ಬಯಲುಸೀಮೆಗೆ ನೀರು ಹರಿಸುವ ಮಹತ್ವಾಕಾಂಕ್ಷೆ ಯೋಜನೆ ಎತ್ತಿನಹೊಳೆಗೆ ಡಿಕೆಶಿ ಖುದ್ದು ಭೇಟಿ!

ಹಾಸನ: ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಸೇರಿದಂತೆ ಬಯಲು ಸೀಮೆಗೆ ನೀರನ್ನು ಹರಿಸುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಪರಿಶೀಲನೆಗೆ ಇಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಖುದ್ದು ಭೇಟಿ ನೀಡಿದ್ದರು.

ಜಲ ಸಂಪನ್ಮೂಲ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಖುದ್ದು ಹಾಸನದ ಎತ್ತಿನಹೊಳೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಸ್ಥಳಕ್ಕೆ ಭೇಟಿ ನೀಡುವ ಮುನ್ನ ಸಕಲೇಶಪುರದ ಖಾಸಗಿ ಹೋಟೆಲ್ನಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಇಷ್ಟು ದುಬಾರಿ ವೆಚ್ಚದಲ್ಲಿ ಯೋಜನೆ ನಡೆಯುತ್ತಿದ್ದು , ಕಾಲುವೆ ಮುಖಾಂತರ ಪಂಪ್ ಸೆಟ್ ಹಾಕಿ ಕೆಲವರು ನೀರನ್ನ ಕದಿಯುತ್ತಾರೆ ಅದ್ರ ಬಗ್ಗೆ ಎಚ್ಚರವಿರಬೇಕು ಜೊತೆಗೆ ನಿಮ್ಮ ಕೈಲಾಗದಿದ್ದರೆ ನಾನು ಪರ್ಯಾಯ ಮಾರ್ಗ ಹುಡುಕುತ್ತೇನೆಂದು ಅಧಿಕಾರಿಗಳಿಗೆ ಟಾಂಗ್ ಕೊಟ್ಟರು.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಮಲೆನಾಡಲ್ಲಿ ವರ್ಷದಲ್ಲಿ ಆರು ತಿಂಗಳು ಮಳೆಯಾಗುತ್ತದೆ ಹೀಗಾಗಿ ನಿರ್ದಿಷ್ಟ ಸಮಯದಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗುವುದಿಲ್ಲ ಮುಂದಿನ ದಿನಗಳಲ್ಲಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.

ಪ್ರಮುಖ ನಿಗಮ ಮಂಡಳಿಗೆ ಇಬ್ಬರು ಶಾಸಕರ ಲಾಬಿ!

ಬೆಂಗಳೂರು: ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವುದು ಅರಿವಾದ ಬಳಿಕ ಇದೀಗ ಇಬ್ಬರು ಕೈ ಶಾಸಕರು ಪ್ರಮುಖ ನಿಗಮ ಮಂಡಳಿಗಳಿಗೆ ಲಾಬಿ ಆರಂಭಿಸಿದ್ದಾರೆ.

ನಿಮಗ ಮಂಡಳಿಗಳ ಪೈಕಿ ಅತ್ಯಂತ ಪ್ರಮುಖವಾದವುಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದು. ಇದರ ಅಧ್ಯಕ್ಷರಾಗಲು ಇಬ್ಬರು ಶಾಸಕರು ತೀವ್ರ ಪೈಪೋಟಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರಾಗಿರುವ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಾಗೂ ಇತ್ತೀಚಿನವರೆಗೂ ಸಿದ್ದರಾಮಯ್ಯರಿಗೆ ಆಪ್ತರಾಗಿದ್ದು ಇತ್ತೀಚೆಗೆ ಮುನಿಸಿಕೊಂಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಬಿಡಿಎ ಅಧ್ಯಕ್ಷ ಗಿರಿಯ ರೇಸ್‌ನಲ್ಲಿದ್ದಾರೆ.

