ಆಸ್ತಿ ವಿವರ ಸಲ್ಲಿಸಲು ಶಾಸಕರ ಹಿಂದೇಟು: ಗಡುವು ಮುಗಿದರೂ ವಿವರ ಸಲ್ಲಿಸದ 159 ಶಾಸಕರು

ಬೆಂಗಳೂರು: ಲೋಕಾಯುಕ್ತಕ್ಕೆ ಆಸ್ತಿವಿವರ ಸಲ್ಲಿಕೆ ಮಾಡುವ ಗಡುವು ಮುಗಿದರೂ ಇನ್ನೂ 159 ಶಾಸಕರು ತಮ್ಮ ಆಸ್ತಿ ವಿವರವನ್ನು ಸಲ್ಲಿಕೆ ಮಾಡಿಲ್ಲ. ಆಗಸ್ಟ್ 31ಕ್ಕೆ ಅಂತಿಮ ಗಡುವು ನೀಡಿದ್ದು ಆಗಲೂ ಆಸ್ತಿ ವಿವರ ಸಲ್ಲಿಸದೇ ಇದ್ದರೆ ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಮಾಹಿತಿ ನೀಡಲಿದೆ.

ಪ್ರತಿ ವರ್ಷ ಶಾಸಕರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವುದು ಕಡ್ಡಾಯ.ಜೂನ್ 30 ರೊಳಗೆ ಆಸ್ತಿ ವಿವರವನ್ನು ಸಲ್ಲಿಕೆ ಮಾಡವೇಕು, ಆದರೆ ಇಲ್ಲಿಯವರೆಗೆ ಕೇವಲ 111 ಶಾಸಕರು ಮತ್ತು ವಿಧಾನ ಪರಿಷತ್ ನ 29 ಸದಸ್ಯರು ಮಾತ್ರ ತಮ್ಮ ಆಸ್ತಿ ವಿವರವನ್ನು ಸಲ್ಲಿಕೆ ಮಾಡಿದ್ದಾರೆ.

ಉಭಯ ಸದನಗಳ ಇನ್ನೂ 159 ಸದಸ್ಯರು ತಮ್ಮ ಆಸ್ತಿ ವುವರ ಸಲ್ಲಿಕೆಯನ್ನು ಬಾಕಿ ಉಳಿಸಿಕೊಂಡಿದ್ದು ಅವರಿಗೆ ಆಗಸ್ಟ್ 31 ರವರೆಗೆ ಕಡೆಯ ಅವಕಾಶ ನೀಡಲಾಗಿದೆ.ನಂತರ ಯಾರು ಆಸ್ತಿ ವಿವರವನ್ನು ಸಲ್ಲಿಕೆ ಮಾಡಿಲ್ಲ ಎನ್ನುವ ಮಾಹಿತಿಯನ್ನು ರಾಜ್ಯಪಾಲರಿಗೆ ಲೋಕಾಯುಕ್ತ ಸಂಸ್ಥೆ ರವಾನಿಸಲಿದ್ದು ರಾಜ್ಯಪಾಲರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

10 ದಿನದಲ್ಲಿ ಶಿರಾಡಿಘಾಟ್ ಸಂಚಾರ ಮುಕ್ತ: ರೇವಣ್ಣ

ಹಾಸನ: ಇನ್ನು 10‌ ದಿನಗಳೊಳಗೆ‌ ಶಿರಾಡಿ ಘಾಟ್ ಕಾಮಗಾರಿ‌ ಮುಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‌ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ
ಮಾತನಾಡಿದ ಸಚಿವ ರೇವಣ್ಣ,ಕಳೆದ‌ ಐದು ತಿಂಗಳಿನಿಂದ ರಸ್ತೆ ಕಾಂಕ್ರಿಟೀಕರಣಕ್ಕಾಗಿ ಬಂದ್ ಆಗಿದ್ದ ಹಾಸನ ಮಂಗಳೂರು ಹೆದ್ದಾರಿ ಕಾಮಗಾರಿ ಬಹುತೇಕ ಮುಗಿದಿದೆ.ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸೊದಾಗಿ ಲೋಕೋಪಯೋಗಿ ಸಚಿವರು ಭರವಸೆ ನೀಡಿದರು.

