ಚಿಕ್ಕಬಳ್ಳಾಪುರ:‘ಜನರ ಸಂಕಷ್ಟದಲ್ಲಿ ಭಾಗಿಯಾಗಿ, ನೆರವು ನೀಡಿ ಅವರಿಗೆ ಶಕ್ತಿ ತುಂಬುವುದೇ ಕಾಂಗ್ರೆಸ್ ಸಿದ್ಧಾಂತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಬಾಗೇಪಲ್ಲಿಯಲ್ಲಿ ಬಡವರಿಗೆ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು,’ಸುಬ್ಬಾರೆಡ್ಡಿ ಅವರು 81 ಸಾವಿರ ಆಹಾರ ಕಿಟ್ ನೀಡಿದ್ದಾರೆ. 20 ಕೆ.ಜಿ ಅಕ್ಕಿ, ಎಣ್ಣೆ ಮತ್ತಿತರ ದಿನಸಿ ಪದಾರ್ಥ ಕೊಟ್ಟಿದ್ದಾರೆ. ಇಂತಹ ನಾಯಕರ ಜತೆ ಇದ್ದೀವಿ ಎಂದು ಹೇಳಲು ನಾನು ಮತ್ತು ಸಿದ್ದರಾಮಯ್ಯ ಅವರು ಇಲ್ಲಿಗೆ ಬಂದಿದ್ದೇವೆ. ಸರಕಾರ ನಿಮಗೆ ಏನು ಕೊಡಬೇಕಿತ್ತೋ ಅದನ್ನು ನೀಡಲಿಲ್ಲ. ತರಕಾರಿ ಬೆಳೆಗಾರರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಹೋಗುತ್ತಿರುವವರಿಗೂ ಪರಿಹಾರ ಸಿಕ್ಕಿಲ್ಲ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಈ ಸಮಯದಲ್ಲಿ ಎಲ್ಲರ ಮನೆಗೂ ಹೋಗಿ ಅವರಿಗೆ ಸಹಾಯ ಮಾಡಬೇಕು, ಸಾಂತ್ವನ ಹೇಳಬೇಕು. ಬಿಜೆಪಿಯವರು ಯಾರ ಮನೆಗೂ ಹೋಗಿಲ್ಲ, ಸಹಾಯ ಮಾಡಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಉದ್ದಗಲಕ್ಕೂ ಜನರ ಸೇವೆ ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ.ಜನರ ಮಧ್ಯೆ ಹೋಗಿ ಅವರ ಕಷ್ಟದಲ್ಲಿ ನಾವು ಇದ್ದೇವೆ ಎಂದು ಧೈರ್ಯ ತುಂಬಬೇಕು. ಇದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ಜನರ ಮನೆಗೆ ಹೋಗಿ ಅವರಿಗೆ ಬೇಕಾದ ನೆರವು ನೀಡಿ. ನಾವು ನಿಮ್ಮ ಜತೆ ಇರುತ್ತೇವೆ ಎಂದರು.
ಈಗ ಸುರಿಯುತ್ತಿರುವ ಮಳೆ ಶುಭಸೂಚಕ, ಸಮೃದ್ಧಿಯ ಸಂಕೇತ. ವರುಣನ ಆಗಮನ ಕಾಂಗ್ರೆಸ್ ನೆರವಿನ ಕಾರ್ಯ ಹಾಗೂ ಸರಕಾರದ ವಿರುದ್ಧದ ಹೋರಾಟಕ್ಕೆ ಶುಭ ಕೋರಿದೆ ಎಂದರು.
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಸರ್ಕಾರ ಸರ್ಕಾರ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ.ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಹಣದುಬ್ಬರ ಜನಸಾಮಾನ್ಯರಿಗೆ ಹೊರೆಯಾಗಿದೆ.ಇಂಧನ ತೈಲ ಬೆಲೆ ಇಳಿಸಬೇಕು, ಆಮದು ಸುಂಕ ಹಾಗೂ ಜಿಎಸ್ಟಿ ಪ್ರಮಾಣ ಕಡಿಮೆ ಮಾಡಬೇಕು ಎಂದು ಸರಕಾರಕ್ಕೆ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶ್ರೀನೇಟ್
ಸರ್ಕಾರದ ದುರಾಸೆ ಹಾಗೂ ಶೋಷಣೆಯಿಂದ ಇಂಧನ ತೈಲ ಬೆಲೆ ಏರಿಕೆ ಹೆಚ್ಚುತ್ತಿದೆ.ಅತಿಯಾದ ಆಮದು ಸುಂಕದಿಂದ ತಾಳೆ ಎಣ್ಣೆ, ಬೇಳೆ ಕಾಲುಗಳ ಬೆಲೆ ಹೆಚ್ಚಾಗಿದೆ. ಟೂತ್ ಪೇಸ್ಟ್, ಸೋಪು, ಟೀ ಯಂತಹ ದಿನಬಳಕೆ ವಸ್ತುಗಳ ಮೇಲೆ ಅತಿಯಾದ ಜಿಎಸ್ಟಿಯಿಂದ ಜನ ಸಾಮಾನ್ಯ ಸಂಕಷ್ಟಕ್ಕೆ ಸಿಲುಕಿದ್ದಾನೆ ಹಣದುಬ್ಬರ ವಿಚಾರವನ್ನು ಕಾಂಗ್ರೆಸ್ ಸಂಸತ್ ಸದನದಲ್ಲಿ ಪ್ರಸ್ತಾಪಿಸಲಿದೆ ಎಂದ್ರು.
ಎಐಸಿಸಿ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇಟ್
ಬೆಲೆ ಏರಿಕೆ ಗಾಯದ ಮೇಲೆ ಬರೆ:
ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಜನಸಾಮಾನ್ಯರು ತತ್ತರಿಸಿದ್ದು, ಈ ಮಧ್ಯೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಜನ ಭಯಾನಕ ವೈರಸ್ ಹಾಗೂ ಮೋದಿ ಸರ್ಕಾರದ ಆರ್ಥಿಕ ದುರಾಡಳಿತದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉದ್ಯೋಗ ನಷ್ಟ, ವೇತನ ಕಡಿತವಾಗಿದೆ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಣ ನೀಡಬೇಕಾದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಬೇಜವಾಬ್ದಾರಿ ತೋರುತ್ತಿದೆ ಎಂದರು.
