ಉಭಯ ಸದನ ಸದಸ್ಯರಿಗೆ ಸಿಎಂ ಭೋಜನ ಕೂಟ: ಬಿಎಸ್ ವೈ, ಸಿದ್ದು ಭಾಗಿ

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಧ್ಯಾಹ್ನ ಉಭಯ ಸದನಗಳ ಶಾಸಕರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೋಜನ ಕೂಟವನ್ನು ಏರ್ಪಡಿಸಿದ್ದರು.

‌ಸಿಎಂ ಕುಮಾರಸ್ವಾಮಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. ಸ್ಪೀಕರ್ ರಮೇಶ್ ಕುಮಾರ್, ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು ಭೋಜನಕೂಟದಲ್ಲಿ ಭಾಗವಹಿಸಿದ್ದರು.

ಸಿದ್ದು, ಬಿಎಸ್ವೈ ಬರಮಾಡಿಕೊಂಡ ಸಿಎಂ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವರೆಗೂ ಬ್ಯಾಕ್ವೆಂಟ್ ಹಾಲ್ ದ್ವಾರದ ಮುಂದೆ ನಿಂತಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಬಂದ ಬಳಿಕ ಕೈ ಹಿಡಿದು ಟೇಬಲ್ ಬಳಿ ಹತ್ತಿರ ಕರೆದುಕೊಂಡು ಹೋದರು.

ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸ್ವಲ್ಪ ತಡವಾಗಿ ಭೋಜನ ಕೂಟಕ್ಕೆ ಆಗಮಿಸಿದರು.‌ ಸಿದ್ದರಾಮಯ್ಯ ಜೊತೆ ಊಟ ಮಾಡುತ್ತಿದ್ದ ಕುಮಾರಸ್ವಾಮಿ ಅರ್ಧಕ್ಕೆ ಊಟ ಬಿಟ್ಟು ಬಂದು ಬಿ.ಎಸ್.ಯಡಿಯೂರಪ್ಪರನ್ನು ಬರಮಾಡಿಕೊಂಡರು. ಬಳಿಕ ತಾವು ಕೂತಿದ್ದ ಸೀಟಿನಲ್ಲೇ ಯಡಿಯೂರಪ್ಪರನ್ನು ಕೂರಿಸಿದರು.

ಯಡಿಯೂರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ರಮೇಶ್ ಕುಮಾರ್ ಜತೆ ಕೂತು ಭೋಜನ ಸ್ವೀಕರಿಸಿದರು. ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಯು.ಟಿ.ಖಾದರ್, ಜಮೀರ್ ಅಹಮ್ಮದ್ ಖಾನ್, ಎನ್.ಮಹೇಶ್, ಎಚ್.ಕೆ.ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ರಾಜ್ಯ ವಿವಿಗಳಲ್ಲಿ ಏಕರೂಪ ಪಠ್ಯ, ಖಾಲಿ ಹುದ್ದೆಗಳ ಭರ್ತಿ : ಸಚಿವ ಜಿ.ಟಿ.ದೇವೇಗೌಡ

