ಅನ್ಯ ಪಕ್ಷಗಳ ಲಿಂಗಾಯತ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ; ಡಿ.ಕೆ. ಶಿವಕುಮಾರ್

ಕಲಬುರ್ಗಿ:‘ಬೇರೆ, ಬೇರೆ ಪಕ್ಷಗಳ ಲಿಂಗಾಯತ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಂದೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ಹೇಳಿದರು.ಅನ್ಯ ಪಕ್ಷಗಳ ಬಹಳಷ್ಟು ಮಂದಿ ಲಿಂಗಾಯತ ಸಮುದಾಯದ ನಾಯಕರು, ಕಾರ್ಯಕರ್ತರು ನಮ್ಮ ಪಕ್ಷದತ್ತ ಮುಖ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಎಂ.ಬಿ ಪಾಟೀಲ್, ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ ಅವರು ಸೇರಿದಂತೆ ಸಮುದಾಯದ ಅನೇಕ ನಾಯಕರು ಇದ್ದಾರೆ.ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ಅವರ ಆಸ್ತಿ ಎಂದು ಭಾವಿಸಿದ್ದಾರೆ. ಆದರೆ ಅದು ಸತ್ಯ ಅಲ್ಲ. ನಮ್ಮಲ್ಲೂ ಲಿಂಗಾಯತ ಸಮುದಾಯದ ಶಾಸಕರು ಇದ್ದಾರೆ, ನಾಯಕತ್ವ ಗುಣ ಇರುವವರೂ ಇದ್ದಾರೆ. ಈ ಸಮುದಾಯದ ಅನೇಕ ನಾಯಕರು ನಮ್ಮ ಪಕ್ಷ ಸೇರಲು ಮುಂದೆ ಬಂದಿದ್ದಾರೆ. ಈಗಲೇ ಆ ಬಗ್ಗೆ ಹೆಚ್ಚಿನ ವಿವರ ನೀಡುವುದಿಲ್ಲ. ಅವರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದರು.

ಸಾಂಪ್ರದಾಯಿಕ ವೃತ್ತಿ ಅವಲಂಬಿತರ ಹಿತ ಕಾಯಲು ಸಂವಾದ:

ಈ ಭಾಗದಲ್ಲಿ ಮಳೆ ಆಗುತ್ತಿದ್ದು ರೈತರಲ್ಲಿ ಸಂತಸವಿದೆ. ಇಂದು ಮತ್ತು ನಾಳೆ ಬಿಜಾಪುರ, ಬಾಗಲಕೋಟೆಯಲ್ಲಿ ಬಂಜಾರ ಸಮಾಜದ ತಾಂಡಾಗಳಿಗೆ ಭೇಟಿ ನೀಡುತ್ತೇನೆ. ಇದರ ಜತೆಗೆ ನೇಕಾರರು ಹಾಗೂ ದಲಿತ ಸಮುದಾಯದ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳುತ್ತೇನೆ.ಕೋವಿಡ್ ಸಮಯದಲ್ಲಿ ಅವರಿಗೆ ಆಗಿರುವ ತೊಂದರೆಗಳೇನು, ಮುಂದೆ ನಾವೇನು ಮಾಡಬಹುದು? ಅವರಿಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬಹುದು? ಅವರ ಬೇಡಿಕೆ ಏನು? ಅವರ ರಕ್ಷಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಅರಿಯಬೇಕಿದೆ. ಹೀಗಾಗಿ ಅವರ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಲು ಅವರ ಜತೆ ಖುದ್ದಾಗಿ ಸಂವಾದ, ಚರ್ಚೆ ಮಾಡಲು ಬಂದಿದ್ದೇನೆ ಎಂದರು.

