ ಮೋಹನ್ ಮಾಡಿದ್ದಾರೆ. ಚೆನ್ನಾಗಿ ಅನುವಾದ ಮಾಡಿದ್ದಾರೆ, ಕನ್ನಡದ್ದೇ ಕೃತಿ ಎನ್ನುವ ರೀತಿ ಉತ್ತಮ ಶಬ್ದ ಪ್ರಯೋಗ ಮಾಡಿ ಅನುವಾದಿಸಿದ್ದಾರೆ. ಅವರು ಅನುವಾದಕರಾಗಿ ಮುಂದುವರೆಯಬೇಕು ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ಬಿ.ಸುರೇಶ್ ಮಾತನಾಡಿ, ಚರಿತ್ರೆಯಲ್ಲಿ ನಾವು ಕೇಳಿರುವ ಬಹುತೇಕ ಭಾಗಗಳು ಪ್ರಕ್ಷಿಪ್ರವಾಗಿರಲಿವೆ. ಈ ಕೃತಿಯಲ್ಲಿರುವ ಏಳು ಲೇಖನವನ್ನು ಪ್ರಬಂಧದ ರೂಪದಲ್ಲಿ ಬರೆಯಲು‌ ಮುನ್ನುಡಿಯಂತಿದೆ ಎಂದರು. ಅನುವಾದಗಳಿಂದ‌ ಕನ್ನಡದ ಸಾಹಿತ್ಯ ಮತ್ತೊಂದು ಮಜಲಿಗೆ ಹೋಗಲಿದೆ. ಅನುವಾದಗಳ ಮೂಲಕ ಮತ್ತೊಂದು‌ ಜಗತ್ತು ತೆರೆದಿಡಲಿದೆ. ಆದರೆ ಅನುವಾದದ ಪ್ರಕ್ರಿಯೆ ಬಹಳ ಎಚ್ಚರಿಕೆಯಿಂದ ಆಗಬೇಕು ಎಂದರು.

ಕರ್ನಾಟಕದ‌ ಕೆಲವ ನಿಗೂಢತೆಗಳ ಪ್ರಸ್ತಾಪ ಕೃತಿಯಲ್ಲಿವೆ. ಹೊಯ್ಸಳ ಲಾಂಛನದಲ್ಲಿ ಸಿಂಹ ಇದೆ.ಆದರೆ ಸಿಂಹ ಭಾರತದ್ದಲ್ಲ ಇನ್ನು ಸಿಂಹ ಲಾಂಛನವಾಗಿದ್ದು‌ ಹೇಗೆ, ಇದು ಬಂದಿದ್ದು‌ ಹೇಗೆ ಎನ್ನುವ ಮಾಹಿತಿ ವಿವರಿಸಲಾಗಿದೆ.

ಬೆಂಗಳೂರು ಹೆಸರು ಬೆಂದಕಾಳೂರಿನಿಂದ ಬಂದಿಲ್ಲ‌ ಎಂಟನೇ ಶತಮಾನದಲ್ಲೇ ಇತ್ತು‌ ಎಂದು‌ ಬೇಗೂರಿನಲ್ಲಿ ಸಿಕ್ಕ‌ ಶಾಸನದಲ್ಲಿ ಮಾಹಿತಿ ಇದೆ ಇಂತಹ ಹಲವು ಅಪರೂಪದ ಮಾಹಿತಿಗಳು ಇವೆ ಎಂದರು.

ಲೇಖಕ‌ ಹಾಗು ಪತ್ರಕರ್ತ ಶ್ಯಾಂಪ್ರಸಾದ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಬಹಳ ಅಪರೂಪದ ಕಟ್ಟಡವೊಂದು ಪತ್ತೆಯಾಗಿದೆ ಅದರಲ್ಲಿ ಕನ್ನಡದ ಕೆತ್ತನೆಯೂ‌ ಇದೆ,ಇದು ಮನವ ನಿರ್ಮಾಣ ಕಟ್ಟಡ ಅಲ್ಲ. ಏಲಿಯನ್ಸ್ ಮಾಡಿವೆ ಎನ್ನುವ ಮೆಸೇಜ್ ಹರಿದಾಡಿದವು. ಕನ್ನಡಿಗರೇ ಕಟ್ಟಿದ ಕೈಲಾಸನಾಥ ದೇವಸ್ಥಾನವನ್ನು ಏಲಿಯನ್ಸ್ ಕಟ್ಟಿದ್ದು ಅಂತಾ ಕನ್ನಡಿಗರೇ ಹೇಳಿದ್ದು ಕೋಪ ತರಿಸಿತು. ಪದೇ ಪದೇ ಸ್ನೇಹಿತರ ವಾಟ್ಸ್ ಆಪ್ ನಿಂದ ಬಂದ ಈ ಮೆಸೇಜ್ ನಿಂದ ಎನಿಗ್ಮಾಸ್ ಬರೆಯಲು ಹೊರಟೆ. ಇಲ್ಲಿರುವ ಲೇಖನಗಳು ಯಾವುದೇ ಪಠ್ಯದಲ್ಲಿ ಸಿಗದ‌ ಮಾಹಿತಿಯಾಗಿವೆ. ಹೊಯ್ಸಳರ ರಾಜ ಸಳ ಕೊಂದಿದ್ದು ಹುಲಿ, ಆದರೆ ಲಾಂಛನದಲ್ಲಿ ಸಿಂಹ ಇದೆ,
ಗೊಮ್ಮಟೇಶ್ವರನ ಒಂದು ಬೆರಳು ಚಿಕ್ಕದಾಗಿದೆ, 24 ವರ್ಷದ ಹಿಂದೆಯೇ ಈ ಪ್ರಶ್ನೆ ಕಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಇಂತಹ ಹಲವು ಮಾಹಿತಿ ಕೃತಿಯಲ್ಲಿವೆ ಎಂದರು.