ಬೆಂಗಳೂರು:ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿ ಹಾಗು ಖಾಲಿ ಹುದ್ದೆಗಳ ಭರ್ತಿಗೆ ಆದಷ್ಟು ಬೇಗ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಪರಿಷತ್‍ಗೆ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಆರ್.ಪ್ರಸನ್ನಕುಮಾರ್ ಅವರ ಪರವಾಗಿ ಐವಾನ್ ಡಿಸೋಜಾ ಅವರು ಕೇಳಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಸಗಿ ವಿವಿಗಳನ್ನು ಹೊರತುಪಡಿಸಿ ರಾಜ್ಯದ 19 ವಿವಿಗಳಲ್ಲಿ ರಾಜ್ಯಪಾಲರ ಅನುಮೋದನೆಯೊಂದಿಗೆ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಏಕರೂಪ ಪಠ್ಯಕ್ರಮ ಜಾರಿಗೆ ತರುವ ಪ್ರಸ್ತಾವನೆ ಪರಿಶೀಲನೆಯಲ್ಲಿರುವುದಿಲ್ಲ. ಆದರೆ ಬೇರೆ ಬೇರೆ ಸಿಲಬಸ್‍ನಿಂದ ವಿದ್ಯಾರ್ಥಿಗಳೀಗೆ ತೊಂದರೆಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಪದವೀಧರ ಕ್ಷೇತ್ರದ ಆಯ್ಕೆಯಾದ ಸದಸ್ಯರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾನಿಲಯಗಳಲ್ಲಿ ಮಂಜೂರಾದ 3934 ಬೋಧಕ ಸಿಬ್ಬಂದಿಯಲ್ಲಿ 1799 ಹುದ್ದೆಗಳುಖಾಲಿ ಇವೆ. ಅದೇ ರೀತಿ 7838 ಮಂಜೂರಾದ ಬೋಧಕೇತರ ಹುದ್ದೆಗಳ ಪೈಕಿ 4202 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಮಾರ್ಗಸೂಚಿ ಅನುಸಾರ ಆಯಾ ವಿವಿಗಳಲ್ಲಿ ನಿಯಮ ರಚಿಸಿ ರಾಜ್ಯಪಾಲರ ಅನುಮೋದನೆ ಪಡೆದು ಪಿಎಚ್‍ಡಿ ನಿಯಮಗಳಿಗನುಸಾರ ವಿವಿಧ ವಿಷಯಗಳಲ್ಲಿನ ಪಿಎಚ್‍ಡಿ ಪದವಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ವಿವಿ ಧನಸಹಾಯ ಆಯೋಗದ ಮಾನ್ಯತೆ ಇರುವ ವಿವಿಗಳಿಂದ ಪಡೆದ ಸ್ನಾತಕೋತ್ತರ ಪದವಿಯಲ್ಲಿ ಶೇ.55ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದವರು ಪಿಎಚ್‍ಡಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಸ್ಸಿ-ಎಸ್ಟಿ ಮತ್ತು ವಿಕಲಚೇತನರು ಶೇ.50 ಅಂಕಗಳನ್ನು ಪಡೆದಿರಬೇಕು ಎಂದು ಹೇಳಿದರು.

ವಿಧಾನಸಭೆ ಅಧಿವೇಶನ ಮುಂದುವರಿಕೆ: ತಲೆಕೆಳಗಾದ ರೇವಣ್ಣ ಅಮವಾಸ್ಯೆ ಲೆಕ್ಕಾಚಾರ!

ಬೆಂಗಳೂರು: ಇಂದು ಮುಕ್ತಾಯಗೊಳ್ಳ ಬೇಕಿದ್ದ ವಿಧಾನಸಭೆಯ ಮಳೆಗಾಲದ ಅಧಿವೇಶನ ಒಂದು ದಿನ ವಿಸ್ತರವಾಗಿದೆ. ಅಧಿವೇಶನ ನಾಳೆಯೂ ನಡೆಯಲಿದ್ದು, ಇಂದಿರಾ ಕ್ಯಾಂಟೀನ್ ಅವ್ಯವಹಾರ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.

ವಿಧಾನಸಭೆ ಕಲಾಪ ಒಂದು ದಿನ ಮುಂದುವರಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಸಭೆಯ ಬಳಿಕ ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಪ್ರಕಟಿಸಿದರು.

ಇಂದು ಮಧ್ಯಾಹ್ನದವರಗೆ ಬಜೆಟ್ ಮೇಲಿನ ಚರ್ಚೆ ಮುಂದುವರೆಯುತ್ತದೆ. ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಯವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾರೆ. ನಾಳೆ ಬಾಕಿ ಉಳಿದಿರುವ ಗಮನ ಸೆಳೆಯುವ ಸೂಚನೆಗಳ ಮಂಡನೆಗೆ ಅವಕಾಶ ನೀಡಲಾಗಿದೆ.