10 ಕೋಟಿ ವೆಚ್ಚದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಹಾಸ್ಟಲ್ ನಿರ್ಮಾಣ ಮಾಡಲಾಗುತ್ತಿದೆ.ಹಾಸನ ವೈದ್ಯಕೀಯ ಆಸ್ಪತ್ರೆಯನ್ನು135 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಕೊಟ್ಟ ಮಾತಿನಂತೆ ಮುಖ್ಯಮಂತ್ರಿ‌ ಎಚ್.ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಲಿದ್ದಾರೆ. ಈ ಸಲದ‌ ಬಜೆಟ್ ನಲ್ಲಿ ರೈತರ ಸಾಲ‌ ಮನ್ನಾ ಗ್ಯಾರಂಟಿ.ರೈತರ ಸಾಲ ಮನ್ನಾ ಬಗ್ಗೆ ಯಾವುದೇ ಅನುಮಾನ ಬೇಡ,ಈಗಾಗಲೇ ಸಾಲಮನ್ನಾ ಸಂಬಂಧ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಹಾಗಾಗಿ ರೈತರು ಆತಂಕಪಡಬೇಕಿಲ್ಲ ಎಂದು ರೇವಣ್ಣ ಹೇಳಿದರು.

ಅಂಬೇಡ್ಕರ್ ಹಾಸ್ಟೆಲ್ ಅವ್ಯವಸ್ಥೆ: ವಾರ್ಡನ್ ಅಮಾನತು

ಕಲಬುರಗಿ:ನಗರದ ರಾಜಾಪುರ ಬಡಾವಣೆಯ ಅಂಬೇಡ್ಕರ್ ವಸತಿ ನಿಲಯದ ವಾರ್ಡನ್ ಸಂಜುಕುಮಾರ್ ಅಮಾನತ್ತುಗೊಳಿಸಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆದೇಶಿಸಿದ್ದಾರೆ.

ಕಲಬುರಗಿಯ ರಾಜಾಪುರ ಬಡಾವಣೆಯ ವಸತಿ‌ ನಿಲಯಕ್ಕೆ ಸಚಿವ ಪ್ರೀಯಾಂಕ್ ಖರ್ಗೆ ದಿಢೀರ್ ಭೇಟಿ ನೀಡಿದರು. ಆಹಾರ ಶುಚಿತ್ವ,ರುಚಿ ಸೇರಿದಂತೆ ಸೌಲಭ್ಯಗಳ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ಕಂಡು ಸಚಿವರು ಗರಂ ಆದರು ಸ್ಥಳದಲ್ಲಿಯೇ ಹಾಸ್ಟೆಲ್ ವಾರ್ಡನ್ ಸಂಜುಕುಮಾರ್ ಅಮಾನತ್ತುಗೊಳಿಸುವಂತೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗೆ ಆದೇಶ ನೀಡಿದರು.

ಕೂಡಲೇ ಹಾಸ್ಟೆಲ್‌ನಲ್ಲಿರುವ ಬೆಡ್‌ಶಿಟ್ ಹಾಗೂ ಮಂಚಗಳ ಬದಲಾವಣೆಗೆ ಸೂಚನೆ ನೀಡಿ ವಸತಿ ನಿಲಯಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳ ಕಲ್ಪಿಸಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಆದೇಶಿಸಿದರು.

ಕುಮಾರಸ್ವಾಮಿ ಅಂದ್ರೆ ವಚನ ಭ್ರಷ್ಟತೆ, ಅವಕಾಶವಾದಿಗೆ ಮತ್ತೊಂದು‌ ಹೆಸರು: ತೇಜಸ್ವಿನಿ

ದಾವಣಗೆರೆ: ಕುಮಾರಸ್ವಾಮಿ ಎಂದರೆ ವಚನಭ್ರಷ್ಟತೆ ಹಾಗು ಅವಕಾಶವಾದಿಗೆ ಮತ್ತೊಂದು ಹೆಸರು ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರದ ಬೆಳ್ಳೂಡಿಯಲ್ಲಿರುವ ಕಾಗಿನೆಲೆ ಕನಕ ಗುರುಪೀಠಕ್ಕೆ ತೇಜಸ್ವಿನಿ ಗೌಡ ಭೇಟಿ ನೀಡಿದ್ರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ ನನ್ನ ರಾಜಕೀಯ ಜೀವನದ ಎರಡನೆ ಇನ್ನಿಂಗ್ಸ್ ಆರಂಭಿಸುತ್ತಿದ್ದೇನೆ ಅದಕ್ಕೆ ಎಲ್ಲಾ ಮಠಾಧೀಶರ ಆರ್ಶೀವಾದ ಪಡೆಯುತ್ತಿದ್ದೇನೆ ಎಂದು ಮಠದ ಭೇಟಿಯ ಕಾರಣವನ್ನು ತಿಳಿಸಿದ್ರು.

ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ತೇಜಸ್ವನಿ ಗೌಡ ವಾಗ್ದಾಳಿ ಕುಮಾರಸ್ವಾಮಿ ಎಂದರೆ ವಚನಭ್ರಷ್ಟತೆ,ಅವಕಾಶವಾದಿಗೆ ಮತ್ತೊಂದು ಹೆಸರು.ಅಧಿಕಾರಕ್ಕರ ಬಂದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ರು. ಆದ್ರೆ ಕುಮಾರಸ್ವಾಮಿ ಈಗ ಏನು ಮಾಡುತ್ತಿದ್ದಾರೆ.ಅವರಿಗೆ ಕುರ್ಚಿ ಮುಖ್ಯ ಕುರ್ಚಿಗೋಸ್ಕರ ಏನು ಬೇಕಾದ್ರು ಮಾಡ್ತಾರೆ ಎಂದು ಟೀಕಿಸಿದ್ರು.

ರಾಜ್ಯದ ರೈತರು ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ ಆದರೆ ಸರ್ಕಾರಕ್ಕೆ ಅದರ ಪರಿವೇ ಇಲ್ಲ, ಸರ್ಕಾರ ಇನ್ನು ಟೇಕ್ ಆಪ್ ಆಗಿಲ್ಲ , ಯಾವಾಗ ಬೇಕಾದರು ಬಿದ್ದುಹೋಗಬಹುದು ಕುಮಾರಸ್ಚಾಮಿಯವರ ಮುಖವಾಡ ಕಳಚುವ ಕೆಲಸವನ್ನು ರಾಜ್ಯದ ಜನರು ಶೀಘ್ರ ಮಾಡುತ್ತಾರೆ.ರಾಜ್ಯದ ಜನರಿಗೆ ಅನಿಶ್ಚಿತತೆ ಕಾಡುತ್ತಿದೆ.ಗಟ್ಟಿ ಸರ್ಕಾರ ಕೊಟ್ಟಂತಹ ಹೆಗ್ಗಳಿಕೆ ನಮ್ಮ ರಾಜ್ಯಕ್ಕಿದೆ.ಆದರೆ ಈ ಬಾರಿ ರಾಜ್ಯದ ಜನರಿಗೆ ದೌರ್ಭಾಗ್ಯ ಎಂದು‌ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

ಕಲಾಪ ಹೇಗೆ ನಡೆಸಬೇಕು: ಸ್ಪೀಕರ್,ಸಭಾಪತಿಗೆ ಸ್ಪೆಷಲ್ ಕ್ಲಾಸ್ ತಗೊಂಡ ರಾಜ್ಯಪಾಲ ವಾಲಾ!

ಬೆಂಗಳೂರು:ಕಲಾಪವನ್ನು ಹೇಗೆ ನಡೆಸಬೇಕು, ಸದನವನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಹಾಗು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿಗೆ ರಾಜ್ಯಪಾಲ ವಜುಭಾಯ್ ವಾಲಾ ಸ್ಪೆಷಲ್ ಕ್ಲಾಸ್ ತೆಗೆದುಕೊಂಡರು.

ಸೋಮವಾರದಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಜಂಟಿ ಅಧಿವೇಶ‌ಕ್ಕೆ ಅಧಿಕೃತ ಆಹ್ವಾನ ನೀಡಲು ಉಭಯ ಸದನಗಳ ಅಧ್ಯಕ್ಷರು ರಾಜಭವನಕ್ಕೆ ಭೇಟಿ ನೀಡಿದ ವೇಳೆ ಕೆಲವೊಂದು ಉದಾಹರಣೆಗಳ ಸಮೇತ ರಾಜ್ಯಪಾಲರು ಕಲಾಪ ಪಾಠ ಬೋಧನೆ ಮಾಡಿದ ಘಟನೆ ನಡೆಯಿತು.

ಒಂದು ಗಂಟೆಗಳ ಕಾಲ ಸಭಾಪತಿ, ಸ್ಪೀಕರ್ ಹುದ್ದೆ ನಿಭಾಯಿಸುವ ಕುರಿತು ರಾಜ್ಯಪಾಲರು ಅನುಭವ ಧಾರೆ ಎರೆದಿದ್ದಾರೆ.ವಜುಭಾಯ್ ವಾಲಾ ಸಹ ಈ ಹಿಂದೆ ಗುಜರಾತ್ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ರು.ಸ್ಪೀಕರ್ ಆಗಿದ್ದ ವೇಳೆ ವಾಲಾ ಕೈಗೊಳ್ಳುತ್ತಿದ್ದ ಕಾರ್ಯತಂತ್ರದ ಬಗ್ಗೆ ಪಾಠ ಮಾಡಿದರು.