ಬಡವಾದ ಭಾರತೀಯರು:
ಯುಪಿಎ ಸರ್ಕಾರದ ಉತ್ತಮ ಕೆಲಸದ ಮೂಲಕ ದೇಶದ 27 ಕೋಟಿ ಜನರನ್ನು ಬಡತನ ರೇಖೆಗಿಂತ ಹೊರಕ್ಕೆ ತಂದಿತ್ತು. ಆದರೆ ಬಿಜೆಪಿ ಸರ್ಕಾರದ ದುರಾಡಳಿತ ದೇಶದ 23 ಕೋಟಿ ಜನ ಬಡತನ ರೇಖೆಗಿಂತ ಕೆಳಕ್ಕೆ ದೂಡಿದೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಶೇ.97ರಷ್ಟು ಜನ ಕಡಿಮೆ ವೇತನ ಪಡೆಯುವಂತಾಗಿದೆ. ಪರಿಣಾಮ ಭಾರತೀಯರು ₹1.25 ಲಕ್ಷ ಕೋಟಿ ಕಾರ್ಮಿಕ ನಿಧಿ ಹಣ ಪಡೆಯುವಂತಾಗಿದೆ ಎಂದರು.
ಆರ್ಥಿಕ ನಿರ್ವಹಣೆ ವೈಫಲ್ಯ:
ದೇಶದ ಜಿಡಿಪಿ ಕುಸಿಯುತ್ತಿರುವಾಗ ಹಣದುಬ್ಬರ ಮಹಾಪರಾಧ. ಜನರ ಆದಾಯ ಕುಸಿಡಿರುವಾಗ ಅಗತ್ಯ ವಸ್ತುಗಳ ಮೇಲೆ ಹೆಚ್ಚು ವ್ಯಯಿಸುವಂತೆ ಮಾಡುವಂತಾಗಿದೆ. ಇದು ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ವಿಚಾರ ಮಾತ್ರವಲ್ಲ. ಅಡುಗೆ ಎಣ್ಣೆ, ಬೇಳೆ ಕಾಳುಗಳು, ಚಹಾ, ಕಾಫಿ, ಸೋಪುಗಳ ಬೆಲೆ ಕೂಡ ಹೆಚ್ಚಾಗಿವೆ.
ಇತ್ತೀಚಿನ ಹಣದುಬ್ಬರ ಸಂಖ್ಯೆ ಎಚ್ಚರಿಕೆ ಗಂಟೆಯಾಗಿದೆ. ಚಿಲ್ಲರೆ ಹಣದುಬ್ಬರವು ಆರ್ ಬಿ ಐನ ಗುರಿ ಶೇ.6ಕ್ಕಿಂತ ಹೆಚ್ಚಾಗಿದ್ದು, ಶೇ.6.3ರಷ್ಟು ತಲುಪಿದೆ. ಈ ಕೆಳಗಿನ ಪಟ್ಟಿಯಲ್ಲಿ ಹಣದುಬ್ಬರದ ಮಾಹಿತಿ ನೀಡಲಾಗಿದೆ.
ಗ್ರಾಹಕ ದರ ಸೂಚ್ಯಂಕ (CPI) ಹಣದುಬ್ಬರ: ಮೇ ನಲ್ಲಿ 5.91% ರಿಂದ ಜೂನ್ ಗೆ 6.37%ರಷ್ಟು ಹೆಚ್ಚಳ
ಮೂಲ ಹಣದುಬ್ಬರ (core inflation): 5.5% ರಿಂದ 5.8%ಕ್ಕೆ ಏರಿಕೆ
ಆಹಾರ ಹಣದುಬ್ಬರ: 5.58% ತಲುಪಿದೆ
ಬೇಳೆಗಳ ಹಣದುಬ್ಬರ: 10.01%
ರಷ್ಟಾಗಿದೆ
ಹಣ್ಣುಗಳ ಹಣದುಬ್ಬರ: 11.82%
ರಷ್ಟಾಗಿದೆ
ಸಾರಿಗೆ ಹಣದುಬ್ಬರ: 11.56% ರಷ್ಟಾಗಿದೆ
ಇಂಧನ ಹಣದುಬ್ಬರ: 12.68%ರಷ್ಟಾಗಿದೆ
ತೈಲ ಹಣದುಬ್ಬರ: 34.78%ರಷ್ಟಾಗಿದೆ.
ಇದೆಲ್ಲದರ ನಡುವೆ ಜನ ಸಾಮಾನ್ಯರು ತಿನ್ನುವುದಾದರೂ ಏನು? ಈ ಪರಿಸ್ಥಿತಿಯಲ್ಲಿ ವಿದ್ಯುತ್, ಇಂಧನದಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ್ರು.
ಲಾಭ ಮಾಡುತ್ತಿರುವ ಸರ್ಕಾರ:
ಮೋದಿ ಸರ್ಕಾರ ಜನರಿಗೆ ದ್ರೋಹ ಬಗೆದಿದೆ. ಅತಿಯಾದ ಹಣದುಬ್ಬರಕ್ಕೆ ಅತಿಯಾದ ಬೇಡಿಕೆ ಅಥವಾ ಜನರ ಕೈಯಲ್ಲಿ ಹೆಚ್ಚಿನ ಹಣವಿರುವ ಕಾರಣದಿಂದ ಉಂಟಾಗಿಲ್ಲ. ಬದಲಿಗೆ ಜನರ ಆದಾಯ ಕುಸಿದು ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ಈ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿರುವುದು ಸರ್ಕಾರದ ಶೋಷಣೆ, ದುರಾಸೆ ಹಾಗೂ ಆರ್ಥಿಕತೆ ನಿರ್ವಹಣೆಯಲ್ಲಿನ ವೈಫಲ್ಯ. ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರ ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಜನರಿಗೆ ನೀಡಲು ನಿರಾಕರಿಸಿದೆ. ಜನರಿಗೆ ಲಾಭ ನೀಡುವ ಬದಲು ತಾನೇ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಕಳೆದ 7 ವರ್ಷಗಳಲ್ಲಿ 13 ಬಾರಿ ಅಬಕಾರಿ ಸುಂಕ ಹೆಚ್ಚಿಸಿ ಸರ್ಕಾರ ₹23 ಲಕ್ಷ ಕೋಟಿ ಆದಾಯ ಮಾಡಿಕೊಂಡಿದೆ ಎಂದ್ರು.
ಹೊತ್ತಿ ಉರಿಯುತ್ತಿದೆ ತೈಲ ಬೆಲೆ:
ಇಂಧನಗಳ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಕ್ಕೆ ಭಾರತೀಯರು ಅತಿ ಹೆಚ್ಚು ಹಣ ಪಾವತಿಸುತ್ತಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ₹109 ಆಗಿದೆ. ಡೀಸೆಲ್ ₹90 ಕ್ಕೂ ಹೆಚ್ಚಾಗಿದೆ. ಅಡುಗೆ ಅನಿಲ ₹834 ಆಗಿದೆ. ಈ ಬೆಲೆ ಏರಿಕೆ ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಆಗಿಲ್ಲ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 5 ಅಮೆರಿಕನ್ ಡಾಲರ್ ಆಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇದರ ಬೆಲೆ 125 ಡಾಲರ್ ಆಗಿತ್ತು. ಆಗ ಪೆಟ್ರೋಲ್ ₹65 ಹಾಗೂ ಡೀಸೆಲ್ ₹44 ಇತ್ತು.
