ಮೊದಲ ಬಜೆಟ್‌ನಿಂದ ಉದ್ವೇಗಕ್ಕೆ ಒಳಗಾಗಿದ್ದೇನೆ : ಸಿಎಂ

ಬೆಂಗಳೂರು : ಹಣಕಾಸು ಮಂತ್ರಿಯೂ ಆಗಿ ಮೊದಲ ಬಜೆಟ್ ಮಂಡಿಸುತ್ತಿರುವುದರಿಂದ ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೇನೆ. ಆದರೂ, ರಾಜ್ಯದ ಜನರಿಗೆ ಸಿಹಿ ಸುದ್ದಿಯನ್ನೇ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದರೂ ಬಜೆಟ್ ಮಂಡನೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದು ನಾನೇ ಮಂಡಿಸುತ್ತಿರುವ ಮೊದಲ ಬಜೆಟ್ ಆಗಿರುವುದರಿಂದ ಸಹಜವಾಗಿಯೇ ಉದ್ವೇಗಕ್ಕೆ ಒಳಗಾಗಿದ್ದೇನೆ ಎಂದು ಭಾವುಕರಾಗಿ ಹೇಳಿದರು.

ರಾಜ್ಯದ ಜನರ ನಿರೀಕ್ಷೆಗಳು ಏನೆಂದು ನನಗೆ ತಿಳಿದಿದೆ. ಅವರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡನೆ ಮಾಡಲಿದ್ದೇನೆ. ಯಾರೂ ಕೂಡ ಮುನಿಸಿಕೊಳ್ಳದಂತಹ ಸಿಹಿ ಸುದ್ದಿಯನ್ನು ನೀಡಲಿದ್ದೇನೆ. ಸರ್ವರು ಒಪ್ಪಿಕೊಳ್ಳುವಂತಹ ಬಜೆಟ್ ಇದಾಗಿದ್ದು, ಬಜೆಟ್ ಮಂಡನೆವರೆಗೆ ಕಾದು ನೋಡಿ ಎಂದು ಹೇಳಿದರು.

ನನ್ನ ಬಜೆಟ್ ಏನೆಂಬುದು ಮಂಡನೆಯಾಗುವವರೆಗೂ ಯಾರಿಗೂ ಅರ್ಥವಾಗುವುದಿಲ್ಲ. ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದು ಜನೋಪಯೋಗಿ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ಈಜಾಡೋಕೆ ಸ್ವಿಮ್ಮಿಂಗ್ ಪೂಲ್ ಬರ್ತಿದ್ದ ನಾಲ್ವರು ಮಾಡ್ತಿದ್ದ ಕೆಲ್ಸಾನೇ ಬೇರೆ! ಹಾಗಾದ್ರೆ ಅವರು ಏನು ಮಾಡ್ತಿದ್ರು ತಿಳ್ಕೊಬೇಕಾ?

ಬೆಂಗಳೂರು: ಈಜಾಡೋಕೆ ಸ್ವಿಮಿಂಗ್ ಪೂಲ್‌ಗೆ ಎಲ್ಲರೂ ಜೊತೆಗೆ ಹೋಗ್ತಾರೆ. ಆದ್ರೆ ಈಜು ಮುಗಿಸಿ ಮನೆಗೆ ಹೋಗುವಾಗ ಮಾತ್ರ ಆ ನಾಲ್ವರು ಎಲ್ಲರಿಗಿಂತ ಬೇಗ ಹೋಗ್ತಾರೆ. ಹೋಗುವಾಗ ಎಲ್ಲರ ವಸ್ತುಗಳನ್ನು ಎಗರಿಸಿಕೊಂಡು ಹೋಗ್ತಾರೆ. ಏನಿದು ಸ್ಟೋರಿ ತಿಳ್ಕೋ ಬೇಕಾ? ಹಾಗಾದ್ರೆ ಈ ಸ್ಟೋರಿ ಓದಿ!

