ಡಿವೈಡರ್‌ಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ: ಇಬ್ಬರ ಸಾವು

ಬಾಗೇಪಲ್ಲಿ: ಡಿವೈಡರ್ ಗೆ ಡಿಕ್ಕಿ ಹೊಡೆದು ಪರಿಣಾಮ ದ್ವಿಚಕ್ರ ವಾಹನ ಸವಾರ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರ ಗಾಯಗೊಂಡ ಘಟನೆ ತಾಲ್ಲೂಕಿನ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಗಿರೆಡ್ಡಿಪಲ್ಲಿ ತಿರುವಿನಲ್ಲಿ ನಡೆದಿದೆ.

ಮೃತ ಯುವಕರು ಬಿಳ್ಳೂರು ಗ್ರಾಮದ ಫಯಾಜ್(25) ಮತ್ತು ಆಂಧ್ರಪ್ರದೇಶದ ಕದಿರಿ ಮೂಲದ ಉಸೇನ್ ಬಾಷ (26) ಎಂದು ತಿಳಿದು ಬಂದಿದೆ. ಗಾಯಗೊಂಡ ಬಿಳ್ಳೂರು ಗ್ರಾಮದ ಯುವಕ ಮಸ್ತಾನ್ (24) ನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತಪಟ್ಟ ಫಯಾಜ್ , ಉಸೇನ್ ಬಾಷ ಮತ್ತು ಗಾಯಗೊಂಡ ಮಸ್ತಾನ್ ಎಂಬ ಯುವಕರು ಚೇಳೂರಿನ ತಮ್ಮ ಆಪ್ತ ಸ್ನೇಹಿತನನ್ನು ಭೇಟಿಯಾಗಿ ಮೂರೂ ಜನ ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ವಾಪಸ್ಸು ಬರುತ್ತಿದ್ದಾಗ ಎಂ.ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪದ ಮುಗಿರೆಡ್ಡಿಪಲ್ಲಿ ಗ್ರಾಮದ ತಿರುವಿನಲ್ಲಿ ದ್ವಿಚಕ್ರ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಬದಿಯ ಪೋದೆಯಲ್ಲಿ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಿಂಬದಿ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈ‌ ಸಂಬಂಧ ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಬಿಎಂಪಿಗೆ ಹೊಸ ಕಾನೂನು ರಚನೆ: ಡಿಸಿಎಂ ಪರಂ

ಬೆಂಗಳೂರು: ಬಿಬಿಎಂಪಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಶೀಘ್ರವೇ ನೂತನ ಕಾನೂನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು‌ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನ ಅಭಿವೃದ್ಧಿ ಹಾಗೂ ಸಮಸ್ಯೆ ಬಗ್ಗೆ ಚರ್ಚಿಸಲು ಶಾಸಕರು, ಸಚಿವರು, ಸಂಸದರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಡಾ.ಜಿ.ಪರಮೇಶ್ವರ್, ಬಿಬಿಎಂಪಿಗೆ ಹೊಸ ಕಾನೂನು ತರಲು ಸದಸ್ಯರು ಸಲಹೆ ನೀಡಿದ್ದಾರೆ. ಪ್ರಸ್ತುತ ಈಗಿರುವ ಮುನಿಸಿಪಾಲಿಟಿ ಆ್ಯಕ್ಟ್ ಅಡಿಯಲ್ಲಿ ಬಿಬಿಎಂಪಿ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೊಸ ಕಾನೂನು ತರಲು ಸಲಹೆ ನೀಡಿದ್ದಾರೆ. ಆದಷ್ಟು ಶೀಘ್ರವಾಗಿ ಕಾನೂನು ಜಾರಿ ಮಾಡಲಿದ್ದೇವೆ ಎಂದರು.

