ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ: ಶಾಲಾ ಕಾಲೇಜುಗಳಿಗೆ ಶನಿವಾರದವರೆಗೆ ರಜೆ ವಿಸ್ತರಣೆ

ಕೊಡಗು:ಕರಾವಳಿ ಹಾಗು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ‌ ಗಾಳಿ ಕಡಿಮೆಯಾಗದ ಕಾರಣ ಶಾಲಾ ಕಾಲೇಜುಗಳಿಗೆ ರಜೆಯನ್ನು ಮತ್ತೆರಡು ದಿನ ವಿಸ್ತರಿಸಿ ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ನದಿ ತೋರೆಗಳು‌ ತುಂಬಿ ಹರಿಯುತ್ತಿವೆ, ಕರಾವಳ ಹಾಗು ಕೊಡಗಿನಲ್ಲಿ‌ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಕೇಂದ್ರ ನೀಡಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಶನಿವಾರದವರೆಗೆ ವಿಸ್ತರಿಸಲಾಗಿದೆ.

ಈಗಾಗಲೇ ಒಂದು ಬಾರಿ ರಜೆ ವಿಸ್ತರಣೆ ಮಾಡಿದ್ದ ಜಿಲ್ಲಾಎಳಿತ ಇದೀಗ ಎರಡನೇ ಬಾರಿ ರಜೆ ವಿಸ್ತರಿಸಿದ್ದು ಶನಿವಾರದವರೆಗೆ ರಜೆ ಘೋಷಿಸಿದೆ ಹಾಗಾಗಿ ಸೋಮವಾರದವರೆಗೆ ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿರಲಿವೆ.

ವಿಧಾನಸೌಧಕ್ಕೆ ಸಧ್ಯದಲ್ಲೆ ಪಾರಂಪರಿಕ ಕಟ್ಟಡದ ಪಟ್ಟ?

ಬೆಂಗಳೂರು: ಸಚಿವರಾಗಿ ಬಂದವರು ತಮಗೆ ಸಿಗುವ ವಿಧಾನಸೌಧದ ಕೊಠಡಿಗಳ ಗೋಡೆಗಳನ್ನು ನವೀಕರಣದ ಹೆಸರಿನಲ್ಲಿ ಒಡೆಯುವುದಕ್ಕೆ ಸಧ್ಯದಲ್ಲೇ ಬ್ರೇಕ್ ಬೀಳಲಿದೆ,ವಿಧಾನಸೌಧವನ್ನು ಪಾರಂಪರಿಕ ಕಟ್ಟಡ ಅಂತಾ ಘೋಷಣೆ ಮಾಡಲು ವಿಧಾನ ಪರಿಷತ್ ಸಮ್ಮತಿ ನೀಡಿದೆ.

ವಿಧಾನ ಪರಿಷತ್ ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುವಾಗ ಹೊಸ ಸಚಿವರ ನೇಮಕ ವೇಳೆ
ವಿಧಾನಸೌಧದಲ್ಲಿ ಸಚಿವರ ಕೊಠಡಿ ನವೀಕರಣ ವಿಚಾರ ಪ್ರಸ್ತಾಪವಾಯಿತು.ಬೇಕಾದ ಹಾಗೇ ಕೊಠಡಿ ಒಡೆಯುತ್ತಾರೆ ಅಂತ ಕಾಂಗ್ರೆಸ್ ನ ಗೋವಿಂದರಾಜ್ ಪ್ರಸ್ತಾಪ ಮಾಡಿ ವಿಧಾನಸೌಧವನ್ನು ಹೆರಿಟೇಜ್ ಬಿಲ್ಡಿಂಗ್ ಅಂತ ಘೋಷಣೆ ಮಾಡಬೇಕು ಎಂದ್ರು.