ನಾನು ಈಗಾಗಲೇ ಕರಾವಳಿ ಭಾಗದ ಮೀನುಗಾರರನ್ನು ಭೇಟಿ ಮಾಡಿದ್ದು, ಅವರ ಸಮಸ್ಯೆಗಳು ಭೀಕರವಾಗಿವೆ. ಒಬ್ಬ ಮೀನುಗಾರ 10 ಜನರಿಗೆ ಉದ್ಯೋಗ ಹಾಗೂ ಅನ್ನ ನೀಡಲು ಜೀವ ಪಣಕ್ಕಿಟ್ಟು ಶ್ರಮಿಸುತ್ತಿದ್ದಾನೆ.ಮುಂದೆ ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ವಿವಿಧ ಸಮುದಾಯಗಳನ್ನು ಭೇಟಿ ಮಾಡಲಿದ್ದೇನೆ. ಇವರು ತಮ್ಮ ವೃತ್ತಿ ಉಳಿಸಿಕೊಂಡು ನಮ್ಮ ಸಮಾಜಕ್ಕೆ ಶಕ್ತಿಯಾಗಿದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡಿ ಪಕ್ಷದ ಕಾರ್ಯಕ್ರಮ ರೂಪಿಸಲು ಅವರ ಅಭಿಪ್ರಾಯ ಸಂಗ್ರಹಿಸಬೇಕಿದೆ.ಚುನಾವಣೆ ಸದ್ಯದಲ್ಲಿ ಇಲ್ಲ. ಆದರೆ ಕೋವಿಡ್ ನಿಂದಾಗಿ ರಾಜಕೀಯ ಸಭೆ-ಸಮಾರಂಭಗಳಿಗೆ ನಿರ್ಬಂಧ ಹಾಕಿದ್ದಾರೆ. ಕೋವಿಡ್ ನಿಂದ ಅನೇಕರು ಸತ್ತಿದ್ದಾರೆ. ಅನೇಕರಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಲಾಗಿದ್ದರೂ, ಅದು ಯಾರಿಗೂ ತಲುಪಿಲ್ಲ. ಇಂತಹ ವಿಚಾರದಲ್ಲಿ ಜನರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಲು ನಾವು ಕಾರ್ಯಕರ್ತರಿಗೆ ಹೇಳಿದ್ದೇವೆ.ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಿದ್ದೇವೆ ಎಂದು ಸರಕಾರ ಎಲ್ಲ ಕಡೆ ಪ್ರಚಾರ ಪಡೆಯುತ್ತಿದೆ. ಆದರೆ ಎಲ್ಲೂ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಬೆಂಗಳೂರಿಗೆ ವಿಶೇಷ ಕಾರ್ಯಕ್ರಮ ಬೇಕು:

ಬೆಂಗಳೂರು ರಾಜ್ಯದ ಹೃದಯ ಭಾಗ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಿತ ಹಾಗೂ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಅಲ್ಲಿನ ನಾಯಕರ ಜತೆ ಚರ್ಚಿಸಿದ್ದೇವೆ. ಬೆಂಗಳೂರಿಗಾಗಿ ಪ್ರತ್ಯೇಕ ಹಾಗೂ ಆಕರ್ಷಕ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.

ರಾಜೀನಾಮೆ ವಿಷಯ: ದೇರ್ ಈಸ್ ನೋ ಟ್ರುತ್ ಇನ್ ಇಟ್ ಅಂದ್ರು ಸಿಎಂ

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ, ದೇರ್ ಈಸ್ ನೋ ಟ್ರುತ್ ಇನ್ ಇಟ್ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ರು.

ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಿಎಂ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರ, ಮುಂದಿನ ತಿಂಗಳ ಮೊದಲ ವಾರ ಮತ್ತೆ ದೆಹಲಿಗೆ ಬಂದು ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಕಿದ್ದೇನೆ ಎಂದ್ರು. ರಾಜೀನಾಮೆ ಕೊಡುವ ಸುದ್ದಿ ಬಗ್ಗೆ ಮತ್ತೆ ಮತ್ತೆ ಬಂದ ಪ್ರಶ್ನೆಗೆ ನಗುಮೊಗದಲ್ಲೇ ನಾಟ್ ಅಟ್ ಆಲ್ ನಾಟ್ ಅಟ್ ಆಲ್, ನಾಟ್ ಅಟ್ ಆಲ್ ಎಂದ್ರು.

