ಮೈತ್ರಿ ಸರ್ಕಾರಕ್ಕೆ ಅಪಾಯ ಬಾರದ ರೀತಿ ಹೋರಾಟ: ದೇವೇಗೌಡ ಗುಡುಗು

ಬೆಂಗಳೂರು:ಸೋಲೇ ಗೆಲುವಿನ ಸೋಪಾನ. ಎದೆಗುಂದಬೇಡಿ, ನಾನು ಮತ್ತೆ ಹೋರಾಟಕ್ಕೆ ಇಳಿಯುತ್ತೇನೆ. ಮೈತ್ರಿ ಸರ್ಕಾರಕ್ಕೆ ಅಪಾಯ ಬರದ ರೀತಿ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಗುಡುಗಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮುಖ್ಯಮಂತ್ರಿ, ನೂತನ ಶಾಸಕ ಮತ್ತು ಸಚಿವರಿಗೆ ಅಭಿನಂದೆ ಸಲ್ಲಿಕೆ ಮಾಡಲಾಯಿತು.ಎಚ್ಡಿಕೆ ಹಾಗೂ ಸಚಿವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜ್ಯದ ಜನತೆ ನಮ್ಮನ್ನು ಗುರುತಿಸಲಿಲ್ಲ.ನಾವು ನೂರಕ್ಕೂ ಹೆಚ್ಚು ಸ್ಥಾನ ಗಳಿಸುವ ಉದ್ದೇಶ ಇತ್ತು ಎಲ್ಲೋ ಒಂದು ಕಡೆ ನಮ್ಮ ಕಾರ್ಯಕರ್ತರ ದೋಷ ಇದೆ. ನಾವು ಹಿಂದೆ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕಾರ್ಯಕ್ರಮ ಗಳನ್ನು ಜನರಿಗೆ ತಲುಪುಸುವಲ್ಲಿ ವಿಫಲವಾಗಿದ್ದೇವೆ.ಹಾಗಾಗಿ ಈ ಫಲಿತಾಂಶ ಬರುವಂತಾಯಿತು ಎಂದರು.

ನಾವು ಕಾಂಗ್ರೆಸ್ ಅನ್ನು ಕಡೆಗಣಿಸುವಂತಿಲ್ಲ.ಅವರ ಜೊತೆ ಸೇರಿ ಸರ್ಕಾರ ಮಾಡಿದ್ದೇವೆ.ಕುಮಾರಸ್ವಾಮಿ ಮೇಲೆ ದೊಡ್ಡದಾದ ಜವಾಬ್ದಾರಿ ಇದೆ.ನೂರ ನಾಲ್ಕು ಸ್ಥಾನ ಇರುವ ವಿರೋಧ ಪಕ್ಷ ವನ್ನು ಎದುರಿಸಬೇಕಿದೆ.ಮೈತ್ರಿ ಸರ್ಕಾರ ಇದೆ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟ ಇದೆ.ಜನ ಕೈ ಹಿಡಿಯದಿದ್ರೂ ಪರವಾಗಿಲ್ಲ ಅಂತಾ ಕುಮಾರಸ್ವಾಮಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾರೆ.ಮಾದ್ಯಮಗಳೂ ಅಸಹಕಾರ ತೋರುತ್ತಿವೆ.ಮಾದ್ಯಮಗಳ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ.ಮಾಧ್ಯಮಗಳು ಮಗನ ಬಗ್ಗೆ ಹೊಂದಿರುವ ಧೋರಣೆ ತಪ್ಪು ಎಂದು ಪರೋಕ್ಷವಾಗಿ ಸೂಚಿಸಿದರು.