ರಾಜ್ಯದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟ ನಡೆಯುತ್ತಿದೆ. ಹೀಗಾಗಿ ಪರಿಣಾಮಕಾರಿಯಾಗಿ ಬ್ಯಾನ್ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲೆಂದರಲ್ಲಿ ಫ್ಲೆಕ್ಸ್ ‌ಹಾಕಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅನುಮತಿ ಇಲ್ಲದೇ ಮರದ ಮೇಲೆಲ್ಲಾ ಕೇಬಲ್ ಲೈನ್ ಹಾಕಿದ್ದಾರೆ ಅವರ ಮೇಲೆ‌ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು.

ಕಸದ ಸೂಕ್ತ ವಿಲೇವಾರಿ, ಸಂಸ್ಕರಣೆಗೆ ಸಭೆಯಲ್ಲಿ ಸಲಹೆ ನೀಡಿದ್ದು, ವೇಸ್ಟ್ ಎನರ್ಜಿ ಬಗ್ಗೆಯೂ ಶೀಘ್ರವಾಗಿ ನಿರ್ಧಾರ ಮಾಡಿ, ಒಂದೆರೆಡು ಕಡೆ ಪ್ರಾಯೋಗಿಕವಾಗಿಯೂ ಪ್ರಾರಂಭಿಸುತ್ತೇವೆ. ನಿರ್ಭಯ ಯೋಜನೆಯಲ್ಲಿ ೫ ಸಾವಿರ ಸಿಸಿ ಟಿವಿ ಅಳವಡಿಕೆಗೆ ತೀರ್ಮಾನ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಈ ಕಾರ್ಯಕ್ರಮದಡಿ ಕ್ರಮ ತೆಗೆದುಕೊಳ್ತೇವೆ ಎಂದು ತಿಳಿಸಿದರು.

ಇಡೀ ಬೆಂಗಳೂರಿನಲ್ಲಿ ಬೀದಿದೀಪಕ್ಕೆ ಎಲ್‌ಇಡಿ ಬಲ್ಬ್ ಹಾಕಲು ಯೋಜನೆ ಸಿದ್ಧವಾಗಿದೆ. ಮೆಟ್ರೋ, ಬಿಡಬ್ಲ್ಯೂಎಸ್‌ಎಸ್‌ಬಿ ಹೊರತು ಪಡಿಸಿ 10 ಸಾವಿರ ಕೋಟ ರೂಪಾಯಿ ಹಣವನ್ನ ಬಿಬಿಎಂಪಿಗೆ ಸರ್ಕಾರ ಬಜೆಟ್‌ನಲ್ಲಿ ಅನುಮೋದಿಸಿ ಕೊಟ್ಟಿದೆ. ಮುಂದಿನ ವಾರದಿಂದ ೨೮ ಕ್ಷೇತ್ರಗಳಿಗೂ ಸಿಟಿ ರೌಂಡ್ ತೆರಳಲಿದ್ದೇನೆ. ಜನರ ಹಾಗೂ ಶಾಸಕರ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೇನೆ. ದಿನಕ್ಕೆ ಮೂರು ನಾಲ್ಕು ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇನೆ ಎಂದರು.

ಬಿ.ಎಸ್. ಪಾಟೀಲ್ ಅವರು ಬಿಬಿಎಂಪಿಯನ್ನು ಐದು ಭಾಗ ಮಾಡಲು ಸಲಹೆ‌ ನೀಡಿದ್ದಾರೆ. ಆದರೆ‌ ನಾವು ಪ್ರತ್ಯೇಕ ಕಾನೂನು ತರುತ್ತಿದ್ದೇವೆ. ಈಗಷ್ಟೇ ಸಲಹೆ ಬಂದಿದೆ ಮುಂದೆ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಬಿಎಂಪಿ ವಿಭಜನೆ ಸಂಬಂಧ ಈಗಷ್ಟೇ ಶಿಫಾರಸು ಬಂದಿದೆ ಸರಕಾರ ಅದನ್ನು ಪರಿಶೀಲನೆ ಮಾಡಲಿದೆ ಎಂದು ತಿಳಿಸಿದರು.

ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಟೆಂಡರ್‌ಶ್ಯೂರ್ ಕಾರ್ಯಕ್ರಮ ತಂದಿದ್ದೇವೆ. ಇದರಿಂದ ಮುಂದಿನ‌ ದಿನಗಳಲ್ಲಿ ಸಮಸ್ಯೆ ನೀಗಲಿದೆ. ಪೌರಕಾರ್ಮಿಕರ ಹಣ ಆಯಾ ಸಂದರ್ಭದಲ್ಲಿ ಕೊಡಲು ಅಧಿಕಾರಿಗಳಿಗೆ ಹೇಳಿದ್ದೇವೆ. ರಾಜಕಾಲುವೆಯಲ್ಲಿ ಹೂಳು ತೆಗೆಯಲು, ಬಫರ್‌ಜೋನ್ ಮಾಡಲು ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದೇವೆ. ರಾಜಕಾಲುವೆ ಸರ್ವೆ ಆಗುತ್ತಿದೆ ತೆರವು ಕೆಲಸ ಮುಂದಿನ ದಿನದಲ್ಲಿ ಆಗತ್ತದೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರ ಮುಂದುವರೆಯುವುದು ಕೆಲ ಕಾಂಗ್ರೆಸ್ ನಾಯಕರಿಗೆ ಇಷ್ಟವಿಲ್ಲ: ಕೆ.ಬಿ.ಕೋಳಿವಾಡ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣವಾಗಿದ್ದು, ಕೆಲ ಕಾಂಗ್ರೆಸ್ ಮುಖಂಡರಿಗೆ ಸಮ್ಮಿಶ್ರ ಸರ್ಕಾರ ಮುಂದುವರೆಯೋದು ಬೇಕಿಲ್ಲ‌ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಹೈಕಮಾಂಡ್ ತೀರ್ಮಾನದಂತೆ ಮೈತ್ರಿ ಸರ್ಕಾರ ರಚನೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿ ಕೆಲವರಿಗೆ ಮೈತ್ರಿ ಸರ್ಕಾರ ಮುಂದುವರೆಯೋದು ಬೇಕಿದೆ. ಆದ್ರೆ ಕೆಲ ನಾಯಕರಿಗೆ ಸರ್ಕಾರ ಮುಂದುವರೆಯೋದು ಬೇಕಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.

ಜೆಡಿಎಸ್, ಕಾಂಗ್ರೆಸ್ ಹೊಂದಾಣಿಕೆಯಿಂದ ಮುಂದುವರೆದಿದ್ದೇ ಆದಲ್ಲಿ ಲೋಕಸಭೆ ಚುನಾವಣೆಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯ ಎಂದು ಕೋಳಿವಾಡ ಅಭಿಪ್ರಾಯ ಪಟ್ಟರು.

ಪತ್ನಿಯಿಂದ ಪತಿಗೆ ಆಭರಣ ಕಿರುಕುಳ: ಪತ್ನಿ ವಿರುದ್ಧ ದೂರು ದಾಖಲಿಸಿದ ಪತಿ

ಬೆಂಗಳೂರು: ಪತ್ನಿಗೆ ವತಿಯಿಂದ ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಆದರೆ, ಹೆಂಡತಿಯ ಆಭರಣ ಕಿರುಕುಳ ತಾಳಲಾರದ ಪತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಎನ್ನುವ ಸುದ್ಧಿಗಳನ್ನು ನಾವು ಆಗಾಗ ಓದುತ್ತೇವೆ. ಆದರೆ, ಪತ್ನಿ ವಿರುದ್ದ ಪತಿ ವಧುದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.

