ಅತಿ ಹೆಚ್ಚು ಮಾತೃಭಾಷಿಕರನ್ನು ಹೊಂದಿದ ಭಾಷೆಗಳಲ್ಲಿ ಕನ್ನಡಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ನವದೆಹಲಿ: ಅತಿ ಹೆಚ್ಚು ಮಾತೃ ಭಾಷಿಕರನ್ನು ಹೊಂದಿದ ಭಾಷೆಗಳ ಪಟ್ಟಿಯಲ್ಲಿ ಹಿಂದಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು ಕನ್ನಡಕ್ಕೆ 8 ನೇ ಸ್ಥಾನ ಲಭಿಸಿದೆ.ವಿಶೇಷವೆಂದರೆ ಕನ್ನಡ ಮಾತೃಭಾಷಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಅಂಕಿ ಅಂಶ ಬಹಿರಂಗಗೊಂಡಿದೆ.

2011ರ ಜನಗಣತಿಯನ್ನು ಆಧರಿಸಿ ಮಾತೃಭಾಷಿಕರ ಅಂಕಿ-ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದು, ಮೊದಲ ಸ್ಥಾನ ಪಡೆದ ಮಾತೃಭಾಷೆ ಎಂಬ ಖ್ಯಾತಿಗೆ ಹಿಂದಿ ಪಾತ್ರವಾಗಿದ್ದು,ಬಂಗಾಳಿ ಹಾಗೂ ಮರಾಠಿ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿವೆ. ಕನ್ನಡ ಕಣ್ಮರೆಯಾಗುತ್ತಿದೆ ಎನ್ನುವ ಕೂಗಿನ ನಡುವೆಯೂ ಕನ್ನಡಕ್ಕೆ 8ನೇ ಸ್ಥಾನ ಸಿಕ್ಕಿದೆ.ವಿಶೇಷವೆಂದರೆ ಕನ್ನಡವನ್ನು ಮಾತೃಭಾಷೆ ಎಂದು 2011ರ ಜನಗಣತಿಯಲ್ಲಿ ನಮೂದಿಸಿದವರ ಪ್ರಮಾಣ ದೇಶದ ಒಟ್ಟಾರೆ ವಿವಿಧ ಭಾಷಿಕರ ಶೇಕಡಾವಾರು ಅಂಕಿ-ಸಂಖ್ಯೆಗಳನ್ನು ಗಮನಿಸಿದಾಗ ಶೇ.3.69ರಿಂದ (2001ರ ಗಣತಿ ಪ್ರಕಾರ) ಶೇ.3.73ಕ್ಕೇರಿದೆ.

ಕನ್ನಡವನ್ನು ಪ್ರಥಮ ಭಾಷೆ ಎಂದು 2011ರಲ್ಲಿ 4.37 ಕೋಟಿ ಜನರು ಜನಗಣತಿ ವೇಳೆ ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಪ್ರಮಾಣ 2001ರಲ್ಲಿ 3.79 ಕೋಟಿ ಇತ್ತು. ಹೀಗಾಗಿ ಕನ್ನಡ ಮಾತೃಭಾಷಿಕರ ಸಂಖ್ಯೆ ಸುಮಾರು 58 ಲಕ್ಷದಷ್ಟುಹೆಚ್ಚಳವಾಗಿದೆ. ಹಾಗಂತ ಉಳಿದ ಸುಮಾರು 2 ಕೋಟಿ ಕರ್ನಾಟಕದ ಜನರಿಗೆ ಕನ್ನಡ ಗೊತ್ತೇ ಇಲ್ಲ ಎಂದರ್ಥವಲ್ಲ. ಅವರು ಕನ್ನಡವನ್ನು ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಕನ್ನಡವನ್ನು ಮಾತೃಭಾಷೆ ಎಂದು ಪರಿಗಣಿಸಿಲ್ಲ. 2001ರಲ್ಲಿ ಕರ್ನಾಟಕದ ಜನಸಂಖ್ಯೆ 5.28 ಕೋಟಿ ಇದ್ದರೆ 2011ರಲ್ಲಿ 6.10 ಕೋಟಿ ಇತ್ತು.

