4800 ಪ್ರಾಧ್ಯಾಪಕ,ಸಹ ಪ್ರಾಧ್ಯಾಪಕರ ನೇಮಕ: ಜಿ.ಟಿ ದೇವೇಗೌಡ

ಬೆಂಗಳೂರು:ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ 4800 ವಿವಿಧ ಹುದ್ದೆಗಳು ತಮ್ಮ ಇಲಾಖೆಯಲ್ಲಿ ಖಾಲಿ ಇದ್ದು, ಆದ್ಯತೆ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಸಭೆಗೆ ತಿಳಿಸಿದರು.

ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಾ.ಉಮೇಶ್ ಜಿ.ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ 3800 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಖಾಲಿ ಇವೆ. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇವೆ. ಪ್ರಾಂಶುಪಾಲರ ಹುದ್ದೆ ಖಾಲಿ ಇರುವ ಕಾಲೇಜುಗಳಲ್ಲಿ ಉಸ್ತುವಾರಿ ಪ್ರಾಂಶುಪಾಲರನ್ನು ನೇಮಕ ಮಾಡಲಾಗಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ನೇಮಕಗೊಂಡಿರುವ ಉಪನ್ಯಾಸಕರನ್ನು ಹಳೇ ಮೈಸೂರು ಭಾಗಕ್ಕೆ ಡೆಪ್ಟೇಷನ್ ಮೇಲೆ ನೇಮಕ ಮಾಡಿರುವ ಬಗ್ಗೆ ಪರಿಶೀಲನೆ ಮಾಡಿ ತುರ್ತು ಕ್ರಮ ಕೈಗೊಳ್ಳುವುದಾಗಿ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರ ಪ್ರಶ್ನೆ ಸಂದರ್ಭದಲ್ಲಿ ಶಾಸಕ ಬಿ.ಸಿ.ಪಾಟೀಲ್ ಕೇಳಿದ ಉಪ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ನಮ್ಮ ಸರ್ಕಾರ ಯಾವುದೇ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದಾಗಲಿ, ಅನ್ಯ ಸೇವೆ ಮೇಲೆ ನಿಯೋಜನೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಂಡ್ಯದ ಬಸರಾಳುವಿನಲ್ಲಿ ಇರುವ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಪದವಿ ಕಾಲೇಜು ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು 2.43 ಕೋಟಿ ಅನುದಾನ ಬೇಕಾಗಿದ್ದು, ಅನುದಾನ ಲಭ್ಯತೆ ಆಧರಿಸಿ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.

ಪದವಿ ಕಾಲೇಜುಗಳಲ್ಲಿ ಮೇ 30ರೊಳಗೆ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಜೂ.30ರೊಳಗೆ ಫಲಿತಾಂಶ ಪ್ರಕಟಿಸಲು ನಿರ್ದೇಶಿಸಲಾಗಿದೆ ಎಂದು ಶಾಸಕ ಅಭಯ್‍ಪಾಟೀಲ್ ಅವರ ಪ್ರಶ್ನೆಗೆ ಸಚಿವ ದೇವೇಗೌಡರು ಉತ್ತರಿಸಿದರು.

ಎಲ್ಲಾ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳ ದಾಖಲಾತಿ, ಪರೀಕ್ಷಾ ವೇಳಾಪಟ್ಟಿ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ಏಕರೂಪತೆ ತರಲು ಸರ್ಕಾರ ವೇಳಾ ಪಟ್ಟಿ ನಿಗದಿಪಡಿಸಿ ಆದೇಶಿಸಿದೆ.

