ಹೈದರಾಬಾದ್ ಮಗು ಅಪಹರಣ ಪ್ರಕರಣ ಸುಖಾಂತ್ಯ!

ಹೈದರಾಬಾದ್: ಆಸ್ಪತ್ರೆಯಿಂದ ಮಗು ಕಳವು ಪ್ರಕರಣ ಇಂದು ಸುಖಾಂತ್ಯಗೊಂಡಿದ್ದು, ಹಸುಗೂಸು ತಾಯಿಯ ಮಡಿಲು ಸೇರಿದೆ.

ವಿಜಯಾ ಎಂಬ ಮಹಿಳೆ ಕಳೆದ ಜೂನ್ ೨೭ ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.ಮಗುವಿಗೆ ಕೋಟಿ ಹೆರಿಗೆ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಲು ಹೋದಾಗ ನೀಲಿ ಬಣ್ಣದ ಸೀರೆ ಉಟ್ಟ ಇನ್ನೊಬ್ಬ ಮಹಿಳೆ ತಾಯಿ ಬಳಿಯಿದ್ದ ಮಗುವನ್ನು ಕಿಡ್ನಾಪ್ ಮಾಡಿದ್ದಳು.

ಮಗ ಅಪಹರಣ ಮಾಡಿದ ಮಹಿಳೆಯ ಬೆನ್ನತ್ತಿದ ತೆಲಂಗಾಣಾ ಪೊಲೀಸರು ಬೀದರ್ ನಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಇಂದು ಬೆಳಗಿನ ಜಾವ ಹೈದರಬಾದ್ ನಲ್ಲಿ ಮಗು ಪತ್ತೆಯಾಗಿದ್ದು, ಪೊಲೀಸರು ಮಗುವನ್ನು ತಾಯಿ ಮಡಿಲಿಗೆ ಹಾಕಿದ್ದಾರೆ.
ತಾಯಿ ವಿಜಯ ಸೇರಿ ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದ್ದು, ಮಗುವನ್ನು ಹುಡುಕಿ ಕೊಟ್ಟ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇನ್ನೊಂದೆಡೆ ಮಗು ಕಿಡ್ನ್ಯಾಪ್ ಮಾಡಿದ ಮಹಿಳೆಗಾಗಿ ಪೊಲೀಸರಿ ಶೋಧ ನಡೆಸುತ್ತಿದ್ದಾರೆ.

ಸಾಲಮನ್ನಾ ಕೊರತೆ ತುಂಬಲು ಶಾಸಕರ ನಿಧಿಗೆ ಕೈ ಇಟ್ಟರಾ ಸಿಎಂ?

ಬೆಂಗಳೂರು: ಬಜೆಟ್ ನಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಬೇಕಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಶಾಸಕರ ನಿಧಿ ಸೇರಿ ಬಳಕೆಯಾಗದ 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟಿದ್ದಾರೆ.ಇದರ ಜೊತೆ ಶಾಲಾ ಪ್ರದೇಶಾಭಿವೃದ್ಧಿ ಬೊಕ್ಕಸಕ್ಕೂ ಕೈ ಹಾಕಲು ನಿರ್ಧರಿಸಿದ್ದಾರೆ ಎಂದು ಸುದ್ದಿಲೋಕಕ್ಕೆ ಸಿಎಂ ಕಚೇರಿಯ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಸಾಲಮನ್ನಾ ಮಾಡಿದರೆ ಆರ್ಥಿಕ ಹೊಂದಾಣಿಕೆ‌ ಕಷ್ಟವಾಗಲಿದೆ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧದ ನಡುವೆಯೂ ಸಾಲಮನ್ನಾ ಮಾಡಲು‌ ಹೊರಡಿರುವ ಸಿಎಂ ಬೊಕ್ಕಸಕ್ಕೆ ಬರುವ ಹಣದ ಜೊತೆಗೆ ಬ್ಯಾಂಕ್ ನಲ್ಲಿ ಕೊಳೆಯುತ್ತಿರುವ ಹಣದ ಮೇಲೆ ಕಣ್ಣುಹಾಕಿದ್ದಾರೆ.

