ವಿಶ್ವಾಸಮತ ಗೆದ್ದ ಮೋದಿ ಸರಕಾರ: ಕಾಂಗ್ರೆಸ್ ಗೆ ಭಾರೀ ಮುಖಭಂಗ

ಫೋಟೋ ಕೃಪೆ:ಲೋಕಸಭಾ ಟಿವಿ(ಟ್ವಿಟ್ಟರ್)

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರ ವಿಶ್ವಾಸಮತ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರ ಸಂಬಂಧ ಟಿಡಿಪಿ ಪಕ್ಷದ ಅವಿಶ್ವಾಸ ನಿರ್ಣಯದ ನಿಲುವನ್ನು ಬಲಿಸಿ ವಿರೋಧಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು‌ ಸಾಧಿಸಿತು.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಸುಧೀರ್ಘ ಚರ್ಚೆ ನಂತರ ಗೊತ್ತುವಳಿಯನ್ನು ಮತಕ್ಕೆ ಹಾಕಲಾಯಿತು.ಸದನದಲ್ಲಿ‌ ಹಾಜರಿದ್ದ 451 ಸದಸ್ಯರು ಮತ ಚಲಾವಣೆ ಮಾಡಿದರು. ಎನ್‌ಡಿಎ 325 ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಪರವಾಗಿ ಕೇವಲ126 ಮತ ಚಲಾವಣೆಯಾಗಿದವು. ಬಹುಮತ ಸಾಬೀತಿಗೆ 226 ಮಾತ್ರ ಬೇಕಾಗಿತ್ತು. ಆದರೆ ನಿರೀಕ್ಷೆಗೂ ಹೆಚ್ಚಿನ ಮತಗಳು ಮೋದಿ ಸರಕಾರದ ಪರ ಬಿದ್ದವು.ಹೀಗಾಗಿ ಮೋದಿ ಸರಕಾರ 199 ಮತಗಳ ಅಂತರದಿಂದ ಗೆಲುವು ಪಡೆಯಿತು.

ಕೇಸಿನೇನಿ ಶ್ರೀನಿವಾಸರೆಡ್ಡಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ದೊಡ್ಡ ಅಂತರದ ಸೋಲಾಗಿದ್ದು ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾಂಗ್ರೆಸ್ ಭಾರೀ ಮುಖಭಂಗವನ್ನು ಅನುಭವಿಸಿತು.

ಸಂತು@ ಕ್ಯಾಂಡಲ್ ಸಂತು ಕೊಲೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: 2009 ರಲ್ಲಿ ನಡೆದಿದ್ದ ಸಂತು ಅಲಿಯಾಸ್,ಕ್ಯಾಂಡಲ್ ಸಂತು ಅಲಿಯಾಸ್ ಸಂತೋಷ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ‌ನ್ನು ದೋಷಿಗಳು ಎಂದು ಪರಿಗಣಿಸಿದ‌ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಇಕ್ಬಾಲ್ ಕಾವೂರು ಹಾಗೂ ಫಾರೂಕ್ ಕಾರ್ಕಳಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ಕೊಲೆ ಪ್ರಕರಣ ಕುರಿತು ಸುಧೀರ್ಘ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಇಬ್ಬರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದ್ದು ಅವರನ್ನು ಅಪರಾಧಿಗಳು ಎಂದು ಪ್ರಕಟಿಸಿ ಜೀವಾವಧಿ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿ ನ್ಯಾಯಾಲಯ ಆದೇಶಿಸಿದೆ.

2009 ರ ಫೆಬ್ರವರಿ18 ರಂದು ಬೆಳಿಗ್ಗೆ 9.30 ಗಂಟೆಯ ಸಮಯದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿದ್ದ ಸಂತು ಅಲಿಯಾಸ್ ಸಂತೋಷ್ ಎಂಬುವವನಿಗೆ ನೀಲಿ ಬಣ್ಣದ ಕಾರಿನಲ್ಲಿ ಬಂದ ಅಪರಿಚಿತರ ಗುಂಪೊಂದು ಸಂತೋಷನ ತಲೆ ಹೊಟ್ಟೆ ಭಾಗಕ್ಕೆ ಕತ್ತಿಯಿಂದ ಕಡಿದು ತೀವ್ರವಾಗಿ ಗಾಯಗೊಳಿಸಿದ ಕಾರಣ ಮರಣ ಹೊಂದಿದ್ದನು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 19/09 ಕಲಂ 143,147,148 302 r/w 149 IPC ರಂತೆ ಪ್ರಕರಣವೂ ದಾಖಲಾಗಿದ್ದು ತನಿಖೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು 22 ಜನ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದ ತನಿಖೆಯನ್ನು ನಡೆಸಿದ ಆಗಿನ ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕ ಬಿ.ಆರ್. ರವಿಕಾಂತೇಗೌಡ ಪ್ರಶಂಶಿಸಿದ್ದು ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