ಗೋವಿಂದರಾಜ್ ಮಾತಿಗೆ ಬೆಂಬಲ ಪಕ್ಷಾತೀತವಾಗಿ ಎಲ್ಲ ಸದಸ್ಯರು ಬೆಂಬಕ ವ್ಯಕ್ತಪಡಿಸಿದ್ರು.ಹಂಗಾಮಿ ಸಭಾಪತಿ ಹೊರಟ್ಟಿ ಕೂಡಾ ವಿಧಾನಸೌಧದ ಕಟ್ಟಡ ಘನತೆಗೆ ಧಕ್ಕೆ ತರುವ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ರು. ವಿಧಾನಸೌಧ ಕಟ್ಟಡವನ್ನು ಹೆರಿಟೇಜ್ ಬಿಲ್ಡಿಂಗ್ ಅಂತ ಘೋಷಣೆ ಮಾಡುವುದು ಅವಶ್ಯಕವಾಗಿದೆ.ಸದನದ ಸದಸ್ಯರು ಒಪ್ಪಿಕೊಂಡ್ರೆ ಈ ಬಗ್ಗೆ ಒಮ್ಮತದ ನಿರ್ಧಾರ ತಗೆದುಕೊಳ್ಳಬಹುದು ಎಂದ್ರು.ಸಭಾಪತಿ ಹೊರಟ್ಟಿ ಮಾತಿಗೆ ಎಲ್ಲ‌ ಸದಸ್ಯರು ಸಮ್ಮತಿಸಿದ್ರು.ಹೀಗಾಗಿ ಸಧ್ಯದಲ್ಲೇ ಈ ಕುರಿತು ಪ್ರಸ್ತಾವನೆ ವಿಧಾನಸಭೆಯಲ್ಲೂ ಮಂಡನೆಯಾಗಿ ಶೀಘ್ರದಲ್ಲಿ ಪಾರಂಪರಿಕ ಕಟ್ಟಡದ ಘೋಷಣೆ ಹೊರಬೀಳಲಿದೆ.

ಇದೇ ವೇಳೆ ವಿಧಾನಸೌಧದ ಶೌಚಾಲಯ ರೂಂ ನಲ್ಲಿ ಉಪಹಾರ ಗೃಹ ನಿರ್ಮಿಸಿದ ವಿಚಾರ ಪ್ರಸ್ತಾಪಿಸಿದ ಉಗ್ರಪ್ಪ
ಶೌಚಾಲಯದಲ್ಲಿ ಉಪಹಾರ ಗೃಹ ನಿರ್ಮಿಸಿದ್ದಾರೆ ಶಾಸಕರಿಗೆ ಆಸನ ನಿಗದಿಪಡಿಸಿದ್ರು ಎಲ್ಲರ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ ಇದ್ರಿಂದ ನಮಗೆ ಮಧ್ಯಾಹ್ನದ ಊಟಕ್ಕೆ ಹೋಗಲು ತೊಂದರೆಯಾಗುತ್ತಿದೆ ಎಂದ್ರು.ಶಾಸಕರ ಭವನದ ಅವ್ಯವಸ್ಥೆ ಬಗ್ಗೆಯೂ ಸದನದಲ್ಲಿ ಬೆಳಕು ಚೆಲ್ಲಿದ್ರು.

ಮೈತ್ರಿ ಸರ್ಕಾರದ ವಿರುದ್ಧ ಹೋರಾಟ: ಬಿಎಸ್ವೈ

ಬೆಂಗಳೂರು: ಮೈತ್ರಿ ಸರ್ಕಾರದ ದ್ರೋಹದ ಕೆಲಸವನ್ನು ಜನರಿಗೆ, ರೈತರಿಗೆ ತಿಳಿಸುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಹೋರಾಟ ‌ಮಾಡ್ತೇವೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತಾಡಿದ ಬಿಎಸ್ವೈ,
ಬಜೆಟ್ ‌ಮೇಲಿನ ಚರ್ಚೆ ಕುರಿತು ಎಲ್ಲರನ್ನೂ ಗೊಂದಲದಲ್ಲಿ‌ ಸಿಲುಕಿಸಿ ಸಿಎಂ ಉತ್ತರ ಕೊಟ್ಟಿದ್ದಾರೆ.ನಾವು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿಲ್ಲ.ಕರ್ನಾಟಕದ ಇತಿಹಾಸದಲ್ಲೇ ಈ ಸಿಎಂ ಬೇಜವಬ್ದಾರಿ ಉತ್ತರ ಕೊಟ್ಟಿದ್ದಾರೆ.ಇದನ್ನು ‌ನಾವು ಖಂಡಿಸುತ್ತೇವೆ ಎಂದ್ರು.

