ಚುನಾವಣಾ ಕಾರ್ಯದಿಂದ ಬಳಲಿದ್ದ ದೇಹ ಮತ್ತು‌ ಮನಸ್ಸು ಸುಧಾರಿಸಿ ಉಲ್ಲಸಿತನಾಗಿದ್ದೇನೆ: ಸಿದ್ದು ಟ್ವೀಟ್

ಫೋಟೋ ಕೃಪೆ: ಟ್ವಿಟ್ಟರ್

ಬೆಂಗಳೂರು:ಉಜಿರೆಯ‌ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಆರೋಗ್ಯ ಸುಧಾರಣೆ ಮಾಡಿಕೊಂಡ ನಂತರ, ರಾಜಕೀಯದಲ್ಲಿ‌ ಇನ್ನಷ್ಟು ಕ್ರಿಯಾಶೀಲವಾಗಿ‌ ತೊಡಗಿಸಿಕೊಳ್ಳಲು‌ ದೇಹ ಮತ್ತು ಮನಸ್ಸು ಸಜ್ಜಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಉಜಿರೆ ಪ್ರಕೃತಿ ಚಿಕಿತ್ಸಾ ಕೇಂದ್ರ ಹನ್ನೆರಡು ದಿನ ನನ್ನ ಮನೆಯಾಗಿತ್ತು ಡಾ. ಪ್ರಶಾಂತ್ ಶೆಟ್ಟಿ ನೇತೃತ್ವದ ವೈದ್ಯರ ತಂಡ‌ ತಮ್ಮ ಕುಟುಂಬದ ಸದಸ್ಯನಂತೆ‌ ನನ್ನ ಪಾಲನೆ ಮಾಡಿದ್ದಾರೆ. ಅವರ ಸೇವಾ ಬದ್ಧತೆ ಮತ್ತು ತೋರಿಸಿದ್ದ ಕಾಳಜಿಗೆ ತುಂಬುಹೃದಯದ ಕೃತಜ್ಞತೆಗಳು.ಎಲ್ಲರಿಗೂ ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು‌ ಟ್ವೀಟಿಸಿದ್ದಾರೆ.

ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕಳೆದ ರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದೇನೆ. ಚುನಾವಣಾ ಕಾಲದ ಕಾರ್ಯದೊತ್ತಡದಿಂದ ಬಳಲಿದ್ದ ದೇಹ ಮತ್ತು‌ ಮನಸ್ಸು ಸುಧಾರಿಸಿ ಉಲ್ಲಸಿತನಾಗಿದ್ದೇನೆ ಎಂದು ತಮ್ಮ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

2018 ರ ಮೇ 31 ರವರೆಗಿನ ರೈತರ ಸಾಲಮನ್ನಾ:ಗ್ರೀನ್ ಸಿಗ್ನಲ್ ನೀಡಿದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಅನುಷ್ಠಾನ ಸಮಿತಿ

ಬೆಂಗಳೂರು:ರೈತರ ರಾಷ್ಟೀಕೃತ ಹಾಗು ಸಹಕಾರಿ ಬ್ಯಾಂಕ್ ಗಳಲ್ಲಿನ ಬೆಳೆ ಸಾಲ ಮನ್ನಾ ಬಗ್ಗೆ ಸಮ್ಮಿಶ್ರ ಸರ್ಕಾರದ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಒಪ್ಪಿಗೆ ನೀಡಿದ್ದು ಬಜೆಡ್ ನಲ್ಲಿ ಸಾಲಮನ್ನಾ ಘೋಷಣೆ ಖಚಿತವಾಗಿದೆ.