2013ರಿಂದ 2015-16ರವರೆಗೆ ಶಾಸಕರು ಬಳಸಿಕೊಳ್ಳದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಹಣವನ್ನು ಸಾಲಮನ್ನಾದಿಂದ ಆಗುವ ಹಣಕಾಸು‌ ಕೊರತೆ ತುಂಬಿಕೊಳ್ಳಲು ನಿರ್ಧರಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 391 ಕೋಟಿ ರೂ.ಗಳ ಹಣ ಹಾಗು ಕಾಂಗ್ರೆಸ್ ನ ನಾಲ್ಕು ವರ್ಷದ ಅವಧಿಯಲ್ಲಿ 611 ಕೋಟಿ ರೂ.ಸೇರಿ ಒಟ್ಟು 1002 ಕೋಟಿ ರೂ.ಗಳಷ್ಟು ಹಣ ಶಾಸಕರ ನಿಧಿಯಡಿ ಬಳಕೆಯಾಗದೆ ಬ್ಯಾಂಕ್ ನಲ್ಲಿದೆ.ಕಳೆದ ಸಾಲಿನ ಹಣ ಹಾಗು ವಿವಿಧ ಯೋಕನೆಗಳಿಗೆ ಸರತಕಾರ ನೀಡಿದ್ದ ಹಣ ಬಳಕೆಯಾಗದಿರುವುದು ಸೇರಿದರೆ ಹೆಚ್ಚು ಕಡಿಮೆ 2 ಸಾವಿರ ಕೋಟಿ ರೂ.ಗಳಷ್ಟು ಹಣ ಬ್ಯಾಂಕ್ ನಲ್ಲಿ ಉಳಿದಿರಲಿದೆ.ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶವಿಲ್ಲದ ಕಾರಣ ಬ್ಯಾಂಕ್ ನಲ್ಲೇ ಇದ್ದರೆ ಏನು ಉಪಯೋಗ ಎಂದು ಸಾಲಮನ್ನಾಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿಎಂ ಪ್ಲಾನ್ ಮಾಡಿದ್ದಾರೆ.

ಇವರೊಂದಿಗೆ ಶಾಲೆಗಳ ಅಭಿವೃದ್ಧಿಗೆ ಎಸ್‌ಡಿಎಂಸಿ ಮೂಲಕ ನೀಡಿದ್ದ ಹಣದಲ್ಲಿಯೂ ದೊಡ್ಡ ಪ್ರಮಾಣದ ಹಣ ಬಾಕಿ ಇದ್ದು ಅದನ್ನೂ ಸಾಲಮನ್ನಾಗೆ ಹೊಂದಿಸಿಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ.ಬೆಂಗಳೂರಿನ ಕೆಲವೊಂದು ಸರ್ಕಾರಿ ಆಸ್ತಿ ಮಾರಾಟ ಮಾಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ವಿತ್ತ ಖಾತೆಯ ಹೊಣೆಯೊಂದಿಗೆ ಮುಖ್ಯಮಂತ್ರಿಯಾಗಿ ಸಿಎಂ ಎಚ್ಡಿಕೆ ಚೊಚ್ಚಲ ಬಜೆಟ್ ನಲ್ಲಿ ಸಾಲಮನ್ನಾ ಘೋಷಣೆ ಮಾಡುವ ಕಾರಣಕ್ಕೆ ಅಗತ್ಯ ಸಂಪನ್ಮೂಲ‌ ಕ್ರೂಢೀಕರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಜಮೀರ್ ಅಹಮದ್ ರ ಎರಡು ಆಸೆ ಈಡೇರಿಸಿದ ಸಿಎಂ: ಮತ್ತೆ ಚಿಗುರಿತೇ ದೋಸ್ತಿ

ಬೆಂಗಳೂರು:ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಜೊತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದೋಸ್ತಿ ಮತ್ತೆ ಚಿಗುರಿದಂತೆ ಕಂಡುಬಂದಿದೆ.ಉಮ್ರಾ ಖರ್ಜೂರ ನೀಡಿದ್ದರ ಫಲವೋ ಏನೋ ಗೊತ್ತಿಲ್ಲ ಆದರೆ ಜಮೀರ್ ಅಹಮದ್ ರ ಎರಡು ಕನಸನ್ನು ಎಚ್ಡಿಕೆ ಈಡೇರಿಸಿದ್ದಾರೆ.