ಪೆಟ್ರೋಲ್ ಡೀಸೇಲ್ ದರ ಏರಿಕೆ ಮಾಡಿ ಅಕ್ಕಿಯ ವಿತರಣೆಯಲ್ಲಿ 2 ಕೆಜೆ ಕಡಿತ ಮಾಡಿದ್ದಾರೆ.ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದ ಸಾಲ 21 ಸಾವಿರ ಕೋಟಿಯಂತೆ..
ಅದನ್ನು 6,500 ಕೋಟಿಯನ್ನು‌ ನಾಲ್ಕು ಕಂತುಗಳಲ್ಲಿ ಕಟ್ಟುತ್ತಾರಂತೆ.ಇದರಿಂದ ರೈತನ ಖಾತೆಗೆ ಸಾಲ ಜಮಾ ಆಗದೆ ತಿಳುವಳಿಕೆ ಪತ್ರ ಕೊಡಲು ಸಾಧ್ಯಾನಾ?ಸದನದಲ್ಲಿ ಸರಿಯಾಗಿ ಸ್ಪಷ್ಟನೆ ಕೊಡದೆ ಗೊಂದಲ ಮೂಡಿಸಿ ಓಡಿ ಹೋಗಿದ್ದಾರೆ. ಸಾಲ ಮನ್ನಾದಿಂದ ಅನುಕೂಲ ಆಗಬಹುದು ಎಂದು ಕೊಂಡಿದ್ದ ರೈತರಿಗೆ ‌ಸಿಎಂ ದ್ರೋಹ ಮಾಡಿದ್ದಾರೆ‌ ಎಂದ್ರು.

ಎಸ್ಸಿ ಎಸ್ಟಿ ಸಾಲ, ಸ್ತ್ರೀಶಕ್ತಿ ಸಾಲ, ನೇಕಾರರು, ಮೀನುಗಾರರ ಸಾಲದ ಬಗ್ಗೆ ಚಕಾರ ಎತ್ತಿಲ್ಲ.ಚುನಾವಣೆಯಲ್ಲಿ ಕೊಟ್ಟ ಸುಳ್ಳು ಭರವಸೆಗಳು ಈಡೇರಿಲ್ಲ.ಈ ಸುಳ್ಳು ಭರವಸೆ ನಂಬಿ ಜನರು 37 ಸೀಟು ಕೊಟ್ರು.ಈ ರೀತಿಯ ಸುಳ್ಳು ಭರವಸೆ ಕೊಟ್ಟಿಲ್ಲ ಅಂದಿದ್ರೆ ಅವರು 20ಸೀಟು ಗೆಲ್ತಿರಲಿಲ್ಲ ಅಧಿವೇಶನ ಮುಗಿಸಿದ ನಂತರ ಈ ಬಗ್ಗೆ ಅಂಕಿ ಅಂಶಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದ್ರು.

ನೆರೆ ಹಾನಿಗೆ ಇಲ್ಲ ಅನುದಾನ:ಕರಾವಳಿ ಭಾಗದಲ್ಲಿ ಬಿಜೆಪಿ ಪ್ರೊಟೆಸ್ಟ್

ಬೆಂಗಳೂರು: ಕರಾವಳಿಯಲ್ಲಿ ಸಂಭವಿಸಿದ ನೆರೆ ಅನಾಹುತಕ್ಕೆ ಅನುದಾನ ನೀಡುವ ಕುರಿತು ಸಿಎಂ ಯಾವುದೇ ಸ್ಪಷ್ಟನೆ ನೀಡಿಲ್ಲ ಹಾಗಾಗಿ ಸೋಮವಾರದಂದು ಬೆಂಗಳೂರು ಸೇರಿದಂತೆ ಮಂಗಳೂರು, ಕರಾವಳಿ ‌ಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ‌ಶಾಸಕ ಸುನೀಲ್ ಕುಮಾರ್ ಹೇಳಿದ್ರು.

