ದೆಹಲಿ ಭೇಟಿ ಯಶಸ್ವಿ: ಸಿಎಂ ಕುಮಾರಸ್ವಾಮಿ

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಸಚಿವರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ಸುಮಾರು 2500 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಅನುದಾನವನ್ನು ಪಡೆದುಕೊಳ್ಳುವಲ್ಲಿ ಮತ್ತು ವಿವಿಧ ಯೋಜನೆಗಳಿಗೆ ಅನುಮತಿ ದೊರಕಿಸಿಕೊಳ್ಳುವಲ್ಲಿ ತಮ್ಮ ಎರಡು ದಿನಗಳ ದೆಹಲಿ ಭೇಟಿಯು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಣ್ಣಿಸಿದ್ದಾರೆ.

ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರೊಂದಿಗೆ ಚರ್ಚಿಸುವ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಈ ವೇಳೆಯಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರೀಕರ ಸರಬರಾಜು ಸಚಿವರು, ಭೂ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರು, ಕೃಷಿ ಸಚಿವರು, ರೈಲ್ವೆ ಮತ್ತು ಕಲ್ಲಿದ್ದಲು ಸಚಿವರು ಸೇರಿದಂತೆ ರಕ್ಷಣಾ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸಿದ್ದರು.

ತಮ್ಮ ಭೇಟಿಯ ವೇಳೆ ರಾಜ್ಯದ ಕೋರಿಕೆಗಳಿಗೆ ಎಲ್ಲಾ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಂತೋಷ ತಂದಿದೆ. ಹಾಗೆಯೇ, ಸಚಿವರೊಂದಿಗೆ ನಡೆಸಿದ ಮಾತುಕತೆಯೂ ಫಲಪ್ರದವಾಗಿತ್ತು. ಇದಕ್ಕಾಗಿ ಸಹಕಾರ ನೀಡಿದ ಎಲ್ಲಾ ಸಚಿವರನ್ನು ರಾಜ್ಯದ ಪರವಾಗಿ ಅಭಿನಂದಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ರಾಮ್ ವಿಲಾಸ್ ಪಾಸ್ವಾನ್ ಅವರೊಂದಿಗೆ ಚರ್ಚಿಸಿದ ವೇಳೆ 2014 ರಿಂದ ಇಂದಿನವರೆಗೆ ರಾಜ್ಯಕ್ಕೆ ಬಿಡುಗಡೆಯಾಗಬೇಕಿದ್ದ ಬೆಂಬಲ ಬೆಲೆಯ ಬಾಕಿ ಮೊತ್ತ 954 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ 85 ಲಕ್ಷ ಲೀಟರ್‌ಗಳಷ್ಟು ಹಾಲು ಉತ್ಪಾದನೆಯಾಗುತ್ತಿದ್ದು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿರುವ ಜಿಲ್ಲಾ ಹಾಲು ಉತ್ಪಾದಕರ ಸಂಘಗಳಲ್ಲಿ ಮೆಗಾ ಡೈರಿಗಳನ್ನು ಸ್ಥಾಪಿಸಬೇಕೆನ್ನುವ ರಾಜ್ಯದ ಉದ್ದೇಶವನ್ನು ಮೆಚ್ಚಿಕೊಂಡ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಅವರು ಇದಕ್ಕಾಗಿ 900 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಸಮ್ಮತಿ ಸೂಚಿಸಿದ್ದಾರೆ. ಈ ಅನುದಾನದಲ್ಲಿ ಹಾಸನ, ಕೋಲಾರ ಮತ್ತು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೆಗಾ ಡೈರಿಗಳನ್ನು ಸ್ಥಾಪಿಸಲಾಗುವುದು ಎಂದು ಕುಮಾರಸ್ವಾಮಿಯವರು ತಿಳಿಸಿದರು.