ವಿಜಯನಗರ ಸಾರ್ವಜನಿಕ ಈಜುಕೊಳದ ಬಳಿ ಕಳ್ಳರ ಗ್ಯಾಂಗ್ ಒಂದು ಪತ್ತೆಯಾಗಿದೆ. ಈಜಾಡಲು ಎಲ್ಲರ ಜೊತೆ ತೆರಳುವ ಈ ಖದೀಮರು, ಯಾರು ಎಲ್ಲೆಲ್ಲಿ ವಸ್ತುಗಳನ್ನ ಇಡ್ತಾರೆ ಅಂತ ಇಬ್ಬರು ಗಮನಿಸಿ ಮತ್ತಿಬ್ಬರಿಗೆ ಸಿಗ್ನಲ್ ಕೊಡ್ತಿದ್ರು. ಹೀಗೆ ನಾಲ್ಕು ಜನ ಸೇರಿ ಎಲ್ಲರೂ ಹೊರಬರೋ ಮುನ್ನವೇ ಮೇಲೆ ಬಂದು ಎಲ್ಲರ ವಸ್ತು ದೋಚಿ ಎಸ್ಕೇಪ್ ಆಗ್ತಿದ್ರು.

ಇದೇ ರೀತಿ ನಿನ್ನೆ ಕಳ್ಳತನ ಮಾಡಲು ಯತ್ನಿಸಿದಾಗ ಅಲ್ಲಿದ್ದ ಸ್ಥಳೀಯರೇ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಸಹಳ್ಳಿ ನಿವಾಸಿ ಅಬ್ರಾರ್, ಫರ್ವೇಜ್ ಹಾಗೂ ಇಬ್ಬರು ಬಾಲಾಪರಾಧಿಗಳ ಬಂಧನವಾಗಿದೆ. ಈಜಾಡುವ ನೆಪದಲ್ಲಿ ಬಂದು ಮೊಬೈಲ್, ಪರ್ಸ್‌ಗಳನ್ನು ಈ ಖದೀಮರು ದೋಚುತ್ತಿದ್ದರು.

ಈ ಹಿಂದೆಯೂ ಹಲವು ಭಾರೀ ಈಜುಕೊಳದ ಬಳಿ ಮೊಬೈಲ್ ಕಳ್ಳತನವಾಗಿತ್ತು, ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಬೇರೆ ಬೇರೆ ಜಿಲ್ಲೆಯ ಸ್ನೇಹಿತರಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅರುಣ್ ಎಂಬವರು ಕಳೆದ ಎರಡು ವಾರಗಳ ಹಿಂದೆ ತಮ್ಮ 2 ಫೋನ್ ಕಳೆದುಕೊಂಡಿದ್ರು. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇನ್ನಿಬ್ಬರು ಬಾಲಾಪರಾಧಿಗಳನ್ನ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಸತತ ಎರಡು ತಿಂಗಳಿಂದ ಈ ಗುಂಪು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರದಿಂದ ರೈತರಿಗೆ ಭರ್ಜರಿ ಗಿಫ್ಟ್: ಮುಂಗಾರಿನ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ

ನವದೆಹಲಿ: ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ತನ್ನದೇ ರೀತಿಯಲ್ಲಿ ತಯಾರಿ ನಡೆಸಿದ್ದು, ಕೇಂದ್ರದಲ್ಲಿ ಆಡಳಿತ ರೂಢ ಪಕ್ಷ ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರಿಗೆ ಕೊಡಿಗೆ ನೀಡಿದೆ.

ಕೇಂದ್ರದ ಎನ್‌ಡಿಎ ಸರ್ಕಾರ ಮುಂಗಾರಿನ  14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು, ಈ ಮೂಲಕ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿದ್ದ ರೈತರಿಗೆ ಸೂಕ್ತ ಬೆಲೆ ನೀಡಲು ಮುಂದಾಗಿದೆ.

ಇಂದು ನಡೆದ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿಯ ಸಭೆಯಲ್ಲಿ 14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

ಸಿಸಿಇಎ ಸಭೆಯ ಬಳಿಕ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಮತ್ತು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದರು. ಅಲ್ಲದೆ, ಬೆಂಬಲ ಬೆಲೆ ಹೆಚ್ಚಳದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ  15,000 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ತಿಳಿಸಿದರು.

ಪ್ರತಿ ಕ್ವಿಂಟಲ್‌ ಭತ್ತಕ್ಕೆ ಶೇಕಡಾ12.9ರಷ್ಟು ಹೆಚ್ಚಳ ಮಾಡಲಾಗಿದ್ದು, 1550 ರೂಪಾಯಿ ಯಿಂದ 1750 ರೂಪಾಯಿಗೆ ಹೆಚ್ಚಾಗಿದೆ. ರಾಗಿಗೆ ಪ್ರತಿ ಕ್ವಿಂಟಲ್‌ಗೆ ಶೇಕಡಾ 50 ರಷ್ಟು ಬೆಂಬಲ ಬೆಲೆ ನೀಡಲಾಗಿದ್ದು, 1900 ರೂಪಾಯಿ ಯಿಂದ 2897 ರೂಪಾಯಿಗೆ ಹೆಚ್ಚಳವಾಗಿದೆ.

