ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಮರು ನೇಮಕ!

ಫೋಟೋ ಕೃಪೆ:ಟ್ವಿಟ್ಟರ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರನ್ನು ಮರು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಿಬಿಎಂಪಿ ಹಾಲಿ ಕಮಿಷನರ್ ಮಹೇಶ್ವರ್ ರಾವ್ ರನ್ನು ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿರುವ ಸರ್ಕಾರ ಬಿಬಿಎಂಪಿ‌ ಕಮಿಷನರ್ ಆಗಿ ಮಂಜುನಾಥ್ ಪ್ರಸಾದ್ ಮರು ನೇಮಕ ಮಾಡಿದೆ.

ಕಾಂಗ್ರೆಸ್ ಶಾಸಕರು,ಬಿಬಿಎಂಪಿ ಕಾರ್ಪೊರೇಟರ್ ಗಳ ಒತ್ತಡಕ್ಕೆ ಮಣಿದಿದ್ದ ಹಿಂದಿನ ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮಂಜುನಾಥ್ ಪ್ರಸಾದ್ ರನ್ನು ದಿಡೀರ್ ಎತ್ತಂಗಡಿ ಮಾಡಿತ್ತು.ಅಲ್ಲದೆ ಯಾವುದೇ ಸ್ಥಳ ನಿಯೋಜನೆಗೊಳಿಸದೆ ಎತ್ತಂಗಡಿ ಮಾಡಿತ್ತು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ:ಸಂಪುಟದಿಂದ ಗ್ರೀನ್ ಸಿಗ್ನಲ್

ಫೋಟೋ ಕೃಪೆ:ಟ್ವಿಟ್ಟರ್

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದ ಕರಡು ಪ್ರತಿಗೆ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ.

ಸೋಮವಾದಿಂದ ನಡೆಯಲಿರುವ ಜಂಟಿ ಅಧಿವೇಶನಕ್ಕೆ ಮುನ್ನ ಕೆಲ ನಿರ್ಧಾರ ಕೈಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಚಿವ ಸಂಪುಟ ಸಭೆ ನಡೆಸಿದ್ರು.ಬಜೆಟ್ ಮಂಡನೆ,ಹೊಸ ಸರ್ಕಾರದ ಮೊದಲ ಅಧಿವೇಶನ ಎದುರಿಸುವುದು ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ರು.ಬಹು ಮುಖ್ಯವಾಗಿ ಸಾಲಮನ್ನಾ ಚರ್ಚೆಗೆ ಬಂದ್ರೂ ಯಾವ ನಿರ್ಧಾರವನ್ನೂ ಕೈಗೊಳ್ಳದೆ ಸಂಪುಟ ಸಭೆ ಮುಗಿಸಲಾಯ್ತು.

ಸಂಪುಟ ಕೈಗೊಂಡ ನಿರ್ಧಾರಗಳು:

  • ಜುಲೈ 2 ರಂದು ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡಲಿರುವ ಭಷಣದ ಕರಡು ಪ್ರತಿಗೆ ಒಪ್ಪಿಗೆ
  • ಹಣಕಾಸು ವರದಿ ಅನುಷ್ಠಾನಕ್ಕೆ ಒಪ್ಪಿರುವ ವರದಿ ಅನುಷ್ಠಾನ.
  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅವಧಿ ವಿಸ್ತರಣೆಗೆ 30 ರೊಳಗೆ ಕೇಂದ್ರದ ಉತ್ತರ ಬರದಿದ್ದರೆ ನೂತನ ಸಿಎಸ್ ನೇಮಕ
  • ಜಿಲ್ಲಾ ಪಂಚಾಯ್ತಿ ಪಿಡಬ್ಲ್ಯೂಡಿ ಅಭಿವೃದ್ದಿ ಕೆಲಸಗಳನ್ನ ರಾಜ್ಯ ಸರ್ಕಾರದಿಂದಲೇ ಅನುಷ್ಠಾನ.
  • ನಾಲ್ಕನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗೆ ಶೇ. 40 ರಷ್ಟು ಅನುಧಾನ ನೀಡಿ ಅನುಷ್ಠಾನಗೊಳಿಸುವ ಕುರಿತು ತೀರ್ಮಾನ.