ಅಡ್ಡಮತದಾನದ ನಂತರ ಕುಮಾರಸ್ವಾಮಿ ಜೊತೆ ಮುನಿಸಿಕೊಂಡು ದಳದುಂದ ಜಾರಿ‌ ಕೈ ಸೇರಿಕೊಂಡಿರುವ ಸಚಿವ ಜಮೀರ್ ಅಹಮದ್ ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಮತ್ತೆ ಸ್ನೇಹ ಚಿಗುರಿಡೆದ ಸುಳಿವು ಸಿಕ್ಕಿದೆ.

ಮೊದಲನೆಯದಾಗಿ ಕಾಂಗ್ರೆಸ್ ಕೋಟಾದಡಿ‌ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಜಮೀರ್ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಬಳಸುತ್ತಿದ್ದ ಸರ್ಕಾರಿ ಕಾರು ಫಾರ್ಚುನರ್ ನೀಡುವಂತೆ ಸಿಎಂಗೆ ಬೇಡಿಕೆ ಇಟ್ಟಿದ್ದರು.ಮೊದಲು ಅದನ್ನು ನಿರಾಕರಿಸಿದ್ದ ಸಿಎಂ ನಂತರ ಅದೇಕೋ ಸಿದ್ದರಾಮಯ್ಯ ಬಳಸುತ್ತಿದ್ದ ಕೆಎ 01, ಜಿ 5734 ನಂಬರಿನ ಫಾರ್ಚುನರ್
ಕಾರನ್ನೇ ಜಮೀರ್ ಗೆ ನೀಡಿದರು.

ಅಷ್ಟಕ್ಕೆ ಸುಮ್ಮನಾಗದ ಸಚಿವ ಜಮೀರ್ ತಮಗೇ ಸ್ಯಾಂಕಿ ಟ್ಯಾಂಕ್ ಬಳಿಯ ನಂಬರ್ 30 ನಿವಾಸ ಬೇಕೆಂದು ಹೊಸ ಬೇಡಿಕೆ ಮುಂದಿಟ್ಟರು.ಮಂಜೂರಾಗಿದ್ದ ಜಯಮಹಲ್ ನಿವಾಸವನ್ನು ನಿರಾಕರಿಸಿದ್ದರು. ಆದರೆ ಆ ನಿವಾಸವನ್ನು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರಿಗೆ ನೀಡಿದ್ದರೂ ಕೂಡ ಮತ್ತೆ ಆ ನಿವಾಸವನ್ನೇ ಜಮೀರ್ ನೀಡುವ ಅಭಯ ನೀಡಿದ್ದಾರೆ.ಈ ಸಂಬಂಧ ಜಿಟಿಡಿ ಜೊತೆ ಸಿಎಂ ಮಾತುಕತೆ ನಡೆಸಿ ಮನೆ ಬದಲಾವಣೆಗೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಇದಕ್ಕೆಲ್ಲಾ ಜಮೀರ್ ಅಹಮದ್ ಸಿಎಂ ಕುಮಾರಸ್ವಾಮಿಯವರಿಗೆ ಉಮ್ರಾ ಖರ್ಜೂರ ನೀಡಿದ್ದರ ಫಲ ಎನ್ನಲಾಗುತ್ತಿದೆ.ಇತ್ತೀಚೆಗಷ್ಟೇ ಸಿಎಂ ರನ್ನು ಭೇಟಿಯಾಗಿ ಖರ್ಜೂರ ನೀಡಿ ಬಂದಿದ್ದರು.

