ಸಂಪೂರ್ಣ ಸಾಲ ಮನ್ನಾ ವಿಚಾರ: ತಾರಕಕ್ಕೇರಿದ ರೈತರ ಪ್ರತಿಭಟನೆ

ಬೆಂಗಳೂರು: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಯಲ್ಲಿ ನೂರಾರು ರೈತರು ಭಾಗಿಯಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಾಲ ಮನ್ನಾ ಹೆಸರಲ್ಲಿ ಸರ್ಕಾರದಿಂದ ರೈತರಿಗೆ ಅನ್ಯಾಯವಾಗಿದ್ದು, ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು. ಇದೇ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ರೈತರನ್ನು ಪೊಲೀಸರು ಅರ್ಧದಲ್ಲೆ ತಡೆದು, ವಶಕ್ಕೆ ಪಡೆದರು.

ಸಂಪೂರ್ಣ ಸಾಲಮನ್ನಾ ಮಾಡದ ಸರ್ಕಾರದ ವಿರುದ್ದ ರೈತ ಸಮುದಾಯ ತಿರುಗಿಬಿದ್ದಿದೆ. ಒಂದು ಕಡೆ ಕೋಡಿಹಳ್ಳಿ ಚಂದ್ರ ಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ. ಮತ್ತೊಂದೆಡೆ ಬೆಂಗಳೂರಿನ ಶೇಷಾದ್ರಿಪುರಂ ನಲ್ಲಿ ಉತ್ತರ ಕರ್ನಾಟಕದ ಕರ್ನಾಟಕ ರಾಜ್ಯ ರೈತ‌ಸಂಘ ಹಾಗೂ ಹಸಿರು ಸೇನೆಯಿಂದ ಸಭೆ ನಡೆಯಿತು.

ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಹಾಗೂ ಸಂಪೂರ್ಣ ಸಾಲಮನ್ನಾ ಮಾಡದೇ ಕೇವಲ ಸುಸ್ಥಿದಾರರ ಬೆಳೆ ಸಾಲ ಮನ್ನಾ ಮಾಡಿರುವ ಬಗ್ಗೆ ಚರ್ಚೆ ನಡೆಸಿ ಸರ್ಕಾರದ ವಿರುದ್ದ ಹೋರಾಟದ‌ ರೂಪುರೇಷೆ ಸಿದ್ದಪಡಿಸಿದರು.

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ?

ನವದೆಹಲಿ:ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣ ಸಂಬಂಧ ಮೂವರು ಅಪರಾಧಿಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಗಲ್ಲುಶಿಕ್ಷೆ ಆದೇಶ ಪುನರ್ ಪರಿಶೀಲನೆ ನಡೆಸುವಂತೆ ಅಪರಾಧಿಗಳಾದ ಮುಕೇಶ್,ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

ಅಪರಾಧಿಗಳ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಪೀಠ ಅಪರಾಧಿಗಳ ಅರ್ಜಿಯನ್ನು ವಜಾಗೊಳಿಸಿ,2017ರ ಮೇ 5ರಂದು ಸುಪ್ರೀಂಕೋರ್ಟ್ ನೀಡಿದ್ದ ಗಲ್ಲುಶಿಕ್ಷೆ ತೀರ್ಪನ್ನು ಎತ್ತಿಹಿಡಿಯಿತು.

ಪ್ರಕರಣವೇನು?

2012ರ ಡಿಸೆಂಬರ್ 16ರ ರಾತ್ರಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಾವು-ಬದುಕಿನ ನಡುವೆ ಹೋರಾಟ ನಡೆಸಿ 2012ರ ಡಿಸೆಂಬರ್ 29ರಂದು ಸಿಂಗಾಪುರ್ ಆಸ್ಪತ್ರೆಯಲ್ಲಿ ನಿರ್ಭಯಾ ಇಹಲೋಕ ತ್ಯಜಿಸಿದ್ದಳು.

ಪ್ರಕರಣದ ಮುಖ್ಯ ಆರೋಪಿ ರಾಮ್ ಸಿಂಗ್ 2013ರಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.ಮತ್ತೊಬ್ಬನನ್ನು ಬಾಲಾಪರಾಧಿ ಎಂದು ಕೋರ್ಟ್ ಘೋಷಿಸಿ, ಮೂರು ವರ್ಷ ಶಿಕ್ಷೆ ವಿಧಿಸಿತ್ತು. ನಾಲ್ವರು ಅಪರಾಧಿಗಳಿಗೆ 2013ರ ಸೆಪ್ಟೆಂಬರ್ 13ರಂದು ದೆಹಲಿಯ ತ್ವರಿತ ವಿಚಾರಣಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.ದೆಹಲಿ ಹೈಕೋರ್ಟ್ ಕೂಡಾ ನಾಲ್ವರ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ತೀರ್ಪನ್ನು ಎತ್ತಿಹಿಡಿದಿತ್ತು. ಕಳೆದ ವರ್ಷ ಮೇ 5ರಂದು ಸುಪ್ರೀಂಕೋರ್ಟ್ ಕೂಡಾ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಏತನ್ಮಧ್ಯೆ ಮೂವರು ಅಪರಾಧಿಗಳು ಮರಣದಂಡನೆ ಶಿಕ್ಷೆ ಕುರಿತು ಪುನರ್ ಪರಿಶೀಲನೆ ನಡೆಸಬೇಕೆಂದು ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನೂ ಈಗ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ಗಲ್ಲು ಶಿಕ್ಷೆ ಬಹುತೇಕ ಖಾಯಂ ಆದಂತಾಗಿದೆ.