ಫಲಿತಾಂಶ ಪ್ರಕಟಣೆ ಮತ್ತು ಅಂಕಪಟ್ಟಿ ವಿತರಣೆಯಲ್ಲಿ ಉಂಟಾಗುವ ತೊಂದರೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಂಜನಿಯರಿಂಗ್ ಸೀಟ್‍ಗಳ ಕೌನ್ಸಲಿಂಗ್ ಪ್ರಾರಂಭಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮಲೆನಾಡಲ್ಲಿ ಸಿಎಂ ಗ್ರಾಮವಾಸ್ತವ್ಯದ ಘೋಷಣೆ: ವಿಧಾನಸಭಾ ಕಲಾಪದಲ್ಲಿ ಏನೇನಾಯ್ತು ಗೊತ್ತಾ?

ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್ ನ ಅಧಿವೇಶನದ ಏಳನೇ ದಿನದ ಕಲಾಪ ಆರಂಭಗೊಂಡಿದೆ.ಅಗಲಿದ ಗಣ್ಯರಿಗೆ ಸಂತಾಪ ಸೇರಿದಂತೆ ಸದಸ್ಯರು ಕೇಳಿದ ಪ್ರಶ್ನೆಗಳೇನು? ಸರ್ಕಾರದ ನೀಡಿದ‌ ಉತ್ತರವೇನು ಎನ್ನುವ ಸಮಗ್ರ ಮಾಹಿತಿ ಇಲ್ಲಿದೆ.

ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮೊದಲಿಗ
ಇಂದು ಮುಂಜಾನೆ ವಿಧಿವಶರಾದ ಮಾಜಿ ಸಚಿವ ಬಿ.ಎ.ಮೊಯಿದ್ದೀನ್ ಗೆ ಸಂತಾಪ ಸೂಚಿಸಲಾಯ್ತು.ಸಂತಾಪ ಸೂಚನೆ ನಿರ್ಣಯವನ್ನು ಸ್ಪೀಕರ್ ಮಂಡಿಸಿದರೆ ಸಂತಾಪ ಸೂಚನೆ ನಿರ್ಣಯ ಅನುಮೋದಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ನಂತರ ಗೆಳೆಯ ಮೊಯಿದ್ದೀನ್ ನನ್ನು ನೆನಸಿಕೊಂಡು ಗದ್ಗದಿತರಾದ ಸ್ಪೀಕರ್ ರಮೇಶ್ ಕುಮಾರ್, ನನ್ನನ್ನು ಯಾವುದೇ ತಪ್ಪು ಮಾಡಿದಾಗ ತಿದ್ದಿ ತೀಡುವ ಅಧಿಕಾರ ಇದ್ದದ್ದು ನನ್ನ ಸಾಕಿ ಬೆಳೆಸಿದ ದೊಡ್ಡಣ್ಣ ಹಾಗೂ ಮೊಯಿದ್ದೀನ್ ಗೆ ಮಾತ್ರ.ಇಂದು ಅವರನ್ನು ಕಳೆದುಕೊಂಡಿದ್ದೇನೆ.ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಹೋಗುತ್ತಿದ್ದೇನೆ.ಇಂದು ಮತ್ತು ನಾಳೆ ಉಪಸಭಾಧ್ಯಕ್ಷರು ಸದನ ನಿರ್ವಹಣೆ ಮಾಡುತ್ತಾರೆ.ಅವರು ಹೊಸಬರು.ಅವರಿಗೆ ದಯಮಾಡಿ ಸಹಕಾರ ನೀಡಿ ಎಂದು ಕೇಳಿಕೊಂಡರು.ಮೃತರಿಗೆ ಒಂದು ನಿಮಿಶದ ಮೌನಾಚರಣೆ ಮೂಲಕ ಶೋಕ ವ್ಯಕ್ತಪಡಿಸಲಾಯ್ತು.

