ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ದಾವಣಗೆರೆ, ಜುಲೈ 10, ಶನಿವಾರ:ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಉದ್ದೇಶವಿದ್ದು, ಇದಕ್ಕಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಅಧಿಕಾರಿಗಳ ಜೊತೆ ಸಚಿವ ಸುಧಾಕರ್ ಚರ್ಚೆ

ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕೆಂಬ ಉದ್ದೇಶವಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಚರ್ಚೆಯಾಗಿದೆ. 9 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವ ಉದ್ದೇಶವಿದೆ. ರಾಜ್ಯದಲ್ಲಿ 18 ಹಾಗೂ ಈಗ ಆರಂಭವಾಗುತ್ತಿರುವ ಹೊಸ ನಾಲ್ಕು ಮೆಡಿಕಲ್ ಕಾಲೇಜುಗಳು ಜಿಲ್ಲಾಕೇಂದ್ರಗಳಲ್ಲೇ ಇವೆ. ತಾಲೂಕು ಮಟ್ಟದಲ್ಲಿ ಕಾಲೇಜು ಇಲ್ಲ. ಈ ಬಗ್ಗೆ ಮನವಿ ಬಂದಿದ್ದು, ಪರಿಶೀಲಿಸಲಾಗುವುದು ಎಂದರು.

ರಾಜ್ಯದಲ್ಲಿ ಈವರೆಗೆ ಎರಡೂವರೆ ಕೋಟಿ ಲಸಿಕೆ ನೀಡಲಾಗಿದೆ. ಆಗಸ್ಟ್ ವೇಳೆಗೆ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಲಸಿಕೆ ಬರಲಿದೆ.ಈ ಬಗ್ಗೆ ಕೇಂದ್ರದಿಂದ ಆಶ್ವಾಸನೆ ದೊರೆತಿದೆ. ರಾಜ್ಯದಲ್ಲಿ ಎರಡೂವರೆ ಕೋಟಿ ಹಾಗೂ ಕೇಂದ್ರ ಸರ್ಕಾರ 38 ಕೋಟಿ ಜನರಿಗೆ ಲಸಿಕೆ ನೀಡಿದೆ. ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ನೀಡಲಿದ್ದು, ಜೊತೆಗೆ ಜನಸಾಮಾನ್ಯರಿಗೂ ನೀಡಲಾಗುವುದು ಎಂದರು.

60-70% ಜನರು ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಜನರು ಎಚ್ಚರಿಕೆಯಿಂದಿರಬೇಕು. ಕೇರಳದಲ್ಲಿ 15 ಸಾವಿರವರೆಗೂ ಪ್ರಕರಣ ಕಂಡುಬರುತ್ತಿದೆ. ಮಹಾರಾಷ್ಟ್ರ, ಕೇರಳ ಗಡಿಗಳನ್ನು ಹಂಚಿಕೊಳ್ಳುವುದರಿಂದ ಅಲ್ಲಿ ಹೆಚ್ಚಾದಾಗ ರಾಜ್ಯದಲ್ಲೂ ಪ್ರಕರಣ ಏರುತ್ತದೆ. ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿದ್ದು, ಇದಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಸರ್ಕಾರ ಬಿಗಿ ಕ್ರಮ ಕೈಗೊಂಡಾಗ ವಿವಿಧ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. 10 ಲಕ್ಷ ಜನಸಂಖ್ಯೆಗೆ 50 ಕ್ಕಿಂತ ಹೆಚ್ಚು ಪ್ರಕರಣ ಕಂಡುಬರಬಾರದು. ಈಗಲೂ ರಾಜ್ಯದಲ್ಲಿ ಒಂದೂವರೆ ಲಕ್ಷ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಕೋವಿಡ್ ಮೂರನೇ ಅಲೆ ಬರಲೇಬೇಕು ಎಂದೇನಿಲ್ಲ. ಮಕ್ಕಳಿಗೆ ಹೆಚ್ಚು ಸೋಂಕು ಬರಲೇಬೇಕು ಎಂದೇನಿಲ್ಲ. ನಾವು ಎಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಮಕ್ಕಳಿಗೆ ಸೋಂಕು ಬಂದರೂ ತೀವ್ರ ಸಮಸ್ಯೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ಮಕ್ಕಳ ಬಗ್ಗೆ ಹೆಚ್ಚು ನಿಗಾ ಇರಿಸಬೇಕು. ಮೂರನೇ ಅಲೆಗೆ ಸಿದ್ಧತೆಯಾಗಿ 23 ಸಾವಿರ ಕೋಟಿ ರೂ. ಖರ್ಚು ಮಾಡಲು ಪ್ರಧಾನಿಗಳು ತೀರ್ಮಾನಿಸಿದ್ದು, ರಾಜ್ಯಕ್ಕೆ ಒಂದೂವರೆ ಸಾವಿರ ಕೋಟಿ ರೂ. ಬರಲಿದೆ. ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಈ ಮೂಲಕ ಕ್ರಮ ವಹಿಸಲಾಗುವುದು ಎಂದರು.