ಮೇಕೆದಾಟು ಯೋಜನೆ ಕುರಿತು ತಮಿಳುನಾಡಿಗೆ ಮತ್ತೆ ಮನವರಿಕೆ ಮಾಡಿಕೊಡೋ ಪ್ರಯತ್ನ ಮಾಡ್ತೀವಿ, ಯೋಜನೆ ಯಾವ ಕಾರಣಕ್ಕೂ ನಿಲ್ಲಲ್ಲ, ಇಂದು ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ನಂತರ ರಾಜ್ಯಕ್ಕೆ ತೆರಳುತ್ತೇನೆ ಎಂದ್ರು.

ಎಲ್ಲಿದೆ ಗುಜರಾತ್ ಮಾಡೆಲ್? ಗುಜರಾತಿಗೆ ಸಿಕ್ಕಷ್ಟು ಲಸಿಕೆ ರಾಜ್ಯಕ್ಕೆ ಸಿಕ್ಕಿದೆಯಾ?; ಡಿ.ಕೆ. ಶಿವಕುಮಾರ್ ಪ್ರಶ್ನೆ

ಬೆಂಗಳೂರು:ಎಲ್ಲದಕ್ಕೂ ಗುಜರಾತ್ ಮಾಡೆಲ್ ಎನ್ನುವ ಬಿಜೆಪಿ ಸರ್ಕಾರ, ಕೋವಿಡ್ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡಿರುವುದು ಏಕೆ? ಗುಜರಾತಿಗೆಷ್ಟು ಲಸಿಕೆ ಪೂರೈಸಿದೆ? ಕರ್ನಾಟಕಕ್ಕೆಷ್ಟು ಪೂರೈಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,‘ಗುಜರಾತ್ ಮಾಡೆಲ್ ಎಲ್ಲಿದೆ? ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಎಲ್ಲ ಮಾಡಲಾಯ್ತು. ವ್ಯಾಪಾರಿಗಳು ಉದ್ಯಮಿಗಳ ಪರ ಅಂತಾ ಬಿಂಬಿಸಿಕೊಂಡ ಬಿಜೆಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆ ಮನ್ನಾ ಮಾಡಲಿಲ್ಲಾ ಯಾಕೆ? ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ..? ಸರ್ಕಾರದವರು ಅಧ್ಯಯನ ಮಾಡಲು ಗುಜರಾತಿಗೆ ಹೋಗಲಿ, ನಮ್ಮ ಅಭ್ಯಂತರವಿಲ್ಲ. ಅವರು ಯಾವ ಮಾಡೆಲ್ ಆದರೂ ನೀಡಲಿ. ಆದರೆ ನಮ್ಮ ಜನರಿಗೆ ನ್ಯಾಯ ಒದಗಿಸಲಿ, ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲಿ.ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೆ? ಗುಜರಾತಿಗೆ ನೀಡಿರುವುದರಲ್ಲಿ ಶೇ.50 ರಷ್ಟಾದರೂ ನಮ್ಮ ರಾಜ್ಯಕ್ಕೆ ನೀಡಲಿಲ್ಲ. ಬಿಜೆಪಿಗೆ ಗುಜರಾತ್ ಮಾತ್ರ ಆದ್ಯತೆ. ಅವರು ಗುಜರಾತ್ ಉದ್ಧಾರ ಮಾಡಲಿ ಬೇಡ ಅನ್ನುವುದಿಲ್ಲ. ಆದರೆ ಲಸಿಕೆ ವಿಚಾರದಲ್ಲಿ ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೋ ಅಷ್ಟನ್ನೇ ರಾಜ್ಯಕ್ಕೂ ನೀಡಲಿ ಎಂದು ಮುಖ್ಯಮಂತ್ರಿಗಳು ಧ್ವನಿ ಎತ್ತಬೇಕು. ಈ ಬಗ್ಗೆ ಎಲ್ಲ ಸಂಸದರು ಮಾತನಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರದಿಂದ ಶ್ರಮಿಕರಿಗೆ ಸಿಗಲಿ ಪರಿಹಾರ;