ನಂತ್ರ ಪ್ರಶ್ನೋತ್ತರ ಕಲಾಪ ಆರಂಭಿಸಲಾಯ್ತು.ಆದಾಯ ತೆರಿಗೆ ಇಲಾಖೆಯು ಬೆಳಗಾವಿಯ ವಿಟಿಯು ನಲ್ಲಿದ್ದ 440 ಕೋಟಿ.ರೂ.ಗಳನ್ನು ವಶಕ್ಕೆ ಪಡೆದಿದೆ.ಹಾಗಾಗಿ ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಹಣವಿಲ್ಲ.ನಬಾರ್ಡ್ ನಿಂದ ಹಣ ಬಂದ ನಂತರ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ಬಿಜೆಪಿಯ ಸಿ.ಟಿ.ರವಿ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉತ್ತರ ನೀಡಿದ್ರು.

2012ರಲ್ಲಿ ಕಾಲೇಜು ಮಂಜೂರು ಮಾಡಿಸಿಕೊಂಡಾಗಲೇ ಕಾಲೇಜು ಕಟ್ಟಡಕ್ಕೂ ಅನುದಾನ ಪಡೆಯಬೇಕಿತ್ತು.ಆಗ ಅನುದಾನ ಪಡೆಯದೆ ಈಗ ಸರ್ಕಾರದ ಮೇಲೆ ಹರಿಹಾಯ್ದರೆ ಏನು ಪ್ರಯೋಜನ.ಈಗ ತಾನೆ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದ್ದಾರೆ.ಹಣ ಬಿಡುಗಡೆಗೆ ಒಪ್ಪಿದ್ದಾರೆ.ಅನುದಾನ ಬಂದ ಮೇಲೆ ಕಾಲೇಜು ಕಟ್ಟಡ ನಿರ್ಮಿಸಲಾಗುತ್ತದೆ ಎಂದ್ರು.

ಬಳಿಕ ರೈತರ ಪಂಪ್ ಸೆಟ್ ಗಳಿಗೆ ನೋಂದಣಿ ಸಂಖ್ಯೆಪಡೆಯಲು ಸರ್ವಿಸ್ ಚಾರ್ಜ್ ಎಂದು 10,000 ರೂ.ಗಳನ್ನು ಇಂಧನ ಇಲಾಖೆ ಪಡೆಯುತ್ತಿದೆ ಎಂದು ಪ್ರಶ್ನೋತ್ತರದಲ್ಲಿ ಬಿಜೆಪಿ ನರಸಿಂಹ ನಾಯಕ್ ಸರ್ಕಾರದ ಗಮನ ಸೆಳೆದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ
ಅಕ್ರಮ ಪಂಪ್ ಸೆಟ್ ಗಳ ತಡೆಗೆ ಇಂಧನ ಇಲಾಖೆ ಇಂತಹಾ ಸ್ಕೀಂ ರೂಪಿಸಿದೆ.ಇದರಿಂದ ಅರ್ಹ ರೈತರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ.ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸುವುದಾಗಿ ಭರವಸೆ ನೀಡಿದರು.

ನಂತರ ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿ ಪವರ್ ಕಟ್, ಮಳೆಗಾಲದಲ್ಲಿ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಇರುವುದಿಲ್ಲ.ಪರಿಣಾಮ ವರ್ಷಪೂರ್ತಿ ಮಲೆನಾಡಿಗೆ ಕರೆಂಟ್ ಇರೋದಿಲ್ಲ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅಳಲು ತೋಡಿಕೊಂಡ್ರು.ವಿದ್ಯುತ್ ಲೈನ್ ಮೇಲೆ ಬೀಳುವ ಮರಗಳ ತೆರವುಗೊಳಿಸಲು ಅರಣ್ಯ ಇಲಾಖೆ ಅಡ್ಡಿ ಮಾಡುತ್ತದೆ ಹಾಗಾಗಿ ಮಲೆನಾಡಿಗೆ ಕರೆಂಟ್ ಇಲ್ಲ ಎಂದ ಶೃಂಗೇರಿ ಶಾಸಕರಿಗೆ ಬಿಜೆಪಿಯ ಸಿ.ಟಿ.ರವಿ ಮತ್ತು ಅರಗಜ್ಞಾನೇಂದ್ರ ಸಾತ್ ನೀಡಿದ್ರು.

