ಸಾಲ ಮನ್ನಾ ಪ್ರದೇಶ, ಜಾತಿಯನ್ನು ಮೀರಿದ ಪವಿತ್ರ ಕಾರ್ಯಕ್ರಮ

ಬೆಂಗಳೂರು:ಸಮ್ಮಿಶ್ರ ಸರ್ಕಾರದ ಸಾಲ ಮನ್ನಾದಂಥ ಬಹುದೊಡ್ಡ ಕಾರ್ಯಕ್ರಮದ ವಿರುದ್ಧ ಅತ್ಯಂತ ಕೀಳು ಮಟ್ಟದ, ರಾಜಕೀಯ ಪ್ರೇರಿತ ಮತ್ತು ದುರುದ್ದೇಶ ಪೂರಿತ ಟೀಕೆಗಳು ಕೇಳಿ ಬರುತ್ತಿವೆ. ಇನ್ನು, ಕೆಲವು ಮಾಧ್ಯಮಗಳಲ್ಲಿ ಸಾಲ ಮನ್ನಾವನ್ನು ಜಾತಿಯ ದೃಷ್ಟಿಯಿಂದಲೂ ವಿಶ್ಲೇಷಿಸಲಾಗಿದೆ.

ಈ ಟೀಕೆ, ವಿಶ್ಲೇಷಣೆಗಳ ಹೊರತಾಗಿಯೂ ಸಾಲ ಮನ್ನಾ ಕಾರ್ಯಕ್ರಮ ಎಂಬುದು ಪ್ರದೇಶ, ಜಾತಿಯನ್ನೂ ಮೀರಿದ ಬಹುದೊಡ್ಡ ಪವಿತ್ರ ಕಾರ್ಯಕ್ರಮ ಎಂಬ ಅಂಶ ಇಲ್ಲಿ ಗೌಣವಾಗಿ ಹೋಗುತ್ತಿರುವುದು ತೀವ್ರ ಬೇಸರದ ಸಂಗತಿ. ಸಾಲ ಮನ್ನಾವನ್ನು ಈಗ ಓತಪ್ರೋತವಾಗಿ ವಿಶ್ಲೇಷಣೆ ಮಾಡುತ್ತಿರುವವರು ನಿಷ್ಪಕ್ಷಪಾತವಾಗಿ ಒಂದು ಬಾರಿ ಈ ಕಾರ್ಯಕ್ರಮವನ್ನು ಅವಲೋಕಿಸಿದ್ದರೆ ಇದರಿಂದ ಯಾರಿಗೆ, ಯಾವ ಪ್ರದೇಶಕ್ಕೆ ಅನುಕೂಲವಾಗುತ್ತಿದೆ ಎಂಬುದು ತಿಳಿಯುತ್ತಿತ್ತು.

ಈ ಸರ್ಕಾರ ರೈತರ ಕೃಷಿ ಸಾಲ ಮನ್ನಾಕ್ಕಾಗಿ ಮೀಸಲಿಟ್ಟಿರುವ ಹಣ ೩೪ ಸಾವಿರ ಕೋಟಿ ರೂಪಾಯಿಗಳು. ಇದರ ಸಿಂಹ ಪಾಲು ಪಡೆಯುತ್ತಿರುವ ಜಿಲ್ಲೆ ಬೆಳಗಾವಿ. ಬೆಳಗಾವಿ ಜಿಲ್ಲೆಯ ರೈತರ ಬರೋಬ್ಬರಿ ೭ ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಈ ಕಾರ್ಯಕ್ರಮದಲ್ಲಿ ಅಡಗಿದೆ. ಕಲಬುರಗಿ ಜಿಲ್ಲೆಗೆ ಸಾಲ ಮನ್ನಾದಿಂದ ಸಿಕ್ಕ ಲಾಭ ಎಷ್ಟು ಗೊತ್ತೆ ೬ ಸಾವಿರ ಕೋಟಿ ರೂಅಪಾಯಿಗಳು.