ವೃತ್ತಿಯಲ್ಲಿ ಇಬ್ಬರೂ ಕೂಡ ಸಾಫ್ಟ್ ವೇರ್ ಇಂಜಿನಿಯರ್‌ಗಳಾಗಿರುವ ಆಂದ್ರ ಮೂಲದ ಧೀರಜ್ ರೆಡ್ಡಿ ಚಿಂತಾಲ ಮತ್ತು ಜಯಶೃತಿ ಇಬ್ಬರು 2014ರಲ್ಲಿ ಮದುವೆಯಾಗಿದ್ದರು. ಐಶಾರಿ ಜೀವನ ನಡೆಸಲು ಗಂಡನಿಗೆ ಹಣ ಹಾಗೂ ಆಭರಣಗಳಿಗಾಗಿ ಪತ್ನಿ ಜಯಶೃತಿ ಪೀಡಿಸುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ವರ್ಷದ 30 ಲಕ್ಷ ಮೌಲ್ಯದ ಡೈಮಂಡ್ ಡಾಬು ಕೊಡಿಸು ಎಂದು ಪತ್ನಿ ಪೀಡಿಸುತ್ತಿದ್ದಲ್ಲದೆ, ಡಾಬು ಕೊಡಿಸದೇ ಇದ್ದರೆ ಸೂಸೈಡ್ ಮಾಡಿಕೊಳ್ಳುವ ಬೆದರಿಕೆ ಹಾಕಿದ‌್ದಳು. ಬಳಿಕ ತನ್ನ ತಂಗಿ‌ ಮದುವೆಗೆ 40 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಳು‌. ಪತ್ನಿ ವರ್ತನೆ ಬಗ್ಗೆ ಆಕೆಯ ಪೋಷಕರ ಬಳಿ ಹೇಳಿದರೆ ಅವರೂ ಕೂಡ ಮಗಳು ಹೇಳಿದಂತೆ ಕೇಳ ಬೇಕೆಂದು‌ ಧೀರಜ್‌ಗೆ ತಾಕೀತು ಮಾಡಿದ್ದಾರೆ.

ಅಲ್ಲದೆ, ಆಸ್ತಿಯನ್ನೆಲ್ಲ ಜಯಶೃತಿ ಹೆಸರಿಗೆ ಬರೆದಿಡುವಂತೆ ಜಯಶೃತಿ ಪೋಷಕರು ಒತ್ತಾಯಿಸಿದ್ದಾರೆ. ಕಳೆದ ತಿಂಗಳು ಜಯಶೃತಿ, ಪೋಷಕರು ಹಾಗೂ ಮೂವರು ಸ್ನೇಹಿತರ ಜೊತೆ ಬಂದು 2 ಕೋಟಿ ಹಣ ನೀಡುವಂತೆ ಧೀರಜ್ ಗೆ ಕಿರುಕುಳ ನೀಡಿದ್ದಾರೆ.

ಈ ಎಲ್ಲ ಘಟನೆಗಳಿಂದ ನೊಂದ ಪತಿ, ಪತ್ನಿ ಜಯಶೃತಿ ಹಾಗೂ ಪೋಷಕರ ವಿರುದ್ದ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾರೆ.

ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ವಿರುದ್ಧ ತನಿಖೆ:ಪಕ್ಷದಿಂದ ಸಹಕಾರ ನೀಡುವ ಭರವಸೆ

ಬೆಂಗಳೂರು: ವಂಚನೆ, ಜೀವ ಬೆದರಿಕೆ ಸಂಬಂಧಪಟ್ಟಂತೆ ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ವಿರುದ್ಧ ತನಿಖೆ ಮುಂದುವರಿಸುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನಕ್ಕೆ ಪಕ್ಷ ತಲೆಬಾಗುತ್ತದೆ ಎಂದು ಎಂಇಪಿ ರಾಜ್ಯ ವಕ್ತಾರ ಸಿರಾಜ್ ಜಫ್ರಿ ಸ್ಪಷ್ಟಪಡಿಸಿದ್ದಾರೆ.