 

ಮಾಜಿ ಸಚಿವ ಈಶ್ವರ ಖಂಡ್ರೆ ವಿರುದ್ಧ ಚುನಾವಣಾ ತಕರಾರು ಅರ್ಜಿ ಸಲ್ಲಿಕೆ

ಫೋಟೋ ಕೃಪೆ:ಟ್ವಿಟ್ಟರ್

ಕಲಬುರಗಿ:ಮಾಜಿ ಸಚಿವ ಹಾಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಕೆ ಸಿದ್ರಾಮ ಕಲಬುರಗಿ ಹೈ ಕೋರ್ಟ್ ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಮಾಜಿ ಸಚಿವ ಈಶ್ವರ ಖಂಡ್ರೆ ಚುನಾವಣೆಯಲ್ಲಿ ಅಕ್ರಮ ಎಸಗಿ ಗೆಲವು ಸಾಧಿಸಿದ್ದಾರೆ ಎಂದು ಆರೋಪ ಮಾಡಿರುವ ಅರ್ಜಿದಾರರು ಈಶ್ವರ ಖಂಡ್ರೆ ವಿರುದ್ಧ 1951 ರ ಪ್ರಜಾ ಪ್ರತಿನಿಧಿ ಕಾಯ್ದೆ ಅಡಿ ಕ್ರಮ ಕೈ ಗೊಳ್ಳುಲು ಮನವಿ ಮಾಡಿದ್ದಾರೆ.

ಆರು ನೂರು ಪುಟಗಳ ತಕರಾರು ಅರ್ಜಿಯನ್ನು ಹೈ ಕೋರ್ಟ್ ನಲ್ಲಿ ಸಲ್ಲಿಕೆ ಮಾಡಿದ್ದು ಚುನಾವಣೆಯ ಅಫಿಡವಿಟ್ ಪ್ರತಿ ಜೊತೆಗೆ ಹಣ ಹಂಚಿಕೆ ಸೇರಿ ಹಲವು ಅಕ್ರಮ ಎಸಗಿದ್ದಾರೆ,ಚುನಾವಣೆ ವೇಳೆ ಸಚಿವರಾಗಿ ಅಧಿಕಾರದಲ್ಲಿ ಇದ್ದ ಹಿನ್ನಲೆಯಲ್ಲಿ ಅಕ್ರಮ ಎಸಗಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎನ್ನುವ ಆರೋಪಗಳನ್ನು ಅರ್ಜಿದಾರರು ಮಾಡಿದ್ದಾರೆ.

ಮಲೆನಾಡಲ್ಲಿ ವರುಣನ ಆರ್ಭಟ: ತೀರ್ಥಹಳ್ಳಿ ಶಾಲಾ ಕಾಲೇಜುಗಳಿಗೆ ರಜೆ

ಶಿವಮೊಗ್ಗ: ಮಲೆನಾಡ ಹೆಬ್ಬಸಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕಳೆದ ರಾತ್ರಿಯಿಂದ ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಆಗುಂಬೆ ಘಾಟಿಯ ಒಂದು ತಿರುವಿನಲ್ಲಿ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರಕ್ಕೆ ಕೆಲ ಕಾಲ ಅಡಚಣೆಯಾಗಿದ್ದು ತೆರವು ಕಾರ್ಯಾಚರಣೆ ನಡೆಸಿ ಸಂಚಾರಕ್ಕೆ ಅನುವು ಮಾಡಲಾಗಿದೆ.

ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಘಟಕವಿರುವ ಲಿಂಗನಮಕ್ಕಿ ಜಲಾಶಯಕ್ಕೆ 36,360 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷಿ ಕ್ಷೇತ್ರದ ಬೆನ್ನೆಲುಬಾಗಿರುವ ಭದ್ರಾ ಜಲಾಶಯಕ್ಕೆ 7,737 ಕ್ಯೂಸೆಕ್ ಹಾಗೂ ತುಂಗಾ ಜಲಾಶಯಕ್ಕೆ 36,360 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಲಿಂಗನಮಕ್ಕಿ ಹಾಗು ಭದ್ರಾ ಜಲಾಶಯದಿಂದ ಕಾಲುವೆಗಳ ಮೂಲಕ ನೀರು ಹರಿಸುತ್ತಿದ್ದು ತುಂಗಾ ಜಲಾಶಯದಿಂದ ಮಾತ್ರ ಒಳ ಹರಿವಿನಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜೀವನ ಶೈಲಿ, ಆಹಾರ ಪದ್ಧತಿ ಬದಲಾಯಿಸಿಕೊಂಡು ಉತ್ತಮ ಆರೋಗ್ಯವಂತರಾಗಿ: ವೆಂಕಯ್ಯ ನಾಯ್ಡು