ಸಾಲ ಮನ್ನಾದಲ್ಲಿ ಒಕ್ಕಲಿಗರಿಗೆ ಹೆಚ್ಚಿನ ಲಾಭವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಒಕ್ಕಲಿಗರು ಹೆಚ್ಚಿರುವ ಹಾಸನ ಜಿಲ್ಲೆಗೆ ಸಾಲ ಮನ್ನಾ ಕಾರ್ಯಕ್ರಮದಲ್ಲಿ ಸಿಕ್ಕ ಹಣ ಎಷ್ಟು ಗೊತ್ತೆ ೧೫೦೦ ಕೋಟಿ ರೂಪಾಯಿಗಳು ಮಾತ್ರ. ಮಂಡ್ಯಕ್ಕೆ ಸಿಗಲಿರುವ ಹಣ ೧ ಸಾವಿರ ಕೋಟಿ ರೂಪಾಯಿ. ಇನ್ನುಳಿದ ಜಿಲ್ಲೆಗಳಿಗೆ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ ಹಣ ಸಾಲ ಮನ್ನಾ ಕಾರ್ಯಕ್ರಮದಿಂದ ಪ್ರಾಪ್ತವಾಗಲಿದೆ. ಹಾಗಿದ್ದಮೇಲೆ ಸಾಲ ಮನ್ನಾದ ಬಹುದೊಡ್ಡ ಫಲಾನುಭವಿ ಪ್ರದೇಶ ಉತ್ತರ ಕರ್ನಾಟಕ ಎಂಬುದು ಇಲ್ಲಿ ಯಾರಿಗೇ ಆಗಲಿ ಆರ್ಥವಾಗುವ ಆಂಶ.

ಏಳು ಸಾವಿರ ಕೋಟಿ ಸಿಕ್ಕಿರುವ ಬೆಳಗಾವಿ, ಆರು ಸಾವಿರ ಕೋಟಿ ರೂಪಾಯಿಗಳನ್ನು ಪಡೆಯುತ್ತಿರುವ ಕಲಬುರಗಿಯಲ್ಲಿ ಎಷ್ಟು ಮಂದಿ ಒಕ್ಕಲಿಗ ರೈತರಿದ್ದಾರೆ? ಹಾಗಿದ್ದೂ, ಕಾರ್ಯಕ್ರಮವನ್ನು ಜಾತಿ ದೃಷ್ಟಿಯಿಂದ ವಿಶ್ಲೇಷಿಸುತ್ತಿರುವುದು ಎಷ್ಟು ಸರಿ? ಹಳೇ ಮೈಸೂರು ಭಾಗದ ಯಾವುದೇ ಜಿಲ್ಲೆಗಳಿಗೂ ಇಷ್ಟು ಮೊತ್ತದ ಹಣ ಸಿಕ್ಕಿಲ್ಲ ಎಂಬುದನ್ನು ವಿಶ್ಲೇಷಣಾಕಾರರು ಗಮನಿಸಬೇಕು. ಈ ಸರ್ಕಾರ ಬಜೆಟ್‌ ಮತ್ತು ಸಾಲ ಮನ್ನಾ ವಿಚಾರದಲ್ಲಿ ಪ್ರದೇಶ, ಜಾತಿಯ ರಾಜಕಾರಣ ಮಾಡಿಲ್ಲ ಎಂಬುದು ನಿರ್ವಿವಾದ.

ಕಾಲಮಿತಿಯೊಳಗೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿ: ಮುಖ್ಯಮಂತ್ರಿಗಳ ಸೂಚನೆ

ಬೆಂಗಳೂರು:ರಾಜ್ಯದಲ್ಲಿ ಪ್ರಗತಿಯಲ್ಲಿರುವ ಸುಮಾರು 4 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಮುಂದಿನ ಒಂದು ವರ್ಷದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಆದೇಶ ನೀಡಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರುವ ಸುಮಾರು 37ಸಾವಿರ ಕೋಟಿ ರೂ.ಗಳ ಯೋಜನೆಗಳ ಪ್ರಗತಿಯ ಬಗ್ಗೆ ಇಂದು ಪರಿಶೀಲಿಸಲು ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ಏರ್ಪಡಿಸಲಾಗಿತ್ತು.

