ಸಂಸದರಿಗೆ ಆ್ಯಪಲ್ ಐಫೋನ್: ವಿವಾದಕ್ಕೆ ಸಿಲುಕಿದ ಮೈತ್ರಿ ಸರ್ಕಾರ

ನವದೆಹಲಿ: ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಿರುವ ಸಭೆಗೆ ಸಂಬಂಧಿಸಿದ ದಾಖಲೆಗಳ ಜೊತೆ ಸಂಸದರಿಗೆ ಆ್ಯಪಲ್ ಐಫೋನ್ ಕಳಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ‌.

ಕಾವೇರಿ ವಿಚಾರ ಹಾಗೂ ರಾಜ್ಯದ ಇತರೆ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಇಂದು ನವದೆಹಲಿಯಲ್ಲಿ ಸಿಎಂ ಕುಮಾರಸ್ವಾಮಿ ರಾಜ್ಯದ ಸಂಸದರ ಸಭೆ ಕರೆದಿದ್ದರು. ಸಭೆಗೆ ಸಂಬಂಧಿಸಿದ ದಾಖಲೆಗಳನ್ನು ಎಲ್ಲಾ ಸಂಸದರಿಗೆ ಸಿಎಂ ಕಛೇರಿ ರವಾನಿಸಿತ್ತು. ಆದರೆ ದಾಖಲೆಗಳ ಜೊತೆ ಆ್ಯಪಲ್ ಐಫೋನ್ ಕೂಡ ಕಳುಹಿಸಲಾಗಿದೆ ಎಂಬುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಸಂಬಂಧ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ತಾವು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆಸಿದ್ದೀರಾ. ಆದರೆ, ತಮ್ಮ ಸರ್ಕಾರ ನಮಗೆ ಕಳುಹಿಸಿರುವ ಕಡತಗಳ ಜೊತೆಗೆ ದುಬಾರಿ ಬೆಲೆಯ ಐಫೋನ್ ಸಹ ಕಳುಹಿಸಿದೆ. ಈ ಐಫೋನ್ ತೆಗೆದುಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ.

ವಿವಾದ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿ, ಐಫೋನ್ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

ಸಿಎಂ ಭಾವನಾತ್ಮಕ ಜೀವಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿಗಳು ಆಡಳಿತ ನಡೆಸಲು ನಾವೆಲ್ಲಾ ಬಿಡೋಣ ಎನ್ನುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರ ಬ್ಯಾಟ್ ಮಾಡಿದ ಬ್ಯಾಟಿಂಗ್ ಮಾಡಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯವರನ್ನು ನಾನು ಚಿಕ್ಕಂದಿನಿಂದ ನೋಡಿದ್ದೇವೆ. ಅವರು ಒಂಥರಾ ಭಾವನಾತ್ಮಕ ಜೀವಿ, ಸಾಕಷ್ಟು ವಿಚಾರಗಳಲ್ಲಿ ಅವರು ಕಣ್ಣೀರು ಹಾಕಿದ್ದಿದೆ. ಚುನಾವಣೆ ವೇಳೆ, ಯಾರೋ ಅಂಗವಿಕಲನನ್ನ ನೋಡಿ ಅವರು ಕಣ್ಣೀರು ಹಾಕಿದ್ದಿದೆ. ಅವರು ಸ್ವಲ್ಪ ಭಾವನಾತ್ಮಕ ಜೀವಿ. ಮುಖ್ಯಮಂತ್ರಿಗಳು ಸಂತೋಷವಾಗಿದ್ರೆ ರಾಜ್ಯ ಸಂತೋಷವಾಗಿರುತ್ತೆ. ನಾವೆಲ್ಲ ಸೇರಿ ಸರ್ಕಾರವನ್ನ ಬಲಪಡಿಸಬೇಕಿದೆ ಎಂದರು.