ಕೋವಿಡ್ ನಿಂದ ಮೃತಪಟ್ಟವರಿಗೆ ಸಹಜ ಸಾವು ಎಂದು ಮರಣ ಪ್ರಮಾಣ ಪತ್ರ ನೀಡಲಾಗಿದೆ. ಇವರ ಮರಣ ಪ್ರಮಾಣ ಪತ್ರವನ್ನು ಹೇಗೆ ಮಾರ್ಪಾಡು ಮಾಡಲು ಆಗುತ್ತದೆ? ಕೋವಿಡ್ ನಿಂದ ತೊಂದರೆಗೆ ಒಳಗಾದವರಿಗೆ, ಸಾಂಪ್ರಾದಾಯಿಕ ವೃತ್ತಿ ಉಳಿಸಿಕೊಂಡು ಬಂದವರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಗುವ ಬಗ್ಗೆ ಯಾವುದೇ ಸ್ಪಷ್ಟತೆ, ಭರವಸೆ ಇಲ್ಲ.ಆನ್ಲೈನ್ ನೋಂದಣಿ ಮಾಡಲು ಅವರಿಗೆ ಗೊತ್ತಿದ್ದರೆ, ಅವರು ಯಾಕೆ ಇವರ ಮುಂದೆ ಕೈಚಾಚುತ್ತಿದ್ದರು? ಒಬ್ಬನೇ ಒಬ್ಬ ರೈತ, ಕಾರ್ಮಿಕ, ವೃತ್ತಿದಾರ ನೋಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಆರಂಭದಲ್ಲಿ 25 ಲಕ್ಷ ಚಾಲಕರಿಗೆ ಪರಿಹಾರ ಕೊಡುತ್ತೇವೆ ಅಂದರು. ನಂತರ ಅದನ್ನು ಏಳೂವರೇ ಲಕ್ಷಕ್ಕೆ ಇಳಿಸಿದರು. ಈಗ ನೋಂದಣಿ ಸಮಸ್ಯೆಯಿಂದ ಕೇವಲ ಎರಡೂವರೆ ಲಕ್ಷ ಚಾಲಕರಿಗೆ ಮಾತ್ರ ಪರಿಹಾರ ನೀಡಿದ್ದಾರೆ.ಹೀಗಾಗಿ ಎಲ್ಲ ಶ್ರಮಿಕ ವರ್ಗದವರಿಗೂ ಸರ್ಕಾರ ಘೋಷಿಸಿರುವ ಪರಿಹಾರ ತಲುಪಿಸಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಒದಗಿಸಬೇಕಿದೆ. ಬೆಂಗಳೂರು ನಗರದಲ್ಲಿ ಒಂದೂವರೇ ಕೋಟಿ ಜನಸಂಖ್ಯೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರದಲ್ಲಿ ಈ ವರ್ಗದವರ ಲೆಕ್ಕ ಬೇರೆ ಇದೆ. ಹೀಗಾಗಿ ಇವರಿಗೆ ನ್ಯಾಯ ಒದಗಿಸಲು ಏನು ಮಾಡಬೇಕು ಎಂದು ನಮ್ಮ ನಾಯಕರ ಸಲಹೆ ಪಡೆಯಲು ಸಭೆ ಕರೆದಿದ್ದೆ. ಪ್ರತಿ ಕ್ಷೇತ್ರದ ನಾಯಕರ ಅಭಿಪ್ರಾಯ ಪಡೆದು, ನಮ್ಮ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ.’ಎಂದ್ರು.

ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಲಸಿಕೆ ಒದಗಿಸಲು ಪ್ರಧಾನಿಗೆ ಮನವಿ

ಬೆಂಗಳೂರು:ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ 19 ಪರಿಸ್ಥಿತಿ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸಿನಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಧಾನ ಮಂತ್ರಿಯವರು ಮಾತನಾಡಿ, ಯುರೋಪ್ ಮತ್ತಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.ಮೂರನೇ ಅಲೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಇಳಿಮುಖವಾಗಿದ್ದು, 1900 ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಸುಮಾರು 400ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಶೇ. 1.42 ರಷ್ಟಿದ್ದು, ಮರಣ ಪ್ರಮಾಣ ಶೇ. 1.25 ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ರಾಜ್ಯದಲ್ಲಿ ಈ ವರೆಗೆ 2.62 ಕೋಟಿ ಲಸಿಕೆ ನೀಡಲಾಗಿದ್ದು, ಪ್ರತಿ ದಿನ 5 ಲಕ್ಷ ಡೋಸ್ ಗಳಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಕೋವಿಡ್ 19ರ ಪಾಸಿಟಿವಿಟಿ ದರ, ಪ್ರಕರಣಗಳ ಸಂಖ್ಯೆ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಆಧರಿಸಿ, ನಿರ್ಬಂಧಗಳನ್ನು ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಖಾತರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಎಲ್ಲ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ ಗಳು, ವೆಂಟಿಲೇಟರ್ ಬೆಡ್ ಗಳು ಹಾಗೂ ಮಕ್ಕಳ ಐಸಿಯು ಗಳು ಮೊದಲಾದ ಸೌಲಭ್ಯ ಹೆಚ್ಚಿಸಲಾಗುತ್ತಿದ್ದು, ವೈದ್ಯರು, ಸ್ಟಾಫ್ ನರ್ಸ್, ಪ್ರಯೋಗಾಲಯ ತಂತ್ರಜ್ಞರ ಸೇವೆ ಒದಗಿಸಲಾಗುತ್ತಿದೆ. ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯ ಪರಿಕರಗಳನ್ನೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಖರೀದಿಸಲಾಗುತ್ತಿದೆ. ಹೊಸ ಆರ್ ಟಿ ಪಿ ಸಿ ಆರ್ ಪ್ರಯೋಗಾಲಯಗಳ ಸ್ಥಾಪನೆ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೊರೇಟರಿಗಳನ್ನು ಸ್ಥಾಪಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಮೂರನೇ ಅಲೆಯನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ಲಸಿಕೆ ಹಂಚಿಕೆ ಹೆಚ್ಚಳ, 800 ನಿಯೊ-ನೇಟಲ್ ಮತ್ತು ಪಿಡಿಯಾಟ್ರಿಕ್ ವೆಂಟಿಲೇಟರುಗಳನ್ನು ಪಿಎಂ-ಕೇರ್ಸ್ ಅಡಿ ಒದಗಿಸುವಂತೆ ಮನವಿ ಮಾಡಲಾಯಿತು.

ಜೊತೆಗೆ, ತಾಲ್ಲೂಕು ಆಸ್ಪತ್ರೆಗಳಿಗೆ 40 ಪಿಎಸ್ ಎ ಆಕ್ಸಿಜನ್ ಉತ್ಪಾದನಾ ಘಟಕಗಳ ಹಂಚಿಕೆ ಮಾಡುವಂತೆ ಹಾಗೂ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹಂಚಿಕೆಯ ವಿಕೇಂದ್ರೀಕರಣ ಮಾಡುವಂತೆ ಮನವಿ ಮಾಡಲಾಯಿತು. ಮ್ಯುಕೊರ್ಮೈಕೊಸಿಸ್ ಆಂಫೊಟೆರಿಸಿನ್-ಬಿ ಮತ್ತು ಮಕ್ಕಳಿಗೆ ಐವಿಐಜಿ ಹಂಚಿಕೆಯನ್ನು ಹೆಚ್ಚಿಸ ಬೇಕೆಂದು ಮನವಿ ಮಾಡಿದರು.

ನಂತರ ದೆಹಲಿಗೆ ತೆರಳಿದ ಯಡಿಯೂರಪ್ಪ ಪ್ರಧಾನಿ ಮೋದಿ ಸೇರಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ, ರಾಜಕೀಯ ವಿಷಯ ಏನಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಮಾತುಕತೆ ನಡೆಸ್ತೀನಿ ಎಂದ್ರು. ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಯಾವ್ದೂ ಇಲ್ಲ ಎನ್ನುತ್ತಾ ಹೊರಟ್ರು.

