ಕುರುಕ್ಷೇತ್ರದಲ್ಲಿ ದರ್ಶನ್‌ ಮೀರಿಸುತ್ತಾರಾ ನಿಖಿಲ್?

ಬೆಂಗಳೂರು: ಕುರುಕ್ಷೇತ್ರ ಚಿತ್ರದ ಬಗ್ಗೆ ಇಡೀ ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಜನತೆ ದೊಡ್ಡ ಭರವಸೆಯನ್ನು ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ನಿರ್ಮಾಪಕ ಮುನಿರತ್ನ ಕೂಡ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಬದಲಾದ ಸಮಯದಲ್ಲಿ ಪಾತ್ರಗಳ ಪ್ರಾಮುಖ್ಯತೆ ಕೂಡ ಬದಲಾಗಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಸ್ಯಾಂಡಲ್‌ವುಡ್‌ನ ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರ. ಈ ಚಿತ್ರವನ್ನು ತಮ್ಮ 50ನೇ ಚಿತ್ರ ಎಂದು ಘೋಷಿಸಿದ್ದ ನಟ ದರ್ಶನ್ ಚಿತ್ರಕ್ಕಾಗಿ ಸಾಕಷ್ಟು ಎಫರ್ಟ್ ಹಾಕಿ ಕೆಲಸ ಮಾಡಿದ್ದರು. ನಿರ್ಮಾಪಕ ಮುನಿರತ್ನ ಕೂಡ ಚಿತ್ರದಲ್ಲಿ ದರ್ಶನ್ ಕೊಡುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾರಿಗೂ ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಮುನಿರತ್ನ ಸಂಬಂಧ ಗಟ್ಟಿಯಾಗಿದ್ದು, ನಿಖಿಲ್ ಪಾತ್ರ ವಿಸ್ತರಣೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಚಿತ್ರದ ಮೊದಲಾರ್ಧದಲ್ಲಿ ದರ್ಶನ್ ಅಬ್ಬರಿಸಿದರೆ, ದ್ವಿತೀಯಾರ್ಧದಲ್ಲಿ ನಿಖಿಲ್ ಆವರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡಿರುವ ದರ್ಶನ್ ಯಜಮಾನ ಚಿತ್ರವನ್ನು ತಮ್ಮ 50ನೇ ಚಿತ್ರ ಎಂದು ಘೋಷಿಸಲು ತಯಾರಿ ನಡೆಸಿದ್ದಾರೆ ಎಂಬುದು ಗಾಂಧಿ ನಗರದ ಲೇಟೆಸ್ಟ್ ನ್ಯೂಸ್.

ಲೋಕಸಭಾ ಚುನಾವಣೆಗೂ ಮುನ್ನ ರಾಮ ಮಂದಿರ ನಿರ್ಮಾಣ?

ಹೈದರಾಬಾದ್: ಲೋಕಸಭಾ ಚುನಾವಣೆಗೂ ಮುನ್ನವೇ ಅಯೋಧ್ಯೆಯಲ್ಲಿ ರಾಮಂಮದಿರ ನಿರ್ಮಾಣ ಆರಂಭಗೊಳ್ಳಲಿದೆ ಎನ್ನುವ ಸುಳಿವನ್ನು ಬಿಜೆಪಿ ನೀಡಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸಿನಲ್ಲಿರುವ ಬಿಜೆಪಿ ಈ ಬಾರಿ ರಾಮ ಮಂದಿರ ಜಪಿಸದೇ ನಿರ್ಮಾಣ ಕಾರ್ಯ ಆರಂಭಿಸಿ ಭಕ್ತರ ಮನಗೆಲ್ಲಿಲು ಮುಂದಾಯ್ತಾ ಅನ್ನೋ ಅನುಮಾನ ಕಾಡ್ತಾ ಇದೆ.

ದೇಶದಲ್ಲಿ ಬಿಜೆಪಿ ಸರಕಾರ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಡ್ಡಿ ನಿವಾರಣೆಯಾಯ್ತು ಎನ್ನುವ ರಾಮ ಭಕ್ತರ ನಿರೀಕ್ಷೆ ಇದೀಗ ನನಸಾಗುವ ಸುಳಿವು ಸಿಕ್ಕಿದೆ.ಶಿಯಾ ವಕ್ಫ್ ಮಂಡಳಿ ಈಗಾಗಲೇ ತಮ್ಮ ಪಾಲಿನ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಮ್ಮತಿ ನೀಡಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಿರುವುದು ಇದಕ್ಕೆ ನಿದರ್ಶನ ಎನ್ನಲಾಗಿದೆ.

ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದ್ದಾರೆ ಎನ್ನಲಾಗಿದೆ. ಈ ಇಬ್ಬರು ನಾಯರು ಶಿಯಾ ಪಂಗಡದ ಧಾರ್ಮಿಕ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಅದರ ಫಲವೇ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ತನ್ನ ಪಾಲಿನ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಸಮ್ಮತಿಸಿ ಶಿಯಾ ವಕ್ಫ್ ಮಂಡಳಿ ಅಫಿಡವಿಟ್ ಸಲ್ಲಿಕೆ ಮಾಡಿದೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಲೋಕಸಭಾ ಚುನಾವಣೆಗೂ ಮುನ್ನವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.ಹೈದರಾಬಾದ್ ನಲ್ಲಿ ಮಾತನಾಡಿದ ಶಾ ರಾಮ ಮಂದಿರ ನಿರ್ಮಾಣಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದ್ದು ಮಂದಿರ ನಿರ್ಮಾಣ ಆಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯ ಇಟ್ಟುಕೊಂಡು ಹೊರಟರೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ ಎನ್ನುವುದು ಖಚಿತವಾಗಿದೆ.ಪದೇ ಪದೇ ಮಂದಿ ನಿರ್ಮಾಣ ಭರವಸೆ ಹುಸಿಯಾದ ಹಿನ್ನಲೆಯಲ್ಲಿ ಈಗ ಮತ್ತೆ ಅದೇ ಭರವಸೆ ಫಲ ನೀಡಲ್ಲ ಎನ್ನುವ ಕಾರಣಕ್ಕೆ ಮುಂದಿರ ನಿರ್ಮಾಣ ಕಾರ್ಯ ಆರಂಭಿಸಿ ಚುನಾವಣೆ ಎದುರಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

ಮೈತ್ರಿ ಸರಕಾರದಲ್ಲಿ‌ ಸಿದ್ದರಾಮಯ್ಯ ಉತ್ತರ ಕುಮಾರ: ಈಶ್ವರಪ್ಪ

ಶಿವಮೊಗ್ಗ:ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉತ್ತರ ಕುಮಾತನಾಗಿದ್ದಾರೆ ಎಂದುಬಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಾಗೀನ ಅರ್ಪಿಸಿದರು.ಕೋರ್ಪಾಲಯ್ಯನ ಛತ್ರದ ಬಳಿ ಇರುವ ಮಂಟಪದ ಸಮೀಪ ಪತ್ನಿ ಜಯಶ್ರೀ ಹಾಗು ಮೊಮ್ಮಗನೊಂದಿಗೆ ಆಗಮಿಸಿದ‌ ಈಶ್ವರಪ್ಪ ಬಾಗೀನ ಅರ್ಪಿಸಿದರು.

ನಂತರ ಪರ್ತಕರ್ತರ ಜೊತೆ ಮಾತನಾಡಿದ ಈಶ್ವರಪ್ಪ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.ಶಕ್ತಿ ಇದ್ದರೆ ನೇರವಾಗಿ ಸಾಲಮನ್ನಾ ಮಾಡಿಸಬೇಕು,ಕಡಿತಗೊಳಿಸಿರುವ ಅಕ್ಕಿ ಕೊಡಿಸಿ, ತೈಲ ಬೆಲೆ ಇಳಿಕೆ ಸೇರಿದಂತೆ ಮುಂತಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅದು ಬಿಟ್ಟು ಪತ್ರ ಬರೆದರೆ ಹೇಗೆ ಎಂದು ಪ್ರಶ್ನಿಸಿದ್ರು.

ಸಂಪೂರ್ಣ ಸಾಲಮನ್ನಾ ಮಾಡದೆ ಈ ಸರಕಾರ ಪೇಚಿಗೆ ಸಿಲುಕಿದೆ.ಸಂಪೂರ್ಣ ಸಾಲಮನ್ನಾ ಆಗಲಿದೆ ಎನ್ನುವ ರೈತರ ನಿರೀಕ್ಷೆ ಹುಸಿಯಾಗಿದೆ.ಸಾಲಮನ್ನಾ ಮಾಡಲು ಸರಕಾರ ಪರದಾಡುತ್ತಿದೆ.ಕೇವಲ ರಾಜಕೀಯ ಚಟಕ್ಕಾಗಿ‌ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಅಷ್ಟೇ ಎಂದು ಈಶ್ವರಪ್ಪ ಟೀಕಾಪ್ರಹಾರ ನಡೆಸಿದ್ರು.