ಅಣ್ಣತಮ್ಮಂದಿರ ಬಜೆಟ್ ಅಂದ್ರು ಅಪ್ಪಮಗನ ಬಜೆಟ್ ಅಂದ್ರು ಎನ್ನತ್ತಲೇ ಭಾವುಕರಾದ ದೇವೇಗೌಡ ಇದೆಲ್ಲದರ ಬಗ್ಗೆ ಕಾರ್ಯಕರ್ತರು ಮಾತಾಡಬೇಕು ಜನತೆಗೆ ತಿಳಿಸಬೇಕು
ಕುಮಾರಸ್ವಾಮಿ ಒಬ್ಬರೇ ಎಲ್ಲ ಜವಾಬ್ದಾರಿ ನಿಭಾಯಿಸಲು ಆಗುವುದಿಲ್ಲ ಒಂದೇ ಬಾರಿ ಎಲ್ಲಾ ಸಾಲ ಮನ್ನಾ ಮಾಡಲು ಆಗುವುದಿಲ್ಲ.‌ಮುಂದಿನ ದಿನಗಳಲ್ಲಿ ಎಲ್ಲ ಸಾಲ ಮನ್ನಾ ಮಾಡುತ್ತಾರೆ. ಪೆಟ್ರೋಲ್, ಡೀಸಲ್ ಬೆಲೆ ಒಂದು ರೂಪಾಯಿ ಜಾಸ್ತಿ ಮಾಡಿದ್ದಕ್ಕೆ ಎಷ್ಟು ಟೀಕೆ ಮಾಡಿದರು.ಕುಮಾರಸ್ವಾಮಿ ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಿದರೂ ಸಾಕಾಗುತ್ತಿಲ್ಲ‌ ಇದರ ನಡುವೆ ಗ್ರಾಮವಾಸ್ತವ್ಯಕ್ಕೆ ಸಮಯ ಎಲ್ಲಿದೆ
ಅವರ ಆರೋಗ್ಯದ ಕಡೆ ಕೂಡಾ ಗಮನ ಕೊಡಬೇಕಿದೆ‌ ಎಂದು ಮಗನ ಪರಿಸ್ಥಿತಿಯನ್ನು ವಿವರಿಸಿದರು.

ಚುನಾವಣಾ ಸಂದರ್ಭದಲ್ಲಿ ಕೆಲ ಕಾರ್ಯಕರ್ತರ ಮೇಲೆ ಕೇಸುಗಳು ದಾಖಲಾಗಿವೆ ರೌಡಿಶೀಟರ್ ಕೇಸ್ ಗಳನ್ನೂ ಹಾಕಿದ್ದಾರೆ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಜೊತೆ ಕೂಡಿ ಮಾತಾಡಿಕೊಂಡು ನಮ್ಮ ಕಾರ್ಯಕರ್ತರ ಮೇಲಿರೋ ಕೇಸ್ ಗಳನ್ನ ಹಿಂಪಡೆಯಬೇಕು ಎಂದು ಸಿಎಂ ಗೆ ಮನವಿ ಮಾಡಿದ ಗೌಡರು ನಮ್ಮ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಬಾರದು‌ ಹೀಗಾಗಿ ಎಲ್ಲಾ ಕೇಸ್ ಗಳನ್ನ ಹಿಂಪಡೆಯಬೇಕೆಂದು ಎಂದರು.

ನಿಗಮ ಮಂಡಳಿಗಳಲ್ಲಿ ನಮ್ಮ ಪಕ್ಷದ ಪಾಲಿಗೆ 30-35 ಸ್ಥಾನಗಳು ಸಿಗಬಹುದು ಎಲ್ಲರಿಗೂ ನಿಗಮ ಮಂಡಲಿ ಸ್ಥಾನ ಕೊಡಲು ಆಗುವುದಿಲ್ಲ.ಮೊದಲು ಶಾಸಕರಿಗೆ ಆಧ್ಯತೆ ನೀಡಬೇಕಾಗುತ್ತದೆ.ಇದು ನಿಮ್ಮ ಪಕ್ಷ, ನಿಮಗೂ ಮುಂದೆ ಅವಕಾಶ ಸಿಗಬಹುದು ಎಂದು ಅತೃಪ್ತರಿಗೆ ವೇದಿಕೆಯಲ್ಲೇ ಉತ್ತರಿಸಿದರು.