ಬಜೆಟ್ ಮೇಲಿನ ಚರ್ಚೆ ಕುರಿತು ಸಿಎಂ ಕುಮಾರಸ್ವಾಮಿ ಉತ್ತರಕ್ಕೆ ತೀವ್ರ ಅಸಮಧಾನ ವ್ಯಕ್ಯಪಡಿಸಿದ ಸುನೀಲ್ ಕುಮಾರ್,ಕರಾವಳಿ ಕರ್ನಾಟಕದ ಬಗ್ಗೆ ಸಿಎಂ ರಿಂದ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ.ಮೀನುಗಾರ ಸಮಸ್ಯೆ ಮೀನುಗಾರ ಮಹಿಳೆಯರಿಗೆ ಸಾಲದ ಬಗ್ಗೆ ಚಕಾರ ಎತ್ತಿಲ್ಲ.ಕರಾವಳಿಯಲ್ಲಿ ಮಳೆಯಿಂದಾದ ಅನಾಹುತಗಳು ಸಂಭವಿಸಿದೆ.ಆದ್ರೆ ಇದಕ್ಕೆ ಅನುದಾನದ ಕೊಡುವ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿಲ್ಲ.ಹೀಗಾಗಿ ಸರ್ಕಾರದ ಈ ಧೋರಣೆ ವಿರುದ್ಧ ಬಿಜೆಪಿ ಹೋರಾಟ ‌ನಡೆಸಲಿದೆ ಎಂದ್ರು.

ವಿಧಾನಸಭೆಯಲ್ಲಿ ಎಚ್ಡಿಕೆ ಬಜೆಟ್ ಪಾಸ್

ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್ ಗೆ ವಿಧಾನಸಭೆ ಅನುಮೋದನೆ ನೀಡಿದರೆ.ಧ್ವನಿ ಮತದ ಮೂಲಕ ಧನ ವಿನಿಯೋಗ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿತು.

2018 -19ನೇ ಸಾಲಿನ ಧನ ವಿನಿಯೋಗ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಯಿತು.2018-19 ನೇ ಸಾಲಿನ ಆಯವ್ಯಯ ಅಂದಾಜುಗಳು ಮತ್ತು ಬೇಡಿಕೆಗಳ ವಿಧೇಯಕಕ್ಕೆ ಧ್ವನಿಮತದ ಮೂಲಕ ವಿಧಾನಸಭೆ ಅಂಗೀಕಾರ ನೀಡಿತು.ಇದರೊಂದಿಗೆ
ಕರ್ನಾಟಕ ಮೌಲ್ಯವರ್ಧಿತ ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದ್ದು,ವಿದ್ಯುಚ್ಛಕ್ತಿ ಬಳಕೆ ಅಥವಾ ಮಾರಾಟದ ಮೇಲೆ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕಕ್ಕೆ ಹಾಗು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಲಾಯ್ತು.

ಸುಸ್ತಿದಾರರ 2 ಲಕ್ಷದವರೆಗಿನ ಸಾಲದ ಜೊತೆ ಚಾಲ್ತಿ ಸಾಲಗಾರ ರೈತರ 1 ಲಕ್ಷದವರೆಗಿನ ಸಾಲಮನ್ನಾ : ಸಿಎಂ ಘೋಷಣೆ