ರಾಜ್ಯದಲ್ಲಿ ಮಾರುಕಟ್ಟೆಗಳನ್ನು ಉನ್ನತೀಕರಿಸಲು ಅಗತ್ಯವಿರುವ ಅನುದಾನ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಆವರ್ತ ನಿಧಿ, ಬೆಂಬಲ ಬೆಲೆ ಹಾಗೂ ಅಡಿಕೆ ಮತ್ತು ತೆಂಗು ಬೆಳೆಗಾರರ ರಕ್ಷಣೆಗಾಗಿ ಅಗತ್ಯವಿರುವ ಕ್ರಮಗಳಿಗೆ ಅನುದಾನವನ್ನು ಒದಗಿಸುವ ಬಗ್ಗೆ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿಎಂ ಹೇಳಿದರು.

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂಥೆ ರಾಜ್ಯದಲ್ಲಿರುವ ಪ್ರಮುಖ ಹೆದ್ದಾರಿಗಳ ನಿರ್ಮಾಣಕ್ಕೆ ಇರುವ ಅಡಚಣೆಗಳನ್ನು ಸರ್ಕಾರವು ನಿವಾರಿಸಿದ್ದು, ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರವು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿಕೊಡುವಂತೆ ಕೇಂದ್ರ ಭೂಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಮಾಡಿರುವ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ, ನದಿ ನೀರು ಹಂಚಿಕೆ ಪ್ರಾಧಿಕಾರ ಮತ್ತು ಮೇಕೆದಾಟು ವಿಷಯಗಳ ಬಗ್ಗೆಯೂ ಸಚಿವರೊಂದಿಗೆ ಚರ್ಚಿಸಿರುವುದಾಗಿ ಮುಖ್ಯಮಂತ್ರಿಗಳ ತಿಳಿಸಿದರು.

ಸಹಜ ಕೃಷಿ ಉತ್ತೇಜನಕ್ಕೆ 1000 ಕೋಟಿ ರೂ.ಗಳ ವಿಶೇಷ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ!

ನವದೆಹಲಿ: ರಾಜ್ಯದಲ್ಲಿರುವ ಸುಮಾರು 70 ಲಕ್ಷ ಹೆಕ್ಟೇರ್ ಒಣ ಭೂಮಿಯಲ್ಲಿ ಕೃಷಿ ಕೈಗೊಂಡಿರುವ, 60 ಲಕ್ಷ ರೈತರ ಜೀವನ ಮಟ್ಟವನ್ನು ಸುಧಾರಿಸಲು ಈ ಭೂಮಿಯಲ್ಲಿ ಕೈಗೊಳ್ಳುವ ಸಹಜ ಕೃಷಿಯ ಉತ್ತೇಜನಕ್ಕಾಗಿ 1000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ರನ್ನು ಮನವಿ ಮಾಡಿದರು.

ಮುಂಬರುವ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರೊಂದಿಗೆ ಮಾಹಿತಿ ಹಂಚಿಕೊಳ್ಳಲು ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿಗಳು ಇಂದು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ರಾಜಸ್ಥಾನದ ನಂತರ ರಾಜ್ಯದಲ್ಲಿ ಅತೀ ಹೆಚ್ಚು ಪ್ರದೇಶದಲ್ಲಿ ಒಣಭೂಮಿ ಕೃಷಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಜ ಕೃಷಿಯನ್ನು ಸರ್ಕಾರವು ಉತ್ತೇಜಿಸುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸರ್ಕಾರ ಸಹಜ ಕೃಷಿಗೆ ಶೇ. 90ರಷ್ಟು ಪ್ರೋತ್ಸಾಹಧನ ನೀಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ಅಗತ್ಯವಿರುವ 1000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಕೇಂದ್ರ ಸರ್ಕಾರ ಕೂಡ ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ. ಸಹಜ ಕೃಷಿಯನ್ನು ಸಹ ಬೆಂಬಲಿಸುತ್ತಿದೆ. ಹೀಗಾಗಿ, ಅಗತ್ಯವಿರುವ ಅನುದಾನವನ್ನು ಒದಗಿಸುವ ಬಗ್ಗೆ ಚಿಂತಿಸಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಕಳೆದ 8 ವರ್ಷಗಳಲ್ಲಿ ಸತತವಾಗಿ 6 ವರ್ಷಗಳಿಂದ ಬರಗಾಲವಿದ್ದು, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ತಮ್ಮ ನೇತೃತ್ವದ ಸರ್ಕಾರ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿದೆ. ಅಲ್ಲದೆ, ದೇಶದಲ್ಲಿ ವಿವಿಧ ರಾಜ್ಯಗಳ 24 ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಘೋಷಿಸಲಾಗಿದೆ. ಈ ಪೈಕಿ 16 ಜಿಲ್ಲೆಗಳು ಕರ್ನಾಟಕದಲ್ಲಿವೆ. ಇದಕ್ಕಾಗಿ ರಾಜ್ಯದ ರೈತರ ಹಿತವನ್ನು ಕಾಪಾಡಲು ಅನುವಾಗುವಂತೆ ತಮಗೆ ಸಹಕಾರ ನೀಡುವಂತೆ ಕೃಷಿ ಸಚಿವರಲ್ಲಿ ಮುಖ್ಯ ಮನವಿ ಮಾಡಿದರು.