ಮೋದಿ ಸರ್ಕಾರ ಜನರ ಮೇಲೆ ಸುಂಕ ಹಾಕಿ ನಾಚಿಗೆ ಬಿಟ್ಟು ಲಾಭ ಮಾಡಿಕೊಳ್ಳುತ್ತಿದೆ. ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ₹33ರಷ್ಟು ಸುಂಕ ವಸೂಲಿ ಮಾಡುತ್ತಿದ್ದು, 2014ಕ್ಕಿಂತ 249%ರಷ್ಟು ಹೆಚ್ಚು ಸುಂಕ ಪಡೆಯುತ್ತಿದೆ. ಡೀಸೆಲ್ ಮೇಲೆ ₹32 ಸುಂಕ ಪಡೆಯುತ್ತಿದ್ದು, 7 ವರ್ಷಗಳಲ್ಲಿ 796%ರಷ್ಟು ಏರಿಕೆಯಾಗಿದೆ. ಇದರಿಂದ ಕೇಂದ್ರ ಸರ್ಕಾರ ಒಂದೇ ಆರ್ಥಿಕ ವರ್ಷದಲ್ಲಿ ₹3.89 ಲಕ್ಷ ಕೋಟಿ ಸುಂಕದ ರೂಪದಲ್ಲಿ ಸಂಗ್ರಹಿಸುತ್ತಿದೆ. ಇದರಿಂದಾಗಿ ದೇಶದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಗಿಂತ ತೈಲದ ಮೇಲಿನ ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ರು.
ಅಡುಗೆ ಅನಿಲ ದರ ಏರಿಕೆ:
ಅಡುಗೆ ಅನಿಲ ದರದಲ್ಲಿ ಕಳೆದ 6 ಬಾರಿ ಏರಿಕೆಯಿಂದ ₹ 240ರಷ್ಟು ಹೆಚ್ಚಾಗಿದೆ. ಕಳೆದ ನವೆಂಬರ್ ನಲ್ಲಿ ₹ 594 ರಷ್ಟಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ ₹834 ಆಗಿದೆ. ನಿರಂತರ ಬೆಲೆ ಏರಿಕೆಯಿಂದ ನಿಯಂತ್ರಿತ ಹಾಗೂ ಮಾರುಕಟ್ಟೆ ಬೆಲೆ ನಡುವೆ ವ್ಯತ್ಯಾಸವೇ ಇಲ್ಲದಂತಾಗಿ ಜನರಿಗೆ ಸಬ್ಸಿಡಿ ಸಿಗದಂತಾಗಿದೆ ಎಂದ್ರು.
ಅಗತ್ಯ ವಸ್ತುಗಳ ಬೆಲೆ ಏರಿಕೆ:
ಈ ಹಿಂದೆ ಹೇಳಿದಂತೆ ಕೇವಲ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಮಾತ್ರ ಜನರ ಜೇಬಿಗೆ ಹೊರೆಯಾಗಿಲ್ಲ. ಕಳೆದ ಮೂರು ತಿಂಗಳಲ್ಲಿ ಅಡುಗೆ ಎಣ್ಣೆ, ಬೇಳೆ, ಸೋಪು, ಟೀ, ಕಾಫಿಗಳ ಬೆಲೆ ಶೇ.42ರಷ್ಟು ಏರಿಕೆಯಾಗಿದೆ.
2021ರ ಮಾರ್ಚ್ ನಿಂದ ಏಪ್ರಿಲ್ ವರೆಗೆ…
ಅಡುಗೆ ಎಣ್ಣೆ 12-42%
ಸೋಪು ಮತ್ತು ಶಾಂಪೂ 8-20%
ವಾಷಿಂಗ್ ಪೌಡರ್ 3-10%
ಟೀ ಸೊಪ್ಪು 4-8%
ಮಕ್ಕಳ ಆಹಾರ 3-7%
ನೂಡಲ್ಸ್ 9-20% ರಷ್ಟು ಬೆಲೆ ಏರಿಕೆಯಾಗಿದೆ.
ರೈತರು 1 ಲೀಟರ್ ಎಣ್ಣೆಗೆ 14 ಕೆ.ಜಿ ಗೋಧಿ ಮಾರಬೇಕು:
ಈ ಸಮಯದಲ್ಲಿ ರೈತರ ಸ್ಥಿತಿ ಊಹಿಸಿಕೊಳ್ಳಿ. ಅವರು ಪ್ರತಿ ಲೀಟರ್ ಅಡುಗೆ ಎಣ್ಣೆಗೆ 14 ಕೆ.ಜಿ ಯಷ್ಟು ಗೋಧಿ ಮಾರಬೇಕಿದೆ. ಒಂದು ತಿಂಗಳಿಗೆ ಬೇಕಾದ ಅಡುಗೆ ಎಣ್ಣೆಗೆ ಕ್ವಿಂಟಲ್ ನಷ್ಟು ಗೋಧಿ ಮಾರಬೇಕು.ರೈತರ ಬೆಳೆಗೆ ಸಿಗುತ್ತಿರುವ ಬೆಲೆ ಹಾಗೂ ಅವರ ಜೀವನ ವೆಚ್ಚದ ನಡುವಣ ವ್ಯತ್ಯಾಸ ಹೆಚ್ಚಾಗಿದ್ದು, ಇದು ಮಹಾಪರಾಧ ಎಂದು ಟೀಕಿಸಿದ್ರು.
ಅತಿಯಾದ ಆಮದು ಸುಂಕ:
ಕಳೆದ ಕೆಲವು ವರ್ಷಗಳಿಂದ ಮೋದಿ ಸರ್ಕಾರ ರೂಪಾಯಿ ಮೌಲ್ಯ ಕುಸಿದರೂ ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಿಸಿದೆ. ಇದರಿಂದ ಅಡುಗೆ ಎಣ್ಣೆ, ಬೇಳೆ ಹಾಗೂ ಗೃಹಬಳಕೆ ವಸ್ತುವಿನ ಬೆಲೆ ಹೆಚ್ಚಿಸಿದೆ.
