ವಿವಿಐಪಿ ಜೊತೆ ಮೊದಲ ಸೆಲ್ಫಿ ಕ್ಲಿಕ್ಕಿಸಿಕೊಂಡ ಕನಸುಗಾರ:ಆ ವಿವಿಐಪಿ ಯಾರು ಗೊತ್ತಾ?

ಫೋಟೋ ಕೃಪೆ :ಇನ್ಟ್ರಾಗ್ರಾಂ

ಬೆಂಗಳೂರು:ಪ್ರೇಮಲೋಕದ ಸರದಾರ ರವಿಚಂದ್ರನ್ ಜೊತೆ ಅದೆಷ್ಟು ಜನ ಸೆಲ್ಫಿ ತಗೊಂಡಿದಾರೋ ಲೆಕ್ಕಕ್ಕಿಲ್ಲ,ಆದ್ರೆ ಕೈ ಹಿಡಿದ ಸತಿ ಸುಮತಿ ಮಾತ್ರ ವರ್ಷಗಟ್ಟಲೇ ಕಾಯಬೇಕಾಯ್ತು ಒಂದು ಸೆಲ್ಫಿಗೆ.

ಹೌದು, ರವಿಚಂದ್ರನ್ ಸಿನಿಮಾವನ್ನೇ ಉಸಿರಾಗಿಸಿಕೊಂಡರೂ ಕ್ಯಾಮರಾವನ್ನೇ ಬದುಕಾಗಿಸಿಕೊಂಡರೂ ಎಂದೂ ಸೆಲ್ಫಿ ಗೀಳು ಹಚ್ಚಿಕೊಂಡವರಲ್ಲ,ಸಾವಿರಾರು ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ತೆಗೆದುಕೊಂಡಿದ್ದಾರೆ,ಆದ್ರೆ ರವಿಮಾಮ ಮಾತ್ರ ಯಾರೊಂದಿಗೂ ಯಾವ ಸೆಲೆಬ್ರಟಿಯೊಂದಿಗೂ ಸೆಲ್ಫಿ ತೆಗೆದುಕೊಳ್ಳಲು ಹೋಗಲಿಲ್ಲ.ಆದ್ರೆ ಅವರ ಜೀವನದ ಪ್ರಮುಖ ವ್ಯಕ್ತಿಗಾಗಿ ಕನಸುಗಾರ ಮೊದಲ ಬಾರಿ ಸೆಲ್ಫಿ ತೆಗೆದುಕೊಂಡಿದ್ದಾರೆ.

ಪತ್ನಿ ಸುಮತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ರವಿಮಾಮನ ಫೋಟೋ ಇದೀಗ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಇದೇ ಸುದ್ದಿಯಾಗಿದೆ.ಹಿರಿಯ ಪುತ್ರ ಮನೋರಂಜನ್ ಈ ಫೋಟೋವನ್ನು ತಮ್ಮ ಇನ್ಟ್ರಾಗ್ರಾಂ ಖಾತೆಯಲ್ಲಿ ಹಾಕಿಕೊಳ್ಳುವ ಮೂಲಕ ಅಮ್ಮನೊಂದಿಗೆ ಅಪ್ಪ ತೆಗೆದುಕೊಂಡ ಮೊದಲ ಸೆಲ್ಫಿ ಫೋಟೋವನ್ನು ಕ್ರೇಜಿ ಸ್ಟಾರ್ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಎಂದಿಗೂ ಸೆಲ್ಫಿ ತೆಗೆದುಕೊಳ್ಳದ ಅಪ್ಪ ಇಂದು ಮೊದಲ ಬಾರಿಗೆ ಅಮ್ಮನಿಗಾಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಮನೋರಂಜನ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ರವಿಚಂದ್ರನ್ ಹೊಸ ಚಿತ್ರ ಪೀಸ್ ಪೀಸ್:ಮಾಸ್ ರೌಡಿ ಗೆಟಪ್ ನಲ್ಲಿ ಕನಸುಗಾರ

ಬೆಂಗಳೂರು: ತಂದೆಯ ಗೆಟಪ್ ನೊಂದಿಗೆ ಕಳೆದು ಹೋದರು ಎನ್ನುವಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಮತ್ತೆ ನಾಯಕನಾಗಿ ಬಣ್ಣ ಹಚ್ಚಿರುವ ಕನ್ನಡದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ ಕೈಯಲ್ಲಿ ರೋಸ್ ಬದಲು ಲಾಂಗ್ ಹಿಡಿಯುತ್ತಿದ್ದಾರೆ.