ಸ್ತ್ರೀಶಕ್ತಿ ಗುಂಪುಗಳ ಸಾಲಮನ್ನಾ ಮಾಡಿ ಅಂತ ಪ್ರತಿಪಕ್ಷ ಬಿಜೆಪಿ ಆಗ್ರಹಿಸುತ್ತಿದೆ.ಕುಮಾರಸ್ವಾಮಿಯವರು ಸ್ತ್ರೀಶಕ್ತಿ ಗುಂಪುಗಳ ಸಾಲಮನ್ನಾ ಕೂಡಾ ಮಾಡ್ತಾರೆ.ಮಾಡಲ್ಲ ಅಂತ ಅವರು ಹೇಳಿಲ್ಲ.ಇದಕ್ಕೆಲ್ಲ ಮೂರ್ನಾಲ್ಕು ತಿಂಗಳು ಸಮಯವಾದರೂ ಬೇಡವೇ?ಬಿಜೆಪಿಯವರ ರಾಜಕೀಯ ಆಟಗಳು ನನಗೆ ಗೊತ್ತಿವೆ.ಎಲ್ಲವನ್ನೂ ಗಮನಿಸುತ್ತಿದ್ದೇನೆ ಎಂದು ತಿರುಗೇಟು ನೀಡಿದರು.

ಬೆಂಗಳೂರು ಅಭಿವೃದ್ಧಿ: ಕಾಲಮಿತಿಯಲ್ಲಿ ಯೋಜನೆ ಜಾರಿಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು:ಬೆಂಗಳೂರು ನಗರ ಅಭಿವೃದ್ಧಿಗಾಗಿ ಜಾರಿಗೊಳಿಸುತ್ತಿರುವ ಯೋಜನೆ, ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಇಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಮತ್ತು ಬಿಪ್ಯಾಕ್ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಬೆಂಗಳೂರು ನಗರ ಅಭಿವೃದ್ಧಿ ಕುರಿತು ಚರ್ಚಿಸಿದರು.
ಬೆಂಗಳೂರು ನಗರ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ, ರಸ್ತೆಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ಮೆಟ್ರೋ ಕಾಮಗಾರಿ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.

ಉಪ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಬಿಪ್ಯಾಕ್‍ನ ಸದಸ್ಯರು ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ದರ್ಶನ್ ರನ್ನು ಹಗ್ ಮಾಡುತ್ತೇನೆ ಅಂದ‌ ನಟ ಯಾರು ಗೊತ್ತಾ?

ಫೋಟೋ ಕೃಪೆ-ಟ್ವಿಟ್ಟರ್

ಬೆಂಗಳೂರು:ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯ ಪಾತ್ರಧಾರಿಗೆ ಹೆಚ್ಚಿನ ಅವಕಾಶ ನೀಡಿರುವ ಬಗ್ಗೆ ಮಾಹಿತಿ ಇಲ್ಲ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ‌ ಎಂದು ಉದಯೋನ್ಮುಖ ನಟ ನಿಖಿಲ್ ಹೇಳಿದ್ದಾರೆ.

ಕುರುಕ್ಷೇತ್ರ ಪೌರಾಣಿಕ ಚಿತ್ರದಲ್ಲಿ ನನ್ನ ಪಾತ್ರದ ಅಭಿನಯ ಮಾಡಿದ್ದೇನೆ ಅಷ್ಟೇ ಹೊರತು ಮತ್ತೇನು‌ ನನಗೆ ಗೊತ್ತಿಲ್ಲ.
ವಿವಾದದ ಬಗ್ಗೆಯೂ ನನಗೇನು ಗೊತ್ತಿಲ್ಲ, ಶೂಟಿಂಗ್ ಗೆ ಕರೆದಿದ್ದರು ಹೋಗಿದ್ದೆ, ನನ್ನ ಪಾತ್ರದ ನಟನೆ ಮಾಡಿದ್ದೇನೆ, ಡಬ್ಬಿಂಗ್ ಮಾಡಲು ಕರದಾಗ ಹೋಗುತ್ತೇನೆ ಅಷ್ಟೇ.
ಎಷ್ಟು ಸಮಯದ ಶೂಟಿಂಗ್ , ಎಷ್ಟು ಸಮಯದ ಪಾತ್ರ ಅದೆಲ್ಲಾ ಗೊತ್ತಿಲ್ಲ ಎಂದ್ರು.