ದೇಶದ 22 ಅನುಸೂಚಿತ ಅಧಿಕೃತ ಭಾಷೆಗಳಲ್ಲಿ ಹಿಂದಿ ಮೊದಲ ಸ್ಥಾನ ಗಳಿಸಿದೆ. ದೇಶದಲ್ಲಿ 2001ರಲ್ಲಿ ಶೇ.41.03 ಜನರು ಹಿಂದಿ ಮಾತನಾಡುತ್ತಿದ್ದರು. ಅವರ ಪ್ರಮಾಣ ಈಗ ಶೇ.43.63ಕ್ಕೇರಿದೆ. ಇನ್ನು ಬಂಗಾಳಿ 2ನೇ ಸ್ಥಾನ ಪಡೆದಿದೆಯಾದರೂ ಅದರ ಪ್ರಮಾಣ ಶೇ.8.11ರಿಂದ ಶೇ.8.3ಕ್ಕೆ ಕುಸಿದಿದೆ.ತೆಲುಗುವನ್ನು 4ನೇ ಸ್ಥಾನಕ್ಕೆ ತಳ್ಳಿ ಮರಾಠಿ ಈ ಸಲ 3ನೇ ಸ್ಥಾನ ಸಂಪಾದಿಸಿದೆ. ಮರಾಠಿ ಭಾಷಿಕರ ಸಂಖ್ಯೆ 2001ರಲ್ಲಿ ಶೇ.6.99 ಇತ್ತು. ಅದರ ಪ್ರಮಾಣ 2001ರಲ್ಲಿ ಶೇ.7.09ಕ್ಕೇರಿದೆ. ತೆಲುಗು ಭಾಷಿಕರ ಸಂಖ್ಯೆ 10 ವರ್ಷದಲ್ಲಿ ಶೇ.7.19ರಿಂದ ಶೇ.6.93ಕ್ಕಿಳಿದಿದೆ. ಉರ್ದು 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಉರ್ದು ಭಾಷಿಕರ ಸಂಖ್ಯೆ ಶೇ.5.01ರಿಂದ ಶೇ.4.19ಕ್ಕಿಳಿದಿದೆ. ಶೇ.4.74 ಮಾತೃಭಾಷಿಕರನ್ನು ಹೊಂದಿರುವ ಗುಜರಾತಿ 6ನೇ ಸ್ಥಾನಕ್ಕೇರಿದೆ.

ಸಂಸ್ಕೃತವನ್ನು ಕೇವಲ 24,821 ಜನರು ಮಾತೃಭಾಷೆ ಎಂದು ಆಯ್ಕೆ ಮಾಡಿಕೊಂಡಿದ್ದು, ದೇಶದಲ್ಲೇ ಅತಿ ಕಡಿಮೆ ಮಾತನಾಡಲ್ಪಡುವ ಭಾಷೆಯಾಗಿದೆ. ಇದು ಬೋಡೋ, ಮಣಿಪುರಿ, ಕೊಂಕಣಿ ಹಾಗೂ ಡೋಗ್ರಿ ಭಾಷೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಮಾತನಾಡಲ್ಪಡುತ್ತದೆ.22 ಅನುಸೂಚಿತ ಅಧಿಕೃತ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಶೇ.97ರಷ್ಟಿದ್ದು, ಉಳಿದ ಶೇ.3 ಜನರು ಮಾತ್ರ ಅನುಸೂಚಿತವಲ್ಲದ ಭಾಷೆಗಳನ್ನು ಮಾತನಾಡುತ್ತಾರೆ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ.

ಸಿಎಸ್ ಸೇವಾವಧಿ ವಿಸ್ತರಣೆ ಬೇಡ: ಕೇಂದ್ರಕ್ಕೆ ಮತ್ತೊಂದು ಪತ್ರ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವೆ ವಿಸ್ತರಿಸುವಂತೆ ಕೇಂದ್ರಕ್ಕೆ ಮಾಡಿದ ಮನವಿಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಈ ತಿಂಗಳ ಅಂತ್ಯಕ್ಕೆ ರತ್ನಪ್ರಭಾರ ಅಧಿಕಾರ ಅವಧಿ ಮುಗಿಯಲಿದೆ.