ಸಿಲಿಕಾನ್ ಸಿಟಿಯಲ್ಲಿ ದೀವಾ ಸೌಂದರ್ಯ ಸ್ಪರ್ಧೆಯ ಆಡಿಷನ್:ಕಣ್ಮನ ಸೆಳೆದ ಬೆಡಗಿಯರ ಕ್ಯಾಟ್ ವಾಕ್

ಬೆಂಗಳೂರು:ಸಿಲಿಕಾನ್ ಸಿಟಿಯ ಈ ಬಾರಿಯ ವೀಕೆಂಡ್ ಸ್ಪೆಷಲ್ ಆಗಿತ್ತು.ರ‌್ಯಾಂಪ್ ಮೇಲೆ ಬಳ್ಳಿಯಂತೆ ಬಳುಕುವ ಬೆಡಗಿಯರ ಬಿನ್ನಾಣದ ಕ್ಯಾಟ್ ವಾಕ್ ಯುವ ಸಮೂಹದ ಕಣ್ಮನ ಸೆಳೆಯಿತು.

ಯಸ್,ಯಮಹಾ ಫ್ಯಾಸಿನೋ ಮಿಸ್ ದೀವಾ2018 ಸ್ಪರ್ಧೆಯ ಬೆಂಗಳೂರು ಆಡಿಷನ್ ಪೂರ್ಣಗೊಂಡಿದ್ದು ಫೈನಲ್‌ ಗೆ 9 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಓರ್ವ ಸ್ಪರ್ಧಿ ಮಾತ್ರ ಚೆನ್ನೈನವರಾಗಿದ್ದು ಉಳಿದವರು ಬೆಂಗಳೂರಿನವರೇ ಎನ್ನುವುದು ವಿಶೇಷ.ಫೈನಲ್ ಗೆದ್ದ ಸ್ಪರ್ಧಿಯ ಹತ್ತು ಲಕ್ಷ ಬಹುಮಾನದೊಂದಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳಲಿದ್ದಾರೆ.

ಈ ಆಡಿಷನ್‌ಗೆ ಆಯ್ದ 80 ಸ್ಪರ್ಧಿಗಳಿಗೆ ಮಾತ್ರ ಆಹ್ವಾನಿಸಲಾಗಿತ್ತು.ರ್ಯಾಂಪ್ ವಾಕ್, ಪರ್ಫೆಕ್ಟ್ ಬಾಡಿ, ಕಮ್ಯುನಿಕೇಷನ್ ಸ್ಕಿಲ್ಸ್ ಇನ್ನೂ ಮುಂತಾದ ಸ್ಪರ್ಧೆಯ ಹಲವಾರು ಮುಖಗಳ ಹಣಾಹಣಿಯಲ್ಲಿ ವಿಭಿನ್ನ ಮಾನದಂಡಗಳ ಆಧಾರದ ಮೇಲೆ ಸ್ಪರ್ಧಿಗಳನ್ನು ತೀರ್ಮಾನಿಸಲಾಯಿತು.ಶ್ರೀನಿಧಿ ಶೆಟ್ಟಿ ಮತ್ತು ವಾಸಿಂ ಖಾನ್ ರವರೂ ಸೇರಿದಂತೆ ಬಹು ಪ್ರಮುಖ ದಿಗ್ಗಜರು ತೀರ್ಪುಗಾರರುಗಳಿಂದ ಆ ಸ್ಪರ್ಧೆಗೆ ಕಳೆಗಟ್ಟಿತ್ತು.