ಸಿದ್ದರಾಮಯ್ಯ ಲಾಬಿ

ಬೈರತಿ ಸುರೇಶ್ ಗೆ ಸಿದ್ದರಾಮಯ್ಯ ಸಾಥ್ ನೀಡುತಿದ್ದು, ಹೈಕಮಾಂಡ್ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಅಲ್ಲದೇ ಒಂದು ಮಾಹಿತಿ ಪ್ರಕಾರ ತಮ್ಮ ವಿರುದ್ಧ ಮುನಿಸಿಕೊಂಡಿರುವ ಆಪ್ತ ಎಂಟಿಬಿ ನಾಗರಾಜ್ ಗೆ ಕೂಡ ಒಂದು ಉತ್ತಮ ಸ್ಥಾನ ಕಲ್ಪಿಸಿ ಮತ್ತೆ ಆತ್ಮೀಯತೆ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಇದರಿಂದ ತಮ್ಮವರ ಪರ ಸಿದ್ದರಾಮಯ್ಯ ಅದಾಗಲೇ ಹೈಕಮಾಂಡ್ ಮಟ್ಟದಲ್ಲಿ ಕೂಡ ಲಾಬಿ ನಡೆಸಿದ್ದಾರೆ. ಬಿಡಿಎ ಕೈವಶಮಾಡಿಕೊಳ್ಳಲು ಇಬ್ಬರೂ ಶಾಸಕರು ಪ್ರಯತ್ನಿಸಿದ್ದು, ಇವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಪರಮೇಶ್ವರ್ ಅಡ್ಡಗಾಲು?
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರೇ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವುದರಿಂದ ಬಿಡಿಎ ತಮ್ಮ ಹಿಡಿತದಲ್ಲಿಯೇ ಇರಲಿ ಎಂಬ ಕಾರಣಕ್ಕೆ ತಮ್ಮ ಆಪ್ತರಿಗೆ ಕೊಡಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಅದಾಗಲೇ ವಿಧಾನ ಪರಿಷತ್ ಸಭಾಪತಿ ವಿಚಾರದಲ್ಲಿ ಎಸ್.ಆರ್. ಪಾಟೀಲ್ ಹೆಸರು ಬಹುತೇಕ ಅಂತಿಮವಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅಧಿಕಾರ ವಹಿಸಿಕೊಂಡಿದ್ದಾರೆ. ಇಲ್ಲೆಲ್ಲೂ ಪರಮೇಶ್ವರ್ ಗೆ ತಮ್ಮವರನ್ನು ಅಧಿಕಾರಕ್ಕೇರಿಸಲು ಸಾಧ್ಯವಾಗಿಲ್ಲ. ಕನಿಷ್ಠ ನಿಗಮ ಮಂಡಳಿಗಳ ವಿಚಾರದಲ್ಲಾದರೂ, ಸಿದ್ದರಾಮಯ್ಯರನ್ನು ಓವರ್ ಟೇಕ್ ಮಾಡಿ ತಮ್ಮ ಸ್ಥಾನದ ಹಿರಿತನ ಮೆರೆಯುವ ಯತ್ನದಲ್ಲಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ಕಡೆಯವರು ಎಂದು ಯಾವೊಬ್ಬ ಶಾಸಕರನ್ನು ಇವರು ಸೂಚಿಸದಿದ್ದರೂ, ತಮ್ಮವರಿಗೆ ಕೊಡಿಸುವ ನಿಟ್ಟಿಯಲ್ಲಿ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

ನಿಗಮ ಮಂಡಳಿ ಮೊದಲು
ಅದಾಗಲೇ ಹೈಕಮಂಡ್ ಮಟ್ಟದಲ್ಲಿ ನಡೆದ ಮಾತುಕತೆಯ ಫಲವೆಂದರೆ, ಅಧಿವೇಶನ ಮುಗಿದ ಕೂಡಲೇ ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗಿಬಿಡಬೇಕು. ಅದಾದ ನಂತರ ಸಚಿವ ಸಂಪುಟ ವಿಸ್ತರಣೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ಪ್ರಕಾರ ಸದ್ಯ ರಾಜ್ಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಆಕಾಂಕ್ಷಿಗಳು ತೀವ್ರ ಲಾಬಿ ಆರಂಭಿಸಿದ್ದಾರೆ.