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ , ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಬೆಂಗಳೂರು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಯ ಕಾರ್ಯಪ್ರಗತಿ ಕುಂಠಿತಗೊಂಡಿರುವುದನ್ನು ಗಮನಿಸಲಾಗಿದೆ. ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾಮಗಾರಿಯ ಪ್ರಗತಿಯ ಪರಿಶೀಲನೆ ನಡೆಸಬೇಕು. ನಿಗದಿತ ಅವಧಿಯೊಳಗೆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಈ ಯೋಜನೆಗಳನ್ನು ಕ್ಷಿಪ್ರವಾಗಿ ಪೂರೈಸಲು ಅಗತ್ಯವಾದ ಭೂಮಿಯನ್ನು ಒದಗಿಸಲು ಭೂಸ್ವಾಧೀನ ಪ್ರಕ್ರಿಯೆಯನ್ನು ತೀವ್ರಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕು. ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ, ನೀರಿನ ಪೈಪುಗಳ ಸ್ಥಳಾಂತರ ಕಾರ್ಯಗಳನ್ನು ಕ್ಷಿಪ್ರ ಗತಿಯಲ್ಲಿ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ಒಟ್ಟು 7556 ಕಿ.ಮೀ ಹೆದ್ದಾರಿ ರಸ್ತೆಯಿದ್ದು, ಈ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮತ್ತು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. 2018-19 ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 22 ಯೋಜನೆಗಳ ಮೂಲಕ 1959 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು 27 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಿ ಅಭಿವೃದ್ಧಿ ತೊಡಗಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳ ಸಹಕಾರದ ಅಗತ್ಯವಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ಈ ಕೆಳಕಂಡ ಯೋಜನೆಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಭೆ ಯಲ್ಲಿ ಸೂಚನೆ ನೀಡಲಾಯಿತು.

1. ರಾಷ್ಟ್ರೀಯ ಹೆದ್ದಾರಿ 275 : ಬೆಂಗಳೂರಿನಿಂದ ಮೈಸೂರು-117 ಕಿ.ಮೀ

2. ರಾಷ್ಟ್ರೀಯ ಹೆದ್ದಾರಿ 17: ಗೋವಾ ಗಡಿಯಿಂದ ಕಾರವಾರ ಮೂಲಕ ಕುಂದಾಪುರ: 170 ಕಿ.ಮೀ

3. ರಾಷ್ಟ್ರೀಯ ಹೆದ್ದಾರಿ 206: ತುಮಕೂರು -ಶಿವಮೊಗ್ಗ 4 ಲೇನ್: 205 ಕಿ.ಮೀ

4. ರಾಷ್ಟ್ರೀಯ ಹೆದ್ದಾರಿ 150: ಬಳ್ಳಾರಿ- ಹಿರಿಯೂರು :160 ಕಿ.ಮೀ

5. ಬೆಂಗಳೂರು ಎಸ್‍ಟಿಆರ್‍ಆರ್(ಬೆಂಗಳೂರು ಸ್ಯಾಟಿಲೈಟ್ ಟೌನ್ ರಿಂಗ್ ರೋಡ್) 283 ಕಿ.ಮೀ

6. ರಾಷ್ಟ್ರೀಯ ಹೆದ್ದಾರಿ 48: ಬೆಂಗಳೂರು – ಹಾಸನ :180 ಕಿ.ಮೀ ನ್ನು ಟೋಟಲ್ ಕಂಟ್ರೋಲ್ ಆಕ್ಸೆಸ್ ಎಕ್ಸ್‍ಪ್ರೆಸ್ ವೇ ಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