ಈ ಅಖಾಡದಲ್ಲಿ ಜಯಿಸಿ ಎಲ್ಲರನ್ನೂ ಸೋಲಿಸುವ ಏಕೈಕ ವಿಜೇತ ಸ್ಪರ್ಧಿಯು ಪ್ರತಿಷ್ಠಿತ ಮಿಸ್ ಯೂನಿವರ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೊದಲನೇ ರನ್ನರ್ ಅಪ್ ಸ್ಪರ್ಧಿಯು  ಪ್ರತಿಷ್ಠಿತ ಮಿಸ್ ಸುಪ್ರಾ ನ್ಯಾಷನಲ್ ವೈಭವದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮಾಜಿ  ಮಿಸ್ ಯೂನಿವರ್ಸ್ ಮತ್ತು ಬಾಲಿವುಡ್ ನಟಿ ಲಾರಾದತ್ತಾ ಮೆಂಟರ್ ಆಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ಒಂದು ಅದ್ಭುತವಾದ ಪಯಣದ ಒಂದು ಭಾಗವಾಗಲಿರುವ ದೇಶದ ಮುಂದಿನ ಯಮಾಹಾ ಫ್ಯಾಸಿನೋ ಮಿಸ್ ದೀವಾ 2018 ರವರನ್ನು ಕಾಣಲು ಬಹು ಉತ್ಸುಕಳಾಗಿದ್ದೇನೆ. ಈ ಅಗ್ರಮಾನ್ಯ ಸ್ಪರ್ಧೆಯ ಆಡಿಷನ್‌ಗಳು ರಾಷ್ಟ್ರವಾಪಿಯಾಗಿ 10 ನಗರಗಳಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾರತೀಯ ಸೌಂದರ್ಯವನ್ನು ಪ್ರತಿನಿಧಿಸಲಿರುವ ಹಾಗೂ ಸೊಬಗು, ಆತ್ಮವಿಶ್ವಾಸ, ಸಮತೋಲನತೆ, ಗುಪ್ತಚರತೆ ಮತ್ತು ಪರಿಪೂರ್ಣ ವರ್ತನೆಗಳ ಸಂಮಿಶ್ರಣದಿಂದ ಮೇಳೈಸಿದ ಒಬ್ಬ ಪ್ರತಿಭಾನ್ವಿತ ಮಹಿಳೆಯನ್ನು ನಾವು ಆಯ್ಕೆ ಮಾಡಲಿದ್ದೇವೆ ಎಂದರು.

ಸ್ಫುರದ್ರೂಪಿಯಾದ, ಕುಶಲಮತಿ ಸ್ಪರ್ಧಾಳುಗಳನ್ನು ಮಿಸ್ ಯೂನಿವರ್ಸ್2018 ಸ್ಪರ್ಧೆಗೆ ಕರೆತರಬೇಕೆಂಬ ನಿಟ್ಟಿನಲ್ಲಿ, ಲಕ್ನೋ, ಕಲ್ಕತ್ತಾ, ಇಂದೋರ್, ಹೈದರಾಬಾದ್, ಪುಣೆ, ಅಹಮದಾಬಾದ್, ಬೆಂಗಳೂರು, ಚಂಢೀಗಡ್ ಮತ್ತು ದೆಹಲಿ ಹಾಗೂ ಅಂತಿಮವಾಗಿ ಮುಂಬೈನಂತಹ ಪ್ರಸಿದ್ಧಿಪಡೆದ ಹತ್ತು ನಗರಗಳಲ್ಲಿ ನಡೆಸಲಾಗುವುದು. ಈ ಒಂದು ಮಿಸ್ ದೀವಾ ಸ್ಪರ್ಧೆಯ ಪಯಣವು ಹೀಗೆ ನಾಲ್ಕು-ನಗರಗಳ ಪ್ರವಾಸದ ಮೂಲಕ ನಡೆಯಲಿದೆ, ಈ ವರ್ಷವೇ ಮೊಟ್ಟಮೊದಲ ಬಾರಿಗೆ ಈ ಬಗೆಯ ಸೌಂದರ್ಯ ಹಣಾಹಣಿಯ ಪಯಣವನ್ನು ಪರಿಚಯಿಸಲಾಗಿರುತ್ತದೆ. ಅನನ್ಯವಾದ ಪರಿಕಲ್ಪನೆಯ ಆಧಾರಿತವಾಗಿರುವ ಈ ಒಂದು ಸ್ಪರ್ಧೆಯಲ್ಲಿ ಕಿರೀಟವನ್ನು ಗೆಲ್ಲಲೆಂದು ಹಗಲಿರುಳು ಶ್ರಮಿಸುವ ಸ್ಪರ್ಧಾಳುಗಳನ್ನು ಕಾಣಬಹುದಾಗಿದೆ.

ಉಪ-ಸ್ಪರ್ಧೆಗಳನ್ನು ಗೋವಾ, ದೆಹಲಿ, ಚೆನ್ನೈ ಮತ್ತು ಮುಂಬೈ ನಂತಹ – ನಾಲ್ಕು ನಗರಗಳಲ್ಲಿ ಆಯೋಜಿಸಲಾಗುವುದು. ಅಂದರೆ ನಿಗದಿತ ಥೀಮ್ ಆಧಾರಿತ ಸ್ಪರ್ಧೆಯ ಸಂಜೆಗಳನ್ನು ನಡೆಸುವ ಮೂಲಕ ಸ್ಪರ್ಧಾಳುಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು  ಈ ಸ್ಪರ್ಧೆಯನ್ನು ನಡೆಸಲಾಗುತ್ತದೆ.

