ಕಾವೇರಿ ವಿವಾದ: ಜೂನ್ 30 ಕ್ಕೆ ಸರ್ವಪಕ್ಷ ಸಭೆ ಕರೆದ ಸಿಎಂ

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಹಿನ್ನಲೆಯಲ್ಲಿ ಕಾವೇರಿ ವಿವಾದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 30 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ವಿರೋಧಪಕ್ಷದ ನಾಯಕರು, ಸಂಸದರು, ಕಾವೇರಿ ಜಲಾನಯನ ಪ್ರದೇಶದ ಶಾಸಕರು ಭಾಗಿಯಾಗಲಿದ್ದು,
ರಾಜ್ಯಕ್ಕೆ ಆಗಿರುವ ಅನ್ಯಾಯ, ಮುಂದಿನ ನಡೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ.

ರಾಜ್ಯದ ಮನವಿ ಹೊರತಾಗಿಯೂ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಪ್ರತಿನಿಧಿಗಳನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದು,ರಾಜ್ಯವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ,ಹೀಗಾಗಿ ರಾಜ್ಯದ ಮುಂದಿರುವ ಆಯ್ಕೆಗಳ ಕುರಿತು ಚರ್ಚೆ ನಡೆಯಲಿದೆ.

ಪೊಲೀಸರಿಂದ ಫೈರಿಂಗ್: ರೌಡಿಶೀಟರ್ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮೇಲೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರವಿ‌ ಕುಮಾರ್(29) ಆಲಿಯಾಸ್ ಸೈಕಲ್ ರವಿ ಗುಂಡೇಟು ತಿಂದು ಬಂಧನಕ್ಕೊಳಗಾಗಿರುವ ರೌಡಿಶೀಟರ್. ಗಾಯಗೊಂಡಿರುವ ಆರೋಪಿಯನ್ನು ಆರ್.ಆರ್.ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮಮೂರ್ತಿ ನಗರ, ಸಿದ್ದಾಪುರ,ಬನಶಂಕರಿ ಸೇರಿದಂತೆ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ರವಿ ಮೇಲೆ ವಿವಿಧ ಅಪರಾಧ ಪ್ರಕರಣ ದಾಖಲಾಗಿವೆ.

ಆರೋಪಿಯ ಬಂಧನಕ್ಕೆ ವ್ಯೂಹ ರಚಿಸಿದ ಸಿಸಿಬಿ ಪೊಲೀಸರು ಇಂದು ಮಧ್ಯಾಹ್ನ ಉತ್ತರಹಳ್ಳಿಯ ನೈಸ್ ರಸ್ತೆ ಬಳಿ ರವಿ ಕಾರಿನಲ್ಲಿ ಬರುತ್ತಿರುವ ಮಾಹಿತಿ ಮೇರೆಗೆ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಅನಿರಿಕ್ಷೀತ ದಾಳಿಯಿಂದ ಪೊಲೀಸರನ್ನು ಕಂಡ ಆರೋಪಿ ಪರಾರಿಯಾಗಿದ್ದಾನೆ. ಈತನನ್ನು ಬೆನ್ನಟ್ಟಿದ ಪೊಲೀಸರು ನೈಸ್ ರಸ್ತೆ ಬಳಿ ಆರೋಪಿಯ ಕಾರಿಗೆ ಅಡ್ಡ ಹಾಕಿದ್ದಾರೆ. ಭೀತಿಯಿಂದ ಆರೋಪಿಯು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ತನ್ನ ಬಳಿಯಿದ್ದ ಪಿಸ್ತೂಲ್ ನಿಂದ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ಅಪಾಯದಿಂದ ಪಾರಾಗಿದ್ದು,
ಪರಾರಿಯಾಗುತ್ತಿದ್ದ ರೌಡಿಶೀಟರ್ ಗೆ ಶರಣಾಗುವಂತೆ ಸೂಚಿಸಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಳಿಕ ಆತ್ಮರಕ್ಷಣೆಗಾಗಿ ರಿವಾಲ್ವರ್ ನಿಂದ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಯುಜಿಸಿ ರದ್ದು:ಉನ್ನತ ಶಿಕ್ಷಣ ಖಾಸಗೀಕರಣ ಮಾಡಲು ಹೊರಟಿದೆಯಾ ಮೋದಿ ಸರ್ಕಾರ?

