ಲಾರಿ, ಬಸ್ ನಡುವೆ ಭೀಕರ ಅಪಘಾತ ಐವರು ದುರ್ಮರಣ!

ಕುಮುಟಾ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿ ಮತ್ತು ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಐವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಾಂಡುರಂಗ ಹೋಟೆಲ್‌ನ ಸಮೀಪ ಈ ಅಪಘಾತ ಸಂಭವಿಸಿದ್ದು, ಸ್ಥಳೀಯರು, ಹೆಸ್ಕಾಂ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕಬ್ಬಿಣದ ಬೃಹತ್ ಕಂಬವೊಂದನ್ನು ಕೊಂಡೊಯ್ಯುತ್ತಿದ್ದ ಲಾರಿಯು ಡಿಕ್ಕಿಯಾಗಿರುವುದರಿಂದ ಬಸ್‌ನಲ್ಲಿ ಒಂದು ಬದಿಯಲ್ಲಿ ಕುಳಿತಿದ್ದ ಎಲ್ಲರಿಗೂ ಗಾಯಗಳಾಗಿದ್ದು, ಐವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹಲವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

ಸಿಎಂ ಜನತಾದರ್ಶನದಲ್ಲಿ 250 ನಿರುದ್ಯೋಗಿಗಳಿಗೆ ಉದ್ಯೋಗ!

ಬೆಂಗಳೂರು: ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿರುವ 250 ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಚಾಲನೆ ನೀಡಲಾಯಿತು.

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಇದಕ್ಕಾಗಿಯೇ ನೇಮಕಗೊಂಡಿರುವ ತಂಡವು ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಸಮಸ್ಯೆಯನ್ನು ಆಲಿಸಲು ಸಮಯ ನಿಗದಿ ಮಾಡುವಂತೆ ಹಾಗೂ ಅಂಗವಿಕಲರು, ಬಡ ಹೆಣ್ಣು ಮಕ್ಕಳು, ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸಲು ಸೂಚಿಸಿ ಇಂದು ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಈ ಕೆಲಸವನ್ನು ತಿಂಗಳಿಗೆ ಎರಡು ಬಾರಿ ಖುದ್ದು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯರ್ಶಿಗಳಾಗಿ ನೇಮಕವಾಗಿರುವ ಪ್ರದಾನ ಕಾರ್ಯರ್ಶಿಗಳು ತಿಂಗಳಿಗೊಮ್ಮೆ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳ ಮುಖಾಂತರ ನನ್ನ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ ಎಂದರು.

ಮೆಟ್ರೋ ಕಾಮಗಾರಿಗೆ 200 ಕೋಟಿ ನೀಡಿದ ಇನ್ಫೋಸಿಸ್ ಪ್ರತಿಷ್ಠಾನ!

ಬೆಂಗಳೂರು: ನಗರದ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೋ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಕೊಡುಗೆಯನ್ನು ಇನ್ಫೋಸಿಸ್ ಪ್ರತಿಷ್ಠಾನ ನೀಡುತ್ತಿದ್ದು, ಈ ಬಗ್ಗೆ ಮೆಟ್ರೋ ಹಾಗೂ ಇನ್ಫೋಸಿಸ್ ಫೌಂಡೇಷನ್ ಮಧ್ಯೆ ಒಪ್ಪಂದವನ್ನು ಜುಲೈ 19 ರಂದು ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದರು.

ಭೇಟಿ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಕಾರ್ಯಗಳಾಗಿವೆ. ಇದೀಗ, ಮೆಟ್ರೋ ನಿಲ್ದಾಣ ಮತ್ತು ಹಳಿಗಳ ನಿರ್ಮಾಣಕ್ಕೆ 200 ಕೋಟಿಗಳನ್ನು ವ್ಯಯಿಸಲು ಇನ್ಫೋಸಿಸ್ ಫೌಂಡೇಶನ್ ತೀರ್ಮಾನಿಸಿದೆ ಎಂದು ಹೇಳಿದರು.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಅನೇಕ ಕಾರ್ಪೊರೇಟ್ ಸಂಸ್ಥೆಗಳಿಗೆ ಡಾ. ಸುಧಾಮೂರ್ತಿ ಸ್ಫೂರ್ತಿಯಾಗಿದ್ದಾರೆ ಹಾಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಮಾತನಾಡಿ,
ಮೆಟ್ರೋ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣ ಪೂರ್ಣಗೊಂಡ ನಂತರ 30 ವರ್ಷಗಳವರೆಗೆ ಅದರ ನಿರ್ವಹಣೆಯನ್ನು ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು ಎಂಬ ಬಸವಣ್ಣನವರ ವಚನದಂತೆ ದುಡಿದ ಹಣವನ್ನು ಜನರಿಗಾಗಿ ವೆಚ್ಚ ಮಾಡುವುದರಲ್ಲಿರುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ ಎಂದರು.