ಬೆಂಗಳೂರು: ಹಳೆ ಕಾಲದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಜನರು ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದರು.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ಕನ್ನಡದಲೇ ಮಾತು ಆರಂಭಿಸಿದರು. ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕ್ಯಾನ್ಸರ್ ಜಾಗೃತಿ ಕಾರ್ಯ ಹೆಚ್ಚಾಗಬೇಕು. ಮೊದಲ ಹಂತದಲ್ಲಿ ಕ್ಯಾನ್ಸರ್ ರೋಗವಿರೋದು ಗೊತ್ತಾದ್ರೆ ಸಮರ್ಪಕ ಚಿಕಿತ್ಸೆ ಪಡೆದು ಕ್ಯಾನ್ಸರ್ ಗುಣಪಡಿಸಿಕೊಳ್ಳ ಬಹುದಾಗಿದೆ ಎಂದು ಹೇಳಿದರು.

ಜನರ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾವಣೆಯಾಗಬೇಕಿದೆ. ಜಂಕ್ ಫುಡ್, ಫಿಜ್ಜಾ ಬರ್ಗರ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುವವರ ಸಂಖ್ಯೆ ಕಡಿಮೆಯಾಗಿದೆ. ಕೆಲಸದ ಬ್ಯುಸಿ ನಡುವೆ ದಿನನಿತ್ಯ‌ ವ್ಯಾಯಾಮ ಮಾಡದೆ ದೇಹದ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದ ಜೊತೆ ನಾಲ್ಕು ದಶಕಗಳಿಂದ ನಂಟು ಹೊಂದಿದ್ದೇನೆ. ಅದ್ಭುತವಾದ, ಆರೋಗ್ಯಕರ ಅಡುಗೆ ಸಿಗುತ್ತದೆ. ಮುದ್ದೆ ನಾಟಿ ಕೋಳಿ ಸಾರು ರುಚಿಯಾಗಿರುತ್ತೆ ಎಂದರು.

ಮೈತ್ರಿ ಸರ್ಕಾರದ ಭವಿಷ್ಯ ಕುರಿತ ಸಿದ್ದು ಮಾತನ್ನು ಸಮರ್ಥಿಸಿಕೊಳ್ಳ ಬೇಡಿ: ಸಚಿವರಿಗೆ ಪರಂ ತಾಕೀತು

ಬೆಂಗಳೂರು: ಮೈತ್ರಿ ಸರ್ಕಾರದ ಭವಿಷ್ಯ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಆಡಿರುವ ಮಾತುಗಳನ್ನು ಸಮರ್ಥಿಸಿಕೊಳ್ಳದಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಚಿವರಿಗೆ ಸೂಚನೆ ನೀಡಿದ್ದಾರೆ.

ಮೈತ್ರಿ ಸರ್ಕಾರದ ಭವಿಷ್ಯ ಕುರಿತು ಮಾಜಿ ಸಿಎಂ ಮಾತನಾಡಿರುವ ವಿಡಿಯೋ ಬಹಿರಂಗ ಮತ್ತು ನಿನ್ನೆ ಸಿದ್ಧರಾಮಯ್ಯ ಜೊತೆ ಸಚಿವರು ಸಭೆ ನಡೆಸಿರುವ ಬೆನ್ನಲ್ಲೇ ಇಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಚಿವರ ಸಭೆ ನಡೆಸಿದರು. ಸಭೆಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಪುಟ್ಟರಂಗ ಶೆಟ್ಟಿ, ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ಶಿವಾನಂದ್ ಪಾಟೀಲ್, ಶಂಕರ್, ರಾಜಶೇಖರ ಪಾಟೀಲ್ ಹುಮ್ನಾಬಾದ್, ವೆಂಕಟ ರಮಣಪ್ಪ, ಜಯಮಾಲ, ರಮೇಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಶಿವಶಂಕರ್ ರೆಡ್ಡಿ, ಕೆ ಜೆ ಜಾರ್ಜ್ ಸೇರಿದಂತೆ ಒಟ್ಟು ಹದಿನಾರು ಜನ ಕಾಂಗ್ರೆಸ್ ಸಚಿವರು ಭಾಗಿಯಾಗಿದ್ದರು.