ಜೆಡಿಎಸ್ ಗೆ ಲಾಭವಾಗುವ ಬಜೆಟ್ ಗೆ ಕೈ ಹಿರಿಯರು ಗರಂ: ಪರಮೇಶ್ವರ್ ಗೆ ವರದಿ ಕೇಳಿದ ವೇಣುಗೋಪಾಲ್

ಫೋಟೋ ಕೃಪೆ: ಟ್ವಿಟ್ಟರ್

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೂ ಕೂಡ ಕೇವಲ ಜೆಡಿಎಸ್ ಗೆ ಪೂರಕ ವಾತಾವರಣ ಸೃಷ್ಠಿಯಾಗುವಂತೆ ಬಜೆಟ್ ಮಂಡಿಸಲು ಅವಕಾಶ ಕಲ್ಪಿಸಿದ ಕುರಿತು ವರದಿ ನೀಡುವಂತೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲಗ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಜೆಟ್ ಗೆ ಕಾಂಗ್ರೆಸ್ ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಕಾಂಗ್ರೆಸ್ ಹಿರಿಯ ನಾಯಕರು ಹೈಕಮಾಂಡ್ ಬಾಗಿಲು ತಟ್ಟುವ ಮೂಲಕ ಪರಮೇಶ್ವರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಎಚ್ ಕೆ ಪಾಟೀಲ್ ನೇತೃತ್ವದ ತಂಡದಿಂದ ವೇಣುಗೋಪಾಲ್ ಗೆ ದೂರು ನೀಡಲಾಗಿದೆ. ಮೈತ್ರಿ ತತ್ವದ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ನಡೆದುಕೊಂಡಿದ್ದಾರೆ.ಬಜೆಟ್ ಮೇಲೆ ಜೆಡಿಎಸ್ ಹಿಡಿತ ಸಾಧಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈತರ ಸಾಲಮನ್ನ ಕ್ಕೆ ನಾವು ಸಪೋರ್ಟ್ ಮಾಡಿದ್ದೀವಿ ಸಾಲಮನ್ನ ಕ್ರೆಡಿಟ್ ಇಂದಲ್ಲ ನಾಳೆ ಜೆಡಿಎಸ್ ಹೋಗುತ್ತೆ. ಇದರಿಂದ ಕಾಂಗ್ರೆಸ್ ಗೆ ಆಗೋ ಲಾಭವಾದ್ರೂ ಏನು ? ತೈಲ ಬೆಲೆ ಏರಿಕೆ ಬಗ್ಗೆ ನಾವು ರಾಷ್ಟ್ರಮಟ್ಟದಲ್ಲಿ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದೇವೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಸಿಲಿಂಡರ್ ತಲೆ ಮೇಲೆ ಇಟ್ಕೊಂಡು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದ್ರು ಈಗ ರಾಜ್ಯ ಬಜೆಟ್ ಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಇದರಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವ ನೈತಿಕತೆ ಕಳೆದುಕೊಂಡಿದ್ದೇವೆ ಅಂತ ಹಿರಿಯ ನಾಯಕರು ಪ್ರಶ್ನೆ ಮಾಡಿದ್ದಾರೆ.

ಇದರ ನೇರ ಲಾಭ ರಾಜ್ಯದಲ್ಲಿ ಬಿಜೆಪಿಗೆ ಆಗುತ್ತೆ.
ಇದೇನು ಬಿಜೆಪಿಗೆ ಲಾಭ ಮಾಡಲು ಮಂಡಿಸಿದ ಬಜೆಟಾ ಅಂತ ವೇಣುಗೋಪಾಲ್ ಬಳಿ ಪ್ರಶ್ನೆ ಮಾಡಿದ್ದಾರೆ.ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ನೆಲೆ ಇದೆ. ಆದ್ರೆ ಜೆಡಿಎಸ್ ಗೆ ಇಲ್ಲ. ಬಿಜೆಪಿಯನ್ನು ನೇರವಾಗಿ ಫೇಸ್ ಮಾಡಬೇಕಿರೋದು ನಾವೇ. ಆದ್ರೆ ಬಜೆಟ್ ನಲ್ಲಿ ಆಗಿದ್ದೇನು ? ಜೆಡಿಎಸ್ ಪ್ರಾಬಲ್ಯ ಇರೋ ಜಿಲ್ಲೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ.ಇದರಿಂದ ಜೆಡಿಎಸ್ ಗೆ ಲೋಕಸಭಾ ಚುನಾವಣೆಯಲ್ಲಿ ಲಾಭವಾಗುತ್ತೆ. ಕಾಂಗ್ರೆಸ್ಗೇನು ಲಾಭ ? ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಎದುರಿಸುವುದು ಹೇಗೆ ಅಂತ ಅಪಸ್ವರ ಎತ್ತಿದ್ದಾರೆ.