ಅಸಂಬದ್ಧ ಜಿಎಸ್ಟಿ ದರ:
ಹಲವು ಎಚ್ಚರಿಕೆ ಹಾಗೂ ಸಲಹೆಗಳ ಹೊರತಾಗಿಯೂ ಜಿಎಸ್ಟಿ ಹೆಚ್ಚಿನ ದರ ವಿಧಿಸಲಾಗಿದೆ. ಟೂತ್ ಪೇಸ್ಟ್, ಆಹಾರ ಪದಾರ್ಥ, ಗೃಹಬಳಕೆ ವಸ್ತುಗಳ ಮೇಲೆ ಶೇ.12-18ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಇದರಿಂದಾಗಿ ದೇಶದ ಶ್ರೀಮಂತ ಹಾಗೂ ಬಡವ ಒಂದೇ ರೀತಿಯಲ್ಲಿ ಪರೋಕ್ಷವಾಗಿ ತೆರಿಗೆ ಕಟ್ಟುವಂತಾಗಿದೆ.
ತೈಲಬಾಂಡ್ ಗಳ ಸುಳ್ಳು ಪ್ರಚಾರ:
ಕೇಂದ್ರ ಸರ್ಕಾರ ಕಳೆದ 7 ವರ್ಷಗಳಿಂದ ಅಧಿಕಾರ ನಡೆಸಿದ್ದರೂ ಬೆಲೆ ಏರಿಕೆ ವಿಚಾರದಲ್ಲಿ ನಾಚಿಕೆ ಇಲ್ಲದೆ ಈ ಹಿಂದಿನ ಸರ್ಕಾರವನ್ನು ಟೀಕಿಸಲು ಮುಂದಾಗಿದೆ. ಗ್ರಾಹಕರನ್ನು ರಕ್ಷಿಸಲು ತೈಲ ಬಾಂಡ್ ಗಳನ್ನು ಪರಿಚಯಿಸಲಾಯಿತು. ಕಳೆದ 7 ವರ್ಷಗಳಲ್ಲಿ ತೈಲ ಬಾಂಡ್ ಗಳಿಂದ ಆಗಿರುವ ಹೊರೆ ಅತ್ಯಲ್ಪ. ಮೋದಿ ಸರ್ಕಾರ ಈ ಅವಧಿಯಲ್ಲಿ ಜನರಿಂದ ಸುಂಕದ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಕೇವಲ ಶೇ.3.5ರಷ್ಟನ್ನು ಮಾತ್ರ ತೈಲಬಾಂಡ್ ಗೆ ವ್ಯಯಿಸಿದೆ.
ಇಂಧನ ದರ ಇಳಿಕೆ, ಪರಿಷ್ಕೃತ ಆಮದು ಸುಂಕ, ಸಮಂಜಸ ಜಿಎಸ್ಟಿಗೆ ಒತ್ತಾಯ:
ಈ ಆರ್ಥಿಕ ನಿರ್ವಹಣೆ ವೈಫಲ್ಯ ಸರ್ಕಾರದ ಆರ್ಥಿಕತೆ ಕುರಿತ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ನಮ್ಮ ಜಿಡಿಪಿಯ ಶೇ.60ರಷ್ಟು ಬಳಕೆಯಾಗುತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದ ಜನ ಉದ್ಯೋಗ ಕಳೆದುಕೊಂಡಿದ್ದು,ವೇತನ ಕಡಿತವಾಗಿರುವುದರಿಂದ ಬೇಡಿಕೆ ಕುಸಿದಿದೆ. ಇದನ್ನು ಸರಿಪಡಿಸಿ, ಬೇಡಿಕೆ, ಬಂಡವಾಳ ಹಾಗೂ ಉದ್ಯೋಗ ಮರುಕಲಿಸಲು ಜನರ ಕೈಗೆ ಹಣ ನೀಡುವ ನ್ಯಾಯ್ ಯೋಜನೆ ಅಗತ್ಯವಾಗಿದೆ.
ಜನರ ಮೇಲಿನ ಹೊರೆ ಇಳಿಸಲು ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಬೆಲೆ ಇಳಿಸಬೇಕು. ಆಮದು ಸುಂಕ ಪರಿಶೀಲಿಸಬೇಕು. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
ಈ ಎಲ್ಲ ವಿಚಾರಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ಜತೆಗೆ ಜನರಿಗೆ ಪರಿಹಾರ ನೀಡುವಂತೆ ಕಾಂಗ್ರೆಸ್ ಆಗ್ರಹಿಸಲಿದೆ ಎಂದರು.
ಬೆಂಗಳೂರು:‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದೆ ಅಂತಾರೆ. ಹೀಗಾಗಿ ಮೇಕೆದಾಟು ಯೋಜನೆಗೆ ಬೇಕಾದ ಎಲ್ಲ ಅನುಮತಿಗಳನ್ನು ಪಡೆದು ಶೀಘ್ರವೇ ಯೋಜನೆ ಭೂಮಿಪೂಜೆ ನೆರವೇರಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು,‘ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಮೇಕೆದಾಟು ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದಾರೆ. ಈ ಶುಭಗಳಿಗೆಯಲ್ಲಿ ಸರ್ಕಾರ ಮೇಕೆದಾಟು ಯೋಜನೆ ಭೂಮಿ ಪೂಜೆಗೆ ಸಮಯ ನಿಗದಿ ಮಾಡಿದೆ ಎಂದು ನಾನು ನಂಬಿದ್ದೇನೆ ಎಂದರು.
ಬೇರೆ ಯೋಜನೆಗಳಲ್ಲಿ ಸರ್ಕಾರ ಟೆಂಡರ್ ಕರೆಯದೇ ಭೂಮಿ ಪೂಜೆ ಮಾಡುತ್ತದೆ. ಈ ಯೋಜನೆಯಲ್ಲಿ ಸರ್ಕಾರ ಟೆಂಡರ್ ಕರೆದು ಭೂಮಿಪೂಜೆ ಮಾಡಿ ಕೆಲಸ ಆರಂಭಿಸಲಿ. ಕೇಂದ್ರದಲ್ಲಿ ಅವರದೇ ಸರ್ಕಾರ ಇರುವ ಕಾರಣ, ಯೋಜನೆಗೆ ಬೇಕಾದ ಎಲ್ಲ ಅನುಮತಿಗಳನ್ನು ಪಡೆದು ಆದಷ್ಟು ಬೇಗ ನಮ್ಮ ನಾಡಿಗೆ ಒಳ್ಳೆಯ ಕೆಲಸ ಮಾಡಲಿ.ಬಿಜೆಪಿಯವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಡಬಲ್ ಇಂಜಿನ್ ಸರ್ಕಾರ ಇರುತ್ತದೆ. ರಾಜ್ಯದ ಎಲ್ಲ ಕೆಲಸಗಳನ್ನು ಸುಲಭವಾಗಿ ಮಾಡುತ್ತೇವೆ ಎಂದಿದ್ದರು. ಆ ಕೆಲಸವನ್ನು ಅವರೀಗ ಮಾಡಲಿ. ಪಕ್ಷ ಬೇರೆ, ಸರ್ಕಾರ ಬೇರೆ ಎನ್ನುವುದಾದರೆ, ಅವರು ಪಕ್ಷದಿಂದಲೇ ಸರ್ಕಾರ ನಡೆಸುತ್ತಿದ್ದಾರೆ ಅಲ್ಲವೇ? ಇದು ಬಿಜೆಪಿ ಸರ್ಕಾರವೇ ಅಥವಾ ಪ್ರತ್ಯೇಕ ಸರ್ಕಾರವೇ ಎಂದು ಪ್ರಶ್ನಿಸಿದರು.