ಸದನಕ್ಕೆ ಗೈರಾಗುತ್ತಿದ್ದ ಶಾಸಕರಿಗೆ ವಾಲಾ ಖಡಕ್ ಎಚ್ಚರಿಕೆ ನೀಡಿತ್ತಿದ್ದದ್ದು,ಸದನದ ವಿಡಿಯೋ ವೀಕ್ಷಿಸಿ ಗೈರಾದ ಶಾಸಕರ ಅಂದಿನ ವೇತನ ಕಟ್ ಮಾಡುತ್ತಿದ್ದದ್ದು,ವಿಧೇಯಕ ಮಂಡನೆ ವೇಳೆ ಅನಗತ್ಯ ವಿಚಾರ ಚರ್ಚೆಗೆ ಅವಕಾಶ ಕೊಡದಂತೆ ನೋಡಿಕೊಳ್ಳುತ್ತಿದ್ದ ಕುರಿತು ಮಾಹಿತಿ ನೀಡಿ ಕೆಲ ಟಿಪ್ಸ್ ನೀಡಿದರು.

ಆಡಳಿತ ಪಕ್ಷದ ಸದಸ್ಯರ ಆರ್ಭಟಕ್ಕೆ ಕಡಿವಾಣ ಹಾಕಬೇಕು.
ನಮ್ಮವರೆಂಬ ಸಲುಗೆ ಸದನದಲ್ಲಿ ಸರ್ವತಾ ಸಲ್ಲದು, ಯಾವುದೇ ಚರ್ಚೆ ವೇಳೆ ಸ್ಪೀಕರ್, ಸಭಾಪತಿ ಮುಖ ನೋಡಿ ಮಾತ್ನಾಡಬೇಕು.ಹೀಗೆ ಸದನದ ಗಾಂಭಿರ್ಯತೆ, ಶಿಸ್ತು, ಸಮಯ ಹೊಂದಾಣಿಕೆ ಬಗ್ಗೆ ವಾಲಾ ಸ್ಪೇಶಲ್ ಕ್ಲಾಸ್ ತೆಗೆದುಕೊಂಡರು.

ಏನೋ ಅಂದುಕೊಂಡು ಹೋದ ಸ್ಪೀಕರ್ ರಮೇಶ ಕುಮಾರ್, ಸಭಾಪತಿ ಹೊರಟ್ಟಿಗೆ ವಾಲಾ ಮಾತು ಕೇಳಿ ಆಶ್ಚರ್ಯವಾಯಿತು.ಎಲ್ಲಾ ಮಾತುಕತೆ ಮುಗಿದ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಅಂತ ಇಬ್ಬರು ನಾಯಕರು ಕೇಳಿದರು.ಇದಕ್ಕೆ ನನ್ನದೇನಿದೆ ಎಲ್ಲಾ ಆ ಭಗವಂತನದು ಎಂದು ನಗುತ್ತಾ ಹೇಳಿ ವಜುಬಾಯ್ ವಾಲಾ ಸ್ಪೀಕರ್ ಮತ್ತು ಸಭಾಪತಿಯನ್ನು ಬೀಳ್ಕೊಟ್ಟರು.

ಕ್ಯಾಬ್ ಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆಯದಂತೆ ಮುನ್ನೆಚ್ಚರ ವಹಿಸಿ: ಆ್ಯಪ್ ಆಧಾರಿತ ಕ್ಯಾಬ್ ಕಂಪನಿಗಳಿಗೆ ಸೂಚನೆ