ಜನರು ಶಾಶ್ವತವಾಗಿ ನೆಮ್ಮದಿಯಿಂದ ಬದುಕಲು ಯೋಜನೆಗಳ ಜಾರಿ: ಸಿಎಂ

ಮಂಡ್ಯ:ರಾಜ್ಯದ ಜನರು ಶಾಶ್ವತವಾಗಿ ನೆಮ್ಮದಿಯಿಂದ ಬದುಕಲು ಸರ್ಕಾರ ಹಲವಾರು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲ್ಲಿದೆ ಎಂದು ಮುಖ್ಯ ಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಅವರು ಇಂದು ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಮಂಡ್ಯ ರೈತರು ಭತ್ತವನ್ನು ಬೆಳೆಯಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಮಂಡ್ಯ ರೈತರಿಗೆ ಭತ್ತ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದ ಅವರು ರೈತರ ಸಾಲ ಮನ್ನಾ ಮಾಡಲಾಗಿದ್ದು, ರೈತರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯಾವುದೇ ಕಾರಣಕ್ಕೂ ರೈತರೂ ಆತ್ಮಹತ್ಮೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೃಷ್ಣರಾಜಸಾಗರದ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸೌಭಾಗ್ಯ ನನ್ನದಾಗಿದ್ದು, ಈ ಕಾರ್ಯ ಅತ್ಯಂತ ಪವಿತ್ರವಾದದ್ದು ಆಗಿದೆ. ರಾಜ್ಯ ಜನತೆಗೆ ಆಶಯದಂತೆ ನಮ್ಮ ಸರ್ಕಾರದ ಸಚಿವರು ಆಡಳಿತ ನಡೆಸುವರು. ಈ ನಿಟ್ಟಿನಲ್ಲಿ ನಾವು ಕುಟುಂಬದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ನಮ್ಮ ಮಂತ್ರವಾಗಿದ್ದು, ಕೊಡಗಿನಲ್ಲಿ ಮಳೆಯಿಂದ ಆದ ಅನಾಹುತಗಳನ್ನು ಸರಿಪಡಿಸಲು ಮೊದಲು ಹಂತದಲ್ಲಿ 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ರಾಜ್ಯದ ಯಾವುದೇ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡದೇ ಮಾದರಿ ರಾಜ್ಯ ಮಾಡುವ ಗುರಿ ನಮ್ಮ ಸರ್ಕಾರದ್ದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕೊಡಗಿನ ತಲಕಾವೇರಿ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಾಡದೇವತೆ ಚಾಮುಂಡೇಶ್ವರಿ ತಾಯಿಯಲ್ಲಿ ಪೂಜೆ ಹಾಗೂ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ ಸರ್ಕಾರ ಹಾಗೂ ರಾಜ್ಯದ ಜನತೆಯ ಏಳಿಗೆಗಾಗಿ ಪೂಜೆ ನೆರೆವೇರಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀರಂಗಪಟ್ಟಣದ ಶಾಸಕರಾದ ರವೀಂದ್ರ ಶ್ರೀಕಂಠಯ್ಯರವರು ಕೃಷ್ಣರಾಜಸಾಗರದ ಜಲಾಶಯವನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಬಜೆಟ್‍ನಲ್ಲಿ ಘೋಷಿಸಲಾಗಿದ್ದು, ಈಗಾಗಲೇ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಾಶಯವು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಯಾಗುವುದರಿಂದ ಉದ್ಯೋಗ ಸೃಷ್ಠಿಯ ಜೊತೆಗೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲ್ಲಿದೆ ಎಂದು ತಿಳಿಸಿದ ಅವರು ಕೃಷ್ಣರಾಜಸಾಗರ ಕಟ್ಟಿದ ಜನರು ಈ ಭಾಗದಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳು ಹಕ್ಕು ಪತ್ರದಿಂದ ವಂಚಿತರಾಗಿದ್ದು, ಸರ್ಕಾರವು ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಿದರು.

ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆ ಮೀರಿ ತಲಕಾವೇರಿಗೆ ಸಿಎಂ ಪೂಜೆ ಸಲ್ಲಿಕೆ

ಮಡಿಕೇರಿ: 19 ವರ್ಷಗಳ ಬಳಿಕ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ನಾಡಿನ ಜೀವನದಿ ಉಗಮಸ್ಥಾನಕ್ಕೆ ನಾಡಿನ‌ ದೊರೆ ಪೂಜೆ ಸಲ್ಲಿಸಲು ಎರಡು ದಶಕವೇ ಬೇಕಾಯಿತು.

ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎನ್ನುವ ನಂಬಿಕೆ ಹಿನ್ನಲೆಯಲ್ಲಿಯೂ
ಮುಖ್ಯಮಂತ್ರಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಜತೆಗೆ ಪೂಜೆ ಸಲ್ಲಿಸಿದರು. ಈ ಹಿಂದೆ ಜೆ.ಎಚ್. ಪಟೇಲರು ತಲಕಾವೇರಿಗೆ ಬಂದು ಹೋದ ನಂತರ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರು. ಅಂದಿನಿಂದ ಯಾವ ಮುಖ್ಯಮಂತ್ರಿಗಳು ತಲಕಾವೇರಿಗೆ ಆಗಮಿಸಿ ಪೂಜೆ ಮಾಡಿರಲಿಲ್ಲ.ಆದರೆ ಇಂದು‌ ಕುಮಾರಸ್ವಾಮಿ ಈ ಕಟ್ಟುಪಾಡು ಮುರಿದು ತಲಕಾವೇರಿಗೆ ಪೂಜೆ ಸಲ್ಲಿಸಿದರು.

ಈ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇಂಥ ಮೌಢ್ಯದ ಬಗ್ಗೆ ನನಗೆ ನಂಬಿಕೆ ಇಲ್ಲ. ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡುತ್ತಾನೆ. ನಾನು ಮೊದಲಿನಿಂದಲೂ ಯಾವುದೇ ಮೂಢನಂಬಿಕೆ ಆಚರಿಸಿಕೊಂಡು ಬಂದಿಲ್ಲ. ಇದು ಒಂದು ವಿಶ್ವಾಸ ಅಷ್ಟೇ. ಕಾಕತಾಳಿಯವನ್ನೇ ನಿಜವೆಂದು ಭಾವಿಸಬಾರದು. ದೇವರ ಅನುಗ್ರಹದಲ್ಲಿ ನಾವಿರಬೇಕು, ಮೂಢ ನಂಬಿಕೆಗಳು ನಾವು ಸೃಷ್ಟಿ ಮಾಡಿಕೊಂಡಿರುವುದು ಎಂದು ಸ್ಪಷ್ಟಪಡಿಸಿದರು.

ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ದಂಪತಿ!

ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಸಮೇತವಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ಇಂದು ಬಾಗಿನ ಅರ್ಪಿಸಿದರು.

ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ.ಮಹೇಶ್, ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವರಾದ ಡಿ‌.ಸಿ‌.ತಮ್ಮಣ್ಣ, ಶಾಸಕರಾದ ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಅಪ್ಪಾಜಿ ಗೌಡ, ಇತರೆ ಗಣ್ಯರು ಭಾಗವಹಿಸಿದರು ಸಿಎಂ ಕುಮಾರಸ್ವಾಮಿಗೆ ಸಾಥ್ ನೀಡಿದರು.

ಟಿಕೆಟ್ ಇಲ್ಲದೆ ಪ್ರಯಾಣಿಸಿದ 6033 ಪ್ರಯಾಣಿಕರಿಗೆ ದಂಡ

ಬೆಂಗಳೂರು: ಜೂನ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 40299 ವಾಹನಗಳನ್ನು ತನಿಖೆಗೊಳಪಡಿಸಿ 4576 ಪ್ರಕರಣಗಳನ್ನು ಪತ್ತೆಹಚ್ಚಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ,ಒಟ್ಟು 6033 ಟಿಕೇಟ್ ರಹಿತ ಪ್ರಯಾಣಿಕರಿಂದ 10,94,625 ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದ್ದು, ನಿಗಮದ ಆದಾಯದಲ್ಲಿ ಸೋರುತ್ತಿದ್ದ 92,272 ರೂ.ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ, ಹಾಗೂ ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಿದ್ದಾರೆ.

ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್/ಪಾಸ್ ಪಡೆದು ಪ್ರಯಾಣ ಮಾಡುವಂತೆ, ಸಂಸ್ಥೆಯು ಪ್ರಯಾಣಿಕರಲ್ಲಿ ಮನವಿ ಮಾಡಿದೆ.