ದೊಡ್ಡ ದೊಡ್ಡ ನಟರ ಜೊತೆ‌ ಕೆಲಸ‌ಮಾಡಿದ್ದೇ ನನ್ನ ಪುಣ್ಯ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ದರ್ಶನ್ ಜೊತೆ ಉತ್ತಮ ಬಾಧಮ್ಯ ಇದೆ, ಅವರು ಹಿರಿಯ ನಟರು ಐವತ್ತು ಸಿನಿಮಾ ಮಾಡಿದ್ದಾರೆ ಇದೆಲ್ಲಾ‌ ಹೇಗೆ ಸೃಷ್ಟಿ ಆಯಿತೋ ಗೊತ್ತಿಲ್ಲ‌. ಬೇಕಿದ್ದರೆ ಹೋಗಿ ದರ್ಶನ್ ಅವರನ್ನು ಹಗ್ ಮಾಡಿ ಬರುತ್ತೇನೆ ಎಂದ್ರು ನಿಖಿಲ್.

ಸಿನಿಮಾ ನಿರ್ಮಾಪಕ ಮುನಿರತ್ನ ಕೂಡ ವಿವಾದವನ್ನು ತಳ್ಳಿಹಾಕಿದ್ದು ಇದಲ್ಲಾ ಗಾಂಧಿನಗರದ ಗಾಸಿಪ್ ಅಂದ್ರು.
ಕುರುಕ್ಷೇತ್ರ ಸಿನಿಮಾ ಮಹಾಭಾರತದ ಕಥೆ, ಅಭಿಮನ್ಯುಗೆ ಎಷ್ಟು‌ ಅವಕಾಶ ಕೊಡಬೇಕೋ ಕೊಡಲಾಗಿದೆ.ನಿಖಿಲ್‌ ಮೇಲೆ, ಕುಮಾರಸ್ವಾಮಿ ಮೇಲೆ ಅಭಿಮಾನ ಇದೆ ಅಂತಾ ಎರಡು ಸೀನ್ ಹೆಚ್ಚು ಮಾಡಲು‌ ಸಾಧ್ಯವಿಲ್ಲ, ಅದು ಮಹಾಭಾರತದ ಕಥೆ ಅಷ್ಟೇ.ಯಾವ ಪಾತ್ರಕ್ಕೆ ಎಷ್ಟು ಮಹತ್ವ ಕೊಡಬೇಕೋ ಕೊಟ್ಟಿದ್ದೇವೆ,ಎಲ್ಲವೂ ಮೊದಲಿದ್ದಂತೆ ಇದೆ,ಯಾವುದೇ ಬದಲಾವಣೆ ಮಾಡಿಲ್ಲ ಅಂದ್ರು.

ಗಾಲ್ಫ್ ಕೋರ್ಸ್ ಸ್ಥಳಾಂತರಕ್ಕೆ ಕೈ ಹಾಕುತ್ತಾ ಮೈತ್ರಿ ಸರಕಾರ?

ಬೆಂಗಳೂರು:ನಗರದ ಹೃದಯ ಭಾಗದಲ್ಲಿರುವ ಗಾಲ್ಫ್ ಕೋರ್ಸ್ ಅನ್ನು ಸ್ಥಳಾಂತರ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.ಹಿಂದೆ ರೇಸ್ ಕೋರ್ಸ್ ಸ್ಥಳಾಂತರದ ವಿಫಲ ಪ್ರಯತ್ನ ನಡೆದಿತ್ತು.ಇದೀಗ ಗಾಲ್ಫ್ ಕೋರ್ಸ್ ಸರದಿ.

ಕುಮಾರ ಪಾರ್ಕ್ ವ್ಯಾಪ್ತಿಯಲ್ಲಿರುವ ಗಾಲ್ಫ್ ಕೋರ್ಸ್ ಗೆ ಇದೀಗ ಸ್ಥಳಾಂತದ ಭೀತಿ ಎದುರಾಗಿದೆ.ಯಾವುದೋ ಅವ್ಯವಹಾರ ಅಥವಾ ಸ್ಥಳೀಯರಿಗೆ ತೊಂದರೆ ಆರೋಪಕ್ಕೆ ಈ ಭೀತಿ ಎದುರಿಸ್ತಾ ಇಲ್ಲ,ಗಾಲ್ಫ್ ಚಂಡು ಸಿಎಂ ಕಚೇರಿ ಆವರಣಕ್ಕೆ ಬಂದು ಬಿತ್ತು ಎನ್ನುವ ಕಾರಣಕ್ಕೆ ನಗರದ ಹೊವಲಯಕ್ಕೆ ಸ್ಥಳಾಂತರಗೊಳ್ಳುವ ಆತಂಕ‌‌‌ ಎದುರಿಸ್ತಾ ಇದೆ.