ಕೆಎಸ್ಆರ್‌ಟಿಸಿ ಬಸ್ ಪಲ್ಟಿ: ಸ್ಥಳದಲ್ಲೇ ಇಬ್ಬರು ಪ್ರಯಾಣಿಕರ ಸಾವು

ಬೆಳಗಾವಿ:ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್‌ಟಿಸಿ ಬಸ್ ಪಲ್ಟಿಯಾಗಿ‌ ಸ್ಥಳದಲ್ಲೇ ಇಬ್ಬರ ದುರ್ಮರಣಗೊಂಡ ಘಟನೆ ಬಡೆಕೊಳ್ಳ ಗ್ರಾಮದ ಸಮೀಪ ನಡೆದಿದೆ.

ಬೆಳಗಾವಿಯಿಂದ ಉಡುಪಿಗೆ ತೆರಳುತ್ತಿದ್ದ ಬಸ್ ಬೆಳಗಾವಿ ತಾಲೂಕಿನ ಬಡೆಕೊಳ್ಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಪಲ್ಟಿಯಾಗಿದೆ.ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಗಾಯಗೊಂಡ ಮೂವರು ಪ್ರಯಾಣಿಕರನ್ನು ಬಾಗೇವಾಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು
ಸ್ಥಳಕ್ಕೆ ಹಿರೆ ಬಾಗೆವಾಡಿ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದು ಬಸ್ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.ಈ ಸಂಬಂಧ ಹಿರೇಬಾಗೆವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಬೆಳಗ್ಗೆ 6.45 ಕ್ಕೆ ಘಟನೆ ನಡೆದಿದ್ದು,7.10 ಕ್ಕೆ ಮಾಹಿತಿ ಕೆಎಸ್ಆರ್‌ಟಿಸಿ ಕಚೇರಿಗೆ ತಲುಪಿದೆ.ಕೂಡಲೇ ಸ್ಥಳಕ್ಕೆ ಕೆಎಸ್ಆರ್‌ಟಿಸಿ ಬೆಳಗಾವಿ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಐಎಎಎಫ್‌ ಚಾಂಪಿಯನ್ ಶಿಪ್:ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಭಾರತದ ಹಿಮಾದಾಸ್

ಫಿನ್​ಲ್ಯಾಂಡ್: ವಿಶ್ವ ಜೂನಿಯರ್ ಚಾಂಪಿಯನ್​ಷಿಪ್​ನ ಮಹಿಳೆಯರ 400 ಮೀಟರ್ ಓಟದಲ್ಲಿ ಸ್ವರ್ಣ ಪದಕ ಗೆಲ್ಲುವ ಮೂಲಕ ಹಿಮಾ ದಾಸ್ ಹೊಸ ಇತಿಹಾಸ ಬರೆದರು.ಐಎಎಎಫ್ ವಿಶ್ವ ಅಥ್ಲೀಟ್ ಚಾಂಪಿಯನ್ ಶಿಪ್ ನಓಟದ ಸ್ಪರ್ಧೆಯಲ್ಲಿ ಸ್ವರ್ಣಗೆದ್ದ ಮೊದಲ ಭಾರತೀಯ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾದರು.

ಫಿನ್ ಲ್ಯಾಂಡ್ ನಲ್ಲಿನ ನಡೆದ ಐಎಎಎಫ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ‌ ಹಿರಿಮೆ ತಂದುಕೊಟ್ಟಿದ್ದಾರೆ.

ಮೊದಲ 350 ಮೀಟರ್​ವರೆಗೂ 4-5ನೇ ಸ್ಥಾನದಲ್ಲಿ ಇದ್ದ ಹಿಮಾದಾಸ್ ಓಟ ಮುಕ್ತಾಯಕ್ಕೆ 50 ಮೀಟರ್ ನಲ್ಲಿ ಎಲ್ಲರನ್ನೂ ಮೀರಿ ಓಡಿ 51.46 ಸೆಕೆಂಡ್​ಗಳಲ್ಲಿ 400 ಮೀಟರ್ ದೂರದ ಗುರಿಯನ್ನು‌ ಪೂರೈಸಿದರು. ಆ ಮೂಲಕ 18 ವರ್ಷದ ಹಿಮಾ ಚಿನ್ನದ ಪದಕದ ಗರಿಮೆಯನ್ನು ಮುಡಿಗೇರಿಸಿಕೊಂಡರು.