ನೊಂದವರಿಗೆ ಧ್ವನಿಯಾಗಲು ಕಾಂಗ್ರೆಸ್ ಕಾರ್ಯಕ್ರಮ; ಡಿ.ಕೆ. ಶಿವಕುಮಾರ್

ಚಿತ್ರದುರ್ಗ:‘ಕಳೆದೊಂದು ವರ್ಷದಿಂದ ಕೋವಿಡ್ ಸಮಯದಲ್ಲಿ ಪರಿಶಿಷ್ಟ ಜಾತಿ, ಪಂಗಡದವರು, ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬಂದಿರುವ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆ ಆಲಿಸಿ ಅವರಿಗೆ ಧ್ವನಿಯಾಗಲು ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಅವರು ಶಿವಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗಕ್ಕೆ ತೆರಳುವ ಮಾರ್ಗದಲ್ಲಿ ಚಿತ್ರದುರ್ಗದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್,‘ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಹಳ್ಳಿಗಾಡಿನಲ್ಲಿ ತಮ್ಮ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬರುತ್ತಿರುವವರು ಕಳೆದೊಂದು ವರ್ಷದಿಂದ ಕೊರೋನಾ ಸಮಯದಲ್ಲಿ ಬಹಳ ನೋವು ಅನುಭವಿಸಿದ್ದಾರೆ. ಅವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಉದ್ಯೋಗ, ವೃತ್ತಿ ಕಳೆದುಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಹಾಳಾಗಿದೆ. ಮುಂದೆ ಏನು ಮಾಡಬೇಕು? ಕೆಲಸಕ್ಕಾಗಿ ಹೊರಗೆ ಹೋದರೆ ಮರಳಿ ಮನೆಗೆ ಬಂದಾಗ ನೋಡುವ ರೀತಿ ಬೇರೆ – ಹೀಗೆ ಹತ್ತಾರು ಸಮಸ್ಯೆಗಳನ್ನು ಅವರು ನಮ್ಮ ಮುಂದಿಟ್ಟಿದ್ದಾರೆ. ಈ ಸಮುದಾಯದ ಎಲ್ಲ ಪಕ್ಷಗಳ ಮುಖಂಡರು ನಮ್ಮ ಬಳಿ ಬಂದು ಚರ್ಚೆ ಮಾಡಿದ್ದಾರೆ ಎಂದರು.

ನಾನು ಈಗಾಗಲೇ ಕರಾವಳಿ ಪ್ರದೇಶದ ಮೀನುಗಾರರ ಸಮಸ್ಯೆ ಆಲಿಸಿದ್ದೇನೆ. ಇನ್ನು ಲಂಬಾಣಿ ಸಮುದಾಯದವರ ತಾಂಡಾಗಳಿಗೆ ಭೇಟಿ ನೀಡಿ, ಅವರ ಪರಂಪರೆ, ಸಂಸ್ಕೃತಿ, ಶ್ರಮ ತಿಳಿದಿದ್ದೇನೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಭೇಟಿ ನೀಡಿ ಅವರ ಸಮಸ್ಯೆ ಹಾಗೂ ನೋವನ್ನು ನಾನೇ ನನ್ನ ಕಣ್ಣಾರೆ ಕಂಡು ಕಿವಿಯಾರೆ ಕೇಳಬೇಕು ಎಂದು ಹೊನ್ನಾಳಿ ತಾಲೂಕಿನಲ್ಲಿ ಸೇವಾಲಾಲ್ ಅವರ ಜನ್ಮ ಸ್ಥಳದಿಂದ ಪ್ರವಾಸ ಆರಂಭಿಸಿ ಶಿವಮೊಗ್ಗ, ಬಾಗಲಕೋಟೆ, ಬಿಜಾಪುರಕ್ಕೆ ಭೇಟಿ ನೀಡಲಿದ್ದೇನೆ. ನಾಳಿದ್ದು, ನೇಕಾರರನ್ನು ಭೇಟಿ ಮಾಡುತ್ತೇನೆ. ಅವರು ಕೂಡ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸಮಸ್ಯೆ ಆಲಿಸುತ್ತೇನೆ. ಕೇವಲ ಶಿವಕುಮಾರ್ ಮಾತ್ರವಲ್ಲ ಇಡೀ ಕಾಙಗ್ರೆಸ್ ಪಕ್ಷ ಅವರ ಪರವಾಗಿ ಹೋರಾಡಲಿದೆ. ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ನೊಂದ ಜನರಿಗೆ ಸಾಮೂಹಿಕವಾಗಿ ನಾವೆಲ್ಲ ಧ್ವನಿಯಾಗಿ ನಿಲ್ಲಲು, ಅವರಿಗೆ ಶಕ್ತಿ ತುಂಬಲು ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ಇಂಧನ ದರ ಏರಿಕೆ ವಿರೋಧಿಸಿ ನಾವು 100 ನಾಟೌಟ್, ಸೈಕಲ್ ಜಾಥಾ, ಪ್ರತಿಭಟನೆ ಮಾಡಿದ್ದೇವೆ. ಆದರೆ ಬಿಜೆಪಿಯವರು ಭಂಡು ಬಿದ್ದಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಭೆ ಕರೆದಿದ್ದೇನೆ. ಈ ವಿಚಾರವಾಗಿ ಏನು ಮಾಡಬೇಕೆಂದು ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಎಂದರು.