ಬೆಂಗಳೂರು: ಸುಸ್ತಿದಾರರ 2 ಲಕ್ಷದವರೆಗೆ ಸಾಲಮನ್ನಾ ಜೊತೆಗೆ ಸಹಕಾರಿ ಬ್ಯಾಂಕ್‌ಗಳಲ್ಲಿನ 1 ಲಕ್ಷದವರೆಗೆ ಚಾಲ್ತಿ ಸಾಲವನ್ನೂ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡುವ ಮೂಲಕ ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ,ಬಜೆಟ್ ಮೇಲೆ 16ಗಂಟೆ 23 ನಿಮಿಶ ಚರ್ಚೆಯಾಗಿದೆ.ನಾನು ಪ್ರಥಮಬಾರಿಗೆ ಬಜೆಟ್ ಮಂಡಿಸಿದಾಗ,ಪ್ರತಿಪಕ್ಷದ ಶಾಸಕರೂ ಪ್ರಥಮಬಾರಿಗೆ ಮೇಜು ಕುಟ್ಟಿ ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ. ಅದಕ್ಕೆ ಅವರಿಗೆ ಅಭಿನಂದನೆಗಳು. ದೊಡ್ಡಮಟ್ಟದಲ್ಲಿ ನನ್ನ ಬಜೆಟ್ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.ಅಪ್ಪ ಮಕ್ಕಳ ಬಜೆಟ್,ಅಣ್ಣತಮ್ಮಂದಿರ ಬಜೆಟ್,ಒಂದೆರಡು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್,ಸಮಗ್ರ ರಾಜ್ಯದ ದೃಷ್ಟಿಕೋನವಿಲ್ಲದ ಬಜೆಟ್ ಎಂಬೆಲ್ಲಾ ಟೀಕೆಗಳು ವ್ಯಕ್ತವಾಗಿವೆ.ಚುನಾವಣೆಗೆ ಮುನ್ನ ನಮ್ಮ‌ ಪ್ರಣಾಳಿಕೆಯಲ್ಲಿ ಸಾಲ ಮನ್ನಾ,ವೃದ್ದಾಪ್ಯ ವೇತನ,ಹೆಣ್ಣುಮಕ್ಕಳಿಗೆ ನೆರವು ಮೊದಲಾದ ವಿಷಯಗಳು ವ್ಯಕ್ತವಾಗಿವೆ.ಅದನ್ನೇ ಪ್ರಮುಖವಾಗಿ ಉಲ್ಲೇಖಿಸಿ ಮೋಸ ಮೋಸ ಎಂದಿದ್ದಾರೆ.ವಿರೋಧಪಕ್ಷ ನಾಯಕರಂತೂ ಜನರಿಗೆ ದ್ರೋಹ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ ಎಂದ್ರು.

ನಾನು ಜಾರಿಗೊಳಿಸಲು ಸಾಧ್ಯವೇ ಇಲ್ಲದ ಯೋಜನೆಗಳನ್ನು ಕೊಡಲು ಹೋಗಿಲ್ಲ.ಎರಡೇ ಪಕ್ಷ ಇದ್ದ ಬಿಜೆಪಿಗೇ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದಾರೆ.ಹಾಗಾಗಿ ನನಗೂ ಒಂದುಬಾರಿ ಅವಕಾಶ ಕೊಡಬಹುದು ಎಂಬ ಆಶಾಭಾವನೆ ಇಟ್ಟುಕೊಂಡಿದ್ದೆ.ರಾಜಕೀಯ ನಿಂತಿರೋದೆ ಆಶಾಭಾವನೆ ಮೇಲೆ. ಜನತೆಯ ಭಾವನೆಗಳಿಗೆ ಸ್ಪಂದಿಸಬೇಕು.ಜನತೆಯ ಭಾವನೆಗಳಿಗೆ ತಕ್ಕಂತೆ ಸರ್ಕಾರ ಕೆಲಸ ಮಾಡಬೇಕು.ಅದಕ್ಕೆ ವಿರೋಧ ಪಕ್ಷದವರೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು.ಸಹಕಾರ ಸಂಘಗಳಲ್ಲಿ 145 ಕೋಟಿ ರೂ ಸುಸ್ತಿ ಸಾಲ ಇದೆ ಎಂಬುದು ನನಗಿರುವ ಮಾಹಿತಿ.ಸಾಲ ಮನ್ನಾದಿಂದ ಒಕ್ಕಲಿಗಸಮುದಾಯಕ್ಕೆ ಶೇ.32ರಷ್ಟು ಅನುಕೂಲವಾಗಿದೆ ಎಂಬ ವರದಿಗಳು ಬಂದಿವೆ.ಈ ಮಾಹಿತಿ ಎಲ್ಲಿಂದ ಬಂತು.ಚುನಾವಣೆ ಸಂದರ್ಭದಲ್ಲಿ ಯಾವ ಯಾವ ಸಮುದಾಯಕ್ಕೆ ಎಷ್ಟೆಷ್ಟು ಸ್ಥಾನ ಬರಬಹುದು ಎಂದೂ ಬಂದ ಸಮೀಕ್ಷಾ ವರದಿಯನ್ನೇ ಆಧಾರವಾಗಿಟ್ಟುಕೊಂಡು ಅದನ್ನೇ ಸಾಲ ಮನ್ನಾಗೆ ಲಿಂಕ್ ಮಾಡಿ ಮಾಧ್ಯಮಗಳಲ್ಲಿ ಚರ್ಚೆ ಮಾಡಲಾಗಿದೆ‌ ಎಂದ್ರು.