ಬಜೆಟ್ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ: ಎಚ್ಡಿಡಿ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಕುರಿತು ಅವರೇ ವಿಧಾನಸೌಧದಲ್ಲಿ ಉತ್ತರ ನೀಡುತ್ತಾರೆ. ಅದರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ತಿಳಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಬಜೆಟ್ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತದೆ. ಮುಖ್ಯಮಂತ್ರಿಗಳೇ ವಿಧಾನಸೌಧದಲ್ಲಿ ಬಜೆಟ್ ಬಗ್ಗೆ ಉತ್ತರ ಕೊಡ್ತಾರೆ. ನಾನು ಇದರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಲಿ ಎಂದರು.

ಒಕ್ಕಲಿಗರಿಗೆ ಶೇ.32 ರಷ್ಟು ಸಾಲಮನ್ನಾದ ಲಾಭ ಸಿಕ್ಕಿದೆ ಅಂತ ಮಾಧ್ಯಮಗಳಲ್ಲಿ ವರದಿ ಮಾಡಲಾಗ್ತಿದೆ. ಇದನ್ನು ಲೆಕ್ಕ ಹಾಕಿದ್ದು ಯಾರು? ಇದು ಸೆನ್ಸ್ ಲೆಸ್ ವರದಿಗಳು. ಮಂಗಳೂರು, ಬೀದರ್ ನಲ್ಲಿ ಒಕ್ಕಲಿಗರು ಇದ್ದಾರಾ? ಉತ್ತರ ಕರ್ನಾಟಕ ಬಗ್ಗೆ ನನಗೆ ಗೊತ್ತಿದೆ. ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತಬಾಡಬೇಕು. ಬಜೆಟ್ ಚರ್ಚೆ ವೇಳೆ ಸಿಎಂ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸಿದ್ದು ಸೂಚನೆ!

ಬೆಂಗಳೂರು : ಬಾದಾಮಿ ವಿಧಾನಸಭೆ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಿರುವುದರಿಂದ ಬೆಳಗಾವಿಯ ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಮೇಘಣ್ಣನವರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ ಅವರು, ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಮಲಪ್ರಭಾ ಅಚ್ಚುಕಟ್ಟು ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಹಾಗಾಗಿ ನೀರು ಬಿಡುಗಡೆ ಮಾಡುವಂತೆ ತಿಳಿಸಿದರು.

ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ರೈತರ ಬೆಳೆಗಳಿಗೂ ನೀರು ದೊರೆಯುತ್ತದೆ ಎಂದರು. ನೀರು ಬಿಡುಗಡೆಗೆ ತಕ್ಷಣ ಕ್ರಮ ಜರುಗಿಸುವುದಾಗಿ ಪಾದೇಶಿಕ ಆಯುಕ್ತರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಹೆಚ್ಚಿದ್ಯಾ ಕಿರುಕುಳ: ಹಿರಿಯ ಅಧಿಕಾರಿಯಿಂದ ಡಿಜಿ, ಐಜಿಪಿಗೆ ಪತ್ರ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿನ ಕಿರುಕುಳದಿಂದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಎರಡು ವರ್ಷಗಳ ನಂತರ ಮತ್ತೊಬ್ಬ ಅಧಿಕಾರಿ ಇಲಾಖೆಯಲ್ಲಿನ ಕಿರುಕುಳದ ಬಗ್ಗೆ ದ್ವನಿ ಎತ್ತಿದ್ದು, ಡಿಜಿ ಮತ್ತು ಐಜಿಪಿಗೆ ಪತ್ರ ಬರೆದಿದ್ದಾರೆ‌

ಮಡಿಕೇರಿಯಲ್ಲಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ 2 ವರ್ಷವಾಗಿದೆ‌. ಗಣಪತಿ ಪೊಲೀಸ್ ಇಲಾಖೆಯಲ್ಲಿನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡರು ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಮತ್ತೊಬ್ಬ ಹಿರಿಯ ಅಧಿಕಾರಿ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಡಿಜಿ & ಐಜಿಪಿಗೆ ಪತ್ರ ಬರೆದಿದ್ದಾರೆ.