ಶೇಖಾವತ್ ಅವರು ನೀರಾವರಿ ಸಚಿವರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿಕೊಟ್ಟಿದ್ದಾರೆ. ಅದೇ ರೀತಿ ನಮ್ಮ ರಾಜ್ಯಕ್ಕೂ ಹೆಚ್ಚಿನ ಅನುಕೂಲ ಮಾಡಿಕೊಡಲಿ. ಯಾವ ಬಿಜೆಪಿ ಸಂಸದರೂ ಬಾಯಿ ತೆಗೆಯುತ್ತಿಲ್ಲ. ಎಲ್ಲರೂ ಬೀಗ ಹಾಕಿಕೊಂಡಿದ್ದಾರೆ. ಅವರು ರಾಜ್ಯದ ಹಿತಕ್ಕೆ ಬೀಗ ಹಾಕಿದ್ದು, ನೀವೆಲ್ಲ ಸೇರಿ ಅವರಿಗೆ ಉತ್ತಮ ಬೀಗವನ್ನು ಉಡುಗೊರೆಯಾಗಿ ನೀಡಬೇಕು ಎಂದರು.
ಟೆಂಡರ್ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ:
ಸರ್ಕಾರ ಕರೆದಿರುವ ಟೆಂಡರ್ ಗಳ ಬಗ್ಗೆ ಮಾಹಿತಿ ಕೇಳಿದ್ದು, ಅದನ್ನು ಪಡೆದು ವಿಧಾನಸಭೆಯಲ್ಲಿ ಮಾತನಾಡುತ್ತೇನೆ. ಕೇವಲ ನೀರಾವರಿ ಟೆಂಡರ್ ಮಾತ್ರವಲ್ಲ, ಎಲ್ಲದೂ ಇದೆ. ಯಾವ ಟೆಂಡರ್ ಕರೆದಿದ್ದಾರೆ, ಅದರ ಮೊತ್ತ ಎಷ್ಟಿತ್ತು, ಈಗ ಎಷ್ಟು ಹೆಚ್ಚಾಗಿದೆ ಎಂಬುದನ್ನು ಅಲ್ಲಿ ಮಾತಾಡುತ್ತೇನೆ. ಈಗ ಆ ಬಗ್ಗೆ ಮಾತನಾಡುವುದಿಲ್ಲ ಎಂದರು.
ಮೊದಲು ಜನಸಂಖ್ಯೆ ನಿಯಂತ್ರಣ ವಿಧೇಯಕ ಮಂಡನೆಯಾಗಲಿ:
ಉತ್ತರ ಪ್ರದೇಶ ಮಾದರಿಯಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ತರುವ ಬಗ್ಗೆ ಸಿ.ಟಿ ರವಿ ಅವರ ಹೇಳಿಕೆ ಕುರಿತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿ.ಟಿ ರವಿ ಅವರು ಬಹಳ ದೊಡ್ಡ ನಾಯಕರು, ರಾಷ್ಟ್ರೀಯ ನಾಯಕರು. ರಾಷ್ಟ್ರದ ಬಗ್ಗೆ ಚಿಂತನೆ ನಡೆಸುತ್ತಾ ಬಹಳ ದೊಡ್ಡ ಹೇಳಿಕೆ ನೀಡುತ್ತಿರುತ್ತಾರೆ. ಅವರ ಮಾತು ಇಲ್ಲಿ ಬೇಡ. ಜನಸಂಖ್ಯೆ ನಿಯಂತ್ರಣ ಮಸೂದೆ ವಿಧಾನಭೆಯಲ್ಲಿ ಮಂಡನೆಯಾಗಲಿ. ಅವರು ರಾಷ್ಟ್ರ ನಾಯಕರಾದರೆ, ನಾನು ಕೇವಲ ರಾಜ್ಯ ನಾಯಕ’ ಎಂದರು.
ಬೆಂಗಳೂರು:‘ಇನ್ನು ನೂರು ವರ್ಷ ಕಳೆದರೂ ತಮಿಳುನಾಡು ಮೇಕೆದಾಟು ಯೋಜನೆಗೆ ತಗಾದೆ ಎತ್ತುತ್ತಲೇ ಇರುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇದೆ ಎನ್ನುವ ಬಿಜೆಪಿ ಕೇಂದ್ರದಲ್ಲಿ ತಮ್ಮ ಅಧಿಕಾರ ಬಳಸಿ, ಅಗತ್ಯ ಅನುಮತಿ ಪಡೆದು ಈ ಯೋಜನೆಗೆ ನಾಳೆಯೇ ಭೂಮಿ ಪೂಜೆ ಮಾಡಲಿ. ರಾಜಕೀಯ ಭಿನ್ನಾಭಿಪ್ರಾಯ ಮರೆತು ಸರ್ಕಾರದ ಜತೆಗೆ ನಾವೆಲ್ಲರೂ ನಿಲ್ಲುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತೊರೆದ ನಾಯಕರನ್ನು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ಮೇಕೆದಾಟು ಯೋಜನೆಗೆ ಅಡ್ಡಿ ಮಾಡುವುದು ತಮಿಳುನಾಡಿನ ಎಲ್ಲ ಪಕ್ಷಗಳ ಅಜೆಂಡಾ. ಇನ್ನೂ ನೂರು ವರ್ಷವಾದರೂ ಅವರ ರಾಜಕೀಯ ಅಜೆಂಡಾ ಇದೇ ಆಗಿರುತ್ತದೆ. ಮೇಕೆದಾಟು ಯೋಜನೆ ಮಾಡಲು ಯಡಿಯೂರಪ್ಪನವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಈಗ ಕೇಂದ್ರ ಪರಿಸರ ಮಂಡಳಿಯಿಂದ ಅನುಮತಿ ಸಿಕ್ಕಿದೆ ಎಂಬ ಮಾಹಿತಿ ಇದೆ ಎಂದರು.
ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು. ತಮಿಳುನಾಡು ಪಾಲಿನ ನೀರಿಗೆ ನಮ್ಮ ಯಾವುದೇ ತಕರಾರು ಇಲ್ಲ. ಅವರ ಪಾಲು ಅವರಿಗೆ ಸಿಗಲಿದೆ. ಮೇಕೆದಾಟು ಯೋಜನೆ ನನ್ನ ಕ್ಷೇತ್ರದಲ್ಲೇ ಬರಲಿದ್ದು, ಇದು ಕೇವಲ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಕೆಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಆಗುತ್ತದೆ. ನನ್ನ ಕ್ಷೇತ್ರದ ಹತ್ತು ಎಕರೆಗೂ ಈ ನೀರು ಬಳಸಿಕೊಳ್ಳುವುದಿಲ್ಲ. ಈ ಯೋಜನೆಗೆ ಸುಮಾರು 500 ರಿಂದ 1000 ಎಕರೆಯಷ್ಟು ರೆವಿನ್ಯೂ ಜಾಗ ಹೋಗಬಹುದು. ಯಾವ ಪ್ರದೇಶವೂ ಮುಳುಗಡೆಯಾಗುವ ಭೀತಿ ಇಲ್ಲ. ಹೀಗಾಗಿ ಇದು ಅತ್ಯಂತ ಅಗ್ಗದ ಹಾಗೂ ಉಪಯುಕ್ತ ಯೋಜನೆ ಎಂದರು.
ತಮಿಳುನಾಡಿನವರು ರಾಜಕಾರಣ ಮಾಡುತ್ತಿದ್ದಾರೆ. ಡಿಎಂಕೆ ಆಗಲಿ, ಅಣ್ಣಾಡಿಎಂಕೆ ಆಗಲಿ, ಅವರ ರಾಜಕೀಯ ಅಜೆಂಡಾ ಒಂದೇ. ಆ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮ ರಾಜ್ಯ ಸರ್ವಪಕ್ಷ ನಿಯೋಗ ಯಾಕೆ ಕೊಂಡೊಯ್ಯಬೇಕು? ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರವಾಗಿ ನಿಲ್ಲುತ್ತೇವೆ.ಮುಖ್ಯಮಂತ್ರಿಗಳು ನಾಳೆ ಬೆಳಗ್ಗೆಯೇ ಟೆಂಡರೆ ಕರೆದು ಗುದ್ದಲಿ ಪೂಜೆ ಮಾಡಲಿ, ಅವರ ಜತೆ ನಾವು ನಿಲ್ಲುತ್ತೇವೆ. ನಾವು ಯೋಜನೆ ಮಾಡುತ್ತಿರುವವರು, ಹೀಗಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ನಮಗಿಲ್ಲ. ತಮಿಳುನಾಡಿನವರು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಿ, ಏನಾದರೂ ಮಾಡಿಕೊಳ್ಳಲಿ. ಇದರಲ್ಲಿ ನಾವು ಒತ್ತಡ ಹೇರುವ ಅವಶ್ಯಕತೆ ಏನಿದೆ. ಯೋಜನೆ ಅನುಷ್ಠಾನಕ್ಕೆ ತರಬೇಕು ಅಷ್ಟೇ. ಬಿಜೆಪಿಯದು ಡಬಲ್ ಇಂಜಿನ್ ಸರ್ಕಾರ ಅಂತಾರೆ, ಈ ಯೋಜನೆಗೆ ಅಗತ್ಯ ಅನುಮತಿ ಪಡೆಯಲು ತೊಂದರೆ ಏನು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕೋವಿಡ್ ವಿಚಾರದಿಂದ ಹಿಡಿದು ಜಿಎಸ್ಟಿ ವರೆಗೂ ಯಾವ ವಿಚಾರದಲ್ಲೂ ಸರ್ವಪಕ್ಷ ನಿಯೋಗ ಕರೆದೊಯ್ದಿಲ್ಲ. ಸರ್ಕಾರ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡಿಕೊಂಡಿದ್ದಾರೆ. ಈಗ ಸರ್ವಪಕ್ಷ ನಿಯೋಗ ಏಕೆ ಬೇಕು? ನೀವು ಯೋಜನೆ ಆರಂಭಿಸಿ, ನಿಮ್ಮ ಜತೆ ನಾವು ನಿಲ್ಲುತ್ತೇವೆ ಎಂದು ಸರ್ಕಾರಕ್ಕೆ ಹೇಳುತ್ತಿದ್ದೇವೆ. ಮುಖ್ಯಮಂತ್ರಿಗಳು ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು. ಅದರ ಅಗತ್ಯ ಏನಿತ್ತು? ನಾವು ಸರ್ಕಾರದ ಪರವಾಗಿ ಪತ್ರ ಬರೆದಾಗ ಅವರು ಏನು ಮಾಡಿದ್ದರು? ದೆಹಲಿಯಲ್ಲಿ ನಿಮ್ಮದೇ ಸರಕಾರವಿದೆ, ನಿಮ್ಮದೇ ಅಧಿಕಾರವಿದೆ, ಅದನ್ನು ಬಳಸಿಕೊಂಡು ಯೋಜನೆ ಮಾಡಿ. ನಮ್ಮ ನಡುವೆ ರಾಜಕೀಯವಾಗಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಈ ವಿಚಾರದಲ್ಲಿ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.ಇವರ ನಡಾವಳಿ ನೋಡಿದರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಎರಡೂ ಇಂಜಿನ್ ಗಳು ಫೇಲ್ ಆಗಿವೆ. ಈ ಇಂಜಿನ್ ಓಡಲು ಪೆಟ್ರೋಲ್, ಡೀಸೆಲ್ ಇಲ್ಲವಾಗಿದೆ ಎಂದರು.