ಹೊಸ ಸರ್ಕಾರಿ ಆಸ್ಪತ್ರೆ:

ಚಿಗಟೇರಿ ಸಾರ್ವಜನಿಕ ಆಸ್ಪತ್ರೆ 1961 ರಲ್ಲಿ ಆರಂಭವಾಗಿದ್ದು, ಚಿಗಟೇರಿ ಕುಟುಂಬದವರು ಉಚಿತವಾಗಿ ಜಾಗ ನೀಡಿದ್ದರು. ಈ ಕಟ್ಟಡ ಹಳೆಯದಾಗಿದ್ದು, ಕೆಲ ದೂರುಗಳು ಬಂದಿವೆ. ವೈದ್ಯರು, ನರ್ಸ್, ಗ್ರೂಪ್ ಡಿ ನೌಕರರು ಕಡಿಮೆ ಇದ್ದಾರೆ. ಸಾವಿರ ಹಾಸಿಗೆಗಳ ಸಾಮರ್ಥ್ಯಕ್ಕನುಗುಣವಾಗಿ ಸಿಬ್ಬಂದಿ ಇಲ್ಲ. ಇಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿಗಳು ನಿರ್ಧರಿಸಿರುವುದರಿಂದ ಆವರಣದಲ್ಲಿ ಎಷ್ಟು ಜಮೀನಿದೆ, ಎಷ್ಟು ಸ್ಥಳ ಇದೆ ಎಂದು ವೀಕ್ಷಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಸೂಚಿಸಲಾಗಿದೆ. ಮುಂದಿನ ವಾರ ಸಭೆ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. 29 ಎಕರೆ ಜಾಗ ಹಾಗೂ ಇನ್ನೊಂದು 6 ಎಕರೆ ಇದೆ. ಈ ಬಗ್ಗೆ ಸರ್ವೆ ನಡೆಸಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.

ಸಚಿವರು ಹೇಳಿದ ಇತರೆ ಅಂಶಗಳು:

ದಾವಣಗೆರೆ ನಗರ ಪ್ರದೇಶದಲ್ಲಿ ಮೂರ್ನಾಲ್ಕು ಎಕರೆ ಲಭ್ಯವಿದ್ದರೆ ಜಯದೇವ ಹೃದ್ರೋಗ ಸಂಸ್ಥೆ ನಿರ್ಮಿಸಬಹುದು.ಅದಕ್ಕಾಗಿ ಜಾಗ ನಿಗದಿಪಡಿಸಲು ಕೋರಿದ್ದೇನೆ.

250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಜ್ಯ ಸರ್ಕಾರ ಮೇಲ್ದರ್ಜೆಗೇರಿಸುತ್ತಿದೆ. ಇನ್ನೂ 250 ಕೇಂದ್ರಗಳನ್ನು ಕೇಂದ್ರದ ಅನುದಾನದಲ್ಲಿ ಮೇಲ್ದರ್ಜೆಗೇರಿಸಬೇಕೆಂದು ಕೋರಲಾಗಿದೆ. ರಾಜ್ಯದಲ್ಲಿ 2,500 ಕೇಂದ್ರಗಳಲ್ಲಿ ಐದು ವರ್ಷಗಳಲ್ಲಿ ಎಲ್ಲವನ್ನೂ ಮೇಲ್ದರ್ಜೆಗೇರಿಸುವ ಉದ್ದೇಶವಿದೆ.