ದೇವೇಗೌಡ್ರು,ರೇವಣ್ಣ ಜಾತಕ ಒಂದೇ, ಕುಮಾರಸ್ವಾಮಿದು ಬೇರೆ:ಸದನದಲ್ಲಿ ಗೌಡರ ಕುಟುಂಬದ ಜಾತಕ ಪ್ರಸ್ತಾಪ

ಬೆಂಗಳೂರು:ದೇವೇಗೌಡ್ರ ಜಾತಕ ಮತ್ತು ರೇವಣ್ಣರ ಜಾತಕ ಒಟ್ಟಿಗೆ ಕೂಡಿದೆ.ಆದ್ರೆ ಕುಮಾರಸ್ವಾಮಿ ಜಾತಕನೇ ಬೇರೆ. ಅದೊಂದು ಬೇರೆ ಜಾತಕ.ಹೀಗಾಗಿಯೇ ದೇವೇಗೌಡ್ರ ಜಾತಕದ ಜೊತೆಗೆ ರೇವಣ್ಣರ ಜಾತಕ ಕೂಡಿದೆ ಎಂದು ಸದನದಲ್ಲಿ ಜಾತಕ ಪುರಾಣದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.

ವಿಧಾನಸಭೆ ಕಲಾಪದ ವೇಳೆ ಸದನದಲ್ಲಿ ಜಾತಕ ವಿಚಾರವನ್ನು ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದರು.ಮಾನ್ಯ ಸಭಾಧ್ಯಕ್ಷರೇ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ್ರು ಜಾತಕ ತುಂಬಾ ನಂಬ್ತಾರೆ.ಎಲ್ಲದಕ್ಕೂ ಜಾತಕವೇ ಮುಖ್ಯ ಅಂತಾರೆ.ಒಂದು ಸಾರಿ ನನಗೆ ದೇವೇಗೌಡ್ರು ಹೇಳಿದ್ರು. ನಿನಗೆ ಜಾತಕದ ಬಗ್ಗೆ ಗೊತ್ತಿಲ್ಲ. ನಿಮ್ಮ ಅಪ್ಪನಿಗೆ ಜಾತಕದ ಬಗ್ಗೆ ಗೊತ್ತಿಲ್ಲ ಸುಮ್ಮನಿರು ಅಂದಿದ್ರು.ದೇವೇಗೌಡ್ರ ಜಾತಕ ಮತ್ತು ರೇವಣ್ಣರ ಜಾತಕ ಒಟ್ಟಿಗೆ ಕೂಡಿದೆ.ಆದ್ರೆ ಕುಮಾರಸ್ವಾಮಿ ಜಾತಕನೇ ಬೇರೆ. ಅದೊಂದು ಬೇರೆ ಜಾತಕ.ಹೀಗಾಗಿಯೇ ದೇವೇಗೌಡ್ರ ಜಾತಕದ ಜೊತೆಗೆ ರೇವಣ್ಣರ ಜಾತಕ ಕೂಡಿದೆ.ಈಗ ಮತ್ತೊಂದು ವಿಚಾರ ಅಂದ್ರೆ, ಸಿದ್ಧರಾಮಯ್ಯರ ಜಾತಕ ಕೂಡ ದೇವೇಗೌಡರ ಜಾತಕದ ಜೊತೆಗೆ ಕೂಡಿತ್ತು ಅಂದುಕೊಂಡಿದ್ದೆ.ಬಳಿಕ ಸಿದ್ಧರಾಮಯ್ಯ ಪಕ್ಷದಿಂದ ಹೊರಗೆ ಬಂದಾಗ ಅಂದುಕೊಂಡೆ, ಏನಪ್ಪಾ ಜಾತಕ ಕೈ ಕೊಡ್ತಾಲ್ಲ ಅಂತಾ.ಈಗ ಮತ್ತೆ ಅದು ಸಾಬೀತಾಗಿದೆ.ಸಿದ್ಧರಾಮಯ್ಯ ಮತ್ತು ದೇವೇಗೌಡರ ಜಾತಕವು ಒಂದೇ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು.