ನಾನು 34 ಸಾವಿರ ಕೋಟಿ ಸಾಲ ಮನ್ನಾ ಘೋಷಣೆ ಮಾಡಿ ಮಾತಿಗೆ ತಪ್ಪಿದ್ರೆ ಜನ ಸುಮ್ಮನೆ ಬಿಡ್ತಾರಾ?ಸಾಲ ಮನ್ನಾ ವಿಷಯದಲ್ಲಿ ಸಹಕಾರ ನೀಡಿದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪ್ರಮುಖರನ್ನು ಅಭಿನಂದಿಸುತ್ತೇನೆ.ಅವರೊಂದಿಗೆ ಚರ್ಚಿಸಿದ ನಂತರವೇ ಈ ಸಾಹಸಕ್ಕೆ ಇಳಿದಿದ್ದೇನೆ.ಅವರ ಸಹಕಾರದೊಂದಿಗೇ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗುತ್ತೆ.
ರೈತರದ್ದುರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 48,093 ಕೋಟಿ ಸಾಲ ಇದೆ.ಸಾಲ ಮನ್ನಾದಿಂದ ಬೆಳಗಾವಿ ವಿಭಾಗಕ್ಕೆ 9501 ಕೋಟಿ ಕಲ್ಬುರ್ಗಿ 5563 ಕೋಟಿ ಮೈಸೂರು -6760 ಕೋಟಿ ಬೆಂಗಳೂರು- 6300 ಕೋಟಿ ಸೇರಿ ಒಟ್ಟು 21,000 ಕೋಟಿ ರೂ ಅನುಕೂಲವಾಗುತ್ತದೆ.ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಸಾಲ ಬಾಕಿ 10125 ಕೋಟಿ ಹಾಗೂ ಸಹಕಾರ ಬ್ಯಾಂಕ್ ಗಳಲ್ಲಿ 10723 ಕೋಟಿ ಸಾಲ ಬಾಕಿ ಇದೆ.ಈಗ 22 ಲಕ್ಷ ಜನರ 25,000 ರೂ ವರೆಗಿನ ಸಾಲ ಮನ್ನಾ ಮಾಡಲು ಮುಂದಾದ್ರೂ ಸರ್ಕಾರಕ್ಕೆ 5000 ಕೋಟಿ ರೂ ಹೆಚ್ಚಿನ ಹೊರೆಯಾಗುತ್ತೆ.ಸಾಲ ಮನ್ನಾದಿಂದ ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಅನುಕೂಲ ಕೊಡಗು ಜಿಲ್ಲೆಗೆ ಕಡಿಮೆ ಅನುಕೂಲವಾಗುತ್ತೆ.ಸಾಲ ಮನ್ನಾದ ಹಣವನ್ನು ನಾಲ್ಕು ಕಂತುಗಳಲ್ಲಿ ಸರ್ಕಾರ ಮರುಪಾವತಿ ಮಾಡಲು ಬ್ಯಾಂಕ್ ಗಳ ಆಡಳಿತ ಮಂಡಳಿಗಳನ್ನು ಒಪ್ಪಿಸಿದ್ದೇನೆ‌.ಅವರು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡುತ್ತಾರೆ ಎಂದ್ರು.