75% ಕೇಂದ್ರ ಸರ್ಕಾರ ಲಸಿಕೆ ನೀಡಲಿದ್ದು, 25% ಅನ್ನು ಖಾಸಗಿ ವಲಯ ಖರೀದಿಸಬಹುದು. ಇದರಲ್ಲಿ ಲಸಿಕೆ ಉತ್ಪಾದಕರಿಗೆ ಸಂಬಂಧಿಸಿದ ಕೆಲ ಸಮಸ್ಯೆಗಳಿವೆ. ಲಸಿಕೆ ನೀತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. 7-8 ದಿನಗಳಲ್ಲಿ ಪೂರೈಕೆ ಸಮಸ್ಯೆ ಬಗೆಹರಿಯಲಿದೆ.

ಅನ್ನದಾತನ ಆದಾಯ ದ್ವಿಗುಣಗೊಳಿಸುವುದೇ ಸರ್ಕಾರದ ಪ್ರಥಮಾದ್ಯತೆ -ಬಿ.ಎಸ್. ಯಡಿಯೂರಪ್ಪ

ಕಲಬುರಗಿ.10.ಜು-ಅನ್ನದಾತ ರೈತನ ಬದುಕು ಹಸನಗೊಳಿಸಲು ಹತ್ತಾರು ರೈತಾಪಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ನಗರದ ಎಂ.ಎಸ್.ಕೆ ಮಿಲ್ ವಾಣಿಜ್ಯ ಬಡಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರ ಇವರ ಜಂಟಿ ಅನುದಾನದಡಿಯಲ್ಲಿ 2 ಎಕರೆ ಪ್ರದೇಶದಲ್ಲಿ ಸುಮಾರು 26.30 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಮಾದರಿಯ ಕಾಯಿಪಲ್ಲೆ ಮಾರುಕಟ್ಟೆ ಸಂಕೀರ್ಣಕ್ಕೆ ಶನಿವಾರ ಅಡಿಗಲ್ಲು ಹಾಕಿ ಅವರು ಮಾತನಾಡಿದರು.

    ಸಿಎಂ ಯಡಿಯೂರಪ್ಪ

ಅನ್ನದಾತ ಬೆಳೆದ ಬೆಳೆ ಸೂಕ್ತ ಮಾರುಕಟ್ಟೆ ದೊರಕಬೇಕು ಎಂಬ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚಿನ ರೀತಿಯಲ್ಲಿ ಪೆÇ್ರೀತ್ಸಾಹ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಹೂವು ಬೆಳೆಗಾರರಿಗೆ ಹಾಗೂ ತರಕಾರಿ ಮಾರಾಟಗಾರರು ಸೂಕ್ತ ಮಾರುಕಟ್ಟೆ ಸಿಗದೆ ಕಷ್ಟ ಅನುಭವಿಸಿದ್ದರು. ಇದನ್ನರಿತ ಕೇಂದ್ರ ಸರ್ಕಾರ ದೂರದ ಪ್ರದೇಶದಲ್ಲಿಯೂ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಸಾಗಾಣಿಕೆಗೆ “ಕಿಸಾನ್ ರೈಲು” ಯೋಜನೆ ಜಾರಿಗೆ ತಂದಿದ್ದು, ರೈತರಿಗೆ ತುಂಬಾ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 20 ಕೊಟಿ ರೂ. ಹಾಗೂ ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರದಿಂದ 6.30 ಕೋಟಿ ರೂ. ಹೀಗೆ ಒಟ್ಟು 26.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಯಿಪಲ್ಲೆ ಮಾರುಕಟ್ಟೆ ಸಂಕೀರ್ಣ ರಾಜ್ಯದ ಇತಿಹಾಸದಲ್ಲೇ ಮೊದಲ ಕಟ್ಟಡವಾಗಿದ್ದು, ತುಂಬಾ ಸಂತೋಷದಿಂದ ಅಡಿಗಲ್ಲು ನೆರವೇರಿಸಿದ್ದೇನೆ. ಈ ತರಹದ ಮಾದರಿ ತರಕಾರಿ ಮಾರುಕಟ್ಟೆ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲಾಗುವುದು ಎಂದರು.