ಕೊಟ್ಟ ಮಾತು ಉಳಿಸಿಕೊಂಡವರು ಸಿದ್ದರಾಮಯ್ಯ:

ಇನ್ನು ಕಾಂಗ್ರೆಸ್ ನಲ್ಲಿ ಈಗಲೇ ಮ್ಯೂಸಿಕಲ್ ಚೇರ್ ಆಟ ನಡೆಯುತ್ತಿದೆ ಹಾಗೂ ಸಿದ್ದರಾಮಯ್ಯ ರಾಜ್ಯ ಕಂಡ ಮಹಾ ಮೋಸಗಾರ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ನಲ್ಲಿ ಮ್ಯೂಸಿಕಲ್ ಚೇರ್ ಆಡುತ್ತಿದ್ದೇವೋ, ಬೇರೆ ಆಡುತ್ತಿದ್ದೇವೋ.., ಆದರೆ ಅವರ ಪಕ್ಷದಲ್ಲಿ ಆಡುತ್ತಿರುವ ಆಟವನ್ನು ಏನೆಂದು ಕರೆಯುತ್ತಾರೆ? ಸಿದ್ದರಾಮಯ್ಯನವರು ಕೊಟ್ಟ ಮಾತು ತಪ್ಪಿಲ್ಲ. ಅವರ ಅಧಿಕಾರ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಾರೆ. ಅವರು ಪ್ರಮಾಣ ವಚನ ಸ್ವೀಕರಿಸಿ ಕೊಟ್ಟ ಮಾತನ್ನು ಶೇ.99ರಷ್ಟು ಉಳಿಸಿಕೊಂಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ, ಯಾವುದಾದರೂ ಮಾಧ್ಯಮದ ವೇದಿಕೆಯಲ್ಲಿ ಬರಲಿ. ನಾನು ಈ ವಿಚಾರವಾಗಿ ಅವರ ಜತೆ ಚರ್ಚೆ ಮಾಡುತ್ತೇನೆ’ ಎಂದು ತಿಳಿಸಿದರು.

ಪರೀಕ್ಷಾರ್ಥಿಗಳೇ… ಧೈರ್ಯವಾಗಿ ಪರೀಕ್ಷೆಗೆ ಬನ್ನಿ. ಆಲ್ ದ ಬೆಸ್ಟ್…

ಬೆಂಗಳೂರು: ಆಲ್ ದ ಬೆಸ್ಟ್.. ಆಲ್ ದ ಬೆಸ್ಟ್… ಬನ್ನಿ ಮಕ್ಕಳೇ.. ನಿಮಗಾಗಿ ಎಲ್ಲ ಸಿದ್ಧತೆಯಾಗಿದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ…..ಆಲ್ ದ ಬೆಸ್ಟ್…

ಇದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಚಲನಚಿತ್ರ ನಟನಟಿಯರ ಹಾರೈಕೆ.