ಇದಕ್ಕೆ ಸ್ಪಂಧಿಸಿದ ಸಿಎಂ, ಶೃಂಗೇರಿ-ಕೊಪ್ಪ-ನರಸಿಂಹರಾಜಪುರ ಮಾರ್ಗದಲ್ಲಿ ಅತಿವೃಷ್ಟಿಯಿಂದ 721ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.72.1ಕಿ.ಮೀ ವಿದ್ಯುತ್ ತಂತಿ ಹಾಳಾಗಿದೆ.682ವಿದ್ಯುತ್ ಕಂಭ ಹಾಗೂ 68.2 ಕೀಮಿ ಉದ್ದದ ತಂತಿ ಬದಲಾಯಿಸಲಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮರ ತೆರವು ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದಾಗಿ ಭರವಸೆ ನೀಡಿದರು

ಮಲೆಮಹದೇಶ್ವರ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಗಿರಿತಾಣ ಭತ್ಯೆ ನೀಡುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಹೇಶ್ ಸದನಕ್ಕೆ ಮಾಹಿತಿ ನೀಡಿದರು.ಆದರೆ ಅರಣ್ಯ ಪ್ರದೇಶದಲ್ಲಿ,ಬೆಟ್ಟಗುಡ್ಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸರ್ಕಾರಿ ನೌಕರರಿಗೂ ವಿಸ್ತರಿಸುವಂತೆ ಹನೂರು ಶಾಸಕ ಆರ್.ನರೇಂದ್ರ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಒತ್ತಾಯಿಸಿದರು.ಸಿಎಂ ಜತೆ ಚರ್ಚಿಸಿ ಪರಿಶೀಲಿಸುವ ಭರವಸೆ ನೀಡಿದ ಶಿಕ್ಷಣ ಸಚಿವ ಮಹೇಶ್ ಬೇಡಿಕೆಗ ಸ್ಪಂಧಿಸಿದ್ರು.

ಮಂಡ್ಯ ತಾಲೂಕು ಬಸರಾಳುವಿನಲ್ಲಿ ಪದವಿ ಕಾಲೇಜು ಸ್ಥಾಪನೆಗೆ ಸರ್ಕಾರ ಸಮ್ಮತಿ.ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉತ್ತರಿಸಿ ಬಸರಾಳು ಹೋಬಳಿ ವ್ಯಾಪ್ತಿಗೆ 76ಹಳ್ಳಿಗಳು ಬರುತ್ತವೆ.20 ಕಿ.ಮೀ ಅಂತರದಲ್ಲಿ 02ಸರ್ಕಾರಿ ಪದವಿಪೂರ್ವ ಹಾಗೂ 02ಅನುದಾನ ರಹಿತ ಪದವಿ ಕಾಲೇಜುಗಳಿವೆ‌.ಬಸರಾಳಿನ ಸರ್ಕಾರಿ ಪ್ರೌಢಶಾಲೆಯ ಖಾಲಿ ಕಟ್ಟಡ ಹಾಗೂ ನೀರಾವರಿ ಇಲಾಖೆಯ ಖಾಲಿ ಕಟ್ಟಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಉದ್ದೇಶಿಸಿರುವುದಾಗಿ ಮಾಹಿತಿ ನೀಡಿದ್ರು.

ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿಕೊಡುವ ಸಾಗರ ತಾಲೂಕಿಗೇ ಕರೆಂಟ್ ಇಲ್ಲ.ಬಿಜೆಪಿಯ ಹರತಾಳು ಹಾಲಪ್ಪ ಅಳಲು ತೋಡಿಕೊಂಡ್ರು.ಮಲೆನಾಡು ಭಾಗದಲ್ಲಿನ ವಿದ್ಯುತ್ ಸಮಸ್ಯೆ ಬಗೆ ಹರಿಸಿ ಶಾಶ್ವತ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ರು.