ಬಸವರಾಜ ಬೊಮ್ಮಾಯಿ ಮಾತಿನ ಮಧ್ಯೆ ಪ್ರವೇಶಿಸಿದ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ ರವಿ
ಬೊಮ್ಮಾಯಿ ಮಾತಿನ ಮಧ್ಯೆ ಡಿ.ಕೆ.ಶಿವಕುಮಾರ್ ಹೆಸರು ಎಳೆದು ತಂದ್ರು.ಅಲ್ಲಾ, ಬಸವರಾಜ ಬೊಮ್ಮಾಯಿ ಅವರೇ, ಒಂದೇ ಬೋನಿನಲ್ಲಿ ಎರಡು ಹುಲಿಗಳು ಇರಲು ಸಾಧ್ಯವೇ? ಈ ಎರಡು ಮದಗಜಗಳು ಒಂದೇ ಕಡೆ ಇರೋದು ಹೇಗೆ? ಎಂಬುದನ್ನು ಸ್ವಲ್ಪ ತಿಳಿಸಿ ಎಂದರು.

ಈ ವೇಳೆ ಅಕ್ಕಪಕ್ಕ ಕುಳಿತಿದ್ದ ಎಚ್.ಡಿ ಕುಮಾರಸ್ವಾಮಿ ಹಾಗು ಡಿ.ಕೆ.ಶಿವಕುಮಾರ್ ಸಿ‌ಟಿ.ರವಿ ಮಾತಿಗೆ ನಕ್ಕು ಸುಮ್ಮನಾದ್ರು. ಮತ್ತೆ ಮಾತು ಆರಂಭಿಸಿದ ಬಸವರಾಜ ಬೊಮ್ಮಾಯಿ ರವಿ ಸುಮ್ಮನಿರಪ್ಪಾ. ಡಿ.ಕೆ.ಶಿವಕುಮಾರ್ ದು ದೊಡ್ಡ ಜಾತಕದ ವಿಚಾರವಿದೆ. ತಮಿಳುನಾಡಿನ ಬಾಲಾಜಿಯಿಂದ ಹಿಡಿದು ತುಮಕೂರಿನ ನೊಣವಿನಕೆರೆಯವರೆಗೂ ಇದೆ.ಅಂದು ಬಾಲಾಜಿ, ಇಂದು ನೊಣವಿನಕೆರೆ ಎಂದು ಜಾತಕ ಪುರಾಣಕ್ಕೆ ವಿರಾಮ ಹಾಡಿದ್ರು.