ಕಲಬುರಗಿ ನಗರದ ಕಣ್ಣಿ ಮಾರುಕಟ್ಟೆಯಲ್ಲಿ ಸಿದ್ದಗೊಳ್ಳಲಿರುವ ನೂತನ ಕಾಯಿಪಲ್ಲೆ ಮಾರುಕಟ್ಟೆಯಿಂದ ಈ ಭಾಗದ ರೈತರ ಹಾಗೂ ಜನರ ಬಹುದಿನಗಳ ಕನಸು ನನಸಾಗಲಿದ್ದು, ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದ ಮತ್ತು ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದ ರೈತಾಪಿ ವರ್ಗಕ್ಕೆ ಇದರಿಂದ ನೆಮ್ಮದಿ ಸಿಕ್ಕಿದೆ. ರಸ್ತೆಯುದ್ದಕ್ಕು ಜನ ಗುಂಪಾಗಿ ಸೇರುವ ಕಾರಣ ಅಪಘಾತವಾಗುವ ಸಾಧ್ಯತೆಗಳನ್ನು ಮನಗಂಡು ನೂತನ ತರಕಾರಿ ಮಾರುಕಟ್ಟೆ ಸ್ಥಾಪಿಸಲಾಗುತ್ತಿದೆ. ಇದರಿಂದ ಪ್ರದೇಶದಲ್ಲಿನ ಮುಕ್ತ ಸಂಚಾರಕ್ಕೂ ಅನುವಾಗಲಿದೆ ಎಂದರು.

ರಾಜ್ಯದಲ್ಲಿ ರೈತ ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ದೊರಕಿಸುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೃಷಿ ನಮ್ಮ ಆದ್ಯತಾ ವಲಯವಾಗಿದ್ದು, ಕೃಷಿಗೆ ಹೆಚ್ಚಿನ ರೀತಿಯಲ್ಲಿ ಪೆÇ್ರೀತ್ಸಾಹ ನೀಡಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‍ಗೆ ತಲಾ 10000 ರೂ. ಗಳಂತೆ 20 ಸಾವಿರ ರೈತರಿಗೆ ಪರಿಹಾರ ನೀಡಲಾಗಿದೆ. ಅದೇ ರೀತಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಗರಿಷ್ಠ 1 ಹೆಕ್ಟೇರ್‍ಗೆ ತಲಾ 10000 ರೂ. ಗಳಂತೆ 69000 ಸಾವಿರ ರೈತರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.

ನೂತನ ತರಕಾರಿ ಮಾರುಕಟ್ಟೆ ಕಾಂಪ್ಲೆಕ್ಸ್ ಬೇಸ್‍ಮೆಂಟ್ ಮಹಡಿ, ನೆಲ ಮಹಡಿ ಹಾಗೂ ಮೊದಲನೇ ಮಹಡಿ ಒಳಗೊಂಡಿದೆ. ಬೇಸ್‍ಮೆಂಟ್ ಮಹಡಿಯಲ್ಲಿ ವಾಹನ ನಿಲುಗಡೆ, ಲಿಫ್ಟ್, ಸ್ಟೇರ್‍ಕೇಸ್, ಸಂಪ್ ಟ್ಯಾಂಕ್, ಎಲೆಕ್ಟ್ರೀಕಲ್ ಕೋಣೆ ಇರಲಿದೆ. ನೆಲ ಮಹಡಿಯಲ್ಲಿ 62 ಅಂಗಡಿಗಳು, ತರಕಾರಿ ಮಾರಾಟಕ್ಕೆ 192 ಮಳಿಗೆ, ಸಗಟು ವ್ಯಾಪಾರ ಹರಾಜು ಪ್ರಕ್ರಿಯೆಗೆ ಪ್ಲಾಟ್‍ಫಾರ್ಮ್, ಘನತ್ಯಾಜ್ಯ ಸಂಗ್ರಹಣೆಗೆ ಸ್ಥಳ, ಕೋಲ್ಟ್ ಸ್ಟೋರೇಜ್ ಕೋಣೆ ಹಾಗೂ ಶೌಚಾಲಯ ಇರಲಿವೆ. ಮೊದಲನೇ ಮಹಡಿಯಲ್ಲಿ 47 ಅಂಗಡಿಗಳು, ಇತರೆ ಕಾರ್ಯಾಲಯ, ಬ್ಯಾಂಕ್ ಇರಲಿದ್ದು ಒಟ್ಟಾರೆ ಸಂಕೀರ್ಣದಲ್ಲಿ 301 ಅಂಗಡಿಗಳಿರಲಿವೆ ಎಂದು ಸಿ.ಎಂ. ಯಡಿಯೂರಪ್ಪನವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ ದಿನದ 24 ಗಂಟೆಯು ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ. ಇದಲ್ಲದೆ ಕಲಬುರಗಿ ಮಹಾನಗರ ಪ್ರದೇಶದಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಇಂದು 41 ವಾಹನಗಳನ್ನು ಸಹ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಮಾತನಾಡಿ, ಸರ್ಕಾರ ನುಡಿದಂತೆ ನಡೆದಿದೆ. ಈ ನೂತನ ಮಾರುಕಟ್ಟೆಯಿಂದ ಪ್ರದೇಶದ ರೈತರು ಸುಲಲಿತವಾಗಿ ವ್ಯಾಪಾರ ಮಾಡಬಹುದು. ಮಳಿಗೆಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಲಿ ಎಂದು ಆಶಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