ರಾಜ್ಯದ ವಿವಿಧ ಬ್ಯಾಂಕುಗಳಿಂದ ಸುಮಾರು 48 ಲಕ್ಷ ರೈತರು ಒಟ್ಟಾರೆಯಾಗಿ 53 ಸಾವಿರ ಕೋಟಿ ಸಾಲವನ್ನು ಪಡೆದುಕೊಂಡಿದ್ದಾರೆ. ಈ ಪೈಕಿ ಶೇ.48ರಷ್ಟು ಅಂದರೆ 23 ಲಕ್ಷದಷ್ಟು ರೈತರು ಸಹಕಾರಿ ಬ್ಯಾಂಕುಗಳಿಂದ 12000 ಕೋಟಿ ರೂ.ಗಳ ಸಾಲವನ್ನು ಪಡೆದುಕೊಂಡಿದ್ದಾರೆ. ಒಟ್ಟು ಸಾಲದ ಪ್ರಮಾಣದ ಪೈಕಿ ಇದು ಶೇ 20.75 ರಷ್ಟಾಗುತ್ತದೆ. ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿರುವ ಸಂಪನ್ಮೂಲದ ಕೊರತೆಯಿಂದ ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಬಾರ್ಡ್ ಬ್ಯಾಂಕುಗಳು ನೀಡುವ ಆರ್ಥಿಕ ಸಹಾಯದ ಪ್ರಮಾಣವನ್ನು ಶೇ. 40 ರಿಂದ 75ಕ್ಕೆ ಏರಿಕೆ ಮಾಡಬೇಕು. ಇದರಿಂದ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರಿಗೆ ಅಗತ್ಯವಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ನೀಡಲು ಸಹಾಯಕವಾಗುತ್ತದೆ ಎಂದು ಮುಖ್ಯ ಮಂತ್ರಿಯವರು ಮಾಡಿದ ಮನವಿಗೆ ತಕ್ಷಣವೇ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಅವರು ಈ ಪ್ರಮಾಣದನ್ನು ಶೇ. 60ಕ್ಕೆ ಏರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳೊಂದಿಗೆ ಲೋಕೋಪಯೋಗಿ ಸಚಿವರಾದ ಹೆಚ್. ಡಿ. ರೇವಣ್ಣ, ಕೃಷಿ ಸಚಿವರಾದ ಶಿವಶಂಕರ ರೆಡ್ಡಿ, ಸಹಕಾರ ಸಚಿವರಾದ ಬಂಡೆಪ್ಪ ಕಾಶೇಂಪೂರ ಅವರುಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಕಿರುತೆರೆ ನಟಿ ಪ್ರಿಯಾಂಕ ಆತ್ಮಹತ್ಯೆ!