ಬಜೆಟ್ ತಯಾರಿಸುವ ಸಂದರ್ಭದಲ್ಲಿ ಮೈತ್ರಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.ಸಾಲಮನ್ನಾದ ಬಗ್ಗೆ ಮಾತ್ರ ಹೇಳಿದ್ರು. ಆದ್ರೆ ತೆರಿಗೆ ಏರಿಕೆ ಮಾಡುವ ಗುಟ್ಟು ಬಿಟ್ಟು ಕೊಡದೇ ಮೈತ್ರಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.ಪರಮೇಶ್ವರ್ ಸಾಫ್ಟ್ ಕರ್ನರ್ ಇದಕ್ಕೆಲ್ಲಾ ಕಾರಣ.ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್‌ ಮಾಡದಿದ್ರೆ ರಾಜ್ಯದಲ್ಲಿ ಪಕ್ಷ ಉಳಿಯುತ್ತೆ. ಇಲ್ಲವಾದಲ್ಲಿ ಕಷ್ಟ ಅಂತ ಹಿರಿಯ ನಾಯಕರು ಮನವರಿಕೆ ಮಾಡಿದ್ದಾರೆ.ಹಿರಿಯ ನಾಯಕರ ದೂರಿನ ಹಿನ್ನಲೆಯಲ್ಲಿ ವರದಿ ನೀಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಪರಮೇಶ್ವರ್ ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಧಿವೇಶನದ ಬಳಿಕ ನಿಗಮ ಮಂಡಳಿ ನೇಮಕಾತಿಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್

ಫೋಟೋ ಕೃಪೆ: ಟ್ವಿಟ್ಟರ್

ನವದೆಹಲಿ:ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ನಂತರ ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಮಾಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಮ್ಮತಿ ಸೂಚಿಸಿದ್ದಾರೆ.

ಎಂಟು ವರ್ಷಗಳ ಕಾಲ ದಾಖಲೆ ಅವಧಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಜವಾಬ್ದಾರಿ ನಿಭಾಯಿಸಿ ದಾಖಲೆ ಬರೆದ ಡಾ.ಜಿ.ಪರಮೇಶ್ವರ್ ಅವರು ಹೈಕಮಾಂಡ್‍ಗೆ ಕೃತಜ್ಞತೆ ಸಲ್ಲಿಸಲು ನವದೆಹಲಿಗೆ ತೆರಳಿದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾದ ರಾಹುಲ್‍ಗಾಂಧಿಯವರೊಂದಿಗೆ ನಿನ್ನೆ ರಾತ್ರಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಅಧಿವೇಶನದ ನಂತರ ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಿ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದು, ಕಾಂಗ್ರೆಸ್ ಪಾಲಿನ 50 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಚರ್ಚೆ ನಡೆಸಿದ ಸಂದರ್ಭದಲ್ಲಿ ಸಮ್ಮತಿ ಸೂಚಿಸಿದ ರಾಹುಲ್ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರ ಜೊತೆ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. 50 ನಿಗಮ ಮಂಡಳಿಗಳಲ್ಲಿ 20 ಶಾಸಕರಿಗೆ, 30 ಸ್ಥಾನ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಅಧಿವೇಶನದ ನಂತರ ನಿಗಮ ಮಂಡಳಿಗಳ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ನಂತರ ಸಂಪುಟ ವಿಸ್ತರಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎನ್ನಲಾಗಿದೆ.ಅಲ್ಲದೆ, ಎಂಟು ವರ್ಷಗಳ ಸುದೀರ್ಘ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಪರಮೇಶ್ವರ್ ಅವರ ಸೇವೆಯನ್ನು ರಾಹುಲ್‍ಗಾಂಧಿಯವರು ಪ್ರಶಂಸಿಸಿದ್ದಾರೆ.ತಾವು ದಕ್ಷ ಹಾಗೂ ಪ್ರಾಮಾಣಿಕವಾಗಿ ಪಕ್ಷವನ್ನು ಮುನ್ನಡೆಸಿದ್ದೀರಿ. ತಮ್ಮ ಅವಧಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತು. ಹಲವು ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರಲು ತಾವು ಮಾಡಿದ ಕೆಲಸವನ್ನು ನಾವು ಮೆಚ್ಚಿದ್ದೇವೆ ಎಂದು ಅವರು ಪರಮೇಶ್ವರ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ದಿನೇಶ್‍ಗುಂಡೂರಾವ್ ಅವರು, ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ನೀವು ಎಂಟು ವರ್ಷ ಅಧ್ಯಕ್ಷರಾಗಿದ್ದವರು ನಿಗಮ ಮಂಡಳಿಗಳ ನೇಮಕ, ಸಂಪುಟ ವಿಸ್ತರಣೆ ಪ್ರಕ್ರಿಯೆ ನಿಮ್ಮ ನೇತೃತ್ವದಲ್ಲಿ ಆಗಲಿ ಎಂದು ರಾಹುಲ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಧಿವೇಶನ ಮುಗಿಯುತ್ತಿದ್ದಂತೆ ನೀವು ಸಿದ್ದರಾಮಯ್ಯ, ದಿನೇಶ್‍ಗುಂಡೂರಾವ್ ಕುಳಿತು ಚರ್ಚಿಸಿ ತೀರ್ಮಾನ ಮಾಡಿ ಪಟ್ಟಿಯೊಂದಿಗೆ ದೆಹಲಿಗೆ ಬನ್ನಿ ಎಂದು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಾಡಿನ ನೆಲ,ಜಲ, ಅಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆ: ಸಿಎಂ