 

ಬೇಬಿ ಬೆಟ್ಟದಲ್ಲಿ ನಾಲ್ಕು ತಿಂಗಳಿನಿಂದ ಗಣಿಗಾರಿಕೆ ಸ್ಥಗಿತ: ನಿರಾಣಿ

ಕಲಬುರಗಿ,ಜು.10- ಮಂಡ್ಯ ಜಿಲ್ಲೆ ಬೇಬಿಬೆಟ್ಟದಸು ತ್ತಮುತ್ತಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರ ಬಳಿ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ನಾವು ಸಮಗ್ರ ತನಿಖೆಗೆ ಆದೇಶ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿಯಂತೆ ಕಳೆದ ನಾಲ್ಕು ತಿಂಗಳಿನಿಂದ ಕೆಆರ್‍ಎಸ್ ಅಣೆಕಟ್ಟಿನ ಸುತ್ತಲ ಭಾಗ ಇಲ್ಲವೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದ ನಂತರ ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆ. ಕೆಲವರು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದ ಸ್ಥಗಿತಗೊಳಿಸಲು ಸೂಚನೆ ಕೊಟ್ಟಿದ್ದೆ ಎಂದರು.

ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದಲೇ ಅಂಥವರಿಗೆ ದಂಡ ವಿಧಿಸಿ ಯಾವುದೇ ತರಹದ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ಹಾಕಲಾಗಿದೆ. ಒಂದು ವೇಳೆ ಈಗಲೂ ಅಲ್ಲಿ ಅಕ್ರಮವಾಗಿ ಯಾವುದೇ ರೀತಿಯ ಕಲ್ಲು ಗಣಿಗಾರಿಕೆ ಚಟುವಟಿಕೆಗಳು ನಡೆಯುತಿರುವುದರ ಬಗ್ಗೆ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೆ ಆರ್ ಎಸ್ ಅಣೆಕಟ್ಟು ಸುತ್ತಮುತ್ತ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಕಾನೂನು ಕೈಗೊಳ್ಳಲಾಗಿದ್ದುಘಿ, ಈಗಾಗಲೇ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಸೂಚನೆ ಕೊಡಲಾಗಿದೆ ಎಂದರು.
ಕಳೆದ 70 ವರ್ಷಗಳಿಂದಲೂ ಇಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ. ಹೀಗಾಗಿ ಯಾವ ರಾಜಕಾರಣಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಇಬ್ಬರ ಬಗ್ಗೆಯೂ ಅಪಾರ ಗೌರವವಿದೆ. ಹಾದಿಬೀದಿಯಲ್ಲಿ ಜಗಳ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಇಬ್ಬರೂ ಬುದ್ದಿವಂತರು. ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈಗ ನಡೆಯುತ್ತಿರುವ ಸಂಘರ್ಷಕ್ಕೆ ಅವರು ಪೂರ್ಣ ವಿರಾಮ ಹಾಕಬೇಕು. ರಾಜಕಾರಣಿಗಳು ಹಾದಿಬೀದಿಯಲ್ಲಿ ಮಾತನಾಡಬಾರದು. ಶೀಘ್ರವೇ ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದರು.