ರಾಜ್ಯ ಮುಂಗಡ ಬಜೆಟ್ ಹಿನ್ನಲೆಯಲ್ಲಿ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭೆ ನಡೆಯಿತು.‌ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಸಾಲಮನ್ನಾ ಸೇರಿದಂತೆ ಬಜೆಟ್ ನಲ್ಲಿ ಅಳವಡಿಸಬೇಕಾದ ಎರಡು ಪಕ್ಷಗಳ ಪ್ರಣಾಳಿಕೆ ಅಂಶಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೊಯ್ಲಿ,
ಮೂರನೇ ಬಾರಿಗೆ ಇವತ್ತು ಸಭೆ ನಡೆಸಲಾಗಿದೆ.ಇವತ್ತು ಕಾರ್ಯಕ್ರಮಗಳ ಕುರಿತು ಅಂತಿಮ ಸುತ್ತಿನ ಸಮಾಲೋಚನೆ ನಡೆಸಲಾಗಿದೆ.ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಹಾಗು ಜೆಡಿಎಸ್ ಪ್ರಣಾಳಿಯಕೆಯಲ್ಲಿ ಕಾರ್ಯಕ್ರಮಗಳನ್ನು ಸಮಾತೋಲನ ಮಾಡಿ ಚರ್ಚೆ ಮಾಡಲಾಗಿದೆ.2018 ರ ಮೇ 31, ವರೆಗಿನ ಸಾಲವನ್ನು ಮನ್ನಾ ಮಾಡುವ ಬಗ್ಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಸಾಲ ಮನ್ನಾ ವಿಷಯದಲ್ಲಾಗಲಿ, ಪಕ್ಷದ ಕಾರ್ಯಕ್ರಮ ವಿಷಯದಲ್ಲಾಗಲಿ ಇಬ್ಬರ ನಡುವೆ ಯಾವುದೇ ಸಂಘರ್ಷ ಇಲ್ಲ.ನಮ್ಮ ಕಾರ್ಯಕ್ರಮಗಳನ್ನು ಅವರು ಒಪ್ಪಿದ್ದಾರೆ.ಅವರ ಕಾರ್ಯಕ್ರಮಗಳನ್ನು ನಾವು ಒಪ್ಪಿದ್ದೇವೆ. ಇಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಸಮಿತಿ ವರದಿ ಅಂತಿಮ ಗೊಳಿಸಲಾಗಿದೆ.ಆ ವರದಿಯನ್ನು ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕೊಡ್ತೇವೆ ಎಂದರು.

ಹಣಕಾಸು ಹೊಂದಾಣಿಕೆ ಬಗ್ಗೆ ಸಿಎಂ ತೀರ್ಮಾನಕ್ಕೆ ಬಿಡಲಾಗಿದೆ. ಕಾಂಗ್ರೆಸ್- ಜೆಡಿಎಸ್ ಪ್ರಣಾಳಿಕೆಯನ್ನ ಸಮತೋಲನ ಮಾಡಲಾಗಿದೆ‌ ಐದು ವರ್ಷಕ್ಕೆ ಅನ್ವಯವಾಗುವಂತೆ ಎರಡು ಪ್ರಣಾಳಿಕೆಯ ಯೋಜನೆಗಳನ್ನ ಜಾರಿ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದರು.

ಸರ್ಕಾರ ಮುಂದುವರಿಸುವ ಅನಿವಾರ್ಯವಿದೆ: ಜಿ.ಟಿ. ದೇವೇಗೌಡ

ಬೆಳಗಾವಿ: ಸಮ್ಮಿಶ್ರ ಸರ್ಕಾರ ಉಳಿಸಿಕೊಂಡು ಹೋಗುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳೆರಡಕ್ಕೂ ಅನಿವಾರ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.‌

ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಬೀಳುವುದಕ್ಕೆ ಎರಡೂ ಪಕ್ಷಗಳ ನಾಯಕರು ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡಬೇಕು ಎನ್ನುವುದು ಬಿಜೆಪಿ ಕನವರಿಕೆ. ಇದಕ್ಕೆ ಅವಕಾಶ ಕೊಡಬಾರದೆಂದು ಕಾಂಗ್ರೆಸ್‌ನವರು ಸಮ್ಮಿಶ್ರ ಸರ್ಕಾರ ನಡೆಸಲು ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಹಾಗೂ ಜಾತ್ಯತೀತ ಶಕ್ತಿಗಳು ಒಂದಾಗಬೇಕೆಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಕಾಂಗ್ರೆಸ್‌ ಜೊತೆ ಮೈತ್ರಿಗೆ ಒಪ್ಪಿದ್ದಾರೆ. ಹೀಗಾಗಿ, ಸರ್ಕಾರ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.

ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ದ್ವೇಷವಿಲ್ಲ. ಇದ್ದಿದ್ದರೆ ಈ ಸರ್ಕಾರ ರಚನೆಯೇ ಆಗುತ್ತಿರಲಿಲ್ಲ. ದೇವೇಗೌಡರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಭೇಟಿಯಾಗಿ ಸಿದ್ದರಾಮಯ್ಯ ವಿರುದ್ಧ ದೂರಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬಜೆಟ್‌ ಮಂಡನೆಗೆ ತಯಾರಿ ನಡೆದಿದೆ. ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಘೋಷಿಸಿದ್ದ ಮಹತ್ವದ ಕಾರ್ಯಕ್ರಮಗಳನ್ನು ಮುಂದುವರಿಸುವ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಬಜೆಟ್‌ ಮಂಡನೆ ಹಾಗೂ ರೈತರ ಸಾಲ ಮನ್ನಾಕ್ಕೆ ಸಿದ್ದರಾಮಯ್ಯ ಒಪ್ಪಿದ್ದಾರೆ. ಅವರು ಎಲ್ಲಾದರೂ ತಕರಾರು ತೆಗೆದನ್ನು ನೋಡಿದ್ದೀರಾ? ಮಂತ್ರಿ ಸ್ಥಾನ ಸಿಗದವರು ಚರ್ಚೆ ಮಾಡುತ್ತಿದ್ದಾರಷ್ಟೆ’ ಎಂದು ಪ್ರತಿಕ್ರಿಯಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಬೇಕು. 7ನೇ ವೇತನ ಆಯೋಗದ ವರದಿ ಶಿಫಾರಸುಗಳ ಪ್ರಕಾರ ವೇತನ ಜಾರಿಗೊಳಿಸಬೇಕು. ಇದನ್ನು ಬಜೆಟ್‌ನಲ್ಲಿ ಪ್ರಕಟಿಸಬೇಕು‌ ಎಂದು ಮುಖ್ಯಮಂತ್ರಿಯನ್ನು ಕೋರಿದ್ದೇನೆ’ ಎಂದು ತಿಳಿಸಿದರು.

ವಿಟಿಯು ಸಂಸ್ಥಾಪನಾ ದಿನಾಚರಣೆಗೆ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಎಷ್ಟು ಖರ್ಚಾಗಿದೆ ಎನ್ನು ಮಾಹಿತಿ ಇಲ್ಲ. ಪರಿಶೀಲಿಸುತ್ತೇನೆ. ವಿಧಾನಮಂಡಲ ಅಧಿವೇಶನದ ನಂತರ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರ ಸಭೆ ನಡೆಸುವೆ. ದುಂದು ವೆಚ್ಚ ಮಾಡುವುದು ಸರಿಯಲ್ಲ. ಆ ಅಪಸ್ವರಕ್ಕೂ ಅವಕಾಶ ನೀಡಬಾರದು. ಕುಲಪತಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಬ್ರಿಟಿಷರ ಕಾಲದಲ್ಲಿದ್ದ ಸಂಸ್ಕೃತಿ ಬಿಡಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಆಡಿಟ್‌ ಸಮರ್ಪಕವಾಗಿರಬೇಕು. ಹಳ್ಳಿಯವರಿಗೂ ಉನ್ನತ ಶಿಕ್ಷಣ ದೊರೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಪರಿಷತ್ ವಿಪಕ್ಷ ನಾಯಕ, ಸಚೇತಕರ ನೇಮಕ!