ಧರಂ ಸಿಂಗ್ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಸದನದಲ್ಲಿ‌ ಸ್ವಾರಸ್ಯಕರ ಚರ್ಚೆ

ಬೆಂಗಳೂರು: 2006ರ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ದಿನಗಳ ಬಗ್ಗೆ ಇಂದು ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಒಬ್ಬರು ಧರಂಸಿಂಗ್ ಬೆನ್ನಿಗೆ ನೀವು ಚೂರಿ ಹಾಕಿದ್ರಿ ಅಂದ್ರೆ ಇನ್ನೊಬ್ಬರು ಅದಕ್ಕೆ ನೀವು ಕಾರಣ ಅಂದ್ರು ಹಾಗಾದ್ರೆ ವಿಧಾನಸಭೆಯಲ್ಲಿ ಇವತ್ತು ಏನ್ ನಡೀತು ತಿಳ್ಕೊಬೇಕಾ ಹಾಗಾದ್ರೆ ಈ ಸ್ಟೋರಿ ಓದಿ!

ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ನಡುವೆ 2006 ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದ ಕುರಿತು ವಾಗ್ಯುದ್ದವೇ ನಡೆಯಿತು. ನೀವು ಧರ್ಮಸಿಂಗ್ ಅವರಿಗೆ ನಂಬಿಕೆ ದ್ರೋಹ ಮಾಡಿದ್ರಿ, ಅವರ ಬೆನ್ನಿಗೆ ಚೂರಿ ಹಾಕಿ ನಮ್ಮ ಜತೆ ಕೈ ಜೋಡಿಸಿದ್ರಿ. ಅದೇ ಅವರ ಸಾವಿಗೆ ಕಾರಣವಾಯ್ತು ಎಂದು ಯಡಿಯೂರಪ್ಪ ಆರೋಪಿಸಿದರು. ಇದಕ್ಕೆ ಜೆಡಿಎಸ್ ಕಾಂಗ್ರೆಸ್ ಶಾಸಕರ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದರು.

ಸದನದಲ್ಲಿ ಬಿಎಸ್ವೈ ಮಾಡಿದ ಆರೋಪವನ್ನು ಒಪ್ಪದ ಸ್ಪೀಕರ್ ರಮೇಶ್ ಕುಮಾರ್, ಧರ್ಮಸಿಂಗ್ ಸ್ವರ್ಗಸ್ತರಾಗಿರೋದು ಇತ್ತೀಚೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆದಮೇಲೂ ಧರ್ಮಸಿಂಗ್ ಬದುಕಿದ್ದರು ಎಂದು ಹೇಳಿದರು.

ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಕುಮಾರಸ್ವಾಮಿ, ನಾನು ಧರ್ಮಸಿಂಗ್ ಬೆನ್ನಿಗೆ ಚೂರಿ ಹಾಕಿದ್ದಿದ್ರೆ ಅದ್ರಲ್ಲಿ ನೀವೂ ಸಹಾ ಪಾಲುದಾರರೇ. ಇಷ್ಟು ಸಣ್ಣತನದ ಹೇಳಿಕೆ ಯಡಿಯುರಪ್ಪನವರಿಗೆ ಶೋಭೆ ತರಲ್ಲ. ನಾನು ಸಿಎಂ ಆಗ್ತೀನಿ ಅಂತ ಯಡಿಯೂರಪ್ಪ ಮನೆಗೆ ಹೋಗಿರ್ಲಿಲ್ಲ. ಅವರೇ ಬೆಂಬಲ ಕೊಡ್ತೀವಿ ಅಂತ ನಮ್ಮ ಬಳಿ ಬಂದ್ರು.

ಎಂ.ಪಿ.ಪ್ರಕಾಶ್ ಇವತ್ತು ನಮ್ಮ ಜೊತೆ ಇಲ್ಲ. ನಾನು ಮುಖ್ಯಮಂತ್ರಿಯಾಗಲು ಆಗಲೂ ಆಸೆ ಪಟ್ಟವನಲ್ಲ, ಈಗಲೂ ಆಸೆ ಪಟ್ಟವನಲ್ಲ. ಎಂ.ಪಿ.ಪ್ರಕಾಶ್ ರನ್ನು ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿದ್ದೆ. ಆದರೆ, ಮುಖ್ಯಮಂತ್ರಿಯಾಗಲು ಎಂ.ಪಿ.ಪ್ರಕಾಶ್ ನಿರಾಕರಿಸಿದ್ರು. ಎ..ಪಿ.ಪ್ರಕಾಶ್ ಆಶೀರ್ವಾದ ಮಾಡಿ ನೀವೇ ಮೈತ್ರಿ ಸರಕಾರ ಮುನ್ನಡೆಸು ಎಂದಿದ್ದರು ಎಂದು ಸಿಎಂ ವಿಧಾನಸಭೆಯಲ್ಲಿ ತಿಳಿಸಿದರು‌.

