ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು: ಕಾರ್ಯಕರ್ತರಿಗೆ ಕಾಂಗ್ರೆಸ್ ಮುಖಂಡರ ಕರೆ!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕೇಂದ್ರದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಪಣದೊಂದಿಗೆ ಕಾಂಗ್ರೆಸ್ ಅರಮನೆ ಮೈದಾನದಲ್ಲಿ ಶಕ್ತಿ ಪ್ರದರ್ಶಿಸಿದೆ.

ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರಿಗೆ ಕಾಂಗ್ರೆಸ್ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದರೂ ಧೃತಿಗೆಡದೆ, ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಇಂದಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪಣತೊಡುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸೇರಿದಂತೆ ಪಕ್ಷದ ಹಲವು ಮುಖಂಡರು ಕಾರ್ಯಕರ್ತರಿಗೆ ಕರೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸವನ್ನು ರಾಹುಲ್ ಗಾಂಧಿ ಅವರು ಇಟ್ಟುಕೊಂಡಿದ್ದರು. ಅವರು ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಮತ್ತು ಪರಮೇಶ್ವರ ಅವರು ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದ ನಾಯಕರ ಅಪಪ್ರಚಾರದಿಂದಾಗಿ ಕಾಂಗ್ರೆಸ್ ನಿರೀಕ್ಷಿತ ಮಟ್ಟದ ಕ್ಷೇತ್ರಗಳಲ್ಲಿ ಗೆಲ್ಲಲಾಗಲಿಲ್ಲ. ಕಾಂಗ್ರೆಸ್ ನೀಡಿದ ಜನಪ್ರಿಯ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿದರು ಎಂದು ಆರೋಪಿಸಿದರು.

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ,
ಕೋಮು ಗಲಭೆಗೆ ಪ್ರಚೋದನೆ ನೀಡುವ, ಸಂವಿಧಾನವನ್ನೇ ಬದಲು‌ ಮಾಡುತ್ತೇವೆ ಎನ್ನುವ ಬಿಜೆಪಿಯನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ ಎಂದು ಹೇಳಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ನರೇಂದ್ರ ಮೋದಿ ಅವರ ಅಧಿಕಾರದಲ್ಲಿ ಭಾರತ ದೇಶ ಆತಂಕದಲ್ಲಿದೆ. ನಮ್ಮ ಪ್ರಮುಖ ಗುರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಎಂದು ಹೇಳಿದರು. ರಾಹುಲ್ ಗಾಂಧಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ನೀಡಿದ್ದಾರೆ. ಪಕ್ಷದ ತತ್ವ, ಸಿದ್ದಾಂತಗಳು ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಎಂದು ಅವರು ಸೂಚನೆ ನೀಡಿದರು.

ಪ್ರವಾಸೋದ್ಯಮ ಕೇಂದ್ರಿತ ದಸರಾ ಆಚರಣೆ:ಸಿಎಂ

ಬೆಂಗಳೂರು: ಈ ಬಾರಿ ಮೈಸೂರು ದಸರಾವನ್ನು ಪ್ರವಾಸೋದ್ಯಮ ಕೇಂದ್ರಿತವಾಗಿ ಆಚರಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೈಸೂರು ದಸರಾ ಸಿದ್ಧತೆ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪೂರಕವಾಗಿ ಮೈಸೂರು ದಸರಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಪ್ರತಿವರ್ಷದ ಕಾರ್ಯಕ್ರಮಗಳಿಗಿಂತ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅವರು ತಿಳಿಸಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜುಲೈ 20 ರಂದು ತಲಕಾವೇರಿಗೆ ಪೂಜೆ ಸಲ್ಲಿಸಿ, ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಎಸ್. ಪುಟ್ಟರಂಗಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಾ. ಜಯಮಾಲ, ಆ ಭಾಗದ ಶಾಸಕರು, ಇತರ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸದನದಲ್ಲಿ‌ ತಾಕತ್ತಿನ ಚರ್ಚೆ,ಬಿಎಸ್ವೈ ಪಟ್ಟಿಗೆ ಕಾಂಗ್ರೆಸ್ ಸುಸ್ತು:ಕಡೆಗೂ ಕೃಷ್ಣ ಸಂಧಾನ ಸಫಲ