ಸಿಎಸ್ ರತ್ನಪ್ರಭಾ ಅಧಿಕಾರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದ್ದು ಮೂರು ತಿಂಗಳ ಕಾಲ ಅವರ ಅಧಿಕಾರಾವಧಿ ವಿಸ್ತರಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇದೀಗ ಮತ್ತೊಂದು ಪತ್ರ ಬರೆದು ಜೂನ್ 30 ಕ್ಕೆ ರತ್ನಪ್ರಭಾ ಅವರ ಸೇವಾವಧಿ ಮುಗಿಯಲಿ ಇದರಲ್ಲಿ‌ ಯಾವುದೇ ಬದಲಾವಣೆ ಬೇಡ ಎಂದು ತಿಳಿಸಿದ್ದಾರೆ.

ಸಿದ್ಧರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆಯೇ ಸಮ್ಮಿಶ್ರ ಸರ್ಕಾರದ ಮೇಲೆ ಅವರು ಮುನಿಸಿಕೊಳ್ಳಲು ಪ್ರಮುಖ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಅಧಿಕಾರಿಗೆ ಕೋಕ್ ನೀಡಲಾಗುತ್ತಿದೆ. ಈಗಾಗಲೇ ರತ್ನಪ್ರಭಾ ಅವರ ಅಧಿಕಾರ ಅವಧಿ ಮುಗಿದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರು ತಿಂಗಳು ವಿಸ್ತರಣೆಯಾಗಿತ್ತು. ಅವಧಿ ಮುಕ್ತಾಯಗೊಳ್ಳುತ್ತಿದ್ದ ಕಾರಣ ಮತ್ತೆ 3 ತಿಂಗಳ ಕಾಲ ಸೇವಾವಧಿ ವಿಸ್ತರಣೆಗೆ ಇತ್ತೀಚೆಗಷ್ಟೇ ಕುಮಾರಸ್ವಾಮಿ ಪತ್ರ ಬರೆದಿದ್ದರು.

ಸಿದ್ಧರಾಮಯ್ಯ ಅಧಿಕಾರಾವಧಿಯಲ್ಲೇ ನೇಮಕಗೊಂಡಿದ್ದ ರತ್ನಪ್ರಭಾಗೆ ಕೊಕ್ ನೀಡಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಬಜೆಟ್ ಗೂ ಮುನ್ನ ಮೈತ್ರಿ ಪಕ್ಷಗಳ ಸರಣಿ ಸಭೆ: ಸಾಲಮನ್ನಾಗೆ ಸಮನ್ವಯ ಸಮಿತಿ ನೀಡುತ್ತಾ ಗ್ರೀನ್ ಸಿಗ್ನಲ್?

ಬೆಂಗಳೂರು:ಜುಲೈ 5 ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬಜೆಟ್ ಗೂ ಮುನ್ನವೇ ಮೈತ್ರಿ ಪಕ್ಷಗಳ ಸರಣಿ ಸಭೆ ನಡೆಯಲಿವೆ, ಬಜೆಟ್ ನಲ್ಲಿ ಏನಿರಬೇಕು ಎನ್ನುವ ಕುರಿತು ವಿಸ್ತೃತ ಚರ್ಚ ನಡೆಯಲಿದ್ದು,ಸಾಲಮನ್ನಾಗೆ ಒಪ್ಪಿಗೆ ಸಿಗುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಜೂನ್ 29 ರಂದು ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಕಾಮನ್ ಮಿನಿಮಮ್ ಕಮಿಟಿ ಸಭೆ ನಡೆಯಲಿದೆ.ನಂತರ ಕಮಿಟಿಯು ಜೂನ್ 30 ರಂದು ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಸಭೆಯಲ್ಲಿ ಸಾಮಾನ್ಯ ಕಾರ್ಯಕ್ರಮಗಳ ಕುರಿತ ವರದಿ ಸಲ್ಲಿಕೆ ಮಾಡಲಿದೆ.ಸಿದ್ದು ನೇತೃತ್ವದ ಸಮನ್ವಯ ಸಮಿತಿಗೆ ವರದಿ ಶಿಫಾರಸು ಮಾಡಲಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ಮೊಯ್ಲಿ‌ ವರದಿ ಕುರಿತ ಚರ್ಚೆ ನಡೆಯಲಿದೆ.