ಬೆಂಗಳೂರು: ಯಾವುದೇ ಸಂದರ್ಭದಲ್ಲೂ ಕನ್ನಡ ಭಾಷೆಗೆ ಮಾರಕವಾಗುವಂತಹ ತೀರ್ಮಾನವನ್ನು ಕೈಗೊಳ್ಳುವುದಿಲ್ಲ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗೃಹ ಕಚೇರಿ ಕೃಷ್ಣದಲ್ಲಿ ಶನಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ .ಸಿದ್ದರಾಮಯ್ಯ ನೇತೃತ್ವದ ಹಿರಿಯ ಸಾಹಿತಿಗಳ ನಿಯೋಗ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ಸರ್ಕಾರ ನಾಡಿನ ನೆಲ ಜಲ, ಸೇರಿದಂತೆ ಕರ್ನಾಟಕದ ಹಿತವನ್ನು ಕಾಪಾಡಲು ಬದ್ದವಾಗಿದೆ. ಎಂತಹದ್ದೇ ಸಂದರ್ಭದಲ್ಲೂ ಮಾತೃ ಭಾಷೆಗೆ ವ್ಯತಿರಿಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ಕನ್ಮಡಿಗರ ಹಿತ ಕಾಪಾಡುವ ಸದುದ್ದೇಶವೇ ನಮ್ಮ ಸರ್ಕಾರದ ಮೊದಲ ಗುರಿ. ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ದರಾಗಿಯೇ
ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಈ ವೇಳೆ ಸರ್ಕಾರಿ ಶಾಲೆಗಳ ವಿಲೀನ ಹಾಗು ಆಂಗ್ಲಭಾಷೆ ಕಲಿಕೆ ನಿರ್ಧಾರಕೈಗೊಂಡಿರುವ ಬಗ್ಗೆ ನಿಯೋಗ ಸಿಎಂ ಬಳಿ ಪ್ರಸ್ತಾಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಅವರು ಗ್ರಾಮೀಣ ಮಕ್ಕಳ ಅನುಕೂಲಕ್ಕೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬಾಷೆಯನ್ನು ಕಲಿಸಲು ನಿರ್ಧರಿಸಲಾಗಿದ್ದು ಇದರಿಂದ ಕನ್ನಡಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.

ಸರ್ಕಾರಿ ಶಾಲೆಗಳ‌ ನವೀಕರಣ, ಹೊಸ ಕಟ್ಟಡಗಳ ನಿರ್ಮಾಣ, ಮಕ್ಕಳಿಗೆ ಕ್ರೀಡಾಂಗಣ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ವಾತಾವರಣ ನಿರ್ಮಾಣ ಮಾಡಿ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದರು.

ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ಪರಿಸ್ಥಿತಿಯ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಅಧಿವೇಶನ ಮುಗಿದ ನಂತರ ಸರ್ಕಾರಿ ಶಾಲೆಗಳ ಬಗ್ಗೆ ಸಭೆ ನಡೆಸುವುದಾಗಿ ನಿಯೋಗಕ್ಕೆ ಆಶ್ವಾಸನೆ ಕೊಟ್ಟರು.

ನಿಯೋಗದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ .ಸಿದ್ದರಾಮಯ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಚಂದ್ರಶೇಖರ್ ಪಾಟೀಲ್, ಡಾ.ಮಲ್ಲಿಕಾ ಘಂಟಿ ಸೇರಿದಂತೆ ಮತ್ತಿತರರು ಇದ್ದರು.

ನಿವೃತ್ತ ಸಿಎಸ್ ರತ್ನಪ್ರಭ ಅವರ `ಕ್ರಾನಿಕಲ್ಸ್ ಆಫ್ ಆ್ಯನ್ ಎಸಿ ಸಾಬ್’ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಅವರು ತಮ್ಮ ಸುದೀರ್ಘ ಸೇವೆ ಕುರಿತು ಹಂಚಿಕೊಳ್ಳಲೆಂದು ಬಯಸಿ `ಕ್ರಾನಿಕಲ್ಸ್ ಆಫ್ ಆ್ಯನ್ ಎಸಿ ಸಾಬ್’ ಎಂಬ ಅನುಭವ ಕಥನ ರಚಿಸಿದ್ದು, ಇದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರದ ಐಎಎಸ್ ಮತ್ತು ಐಪಿಎಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪೈಕಿ ನಾನು ಕಂಡ ಅತ್ಯಂತ ಸರಳ ಮತ್ತು ಸಜ್ಜನಿಕೆಯ ಅಧಿಕಾರಿ ಎಂದರೆ ರತ್ನಪ್ರಭ. ಅವರು, ಪ್ರತಿಯೊಂದು ವಿಚಾರದಲ್ಲೂ ಸರಳತೆಯನ್ನು ಮೆರೆಯುವ ವ್ಯಕ್ತಿ ತಮ್ಮ ವೃತ್ತಿ ಜೀವನಕ್ಕೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಬೀದರ್‍ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ರತ್ನಪ್ರಭ ಅವರು, ಆರಂಭದ ದಿನಗಳಲ್ಲಿ ತಮ್ಮನ್ನು ಕಾಣಲು ಬರುವ ಜನರನ್ನು ಭೇಟಿ ಮಾಡಲು ಹಿಂಜರಿಯುತ್ತಿದ್ದರು. ಇದಕ್ಕೆ ಕಾರಣ ಅವರಲ್ಲಿದ್ದ ನಾಚಿಕೆ ಸ್ವಭಾವ. ಆ ಸಂದರ್ಭದಲ್ಲಿ ಜನರು ಬಂದಾಗ ರತ್ನಪ್ರಭ ಅವರು ಅಡುಗೆ ಕೋಣೆಯಲ್ಲಿ ಅವಿತು ಜನರೊಂದಿಗೆ ಮಾತನಾಡಲು ತಮ್ಮ ತಾಯಿಯನ್ನು ಕಳುಹಿಸುತ್ತಿದ್ದರು. ಅಷ್ಟರ ಮಟ್ಟಿಗೆ ನಾಚಿಕೆ ಮತ್ತು ಸಂಕೋಚ ಹೊಂದಿದ ಸ್ವಭಾವದವರಾಗಿದ್ದರು. ಈ ವಿಚಾರವನ್ನು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಕೃತಿಯನ್ನು ಕುರಿತು ಮಾತನಾಡಿದ ರತ್ನಪ್ರಭ, ನನಗೆ ಈ ಕೃತಿ ಬರೆಯುವ ಬಗ್ಗೆ ಆಲೋಚನೆಯನ್ನೇ ಮಾಡಿರಲಿಲ್ಲ. ನನ್ನ ಅನುಭವವನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಹೀಗೆ ಬರೆದಿಟ್ಟುಕೊಳ್ಳುವಾಗ ಒಂದು ದಿನ ಈ ಬಗ್ಗೆ ಪುಸ್ತಕ ಬರೆದರೆ ಹೇಗೆ ಎಂದು ಆಲೋಚನೆ ಮಾಡಿದೆ. ಇದಕ್ಕೆ ನನ್ನ ಮಗಳೂ ಸಹ ಪುಸ್ತಕ ಬರೆಯುವಂತೆ ಸಲಹೆ ನೀಡಿದಳು. ಇದರ ಪರಿಣಾಮವೇ ನನ್ನ ಅನುಭವದ ಮಾತುಗಳನ್ನು ಅಕ್ಷರ ರೂಪಕ್ಕೆ ತಂದಿದ್ದೇನೆ ಎಂದು  ತಿಳಿಸಿದರು.