ರಾಜ್ಯದಲ್ಲಿ 25600 ಶಿಕ್ಷಕರ ಹುದ್ದೆಗಳು ಖಾಲಿ ಇದ್ದ ಇನ್ನು 10-15ದಿನಗಳಲ್ಲಿ 10,000 ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತೆ.12,500 ಪ್ರಾಥಮಿಕ ಶಾಲೆಗಳು ಮತ್ತು 3100ಪ್ರೌಢ ಶಾಲೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಶಿಕ್ಷಕರ ಕೊರತೆ ನೀಗಿಸಲು ಯತ್ನಿಸಲಾಗುತ್ತಿದೆ ಎಂದು ಆಳಂದ ಶಾಸಕ ಗುತ್ತೇದಾರ್ ಸುಭಾಶ್ ರುಕ್ಮಯ್ಯ ಪ್ರಶ್ನೆಗೆ ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಉತ್ತರ ನೀಡಿದ್ರು.

ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಯಾರು?ಎನ್ .ಮಹೇಶ್ ಅವರೋ ತನ್ವೀರ್ ಸೇಠ್ ಅವರೋ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಮುಂದಾದ ತನ್ವೀರ್ ಸೇಠ್.ರಾಜ್ಯದ ,2500 ಶಾಲೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದರು.ಈ ವೇಳ ಬಿಜೆಪಿಯ ಅರವಿಂದ ಲಿಂಬಾವಳಿ ಆಕ್ಷೇಪ ವ್ಯಕ್ತಪಡಿಸಿದ್ರು.ಸರ್ಕಾರ ಬದಲಾಗಿದೆ ಸಮ್ಮಿಶ್ರ ಸರ್ಕಾರ ಬಂದಿದೆ ಎಂಬುದನ್ನು ತನ್ವೀರ್ ಸೇಠ್ ಮರೆತಿದ್ದಾರೆ ಎಂದು ಟೀಕಿಸಿದ್ರು.ಅವರನ್ನು ಮಂತ್ರಿ ಮಾಡಿಲ್ಲ ಎಂಬ ನೋವನ್ನು ಈ ರೀತಿ ಉತ್ತರ ಹೇಳುವ ಮೂಲಕ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ರು.ಆಗ ಸದನದ ಶಾಸಕನಾಗಿ‌ ಮಾಹಿತಿ ನೀಡುವ ಜವಾಬ್ದಾರಿ ತಮಗೂ ಇದೆ.ಅದಕ್ಕೆ ಮಂತ್ರಿಯೇ ಆಗಬೇಕು ಎಂದೇನಿಲ್ಲ ಎಂದು ತನ್ವೀರ್ ಸೇಠ್ ವಾದಿಸಿದ್ರು.ಕೊನೆಗೆ ಶಾಸಕರ ಪ್ರಶ್ನೆಗೆ ತಾವೇ ಉತ್ತರಿಸುತ್ತೇವೆ‌.ಸುಖಾಸುಮ್ಮನೆ ಆ ಪಕ್ಷ ಈ ಪಕ್ಷ ಎಂದು ವ್ಯತ್ಯಾಸ ಬೇಡ ಎಂದು ಸ್ಪಷ್ಟನೆ ನೀಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಹೇಶ್ ಉತ್ತರ ನೀಡಿದ್ರು.