ಇವತ್ತಿಗೆ ಮಗಿಯಬೇಕಿದ್ದ ಅಧಿವೇಶನ ವಿಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ನಾಳೆಯೂ ಮುಂದುವರೆಯಲಿದೆ. ಶುಕ್ರವಾರ ಅಮವಾಸ್ಯೆ ಹಿನ್ನಲೆಯಲ್ಲಿ  ಸದನದ ಕಲಾಪ ನಡೆಯ ಬಾರದು, ಇಂದೇ ಬಜೆಟ್‌ ಚರ್ಚೆಗೆ ಉತ್ತರ ನೀಡಿ ಕಲಾಪ ಅಂತ್ಯಗೊಳಿಸಲು ಸಚಿವ ಎಚ್‌.ಡಿ.ರೇವಣ್ಣ ಅವರು ಮುಂದಾಗಿದ್ದರು. ಆದರೆ ಅವರ ಲೆಕ್ಕಾಚಾರವನ್ನು ಬಿಜೆಪಿ ತಲೆಕೆಳಗೆ ಮಾಡಿದೆ ಎಂದು ತಿಳಿದು ಬಂದಿದೆ.

ಕೆಎಂಎಫ್‌ನಲ್ಲಿ ಏನಾಗ್ತಿದೆ ಗೊತ್ತಾ?

ಬೆಂಗಳೂರು: ಕೆಎಂಎಫ್ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ. ವರ್ಷಕ್ಕೆ 96 ಲಕ್ಷ ರೂಪಾಯಿ ವೇತನ ನೀಡಿ ಕನ್ಸಲ್ಟೆಂಟ್ ನೇಮಕ ಮಾಡಿಕೊಳ್ಳಲಾಗಿದೆ. ಅದರಲ್ಲೂ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೊತ್ಸಾಹ ಧನ ಘೋಷಿಸಿದ ನಂತರ ಕೆಎಂಎಫ್ ನಲ್ಲಿ ಲೆಕ್ಕ ಜವಾಬ್ದಾರಿಯೇ ಇಲ್ಲದಂತಾಗಿದೆ. ಸರ್ಕಾರದ ಸಬ್ಸಿಡಿ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿಯ ಮಾಧುಸ್ವಾಮಿ ಆರೋಪಿಸಿದರು.

ಕೆಎಂಎಫ್ ಅಕ್ರಮಗಳ ಬಗ್ಗೆ ಬಿಜೆಪಿಯ ಮಾಧುಸ್ವಾಮಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ನೂತನ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಜೆಟ್ ಮೇಲಿನ ಚರ್ಚೆಯಲ್ಲಿ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಹಾಲು ಉತ್ಪಾದಕರಿಗೆ ಕೊಡುತ್ತಿರುವ ಐದು ರೂಪಾಯಿ ಸಬ್ಸಿಡಿಯಲ್ಲ. ಅದು ಪ್ರೋತ್ಸಾಹ ಧನ. ಇದರಿಂದ ಹಾಲು ಉತ್ಪಾದನೆ ಪ್ರಮಾಣ 75ಲಕ್ಷ ಲೀಟರ್‌ಗೆ ಹೆಚ್ಚಳವಾಗಿದೆ. ರೈತರ ಉತ್ಪಾದನೆಗೆ ಸರಿಯಾದ ದರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಾಗೆಂದು ಕೆಎಂಎಫ್ ನಲ್ಲಿ ಎಲ್ಲವೂ ಸರಿಯಿಲ್ಲ. ಕೆಎಂಎಫ್ ನಷ್ಟದಲ್ಲಿದ್ದು, ನಷ್ಟ ಸರಿದೂಗಿಸಲು ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ನಾಲ್ಕು ದಿನ ಉಚಿತ ಹಾಲು ವಿತರಣೆ ಯೋಜನೆ ಆರಂಭಿಸಲಾಯ್ತು ಎಂದರು.