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ತಾಕತ್ತಿನ ಪದ ಬಳಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಕೋಲಾಹಲ ಸೃಷ್ಠಿಗೆ ಕಾರಣವಾಯ್ತು,ಆಡಳಿತ ಪಕ್ಷದ ನಡೆಗೆ ವಿರೋಧ ಪಕ್ಷ ಕಲಾಪ ಬಹಿಷ್ಕರಿಸಿ ನಂತರ ಸಂಧಾನ ನಡೆಸುವ ಮೂಲಕ ಸದನವನ್ನು ಆರಂಭಿಸಬೇಕಾಯ್ತು.ಇಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕೊರತೆ ಎದ್ದು ಕಾಣ್ತು.

ಮಧ್ಯಾಹ್ನದ ಕಲಾಪದಲ್ಲಿ‌ ನಾವು ಮಂಡ್ಯ ಮೈಸೂರು ಹಾಸನ ಜಿಲ್ಲೆಗಳಿಗೆ ಕೊಟ್ಟಂತೆ ನೂರಾರು ಕೋಟಿ ಕೊಡಿ ಎಂದು ಕೇಳುತ್ತಿಲ್ಲ.ನಮ್ಮ ತಹಸಿಲ್ದಾರ್ ಕಚೇರಿಗೆ ಹೋಗೋದು ಕಷ್ಟವಾಗುತ್ತಿದೆ.ಉತ್ತರ ಕರ್ನಾಟಕದ ಹೊಸ ತಾಲೂಕುಗಳಿಗೆ ತಲಾ ಹತ್ತುಕೋಟಿ ಕೊಡಿ ಎಂದರೆ ನಿಮಗೆ ಆಗಲ್ಲ ಎಂದು ಬಿಜೆಪಿಯ ಎ.ಎಸ್.ಪಾಟೀಲ್ ನಡಹಳ್ಳಿ ಆರೋಪಿಸಿದರು. ಇದಕ್ಕೆ ಜೆಡಿಎಸ್ ನ ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿ ಉತ್ತರ ಕರ್ನಾಟಕಕ್ಕೆ ಯಾವ ವಿಷಯದಲ್ಲಿ ಅನುದಾನ ಕಡಿಮೆ ಮಾಡಲಾಗಿದೆ ಎಂದು ವಿವರಿಸಿ ಎಂದು ಸವಾಲು ಹಾಕಿದರು.ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೋರಿಸಿ ಎಂದು ನಡಹಳ್ಳಿ ಮರು ಸವಾಲು‌ ಎಸೆದ್ರು.ಗುಲ್ಬರ್ಗದಲ್ಲಿ 25 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದ್ರು.

ಅನ್ನದಾನಿ ಮಧ್ಯಪ್ರವೇಶಕ್ಕೆ ನಡಹಳ್ಳಿ ಆಕ್ಷೇಪ ವ್ಯಕ್ತಪಡಿಸಿದ್ರು.ನಡಹಳ್ಳಿ ಸಮರ್ಥನೆಗೆ ವಿರೋಧಪಕ್ಷ ನಾಯಕ ಯಡಿಯೂರಪ್ಪ ದಾವಿಸಿದ್ರು.ಆಗ ಅನ್ನದಾನಿ ಸಮರ್ಥನೆಗೆ ಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಿಂತ್ರು.ಇದರಿಂದ ಸದನದಲ್ಲಿ ಗದ್ದಲ ಶುರುವಾಗಿ ಯಡಿಯೂರಪ್ಪ,ಡಿಕೆ ಶಿವಕುಮಾರ್ ನಡುವೆ ವಾಗ್ವಾದ ನಡೀತು.