ತನಖೆ ಮೂಲಕವಾದರು ಎಂಇಪಿ ಮತ್ತು ನೌಹೀರಾ ಶೇಕ್ ವಿರುದ್ಧ ಕೆಲವರು ಮಾಡುತ್ತಿರುವ ಆರೋಪ, ಅಪಪ್ರಚಾರಕ್ಕೆ ತೆರೆ ಬೀಳುವಂತಾಗಲಿ ಎಂಬ ಸದಾಶಯ ನಮ್ಮದು.ಬಿ ಫಾಂ ನೀಡುವಾಗ ಪಕ್ಷ ಹಾಗೂ ಪಕ್ಷದ ಅಭ್ಯರ್ಧಿಗಳಿಗೆ ಹಾನಿಯಾಗದಿರಲಿ ಎಂಬ ಕಾರಣಕ್ಕಾಗಿ ಕೆಲ ಅಭ್ಯರ್ಥಿಗಳಿಂದ ಚೆಕ್ ಪಡೆದಿದ್ದು, ಅವುಗಳನ್ನು ಚುನಾವಣೆ ನಂತರ ಅವರಿಗೆ ಗೌರವಯುತವಾಗಿ ವಾಪಸ್ ಕೊಡಲಾಗಿದೆ.ಆದರೆ ಕೆಲವು ಅಭ್ಯರ್ಥಿಗಳು ಚೆಕ್ ವಾಪಾಸ್ ಪಡೆಯದೆ ಜತೆಗೆ 28 ಲಕ್ಷ ಚುನಾವಣಾ ವೆಚ್ಚ ಕೊಡಬೇಕೆಂದು ಒತ್ತಾಯ ಮಾಡಿ, ರಾಜ್ಯ ಕಚೇರಿಗೆ ಬಂದು ಗಲಭೆ, ದಾಂಧಲೆ ಮಾಡಿ, ಕಚೇರಿಯನ್ನು  ಅಕ್ರಮವಾಗಿ ವಶಕ್ಕೆ ತೆಗೆದುಕೊಂಡು ಧರಣಿ, ಪ್ರತಿಭಟನೆ ಮೂಲಕ ಪಕ್ಷ ಮತ್ತು ನೌಹೀರಾ ಶೇಕ್ ಮಸೀ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು‌ ಆರೋಪಿಸಿ‌ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈಗ ರಾಜ್ಯ ಹೈಕೋರ್ಟ್ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರಿಸುವಂತೆ ಜೀವನ್ ಭೀಮಾನನಗರದ ಪೋಲಿಸರಿಗೆ ಆದೇಶ ಮಾಡಿರುವುದನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ. ಜತೆಗೆ ತನಿಖೆಗೆ ಪಕ್ಷ ಎಲ್ಲ ರೀತಿಯ ಸಹಕಾರ ನೀಡಲಿದೆ ಈ ಮೂಲಕವಾದರು ನಾಡಿನ ಜನತೆಗೆ ಸತ್ಯ ಸಂಗತಿ ಏನು ಎಂಬುದು ಗೊತ್ತಾಗಲಿದೆ.ಎಲ್ಲ ಕ್ಕಿಂತ ಮಿಗಿಲಾಗಿ ಧ್ವನಿ ಇಲ್ಲದವರು ರಾಜಕೀವಾಗಿ ಶಕ್ತಿವಂತರಾಗಬೇಕು, ರಾಜಕೀಯ ಅಧಿಕಾರ ಪಡೆದುಕೊಳ್ಳಬೇಕು, ಮಾನವೀಯತೆಗೆ ಎಂದು ಸೋಲಾಗಬಾರದು, ಅನ್ಯಾಯವಾಗಬಾರದು ಎಂಬುದೆ ಪಕ್ಷದ ನೈಜ ಕಾಳಜಿ, ಸಿದ್ದಾಂತ, ಧ್ಯೇಯ, ಗುರಿಯಾಗಿದೆ.