ಎಚ್‌ಎಎಲ್ ಬಳಿ ಸ್ಪೋಟ

ಬೆಂಗಳೂರು: ಎಚ್ ಎ ಎಲ್ ಆವರಣದೊಳಗೆ ಅನುಮಾಸ್ಪದ ರೀತಿಯಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಸ್ಪೋಟದಿಂದ ಒಂದು ಕಿ.ಮೀ ವರೆಗೂ ಭೂಮಿ ಕಂಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇಂದು ಸಂಜೆ ೪:೩೦ ರ ಸುಮಾರಿಗೆ ಶಾಸ್ತ್ರಿ ನಗರದಲ್ಲಿರುವ ಎಚ್ ಎ ಎಲ್ ಆವರಣದೊಳಗೆ ಘಟನೆ ನಡೆದಿದೆ. ಜಿಲೆಟಿನ್ ಮದ್ದು ಬಳಸಿ ಸ್ಪೋಟಿಸಲಾಗಿದ್ದು, ಸ್ಪೋಟದಿಂದ ಒಂದು ಕಿ.ಮೀ ವರೆಗೂ ಭೂಮಿ ಕಂಪಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೆಚ್ ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ನಿರ್ಮಾಣ ಹಂತದ ಕಟ್ಟಡದ ಬಳಿ ಸ್ಪೋಟ ಸಂಭವಿಸಿದ್ದು, ಎರಡು ವರ್ಷದ ಹಿಂದೆ ಬಂಡೆ ಸೀಳಲು ಜಿಲೆಟಿನ್ ತಂದಿದ್ರು, ಅದರಲ್ಲಿ ಒಂದು ಜಿಲೆಟಿನ್ ಉಳಿದಿರುತ್ತೆ. ಆ ಕಸವನ್ನು ಸೆಕ್ಯೂರಿಟಿ ಗಾರ್ಡ್ ಕಸದ ಜಾಗಕ್ಕೆ ಎಸೆದು ಬೆಂಕಿ ಇಟ್ಟಿರಬಹುದು. ಹೀಗಾಗಿ ಅದು ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಸದ್ಯ ಈ ಕುರಿತು ಪ್ರಕರಣ ಹೆಚ್ ಎಲ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮಾಡಲಾಗುತ್ತಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹಮದ್ ಮಾಹಿತಿ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಮಗು ಅಪಹರಣ ಪ್ರಕರಣ: ಬೀದರ್‌ನಲ್ಲಿ ಹುಡುಕಾಟ

ಬೀದರ್: ಹೈದ್ರಾಬಾದ್ ನ ಕೋಟಿ ಹೆರಿಗೆ ಆಸ್ಪತ್ರೆಯಿಂದ ನವಜಾತ ಹೆಣ್ಣು ಶಿಶುವನ್ನು ಅಪಹರಿಸಿದ ಮಹಿಳೆಯನ್ನು ಬೆನ್ನತ್ತಿ ತೆಲಂಗಾಣಾ ಪೊಲೀಸರು ಬೀದರ್ ನಲ್ಲಿ ಹುಡುಕಾಟ ನಡೆಸಿದ್ದಾರೆ.

ವಿಜಯಾ ಎಂಬ ಮಹಿಳೆ ಕಳೆದ ಜೂನ್ ೨೭ ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಮಗುವಿಗೆ ಕೋಟಿ ಹೆರಿಗೆ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಲು ಹೋದಾಗ ನೀಲಿಬಣ್ಣದ ಸೀರೆ ಉಟ್ಟ ಇನ್ನೊಬ್ಬ ಮಹಿಳೆ ತಾಯಿ ಬಳಿಯ ಮಗುವನ್ನು ಎತ್ತು ಕೊಂಡಿದ್ದಾಳೆ. ಆಸ್ಪತ್ರೆಯ ಸಹಾಯಕಳಿರಬಹುದೆಂದು ತಿಳಿದ ತಾಯಿ, ಮಗುವನ್ನು ಮಹಿಳೆ ಕೈಗೆ ಕೊಟ್ಟಿದ್ದಾರೆ.