ಸ್ಟಾಕ್ ಇರುವ ಸಕ್ಕರೆ ಮಾರಿಸಿಯಾದರೂ ರೈತರಿಗೆ ಬಾಕಿ ಹಣ ಪಾವತಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು: ಸಕ್ಕರೆ ಸ್ಟಾಕ್ ಇದ್ದರೂ ಮಾರಲು ಆಗುತ್ತಿಲ್ಲ ಎಂದು ಕಾರ್ಖಾನೆ ಮಾಲೀಕರ ಹೇಳುತ್ತಿದ್ದಾರೆ. ಹಾಗಾಗಿ, ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸ್ಟಾಕ್ ಇಟ್ಟಿರುವ ಸಕ್ಕರೆಯನ್ನು ಮಾರಿಸಿಯಾದರೂ ರೈತರಿಗೆ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಿದರು. ಸಭೆಯಲ್ಲಿ ಕಬ್ಬು ಬೆಳಗಾರರ ಬಾಕಿ ಪಾವತಿ, ಕಾರ್ಖಾನೆ ಮಾಲೀಕರ ಸಮಸ್ಯೆ, ಸಕ್ಕರೆ ಮಾರಾಟಕ್ಕೆ ಇರುವ ತೊಡಕುಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ನೀಡಬೇಕಾದ 1045 ಕೋಟಿ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಈ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಹಿಂದಿನ ಸಭೆಯಲ್ಲಿ ಸೂಚಿಸಿದ್ದೇನೆ. ಕೇಂದ್ರ ಸರ್ಕಾರದ ಕೆಲವು ನಿಯಮಗಳಿಂದಾಗಿ ಕಾರ್ಖಾನೆ ಮಾಲೀಕರು
ತಮ್ಮ ಬಳಿ ಇರುವ ಸಕ್ಕರೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕಾರ್ಖಾನೆ ಮಾಲೀಕರು ಹಾಗು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸ್ಟಾಕ್ ಇಟ್ಟಿರುವ ಸಕ್ಕರೆಯನ್ನು ಮಾರಿಸಿ ಆದರೂ ರೈತರಿಗೆ ಹಣ ಪಾವತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆರ್ಥಿಕ ಸ್ಥಿತಿ ಮಿತಿಯಲ್ಲಿದೆ,ಸಾವಿರ ಕೋಟಿ ವೆಚ್ಚ ಮ್ಯಾಚ್ ಆಗ್ತಿಲ್ಲ: ಸಿಎಜಿ ವರದಿ ಉಲ್ಲೇಖ

ಬೆಂಗಳೂರು:ರಾಜ್ಯದ ಆರ್ಥಿಕ ಸ್ಥಿತಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿಯ ಮಿತಿಯೊಳಗಿದೆ ಎಂದು ಸಿಎಜಿ ವರದಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಸಾರ್ವಜನಿಕ ಲೆಕ್ಕಗಳಲ್ಲಿನ ನಿಧಿ ಲೆಕ್ಕಗಳಿಗೆ 1,012 ಕೋಟಿ ರೂ ಮೊತ್ತದ ವೆಚ್ಚಗಳು ಹೊಂದಾಣಿಕೆ ಆಗಿಲ್ಲ ಎಂದು ಲೆಕ್ಕಪರಿಶೋಧಕರ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ರಾಜ್ಯ ಹಣಕಾಸು ಸ್ಥಿತಿಗತಿ ಕುರಿತ ಮಹಾಲೇಖಾಪಾಲರ ವರದಿ ವಿಧಾನಸಭೆಯಲ್ಲಿ ಮಂಡಿಸಲಾಯಿತು. 2016-17 ನೇ ಸಾಲಿನ ಹಣಕಾಸು ಮೇಲಿನ ವರದಿ ರಾಜ್ಯದ ಹಣಕಾಸು ಪರಿಸ್ಥಿತಿ ಮೇಲೆ ವರದಿ ಬೆಳಕು ಚೆಲ್ಲಿದ್ದು, 2016-17 ರಲ್ಲಿ 496 ಕೋಟಿ ರೂ ರಾಜಸ್ವ ಸಂಗ್ರಹ ಇಳಿಕೆಯಾಗಿದೆ ಈ ಸಾಲಿನಲ್ಲಿ ಒಟ್ಟು 1,293 ಕೋಟಿ ರೂ ರಾಜಸ್ವ ಸಂಗ್ರಹವಾಗಿದೆ ಎಂದು ಉಲ್ಲೇಖಿಸಲಾಗಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ತೆರಿಗೆಯೇತರ ಆದಾಯದ ಅನುಪಾತ ಕಡಿಮೆ ಇದೆ ಮುಂದಿನ ವರ್ಷಗಳಲ್ಲಿ ಬಳಕೆದಾರರ ಕರದ ಪರಿಷ್ಕರಣೆ ಮೂಲಕ ತೆರಿಗೆಯೇತರ ಆದಾಯ ಹೆಚ್ಚಿಸುವ ಅಗತ್ಯ ಇದೆ ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದು, ರಾಜಸ್ವ ವೆಚ್ಚ 2016-17 ರಲ್ಲಿ ಶೇ.13 ರಷ್ಟು ಹೆಚ್ಚಳ ಕಳೆದ ಅವಧಿಯ ಬಜೆಟ್ ನಲ್ಲಿ 13 ಸಾವಿರ ಕೋಟಿ ರೂ ಬಳಕೆಯಾಗದೇ ಉಳಿದಿದೆ ಎಂದಿದೆ.