ಬೇರೆ ಶಾಸಕರು ಮಾತನಾಡುವಾಗ ಪದೇ ಪದೇ ಎದ್ದು ನಿಲ್ತಿದ್ದಾಗ ನೀವ್ಯಾಕೆ ಸುಮ್ಮನಿರಿಸಲಿಲ್ಲ, ಮಾತನಾಡಬೇಡಿ ಎಂದಿರಬೇಕಿತ್ತು ಎಂದು‌ ಡಿಕೆಶಿ ಬಿಎಸ್ವೈಗೆ ಟಾಂಗ್ ಕೊಟ್ರು.ಆಗ ಆಡಳಿತ ಪಕ್ಷದ ಸದಸ್ಯರ ಅರೋಪ‌ ಪ್ರತ್ಯಾರೋಪ ತಡೆದುಕೊಳ್ಳುವ ತಾಕತ್ತಿದೆ ಎಂದು‌ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದ್ರು.ನಡಹಳ್ಳಿ ಹೇಳಿಕೆಗೆ ಡಿಕೆಶಿ ತರಾಟೆ ತೆಗೆದುಕೊಂಡ್ರು. ನಮ್ಗೂ ತಾಕತ್ತಿದೆ ತೋರಿಸ್ತೇವೆ ಎಂದ್ರು.ಇದಕ್ಕೆ ಕೈಜೋಡಿಸಿದ ಜಮೀರ್ ಅಹಮದ್ ಖಾನ್ ಬೆಂಬಲ ನೀಡಿದ್ರು.

ಆಗ ಚುಚ್ಚಿ ಮಾತನಾಡಬಾರದು ಎಂದು ಡೆಪ್ಯುಟಿ ಸ್ಪೀಕರ್ ವಿರೋಧ ಪಕ್ಷದ ಸದಸ್ಯರಿಗೆ ಸಲಹೆ ನೀಡಿದ್ರು.ಈ ಹೇಳಿಕೆಗೆ ಕೆರಳಿದ ವಿರೋಧ ಪಕ್ಷ ಬಿಎಸ್ ಯಡಿಯೂರಪ್ಪ ನಿಮ್ಮಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಸದನದಲ್ಲಿ‌ ಗದ್ದಲವೆಬ್ಬಿಸಿದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಡಿಪಡಿಸಿದ್ರು ಸಭಾತ್ಯಾಗ ಮಾಡಿ ಸದನದಿಂದ ಹೊರನಡೆದ್ರು.

ಈ ವೇಳೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಎ.ಎಸ್.ಪಾಟೀಲ್ ನಡಹಳ್ಳಿಯವರು ಯಾವುದೇ ಸದಸ್ಯರು ಮಾತನಾಡುತ್ತಿದ್ದಾಗ ಪದೇ ಪದೇ ಮಧ್ಯಪ್ರವೇಶಿಸಿ ಅಡ್ಡಿ ಮಾಡುತ್ತಿದ್ದರು.ಅದನ್ನು ನಾವು ಪ್ರಶ್ನಿಸಿದೆವು.ಅದಕ್ಕೆ ತಾಕತ್ತಿನ ಮಾತನಾಡಿದ್ದಾರೆ.ಹಿಂದೆ ತಾಕತ್ತಿನ ಸವಾಲು ಹಾಕಿದ್ದಕ್ಕೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೇವೆ‌.ವಿರೋಧ ಪಕ್ಷದವರನ್ನು ಹೊರಗಿಟ್ಟು ಸದನ ನಡೆಸಬೇಕು ಎಂಬುದು ನಮಗೂ ಇಚ್ಛೆ ಇಲ್ಲ ಎಂದ್ರು.

ವಿರೋಧ ಪಕ್ಷದವರಿಲ್ಲದೆ ಸದನ ನಡೆಸೋದು ಸರಿಯಲ್ಲ. ಸದನವನ್ನು ಸ್ವಲ್ಪಕಾಲ ಮುಂದೂಡಿ ಎಂದು ಜೆಡಿಎಸ್ ನ ಎ.ಟಿ.ರಾಮಸ್ವಾಮಿ ನೀಡಿದ ಸಲಹೆಯನ್ನು ಮಾನ್ಯ ಮಾಡಿದ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಸದನವನ್ನು 15 ನಿಮಿಷ ಮುಂದೂಡಿದ್ರು.