ಹೈಬ್ರಿಡ್‌ ಜೋಳಕ್ಕೆ  ಕ್ವಿಂಟಾಲ್‌ಗೆ  ಶೇಕಡಾ 40 ರಷ್ಟು ಹೆಚ್ಚಳ ಮಾಡಲಾಗಿದ್ದು, 1700 ರೂಪಾಯಿಂದ 2430 ರೂಪಾಯಿಗೆ ಹೆಚ್ಚಳವಾಗಿದೆ.

ಸೂರ್ಯಕಾಂತಿಗೆ ಕ್ವಿಂಟಾಲ್‌ಗೆ ಶೇಕಡಾ 31.4 ಹೆಚ್ಚಳ ಮಾಡಲಾಗಿದ್ದು, 4100 ರೂಪಾಯಿಂದ 5388 ರೂಪಾಯಿಗೆ ಬೆಲೆ ಹೆಚ್ಚಾಗಿದೆ.

ತೊಗರಿ 5450 ರೂಪಾಯಿಯಿಂದ 5675 ರೂಪಾಯಿಗೆ, ಉದ್ದು ಕ್ವಿಂಟಾಲ್‌ಗೆ 5,400 ರೂಪಾಯಿಯಿಂದ 5600 ರೂಪಾಯಿಗೆ, ಹೆಸರು ಬೇಳೆ ಕ್ವಿಂಟಾಲ್‌ಗೆ 5575 ರೂಪಾಯಿಂದ 6975 ರೂಪಾಯಿಗೆ ಬೆಲೆ ಹೆಚ್ಚಳವಾಗಿದೆ‌.

ಹತ್ತಿ (ಮದ್ಯಮ) 4020 ರೂಪಾಯಿಯಿಂದ 5150 ರೂಪಾಯಿಗೆ ಹೆಚ್ಚಳವಾಗಿದ್ದು, ಸೋಯಾಬೀನ್‌, ನೆಲಗಡಲೆ, ಮುಸುಕಿನ ಜೋಳ, ಎಳ್ಳಿಗೂ ಬೆಂಬಲ ಬೆಲೆ ಘೋಷಿಸಲಾಗಿದೆ. 2 ವಾರಗಳಲ್ಲಿ ಕಬ್ಬಿಗೂ ಬೆಂಬಲ ಬೆಲೆ ಘೋಷಿಸುವುದಾಗಿ ಸರ್ಕಾರ ಹೇಳಿದೆ.

ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆಗೆ ಪರಂ ಅಭಿನಂದನೆ!

ಬೆಂಗಳೂರು: ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಹಾಗೂ ಈಶ್ವರ್ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹೈಕಮಾಂಡ್ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸ್ವಾಗತಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಎಂಟು ವರ್ಷಗಳ ಕಾಲ ನನಗೆ ಕೆಪಿಸಿಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅನೇಕ ಮುಖಂಡರು, ರಾಷ್ಟ್ರೀಯ ನಾಯಕರಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ದಿನೇಶ್ ಗುಂಡೂರಾವ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ, ನಾಲ್ಕು ಬಾರಿ ಶಾಸಕರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅದೇ ರೀತಿ ಈಶ್ವರ್ ಖಂಡ್ರೆ ಅವರು ಸಹ ಜಿಲ್ಲಾಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಅನುಭವ ಹೊಂದಿದ್ದಾರೆ. ಈ ಇಬ್ಬರು ಮುಖಂಡರು ಪಕ್ಷವನ್ನು ಮುನ್ನಡೆಸುವ ಹಾಗೂ 2019ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಮರ್ಥರಿದ್ದಾರೆ ಎಂದು ಹೇಳಿದರು.

ಹಿಂಸಾತ್ಮಕ ಮೆಸೇಜ್‌ಗಳಿಗೆ ಕಡಿವಾಣ ಹಾಕಲು ಬದ್ಧ: ವಾಟ್ಸಾಪ್ ಸಂಸ್ಥೆ

ನವದೆಹಲಿ: ವಾಟ್ಸಾಪ್‌ನಲ್ಲಿ ಹರಿದಾಡುವ ಫಾರ್ವಡ್ ಮೆಸೇಜ್‌ಗಳಿಂದ ಆಗುತ್ತಿರುವ ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸಾಪ್ ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಸಂಸ್ಥೆ ತಿಳಿಸಿದೆ.