ಮಗುವನ್ನು ತೆಗೆದುಕೊಂಡು ಹೊದ ಆ ಮಹಿಳೆ ಕಣ್ಣುತಪ್ಪಿಸಿ ನೇರವಾಗಿ ಹೈದ್ರಾಬಾದ್ ನ ಎಂ.ಜಿ. ಬಸ್ ನಿಲ್ದಾಣದಿಂದ ಬೀದರ್ ಕಡೆ ಪ್ರಯಾಣ ಬೆಳೆಸಿದ್ದಾಳೆ. ಮಗುವನ್ನು ತೆಗೆದುಕೊಂಡು ಹೋಗಿ ಒಂದು ಗಂಟೆಯಾದ್ರೂ ಬರದೆ ಇದ್ದಾಗ ವಿಜಯಾ ವಿಷಯವನ್ನು ಗಂಡನಿಗೆ ತಿಳಿಸಿದ್ದಾರೆ. ನಂತರ ಆಸ್ಪತ್ರೆಯಲ್ಲಾ ಜಾಲಾಡಿದ್ರು ಮಗು ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಆಸ್ಪತ್ರೆ ಮತ್ತು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಮಗುವನ್ನು ಅಪಹರಿಸಿರುವುದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತೆಲಂಗಾಣಾ ಪೊಲೀಸರು ಬೀದರ್ ಗೆ ಆಗಮಿಸಿದ್ದು, ಹುಡುಕಾಟ ನಡೆಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ ಮಾನಸ ಸರೋವರ ಯಾತ್ರಿಗಳ ಮಾಹಿತಿ ಬೇಕಾ?:ಈ ನಂಬರ್ ಗೆ ಫೋನ್ ಮಾಡಿ

ಬೆಂಗಳೂರು:ಮಾನಸ ಸರೋವರ ಯಾತ್ರೆ ಕೈಗೊಂಡು ಹವಾಮಾನ ವೈಪರಿತ್ಯದಿಂದ ಸಿಮಿಕೋಟ್​ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳು ಅಥವಾ ಕುಟುಂಬದವರು ಮಾಹಿತಿಗಾಗಿ ಭಾರತೀಯ ರಾಯಭಾರಿ ಪ್ರಣವ್​ ಗಣೇಶ್​ ಅವರನ್ನ +977 985-1107006 ನಂಬರ್ ಮೂಲಕ ಸಂಪರ್ಕಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಹವಮಾನ ವೈಪರೀತ್ಯದಿಂದಾಗಿ ನೇಪಾಳದ ಸಿಮಿಕೋಟ್​ನಲ್ಲಿ ಸಿಲುಕಿರುವ ಭಾರತೀಯ ಸಂತ್ರಸ್ತ ಯಾತ್ರರ್ಥಿಗಳೊಂದಿಗೆ, ಕಠ್ಮುಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತರ ಭದ್ರತೆ ಹಾಗೂ ಆಹಾರದ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತಿದೆ.
ಅಲ್ಲದೇ ಸಿಮಿಕೋಟ್​ನಲ್ಲಿ ಸಿಲುಕಿರುವ ಹಿರಿಯ ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು, ನೇಪಾಳ ಸರ್ಕಾರವನ್ನ ಒತ್ತಾಯಿಸುತ್ತಿದ್ದಾರೆ.

ಹವಮಾನ ವೈಪರೀತ್ಯದಿಂದಾಗಿ ಸಿಮಿಕೋಟ್​ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನ ಸ್ಥಳಾಂತರಿಸಲು ಪರ್ಯಾಯ ಮಾರ್ಗ ಹುಡುಕಿದರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಲಿಕಾಪ್ಟರ್​ ಮೂಲಕ ಯಾತ್ರಾರ್ಥಿಗಳನ್ನ ರಕ್ಷಿಸುವ ಚಿಂತನೆಯಲ್ಲಿ ಇದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಯಾತ್ರಿಗಳ ಬಂಧುಗಳು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ,ಯಾತ್ರಿಗಳ ರಕ್ಷಣೆ ಮಾಡುವ ಕ್ರಮ ಕೈಗೊಳ್ಳಲಾಗಿದೆ.ಯಾತ್ರಿಗಳ ಕುಟುಂಬದವರು ಮಾಹಿತಿ ಬೇಕಾದಲ್ಲಿ ಅಥವಾ ಮಾಹಿತಿ ನೀಡಬೇಕಾದಲ್ಲಿ ಭಾರತೀಯ ರಾಯಭಾರಿ ಪ್ರಣವ್​ ಗಣೇಶ್​ ಅವರನ್ನ ಸಂಪರ್ಕಿಸಿ ಎಂದು ದೂರವಾಣಿ ಸಂಖ್ಯೆ +977 985-1107006 ನಂಬರ್ ಅನ್ನು ನೀಡಿದೆ.