ಯಾವ ಕಾರ್ಯಕ್ರಮಗಳನ್ನ ಬಜೆಟ್ ನಲ್ಲಿ ಸೇರಿಸಬೇಕು ಯಾವ ಕಾರ್ಯಕ್ರಮ ಬಜೆಟ್ ನಲ್ಲಿ ಸೇರಿಸುವುದು ಬೇಡ ಎನ್ನುವುದು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ.ರೈತರ ಸಾಲಮನ್ನಾ ಘೋಷಣೆಗೂ ಸಿದ್ದು ನೇತೃತ್ವದ ಕಮಿಟಿಯಿಂದ ಒಪ್ಪಿಗೆ ಸಿಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಜಂಟಿ ಅಧಿವೇಶನಕ್ಕೆ ಹಾಜರಾಗಿ: ಶಾಸಕರಿಗೆ ಸಮನ್ಸ್ ಜಾರಿ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಚೊಚ್ಚಲ ಬಜೆಟ್ ಮಂಡಿಸಲು ಪೂರಕವಾಗಿ ಜುಲೈ 2 ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಭಾಗವಹಿಸುವಂತೆ ಎಲ್ಲ ಶಾಸಕರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.

ಸ್ಪೀಕರ್ ಕೆ ಆರ್ ರಮೇಶ ಕುಮಾರ್ ಸೂಚನೆ ಮೇರೆಗೆ ವಿಧಾನಸಭೆ ಕಾರ್ಯದರ್ಶಿ ಎಸ್ ಮೂರ್ತಿ ಸಮನ್ಸ್ ಜಾರಿಗೊಳಿಸಿದ್ದು,ಜುಲೈ 2 ರಂದು ಮಧ್ಯಾಹ್ನ 12.30ಕ್ಕೆ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಜಂಟಿ ಅಧಿವೇಶನ ಆರಂಭವಾಗಲಿದೆ,ರಾಜ್ಯಪಾಲ ವಜುಭಾಯ್ ವಾಲಾ ಭಾಷಣ ಮಾಡಲಿದ್ದು ಎಲ್ಲಾ ಶಾಸಕರು ಹಾಜರಿರುವಂತೆ ಸೂಚನೆ ನೀಡಲಾಗಿದೆ.

15ನೇ ವಿಧಾನಸಭೆಯ ಮುಂದುವರೆದ ಅಧಿವೇಶನ ಇದಾಗಿದ್ದು, ಜುಲೈ 5 ರಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ.

ಮೋದಿಗೆ ಹೆಚ್ಚಿದ ಬೆದರಿಕೆ: ರೋಡ್ ಶೋ ಸ್ಥಗಿತಗೊಳಿಸಲು ಎಸ್ಪಿಜಿ ಸಲಹೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಾರ್ವಕಾಲಿಕ ಉನ್ನತ ಬೆದರಿಕೆ ಇರುವ ಹಿನ್ನೆಲೆಯಲ್ಲಿ
ಗೃಹ ಸಚಿವಾಲಯ ರಾಜ್ಯಗಳಿಗೆ ಹೊಸ ಭದ್ರತಾ ಮಾರ್ಗಸೂಚಿಯನ್ನು ಹೊರಡಿಸಿದೆ‌. ಸಚಿವರು ಮತ್ತು ಅಧಿಕಾರಿಗಳು ಸಹ ಪ್ರಧಾನಮಂತ್ರಿಗೆ ತುಂಬಾ ಹತ್ತಿರ ಬರದಂತೆ ಎಚ್ಚರವಹಿಸಲು ಎಸ್‌ಪಿಜಿಗೆ ಸೂಚನೆ ನೀಡಲಾಗಿದೆ.