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ ಹಾಗು ಮುಖ್ಯ ಸಚೇತಕರನ್ನಾಗಿ ಮಹಾಂತೇಶ್ ಕವಟಗಿ ಮಠ್ ಅವರನ್ನು ನೇಮಕ ಮಾಡುವ ನಿರ್ಧಾರವನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಕಾರ್ಯಕಾರಿಣಿ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಾರ್ಯಕಾರಿಣಿ ಸಭೆಯಲ್ಲಿ ಮುಖಂಡರ ಸಹಮತ ಪಡೆದು ಎರಡು ಸ್ಥಾನಕ್ಕೆ ನೇಮಕ ಮಾಡಲಾಯಿತು ಎಂದರು.

ಇದರೊಂದಿಗೆ ರಾಜಕೀಯ ದೊಂಬರಾಟ ಬಿಟ್ಟು ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಆಡಳಿತ ಆರಂಭಿಸಿ ಇಲ್ಲವೇ ಬಿಜೆಪಿ ಹೊರಾಟ ಎದುರಿಸಿ ಎನ್ನುವ ನಿರ್ಣಯ ಮತ್ತು ಕೇಂದ್ರ ಸರ್ಕಾರದ ಸಾಧನೆಯ ಸಾರ್ಥಕ ನಾಲ್ಕು ವರ್ಷಗಳಿಗೆ ರಾಜ್ಯ ಬಿಜಪಿ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಅಂಗೀಕಾರ ನೀಡಿತು ಎಂದರು.

ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ ಗೊಂದಲಕ್ಕೆ ತೆರೆ ಎಳೆದ ಸಿದ್ದರಾಮಯ್ಯ!

ಬೆಂಗಳೂರು:  ಇತ್ತೀಚೆಗೆ ಬಿಡುಗಡೆಯಾಗಿರುವ ವಿಡಿಯೋಗೂ ನನಗೂ ಸಂಬಂಧವಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಗೊಂದಲಗಳಿಗೂ ತೆರೆ ಎಳೆದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಯಾವುದೋ ಒಂದು ವಿಡಿಯೋ ಬಿಡುಗಡೆಯಾಗಿದೆ. ನಾನು  ಏನು ಹೇಳಿದ್ದೇನೆ. ಯಾವ ಸಂದರ್ಭಕ್ಕನುಗುಣವಾಗಿ (ಕಾನ್‍ಟೆಸ್ಟ್) ಹೇಳಿದ್ದೇನೆ ಎಂಬುದು ಯಾರಿಗೂ ಗೊತ್ತಿಲ್ಲ. ನಾನು ಮಾತನಾಡಿದ ಪೈಕಿ ಆಯ್ದ ಭಾಗಗಳನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಅದರ ಹಿಂದೆ-ಮುಂದೆ ಹೇಳಿರುವ ಮಾತುಗಳು ವಿಡಿಯೋದಲ್ಲಿ ಇಲ್ಲ ಇದರಲ್ಲಿ ಯಾವ ನೈತಿಕತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರೋ ಮಾಡಿದ ವಿಡಿಯೋಗೂ ನನಗೂ ಸಂಬಂಧವಿಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ. ಯಾವುದೇ ಅನುಮಾನ ಬೇಡ. ಈ ಸರ್ಕಾರದ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದೆ ಎಂದು ನಿಮಗೆ ಹೇಳಿದವರು ಯಾರು ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಸಮಿತಿಯ ಮುಖ್ಯಸ್ಥರಾದ ಎಂ.ವೀರಪ್ಪಮೊಯ್ಲಿ, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ನಾನು ಇಂದು ಚರ್ಚೆ ಮಾಡಿದ್ದೇವೆ. ಮಧ್ಯಾಹ್ನ ಜೆಡಿಎಸ್‍ನ ಸದಸ್ಯರೊಂದಿಗೆ ವೀರಪ್ಪಮೊಯ್ಲಿ ಅವರ ಸಮಿತಿ ಸಭೆ ನಡೆಸಲಿದೆ. ಭಾನುವಾರ ಸಮನ್ವಯ ಸಮಿತಿ ಸಭೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