224 ಕ್ಷೇತ್ರಗಳಲ್ಲೂ ಗೆಲ್ಲುವ ಗುರಿ:
ಇದಕ್ಕೆ ಮೊದಲು ದೇವನಹಳ್ಳಿ ವಿಧಾನಸಭೆ ಕ್ಷೇತ್ರದ ಅನ್ಯಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಿವಕುಮಾರ್ ಅವರು, ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿ ಯಾರೂ ಬೇಷರತ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ದುಡಿಯಲು ಬಯಸುತ್ತಾರೋ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾರ್ಯಕ್ರಮ ರೂಪಿಸಿ. ನಾನು ಅಥವಾ ಇತರ ನಾಯಕರನ್ನು ಆ ಕಾರ್ಯಕ್ರಮಕ್ಕೆ ಕಳುಹಿಸಿಕೊಡುತ್ತೇನೆ ಎಂದು ನಮ್ಮೂರ ನಾಯಕರುಗಳಿಗೆ ಹೇಳಲು ಬಯಸುತ್ತೇನೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷವನ್ನು ಗೆಲ್ಲಿಸಬೇಕು. ಅದೇ ನಮ್ಮ ಗುರಿ. ಮುಂದಿನ ಚುನಾವಣೆಯಲ್ಲಿ 130 ಕ್ಷೇತ್ರ ಗೆಲ್ಲುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುರಿ, ನಿಮ್ಮ ಗುರಿ ಏನು ಎಂದು ಮಾಧ್ಯಮದವರು ನನಗೆ ಪ್ರಶ್ನೆ ಮಾಡಿದರು. ನಾನು ಅದಕ್ಕೆ ರಾಜ್ಯದ 224 ಕ್ಷೇತ್ರಗಳೂ ನಮ್ಮ ಗುರಿ ಎಂದು ಹೇಳಿದೆ. ನನ್ನ ಕ್ಷೇತ್ರದಲ್ಲಿ ಯಾರೋ ಬಿಜೆಪಿ ನಾಯಕರು ನಮ್ಮ ವಿರುದ್ಧ ಗೆಲ್ಲಲು ಪ್ರಯತ್ನಿಸಿದರೆ ತಪ್ಪಿಲ್ಲ. ದಳದವರು ಪ್ರಯತ್ನಿಸಿದರೆ ತಪ್ಪಿಲ್ಲ. ಹಾಗಂತ ನಾವು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಉಪ ಮುಖ್ಯಮಮಂತ್ರಿಗಳ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡಲು ಸಾಧ್ಯವೇ? ಅಲ್ಲಿ ನಾವ್ಯಾಕೆ ಗೆಲ್ಲಬಾರದು? ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ 224 ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ. ಇದು ನಮ್ಮ ಗುರಿ ಎಂದರು
ಇವತ್ತಿನಿಂದ ಇಲ್ಲಿ, ಹಳಬರು, ಹೊಸಬರು ಎಂಬ ಪ್ರಶ್ನೆ ಇಲ್ಲ. ಕಾಂಗ್ರೆಸ್ ದೇವಾಲಯಕ್ಕೆ ಬಂದು ಪಕ್ಷ ಸೇರಿರುವುದು ನಿಮ್ಮ ಭಾಗ್ಯ. ನಿಮ್ಮೆಲ್ಲರನ್ನೂ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಎಲ್ಲರೂ ಒಟ್ಟಾಗಿ ಜನರ ಸೇವೆ ಮಾಡಿ ಎಂದು ಕರೆ ನೀಡಿದರು.
ದೇವನಹಳ್ಳಿ ಮುಖಂಡರಾದ ಚಿದಾನಂದ, ಶ್ರೀಮತಿ ತುಂಗಭದ್ರಾ, ನಾಗರಾಜ್, ಮಂಜುನಾಥ್, ದೇವರಾಜ್, ಚೊಕ್ಕರೆಡ್ಡಿ, ರವಿ, ಬಸವರಾಜ್, ಪಿಳ್ಳಪ್ಪ, ಮುರಳೀಧರ ಮತ್ತಿತರ ನೂರಾರು ಮಂದಿ ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಶಾಸಕ ಮುನಿನರಸಿಂಹಯ್ಯ, ಚನ್ನಪ್ಪ, ತೂಬಗೆರೆ ರಂಗಪ್ಪ, ಶಾಂತರಾಜು ಮತ್ತಿತರ ಮುಖಂಡರು ಹಾಜರಿದ್ದರು.
ಬೆಂಗಳೂರು:‘ನಮ್ಮ ಮನೆ ಹುಡುಗನಿಗೆ ನಾನು ಹೊಡೆದೆ. ತಪ್ಪು ಮಾಡಿದಾಗ ನಾವು ಬಯ್ಯುತ್ತೇವೆ. ಅದು ನಮ್ಮ ನಡುವಿನ ಪ್ರೀತಿಯ ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್,’ಆತ ನಮ್ಮ ಹುಡುಗ, ನಮ್ಮ ದೂರದ ಸಂಬಂಧಿ. ಹೆಗಲ ಮೇಲೆ ಕೈ ಹಾಕಿದಾಗ ಬೇರೆಯವರು ಏನು ತಿಳಿಯುತ್ತಾರೆ ಎಂದು ಬೈದೆ. ಜೋರಾಗಿ ಹೊಡೆದದ್ದೂ ನಿಜ. ತಪ್ಪು ಮಾಡಿದಾಗ ಬಯ್ಯುವುದು ಸಹಜ. ಅದು ನಮ್ಮ ಪ್ರೀತಿಯ ಸಂಬಂಧ. ನಾವು, ಅವರು ಎಲ್ಲ ತಪ್ಪು ಮಾಡುತ್ತೇವೆ. ನಿಮ್ಮ ಖುಷಿಗೆ ನೀವು ಅದನ್ನು ತೋರಿಸುತ್ತಿದ್ದೀರಿ. ನೀವು ಅವನನ್ನು ನಾಯಕನನ್ನಾಗಿ ಮಾಡಿ ಎಂದರು.
ಜಾತಿಗಣತಿ ವೆಚ್ಚ ಪೋಲಾಗಬಾರದು:
ಜಾತಿಗಣತಿಗೆ ಸರ್ಕಾರದ ಬೊಕ್ಕಸದಿಂದ ನೂರಾರು ಕೋಟಿ ವೆಚ್ಚ ಮಾಡಲಾಗಿದೆ. ಹೀಗಾಗಿ ಅದು ವ್ಯರ್ಥವಾಗಬಾರದು ಎಂದು ಹಿಂದುಳಿದ ವರ್ಗಗಳ ನಾಯಕರು ನಮ್ಮನ್ನು ಭೇಟಿ ಮಾಡಿ, ಹೇಳಿದ್ದಾರೆ. ಅವರು ಕೇಳುವುದರಲ್ಲಿ ತಪ್ಪಿಲ್ಲ.ಆ ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಈ ವಿಚಾರದಲ್ಲಿ ನಾನು ಬೇರೆಯವರ ರೀತಿ ಮಾತನಾಡಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ನಾನು, ವಿರೋಧ ಪಕ್ಷದ ನಾಯಕರು ಎಲ್ಲರ ಜತೆ ಚರ್ಚಿಸುತ್ತೇವೆ. ಈ ವಿಚಾರದಲ್ಲಿ ಬಿಜೆಪಿ ನಿಲುವು ಏನು?ಎಂಬುದನ್ನು ಮೊದಲು ನೋಡೋಣ. ಈ ಬಗ್ಗೆ ಪ್ರಶ್ನೆ ಕೇಳಿದಾಗ ನಮಗೆ ಗೊತ್ತೇ ಇಲ್ಲ, ವರದಿ ಸಲ್ಲಿಕೆಯಾಗಿಲ್ಲ ಎಂದಿದ್ದಾರೆ.