2016-17 ರ ಒಟ್ಟು ರಾಜಸ್ವ ವೆಚ್ಚದಲ್ಲಿ ಯೋಜನಾ ವೆಚ್ಚದ ಪಾಲು 47 ಸಾವಿರ ಕೋಟಿ ರೂಗಳಿಗೆ ಹೆಚ್ಚಿದೆ.ರಾಜಸ್ವ ವೆಚ್ಚದ ಶೇ.80 ರಷ್ಟು ಸರ್ಕಾರಿ ನೌಕರರ ವೇತನ, ನಿವೃತ್ತಿ, ವೇತನ, ಸಹಾಯ ಧನ, ಬಡ್ಡಿ ಪಾವತಿ, ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಗಳಿಗೆ ಬಳಕೆಯಾಗಿದೆ ಎಂದು ವರದಿ ಹೇಳಿದೆ.

ವರದಿಯ ಹೈಲೈಟ್ಸ್:

  • 2016-17 ರಲ್ಲಿ 496 ಕೋಟಿ ರೂ ರಾಜಸ್ವ ಸಂಗ್ರಹ ಇಳಿಕೆ
  • 2016-17 ರಲ್ಲಿ ಸಾಲ ಹೆಚ್ಚಳ.2015-16 ಕ್ಕೆ ಹೊಲಿಸಿದ್ರೆ ಶೇ 40 ರಷ್ಟು ಸಾಲ ಹೆಚ್ಚಳ
  • 230736 ಕೋಟಿ ಸಾಲ ಹೆಚ್ಚಳ
  • ಸಾಲದ ಮೇಲಿನ 192 ಕೋಟಿ ಬಡ್ಡಿ ಪಾವತಿಗೆ ಹಣ ಬಿಡುಗಡೆ ಮಾಡಿರಲಿಲ್ಲ.
  • 14 ನೇ ಹಣಕಾಸು ಆಯೋಗದ ಶಿಫಾರಸಿನ ಅನುದಾನಗಳು ಸರಿಯಾಗಿ ಬಿಡುಗಡೆ ಆಗಿದೆ.
  • 15-16 ಕ್ಕೆ ಹೊಲಿಸಿದ್ರೆ 16-17 ರಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು 1031 ಹೆಚ್ಚು ಅನುದಾನ ರಾಜ್ಯಕ್ಕೆ ಬಂದಿದೆ.
  • ಸಾರ್ವಜನಿಕ ಲೆಕ್ಕಗಳಲ್ಲಿನ ನಿಧಿ ಲೆಕ್ಕಗಳಿಗೆ 1,012 ಕೋಟಿ ರೂ ಮೊತ್ತದ ವೆಚ್ಚಗಳು ಹೊಂದಾಣಿಕೆ ಆಗಿಲ್ಲ..
  • ಬಜೆಟ್ ಸಂಪೂರ್ಣ ಬಳಕೆ ಆಗಿಲ್ಲ.2016 – 17 ರ ಬಜೆಟ್ ನಲ್ಲಿ 13007 ಕೋಟಿ ವೆಚ್ಚವಾಗದೇ ಉಳಿದಿತ್ತು.
  • ಇಲ್ಲಿಯ ವರೆಗೆ ಒಟ್ಟು ನಿಗಮ, ಕಂಪನಿಗಳಲ್ಲಿ ಹೂಡಿದ 63115 ಕೋಟಿಗಳಲ್ಲಿ ಬಂದ ಪ್ರತಿಫಲ ಕೇವಲ ಶೇ 0.1 ರಷ್ಟು(82.50 ಕೋಟಿ) ಮಾತ್ರ