ಕೆ.ಬಿ.ಕೋಳಿವಾಡ ಸೇರಿದಂತೆ ಕಾಂಗ್ರೆಸ್ ಮುಖಂಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡೋದು ಬೇಡ. ಈಗ ಹೇಳಿಕೆ ನೀಡಿದ್ದಾಗಿದೆ, ಮುಂದೆ ಯಾರೂ ನೀಡೋದು ಬೇಡ ಬಿಜೆಪಿ ಅವ್ರು ಸ್ವಲ್ಪ ಅರ್ಜೆಂಟ್ ನಲ್ಲಿದ್ದಾರೆ. ಅಷ್ಟೊಂದು ಆತುರ ಬೇಡ ದಕ್ಷಿಣ ಭಾರತದ ಯಾವುದೋ ಮೂಲೆಯಲ್ಲಿ ಆಡಳಿತ ಮಾಡ್ತಿದ್ದೇವೆ ಸ್ವಲ್ಪ ದಿನ ನಮ್ಮ ಆಡಳಿತ ನೋಡಿ,
ಆತುರ ಪಡಬೇಡಿ ಎಂದು ಹೇಳಿದರು.

ಇಂದು ರಾತ್ರಿ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ಭೇಟಿ ಬಗ್ಗೆ ನಿರ್ಧಾರವಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ ಎಂದರು.

ಐಟಿ ಭರ್ಜರಿ ಬೇಟೆ: 163 ಕೋಟಿ ರೂ.ನಗದು, 101 ಕೆ.ಜಿ.ಚಿನ್ನ ವಶ!

ಚೆನ್ನೈ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಸ್‌ಪಿಕೆ ಕಂಪನಿಗೆ ಸೇರಿದ 30ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಬರೋಬ್ಬರಿ 163 ಕೋಟಿ ರೂಪಾಯು ನಗದು ಮತ್ತು 101 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಗದು ಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಚೆನ್ನೈ ವಿಭಾಗ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ದಾಖಲೆಗಳ ಪರಿಶೀಲನೆ ವೇಳೆ ಹೆದ್ದಾರಿ ನಿರ್ಮಾಣ ಸಂಸ್ಥೆ ತೆರಿಗೆ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳಿಂದ ತಳಿದು ಬಂದಿದೆ. ಮದುರೆ, ವೆಲ್ಲೂರು ಸೇರಿದಂತೆ 30 ಸ್ಥಳಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ಶೋಧ ಕಾರ್ಯ ನಡೆದಿದೆ.

ಇದು ದೇಶವೇ ಕಂಡರಿಯದ ಅತೀ ದೊಡ್ಡ ಐಟಿ ರೈಡ್ ಆಗಿದ್ದು, ರಸ್ತೆ ಗುತ್ತಿಗೆದಾರನ ಮನೆಯೊಂದರಲ್ಲಿ 163 ಕೋಟಿ ನಗದು ಸಿಕ್ಕಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ದಾಳಿ ವೇಳೆ  101 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.

2016 ರಲ್ಲಿ 110 ಕೋಟಿ ವಶ ಪಡಿಸಿಕೊಳ್ಳುವ ಮೂಲಕ ಐಟಿ ಇಲಾಖೆ ದಾಖಲೆ ಬರೆದಿತ್ತು. ಆದರೆ ಈಗ ಅದನ್ನೂ ಮೀರಿಸಿದ ಸಂಪತ್ತು ವಶ ಪಡಿಸಿಕೊಂಡಿದೆ.

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ‌ ಬಿಗ್ ಶಾಕ್: ನಟಸಾರ್ವಭೌಮ ಚಿತ್ರೀಕರಣ ಸ್ಥಗಿತಕ್ಕೆ ಆದೇಶ?

ಬಾಗಲಕೋಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸಲು ರಾಜ್ಯ ಪ್ರಾಚ್ಯವಸ್ತು ಇಲಾಖೆ ಸೂಚನೆ ನೀಡಿದೆ.