ಚೆನ್ನೈ: ತಮಿಳು ಕಿರುತೆರೆ ನಟಿ ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣದ ತನಿಖೆ ಸಂಬಂಧ ಪೊಲೀಸರು ಆಕೆಯ ಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ರಾತ್ರಿಯೇ ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದು ಬಾಗಿಲು ತಟ್ಟಿದಾಗ ಒಳಗಿಂದ ಯಾವುದೇ ಉತ್ತರ ಬಂದಿಲ್ಲ. ಆಗ ಆಕೆ  ಕಿಟಕಿಯ ಮೂಲಕ ಇಣುಕಿ ನೋಡಿದಾಗ ನಟಿ ಪ್ರಿಯಾಂಕಾ ಅವರ ದೇಹ ನೇಣಿನಲ್ಲಿ ನೇತಾಡುತ್ತಿದ್ದುದು ಕಂಡುಬಂದಿದೆ. ತಕ್ಷಣವೇ ಆಕೆ ವಿಷಯವನ್ನು ಅಕ್ಕಪಕ್ಕದವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಿಯಾಂಕಾ ಅವರು ಆತ್ಮಹತ್ಯೆಗೆ ಶರಣಾದಾಗ ಆಕೆಯ ಪತಿ ಮನೆಯಲ್ಲಿ ಇರಲಿಲ್ಲ. ಪ್ರಿಯಾಂಕಾ ಅವರ ತಂದೆ ತಾಯಿ ಇರುವುದು ಮಧುರೆಯಲ್ಲಿ. ಅವರಿಗೆ ವಿಷಯ ತಿಳಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯ ವಿಭಜನೆ ಮಾತನ್ನು ಬಿಜೆಪಿ ಒಪ್ಪಲ್ಲ: ಬಿಎಸ್ವೈ

ಶಿವಮೊಗ್ಗ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರ ಹೇಳಿಕೆ ಸರಿಯಲ್ಲ.ರಾಜ್ಯ ವಿಭಜನೆ ಮಾತನ್ನು ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ತವರ ಜಿಲ್ಲೆಗೆ ಭೇಟಿ ನೀಡಿದ ವೇಳೆ ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಬಿಎಸ್ವೈ, ಯಾರೂ ಕೂಡ ರಾಜ್ಯ ವಿಭಜನಯೆ ಮಾತನಾಡಬಾರದು, ರಾಜ್ಯ ವಿಭಜನೆಯ ಕೂಗಿಗೆ ನಮ್ಮ ಬೆಂಬಲವಿಲ್ಲ.ಏಕೀಕೃತ ಕರ್ನಾಟಕದ ಪರವೇ ಬಿಜೆಪಿ ಇರಲಿದೆ ಎಂದ್ರು.

ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಅಂತಾ ಪ್ರತ್ಯೇಕ ರಾಜ್ಯಾದ ಬೇಡಿಕೆ ಇಡುವುದು ಸಲ್ಲದು,ಅಭಿವೃದ್ಧಿಗಾಗಿ ಹೋರಾಟ ಮಾಡಬೇಕೇ ಹೊರತು ರಾಜ್ಯ ವಿಭಜನೆಯ ಮಾತನಾಡುವುದು ಸರಿಯಲ್ಲ ಎಂದ್ರು.

ಲೋಕಸಭಾ ಚುನಾವಣೆ ಎದುರಿಸಲು ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ.ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ 28 ರಂದು ಬೆಂಗಳೂರಿಗೆ ಬರುತ್ತಿದ್ದು, ಪಕ್ಷ ಸಂಘಟನೆ,ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಲಾಗುತ್ತೆ ಅಂದ್ರು ಯಡಿಯೂರಪ್ಪ.

ಜುಲೈ27 ರಂದು ಗ್ರಹಣವಿದೆ.ಈ ಗ್ರಹಣ ಬಹಳ ಕೆಟ್ಟ ಗ್ರಹಣ ಎಂದು ಹೇಳಲಾಗುತ್ತಿದೆ.ದೇವರನ್ನು ಪ್ರಾರ್ಥಿಸುವುದು ಬಿಟ್ಟು ಬೇರೆ ದಾರಿ ಇಲ್ಲ.ಗ್ರಹಣದ ವೇಳೆಯಲ್ಲಿ ಯಾವುದೇ ಶುಭ ಕಾರ್ಯ ಆರಂಭಿಸಬೇಡಿ ಎಂದು ಪಕ್ಷದ ಮುಖಂಡರಿಗೆ ಸಲಹೆ ನೀಡಿದ‌ ಯಡಿಯೂರಪ್ಪ,ಜನರೂ ಕೂಡ ಗ್ರಹಣ ಕಾಲದಲ್ಲಿ‌ ಸ್ವಲ್ಪ ಎಚ್ಚರ ವಹಿಸಬೇಕು ಯಾವುದೇ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ರು. ತಾವೂ ಕೂಡ ಗ್ರಹಣದ ಬಳಿಕವೇ ರಾಜ್ಯ ಪ್ರವಾಸ ಆರಂಭಿಸುವುದಾಗಿ ಹೇಳಿದ್ರು.