ಕೆ ಆರ್ ಎಸ್ ಬಿರುಕು ಬಗ್ಗೆ ನನ್ನ ಬಳಿ ಯಾರೂ ಪ್ರಸ್ತಾಪಿಸಿರಲಿಲ್ಲ:
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಮಂತ್ರಿಯಾಗಿದ್ದೆ. ನೀರಾವರಿ ಸಚಿವನಾಗಿಯೂ ಕೆಲಸ ಮಾಡಿದ್ದೆ. ಆಗ ಯಾರೂ ಕೂಡ ಅಕ್ರಮ ಗಣಿಗಾರಿಕೆ ಬಗ್ಗೆ ನನ್ನ ಬಳಿ ಯಾವುದೇ ಪ್ರಸ್ತಾಪ ಮಾಡಿಲ್ಲ. 10-15 ಕಿ.ಮೀ ದೂರದಲ್ಲಿ ಜಲ್ಲಿಕಲ್ಲಿ ಉತ್ಪಾದಿಸುವುದರಿಂದ ಹೆಚ್ಚು ವ್ಯತ್ಯಾಸವೇನೂ ಆಗುವುದಿಲ್ಲ.ಗಣಿ ಸಚಿವಾಲಯ ಇದೆ, ಇದಕ್ಕೆ ಕೆಲಸದ ವ್ಯಾಪ್ತಿ ಇದೆ. ಭೂ ವಿಜ್ಞಾನ ಇಲಾಖೆ ಇದೆ. ನೂರಾರು ಇಂಜಿನಿಯರ್ ಗಳೂ ಇದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನಾವು ಅನಗತ್ಯವಾಗಿ ಜನರಲ್ಲಿ ಆತಂಕ ಮೂಡಿಸೋದು ಬೇಡ. ಇಂತಹ ಚಿಲ್ಲರೆ ಪ್ರಚಾರ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಇದು ಸೂಕ್ಷ್ಮ ವಿಚಾರ. ಕೆಆರೆಎಸ್ ದೇಶದ ಆಸ್ತಿ. ಅದರ ಬಗ್ಗೆ ಗಾಬರಿ ಹುಟ್ಟಿಸಬಾರದು.ಗಣಿಗಾರಿಕೆಯಿಂದ ಅಪಾಯವಿದೆ ಎಂಬ ವಿಚಾರವಾಗಿ ನಮ್ಮ ಬಳಿ ಯಾರೂ ಚರ್ಚೆ ಮಾಡಿಲ್ಲ ಎಂದರು
ಬೆಂಗಳೂರು, ಜುಲೈ 11:ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್‍ಚಂದ್ ಗೆಹ್ಲೋಟ್ ಅವರು ಇಲ್ಲಿ ಇಂದು ಪ್ರಮಾಣ ವಚನ ಸ್ವಿಕರಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇóಷ ಸಮಾರಂಭದಲ್ಲಿ ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ಪ್ರಮಾಣ ವಚÀವನ್ನು ಬೋಧಿಸಿದರು. ನೂತನ ರಾಜ್ಯಪಾಲರು ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ರಾಜ್ಯಪಾಲರಿಗೆ ಶುಭ ಕೋರಿದ ಸಿಎಂ
ಪ್ರಮಾಣ ವಚನ ಸ್ವೀಕಾದ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಅಲಂಕೃತ ವೇದಿಕೆಯಲ್ಲಿ ನೂತನ ರಾಜ್ಯಪಾಲರ ಜೊತೆಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, ನೂತನ ರಾಜ್ಯಪಾಲರು ಪ್ರಮಾಣ ವಚನ ಸ್ವೀಕರಿಸಿದೊಡನೆಯೇ ಪುಷ್ಪಗುಚ್ಛ ನೀಡಿ ಅಭಿನಂದಿಸಿ ಶುಭ ಹಾರೈಸಿದರು.
ಈ ಮುನ್ನ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ರಾಷ್ಟ್ರಪತಿ ಅವರಿಂದ ಸ್ವೀಕೃತವಾದ ನೇಮಕಾತಿ ಪತ್ರವನ್ನು ವಾಚಿಸಿದರು.
ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಮತ್ತು ಡಾ ಸಿ ಎನ್ ಅಶ್ವಥನಾರಾಯಣ, ರಾಜ್ಯ ಸಚಿವ ಸಂಪುಟದ ಸದಸ್ಯರಾದ ಕೆ ಎಸ್ ಈಶ್ವರಪ್ಪ, ಆರ್. ಅಶೋಕ್, ಎಸವರಾಜ ಬೊಮ್ಮಾಯಿ, ಎಸ್ ಸುರೇಶ್ ಕುಮಾರ್, ವಿ. ಸೋಮಣ್ಣ, ಎಸ್. ಟಿ. ಸೋಮಶೇಖರ್, ಮುರುಗೇಶ್ ಆರ್ ನಿರಾಣಿ, ಡಾ ಕೆ ಸುಧಾಕರ್, ಸಿ. ಪಿ. ಯೋಗೇಶ್ವರ್ ಮತ್ತು ಆರ್. ಶಂಕರ್, ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮ್‍ದಾಸ್ ಅಠಾವಲೆ, ಲೋಕಸಭಾ ಸದಸಸ್ಯರಾದ ಡಿ. ವಿ. ಸದಾನಂದ ಗೌಡ, ಸುಮಲತಾ ಮತ್ತು ಪಿ ಸಿ ಮೋಹನ್, ರಾಜ್ಯ ಸಭಾಸದಸ್ಯ ಕೆ ಸಿ ರಾಮಮೂರ್ತಿ, ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ಪತ್ರಿಪಕ್ಷ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಲೋಕಾಯುಕ್ತ ಪಿ ವಿಶ್ವನಾಥ ಶೆಟ್ಟಿ, ರಾಜ್ಯ ವಿಧಾನಸಭಾ ಸದಸ್ಯ ಎ. ಎಸ್. ನಡಳ್ಳಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಕೆ ಗೋವಿಂದ ರಾಜ್, ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಎನ್ ಜಿ ಶ್ರೀನಿವಾಸ್ ರಾಜ್ಯ ಆರಕ್ಷಕ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ ಹೇಮಲತಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.