ಇದೇ ಜುಲೈ 19 ಮತ್ತು 22ರಂದು ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಪರೀಕ್ಷಾರ್ಥಿಗಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಲು ನಾಡಿನ ಹೆಸರಾಂತ ಚಲನಚಿತ್ರ ನಟನಟಿಯರು ಶುಭ ಹಾರೈಸಿ ಪರೀಕ್ಷಾ ಸಿದ್ಧತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿರುವ ವ್ಯಾಪಕ ಸಿದ್ಧತೆಗಳನ್ನು ವಿವರಿಸಿ ಧೈರ್ಯವಾಗಿ ಪರೀಕ್ಷೆ ಎದುರಿಸಲು ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಕರೆ ನೀಡಿದ್ದಾರೆ.

ಪರೀಕ್ಷಾ ಸಿದ್ಧತೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಕಿರು ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಿರಿಯ ನಟಿ ಅನುಪ್ರಭಾಕರ್, ನಟ ಕಿರಣ್ ಶ್ರೀನಿವಾಸ್, ನಟ ದೇವ್ ದೇವಯ್ಯ, ನಟಿ ಹಿತಾ ಚಂದ್ರಶೇಖರ್, ನಟಿ ಸಂಯುಕ್ತಾ ಹೊರನಾಡು ಮತ್ತಿತರ ನಟರು ಪರೀಕ್ಷಾ ಕೇಂದ್ರದ ಮುಂದೆ ನಿಂತು ಮಕ್ಕಳನ್ನು ಸ್ವಾಗತಿಸುತ್ತಾ ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ವ್ಯಾಪಕ ಸಿದ್ಧತೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ವಿದ್ಯಾರ್ಥಿಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಹಂತ. ಇದು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಮುಖ ಘಟ್ಟವಾದ್ದರಿಂದ ಈ ಪರೀಕ್ಷೆಯನ್ನು ಎದುರಿಸುವುದು ನಿಜಕ್ಕೂ ಒಂದು ಉತ್ತಮ ಸಂದರ್ಭವಾಗಿದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ.

ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸೀಟಿಂಗ್ ವ್ಯವಸ್ಥೆ, ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ಇಡುವ ವ್ಯವಸ್ಥೆ, ಜ್ವರ ಮತ್ತಿತರ ಲಕ್ಷಣವಿರುವವರಿಗೆ ಮಾಡಿರುವ ಪ್ರತ್ಯೇಕ ಕೊಠಡಿ, ಅರೋಗ್ಯ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರ ಸೇವೆ, ಕುಡಿಯುವ ನೀರು ವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯುತ್ತಿರುವುದನ್ನು ಚಿತ್ರೀಕರಿಸಿದ ದೃಶ್ಯಗಳ ಹಿನ್ನೆಲೆಯಲ್ಲಿ ನಟರು ಒಂದೊಂದೇ ಸಿದ್ಧತೆಯನ್ನು ವಿವರಿಸಿರುವುದು ಕಿರುಚಿತ್ರದಲ್ಲಿ ಗಮನಸೆಳೆಯುತ್ತಿದೆ.

ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯನ್ನು ಹೇಗೆ ಬರೆಯುವುದು ಮತ್ತು ಒಎಂಆರ್ ಶೀಟ್ ನ್ನು ಹೇಗೆ ತುಂಬುವುದು ಎಂದು ವಿವರಿಸುತ್ತಾ ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಬಂದು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

ಯಾರ ಮಾತಿಗೂ ಕಿವಿಗೊಡದೇ ಯಾವುದಕ್ಕೂ ಹಿಂಜರಿಯದೇ ಉತ್ತಮ ವಾತಾವರಣದಲ್ಲಿ ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.