ಈ ವೇಳೆ ಮಧ್ಯ‌ ಪ್ರವೇಶಿಸಿದ ಯಡಿಯೂರಪ್ಪ,ಸಾಲ ಮರುಪಾವತಿ ಮಾಡದ ಹೊರತೂ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಋಣಮುಕ್ತ ಪ್ರಮಾಣ ಪತ್ರ ನೀಡುವುದಿಲ್ಲ.ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ 6500 ಕೋಟಿ ರೂ ಸಾಲವನ್ನು ನಾಲ್ಕು ಕಂತುಗಳಲ್ಲಿ ಪಾವತಿಸುತ್ತೇವೆ.ಅವರು ಮೊದಲೇ ಋಣಮುಕ್ತ ಪ್ರಮಾಣ ಪತ್ರ ವಿತರಿಸುತ್ತಾರೆ ಎಂದರೆ ಅತ್ಯಂತ ಆಶ್ಚರ್ಯವಾಗುತ್ತದೆ.

ಸ್ಪೀಕರ್ ರಮೇಶ್ ಕುಮಾರ್ ಮದ್ಯ ಪ್ರವೇಶಿಸಿ ಯಾವುದೇ ಬ್ಯಾಂಕ್ ಕೊಟ್ಟ ಮಾತಿಗೆ ತಕ್ಕಂತೆ ನಡೆಯದೇ ಇದ್ದಲ್ಲಿ ಆಗ ಮುಖ್ಯಮಂತ್ರಿಗಳನ್ನು ಹೊಣೆಗಾರರಾಗಿ ಮಾಡಬಹುದು.ಈಗ ರೈತರ ಸಾಲ ಮನ್ನಾಗೆ ಒಂದು ಪ್ರಯತ್ನ ಮಾಡಿದ್ದಾರೆ. ಹೇಗಾದರೂ ಮಾಡಲಿ ಆದರೆ ಸಾಲ ಮನ್ನಾ ಆಗಲಿ ಎಂದ್ರು.

ನಂತ್ರ ಮಾತು ಮುಂದುವರೆಸಿದ ಸಿಎಂ,ಇದೇ ಸ್ಕೀಂ ಮಾದರಿಯಲ್ಲೇ ಉತ್ತರ ಪ್ರದೇಶ ,ಮಹಾರಾಷ್ಟ್ರ, ತೆಲಂಗಾಣ,ಆಂದ್ರಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡಲಾಗಿದೆ.ಆ ರಾಜ್ಯಗಳ ಸರ್ಕಾರಗಳು ಯಾವುವೂ ಕೂಡ ಬ್ಯಾಂಕ್ ಗಳಿಗೆ ಒಮ್ಮೆಲೆ ಪೂರ್ಣ ಹಣ ಪಾವತಿ ಮಾಡಿಲ್ಲ.ನಾನು ಇಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಸಾಲ ಮನ್ನಾಗೆ ಮುಂದಾದರೆ ನಮ್ಮನ್ನು ಅಭಿನಂದಿಸೋದು ಬಿಟ್ಟು ಟೀಕೆ ಮಾಡೋದು ನ್ಯಾಯವೇ ಎಂದ್ರು.

ನಂತರ ಸಹಕಾರ ಸಂಘಗಳಲ್ಲಿನ ರೈತರ ಒಂದು ಲಕ್ಷ ರೂ ವರೆಗಿನ 10734 ಕೋಟಿ ರೂ. ಚಾಲ್ತಿ ಸಾಲ‌ ಮನ್ನಾ ಮಾಡಲು ನಿರ್ಧರಿಸಿದ್ದೇವೆ.ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಸಿಎಂ ಘೋಷಣೆ ಮಾಡಿದ್ರು.ಜೊತೆಗೆ ಅನ್ನಭಾಗ್ಯದ ಯೋಜನೆಯಡಿ ಏಳು ಕೆಜಿ ಅಕ್ಕಿ ವಿತರಣೆ ಮುಂದುವರೆಸುವುದಾಗಿ ಪ್ರಕಟಿಸಿದ್ರು.