ಗಾಲ್ಫ್ ಚೆಂಡು ಕೃಷ್ಣಾ ಅಂಗಳಕ್ಕೆ ಬಿದ್ದ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಡಾ. ಜಿ ಪರಮೇಶ್ವರ್, ಗಾಲ್ಫ್ ಕಲ್ಬ್ ಮುಖ್ಯಸ್ಥರ ಜೊತೆ ಚರ್ಚೆ ಮಾಡ್ತೇವೆ ಗಾಲ್ಫ್ ಮೈದಾನದ ಸುತ್ತ ಇರುವ ರಕ್ಷಣಾ ಬಲೆ ಎತ್ತಿರಿಸಬಹುದಾ ಎಂದು ಮಾತುಕತೆ ನಡೆಸುತ್ತೇವೆ. ಸಾಧ್ಯವಾದರೆ ಗಾಲ್ಫ್ ಮೈದಾನ ಸ್ಥಳಾಂತರ ಮಾಡಬಹುದಾ ಎನ್ನುವುದರ ಕುರಿತೂ ಚರ್ಚೆ ಮಾಡ್ತೇವೆ ಎಂದ್ರು.

ವಿಧಾನಸೌಧದ ಸುತ್ತ ಹೈ ಸೆಕ್ಯುರಿಟಿ ಜೋನ್ ಎಂದು ಘೋಷಿಸಲು ಮುಂದಾಗಿದ್ದೇವೆ, ವಿಧಾನಸೌಧ,ವಿಕಾಸಸೌಧ ಲೋಕಾಯುಕ್ತ, ಸಿಎಂ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸಗಳಿಗೆ ನೂರು ಜನ ಸಿಬ್ಬಂದಿ ಇರುವ ಪ್ರತ್ಯೇಕ ರಕ್ಷಣಾ ದಳ ಸ್ಥಾಪಿಸುವುದಾಗಿ‌ ಹೇಳಿದ್ರು.

ಆಗಿದ್ದೇನು?

ಗೃಹ ಕಚೇರಿ ಕೃಷ್ಣಾದ ಒಳಗೆ ಹಾರಿ ಬಂದು ಗಾಲ್ಫ್ ಚೆಂಡು ಬಿತ್ತು.ಪಕ್ಕದ ಗಾಲ್ಫ್ ಮೈದಾನದಿಂದ ಹಾರಿ ಬಂದ ಚೆಂಡು ಪೊಲೀಸ್ ವಾಹನದ ಗಾಜು ಜಖಂಗೊಳಿಸಿತು. ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಾಹನದ ಗಾಜು ಜಖಂ ಆಯಿತು. ಅಚಾನಕ್ಕಾಗಿ ಹಾರಿ ಬಂದ ಗಾಲ್ಫ್ ಚೆಂಡಿಗೆ ಪೊಲೀಸ್ ಸಿಬ್ಬಂದಿ ಬೆಚ್ಚಿಬಿದ್ರು. ಕಾಕತಾಳೀಯ ಅಂದ್ರೆ ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಗಾಲ್ಫ್ ಚೆಂಡುಗಳು ಗೃಹ ಕಚೇರಿ ಒಳಗೆ ಬಂದು ಬೀಳ್ತಿದ್ವು ಈಗಲೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ.ಗಾಲ್ಫ್ ಚೆಂಡು ಬಂದು ಬಿದ್ದಿದೆ.