ಮತ್ತೆ ಸದನ ಆರಂಭಗೊಂಡ್ರೂ ಸದನ ಕಲಾಪಕ್ಕೆ ಬಿಜೆಪಿ ಸದಸ್ಯರು ಆಗಮಿಸಲಿಲ್ಲ.ಸ್ಪೀಕರ್ ಪರವಾಗಿ ಯಡಿಯೂರಪ್ಪ ಅವರನ್ನು ಸಂಧಾನ ಸಭೆಗೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಆಹ್ವಾನಿಸಿದ್ರು.ಆದ್ರೆ ಸ್ಪೀಕರ್ ಕೊಠಡಿಗೆ ಸಂಧಾನಕ್ಕೆ ತೆರಳಲು ವಿರೋಧ ಪಕ್ಷ ನಾಯಕ ಯಡಿಯೂರಪ್ಪ ನಿರಾಕರಿಸಿದ್ರು.ಕೋರಂ ಬೆಲ್ ಆಗುವ ಮೊದಲೇ ತಮ್ಮನ್ನ ಆಹ್ವಾನಿಸಬೇಕಿತ್ತು ಎಂದು ಪಟ್ಟು ಹಿಡಿದು ಮೊಗಸಾಲೆಯಲ್ಲೇ ಕುಳಿತ್ರು.ಇದರಿಂದ ಸದನ ಪುನರಾರಂಭಗೊಂಡ್ರೂ ವಿರೋಧಪಕ್ಷ ಶಾಸಕರು ಬಾರದ ಕಾರಣ ಸದನವನ್ನು ಮತ್ತೆ ಹತ್ತು ನಿಮಿಷ ಮುಂದೂಡಲಾಯ್ತು.

ನಂತರ ಕಾನೂನು ಸಚಿವ ಕೃಷ್ಣಬೈರೇಗೌಡ ಸಂಧಾನದ ಹೊಣೆ ನಿಭಾಯಿಸಿದ್ರು.ಕೃಷ್ಣಬೈರೇಗೌಡರ ಸಂಧಾನಕ್ಕೆ‌ ಸಹಮತ ನೀಡಿದ ಯಡಿಯೂರಪ್ಪ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ರು. ಇದ್ರಿಂದ ವಿಧಾನಸಭೆ ಕಲಾಪ ಪುನರಾರಂಭಗೊಂಡಿತು.

ಸದನದಲ್ಲಿ ಮಾತನಾಡಿದ ಯಡಿಯೂರಪ್ಪ, ಎ.ಎಸ್.ಪಾಟೀಲ್ ನಡಹಳ್ಳಿ ಒಂದೇ ಒಂದು ಶಬ್ದ ಅಸಂಸದೀಯ ಪದ ಮಾತನಾಡಿದ್ರೆ ನೀವು ಅದನ್ನು ಕಡತದಿಂದ ತೆಗಿಸಿ.ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ಅವರದ್ದೇ ಶಬ್ದಗಳಲ್ಲಿ ಹೇಳುತ್ತಿದ್ದರು.ಡಿ.ಕೆ.ಶಿವಕುಮಾರ್ ರಂತಹಾ ಹಿರಿಯ ಸಚಿವರೇ ಸದನ ಕಲಾಪ ವ್ಯತ್ಯಾಸವಾಗುವಂತೆ ಮಾಡಿದ್ದು ಬೇಸರ ತಂದಿತು.ಇನ್ನು ಮುಂದೆ ಡಿ.ಕೆ.ಶಿವಕುಮಾರ್ ಹೀಗೆ ನಡೆದುಕೊಳ್ಳಬಾರದು.ನಾವೂ ಕೂಡ ಬೇರೆಯವರು ಮಾತನಾಡುವಾಗ ಅಡ್ಡಿಪಡಿಸದಂತೆ ಗಮನ ಹರಿಸುತ್ತೇವೆ.ಆದರೆ ನಾಳೆ ಇಡೀ ದಿನ ನಮ್ಮ ಸದಸ್ಯರು ಚರ್ಚೆಯಲ್ಲಿ ಭಾಗಿಯಾಗುತ್ತಾರೆ.ನಾಡಿದ್ದು ಮುಖ್ಯಮಂತ್ರಿ ಯವರು ಉತ್ತರ ಕೊಡಲಿ ಎಂಬುದು ನಮ್ಮ ಅಪೇಕ್ಷೆ‌ ಎಂದ್ರು.

ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಸಂಸದೀಯ ವ್ಯವಸ್ಥೆಯಲ್ಲಿ ಟೀಕೆ ಸಹಜ.ಆದರೆ ಅದು ಕಲಾಪದ ಶಿಸ್ತನ್ನು ಮೀರದಿರಲಿ.ಇಂದೂ ಕೂಡ ಎಷ್ಟು ಹೊತ್ತು ಆದರೂ ಸರಿ ಕಲಾಪ ನಡೆಸಲು ಸಿದ್ದರಿದ್ದೇವೆ ಎಂದ್ರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷ ಎರಡೂ ಅಗತ್ಯ.ಅವರು ಪದೇ ಪದೇ ಮಧ್ಯಪ್ರವೇಶ ಮಾಡುತ್ತಿದ್ದ ಕಾರಣ ನಾವು ಸಂಯಮ ಕಳೆದುಕೊಳ್ಳಬೇಕಾಯ್ತು ಎಂದು ಸಮಜಾಯಿಷಿ ನೀಡಿ‌ ವಿವಾದ ಗದ್ದಲ ಗೊಂದಲಕ್ಕೆ ತೆರೆ ಎಳೆದ್ರು.

ಸ್ಪೀಕರ್ ರಮೇಶ್ ಕುಮಾರ್ ಇದ್ದಿದ್ರೆ ಈ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದ್ರು,ಇಷ್ಟು ದೊಡ್ಡದಾಗಲು ಅವರು ಬಿಡುತ್ತಿರ್ಲಿಲ್ಲ ಎಂದು ಮೊಗಸಾಲೆಯಲ್ಲಿ ಸದಸ್ಯರು ಸ್ಪೀಕರ್ ಅನುಪಸ್ಥಿತಿ ಬಗ್ಗೆ ಮಾತಾಡಿಕೊಳ್ತಾ ಇದ್ರು.

ಕಾಂಗ್ರೆಸ್‌ನಲ್ಲಿ ತಣ್ಣಗಗಾದ ಭಿನ್ನಮತ: ಸಿಎಲ್‌ಪಿಯಿಂದ ದೂರ ಉಳಿದ ಶಾಸಕರು

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಶಾಸಕರ ಅಸಮಾಧಾನ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿಂದಲೂ ಅತೃಪ್ತರೂ ದೂರ ಉಳಿದಿದ್ದಾರೆ.

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಚಿವ ಸ್ಥಾನ ವಂಚಿತರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದರು. ಎಂ.ಬಿ. ಪಾಟೀಲ್ ಸೇರಿದಂತೆ ಅವರ ‌ಬಣದ ಶಾಸಕರಾದ ಸುಧಾಕರ್, ಸತೀಶ್ ಜಾರಕಿ ಹೊಳಿ, ಎಂಟಿಬಿ ನಾಗರಾಜ್ ಗೈರಾಗಿದ್ದಾರೆ.

ಅಲ್ಲದೆ ಹೆಚ್ ಕೆ ಪಾಟೀಲ್, ರಾಮಲಿಂಗಾರೆಡ್ಡಿ, ಎಂ ಕೃಷ್ಣಪ್ಪ, ಅಲ್ಪಸಂಖ್ಯಾತ ಸಮುದಾಯದ ಶಾಸಕರಾದ ತನ್ವೀರ್ ಸೇಠ್, ರೋಷನ್ ಬೇಗ್, ಹ್ಯಾರಿಸ್ ಕೂಡ ಸಭೆಗೆ ಗೈರು ಹಾಜರಾಗಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಕೆ ಜೆ ಜಾರ್ಜ್, ಪುಟ್ಟರಂಗಶೆಟ್ಟಿ, ರಾಜ್ ಶೇಖರ್ ಪಾಟೀಲ್, ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ, ಎಸ್.ಆರ್.ಪಾಟೀಲ್, ಪ್ರಿಯಾಂಕ ಖರ್ಗೆ, ಶಿವಶಂಕರ ರೆಡ್ಡಿ, ಶಾಸಕರಾದ ಭೈರತಿ ಸುರೇಶ್, ಪ್ರತಾಪ್ ಗೌಡ ಪಾಟೀಲ್ ಮುಂತಾದವರು ಹಾಜರಾಗಿದ್ದರು.