ಮಹಾಕೂಟದಲ್ಲಿ ಶೂಟಿಂಗ್‍ಗಾಗಿ ಪುಷ್ಕರಣಿಯ ಸುತ್ತಲಿನ ಹಾಕಿರುವ ಸೆಟ್ ತೆರವುಗೊಳಿಸಿ ಸಿನಿಮಾ‌ ಚಿತ್ರೀಕರಣ ನಿಲ್ಲಿಸಯವಂತೆ ಚಿತ್ರತಂಡಕ್ಕೆ ಸೂಚನೆ ನೀಡಿ ಎಂದು ಬಾಗಲಕೋಟೆ ಜಿಲ್ಲಾಧಿಕಾರಿಗೆ ಪ್ರಾಚ್ಯವಸ್ತು ಇಲಾಖೆ ಉಪನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

ಮಹಾಕೂಟದ ಮಹಾಕೂಟೇಶ್ವರ ದೇವಾಲಯ ಸಂಕೀರ್ಣ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ.ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷ ಅಧಿನಿಯಮ 1961 ಹಾಗೂ 1965ರಂತೆ ಇಲ್ಲಿ ಯಾವುದೇ ಚಟುವಟಿಕೆ ನಡೆಸುವುದು ಕಾನೂನು ಬಾಹಿರವಾಗಿದ್ದು, ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧವಾಗಿದೆ. ಚಿತ್ರ ತಂಡದವರು ಯಾವುದೇ ಅನುಮತಿಯಿಲ್ಲದೇ ಸೆಟ್ ಅಳವಡಿಸಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷಣ ಚಿತ್ರೀಕರಣ ನಿಲ್ಲಿಸಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಉಪನಿರ್ದೇಶಕರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪ್ರಾಚ್ಯವಸ್ತು ಇಲಾಖೆಯ ಸೂಚನೆಯಿಂದಾಗಿ‌ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.ಪುಷ್ಕರಣಿ ಸೇರಿದಂತೆ ದೇಗುಲ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಚಿತ್ರೀಕರಣ ನಡೆಸುವ ಭರವಸೆ ನೀಡಿ ಚಿತ್ರೀಕರಣ ನಡೆಸಲು ಅನುಮತಿ ಕೋರಲಿದೆ ಎನ್ನಲಾಗಿದೆ.

ಶೈಕ್ಷಣಿಕ ಪ್ರಗತಿಗಾಗಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಪ್ಯಾಕೇಜ್ ನೀಡಿ: ಜಿ.ಟಿ ದೇವೇಗೌಡ

ಮೈಸೂರು:ಸಂವಿಧಾನದ 371ನೇ ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೊಸ ವಿಶ್ವವಿದ್ಯಾಲಯ, ಕೌಶಲ್ಯ ತರಬೇತಿ ಕೇಂದ್ರ, ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸಲು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಸಚಿವ ಜಿ.ಟಿ ದೇವೇಗೌಡ ಮನವಿ ಮಾಡಿದರು.

ಭಾರತ ಸರ್ಕಾರ ಆರಂಭಿಸಿರುವ ‘ಆದ್ಯತಾ ಜಿಲ್ಲೆಗಳ ಪರಿವರ್ತನೆ’ ಕಾರ್ಯಕ್ರಮದ ಅಂಗವಾಗಿ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಜೊತೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವಡೇಕರ್ ವೀಡಿಯೋ ಸಂವಾದ ನಡೆಸಿದರು.ಸಂವಾದದಲ್ಲಿ ಕರ್ನಾಟಕದ ವಿಷಯ ಬಂದಾಗ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬೇರೆ ರಾಜ್ಯಗಳ ಶಿಕ್ಷಣ ಸಚಿವರಂತೆ ತಾವೂ ಕೂಡ ಪರಿಚಯ ಮಾಡಿಕೊಳ್ಳಲು ಮುಂದಾದರು. ಆಗ ಕೇಂದ್ರ ಸಚಿವರೇ ಮಧ್ಯೆ ಪ್ರವೇಶಿಸಿ, ‘ನಿಮ್ಮ ಬಗ್ಗೆ ಗೊತ್ತು ಎನ್ನುತ್ತ ಹೊಸ ಸಚಿವರಿಗೆ ಸ್ವಾಗತ ಹಾಗೂ ಅಭಿನಂದನೆಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.