ದುಬಾರಿ ಐಫೋನ್ ಉಡುಗೊರೆಯನ್ನು ಬಿಜೆಪಿ ತಿರಸ್ಕರಿಸಿದೆ.ನಮ್ಮ ಯಾವ ಸಂಸದರೂ ಗಿಫ್ಟ್ ಸ್ವೀಕರಿಸಲ್ಲ,ಕಿಟ್ ಪಡೆದವರು ಕೂಡ ಹಿಂದಿರುಗಿಸಿದ್ದಾರೆ ಎಂದ್ರು.

ದುರಂತ ನಾಯಕನಾದರೆ ರೈತರ 40 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವೇ:ಜೈಟ್ಲಿಗೆ ಸಿಎಂ ತಿರುಗೇಟು

ನವದಹಲಿ: ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ನನಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ.ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ಹಿಂದೆ ನಿಂತು ನನಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ನಾನು ಕಣ್ಣೀರು ಸುರಿಸಿರುವುದಕ್ಕೂ ಕಾಂಗ್ರೆಸ್ ಪಕ್ಚಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಬಳಿಕ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಎಂ,ನಾನು ನನ್ನ ಕುಟುಂಬ ಅಂದರೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಭಾವನಾತ್ಮಕ ಜೀವಿಯಾದ ನಾನು ಭಾವನೆಗಳನ್ನು ಅದುಮಿಡಲು ಸಾಧ್ಯವಾಗದೆ ಕಣ್ಣೀರು ಸುರಿಸಿದೆ.ಇದಕ್ಕೆ ಮುಖ್ಯ ಕಾರಣ ರಾಜ್ಯದ ಮಾಧ್ಯಮಗಳು. ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ದಿನನಿತ್ಯ ಎಂಬಂತೆ ಮಾಧ್ಯಮಗಳು ನನ್ನ ಟೀಕೆ ಮಾಡುತ್ತಿವೆ.ನಾನು ರೈತರ ಸಾಲ ಮನ್ನಾ ವಿಚಾರದಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಕನಿಷ್ಠ ಮೆಚ್ಚುಗೆ ವ್ಯಕ್ತ ಪಡಿಸುತ್ತಿಲ್ಲ.ಸಮಾಜದ ಒಂದು ವರ್ಗ ನನ್ನನ್ನು ಟೀಕೆ ಮಾಡುತ್ತಿದೆ. ಇದು ನನಗೆ ಅರ್ಥವಾಗುತ್ತಿಲ್ಲ.
ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಿಕೊಂಡ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ.ಸಿದ್ದರಾಮಯ್ಯ ಹಿರಿಯ ಅನುಭವಿ ರಾಜಕಾರಣಿ ಅವರ ತಮ್ಮ ಅನುಭವದ ಮೇಲೆ ಕೆಲವು ಹಿತವಚನ ಹೇಳುತ್ತಾರೆ ಅದನ್ನು ಟೀಕೆ ಎಂದು ನಾನು ಭಾವಿಸುವುದಿಲ್ಲ.2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಸ್ಪರ್ಧಿಸಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದ್ರು.

ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿಯವರು ತನ್ನನ್ನು ದುರಂತ ನಾಯಕನೆಂದು ಟೀಕಿಸಿದ್ದಾರೆ, ತಾನು ದುರಂತ ನಾಯಕನಾಗಿದ್ದರೆ ರಾಜ್ಯದ ರೈತರ 40 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವಿತ್ತೇ.ಪ್ರಬಲ ನಾಯಕ ಪ್ರಧಾನಿ ನರೇಂದ್ರ ಮೋದಿಯವರು ಏಕೆ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರೈತರ ಸಾಲ ಮನ್ನಾ ಮಾಡಿರುತ್ತೇನೆ.ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ತನ್ನನ್ನು ನಾಯಕತ್ವ ವಹಿಸಲು ಶರತ್ತು ರಹಿತ ಬೆಂಬಲ ನೀಡಿದರು.ನನಗೆ ಆಡಳಿತ ನಡೆಸಲು ಮುಕ್ತ ಅಧಿಕಾರ ನೀಡಿದ್ದಾರೆ.ನನಗೆ ಕಾಂಗ್ರೆಸ್ ಪಕ್ಷದ ರಾಜ್ಯದ ಅಥವಾ ರಾಷ್ಟ್ರೀಯ ನಾಯಕತ್ವದಿಂದ ಯಾವುದೇ ಸಮಸ್ಯೆ ಇಲ್ಲ ಎಂದ್ರು.

ಇಂದಿನ ಸಭೆಯಲ್ಲಿ ಸರ್ಕಾರದಿಂದ ಸಂಸದರಿಗೆ ಯಾವುದೇ ಐ ಪೋನ್ ನೀಡಿರುವುದಿಲ್ಲ.ಐ ಪೋನ್ ತಾನು ವ್ಯಯಕ್ತಿವಾಗಿ ನೀಡಿರುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡೆದಿರುತ್ತಾರೆ.ತಾನು 2006ರಲ್ಲಿ ತಾನು ಬಿಜೆಪಿಯೊಂದಿಗೆ ಸಖ್ಯ ಬೆಳೆಸಿ ತನ್ನ ತಂದೆ ಮಾಜೀ ಪ್ರಧಾನಿ ದೇವೇಗೌಡರಿಗೆ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವುದನ್ನು ಈಗ ಸರಿ ಪಡಿಸಿ ಕೊಂಡಿರುತ್ತೇನೆ ಎಂದು ತಮ್ಮ ಕಣ್ಣೀರ ಹಿನ್ನಲೆಯನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ವಿವರಿಸಿದ್ರು.

ಬಾಲಿವುಡ್‌ ಹಿರಿಯ ನಟಿ ರೀಟಾ ಬಾಧುರಿ ವಿಧಿವಶ!

ಮುಂಬಯಿ: ಹಿಂದಿ ಚಿತ್ರರಂಗದ ಹಿರಿಯ ಪೋಷಕ ನಟಿ ರೀಟಾ ಭಾದುರಿ ಮೂತ್ರ ಪಿಂಡ ಸಮಸ್ಯೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ.

62 ವರ್ಷ ಪ್ರಾಯದ  ಹಿರಿಯ ನಟಿ ರೀಟಾ ಬಾಧುರಿ 70 ರಿಂದ 90 ರ ದಶಕದಲ್ಲಿ ಹಲವು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದರು. ಸಾವನ್‌ ಕೋ ಆನೆ ದೋ, ರಾಜಾ ಹಿಟ್‌ ಚಿತ್ರಗಳು. ರಾಜಾ ಚಿತ್ರದ ನಟನೆಗೆ ಫಿಲ್ಮ್ ಫೇರ್‌ ಪ್ರಶಸ್ತಿಗೂ ಭಾಜನರಾಗಿದ್ದರು.

70 ಕ್ಕೂ ಹೆಚ್ಚು ಚಿತ್ರಗಳು ಮತ್ತು ಕಿರುತೆರೆಯಲ್ಲೂ ಬಣ್ಣ ಹಚ್ಚಿದ್ದ ರೀಟಾ ಅವರು ಕೊನೆಯದಾಗಿ ಅಭಿನಯಿಸಿರುವ ನಿಮ್ಕಿ ಮುಖೀಯಾ ಧಾರಾವಾಹಿ ಸದ್ಯ ಪ್ರಸಾರವಾಗುತ್ತಿದೆ.