ಬೆಂಗಳೂರು:ಇತ್ತೀಚೆಗೆ ಓಲಾ ಕ್ಯಾಬ್‌ನಲ್ಲಿ‌ ನಡೆದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಇಂಥ ಯಾವುದೇ ಘಟನೆ ನಡೆಯದಂತೆ ಎಚ್ವರಿಕೆ ವಹಿಸುವಂಥೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಓಲಾ ಕ್ಯಾಬ್‌ನಲ್ಲಿ‌ ನಡೆದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪನಿಗಳೊಂದಿಗೆ ಬಿಎಂಆರ್‌ಡಿಎನಲ್ಲಿ ಸಭೆ ನಡೆಸಿದರು, ಇತ್ತೀಚೆಗೆ ಆ್ಯಪ್‌‌ ಆಧಾರಿತ ಟ್ಯಾಕ್ಸಿಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದಂಥ ಘಟನೆ ನಡೆದಿವೆ. ಚಾಲಕರನ್ನು ನೇಮಕ‌ ಮಾಡಿಕೊಳ್ಳುವ ಮುನ್ನ ಅವರ ಸಂಪೂರ್ಣ ವಿವರ ತೆಗೆದುಕೊಳ್ಳುವಂತೆ ಹಾಗು ಚಾಲಕರ ಹಿನ್ನೆಲೆ ಪಡೆದು, ಪೊಲೀಸರಿಂದ ಚಾಲಕನ‌ ದಾಖಲಾತಿಯನ್ನು ಪರಿಶೀಲಿಸವುದನ್ನು ಗಂಭೀರವಾಗಿ ನಡೆಸುವಂತೆಯೂ ಸಭೆಯಲ್ಲಿ ಚರ್ಚೆಯಾಯಿತು.

ಮಹಿಳಾ ಚಾಲಕಿಯರು ಹೆಚ್ವಿನ ಸಂಖ್ಯೆಯಲ್ಲಿ ಬರುವುದರಿಂದ ಮಹಿಳಾ ಸುರಕ್ಷತೆಗೂ ಆದ್ಯತೆ ನೀಡಿದಂತಾಗಲಿದೆ. ಈಗ ಬೆರಳೆಣಿಕೆ ಮಹಿಳಾ ಚಾಲಕಿಯರಷ್ಟೆ ಇದ್ದಾರೆ.‌ ರಾತ್ರಿ ಸಂದರ್ಭದಲ್ಲಿ‌ ಮಹಿಳೆಯರೇ ಚಾಲಕಿಯರಾದರೆ, ಮಹಿಳಾ ಪ್ರಯಾಣಿಕರು ಭಯವಿಲ್ಲದೇ ರಾತ್ರಿ ಕೂಡ ಧೈರ್ಯವಾಗಿ‌ ಸಂಚರಿಸಬಹುದು ಎಂಬ ಸಲಹೆ ವ್ಯಕ್ತವಾಯಿತು.
ನಿತ್ಯ ಬೆಂಗಳೂರಿನಲ್ಲಿ ಟ್ಯಾಕ್ಸಿಗಳು 3.5 ಲಕ್ಷ ಟ್ರಿಪ್ ಕಾರ್ಯಾಚರಣೆ ನಡೆಸುತ್ತಿವೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಸುರಕ್ಷತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಟ್ಯಾಕ್ಸಿ ಚಾಲಕರು ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಕ್ಯಾಬ್‌ಗಳು ಜನರ ಜೀವನದ ಭಾಗವಾಗಿ ಹೋಗಿದೆ. ಹೀಗಾಗಿ ಪ್ರಯಾಣಿಕರಿಗೆ ಸುರಕ್ಷತೆಯ ಸೇವೆ ನೀಡುವುದು ಅಗತ್ಯವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ‌ ಇಂಥ ಘಟನೆ ಮರುಕಳುಹಿಸದ ರೀತಿ ಕೆಲಸ ನಿರ್ವಹಿಸುವಂತೆ ಪರಮೇಶ್ವರ್ ಕ್ಯಾಬ್ ಮುಖ್ಯಸ್ಥರಿಗೆ ಪರಮೇಶ್ವರ್ ಸೂಚನೆ ನೀಡಿದರು.

ರಾತ್ರಿ ವೇಳೆ ಮಹಿಳೆ ಕ್ಯಾಬ್‌ ಬಳಸಬೇಕಿದ್ದರೆ ಆ ಕ್ಯಾಬ್ ಹಾಗೂ ಚಾಲಕರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು.
ಅಥವಾ ಇನ್‌ಫಾರ್ಮೆಷನ್ ಡೆಪಾಸಿಟ್ ಮಾಡುವ ರೀತಿಯಲ್ಲಿ ಅಪ್ಲಿಕೇಷನ್ ಸಿದ್ಧ ಮಾಡಿ ನಿಮ್ಮ ಆ್ಯಪ್‌ಗಳಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆಯೂ ವಿಸ್ಕೃತವಾಗಿ ಚರ್ಚೆ ನಡೆಯಿತು.