37 ಪರ್ಸೆಂಟ್ ಬಜೆಟ್ ಮಂಡನೆ ನಂತರ ಮುಂದಿನ ಹೆಜ್ಜೆ: ಬಿಎಸ್ಬೈ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆ ನಂತರ ನಡೆಯಲಿರುವ ರಾಜಕೀಯ ವಿದ್ಯಮಾನಗಳ ಆಧಾರದಲ್ಲಿ ಮುಂದಿನ ಹೆಜ್ಜೆ ಇಡೋಣ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸಲಿದೆ ಎನ್ನುವ ಸುಳಿವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಇದು 37 ಪರ್ಸೆಂಟ್ ಬಜೆಟ್,ಮಿತ್ರಪಕ್ಷದ ಬೆಂಬಲವಿಲ್ಲದೇ ಸಿಎಂ ಬಜೆಟ್ ಮಂಡಿಸಹೊರಟಿದ್ದಾರೆ ಎಂದು ಟೀಕಿಸಿದರು.

ಅಧಿಕಾರಕ್ಕೆ ಬರುವ ವಾತಾವರಣವಿದ್ದರೂ ನಾವು ಎಡವಿದ್ದೇವೆ ಎನ್ನುವ ಬೇಸರವಿದೆ,ದೇಶದ ಇತಿಹಾಸದಲ್ಲಿ‌ ರಾಜ್ಯಪಾಲರು ನೀಡಿದ ಸಮಯ ಬಿಟ್ಟು 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ಮೊದಲು ಘಟನೆ ಎದುರಿಸಿದೆ.ಬಿಜೆಪಿಗೆ ಬರಲು ಬೇರೆ ಶಾಸಕರು ಸಿದ್ದವಿದ್ದರೂ ಸಮಯದ ಅಭಾವದಿಂದ ಸಾಧ್ಯವಾಗದೆ ಅಧಿಕಾರ ಬಿಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಯನ್ನು ಕೊಟ್ಟು ಜನರಿಗೆ ವಂಚನೆ,ನಂಬಿಕೆ ದ್ರೋಹ ಮಾಡಿದ್ದಾರೆ, ಅಧಿಕಾರಕ್ಕೆ ಬಂದರೂ‌ ಕೊಟ್ಟ ಭರವಸೆ ಈಡೇರಿಸುವ ಕಳಕಳಿ ಇಲ್ಲ.ಬೇಷರತ್ ಬೆಂಬಲ ಪಡೆದು ಷರಥತಿನ ಸಂಕೋಲೆಯಲ್ಲಿ ಸಿಲುಕಿ ಕೊಟ್ಟ ಮಾತು ತಪ್ಪಿದ್ದಾರೆ.ಈಗ ಅವರಲ್ಲೇ ಅಸಮಧಾನದ ಬುಗಿಲೆದ್ದಿದ್ದು ಸರ್ಕಾರ ಹೆಚ್ಚುದಿನವಿರಲ್ಲ,ನಾವು ಎಲ್ಲದಕ್ಕೂ ಸಿದ್ದರಾಗಿರಬೇಕು ಎಂದು ಕರೆ ನೀಡಿದರು.

ಮೋದಿ ಈಗಾಗಲೇ ಚುನಾವಣಾ ಕಹಳೆ ಮೊಳಗಿಸಿದ್ದು ಮತ್ತೊಮ್ಮೆ ಮೋದಿ‌ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು.ಲೋಕಸಭೆಯಲ್ಲಿ ಕನಿಷ್ಠ 25 ಸ್ಥಾನ ಗೆಲ್ಲುವ ಪಣ ತೊಟ್ಟು ಕೆಲಸ ಮಾಡಬೇಕು, ನಾಲ್ಕು ವರ್ಷದಲ್ಲಿ‌ ಮೋದಿ‌ ಸರ್ಕಾರದ ಸಾಧನೆ, ಯೋಜನೆ ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಸಲಹೆ ನೀಡಿದರು.