ರೊಮೇನಿಯಾದ ಆಂಡ್ರೆಸ್ ಮಿಲ್ಕೊಸ್,52.07ಸೆ ಹಾಗೂ ಅಮೆರಿಕದ ಟೇಲರ್ ಮಾನ್ಸನ್​ 52.28ಸೆ.ಗಳಲ್ಲಿ ಗುರಿ ತಲುಪಿ ನಂತರದ ಸ್ಥಾನಗಳನ್ನು ಪಡೆದುಕೊಂಡರು.

ಅಭಿನಂದನೆಗಳ ಮಹಾಪೂರ:

ಚಿನ್ನದ ಪದಕ್ಕೆ‌ಗೆದ್ದ ಹಿಮಾದಾಸ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ,ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು, ಸಚಿನ್‌ ತೆಂಡೂಲ್ಕರ್‌ ಸರಿದಂತೆ ಕ್ರೀಡಾಕ್ಷೇತ್ರದ‌ ಸಾಧಕರು,ಅಮಿಯ್ ಬಚ್ಚನ್ ಸೇರಿದಂತೆ‌ ಚಿತ್ರರಂಗದ ಗಣ್ಯರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.ಸಾಮಾಜಿಕ‌ ಜಾಲತಾಣಗಳಲ್ಲಿಯೂ‌ ಲಕ್ಷಾಂತರ ಮಂದಿ‌ ಅಭಿನಂದನಾ‌ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.

ಕೆಪಿಎಸ್‌ಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಸಾಧ್ಯವಿಲ್ಲ: ಹೈಕೋರ್ಟ್

ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಗಳನ್ನು ವಜಾಗೊಳಿಸಿದೆ.

ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಕೆಲ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಇಂದು ಅರ್ಜಿಗಳನ್ನು ವಜಾಗೊಳಿಸಿ ತೀರ್ಪು ನೀಡಿದೆ. ಇದರೊಂದಿಗೆ 2011ನೇ ಸಾಲಿನಲ್ಲಿ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ನೇಮಕಗೊಂಡಿದ್ದ 362 ಅಭ್ಯರ್ಥಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.

ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿ 8 ವರ್ಷಗಳು ಕಳೆದಿವೆ. ಪರೀಕ್ಷೆಗಳು ಮುಗಿದು ಐದೂವರೆ ವರ್ಷಗಳಾಗಿವೆ. ಇಷ್ಟು ಸಮಯದ ನಂತರ ಉತ್ತರ ಪತ್ರಿಕೆಗಳನ್ನು ಮರುಮೌಲ್ಯ ಮಾಪನಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಈ ಮಧ್ಯಂತರ ಅರ್ಜಿಗಳು ವಿಚಾರಣೆಗೆ ಅರ್ಹವಲ್ಲ ಎಂದು ತೀರ್ಪಿನಲ್ಲಿ ವಿವರಿಸಿದೆ.

ಪ್ರಕರಣದ ಸಂಬಂಧ ತನಿಖೆ ನಡೆಸಿ ಸಿಐಡಿ ನೀಡಿರುವ ಮಧ್ಯಂತರ ವರದಿ ಆಘಾತಕಾರಿಯಾಗಿದ್ದು, ಉತ್ತರಪತ್ರಿಕೆಗಳ ಮೌಲ್ಯಮಾಪನದಲ್ಲಿ ನಡೆದಿರುವ ಅಕ್ರಮಗಳು ನಾಚಿಕೆಗೇಡಿನ ವಿಷಯವಾಗಿದೆ. ಇದು ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸಾರ್ಹತೆಯನ್ನು ಅಲುಗಾಡುವಂತೆ ಮಾಡಿದೆ. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕೆಲ ವೈಯಕ್ತಿಕ ಹಿತಾಸಕ್ತಿಯುಳ್ಳವರು ಮಧ್ಯಪ್ರವೇಶಿಸಿರುವುದರಿಂದ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಕಂಡುಬರುತ್ತಿದೆ ಎಂದು ಹೈಕೊರ್ಟ್ ಅಭಿಪ್ರಾಯಪಟ್ಟಿದೆ.