ಸಭೆ ಬಳಿಕ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಶಿಸ್ತಿನಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಶಾಸಕರಿಗೆ ಮಾರ್ಗದರ್ಶನ ಕೊಟ್ಟಿದ್ದೇವೆ. ಸದನದಲ್ಲೂ ಕೂಡ ಎಲ್ಲರೂ ಭಾಗವಹಿಸಬೇಕೆಂದು ಸೂಚನೆ ಕೊಟ್ಟಿದ್ದೇವೆ. ಸಭಾಪತಿ ಸ್ಥಾನಕ್ಕೆ ಕೂಡಲೇ ಸಭಾಪತಿ ಗಳ ನೇಮಕ ಮಾಡುವ ಬಗ್ಗೆಯೂ ತೀರ್ಮಾನ ಆಗಿದೆ ಎಂದರು.

ಮಧ್ಯಪ್ರದೇಶದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ ಬೆಳಕಿಗೆ.!

ಚಿಂದ್ವಾರ:ದೇಶದಲ್ಲಿ ಹೆಣ್ಣುಮಕ್ಕಳಿಗೆ ಪೂರಕವಾದ ವಾತಾವರಣವಿಲ್ಲ ಎಂಬ ಕೂಗು ಹೆಚ್ಚುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 14 ವರ್ಷದ ಅಪ್ರಾಪ್ತೆಯ ಮೇಲೆ ಐವರು ಅತ್ಯಾಚಾರ ಎಸಗಿರುವ ಪ್ರಕರಣ ಚಿಂದ್ವಾರದಲ್ಲಿ ನಡೆದಿದ್ದು, ಐವರು ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

14 ವರ್ಷದ ಹುಡುಗಿ ಕಳೆದ ಶುಕ್ರವಾರ ಸಂಜೆ ತನ್ನ ಮನೆಯಿಂದ ಹೊರಹೋದವಳು ರಾತ್ರಿಯಾದರೂ ವಾಪಾಸ್​ ಬರಲಿಲ್ಲ. ಇದರಿಂದ ಭಯಭೀತರಾದ ಪೋಷಕರು ಶನಿವಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ತನಿಖೆ ಆರಂಭಿಸಿದ ಪೊಲೀಸರಿಗೆ ಆ ಹುಡುಗಿ ಭಾನುವಾರ ಮಹುವಾ ತೋಲ ಎಂಬ ಪ್ರದೇಶದಲ್ಲಿ ನಿಸ್ತೇಜ ಸ್ಥಿತಿಯಲ್ಲಿ ಆಕೆ ಸಿಕ್ಕಿದ್ದಾಳೆ. ಬಳಿಕ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆಯನ್ನು ಕೊಡಿಸಿದ ಹೇಳಿಕೆ ಪಡೆದುಕೊಳ್ಳಲಾಗಿದೆ.

ಅಪ್ರಾಪ್ತ ಕೊಟ್ಟ ಹೇಳಿಕೆ ವಿವರ:

ಮನೆಯಿಂದ ಹೊರಟ ತನಗೆ ಡ್ರಾಪ್​ ನೀಡುವುದಾಗಿ ಮೋಹಿತ್​ ಭಾರದ್ವಾಜ್​ (22) ತನ್ನ ಬೈಕಿನಲ್ಲಿ ಕೂರಿಸಿಕೊಂಡ. ಅಲ್ಲಿಂದ ರಾಹುಲ್​ ಭೋಂಡೆ (24) ಎಂಬುವವರ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಇಬ್ಬರೂ ತನ್ನ ಮೇಲೆ ಅತ್ಯಾಚಾರವೆಸಗಿದರು. ಶನಿವಾರ ಬೆಳಗ್ಗೆ ಇಬ್ಬರೂ ಮನೆಯಿಂದ ಹೊರಹೋಗಲು ಬಿಟ್ಟಾಗ ತನ್ನ ಮನೆಕಡೆಗೆ ಹೋಗುತ್ತಿದ್ದಾಗ ಬಂಟಿ ಬಳವಾಯಿ (23), ಅಂಕಿತ್​ ರಘುವಂಶಿ (25) ಮತ್ತು ಅಮಿತ್​ ವಿಶ್ವಕರ್ಮ (21) ಅಡ್ಡಹಾಕಿ ಪುನಃ ಭೋಂಡೆಯ ಮನೆಗೆ ಕರೆದುಕೊಂಡುಹೋದರು. ಅಲ್ಲಿ ಎಲ್ಲರೂ ಮತ್ತೆ ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ಹೇಳಿಕೆಯಲ್ಲಿ ಘಟನೆಯ ವಿವರಣೆ ನೀಡಿದ್ದಾಳೆ.