ವಿಧಾನಸಭೆ ಅಧಿವೇಶನ ಮುಕ್ತಾಯವಾದ ಬಳಿಕ ಮಲೆನಾಡಿನಲ್ಲಿ ಒಂದೆರಡು ದಿನ ಕ್ಯಾಂಪ್ ಮಾಡಲು‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧಾರಿಸಿದ್ರು.ನಿನ್ನೆ ತೀರ್ಥಹಳ್ಳಿಯಲ್ಲಿ ಕಾಲು ಸಂಕದಿಂದ ಜಾರಿಬಿದ್ದು ಹಳ್ಳದ ನೀರಿನಲ್ಲಿ ವಿದ್ಯಾರ್ಥಿನಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಪ್ರಸ್ತಾಪಿಸಿದ ಬಿಜೆಪಿಯ ಅರಗಜ್ಞಾನೇಂದ್ರ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.ಇದಕ್ಕ ಉತ್ತರಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ನಿನ್ನೆ ತೀರ್ಥಹಳ್ಳಿಯಲ್ಲಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಹತ್ತು ಲಕ್ಷ ರೂ ಪರಿಹಾರ ನೀಡುವ ಜತೆಗೆ,ಇಂತಹಾ ಘಟನೆ ಮರುಕಳಿಸದಂತೆ ಕಾಲು ಸಂಕ ದುರಸ್ಥಿ ಹಾಗೂ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗೆ ಆದೇಶಿಸಿರುವುದಾಗಿ ಉತ್ತರಿಸಿದರು. ಇದಲ್ಲದೆ ಮಲೆನಾಡಿನ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ಮಲೆನಾಡು ಪ್ರದೇಶದಲ್ಲಿ ಎರಡು ದಿನ ಗ್ರಾಮವಾಸ್ತವ್ಯ ಮಾಡಲು ಉದ್ದೇಶಿಸಿರುವುದಾಗಿ ಸಿಎಂ ಪ್ರಕಟಿಸಿದರು.

ಮದುವೆ ಮನೆಯಿಂದ ಪ್ರಿಯಕರನೊಂದಿಗೆ ಮದುಮಗಳು ಎಸ್ಕೇಪ್: ಬೇರೊಬ್ಬಳನ್ನು ವರಿಸಿದ ವರ

ಮೈಸೂರು:ಯುವಕನೋರ್ವನೊಂದಿಗಿನ ಪ್ರೀತಿಯನ್ನು ಒಪ್ಪದೆ ಬೇರೊಬ್ಬನೊಂದಿಗೆ ಮದುವೆ ಮಾಡಲು ಮುಂದಾಗಿದ್ದ ಪೋಷಕರಿಗೆ ಯುವತಿ ಶಾಕ್ ನೀಡಿದ್ದಾಳೆ,ಮದುವೆ ಮನೆಯಿಂದಲೇ ಓಡಿ ಹೋದ ಮದುಮಗಳು ಪ್ರಿಯಕರನನ್ನು ಸೇರಿದ ಘಟನೆ ನಡೆಯಿತು.

ಯವತಿಯ ಇಷ್ಟಕ್ಕೆ ವಿರುದ್ಧವಾಗಿಯೂ ಬೇರೊಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದ ಪೋಷಕರು
ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣಮಂಟಪದಲ್ಲಿ ಮದುವೆ ಕಾರ್ಯ ನಡೆಸಿದ್ದರು.ಎಲ್ಲರೂ ಮದುವೆ ಮನೆಯಲ್ಲಿ‌ಸಡಗ ಸಂಭ್ರಮದಿಂದ ಓಡಾಡುತ್ತಿದ್ದರು.ವರನ ಕಡೆಯವರೂ ಕಲ್ಯಾಣ ಮಂಟಪಕ್ಕೆ ಬಂದಿದ್ದರು.ಇನ್ನೇನು ಬೆಳಗ್ಗೆ ತಳಕಟ್ಟಬೇಕು ಎನ್ನುವುದು ಮಾತ್ರ ಉಳಿದಿತ್ತು. ಅಷ್ಟರಲ್ಲಿ‌ ರಾತ್ರಿಯೇ ಮದುಮಗಳು ನಂದಿನಿ ಸ್ನೇಹಿತರ ಕೈಲಿ ಚೀಟಿ ಬರೆದುಕೊಟ್ಟು ಕಲ್ಯಾಣ ಮಂಟಪದಿಂದ ಎಸ್ಕೇಪ್ ಆಗಿದ್ದಾಳೆ.ಎಚ್‌.ಡಿ.ಕೋಟೆಯ ವಧು ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ಹೇಳಿದರೂ ಬಲವಂತದಿಂದ ಮೈಸೂರಿನ ಮಾರ್ಬಳ್ಳಿಯ ಕೃಷ್ಣ ನಾಯಕ್ ಎನ್ನುವ ಯುವಕನೊಂದಿಗೆ ಮದುವೆ ಮಾಡಿಸಲು ಪೋಷಕರು ಮಾಡಿದ್ದರು ಎನ್ನಲಾಗಿದೆ.