ಈ ಹಿಂದೆ ಎಚ್ಡಿಕೆ ಸಿಎಂ ಆಗಿದ್ದಾಗ ಗಾಲ್ಫ್ ಮೈದಾನದ ಸುತ್ತ ಎತ್ತರದ ರಕ್ಷಣಾ ಬಲೆ ಹಾಕಿಸುವಂತೆ ಮಾಡಿದ್ದರು.ಹಾಗಾಗಿ
ಸುಮಾರು 100 ಅಡಿ ಎತ್ತರದ ರಕ್ಷಣಾ ಬಲೆ ಹಾಕಲಾಗಿತ್ತು.ಆದರೂ ಈಗ ಗಾಲ್ಫ್ ಚೆಂಡು ಅಷ್ಟು ಎತ್ತರದ ಬಲೆ ದಾಟಿ ಮತ್ತೆ ಕೃಷ್ಣಾದೊಳಗೆ ಬಂದು ಬಿದ್ದಿದೆ.ಈಗ ಬಲೆ ಮತ್ತಷ್ಟು ಎತ್ತರಕ್ಕೆ ಹೋಗುತ್ತಾ ಇಲ್ಲ ಗಾಲ್ಫ್ ಕೋರ್ಸ್ ಸ್ಥಳಾಂತರ ಆಗುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನಯಾಗಿದೆ.

ನಾನು ವಿಷ ಕುಡಿದು ಜನರಿಗೆ ಅಮೃತ ನೀಡುತ್ತೇನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ನಾನು ವಿಷ ಕಂಠನಾಗಲೇಬೇಕು. ಮುಖ್ಯಮಂತ್ರಿಯಾಗಿ ನಿಮಗೆ ಅಮೃತ ಕೊಟ್ಟು ನಾನು ವಿಷ ಕುಡಿಯುತ್ತೇನೆ‌ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನ ಸಚಿವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಿಮ್ಮೆಲ್ಲರ ಅಣ್ಣನೋ ತಮ್ಮನೋ ಮುಖ್ಯಮಂತ್ರಿ ಯಾಗಿದ್ದಾರೆ ಎಂದು ನೀವೆಲ್ಲಾ ಸಂತೋಷವಾಗಿದ್ದೀರಿ. ಆದರೆ, ನಾನು ಸಂತೋಷವಾಗಿಲ್ಲ ಎಂದು ವೇದಿಕೆ ಮೇಲೆ ಮಾತನಾಡುತ್ತಲೇ ಗದ್ಗಿತರಾದರು. ಬಿಜೆಪಿಯವರು ಕೊಡಗಿನ ಹುಡುಗನ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ನಾನು ಆ ಹುಡುಗನ ಮನೆಗೇ ಹೋಗುತ್ತೇನೆ. ಅವರ ಸಮಸ್ಯೆ ಕೇಳುತ್ತೇನೆ ಎಂದರು.

ನಾನು ಹೋದ ಕಡೆಯೆಲ್ಲಾ ಜನ ಸೇರುತ್ತಾರೆ. ಪ್ರೀತಿ ತೋರಿಸುತ್ತಾರೆ. ಆದರೆ, ಅದೇ ಪ್ರೀತಿಯನ್ನು ನಮ್ಮ ಪಕ್ಷದ ಮೇಲೆ, ಅಭ್ಯರ್ಥಿಗಳ ಮೇಲೆ ಏಕೆ ತೋರಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ‌. ಹಾಗೆಂದು ಜನರನ್ನು ದೋಷಿಸಲ್ಲ. ನನ್ಮ ತಂದೆ ತಾಯಿ ಮಾಡಿದ ಪೂಜೆಯ ಫಲವಾಗಿ ನನಗೆ ಮತ್ತೆ ಅಧಿಕಾರ ಸಿಕ್ಕಿದೆ. ಮುಖ್ಯಮಂತ್ರಿ ಯಾಗಿ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದರು.