ಹೌದು,ರವಿಚಂದ್ರನ್ ಅಂದ್ರೇನೆ ಹಾಗೆ ಕೈಯಲ್ಲಿ ರೋಸ್ ಇಲ್ಲವೇ ಗಿಟಾರ್ ಇರಬೇಕು, ಅವರ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಈ ದೃಶ್ಯ ಇದ್ದೇ ಇರುತ್ತೆ,ಲಾಂಗು ಮಚ್ಚಿನಿಂದ ದೂರವೇ ಇದ್ದ ಕಲಾವಿದ ಈಗ ಅದೇಕೋ ಮನಸ್ಸು ಬದಲಾಯಿಸಿದ್ದಾರೆ.ಕೈಯಲ್ಲಿ ಮಚ್ಚು ಹಿಡಿದು ಫೀಲ್ಡಿಗಿಳಿಯಲು ಮುಂದಾಗಿದ್ದಾರೆ.ಪಕ್ಕಾ ನೆಗಟಿವ್ ರೋಲ್ ನಲ್ಲಿ ಮಾಸ್ ರೌಡಿಸಂ ಸಬ್ಜೆಕ್ಟ್ ನಲ್ಲಿ ರಸಿಕನನ್ನು ನಾಯಕನಾಗಿ ನೋಡಬಹುದಾಗಿದೆಯಂತೆ.

ಅಷ್ಟಕ್ಕೂ ಇದೆಲ್ಲಾ ರವಿಮಾಮ ಹೊಸ‌ಚಿತ್ರ ಪೀಸ್ ಪೀಸ್ ಗಾಗಿ ಮಾಡ್ತಿದ್ದಾರೆ.ತಮಿಳು ನಿರ್ದೇಶಕ ಶಿವರಾಜ್ ನಿರ್ದೇಶನ ಚಿತ್ರದಲ್ಲಿ ಲಾಂಗ್ ಹಿಡಿಯುತ್ತಿದ್ದಾನೆ ರಣಧೀರ. 2004 ರಲ್ಲಿ ತಮಿಳಿನಲ್ಲಿ ನಿರ್ಮಾಣಗೊಂಡಿದ್ದ ಅಡಿತಡಿ ಎಂಬ ಸಿನಿಮಾವನ್ನು 14 ವರ್ಷದ ನಂತರ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು ಮುನಿರತ್ನಂ ನಿರ್ಮಾಣ ಮಾಡುತ್ತಿದ್ದು,ಸಾಹಿತ್ಯ ಸಂಗೀತದ ಹೊಣೆಯನ್ನು ರವಿಚಂದ್ರನ್ ವಹಿಸಿಕೊಂಡಿದ್ದಾರೆ.

ಪೀಸ್ ಪೀಸ್ ಸಿನಿಮಾದಲ್ಲಿ ಏಕಾಂಗಿಗೆ ನಾಯಕಿಯಾಗಿ ಅಪೂರ್ವ ಎರಡನೇ ಬಾರಿ ಜೋಡಿಯಾಗುತ್ತಿದ್ದು, ಮುನಿಜನಪದ, ಶೋಭರಾಜ್, ತೆಲುಗಿನ ಸಂಪತ್ ರಾಜ್ ಚಿತ್ರದಲ್ಲಿ ನಟಿಸಲಿದ್ದಾರೆ.

ಸಧ್ಯ ಪೀಸ್ ಪೀಸ್’ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸ ನಡೆಯುತ್ತಿದ್ದು, ರವಿಚಂದ್ರನ್ ಅವರ ಮನೆಯಲ್ಲೇ ಹಾಡುಗಳ ಧ್ವನಿ ಮುದ್ರಣ ಪೂಜಾ ಕಾರ್ಯಕ್ರಮ ನೆರವೇರಿದೆ. ಆಗಸ್ಟ್ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಚಿತ್ರತಂಡದಿಂದ ಸಿಕ್ಕಿದೆ.