ಎಚ್.ಡಿ.ಕುಮಾರಸ್ವಾಮಿ ಮಾತು ಮುಂದುವರೆಸಿ ಹಾಸನಕ್ಕೆ ನೀಡಿದ ಅನುದಾನದ ಟೀಕೆಗೆ ತಿರಿಗೇಟು ನೀಡಿದ್ರು.ಕಳೆದ 25-30 ವರ್ಷಗಳಿಂದ ಮಂಡ್ಯ ನಗರ ಹೇಗಿತ್ತೋ ಹಾಗೇ ಇದೆ.ಆ ಜಿಲ್ಲೆ ಅಭಿವೃದ್ಧಿ ಗೆ 50 ಕೋಟಿ ಕೊಟ್ಟಿದ್ದು ತಪ್ಪೇ.ಹಾಸನ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 150 ಕೋಟಿ ರೂ ಮಂಜೂರು ಮಾಡಿದ್ದು ಯಡಿಯೂರಪ್ಪ ಸರ್ಕಾರ.ನಂತರ ಅದು ರದ್ದಾಗಿತ್ತು.ಈಗ ಹಾಸನದಲ್ಲಿ ಬಿಜೆಪಿ ಶಾಸಕರೇ ಇದ್ದಾರೆ ಹೊರ ವರ್ತುಲ ರಸ್ತೆಗೆ 30 ಕೋಟಿ ರೂ ಕೊಟ್ಟರೆ ಆಕ್ಷೇಪವೇಕೆ ಬೇಡ ಅಂದ್ರೆ ಬಿಡಿ ಎಂದ್ರು.

ಆಗ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಯಾಕೆ ಕುಮಾರಸ್ವಾಮಿಯವರು ತಮ್ಮನ್ನು ಕರ್ಣನಿಗೆ ಹೋಲಿಸಿಕೊಂಡ್ರು ಅಂತಾ ಅರ್ಥವಾಯ್ತು ನೋಡಿ. ಹಾಸನದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ 30 ಕೋಟಿ ಕೊಟ್ಟಿದ್ದಾರೆ‌ ಅವರು ಆಧುನಿಕ ಕರ್ಣ ಎಂದ್ರು.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ಮುಂದುವರೆಸಿದ ಸಿಎಂ, ಶ್ರೀರಾಮುಲು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದಾರೆ.ಆದರೆ ಸಮಗ್ರ‌ಕರ್ನಾಟಕದ ಅಭಿವೃದ್ಧಿ ನಮ್ಮ ಗುರಿ.ಉತ್ತರ ಕರ್ನಾಟಕ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಆಗದೇ ಇದ್ರೆ ಅದಕ್ಕೆ ನಾನು ಕಾರಣವೇ ಎಂದ್ರು.ಆಗ ಮತ್ತೆ ಮಾತಾಡಿದ ಸ್ಪೀಕರ್ ಹಿಂದೆ ಹೈದ್ರಾಬಾದ್ ಕರ್ನಾಟಕ ಬಳ್ಳಾರಿ ಭಾಗ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು ಎಂದ್ರು.ಹಾಗಾದ್ರೆ ಅವರನ್ನು ಮದ್ರಾಸ್ ಪ್ರಾಂತ್ಯಕ್ಕೆ ಕಳಿಸೋಣವೇ ಎಂದು ಸಿಎಂ ಕಾಲೆಳೆದ್ರು.
ಬೇಡ ಅವರು ಇಲ್ಲಿಗೆ ಬೇಕು.ಇಲ್ಲೇ ಇರಬೇಕೆಂದು ಸ್ಪೀಕರ್ ಸ್ಪಷ್ಟನೆ ನೀಡಿದ್ರು.