ಎರಡೇ ತಿಂಗಳಲ್ಲಿ ನನ್ನ ಮೇಲೆ ಹೀಗೆ ಟೀಕೆ ಮಾಡಿದ್ರೆ ನಾನು ಯಾಕೆ ಈ ಸ್ಥಾನದಲ್ಲಿ ಮುಂದುವರಿಯಬೇಕು ಎನಿಸುತ್ತಿದೆ. ಖುರ್ಚಿ ಉಳಿಸಿಕೊಳ್ಳಲು ನನ್ನ ಸಮಯ ವ್ಯರ್ಥ ಮಾಡಲ್ಲ.ವಅಲ್ಲೆಲ್ಲೋ ಸಿದ್ದರಾಮಯ್ಯ ಏನೋ ಮಾಡಿದ್ರಂತೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿದೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಪ್ರಧಾನಿ ಹುದ್ದೆಯನ್ನೇ ಒದ್ದು ಬಂದ ದೇವೇಗೌಡರ ಮಗ ನಾನು. ಮುಖ್ಯಮಂತ್ರಿ ಗಿರಿ ಹೋಗಿ ಬಿಡುತ್ತದೆ ಎಂದು ನಾನು ಇವತ್ತು ಕಣ್ಣೀರು ಹಾಕಿಲ್ಲ. ಜನ ಅರ್ಥಮಾಡಿಕೊಳ್ಳಲಿಲ್ಲವಲ್ಲ ಎಂದು ಕಣ್ಣೀರು ಹಾಕಿದ್ದೇನೆ. ಮನಸ್ಸು ಮಾಡಿದ್ರೆ ಎರಡೇ ಗಂಟೆಯಲ್ಲಿ ಅಧಿಕಾರದಿಂದ ಕೆಳಗೆ ಇಳಿಯುತ್ತೇನೆ. ದೇವರು ಕೊಟ್ಟ ಈ ಜಾಗದಲ್ಲಿ ದೇವರು ಇಚ್ಚಿಸುವವರೆಗೆ ಇರುತ್ತೇನೆ ಎಂದು ಹೇಳಿದರು.