ಮಗಳು ಮದುವೆ ಮನೆಯಿಂದ ಓಡಿಹೋದ ಬಳಿಕ ಪೋಷಕರು ಕಂಗಾಲಾಗಿದ್ದರೆ,ಮದುವೆ ನಿಲ್ಲುವ ಆತಂಕಕ್ಕೆ ಸಿಲುಕಿದ ವರನ ಕಡೆಯುವರು ಅಲ್ಲಿಯೇ ಅವರ ಸಂಬಂಧಿಕರ ಕಡೆಯಲ್ಲಿಯೇ ಓರ್ವ ಯುವತಿಯನ್ನು ನೋಡಿ ಮದುವೆ ಮಾಡಿ ಮುಗಿಸಿದರು. ಮದುವೆಯೇನೋ ಆಯಿತು.ಆದರೆ ಮದುಮಗಳು ಮಾತ್ರ ಬದಲಾಗಿತ್ತು ಅಷ್ಟೇ.

ಹಿರಿಯ ರಾಜಕಾರಣಿ ಬಿ.ಎ ಮೊಹಿದ್ದೀನ್ ನಿಧನ: ಗಣ್ಯರ ಸಂತಾಪ ಬೆಂಗಳೂರು

ಬೆಂಗಳೂರು: ಹಿರಿಯ ರಾಜಕಾರಣಿ ಮಾಜಿ ಶಿಕ್ಷಣ ಸಚಿವ ಬಿ.ಎ‌ ಮೊಹಿದ್ದೀನ್(80) ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.

ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಮೊಹಿದ್ದೀನ್ 1978 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದಂದ ವಿಧಾನಸಭೆ ಪ್ರವೇಶಿಸಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜನತಾಪರಿವಾರ ಸೇರಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು.ಬಳಿಕ ಮರಳಿ ಮಾತೃಪಕ್ಷ ಕಾಂಗ್ರೆಸ್ ಅನ್ನು ಸೇರಿದ್ದರು.

ಬಿ.ಎ. ಮೊಹಿದೀನ್ ಅವರ ನಿಧನ ಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇವರಾಜ ಅರಸು ಅವರ ಒಡನಾಡಿಯಾಗಿದ್ದ ಮೊಹಿದೀನ್ ಅವರು ನಂತರದ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. 2016 ರಲ್ಲಿ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ನಿಧನದಿಂದ ನಾಡು ಹಿರಿಯ ಮುತ್ಸದ್ಧಿಯೊಬ್ಬರನ್ನು ಕಳೆದುಕೊಂಡಂತಾಗಿದೆ.ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಬಿ.ಎ.ಮೊಹಿದ್ದೀನ್ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕೂಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಮೊಹಿದ್ದೀನ್ ಅವರ ನಿಧನದಿಂದ ರಾಜ್ಯ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಅವರ ನಿಧನದಿಂದ ವಯಕ್ತಿಕವಾಗಿ ಬಹಳ ನೋವಾಗಿದೆ ಎಂದಿದ್ದಾರೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ದೇವರು ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ ಸ್ಪೋಟ ಪ್ರಕರಣ: ಅಪರಾಧಿಗಳಿಗೆ ಏಳು ವರ್ಷ ಜೈಲು ಶಿಕ್ಷೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ತಪ್ಪೊಪ್ಪಿಕೊಂಡಿದ್ದ ಮೂವರು ಆರೋಪಿಗಳಿಗೆ ಎನ್ಐಎ ವಿಶೇಷ ನ್ಯಾಯಾಲಯ ಏಳು ವರ್ಷ ಕಾರಾಗೃಹ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ಬಾಂಬ್ ಸ್ಪೋಟ ಪ್ರಕರಣದ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಿದ್ದಲಿಂಗ ಪ್ರಭು ತಪ್ಪೊಪ್ಪಿಕೊಂಡ ಕಮಲ್ ಹಸನ್,ಗೋಹರ್ ಅಜೀಜ್ ಖೊಮೆನಿ ಹಾಗು ಕಪಿಲ್ ಅಖ್ತರ್ ಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನೊಳಗೊಂಡಂತೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು.