ಬಿಜೆಪಿಯ ಸೋಮಶೇಖರ ರೆಡ್ಡಿ ಮಾತನಾಡಿ, ಕೆಎಂಎಫ್ ನ ಹಾಲು ಉತ್ಪಾದಕರ ಸಬ್ಸಿಡಿ ಹಣ ದುರುಪಯೋಗವಾಗಿಲ್ಲ. ಮಧ್ಯವರ್ತಿಗಳ ಪಾಲಾಗಿಲ್ಲ. ಸಬ್ಸಿಡಿ ಹಣ ನೇರವಾಗಿ ಹಾಲು ಉತ್ಪಾದಕರ ಅಕೌಂಟ್ ಗೆ ಹೋಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ರೈತರಿಗೆ ಕೊಡುತ್ತಿರುವ ಹಣವನ್ನು ಸಬ್ಸಿಡಿ ಎಂದು ಬಳಸಬೇಡಿ. ಅದನ್ನು ಪ್ರೋತ್ಸಾಹ ಧನ ಎಂದೇ ಪರಿಗಣಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಸಲಹೆ ನೀಡಿದರು.

ಮಾಧುಸ್ವಾಮಿ ಆರೋಪಕ್ಕೆ ಸಮರ್ಥನೆ ನೀಡಿದ ಸಚಿವ ಹೆಚ್.ಡಿ.ರೇವಣ್ಣ ಕೆಲವು ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರೇ ರೈತರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಪ್ರೋತ್ಸಾಹ ಧನ ಕಬಳಿಸುತ್ತಿರುವುದು ನಿಜ.ಇದನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದರು.

ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ: ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ

ಕೊಡಗು: ಜಿಲ್ಲೆಯಲ್ಲಿ ಭಾರೀ ಮಳೆ‌ಗಾಳಿ ಮುಂದುವರೆದ ಹಿನ್ನಲೆಯಲ್ಲಿ ಗುರುವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ನದಿ ತೋರೆಗಳು‌ ತುಂಬಿ ಹರಿಯುತ್ತಿವೆ, ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ ಹಾಗು ಪ್ರಸ್ತುತ. ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆ ಮುಂದುವರೆದಿರುವುದರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಗುರುವಾರಕ್ಕೂ ವಿಸ್ತರಿಸಲಾಗಿದೆ.

ನದಿ ತೊರೆಗಳಿಗೆ ಇಳಿದು ಈಜುವುದು,ಸ್ನಾನ ಮಾಡುವುದು,ಜಲಪಾತಗಳ ಸಮೀಪ ಹೋಗುವುದನ್ನು ಮಾಡದಂತೆ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು,ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದಾಗ ದಾಟುವ ಪ್ರಯತ್ನ ನಡೆಸಬಾರದು,ತೊರೆಗಳ ಸಮೀಪ,ಬೃಹತ್ ಬಂಡೆ,ಮರಗಳ ಕೆಳಗೆ ವಾಹನ ನಿಲ್ಲಿಸಬಾರದು ಎನ್ನುವ ಸಲಹೆ ನೀಡಿದೆ.ನದಿ ತೊರೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಸದಾ ಜಾಗೃತವಾಗಿರಬೇಕು,ಯಾವುದೇ ಅಪಾಯವಾದಲ್ಲಿ ಜಿಲ್ಲೆಯ ತುರ್ತು ಸಂಖ್ಯೆಗೆ ಕರೆ ಮಾಡಿ ಎಂದು ಸೂಚಿಸಿದೆ.

ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಎಐಸಿಸಿಗೆ ಕಿಕ್ ಬ್ಯಾಕ್: ಬಿಜೆಪಿ ಆರೋಪಕ್ಕೆ ಕೈ ಗರಂ,ಸದನ ನಾಳೆಗೆ ಮುಂದೂಡಿಕೆ!

ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ‌ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಎಐಸಿಸಿಗೆ ಕಿಕ್ ಬ್ಯಾಕ್ ಕೊಡಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ಕಲಾಪ ಬಲಿಯಾಯಿತು. ಚರ್ಚೆಗೆ ಬಿಜೆಪಿ ಪಟ್ಟು ಹಿಡಿದರೆ ಕಾಂಗ್ರೆಸ್ ನಿರಾಕರಿಸಿತು. ಇದ್ರಿಂದ ಸದನದಲ್ಲಿ‌ ಕೋಲಾಹಲವೇ ಸೃಷ್ಠಿಯಾಗಿ ಸದನವವನ್ನು ನಾಳೆಗೆ ಮುಂದೂಡಬೇಕಾಯ್ತು.

ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 150 ಕೋಟಿ ರೂ ಅವ್ಯವಹಾರ ನಡೆದಿದೆ.ಇದರಲ್ಲಿ ಎಐಸಿಗೆ 50 ಕೋಟಿ ರೂ. ಕಿಕ್ ಬ್ಯಾಕ್ ನೀಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ರಾಮದಾಸ್ ಆರೋಪಿಸಿದರು.ಈ ಸಂಬಂಧ ಸಂಪೂರ್ಣ ದಾಖಲೆಗಳಿವೆ.ಸಿಡಿ ಸಹಿತ ಬಂದಿದ್ದೇನೆ ಎಂದರು.

ಇದಕ್ಕೆ ಆಪಕ್ಷೇಪ ವ್ಯಕ್ತಪಡಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ದಾಖಲೆಗಳಿಲ್ಲದೆ ಕಾಂಗ್ರೆಸ್ ವಿರುದ್ದ ಕಿಕ್ ಬ್ಯಾಕ್ ಆರೋಪ ಮಾಡಲು ಅವಕಾಶ ಕೊಡುವುದಿಲ್ಲ.ಬಿಜೆಪಿಯವರಿಗೆ ಹೇಗೆ ಕೇಶವಕೃಪಾನೋ ಹಾಗೆ ನಮಗೆ ಎಐಸಿಸಿ ದೇವಸ್ಥಾನ.ಸುಖಾಸುಮ್ಮನೆ ಎಐಸಿಸಿಗೆ ಲಂಚ ಕೊಟ್ಟಿದ್ದಾರೆ ಎಂದು ಹೇಳಿದ್ರೆ ಕೇಳಿಕೊಂಡು ಕೂರಲು ನಾವು ತಯಾರಿಲ್ಲ.ಆರೋಪ ಮಾಡೋದೇ ಆದರೆ ನೊಟೀಸ್ ಕೊಟ್ಟು ದಾಖಲೆ ಕೊಟ್ಟು ಆರೋಪ ಮಾಡಲಿ.ಯಾರೋ ಒಬ್ಬ ಲಂಚ ಹೊಡೆದು ಬಿಜೆಪಿ ಕೇಂದ್ರ ಕಚೇರಿಗೆ ಹೋಯ್ತು ಎಂದು ಆರೋಪಿಸಿದ್ರೆ ಒಪ್ಪುತ್ತೀರಾ ಎಂದ್ರು.

ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆ ಹಾಗೂ ವ್ಯಕ್ತಿ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡುವಂತಿಲ್ಲ.ಹಾಗಾಗಿ ಆರೋಪವನ್ನು ಕಡತದಿಂದ ತೆಗೆಸಿ ಹಾಕಲು ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಮುಂದಾದ್ರು.ಇದಕ್ಕೆ ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು.ಯಾರಿಂದ ಲಂಚ ಪಡೆದ್ರು ಎಐಸಿಸಿಗೆ 50 ಕೋಟಿ ರೂ ಕಿಕ್ ಬ್ಯಾಕ್ ಹೇಗೆ ಹೋಯ್ತು ಎಂಬುದರ ಬಗ್ಗೆ ಸಂಪೂರ್ಣ ದಾಖಲೆಗಳಿವೆ.ದಾಖಲೆ ಕೊಡಲು ಸಿದ್ದ ಇರುವುದಾಗಿ ರಾಮದಾಸ್ ಪಟ್ಟು ಹಿಡಿದ್ರು.