20ತಿಂಗಳಾದ ಮೇಲೆ ನನಗೆ ಮುಖ್ಯಮಂತ್ರಿ ಸ್ಥಾನ ಕೊಡದೆ ಮೋಸ ಮಾಡಿದ್ರು. ದೇವರು ದೊಡ್ಡವನು. ನಂತರ ಚುನಾವಣೆಯಲ್ಲಿ 110 ಸ್ಥಾನ ಗೆದ್ದು, ಐದು ವರ್ಷ ಆಡಳಿತ ಮಾಡಿದೆವು‌. ನಿಜ ಮೂರು ಮುಖ್ಯಮಂತ್ರಿ ಗಳಾದೆವು. ಆದರೆ ಆಗ ಮಾಡಿದ ಒಳ್ಳೆಯ ಆಡಳಿತದ ಪರಿಣಾಮವೇ ಈ ಬಾರಿ ಮತ್ತೆ ಜನ ನಮಗೆ 104 ಸ್ಥಾನ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಬಿಜೆಪಿ ಆಡಳಿತದ ವೈಖರಿಯನ್ನು ಸಮರ್ಥಿಸಿಕೊಳ್ಳುತ್ತಾ ಜಿಡಿಎಸ್ ಪಕ್ಷವನ್ನು ದೂರಿದರು.

ಮೈತ್ರಿ ಸರ್ಕಾರ ಅನಾಥ ಶಿಶುವಲ್ಲ ಮೈತ್ರಿ ಸರ್ಕಾರಕ್ಕೂ ತಂದೆ, ತಾಯಿಗಳಿದ್ದಾರೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಮೈತ್ರಿ ಸರ್ಕಾರ ಸಾಂದರ್ಭಿಕ ಶಿಶು ಇರಬಹುದು. ಆದರೆ, ಈ ಶಿಶು ಅನಾಥ ಶಿಶುವಲ್ಲ. ಈ ಶಿಶುವಿಗೂ ತಂದೆ-ತಾಯಿಗಳಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರೇ ನನ್ನ ತಂದೆ-ತಾಯಿ. ಈ ತಂದೆ-ತಾಯಿ ಯಿಂದಲೇ ನಾನು ಸಾಂದರ್ಭಿಕ ಶಿಶುವಾದೆ ಎಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಬಿಜೆಪಿಯವರ ವ್ಯಂಗ್ಯಕ್ಕೆ ಉತ್ತರ ನೀಡಿದರು.

ರಾಜ್ಯಪಾಲರ ಭಾಷಣದ ಕುರಿತು ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಉತ್ತರ ನೀಡಿದರು. ಮಹಾಭಾರತದ ಕರ್ಣನ ಜೊತೆ ತಮ್ಮನ್ನು ಹೋಲಿಸಿಕೊಂಡ ಸಿಎಂ ಕುಮಾರಸ್ವಾಮಿ, ನಾನೊಬ್ಬ ಸಾಂದರ್ಭಿಕ ಶಿಶು. ಆದರೆ, ಬಿಜೆಪಿಯವರು ಹೇಳಿದಂತೆ ನಾನು ಅನಾಥ ಶಿಶುವಲ್ಲ. ಮಹಾಭಾರತದ ಕರ್ಣನೂ ಸಹ ಒಬ್ಬ ಸಾಂದರ್ಭಿಕ ಶಿಶುವೇ. ಕರ್ಣನಿಗೂ ತಾಯಿ ಇದ್ದಳು. ನನಗೂ ಅಪ್ಪ ಅಮ್ಮ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರೇ ನನ್ನ ತಂದೆ-ತಾಯಿ. ಈ ತಂದೆ-ತಾಯಿಯಿಂದಲೇ ನಾನು ಸಾಂದರ್ಭಿಕ ಶಿಶುವಾದೆ ಎಂದು ಮಹಭಾರತದ ಪ್ರಸಂಗವನ್ನು ಸಿಎಂ ತಮ್ಮ ಮೈತ್ರಿ ಸರ್ಕಾರದ ರಚನೆ ಜೊತೆ ಹೋಲಿಸಿ ವಿಧಾನಸಭೆಯಲ್ಲಿ ಮಾತನಾಡಿದರು.