12 ವರ್ಷದ ಹಿಂದೆ ನಾನು ನನ್ನ ತಂದೆಗೆ ನೋವು ಕೊಟ್ಟು ಮುಖ್ಯಮಂತ್ರಿ ಯಾದಾಗ ಮಾಧ್ಯಮಗಳ ವಿರೋಧ ಇರಲಿಲ್ಲ. ಆದರೆ, ಈಗ ನಾನು ಒಂದು ವರ್ಗದ ಜನರಿಗೆ ನೋವು ಕೊಟ್ಟಿದ್ದೀನಾ. ಮುಖ್ಯಮಂತ್ರಿಯಾಗಿ ಎರಡೇ ತಿಂಗಳಲ್ಲಿ ಒಂದು ವರ್ಗದ ಆಕ್ರೋಶ ಎದುರಿಸಬೇಕಾಗಿದೆ. ನಾನು ಮಾಡಿದ ತಪ್ಪೇನು ಎಂಬುದು ನನ್ನನ್ನು ಪ್ರತಿಕ್ಷಣ ಕೊರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸಮ್ಮಿಶ್ರ ಸರ್ಕಾರದಲ್ಲಿದ್ದೇನೆ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ಮಾತನ್ನು ನಾನು ಉಳಿಸಿಕೊಳ್ಳಬೇಕು. ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದ 50,000 ರೂ ವರೆಗಿನ 8,000 ಕೋಟಿ ಬಾಕಿಯನ್ನೂ ನಾನೇ ತೀರಿಸಬೇಕಾಗಿದೆ. ನಾನು ಚಾಲೆಂಜ್ ಆಗಿ ಸ್ವೀಕರಿಸಿ ರೈತರ ಒಂದು ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದೇನೆ. ರೈತರು ಅನ್ನ ಕೊಡ್ತೀರೋ, ವಿಷ ಕೊಡ್ತೀರೋ ನೀವೇ ತೀರ್ಮಾನಿಸಿ. ನಿಮ್ಮ ತೀರ್ಮಾನದಿಂದ ನನಗೆ ನಷ್ಟವಿಲ್ಲ. ನನಗೆ ಇದು ದೇವರು ಕೊಟ್ಟ ಅಧಿಕಾರ. ಆದರೆ ಅಧಿಕಾರದಲ್ಲಿ ಇರುವವರೆಗೆ ಜನರ ಸೇವೆಯಲ್ಲಿರುತ್ತೇನೆ‌. ಇವತ್ತು ಉಡುಪಿಯಲ್ಲಿ ಮೀನುಗಾರರ ಮಹಿಳೆಯರ ಕೈಯಲ್ಲಿ ಇಂಗ್ಲೀಷ್ ಬೋರ್ಡ್ ಕೊಟ್ಟು ಪ್ರತಿಭಟನೆ ಮಾಡಿಸಿದ್ದರ ಹಿಂದೆ ಬಿಜೆಪಿಯ ಹುನ್ನಾರವಿದೆ. ಆದರೂ ನಾನು ಹೆದರಲ್ಲ. ಇನ್ನು ಹತ್ತು ಹದಿನೈದು ದಿನದಲ್ಲಿ ಮೀನುಗಾರರ ಹಳ್ಳಿಗಳಿಗೆ ತೆರಳುತ್ತೇನೆ. ಮಾಧ್ಯಮದ ಮಿತ್ರರು ನನ್ನ ಕಣ್ತರೆಸಿದ್ದಾರೆ. ನಾನು ಆ ಹೆಣ್ಣುಮಕ್ಕಳನ್ನೇ ಕೇಳುತ್ತೇನೆ. ನನ್ನ ಏಕೆ ದ್ವೇಷಿಸುತ್ತೀರಿ ಎಂದು ಕೇಳುತ್ತೇನೆ. ಬಿಜೆಪಿ ನಾಯಕರ ಕುತಂತ್ರದ ರಾಜಕಾರಣಕ್ಕೆ ಬಲಿಯಾಗಬೇಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಮಗೆ ಮೂರನೇ ಒಂದು ಭಾಗದ ನಿಗಮ ಮಂಡಳಿ ಕೊಟ್ಟಿದ್ದಾರೆ. 20-30 ನಿಗಮ ಮಂಡಳಿಗಳಲ್ಲಿ ಎಷ್ಟು ಜನರಿಗೆ ಅಂತಾ ಕೊಡಲಿ. ನಮ್ಮ ಬಳಿಗೆ ಬಂದು ಅಂಗಲಾಚಬೇಡಿ. ನಮ್ಮ ಪಕ್ಷಕ್ಕೆ ಪೂರ್ಣ ಬಹುಮತದ ಬಲ ಬಂದಾಗ ನಾನೇ ನಿಮ್ಮನ್ನು ಗುರ್ತಿಸುತ್ತೇನೆ. ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಪಕ್ಷದ ಕಚೇರಿಗೆ ಬರುತ್ತೇನೆ.
ನಮ್ಮ ನಾಡಿನ ಜನ ಖುಷಿಯಿಂದ ನನ್ನ ಕಾರ್ಯಕ್ರಮಗಳನ್ನು‌ ಒಪ್ಪಿ ಬೆಂಬಲಿಸಿದ ದಿನ ನಾನು ಅಭಿನಂದನೆ ಸ್ವೀಕರಿಸುತ್ತೇನೆ ಅಲ್ಲಿಯವರಗೆ ಅಭಿನಂದನೆ ಸ್ವೀಕರಿಸಲ್ಲ ಎಂದು ಅಭಿನಂದನೆ ನಿರಾಕರಿಸಿದರು.

ಕೆಆರ್‌ಎಸ್‌ ನಿಂದ ನದಿಗೆ ನೀರು ಬಿಡುಗಡೆ!

ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯದಲ್ಲಿ ಇಂದು ಮಧ್ಯಾಹ್ನದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ.

ಜಲಾಶಯದ ನೀರಿನ ಮಟ್ಟ 123 ಅಡಿ ಮುಟ್ಟಿರುವುದರಿಂದ ಹಾಗೂ 40,000 ಸಾವಿರಕ್ಕೂ ಹೆಚ್ಚು ಒಳ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಶನಿವಾರ ಮಧ್ಯಾಹ್ನ 1.20 ಗಂಟೆಗೆ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.

ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತಿದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರಿನ್ನು ಕಾವೇರಿ ನದಿಗೆ ಬಿಡಲಾಗಿದೆ.

ಕಾವೇರಿ ನದಿಯ ಎರಡೂ ದಂಡೆಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.