ಚರ್ಚೆಗೆ ಬನ್ನಿ ಉತ್ತರ ನೀಡುತ್ತೇನೆ: ಬಿಜೆಪಿಗೆ ಸಿಎಂ ತಿರುಗೇಟು

ಬೆಂಗಳೂರು:ಬಜೆಟ್ ಅರ್ಥವಾಗದವರಿಗೆ ಏನು ಹೇಳಿ ಏನು ಪ್ರಯೋಜನ ಎಂದು ಬಿಜೆಪಿ ಟೀಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ವಿಧಾನಸೌಧದ ಕೆಂಗಲ್ ಗೇಟ್ ಬಳಿ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಗಜೀವನ್‌ ರಾಂ ಅವರ 32 ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಿದ್ರು. ನಂತ್ರ ಮಾತನಾಡಿದ ಸಿಎಂ‌ ಎಚ್ಡಿಕೆ, ಎಲ್ಲಾ ವರ್ಗ,ಪ್ರವೇಶವನ್ನು ಗಮನದಲ್ಲಿಟ್ಟುಕೊಂಡ ಮಂಡಿಸಿದ ಸಮಗ್ರ ಬಜೆಟ್ ಉದು,ಆದ್ರೆ ಇದರ ಅರ್ಥವಾಗದೆ ಬಿಜೆಪಿಯವರು ವಿರೋಧ ಮಾಡ್ತಾ ಇದ್ದಾರೆ, ಚರ್ಚೆಗೆ ಬಂದಾಗ ಅವರಿಗೆ ಉತ್ತರ ನೀಡುತ್ತೇನೆ ಎಂದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಮಾಡಿದಾಗ ಬಿಜೆಪಿಯವರಿಗೆ ಕಾಣಿಸಲಿಲ್ಲ,ಈಗ‌ ನಾವು ಹೆಚ್ಚಿಸಿದ್ದು ಮಾತ್ರ ಕಂಡಿದೆ.ಬಜೆಟ್​​ನಲ್ಲಿ ಕರಾವಳಿ ಜಿಲ್ಲೆಗಳ ಕಡೆಗಣನೆ ಆರೋಪದ ಹಿನ್ನೆಲೆಯಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರ ಪ್ರತಿಭಟನೆ ಮಾಡಿದ್ರು, ಅರ್ಥವಾಗದವರಿಗೆ ಏನು ಹೇಳಲು ಆಗುತ್ತೆ ಎಂದು ಟೀಕಿಸಿದ್ರು.

ಸಿದ್ದರಾಮಯ್ಯನವರ ಬಜೆಟ್​ನ ಮುಂದುವರಿದ ಭಾಗ ಇದು. ಹಿಂದೆ ಬಜೆಟ್​​​ನಲ್ಲಿ ಮೀನುಗಾರರ ಸಮಸ್ಯೆಗೆ 150 ಕೋಟಿ ಮೀಸಲಿಟ್ಟಿದ್ದರು. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕ್ಲಸ್ಟರ್ ನಿರ್ಮಾಣಕ್ಕೆ ಹಣ ಮೀಸಲಾಗಿದೆ. ಸಮಗ್ರ ಕರ್ನಾಟಕ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಇದು ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಅಲ್ಲ. ಇದು ಅವರಿಗೆ ಅರ್ಥವಾಗಲ್ಲ ಎಂದರೆ ಏನು ಮಾಡಲು ಆಗುತ್ತೆ. ಸದನದಲ್ಲಿ ಚರ್ಚೆ ನಡೆಸಲಿ, ಅವರಿಗೆ ಉತ್ತರ ಕೊಡುತ್ತೇನೆ ಎಂದರು.