ನಂತರ ಸಂವಾದದಲ್ಲಿ ಮಾತನಾಡಿದ ಜಿ.ಟಿ ದೇವೇಗೌಡ ಕರ್ನಾಟಕದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಆದ್ಯತಾ ಜಿಲ್ಲೆಗಳಾಗಿ (Aspirational Districts) ಗುರುತಿಸಿದ್ದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಧನ್ಯವಾದಗಳನ್ನು ಹೇಳಿದರು.ರಾಯಚೂರು ಮತ್ತು ಯಾದಗಿರಿಯಲ್ಲಿ ಎರಡು ಹೊಸ ಮಾದರಿ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವತಿಯಿಂದ ಈ ಕಾಲೇಜುಗಳಿಗೆ ಡಿಜಿಟಲ್ ಚಾಲನೆ ನೀಡಲು ನಾವು ಸಿದ್ಧರಿದ್ದೇವೆ ಎಂದ್ರು.

ಇನ್ನೂ ಹೆಚ್ಚಿನ ಅನುದಾನ ನೀಡುವುದರ ಮೂಲಕ ಹೈದರಾಬಾದ್ ಕರ್ನಾಟಕ ಹಾಗೂ ಇತರೆ ಪ್ರದೇಶಗಳಲ್ಲಿ ಹಿಂದುಳಿದ ಕಾಲೇಜುಗಳಿಗೆ ಅನುಕೂಲ ಮಾಡಿಕೊಡಬೇಕು.ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ(RUSA) ಯೋಜನೆ ಅನುಷ್ಟಾನದಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ಬೆಂಬಲ ಹೀಗೇ ಇರಲಿ ಎಂದು ಸಚಿವರು ಕೋರಿದ್ರು.

ಭಾರತ ಸರ್ಕಾರವು ಆದ್ಯತಾ ಜಿಲ್ಲೆಗಳ ಪರಿವರ್ತನೆ(Transformation of Asptirational Districts) ಕಾರ್ಯಕ್ರಮದ ಅಡಿಯಲ್ಲಿ 28 ರಾಜ್ಯಗಳಿಂದ 117 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಈ ಯೋಜನೆ ಅನುಷ್ಟಾನಗೊಳಿಸುತ್ತಿದೆ. ಇತ್ತೀಚಿನ ಲಭ್ಯ ಮಾಹಿತಿಯನ್ನು ಸಂಗ್ರಹಿಸಿ, ನೀತಿ ಆಯೋಗವು 117 ಜಿಲ್ಲೆಗಳ ಬೇಸ್‍ಲೈನ್ ಮಾಡಿದೆ. ಈ 117 ಜಿಲ್ಲೆಗಳ ಪೈಕಿ ಪೈಕಿ ಕರ್ನಾಟಕದ ಎರಡು ಜಿಲ್ಲೆಗಳು ಆಯ್ಕೆಯಾಗಿದ್ದು, ರಾಯಚೂರು 12ನೇ ಸ್ಥಾನದಲ್ಲಿ ಹಾಗೂ ಯಾದಗಿರಿ 40ನೇ ಸ್ಥಾನದಲ್ಲಿವೆ‌ ಎಂದ್ರು.