ಫೋಟೋ ಕೃಪೆ ಟ್ವಿಟ್ಟರ್

ನವದೆಹಲಿ:ಹಲವು ಏಕಪಕ್ಷೀಯ ನಿರ್ಧಾರಗಳ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ರದ್ದುಗೊಳಿಸಿ ಅದರ ಹೊಣೆಗಾರಿಕೆಯನ್ನು ಉನ್ನತ ಶಿಕ್ಷಣ ಆಯೋಗಕ್ಕೆ ವಹಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಈ ಸಂಬಂಧ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಕರಡು ಪ್ರತಿ ಸಿದ್ಧ ಪಡಿಸಿದ್ದು, ದೇಶದಲ್ಲಿ ಅಸ್ಥಿತ್ವದಲ್ಲಿದ್ದ ಯುಜಿಸಿಯನ್ನು ವಿಸರ್ಜಿಸಲು ಮುಂದಾಗಿದೆ. ಜುಲೈ 7ರಂದು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಕರಡು ಪ್ರತಿಯನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಭಾರತದಲ್ಲಿ ಹೊಸ ಸಂಸ್ಥೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ಕೊಡಬಲ್ಲದು ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.ಶಿಕ್ಷಣದಲ್ಲಿ ವಿದೇಶೀ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ ಈ ನಿರ್ಧಾರವನ್ನು ಪ್ರಕಟಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿದೆ. ಈಗಾಗಲೇ ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ವಿನಿಯೋಗಿಸುತ್ತಿರುವ ಹಣದ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು, ಕೇಂದ್ರದ ಈ ನಿರ್ಧಾರದ ವಿರುದ್ಧವೂ ವಿಪಕ್ಷಗಳು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿ ಪ್ರತಿಭಟನೆ ಹಾದಿ ತುಳಿಯುವ ಸುಳಿವು ನೀಡಿವೆ.

ಶಾಂತಿವನದಲ್ಲಿ ಕಾಂಗ್ರೆಸ್ ನಾಯಕರ ಸಭೆ!

ಬೆಂಗಳೂರು :  ಸಮ್ಮಿಶ್ರ  ಸರ್ಕಾರದ ಭವಿಷ್ಯದ ಬಗ್ಗೆ  ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದ್ದ ವಿಡಿಯೋ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇಂದು ಉಜಿರೆಯ ಶಾಂತಿ ವನದ ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಪ್ರಮುಖರ ಸಭೆ ನಡೆಸುತ್ತಿದ್ದಾರೆ.

ಸಚಿವರಾದ ರಮೇಶ್ ಜಾರಕಿಹೊಳಿ, ಶಿವಾನಂದ ಪಾಟೀಲ್‌, ಶಾಸಕರಾದ ನಾಗೇಂದ್ರ, ಮಹೇಶ್‌ ಕಮಟಳ್ಳಿ, ಬಸವನಗೌಡ ದದ್ದಲ್‌, ಪ್ರತಾಪ್‌ ಗೌಡ ಪಾಟೀಲ್‌, ಶ್ರೀಮಂತ ಪಾಟೀಲ್‌, ಬಿ.ನಾರಾಯಣ ರಾವ್‌, ಸಂಸದ ಬಿ.ವಿ.ನಾಯಕ್‌, ಮಾಜಿ ಸಚಿವ ಆಂಜನೇಯ, ವಿಧಾನ ಪರಿಷತ್‌ ಸದಸ್ಯ ಧರ್ಮಸೇನಾ, ಐವಾನ್‌ ಡಿ ಸೋಜ ಅವರು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ಸಿದ್ದರಾಮಯ್ಯನವರು ನಮ್ಮ ನಾಯಕರು, ರಾಜಕೀಯದ ಬಗ್ಗೆ ನಮ್ಮ ಭೇಟಿಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ನಮ್ಮ ನಾಯಕರ ಆರೋಗ್ಯ ವಿಚಾರಿಸಲು ಬಂದಿದ್ದೆವು ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರದ ಕುರಿತು ತಾವು ಮಾತನಾಡಿದ ವಿಡಿಯೋ ಬಹಿರಂಗವಾದ ಹಿನ್ನೆಲೆ ಮಾಜಿ ಸಿಎಂ ಸಿದ್ಧರಾಮಯ್ಯ ಸಿಟ್ಟಿನಿಂದ ಕುದಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಜೊತೆ ಮಾತಾಡುವಾಗಲೇ ರಹಸ್ಯವಾಗಿ ತಮ್ಮ ಆಪ್ತರೇ ವಿಡಿಯೋ ಮಾಡಿ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಆ ಇಬ್ಬರ ಮೇಲೆ ಕೆಂಡದಂಥ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಹುಷಾರ್: ಕೇಂದ್ರಕ್ಕೆ ನಂಜಾವಧೂತ ಶ್ರೀಗಳ ಎಚ್ಚರಿಕೆ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಏನಾದರೂ ತೊಂದರೆಕೊಟ್ಟರೆ ಸುಮ್ಮನಿರಲ್ಲ ಸರ್ಕಾರದ ಮೇಲೆ ಗದಾಪ್ರಹಾರ ಮಾಡಿದರೆ ಸಮುದಾಯ ತಿರುಗಿಬೀಳಲಿದೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಲ ತೋರಿಸಬೇಕಾಗುತ್ತದೆ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಹುಷಾರ್ ಎಂದು ಪ್ರಧಾನಿ ಮತ್ತು ಬಿಜೆಪಿ ನಾಯಕರಿಗೆ ನಂಜಾವಧೂತ ಶ್ರೀ ಎಚ್ಚರಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ನಂಜಾವಧೂತ ಶ್ರೀಗಳು,ಕುಮಾರಸ್ವಾಮಿ ಐದು ವರ್ಷ ಆಡಳಿತ ನಡೆಸುತ್ತಾರೆ ಅವರು ಐದು ವರ್ಷ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಚಿವ ಡಿಕೆ ಶುವಕುಮಾರ್ ಅವರದ್ದು, ನಮ್ಮ ಇಡೀ ಸಮುದಾಯ ಡಿಕೆಶಿಗೆ ಬಲನೀಡಬೇಕಿದೆ ಎರಡು ಮಹಾನ್ ದೃವಗಳು ಒಟ್ಟಾಗಿವೆ,ದೃವಗಳ ಕ್ರೋಡೀಕರಣದ ಫಲವಾಗಿ ಹೆಚ್ ಡಿಕೆ ಸಿಎಂ ಆಗಿದ್ದಾರೆ ಹೆಚ್ ಡಿಕೆ ಸಿಎಂ ಆಗಲು ಕಾರಣ ಡಿ.ಕೆ.ಶಿವಕುಮಾರ್,ಹಾಗಾಗಿ ಹೆಚ್ಡಿಕೆ ಸರ್ಕಾರ ಉರುಳಿಸದಂತೆ ಡಿಕೆಶಿಗೆ ಎಚ್ಚರಿಸಿದರು.