ಬಿಬಿಎಂಪಿ ಐದು ಭಾಗ,ಮೇಯರ್ ಆಯ್ಕೆ ಜನರ ಕೈಗೆ: ತಜ್ಞರ ಸಮಿತಿ ಶಿಫಾರಸ್ಸು

ಫೋಟೋ ಕೃಪೆ :ಟ್ವಿಟ್ಟರ್

ಬೆಂಗಳೂರು:ಬಿಬಿಎಂಪಿಯನ್ನು ಐದು ಕಾರ್ಪೋರೇಷನ್ ಗಳಾಗಿ ವಿಭಜಿಸಬೇಕು ಹಾಗೂ ಬೆಂಗಳೂರಿನ ಸಮಗ್ರತೆ ಕಾಪಾಡಲು ಗ್ರೇಟರ್ ಬೆಂಗಳೂರು ಕಾರ್ಪೋರೇಷನ್ ಅಡಿಯಲ್ಲಿ ತರಬೇಕು ಎಂದು ಬಿಬಿಎಂಪಿ ಪುನರ್ ವಿಂಗಡಣಾ ತಜ್ಞರ ಸಮಿತಿ ಇಂದು ಸರ್ಕಾರಕ್ಕೆ ವರದಿ ಸಲ್ಲಿಸಿತು.

ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಸ್.ಪಾಟೀಲ್,ಸಿದ್ದಯ್ಯ,ರವೀಶ್ಚಂದ್ರ ನೇತೃತ್ವದ ತಜ್ಞರ ಸಮಿತಿ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಸಂಬಂಧ ಅಂತಿಮ ವರದಿ ಸಲ್ಲಿಕೆ ಮಾಡಿದೆ.

ಗ್ರೇಟರ್ ಕಾರ್ಪೋರೇಷನ್-ನಗರಪಾಲಿಕೆ-ಕಾರ್ಪೋರೇಟರ್ ನೇತೃತ್ವದ ವಾರ್ಡ್ ಸಮಿತಿಯನ್ನು ಒಳಗೊಂಡ ತ್ರಿ ಟೈರ್ ವ್ಯವಸ್ಥೆಯನ್ನು ಜಾರಿಗೊಳಿಸಲು ತಜ್ಞರ ಸಮಿತಿ ಶಿಫಾರಸ್ಸು ಮಾಡಿದ್ದು,ಬೆಂಗಳೂರು ಆಡಳಿತಕ್ಕೆ ಪ್ರತ್ಯೇಕವಾದ ಕಾಯ್ದೆ ರೂಪಿಸಬೇಕು ಜತೆಗೆ ಕಂದಾಯ ಸಂಗ್ರಹ ವಿಷಯದಲ್ಲೂ ಬದಲಾವಣೆ ಅಗತ್ಯ.5-6 ಸಾವಿರ ಕೋಟಿ ಕಂದಾಯ ಸಂಗ್ರಹದ ಸಾಮರ್ಥ್ಯ ಹೊಂದಿರುವ ಬಿಬಿಎಂಪಿಯಲ್ಲಿಯಲ್ಲಿ ಶೇ.40ರಷ್ಟೂ ಕಂದಾಯ ಸಂಗ್ರಹವಾಗುತ್ತಿಲ್ಲ.ಹಳೆ ನಗರ ಪ್ರದೇಶದಲ್ಲಿ 30000 ಜನಸಂಖ್ಯೆಗೆ ಅನುಗುಣವಾಗಿ
ವಾರ್ಡ್ ಪುನರ್ ವಿಂಗಡಣೆ ಮಾಡಿ 400 ವಾರ್ಡ್ ರಚನೆಗೂ ಸಮಿತಿ ಶಿಫಾರಸ್ಸು ಮಾಡಿದೆ.

ಬಿಬಿಎಂಪಿ ಅಧಿಕಾರಿಗಳ ನೇಮಕಾತಿ ವಿಷಯದಲ್ಲೂ ಸುಧಾರಣಾ ಕ್ರಮಗಳನ್ನು ಶಿಫಾರಸ್ಸು ಮಾಡಿದೆ.