ಈ ವೇಳೆ ಮಧ್ಯ ಪ್ರವೇಶಿಸಿದ ಕಾನೂನು ಕೃಷ್ಣಬೈರೇಗೌಡ, ಎಐಸಿಸಿ ಎಂದರೆ ಒಂದು ಸಂಸ್ಥೆ.ಅಧ್ಯಕ್ಷರು ಪದಾಧಿಕಾರಿಗಳು ಇದ್ದಾರೆ.ಹಾಗಾಗಿ ಎಐಸಿಸಿ ಮೇಲೆ ಆರೋಪ ಮಾಡಿದ್ರೆ ಅಧ್ಯಕ್ಷರ ಮೇಲೆ ಆರೋಪ ಮಾಡಿದಂತೆ.ನಿಯಮಾವಳಿ ಪ್ರಕಾರ ಅದಕ್ಕೆ ಅವಕಾಶವಿಲ್ಲ.ರಾಮದಾಸ್ ಅವರು ಸಭಾಧ್ಯಕ್ಷರ ಆದೇಶ ಉಲ್ಲಂಘನೆ ಮಾಡಿದ್ದಾರೆ.ಪೀಠಕ್ಕೆ ನೇರ ಸವಾಲು ಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದ್ರು.

ಕೃಷ್ಣಬೈರೇಗೌಡ ಹೇಳಿಕೆಗೆ ಅರವಿಂದ ಲಿಂಬಾವಳಿ ಆಕ್ಷೇಪಿಸಿದ್ರು.ರಾಮದಾಸ್ ಅವರು ಯಾವುದೇ ವ್ಯಕ್ತಿಯ ವಿರುದ್ದ ಆರೋಪಿಸಿಲ್ಲ.ಎಐಸಿಸಿ ಸಂಸ್ಥೆಯೇ ಹೊರತು ವ್ಯಕ್ತಿಯಲ್ಲ ಎಂದು‌ ರಾಮದಾಸ್ ಪರ ವಕಾಲತ್ತು ವಹಿಸಿದ್ರು.

ನಿಮ್ಮಲ್ಲಿರುವ ದಾಖಲೆಗಳನ್ನು ಕಾರ್ಯದರ್ಶಿಯವರಿಗೆ ಒಪ್ಪಿಸಿ,ನೊಟೀಸ್ ಕೊಟ್ಟು ಬಳಿಕ ಚರ್ಚೆಗೆ ಬನ್ನಿ ಎಂದು ರಾಮದಾಸ್ ಗೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಸೂಚನೆ ನೀಡಿದ್ರು.ಆದರೆ ಅದನ್ನು ಒಪ್ಪದ ರಾಮದಾಸ್ ಮೊದಲು ಚರ್ಚೆ ಆಗಲಿ,ನ್ಯಾಯಾಂಗ ತನಿಖೆಗೆ ಆದೇಶಿಸಿ.ಬಳಿಕ ನನ್ನ ಬಳಿ ಇರುವ ದಾಖಲೆಯನ್ನು ಸದನಕ್ಕೆ ಒಪ್ಪಿಸುತ್ತೇನೆ ಎಂದ್ರು.ಇದಕ್ಕೆ‌ ಅಸಮಧಾನಗೊಂಡ ಉಪ ಸಭಾಧ್ಯಕ್ಷರು ದಾಖಲೆಕೊಡಿ ಭಾಷಣ ನಿಲ್ಲಿಸಿ ಎಂದು ಆದೇಶಿಸಿದದ್ರು.ಉಪಸಭಾಧ್ಯಕ್ಷರ ಆದೇಶ ವಿರೋಧಿಸಿ ಬಿಜೆಪಿ ಸದನದಲ್ಲಿ ಧರಣಿ ಆರಂಭಿಸಿತು.ಆಡಳಿತ ವಿರೋಧ ಪಕ್ಷ ಸದಸ್ಯರ ನಡುವೆ ವಾಗ್ವಾದ ನಡಯಿತು.ಪರ ವಿರೋಧ ಘೋಷಣೆಗಳು ಮೊಳಗಿ ಕೋಲಾಹಲ ಸೃಷ್ಠಿಯಾಯಿತು.ಸದನ ಸಹಜ ಸ್ಥಿತಿಗೆ ಮರಳದ ಕಾರಣ ವಿಧಾನಸಭೆ ಕಲಾಪವನ್ನಿ ನಾಳೆ 10:30ರವರಗೆ ಮುಂದೂಡಿಕೆ ಮಾಡಲಾಯಿತು.