ನಮ್ಮ ಮೆಟ್ರೋಗೆ ಕೆಂಪೇಗೌಡರ ಹೆಸರಿಡಬೇಕು, ಅಹ್ಮದಾಬಾದ್ ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಮಿಸುತ್ತಿದ್ದಾರೆ
ಅದೇ ರೀತಿ ಕೆಂಪೇಗೌಡರ ಟವರ್ ಬೆಂಗಳೂರಿನಲ್ಲಾಗಬೇಕು
ಇದು ನಮ್ಮ ಸಮುದಾಯದ ಬೇಡಿಕೆ ಎಂದು ಸಿಎಂ ಕುಮಾರಸ್ವಾಮಿಗೆ ನಂಜಾವಧೂತ ಶ್ರೀಗಳು ಮನವಿ ಮಾಡಿದರು.

ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಮ್ಮ ಸಮುದಾಯದ ಹಲವು ಬೇಡಿಕೆ ಇಟ್ಟಿದ್ದಾರೆ ಆ ಬೇಡಿಕೆಗೆ ನನ್ನ ಧ್ವನಿಯೂ ಸೇರಲಿದೆ ಸ್ಕಿಲ್ ಡೆವಲಪ್ ಮೆಂಟ್ ವಿವಿಯನ್ನ ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದ್ದೇನೆ ಉದ್ಯೋಗ ಸಮಸ್ಯೆಗೆ ಪರಿಹಾರ ಇಲ್ಲಿ ಸಿಗಲಿದೆ ಬೆಂಗಳೂರಿನಿಂದಲೇ ಶೇ.65 ಆದಾಯ ಬರುತ್ತಿದೆ
ಆ ಆದಾಯವನ್ನ ಉತ್ತರ ಕರ್ನಾಟಕದ ನೀರಾವರಿಗೆ ನೀಡುತ್ತೇವೆ ಎಂದರು.

ಇನ್ನೂ ಸರ್ಕಾರ ರಚನೆಯಾಗಿ ತಿಂಗಳಾಗಿಲ್ಲ ಆಗಲೇ ಉತ್ತರ ಕರ್ನಾಟಕ ನಿರ್ಲಕ್ಷ್ಯ ಅಂತ ವರದಿ ಮಾಡುತ್ತಿದ್ದಾರೆ
ಇದು ಸರಿಯಲ್ಲ ನಾವು ಪ್ರಾದೇಶಿಕವಾರು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಇಡೀ ರಾಜ್ಯದ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದ್ದೇವೆ ರಾಜ್ಯವನ್ನ ಉತ್ತರ,ದಕ್ಷಿಣ ಅಂತ ಹಂಚುವುದು ಬೇಕಿಲ್ಲ ಎಂದು ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಹರಿಹಾಯ್ದರು.

ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ ಮಳೆಯಾದರೆ ನನಗೂ,ಡಿಕೆಶಿಗೂ ಸ್ವಲ್ಪ ನೆಮ್ಮದಿ ಇಲ್ಲಾಂದ್ರೆ ತಮಿಳುನಾಡಿನವರು ಮತ್ತೆ ಕ್ಯಾತೆ ತೆಗೆಯುತ್ತಾರೆ ಎಂದು ಸಿಎಂ‌ ಹಾಸ್ಯ ಚಟಾಕಿ ಹಾರಿಸಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಬೇಡ ಮೂರು ವರ್ಷ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ ಇದನ್ನ ಗಮನದಲ್ಲಿಟ್ಟುಕೊಂಡು ಮುಂದುವರಿದಿದ್ದೇನೆ ಇದರಿಂದ ಸಮ್ಮಿಶ್ರ ಸರ್ಕಾರಕ್ಕೇನು ತೊಂದರೆಯಿಲ್ಲ ಅಭಿವೃದ್ಧಿ ಪೂರಕ ಕೆಲಸಗಳಿಗೆ ನಮ್ಮ ಒತ್ತಿದೆ ಎಂದರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರು ಕಟ್ಟಿದವರು ಕೆಂಪೇಗೌಡರು ಅವರ ಜಯಂತಿ ಆಚರಣೆಗೆ ಮನವಿ ಮಾಡಿದ್ದೆವು ಆಗ ಸಿದ್ದರಾಮಯ್ಯ ಜಯಂತಿ ಆಚರಣೆಗೆ ಒಪ್ಪಿಕೊಂಡಿದ್ದರು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ ಹಿಂದೆ ಕೆಂಪೇಗೌಡರ ಜನ್ಮದಿನದ ಗೊಂದಲವಿತ್ತು ತಜ್ಞರ ಅಭಿಪ್ರಾಯದ ಹಿನ್ನೆಲೆ ಜೂನ್ 22ರಂದು ರಂದು ಆಚರಿಸುತ್ತಿದ್ದೇವೆ ಎಂದರು.

ಇದು ಯಾವ ಪಕ್ಷದ ಜಯಂತಿ ಹಬ್ಬವೂ ಅಲ್ಲ ಇದು ಸಮಸ್ತ ನಾಗರೀಕರ ಹಬ್ಬದ ಆಚರಣೆ ಬೆಂಗಳೂರಿಗೆ ಮಾತ್ರ ಇದು ಸೀಮಿತವಾಗಿಲ್ಲ ಈ ಜಯಂತಿ ಆಚರಣೆ ಎಲ್ಲ ತಾಲೂಕು ಕೇಂದ್ರಗಳಲ್ಲು ನಡೆಯಲಿದೆ ಕೆಂಪೇಗೌಡರು ಎಲ್ಲ ವರ್ಗದವರಿಗೆ ಅವಕಾಶ ಕೊಟ್ಟಿದ್ದರು ಬೆಂಗಳೂರು ಇಲ್ಲಿನ ನಾಗರಿಕರ ಆಸ್ತಿಯಲ್ಲ,ಕರ್ನಾಟಕದ ಆಸ್ತಿ.ಬೆಂಗಳೂರು ವಿವಿಗೆ ಕೆಂಪೇಗೌಡರ ಹೆಸರಿಡಬೇಕು ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಪಾಠ ಅಳವಡಿಸಬೇಕು ಕೆಂಪೇಗೌಡರ ಭವ್ಯ ಕಟ್ಟಡ ನಿರ್ಮಿಸಬೇಕಿದೆ ಕೆಂಪೇಗೌಡರ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದ ಸಿಎಂ ಹೆಚ್ಡಿಕೆಗೆ ಡಿಕೆಶಿ ಮನವಿ ಮಾಡಿದರು.

ಗೌರಿ ಹತ್ಯೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ!

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರು ಮಂದಿ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ನಗರದ 3ನೇ ಎಸಿಎಂಎಂ ನ್ಯಾಯಾಲಯ14 ದಿನಗಳ ಕಾಲ ವಿಸ್ತರಿಸಿದೆ.

ಆರೋಪಿಗಳಾದ ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಕೆ.ಟಿ.ನವೀನ್ ಕುಮಾರ್, ಪ್ರವೀಣ್ , ಅಮಿತ್, ಮನೋಹರ್‌ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಜುಲೈ14 ರವರೆಗೆ ವಿಸ್ತರಿಸಿದೆ.

ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.