ಮೇಲಧಿಕಾರಿಗಳಿಂದ ಆಗ್ತಿರುವ ಕಿರುಕುಳಕ್ಕೆ ಪರಿಹಾರ ಕೋರಿ 2017ರ ಡಿಸೆಂಬರ್‌ನಿಂದ ಈವರೆಗೆ ನಾಲ್ಕು ಪತ್ರ ರವಾನೆ ಮಾಡಲಾಗಿದ್ದು, ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಜೂನ್ 18ರಂದು ನೇರವಾಗಿ ಡಿಜಿ ನೀಲಮಣಿ ಎನ್ ರಾಜು ಅವರಿಗೆ ಪತ್ರ ಬರೆದಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಮಾತುಕತೆ ನಡೆಸಲು ಡಿವೈಎಸ್ಪಿ ಭೇಟಿಗೆ ಅವಕಾಶ ಕೇಳಿದ್ದಾರೆ. ಡಿವೈಎಸ್‌ಪಿ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶಸಿಕ್ಕಿತ್ತು. ಮಗಳನ್ನು ತರಬೇತಿ ಕ್ಯಾಂಪ್‌ಗೆ ಬಿಟ್ಟು ಬರಲು 1 ದಿನದ ರಜೆಗೆ ಅಧಿಕಾರಿ ಅರ್ಜಿ ಹಾಕಿದ್ದರು. 9 ದಿನಗಳ ಮುನ್ನವೇ ರಜೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು, ರಜೆ ದೊರಕದ ಹಿನ್ನೆಲೆಯಲ್ಲಿ ಮೌಖಿಕವಾಗಿ ತಿಳಿಸಿ ಡಿವೈಎಸ್ಪಿ ರಜೆ ತೆಗೆದುಕೊಂಡಿದ್ದರು. ಇದನ್ನು ಅಶಿಸ್ತು ಎಂದು ಪರಿಗಣಿಸಿ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. 23 ದಿನಗಳ ತರಬೇತಿಯಲ್ಲಿ ಕೇವಲ 1 ದಿನ ಮಾತ್ರ ರಜೆ ಹಾಕಿದ್ದೆ. ಆದರೆ, ಮತ್ತೊಬ್ಬ ಅಧಿಕಾರಿ ಅರ್ಜಿ ಸಹ ನೀಡದೆ ರಜೆ ಮೇಲೆ ಹೋಗಿದ್ರು. ಹಿರಿಯ ಅಧಿಕಾರಿ ವೈಯಕ್ತಿಕ ಕೆಲಸಕ್ಕೆ ಅವರು ಹೋಗಿದ್ದರು. ಇನ್ನೂ ಕೆಲವರಿಗೆ 3-4 ದಿನ ಹೊರಗಡೆ ಹೋಗಲು ಅನುಮತಿ ನೀಡಲಾಗಿತ್ತು ಎಂದು ಇಲಾಖೆಯ ತಾರತಮ್ಯ ನೀತಿಯನ್ನು ಡಿವೈಎಸ್ಪಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಪತ್ರದಲ್ಲಿ ಮೃತ ಡಿವೈಎಸ್‌ಪಿ ಎಂ.ಕೆ.ಗಣಪತಿ ವಿಚಾರ ಸಹ ಪ್ರಸ್ತಾಪಿಸಿದ್ದು, ಸೆಪ್ಟೆಂಬರ್ 7ರಂದು ಎಂ.ಕೆ.ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಸೆಪ್ಟೆಂಬರ್ 8ರಂದು ಗಣಪತಿ ವಿರುದ್ಧದ ಆರೋಪಕ್ಕೆ ಕ್ಲೀನ್ ಚಿಟ್ ನೀಡಲಾಗಿತ್ತು. ಒಂದು ದಿನ ಮೊದಲೇ ಕ್ಲೀನ್‌ಚಿಟ್ ನೀಡಿದ್ರೆ ಗಣಪತಿ ಬದುಕಿರ್ತಿದ್ರು. ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲೂ ಪ್ರಾಮಾಣಿಕ ತನಿಖೆ ನಡೆಯಲಿಲ್ಲ.
ಇಲಾಖೆಯಲ್ಲಿನ ಕಿರುಕುಳದಿಂದ ಇಂತಹ ಘಟನೆಗಳು ಸಂಭವಿಸಿವೆ. ನೀಲಮಣಿ ಎನ್.ರಾಜು ಡಿಜಿ ಮತ್ತು ಐಜಿಪಿಯಾಗಿ ಒಂದೂವರೆ ವರ್ಷವಾಯ್ತು
ಈವರೆಗೂ ಅವರು ಅಧಿಕಾರಿ-ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿಲ್ಲ. ನಿಮಗೆ ಕನ್ನಡ‌ ಓದಲು ಬರಲ್ಲ, ಕನ್ನಡವನ್ನು ಓದಿ ಅರಗಿಸಿಕೊಳ್ಳಲು ಬರೊಲ್ಲ. ಹಾಗಾಗಿ ನೇರವಾಗಿ ಭೇಟಿ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.