ಸಾಂದರ್ಭಿಕ ಶಿಶುಗೂ ಅಪ್ಪ ಅಮ್ಮಾ ಇದ್ದಾರೆ. ಅವರ ಬೆಂಬಲದಿಂದಲೇ ಈ ಶಿಶು ಜನಿಸಿರೋದು. ಟೀಕೆಗೆಳ ಬಗ್ಗೆ ನಾನು ಹೆಚ್ಚು ತಲೆ ಕಡೆಸಿಕೊಳ್ಳಲ್ಲ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವಿತ್ತು. ಆಗ ರೆಸಾರ್ಟ್ ನಲ್ಲಿ ಏನೇನಾಗಿತ್ತು. 40 ಶಾಸಕರ ಬಂಡಾಯ ಏನೇಯ್ತು ಎಂದು ನೆನಪಿಸಿಕೊಳ್ಳಿ ಎಂದರು.

ರೈತರ ಸಾಲ ಮನ್ನಾಗೂ ಜಾತಿ ಲೇಪನ ಮಾಡಿದ್ದಾರೆ‌. ರೈತರು ಬೆಳೆದ ಅನ್ನಕ್ಕೆ ಒಕ್ಕಲಿಗ ಬೆಳೆದ ಅನ್ನ ಲಿಂಗಾಯಿತ ಬೆಳೆದ ಅನ್ನ ಎಂದು ಬರೆದಿರುತ್ತಾರಾ. ಬಜೆಟ್ ಮೇಲಿನ ಉತ್ತರದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ರಾಜಕೀಯ ಮಾಡಿ, ಟೀಕೆ ಮಾಡಿ .ಪ್ರತಿಪಕ್ಷ ಇರೋದೆ ಟೀಕೆ ಮಾಡೋದಕ್ಕೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ರಾಜ್ಯಪಾಲರ ಭಾಷಣದಲ್ಲಿ ಏನು ಇಲ್ಲ ಎಂದು ಟೀಕೆ ಮಾಡಿದ್ದಾರೆ. ಅದರೂ, 20ಕ್ಕೂ ಹೆಚ್ಚು ಶಾಸಕರು 16.20 ಗಂಟೆ ಚರ್ಚೆ ಮಾಡಿದ್ದಾರೆ. ಕೆಲವರು ತೀಕ್ಷ್ಣ ಟೀಕೆ ಮಾಡಿದ್ದಾರೆ. ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ. ರಾಜ್ಯಪಾಲರ ಭಾಷಣಕ್ಕೆ ದಿಕ್ಕು ದೆಸೆ ಇಲ್ಲ ಎನ್ನುತ್ತಲೆ 16 ಗಂಟೆ ಚರ್ಚೆ ಮಾಡಿದ್ದಾರೆ‌. ಇನ್ನು ದಿಕ್ಕು ದೆಸೆ ಇದ್ದಿದ್ದರೆ ಇನ್ನೆಷ್ಟು ಗಂಟೆ ಭಾಷಣ ಮಾಡಲಾಗುತ್ತಿತ್ತೋ‌. ಆದರೆ, ಸರ್ಕಾರದ ಆಡಳಿತ ವೈಖರಿ ಬಗ್ಗೆ ಸಲಹೆಗಳನ್ನು ನೀಡಿರುವ ಆಡಳಿತ ಮತ್ತು ಪ್ರತಿಪಕ್ಷ ಪ್ರಮುಖರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಅಪವಿತ್ರ ಮೈತ್ರಿಯ ಸರ್ಕಾರ ಎಷ್ಟು ದಿನ ಇರುತ್ತೋ ಏನೋ ಎಂಬ ಆತಂಕವನ್ನು ಮಾಧುಸ್ವಾಮಿ ವ್ಯಕ್ತಪಡಿಸಿದ್ದಾರೆ. ಆತಂಕ ಬೇಡ ಈ ಸರ್ಕಾರ ಐದು ವರ್ಷ ಇರುತ್ತದೆ. ಮತ್ತೆ ಚುನಾವಣೆ ಎದುರಿಸುವ ಪ್ರಸಂಗ ಬರೋದಿಲ್ಲ. ನಮ್ಮ ಸರ್ಕಾರ ರಚನೆ ಆಗಿರೋದೇ ಈಗ, ನಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಬೇಕಾದರೆ ಮುಂದಿನ ರಾಜ್ಯಪಾಲರ ಭಾಷಣದಲ್ಲಿ ಹೇಳಬಹುದು. ನಾವು ರೈತರಿಗೆ ಮನವಿ ಮಾಡುತ್ತೇವೆ‌. ಸರ್ಕಾರ ನಿಮ್ಮ ಪರವಾಗಿದೆ ಆತ್ಮಹತ್ಯೆಗೆ ಶರಣಾಗಬೇಡಿ‌. ನಮಗೆ ಸಮಯಾವಕಾಶಕೊಡಿ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುತ್ತೇವೆ ಎಂದು ರೈತರಲ್ಲಿ ಮನವಿ ಮಾಡಿದರು.