ಬಿಸಿಯೂಟ ಪ್ರಕರಣದಲ್ಲಿ ಹೊರ ರಾಜ್ಯದವರಾಗಿದ್ದರು ಬಡವರ ಬಗ್ಗೆ ನೌಹೀರಾ ಶೇಕ್ ಹೊಂದಿರುವ ಕಾಳಜಿ, ಕಳಕಳಿಯನ್ನು ಅನುಮಾನದಿಂದ ನೋಡಬೇಕಿಲ್ಲ ಎಂದು ರಾಜ್ಯ ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎಂಬುದನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ. ಕೊನೆಯದಾಗಿ ಸತ್ಯ ಹೊರಬರಲಿ ಪಕ್ಷದ ವಿರುದ್ಧ ಕೇಳಿ ಬರುತ್ತಿರುವ ಅಪಪ್ರಚಾರ ಕೊನೆಯಾಗಲಿ ಪೊಲೀಸರು ಬೇಗ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಆ ಮೂಲಕ ವಾಸ್ತವ ಸಂಗತಿ ಕೋರ್ಟ್ ಮೂಲಕವೇ ಬಹಿರಂಗವಾಗಲಿ ಎಂದು ಪತ್ರಿಕಾ ಹೇಳಿಕೆ ಮೂಲಕ ತನಖೆ ಬಗ್ಗೆ ಪಕ್ಷದ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಫ್ರಾನ್ಸ್ ಮುಡಿಗೆ ಫುಟ್ಬಾಲ್ ವಿಶ್ವಕಪ್ ಕಿರೀಟ

ಮಾಸ್ಕೊ: ಪ್ರತಿಷ್ಠಿತ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಫ್ರಾನ್ಸ್ ಫುಟ್ಬಾಲ್ ವಿಶ್ವಕಪ್ ಗರೀಟವನ್ನು ಮುಡಿಗೇರಿಸಿಕೊಂಡಿದೆ.

ರಷ್ಯಾದ ಮಾಸ್ಕೋದಲ್ಲಿರುವ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗುವ ಮೂಲಕ ಎರಡನೇ ಬಾರಿಗೆ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು.

ಕ್ರೊವೇಷಿಯಾದ ಮಾರಿಯೊ ಮಂಡ್‌ಜುಕಿಚ್ 18ನೇ ನಿಮಿಷದಲ್ಲಿ ಸ್ವಂತ ಗೋಲು ಬಾರಿಸಿ ತಪ್ಪು ಮಾಡುವ ಮೂಲಕ ಎದುರಾಳಿ ಫ್ರಾನ್ಸ್ ತಂಡಕ್ಕೆ ಮೊದಲ ಗೋಲು ಸಿಗುವಂತೆ ಮಾಡಿದರು. ನಂತರ ಫ್ರಾನ್ಸ್ ನ ಆಂಟೊನಿ ಗ್ರೀಜ್‌ಮನ್‌ 38ನೇ ನಿಮಿಷದಲ್ಲಿ, ಪೌಲ್‌ ಪೊಗ್ಬ – 59ನೇ ನಿಮಿಷದಲ್ಲಿ‌ ಹಾಗು ಕೈಲಿಯನ್ ಮಾಪೆ – 65ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡದ ಗೆಲುವಿಗೆ ಮಹತ್ವದ ಪಾತ್ರ ವಹಿಸಿದರು.

ಕ್ರೊಯೇಷಿಯಾ ಪರ ಇವಾನ್‌ ಪೆರಿಸಿಚ್‌ 28ನೇ ನಿಮಿಷದಲ್ಲಿ ಗೋಲು ಬಾರಿಸಿ ಖಾತೆ ತೆರದು ಪೈಪೋಟಿಯ ಸುಳಿವು ನೀಡಿದರಾದರೂ ನಂತರದ ಗೋಲು ಮಾರಿಯೊ ಮಂಡ್‌ಜುಕಿಚ್ ಅವರಿಂದ 69ನೇ ನಿಮಿಷದಲ್ಲಿ ಬಂತು. ಕೇವಲ ಎರಡು ಗೋಲುಗಳನ್ನು ಮಾತ್ರ ಗಳಿಸಿದ ಕ್ರೊಯೇಷಿಯಾ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.