ಶಾಂತಿವನದಲ್ಲಿ ಕೂತು ಸಿದ್ದರಾಮಯ್ಯ ಮಾತನಾಡಿದ್ದು ಹಾಗೂ ಬಜೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಸೇರಿದಂತೆ ಕಳೆದ ಒಂದು ವಾರದಿಂದ ಕಾಂಗ್ರೆಸ್ ನಾಯಕರು ಕೊಟ್ಟ ಹೇಳಿಕೆಗಳನ್ನ ಪರಮೇಶ್ವರ್ ಸಚಿವರ ಗಮನಕ್ಕೆ ತಂದು, ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ನಮಗೂ ಅನಿವಾರ್ಯವಿದೆ. ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರದ ದೃಷ್ಟಿಯಿಂದ ಈ ಮೈತ್ರಿ ಮಾಡಿಕೊಂಡಿದ್ದು ಹೀಗಾಗಿ ಜೆಡಿಎಸ್ ಗಿಂತ ಈ ಮೈತ್ರಿ ಕಾಂಗ್ರೆಸ್ ಗೆ ಅನಿವಾರ್ಯವಾಗಿದೆ. ಅತ್ತ ಬಿಜೆಪಿ ನಾಯಕರು ಕಾದು ಕೂತಿದ್ದಾರೆ. ಆದ್ರೂ, ನಮ್ಮ ನಾಯಕರು ಈ ರೀತಿ ಹೇಳಿಕೆ ಕೊಡುವುದನ್ನ ಬಿಡುತ್ತಿಲ್ಲ ಎಂದಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಧಿವೇಶನ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ. ಹೀಗಾಗಿ ನಾವು ಒಟ್ಟಾಗಿ ಇರಬೇಕು. ಯಾರು ಸಹ ಸಿದ್ದರಾಮಯ್ಯರ ಹೇಳಿಕೆ ಸಮರ್ಥಿಸಿಕೊಳ್ಳ ಬೇಡಿ ಎಂದು ಸಭೆಯಲ್ಲಿ ಪರಮೇಶ್ವರ್ ಸಚಿವರಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಆದಷ್ಟು ಮಾಧ್ಯಮಗಳ ಜೊತೆ ಅಂತರ ಕಾಯ್ದುಕೊಳ್ಳಿ. ರಾಜಕೀಯದ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ. ಇಲಾಖಾವಾರು ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ, ಸಿದ್ದರಾಮಯ್ಯನವರು ನಮ್ಮ ನಾಯಕರು. ಅವರಿಗೆ ನಾವೆಲ್ಲರೂ ಗೌರವಕೊಡಬೇಕು. ಅವರನ್ನ ನಾನೂ ಭೇಟಿ ಮಾಡಿ ಮಾತನಾಡಿದ್ದೇನೆ, ಹಾಗೇ ನೀವು ಹೋಗಿದ್ದೀರಿ ಅದರಲ್ಲಿ ತಪ್ಪೇನಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ವ್ಯಾಪ್ತಿಯ ಶಾಸಕರ ಜೊತೆ ಸಂಬಂಧ ಸುಧಾರಿಸಿಕೊಳ್ಳಿ. ಕ್ಷೇತ್ರದ ಸಮಸ್ಯೆಗಳಿದ್ದರೆ ಅದನ್ನ ಬಗೆಹರಿಸಿಕೊಡಿ ಎಂದು ಪರಮೇಶ್ವರ್ ಸಚಿವರಿಗೆ ಸಲಹೆ ನೀಡಿದ್ದಾರೆ.