  • ಪೌರ ಕಾರ್ಮಿಕ ಹುದ್ದೆ ಬಿಟ್ಟು ಉಳಿದೆಲ್ಲಾ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಕಡ್ಡಾಯ.
  • ಇಲಾಖಾ ನೇರ ನೇಮಕಾತಿ ಬದಲು ಹೊರಗುತ್ತಿಗೆ ಸಂಸ್ಥೆ ಗಳ ಮೂಲಕ ನೇಮಕಾತಿ ಮಾಡಿಕೊಳ್ಳಬೇಕು.
  • ಹೊಸದಾಗಿ ನೇಮಕಗೊಂಡವರಿಗೆ ಆರು ತಿಂಗಳ ಒಳಗಾಗಿ ಆಡಳಿತ ತರಬೇತಿ ನೀಡಬೇಕು.
  • ಪ್ರತಿಯಿಂದು ಸ್ಥರಕ್ಕೂ ನಿಗದಿತ ವಿದ್ಯಾರ್ಹತೆ ಕಡ್ಡಾಯ.

ಗ್ರೇಟರ್ ಬೆಂಗಳೂರು ಅಥಾರಿಟಿಗೆ ನೇರವಾಗಿ ಜನರಿಂದಲೇ ಮೇಯರ್ ಆಯ್ಕೆ ಮಾಡುವ ಅಧಿಕಾರ ಹಾಗೂ ಮೇಯರ್ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿ ಮಾಡುವಂತೆಯೂ ತಜ್ಞರ ಸಮಿತಿ ಸಲಹೆ ನೀಡಿದೆ.

ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಎಚ್ಡಿಕೆ, ಬಿಬಿಎಂಪಿ ಪುನರ್ ವಿಂಗಡಣಾ ಸಮಿತಿ ಇಂದು ಅಂತಿಮ‌ ವರದಿ ಸಲ್ಲಿಸಿದೆ.ವರದಿಯನ್ನು ಪೂರ್ಣ ಅಧ್ಯಯನ ಮಾಡಿದ ಬಳಿಕ ಬಿಬಿಎಂಪಿ ವಿಭಜನೆ ಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು.

ತುಂಗಾ ಜಲಾಶಯ ಭರ್ತಿ: 50 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ

ಶಿವಮೊಗ್ಗ: ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು 19 ಕ್ರೆಸ್ಟ್‌ಗೇಟ್‌ ತೆರೆದು 50 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

ಜಲಾಶಯದ ಗರಿಷ್ಠ ಮಟ್ಟ 588.24 ಅಡಿ (ಸಮುದ್ರಮಟ್ಟದಿಂದ) ತಲುಪಿದ್ದು ಜಲಾಶಯದಲ್ಲಿ 3.24 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಕಳೆದೊಂದು ವಾರದ ಹಿಂದೆಯೇ ಜಲಾಶಯ ಪೂರ್ಣಗೊಂಡಿದ್ದು ಒಳಹರಿವಿನ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿತ್ತು.ಆದರೆ ಇಂದು ವ್ಯಾಪಕ ಮಳೆಯ ಕಾರಣ ಜಲಾಶಯದ ಒಳಹರಿವು 50 ಸಾವಿರ ಕ್ಯೂಸೆಕ್ ದಾಟಿದ ಪರಿಣಾಮ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿದ್ದು ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಳುಗಡೆಯಾದ ಮಂಡಗದ್ದೆ:

ಪ್ರತಿಬಾರಿಯಂತೆ ಈ ಬಾರಿಯೂ ಸಂತಾನಾಭಿವೃದ್ಧಿಗಾಗಿ ದೇಶ,ವಿದೇಶದಿಂದ ವಲಸೆ ಬಂದಿದ್ದ ಬಾನಾಡಿಗಳಿಗೆ ಸಂಕಷ್ಟ ಎದುರಾಗಿದೆ.ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟ ತಲುಪಿದ್ದು ಮಂಡಗದ್ದೆ ಪಕ್ಷಿಧಾಮ ನೀರಿನಲ್ಲಿ ಮುಳುಗಡೆಯಾಗಿದೆ.ನೂರಾರು ಪಕ್ಷಿ ಗೂಡುಗಳು ನೀರಿನಲ್ಲಿ ಕೊಚ್ಚಿಹೋಗುವ ಭೀತಿಗೆ ಸಿಲುಕಿವೆ,ಸಾಕಷ್ಟು ಗೂಡುಗಳಲ್ಲಿ ಪಕ್ಷಿಗಳು ಮೊಟ್ಟೆಗಳನ್ನಿಟ್ಟಿದ್ದು ಮೊಟ್ಟೆಗಳು ನೀರುಪಾಲಾಗುವ ಆತಂಕ ಎದುರಿಸುತ್ತಿವೆ.