ಹಿಂದೆ ಸರ್ಕಾರದಲ್ಲಿ ಇದ್ದವರು ಕೈಗೊಂಡ ನಿರ್ಧಾರಗಳಿಂದ ಕೆಲವು ಒಳ್ಳೆಯ ಹಾಗೂ ಕೆಲವು ಕೆಟ್ಟ ಪರಿಣಾಮಗಳೂ ಆಗಿವೆ. ಡಿ.ಕೆ.ರವಿ ಹಾಗೂ ಡಿವೈಎಸ್ ಪಿ ಎಂ.ಕೆ.ಗಣಪತಿ ಸಾವಿನ ಪ್ರಕರಣದಲ್ಲಿ ಪ್ರತಿಪಕ್ಷದಲ್ಲಿದ್ದಾಗ ನಾನು ಸಿಬಿಐಗೆ ತನಿಖೆಗೆ ಒತ್ತಾಯಿಸಿದ್ದೆ. ಡಿ.ಕೆ.ರವಿ ಪ್ರಕರಣ ಅತ್ಮಹತ್ಯೆ ಎಂದು ಸಿಬಿಐ ವರದಿ ನೀಡಿದೆ. ಮತ್ತು ಗಣಪತಿ ಪ್ರಕರಣದಲ್ಲಿ ಜಾರ್ಜ್ ಪಾತ್ರ ಏನೂ ಇಲ್ಲ ಎಂದು ನ್ಯಾಯಾಲಯ ತೀರ್ಪು ಕೊಟ್ಟಿದೆ. ಹಾಗಾಗಿ ಜಾರ್ಜ್ ರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡು ನಾನೇನು ಮಹಾಪರಾಧ ಮಾಡಿಲ್ಲ. ಬಿಜೆಪಿಯವರು ನನ್ನ ವಚನ ಭ್ರಷ್ಟತೆ ಬಗ್ಗೆ ಪ್ರಶ್ನಿಸುವ ಮೊದಲು ತಾವು ಎಷ್ಟು ವಚನ ಭ್ರಷ್ಟರಾಗಿದ್ದಾರೆ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೌರವ ಇಟ್ಡುಕೊಂಡ ಕಾರಣಕ್ಕೆ ವಿರೋಧ ಪಕ್ಷ ನಾಯಕರನ್ನು ಅಭಿನಂದಿಸುತ್ತೇನೆ ಎಂದರು.

ಇದು 37 ಶಾಸಕರ ಸರ್ಕಾರ ಅಲ್ಲ.120 ಶಾಸಕರ ಸರ್ಕಾರ. 2006ರಲ್ಲಿ ಬಿಜೆಪಿಯವರು ನಮ್ಮ ಜತೆ ಕೈ ಜೋಡಿಸಿದಾಗ 74 ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿಯ ರಿಗೆ 35 ಶಾಸಕರಿದ್ದ ನನಗೆ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದ್ದು ಮರೆತು ಹೋಯ್ತಾ. ಅಂದೂ ಕೂಡ ನಾನೇನು ಮುಖ್ಯಮಂತ್ರಿ ಮಾಡಿ ಎಂದು ನಿಮ್ಮ ಬಳಿ ಬಂದಿರಲಿಲ್ಲ. ರಾಜ್ಯಪಾಲರು ಮೊದಲು ನಿಮಗೇ 104 ಶಾಸಕರ ದೊಡ್ಡ ಪಕ್ಷ ಎಂದು ನಿಮಗೆ ಅವಕಾಶ ಕೊಟ್ಟರು. ಆದರೆ, ನಿಮಗೆ ಬಹುಮತ ಸಂಖ್ಯೆ ಬರಲಿಲ್ಲ. ಜುಲೈ 12 ರ ನಂತರ ಸರ್ಕಾರ ಉಳಿಯುವುದು ಕಷ್ಷ. ಜುಲೈ 27 ಚಂದ್ರಗ್ರಹಣ ಕುಮಾರಸ್ವಾಮಿ ಯವರಿಗೆ ಕಷ್ಡ ಎಂದು ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ನನಗೆ ದೇವರ ಆಶೀರ್ವಾದ ಹಾಗೂ ಕಾಂಗ್ರೆಸ್ ನ ಬೆಂಬಲ ಇದೆ. ಏನೂ ಆಗಲ್ಲ ಮಹಾಭಾರತದ ಕರ್ಣ ಕೂಡ ಸಾಂದರ್ಬಿಕ ಶಿಶು. ನಮ್ಮ‌ಬಿಜೆಪಿಯವರು ಬಿಂಬಿಸಿದಂತೆ ಅನಾಥ ಶಿಶು ಅಲ್ಲ.