ಅಜೀಜ್ ಖೊಮೆನಿ ಮತ್ತು ಕಮಲ್ ಹಸನ್ ಗೆ 7.50 ಲಕ್ಷ ರೂ. ದಂಡ ಹಾಗು ಪ್ರಕರಣದ ಕಪಿಲ್ ಅಖ್ತರ್ ಗೆ 10 ಲಕ್ಷ ರೂ.ದಂಡವನ್ನು ವಿಧಿಸಲಾಗಿದ್ದು,ಅಪರಾಧಿಗಳು ದಂಡ ಕಟ್ಟಲು ವಿಫಲರಾದರೆ 50 ಸಾವಿರ ರೂ.ಗೆ ಒಂದು ವರ್ಷದಂತೆ ಶಿಕ್ಷೆ ವಿಸ್ತರಿಸುವುದಾಗಿ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಶ್ರೀ ವಿರಾಂಜನೇಯನ ದರ್ಶನ ಪಡೆದ ನಟಿ ಅಮೂಲ್ಯ ದಂಪತಿ!

ಚಿಕ್ಕಬಳ್ಳಾಪುರ: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಗೌಡ ಚಿಕ್ಕಬಳ್ಳಾಪುರ ಬಳಿಯ ಶ್ರೀ ವಿರಾಂಜನೇಯನ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿಯಲ್ಲಿರುವ ಸೂಲಾಲಪ್ಪನ‌ದಿನ್ನೆ ಬಳಿಯ ವೀರಾಂಜನೇಯ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತಿಭಾವದಿಂದ ಇಷ್ಟಾರ್ಥಸಿದ್ದಿಗಾಗಿ ಬೇಡಿಕೊಂಡರು. ಆದಿಚುಂಚನಗಿರಿ ಶಾಖಾ ಮಠದ ಪೀಠಾದ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ವಿರಾಂಜನೇಯನಿಗೆ ವಿಶೇಷ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಅಮೂಲ್ಯ ಹಾಗೂ ಜಗದೀಶ್ ಗೌಡ ದಂಪತಿಗೆ ಗೌರವ ಸಮರ್ಪಣೆ ಮಾಡಿ ಆಶೀರ್ವದಿಸಿದರು. ತದನಂತರ ಅಗಲಗುರ್ಕಿ ಗ್ರಾಮದ ಬಳಿಯ ಬಿಜಿಎಸ್ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯಲ್ಲಿ, ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಗೌಡ ಭಾಗವಹಿಸಿದರು. ನಟಿ ಅಮೂಲ್ಯ ಕಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸಗೊಂಡರು. ಇನ್ನೂ ವಿದ್ಯಾರ್ಥಿಗಳು ವೇಷ ಭೂಷಣ ಹಾಗೂ ನೃತ್ಯ ಕಂಡ ನಟಿ ಅಮೂಲ್ಯ ದಂಪತಿ ಕೂಡ ಅಷ್ಟೇ ಸಂತಸಗೊಂಡರು.