ಪ್ರಧಾನಮಂತ್ರಿಗಳಿಗೆ ಸಾರ್ವಕಾಲಿಕವಾಗಿ ಹೆಚ್ಚಿನ ಬೆದರಿಕೆ ಇದ್ದು 2019 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮೋದಿಯವರೆ ಅತ್ಯಮೂಲ್ಯ ವ್ಯಕ್ತಿಯಾಗಿದ್ದಾರೆ. ವಿಶೇಷ ಭದ್ರತೆಯ ಹೊರತು ಸಚಿವರು ಮತ್ತು ಅಧಿಕಾರಿಗಳು ಕೂಡ ಪ್ರಧಾನ ಮಂತ್ರಿಗೆ ಹತ್ತಿರ ಬರಲು ಅನುಮತಿ ನೀಡಬಾರದು ಎಂದು ಗೃಹ ಸಚಿವಾಲಯ ಹೇಳಿದೆ.

2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರೋಡ್ ಶೋ ಗಳನ್ನು ಕಡಿತಗೊಳಿಸುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದು, ರೋಡ್ ಶೋಗಳಿಗೆ ಬದಲಾಗಿ ಸಾರ್ವಜನಿಕ ಸಭೆಗಳನ್ನು ನಡೆಸಿದರೆ ಭದ್ರತೆ ಒದಗಿಸುವುದು ಸುಲಭವಾಗುತ್ತದೆ ಎಂದು ಗೃಹ ಸಚಿವಾಲಯ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮಾವೋವಾದಿಗಳು ಪ್ರಧಾನಮಂತ್ರಿಗಳ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿದ್ದ ಪತ್ರವನ್ನು ದೆಹಲಿಯ ಮನೆಯೊಂದರಲ್ಲಿ ವಶಪಡಿಸಿಕೊಂಡಿದ್ದರು.
ಪ್ರಧಾನಿ ಮೋದಿಯವರನ್ನು ರಾಜೀವ್ ಗಾಂಧಿ ಹತ್ಯೆ ರೀತಿಯ ಹತ್ಯೆ ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿತ್ತು.

ಅಲ್ಲದೆ, ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿಗಳ ಪಾದಗಳನ್ನು ಸ್ಪರ್ಶಿಸಲು ವ್ಯಕ್ತಿಯೊಬ್ಬ ಆರು ಭದ್ರತಾ ಹಂತಗಳ ಮುರಿದು ಬಂದಿದ್ದ.

ಈ ಎರಡು ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ಮತ್ತು ನಿರ್ದೇಶಕ ಗುಪ್ತಚರ ಬ್ಯೂರೋ ರಾಜೀವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಆ ಸಭೆಯಲ್ಲಿ, ಪ್ರಧಾನ ಮಂತ್ರಿಯ ಭದ್ರತಾ ವ್ಯವಸ್ಥೆಗಳನ್ನು ಸೂಕ್ತವಾಗಿ ಬಲಪಡಿಸಲು ಇತರ ಏಜೆನ್ಸಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಗೃಹ ಸಚಿವರು ನಿರ್ದೇಶಿಸಿದ್ದರು.

ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದಂತಹ ಮಾವೊವಾದಿ ರಾಜ್ಯಗಳಿಗೆ
ಪ್ರಧಾನಿ ಮಂತ್ರಿಗಳು ತಮ್ಮ ರಾಜ್ಯಗಳಿಗೆ ಭೇಟಿ ನೀಡಿದಾಗ ಹೆಚ್ಚಿನ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದು ಗೃಹ ಸಚಿವಾಲಯ ಸೂಚನೆ ನೀಡಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸಖ್ಯ ಬೇಕೋ,ಸಿದ್ದರಾಮಯ್ಯ ಬೇಕೋ ನಿರ್ಧರಿಸಿಕೊಳ್ಳಿ: ಕೈಗೆ ಗೌಡರ ಷರತ್ತು

ನವದೆಹಲಿ:ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ಅವಧಿ ಬಗ್ಗೆ ಹಾಗು ಕುಮಾರಸ್ವಾಮಿ ಬಜೆಟ್ ಮಂಡಿಸುವ ಕುರಿತು ನಕಾರಾತ್ಮಕ ಹೇಳಿಕೆ ನೀಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಗರಂ ಆಗಿದ್ದಾರೆ.