2023ರವರೆಗೂ ಯಡಿಯೂರಪ್ಪ ಅವರೇ ಸಿಎಂ; ನಿರಾಣಿ

ಕಲಬುರಗಿ,ಜು.10; ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಹಲವಾರು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯಕ್ಕೆ ನಮ್ಮ ಪಕ್ಷದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ. 2023ರವರೆಗೂ ಅವರೇ ಮುಂದುವರೆಯುತ್ತಾರೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಗೊಂದಲ ಬೇಡ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಮುರುಗೇಶ್ ನಿರಾಣಿ ಉತ್ತರಿಸಿದರು.

ಯಾರ್ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿಯೂ ಇಲ್ಲ. ಯಡಿಯೂರಪ್ಪ ಉತ್ತಮವಾಗಿ ಆಡಳಿತ ನಡೆಸುತ್ತಿರುವುದರಿಂದ ಅವರ ನಾಯಕತ್ವವು ಅಬಾಧಿತವಾಗಿದೆ. ಈ ಬಗ್ಗೆ ಮಾತನಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಸೂಚ್ಯವಾಗಿ ಹೇಳಿದರು.

2023ರ ಚುನಾವಣೆ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡೋಣ. ಕೆಲವರು ವೈಯಕ್ತಿಕ ಕಾರಣಗಳಿಗಾಗಿ ದೆಹಲಿಗೆ ಹೋಗಬಹುದು. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.

ನನಗೆ ಯಾರೇ ಒಳ್ಳೆಯ ಸಲಹೆ ನೀಡಿದರೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಗುಣವನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡಿದ್ದೇನೆ.ಈಗಲೂ ಅಷ್ಟೇ ಯಾರೇ ನನಗೆ ಒಳ್ಳೆಯದನ್ನು ಹೇಳಿದರೆ ಖಂಡಿತವಾಗಿಯೂ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಸರ್ವ ಸನ್ನದ್ದ:

ಕಲಬುರಗಿ ಜಿಲ್ಲೆಯಲ್ಲಿ ಮುಂದಿನ ಏಳು ದಿನಗಳವರೆಗೆ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ. ಪ್ರವಾಹ ಬಂದರೆ ಬೋಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರವಾಹ ಬಂದರೆ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜೊತೆಗೆ ಕಾರವಾರದಿಂದ ಬೋಟ್ ತರಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದರು.

ಪ್ರವಾಹ ಬಂದ ಸಂದರ್ಭದಲ್ಲಿ ಜನರನ್ನ ಬೇರೆಡೆ ಸ್ಥಳಾಂತರಿಸಲು ಯೋಜಿಸಲಾಗಿದೆ. ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗುವುದು. ಮಹಾರಾಷ್ಟ್ರದ ವಿವಿಧ ಅಣೆಕಟ್ಟೆಗಳಿಂದ ನೀರು ಹರಿಸುವುದರ ಬಗ್ಗೆ ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಲಸಿಕಾ ಅಭಿಯಾನ ಯಶಸ್ವಿಗೆ ರೇಣುಕಾಚಾರ್ಯ ಪಣ;ಜನ ಜಾಗೃತಿ ಮೂಡಿಸುತ್ತಿರೋ ಸಿಎಂ ರಾಜಕೀಯ ಕಾರ್ಯದರ್ಶಿ

ಹೊನ್ನಾಳಿ: ಸ್ವಕ್ಷೇತ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಗಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಶ್ರಮಿಸುತ್ತಿದ್ದಾರೆ. ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ಮನವಿ ಮಾಡ್ತಾ ಇದ್ದಾರೆ.

‘ಎಲ್ಲರಿಗೂ ಲಸಿಕೆ ಎಲ್ಲರಿಗೂ ಉಚಿತ’ ಎನ್ನುವ ಅಭಿಯಾನದೊಂದಿಗೆ ತಮ್ಮ ಮತ ಕ್ಷೇತ್ರದ ಸುಂಕದಕಟ್ಟೆ ಗ್ರಾಮಕ್ಕೆ ಇಂದು ಕೋವಿಶೀಲ್ಡ್ ಲಸಿಕೆ ನೀಡಲಾಗಿದ್ದು, ಗ್ರಾಮಕ್ಕೆ ಭೇಟಿನೀಡಿ ಲಸಿಕೆ ತೆಗೆದುಕೊಂಡವರ ಬಗ್ಗೆ ರೇಣುಕಾಚಾರ್ಯ ಮಾಹಿತಿ ಪಡೆದ್ರು. ಸಾರ್ವಜನಿಕ ಬಂಧುಗಳಿಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ್ರು.