ಐವರು ಆರೋಪಿಗಳ ವಿರುದ್ಧ ಗ್ಯಾಂಗ್​ ರೇಪ್​, ಅಪಹರಣ, ಕ್ರಿಮಿನಲ್​ ಬೆದರಿಕೆ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ನಿಯೋಜನೆ ಮಾಡಲಾಗಿದೆ.

6 ವರ್ಷಗಳ ಹಿಂದೆ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್​ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕ್ರೂರವಾಗಿ ವರ್ತಿಸಿದ್ದ ಘಟನೆಯನ್ನು ದೇಶಕ್ಕೆ ದೇಶವೇ ಖಂಡಿಸಿತ್ತು. ಆ ನಿರ್ಭಯಾ ಪ್ರಕರಣಕ್ಕೆ ನಿನ್ನೆಯಷ್ಟೇ ತೀರ್ಪು ಘೋಷಿಸಿರುವ ಸುಪ್ರೀಂಕೋರ್ಟ್​ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದೆ. ಇದರಿಂದಾಗಿ ಅತ್ಯಾಚಾರಿಗಳಿಗೆ ಕಾನೂನಿನ ಬಗ್ಗೆ ಸ್ವಲ್ಪವಾದರೂ ಭಯ ಹುಟ್ಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಿರ್ಭಯಾ ತೀರ್ಪು ಬರುವ ಹಿಂದಿನ ದಿನ ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ ತಲೆತಗ್ಗಿಸುವಂತೆ ಮಾಡಿದೆ.

ಬಿಪಿಎಲ್ ಪಡಿತರದಾರರಿಗೆ 7 ಕೆಜಿ ಅಕ್ಕಿ ವಿತರಣೆಯಲ್ಲಿ ಕಡಿತ ಬೇಡ: ಸಿಎಂಗೆ ಜಮೀರ್ ಪತ್ರ

ಬೆಂಗಳೂರು: ವಿಪಿಎಲ್ ಪಡಿತರ ಕಾರ್ಡುದಾರರಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿರುವುದನ್ನು ಮರು ಪರಿಶೀಲಿಸಿ ಬಜೆಟ್ ಮೇಲಿನ ಉತ್ತರದ ವೇಳೆ 7 ಕೆಜಿ ಅಕ್ಕಿ ವಿತರಣೆಯ ಮರು ಘೋಷಣೆ ಮಾಡುವಂತೆ ಆಹಾರ ಸಚಿವ ಜಮೀರ್ ಅಹ್ಮದ್ ಸಿಎಂ‌ ಎಚ್ಡಿಕೆಗೆ ಮನವಿ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಜಮೀರ್, ಪಡಿತರ ಕಾರ್ಡುದಾರರಿಗೆ ಈವರೆಗೆ 7 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು.ಆದರೆ ಈಗ ಬಜೆಟ್ ನಲ್ಲಿ ಈ ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಕೆ ಮಾಡಿದೆ.ಇದು ಬಡ ಪಡಿತರ ಕಾರ್ಡುದಾರಲ್ಲಿ ಆಕ್ರೋಶ ಸೃಷ್ಠಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗೋ‌ ಹೇಳಿಕೆ ಬಜೆಟ್ ನಲ್ಲಿ ನೀಡಿ ಅಕ್ಕಿ ವಿತರಣೆ ಪ್ರಮಾಣದಲ್ಲಿ ಮಾತ್ರ ಕಡಿತ ಮಾಡಿರುವುದು ಸರಿಯಲ್ಲ.ಹಾಗಾಗಿ ಬಜೆಡ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ 7 ಕೆಜೆ ಅಕ್ಕಿ ವಿತರಿಸುವ ಹೇಳಿಕೆ ನೀಡಿ ಸಮ್ಮಿಶ್ರ ಸರ್ಕಾರ ಬಡವರ ಸರ್ಕಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.