ಲೋಕಸಭೆಯಲ್ಲಿ ನಿಮಗೆ ಜೆಡಿಎಸ್ ಸಖ್ಯ ಬೇಕೋ ಸಿದ್ದು ಬೇಕೋ ಎನ್ನುವ ಆಯ್ಕೆಯನ್ನು ನೀವೇ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಂದೇಶ ನೀಡುವ ಮೂಲಕ ಸರ್ಕಾರ ರಕ್ಷಣೆಗೆ ಹೊಸ ತಂತ್ರಗಾರಿಕೆಯನ್ನು ಸದ್ದಿಲ್ಲದೆ ದೇವೇಗೌಡರು ಹೆಣೆಯುತ್ತಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್‍ಗೆ ನೇರವಾಗಿಯೇ ದೂರು ನೀಡಿ ಷರತ್ತುಗಳನ್ನು ವಿಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೇನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ದೇವೇಗೌಡರು ಪ್ರಮುಖವಾಗಿ ಲೋಕಸಭಾ ಚುನಾವಣಾ ವಿಷಯವನ್ನೇ ಪ್ರಸ್ತಾಪಿಸಿದ್ದಾರೆ.ಸಿದ್ದರಾಮಯ್ಯ ಬೇಕೋ? ಲೋಕಸಭೆ ಚುನಾವಣೆ ಬೇಕೋ? ಈ ಆಯ್ಕೆ ನೀವೇ ಮಾಡಿಕೊಳ್ಳಬೇಕು,ಸಮನ್ವಯ ಸಮಿತಿ ಪ್ರಮುಖ ವಿಚಾರಗಳ ಚರ್ಚೆಗೆ ಮಾತ್ರ ಸೀಮಿತವಾಗಿ ಉಳಿದ ವಿಚಾರಗಳನ್ನು ಸಿಎಂ, ಡಿಸಿಎಂ ನಿರ್ಧರಿಸಬೇಕು. ಹೈಕಮಾಂಡ್ ಮಟ್ಟದಲ್ಲಿ ಮಾತ್ರ ನಮ್ಮ ಒಪ್ಪಂದ, ಅದರ ಜಾರಿ ನಿಮ್ಮ ಕರ್ತವ್ಯ ಎನ್ನುವ ಸಂದೇಶವನ್ನು ನೀಡುವ ಮೂಲಕ‌ಹೊಸ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.

ಈ ಸಂಬಂಧ ನವದೆಹಲಿಯಲ್ಲಿ ಮಾತನಾಡಿದ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಜುಲೈ 5 ರಂದು ಬಜೆಟ್ ಮಂಡಿಸುವುದು ಶತಃಸಿದ್ದ,ಊಹಾಪೋಹಗಳನ್ನೆಲ್ಲಾ ಬಿಡಿ,ಯಾವ ಆತಂಕವೂ ಇಲ್ಲದೆ ಬಜೆಟ್ ಮಂಡನೆಯಾಗಲಿದೆ,ಅಂಗೀಕಾರವೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಜೆಟ್ ಕುರಿತು ಸಿದ್ದರಾಮಯ್ಯ ಹೇಳಿಕೆ ಪ್ರಸ್ತಾಪ ಮಾಡುತ್ತಿದ್ದಂತೆ ಸಿಡಿಮಿಡಿಗೊಂಡ ಗೌಡರು ಇನ್ನೊಬ್ಬರಿಗೆ ಹೆಸರು ಹೇಳಬೇಡಿ ಎಂದರು.ಇದು ಸಿದ್ದರಾಮಯ್ಯ ವಿರುದ್ಧ ಇರುವ ಅಸಮಧಾನವನ್ನು ಸ್ಪಷ್ಟಪಡಿಸಿದಂತಿತ್ತು.ಇದು ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದು ವಿರುದ್ಧ ಗೌಡರು ದೂರು ನೀಡಿದ್ದಾರೆ ಎನ್ನುವುದಕ್ಕೆ ನಿದರ್ಶನ ಎನ್ನುವ ಮಾತುಗಳು ಜೆಡಿಎಸ್ ಪಾಳಯದಲ್ಲಿ ಕೇಳಿಬರುತ್ತಿವೆ.