ನಂತ್ರ ನ್ಯಾಮತಿ ಪಟ್ಟಣದ ಸಾರ್ವಜನಿಕರಿಗೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೋನಾ ನಿರೋಧಕ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದ್ದು, ಭೇಟಿ ನೀಡಿ ಲಸಿಕೆ ತೆಗೆದುಕೊಂಡವರ ಬಗ್ಗೆ ಮಾಹಿತಿ ಪಡೆದ್ರು, ಸಾರ್ವಜನಿಕ ಬಂಧುಗಳಿಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ್ರು‌.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ವರ್ಷವೇ 8,500 ಸ್ಮಾರ್ಟ್‌ಕ್ಲಾಸ್‌ ರೂಂ ಅಭಿವೃದ್ಧಿ: ಡಿಸಿಎಂ

ಬೆಂಗಳೂರು: ಕೋವಿಡ್‌ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ರಾಜ್ಯ ಸರಕಾರವು ಡಿಜಿಟಲ್‌ ಕಲಿಕೆಗೆ ಹೆಚ್ಚು ಒತ್ತು ನೀಡಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಶನಿವಾರ ಮಲ್ಲೇಶ್ವರದಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಣೆ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಕೆಲ ದಿನಗಳಲ್ಲೇ ರಾಜ್ಯದ ಉನ್ನತ ಶಿಕ್ಷಣ ವಿಭಾಗದಲ್ಲಿರುವ 8,500 ತರಗತಿ ಕೊಠಡಿಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಪೈಕಿ 2,500 ಕೊಠಡಿಗಳನ್ನು ಈಗಾಗಲೇ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಕಾಲೇಜಿನಲ್ಲೂ ಎಲ್ಲ ತರಗತಿ ಕೊಠಡಿಗಳನ್ನೂ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

ಇದಕ್ಕೆ ಪೂರಕವಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ 1.10 ಲಕ್ಷ ಲ್ಯಾಪ್‌ಟಾಪ್‌ಗಳನ್ನು ಎಲ್ಲ ಪದವಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿತ್ತು. ಅದಕ್ಕಾಗಿ 330 ಕೋಟಿ ರೂ. ಖರ್ಚು ಮಾಡಲಾಗಿತ್ತು. ಅದೇ ರೀತಿ ಈ ಶೈಕ್ಷಣಿಕ ವರ್ಷದಲ್ಲಿ 1.60 ಲಕ್ಷದಷ್ಟು ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಡಿಜಿಟಲ್‌ ಪರಿಕರಗಳನ್ನು ಕೊಟ್ಟು ಸುಮ್ಮನಾಗಲಿಲ್ಲ ಸರಕಾರ. ಬದಲಿಗೆ ಕಲಿಕಾ ವ್ಯವಸ್ಥೆಯನ್ನು ರೂಪಿಸಿತು. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲದ ಕ್ರಾಂತಿಕಾರಿ ವ್ಯವಸ್ಥೆ ಇದು. ಯಾವುದೇ ಖಾಸಗಿ ವಿವಿಗೂ ರೂಪಿಸಲು ಸಾಧ್ಯವಾಗದ ಉಪಕ್ರಮ ಇದು ಎಂದರು ಡಿಸಿಎಂ.

ಅತ್ಯುತ್ತಮ ಕಂಟೆಂಟ್‌ ಜತೆಗೆ, ಪರಿಣಾಮಕಾರಿ ಕಲಿಕೆ ಎಲ್ಲ ಆಯಾಮಗಳಲ್ಲೂ ಸಹಕಾರಿಯಾದ ವ್ಯವಸ್ಥೆ ಇದು. 3.5 ಲಕ್ಷ ತರಗತಿಗಳನ್ನು ನಮ್ಮದೇ ಬೋಧಕರು ಅಪ್‌ಲೋಡ್‌ ಮಾಡಿದ್ದಾರೆ.  ಇಂಥ ಅದ್ಭುತ ಯೋಜನೆಗೆ ಸರಕಾರ ಖರ್ಚು ಮಾಡಿದ್ದು ಕೇವಲ 4 ಕೋಟಿ ರೂ. ಮಾತ್ರ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಇಂಥ ಉತ್ತಮ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.