ವಾಟ್ಸಾಪ್ ವೇದಿಕೆಯ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಹಿತಿ ತಂತ್ರಜ್ಞಾನ ಇಲಾಖೆ ವಾಟ್ಸಾಪ್ ಸಂಸ್ಥೆಗೆ ಪತ್ರ ಬರೆದಿತ್ತು. ಪತ್ರಕ್ಕೆ ಉತ್ತರ ನೀಡಿರುವ ವಾಟ್ಸಾಪ್ ಸಂಸ್ಥೆ,
ನಮ್ಮ ವೇದಿಕೆಯನ್ನು ಬಳಸಿಕೊಂಡು ಅಮಾಯಕರ ಹಿಂಸಾಚಾರ ನಡೆಸುತ್ತಿರುವುದು ನಮಗೂ ದಂಗೂ ಬಡಿಸಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹೊಸ ಮೆಸೇಜ್ ಫಾರ್ವಡ್ ಮಾಡುವಾಗ ಅದನ್ನು ಹೈಲೈಟ್ ಮಾಡುವ ಲೇಬಲ್ ಹಾಕಲಾಗುವುದು ಎಂದು ಸಂಸ್ಥೆ ಹೇಳಿದೆ.

ಸುಳ್ಳು ಸುದ್ದಿ, ಸುಳ್ಳು ಮಾಹಿತಿ ಮತ್ತು ಸುಳ್ಳುಗಳ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ, ನಾಗರಿಕ ಸಮಾಜ ಮತ್ತು ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸ ಬೇಕಿದೆ ಎಂದು ಸಂಸ್ಥೆ ತಿಳಿಸಿದೆ.

ಅನಗತ್ಯ ಮಾಹಿತಿಯ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚಿಗೆ ಗ್ರೂಪ್ ಚಾಟ್ ಗಳಿಗೆ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸುಳ್ಳು ಹೇಳೋದನ್ನು ಮೊದ್ಲು ನಿಲ್ಸಿ: ಸಿಎಂಗೆ ಬಿಎಸ್ವೈ ತಿರುಗೇಟು

ಬೆಂಗಳೂರು :ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿ‌ ರೈತರಿಗೆ ಏನು ಮಾಡಬೇಕೋ ಮಾಡಿದ್ದೀನಿ.ಮೊದಲು ನೀವು ಸುಳ್ಳು‌ ಹೇಳುವುದನ್ನ ನಿಲ್ಲಿಸಿ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ರು.

ನಗರದಲ್ಲಿ ಮಾತನಾಡಿದ ಬಿಎಸ್ವೈ,ದೇವೇಗೌಡರು ಮನೆಗೆ ಕರೆಸಿ ರೈತರ ಬಡ್ಡಿ ಮನ್ನಾ ಮಾಡಲು ವಿರೋಧ ಮಾಡಿದ್ರು.ಹಾಸನದಲ್ಲಿ ಕೂಡ ಇದೇ ರೀತಿ ಮಾಡಿದ್ರು.ಆಗ ನಾನು ಪ್ರತಿಭಟಿಸಿದ್ದೇನೆ.ಆಗ ನಾನು ಮಾದ್ಯಮಗಳಿಗೆ ಕೂಡ ತಿಳಿಸಿದ್ದೇನೆ.ಮೊದಲು 53 ಸಾವಿರ ಕೋಟಿ ಸಾಲ ಮನ್ನಾ ಮಾಡ್ತೀನಿ ಎಂದಿದ್ದೀರಿ ನಾಳೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಾಲ ಮನ್ನಾ ಮಾಡಿ ಧರ್ಮಸ್ಥಳದಲ್ಲಿ ಆಡಿದ ಮಾತನ್ನು ಕುಮಾರಸ್ವಾಮಿ ಉಳಿಸಿಕೊಳ್ಳಲಿ ಎಂದರು.

ನಾಳೆ ರೈತರ ಸಾಲದ ಬಗ್ಗೆ ಸ್ಪಷ್ಟತೆ ಸಿಗದೆ ಹೋದ್ರೆ ನಮ್ಮ ಕರ್ತವ್ಯ ನಾವು ಮಾಡ್ತೇವೆ.ರಾಜ್ಯದ ಜನರ ಮನೆ ಮನೆಗೆ ಹೋಗಿ ಜನರನ್ನ ಸರ್ಕಾರದ ಬಗ್ಗೆ ಎಚ್ಚರಿಸ್ತೇವೆ ಎಂದ್ರು.