ಒಂದೂವರೆ ತಿಂಗಳಲ್ಲಿ ಜನತಾ ದರ್ಶನದಲ್ಲಿ ಹೇಗೆ ಸ್ಪಂದಿಸಿದ್ದೇನೆ ಎಂಬ ಬಗ್ಗೆ ನೂರು ಉದಾಹರಣೆಗಳನ್ನು ಕೊಡಬಲ್ಲೆ‌. ಅಂಗವಿಲ ಹೆಣ್ಣುಮಗಳೊಬ್ಬಳಿಗೆ 24 ಗಂಟೆಯಲ್ಲಿ ಕೆಲಸ ಕೊಡಿಸಿದ್ದೇನೆ. ಆ ಹೆಣ್ಣು ಮಗಳು ವಿಭೂತಿ ಬಳಿದುಕೊಂಡಿದ್ದಳು ಎಂದು ವಾಪಸ್ ಕಳಿಸಿಲ್ಲ. ಜಾತಿ ನೋಡಿ ನಾನು ಕೆಲಸ ಮಾಡಲ್ಲ. ನಾನು ಒಂದು ಜಾತಿಯ ಮುಖ್ಯಮಂತ್ರಿಯಲ್ಲ. ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ನನ್ನ ಒಂದು ಜಾತಿಗೆ ಸೀಮಿತ ಮಾಡಬೇಡಿ. ರೈತರ 36000 ಕೋಟಿ ರೂ.ಸಾಲ ಮನ್ನಾ ಮಾಡಿರೋದು ಮೊದಲ ಹಂತ ಮಾತ್ರ. ಇನ್ಮೂ ಸ್ಕೀಂಗಳನ್ನು ರೂಪಿಸುತ್ತಿದ್ದೇವೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ. ಅದಕ್ಕೆ ಸಮಯ ಬೇಕು.
ಇವತ್ತು ರೈತರ ಸಾಲ ಮನ್ನಾಗೆ ಹೋರಾಟದ ಮಾತುಗಳಾಡುತ್ತಿರುವ ಯಡಿಯೂರಪ್ಪ ಉಪಮುಖ್ಯಮಂತ್ರಿ ಯಾಗಿ ಸಾಲ ಮನ್ನಾ ಬಗ್ಗೆ ವಿಧಾನ ಪರಿಷತ್ ನಲ್ಲಿ ಏನು ಹೇಳಿದ್ರು ಎಂಬುದನ್ನು ನೆನಪಿಸುತ್ತೇನೆ.

ವಿಧಾನಸಭೆ ಸೋಲು ಮರೆತು ಲೋಕಸಭಾ ಚುನಾವಣೆಗೆ ತಯಾರಾಗಿ: ಪರಾಜಿತ ಅಭ್ಯರ್ಥಿಗಳಿಗೆ ಪರಂ ಕರೆ

ಬೆಂಗಳೂರು: ಲೋಕಸಭಾ ಚುನಾವಣೆ ಸಂಬಂಧ ಇಂದು ಶಾಸಕರ ಭವನದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಪರಾಭವಗೊಂಡ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದರು.

ರಾಜಕೀಯ ಬೆಳವಣಿಗೆಯಿಂದಾಗಿ ಗೆಲ್ಲುವ ಶಾಸಕರು ಸಹ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಹಾಗೆಂದು ನಿರಾಶಭಾವ ತಳೆಯಬೇಡಿ. ಪಕ್ಷ‌ ಹಾಗೂ ಕಾರ್ಯಕರ್ತರು ಸದಾ ನಿಮ್ಮೊಂದಿಗಿದ್ದಾರೆ ಎಂದು ಆತ್ಮವಿಶ್ವಾಸ ತುಂಬಿದರು. ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ‌ ನೇತೃತ್ವದಲ್ಲಿ‌ ಈ ಬಾರಿ ಲೋಕಸಭಾ ಚುನಾವಣೆ ಎದುರಿಸಲಿದ್ದೇವೆ. ಹೀಗಾಗಿ, ಪ್ರತಿಯೊಬ್ಬರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚಿಸಿದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ‌ ಕಾಂಗ್ರೆಸ್ ಸದೃಢಗೊಂಡು, ವಿಧಾನಸಭಾ ಚುನಾವಣೆಯಲ್ಲಿ ಆದ ಅಷ್ಟೂ ನಷ್ಟವನ್ನು ತುಂಬಬೇಕಿದೆ. ಈ ನಿಟ್ಟಿನಲ್ಲಿ‌ ಎಲ್ಲರೂ ಸಕ್ರಿಯರಾಗುವಂತೆ ಸಲಹೆ‌ ನೀಡಿದರು.

ಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ‌ ನಿಯೋಜಿತ ಅಧ್ಯಕ್ಷ ದಿನೇಶ್ ಗುಂಡೂರಾವ್, ನಿಯೋಜಿತ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕಾಗೋಡು ತಿಮ್ಮಪ್ಪ ಉಪಸ್ಥಿತರಿದ್ದರು.