ಲಘು ವಿಮಾನ ಅಪಘಾತ ಐದು ಮಂದಿ ದುರ್ಮರಣ!

ಮುಂಬೈ: ಇಲ್ಲಿನ ಘಾಟ್ಕೋಪರ್ ನಲ್ಲಿ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿ, ಇಬ್ಬರು ಪೈಲಟ್ ಗಳು ಮತ್ತು ಇಬ್ಬರು ಎಂಜಿನಿಯರ್ ಗಳು ಸಾವನ್ನಪ್ಪಿದ್ದಾರೆ. ಜನದಟ್ಟಣೆ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೊಳಗಾದ ಕಾರಣ ಒಬ್ಬ ಸ್ಥಳೀಯ ವ್ಯಕ್ತಿಯೂ ಕೂಡ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶಕ್ಕೆ ಸೇರಿದ ವಿಮಾನ ಇದಾಗಿದ್ದು ಅಪಘಾತವಾದೊಡನೆಯೇ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಘಟನೆ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್  ಪೈಲಟ್
ತನ್ನ ಸಮಯ ಪ್ರಜ್ಞೆಯಿಂದ  ಅನೇಕ ಜೀವಗಳನ್ನು ಉಳಿಸಿದ್ದಾನೆ ಎಂದು ಹೇಳಿದ್ದಾರೆ.

ಕಾರಹುಣ್ಣಿಮೆ ಆಚರಣೆ ವೇಳೆ ಶಾಸಕ ಜಾಧವ್ ಕಾಲ ಮೇಲೆ ಹರಿದ ಎತ್ತಿನ ಬಂಡಿ: ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಗೆ ರವಾನೆ

ಕಲಬುರಗಿ:ಕಾರ ಹುಣ್ಣಿಮೆ ಆಚರಣೆ ವೇಳೆ ಕಾಲ ಮೇಲೆ ಎತ್ತಿನ ಬಂಡಿ ಹರಿದ ಪರಿಣಾಮ ಶಾಸಕ ಡಾ.ಉಮೇಶ್ ಜಾಧವ್ ಗಾಯಗೊಂಡಿದ್ದು‌ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್ ಗೆ ಕರೆದೊಯ್ಯಲಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ಆಚರಣೆಗಳಲ್ಲಿ ಒಂದಾದ ಕಾರಹುಣ್ಣಿಮೆ ಅಂಗವಾಗಿ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ನಡೆಸಲಾಯಿತು. ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ ಉಮೇಶ್ ಜಾಧವ್ ಸ್ಪರ್ಧೆಗೆ ಚಾಲನೆ ನೀಡಿದರು. ಈ ವೇಳೆ ಏಕಾ ಏಕಿ ನುಗ್ಗಿದ ಎತ್ತಿನ ಬಂಡಿ ಶಾಸಕ ಉಮೇಶ್ ಜಾಧವ್ ಸೇರಿದಂತೆ ಹಲವರ ಕಾಲು ಮೇಲಿಂದ ಹರಿದು ಹೋಯಿತು. ಪರಿಣಾಮ ಶಾಸಕ ಡಾ ಉಮೇಶ್ ಜಾಧವ್ ಕಾಲಿಗೆ ಗಾಯವಾಗಿದ್ದು ಮತ್ತಿಬ್ರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಾಸಕ ಡಾ ಉಮೇಶ್ ಜಾಧವ್ ರನ್ನು ಹೈದರಾಬಾದ್ ಗೆ ಕಳುಹಿಸಲಾಯಿತು. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.