ಯಾದಗಿರಿ ಜಿಲ್ಲೆಯ ಶಹಾಪೂರದಲ್ಲಿ ಹಾಗು ರಾಯಚೂರು ತಾಲ್ಲೂಕಿನ ಸಿದ್ರಾಮಪುರದಲ್ಲಿ ತಲಾ ಒಂದೊಂದು ಹೊಸ ಸರ್ಕಾರಿ ಮಾದರಿ ಕಾಲೇಜನ್ನು 12 ಕೋಟಿ ರೂ.ಗಳನ್ನು ನೀಡಿ, ರೂಸಾ ಯೋಜನೆಯಡಿ ಮಂಜೂರು ಮಾಡಲಾಗಿದೆ.
ಇದಲ್ಲದೆ, ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ, ಸರ್ಕಾರಿ ಅನುದಾನಿತ ಕಾಲೇಜುಗಳಾದ ರಾಯಚೂರಿನ ತಾರಾನಾಥ್ ಶಿಕ್ಷಣ ಸಂಸ್ಥೆ ಲಕ್ಷ್ಮಿ ವೆಂಕಟೇಶ್ ದೇಸಾಯಿತಿ ಕಾಲೇಜು ಹಾಗೂ ಎಸ್‍ಎಸ್‍ಆರ್‍ಜಿ ಮಹಿಳಾ ಕಾಲೇಜಿಗೆ ಮೂಲಭೂತ ಸೌಕರ್ಯಕ್ಕಾಗಿ ತಲಾ 2 ಕೋಟಿ ರೂ.ಗಳನ್ನು ನೀಡಲಾಗಿದೆ‌ ಎಂದ್ರು.

ವೀಡಿಯೋ ಸಂವಾದಲ್ಲಿ ಮೈಸೂರಿನಿಂದ ಉನ್ನತ ಶಿಕ್ಷಣ ಸಚಿವರೊಂದಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್‍ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್.ಎ. ಕೋರಿ, ಆಡಳಿತಾಧಿಕಾರಿ ತಾಂಡವಗೌಡ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ, ಉಪಸ್ಥಿತರಿದ್ದರು.ಬೆಂಗಳೂರು ಕೇಂದ್ರದಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎನ್.ಮಹೇಶ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ. ಜಾಫರ್ ಅವರು ಭಾಗವಹಿಸಿದ್ದರು.

ಕೃಷ್ಣಾ ಜಲಾಶಯದ ಒಳ ಹರಿವು ಹೆಚ್ಚಳ: ನಾರಾಯಣಪುರ ಜಲಾಶಯಕ್ಕೆ ನೀರು ಬಿಡುಗಡೆ

ವಿಜಯಪುರ: ಮಹಾರಾಷ್ಟ್ರದ ಕೃಷ್ಣಾ ಕೊಳ್ಳದಲ್ಲಿ ಕಳೆದ ವಾರದಿಂದ ಭಾರಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಕೃಷ್ಣಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಇಂದು ಕೃಷ್ಣ ಜಲಾಶಯಕ್ಕೆ 1 ಲಕ್ಷ 12 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. 123.081 ಟಿಎಂಸಿ ಗರಿಷ್ಠ ಜಲ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇಂದು 100 ಟಿಎಂಸಿ ನೀರು ಸಂಗ್ರಹವಾಗಿದೆ. 519.60 ಮೀಟರ್, ಗರಿಷ್ಠ ಎತ್ತರವಿರುವ ಡ್ಯಾಮ್ ನಲ್ಲಿ ಇಂದು 518 .10
ಮೀಟರ್ ಜಲ ಸಂಗ್ರಹವಾಗಿದೆ.

ಮಹಾರಾಷ್ಟ್ರದ , ಧಾಮ್, ಕನೇರ್, ಅಗ್ನಿ ನದಿ, ಕೊಯ್ನಾ, ಪಂಚ ಗಂಗಾ, ವೇದ ಗಂಗಾ, ದೂಧ ಗಂಗಾ,
ಹಿರಣ್ಯ ಕೇಶಿ, ತುಳಸಿ, ರಾಧಾನಗರಿ, ಪಾಟ್ ಗಾಂವ್, ಅಲ್ಲದೆ ಕರ್ನಾಟಕದ ರಾಜಾಪುರ ಬ್ಯಾರೇಜ್,
ಘಟ ಪ್ರಭಾ, ಹಿಪ್ಪರಗಿ ಬ್ಯಾರೇಜ್ ಗಳಿಂದ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಅಧಿಕಗೊಂಡಿದೆ.

ಜಲಾಶಯದ 26 ಕ್ರಸ್ಟ್ ಗೇಟ್ ಗಳನ್ನೂ ಬಂದ್ ಮಾಡಲಾಗಿದ್ದು, Kpcl ಮೂಲಕ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.