ರಾಜಭವನಕ್ಕೆ ಬಂದ ನಿಯೋಜಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್

ಬೆಂಗಳೂರು: ರಾಜ್ಯದ ನಿಯೋಜಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ನಗರಕ್ಕೆ ಆಗಮಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಿಯೋಜಿತ ರಾಜ್ಯಪಾಲರನ್ನ ಸರ್ಕಾರದ ಪರವಾಗಿ ಕಂದಾಯ ಸಚಿವ ಅಶೋಕ್, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿದ್ರು.

ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕೆ ನಿಯೋಜಿತ ರಾಜ್ಯಪಾಲ ಗೆಹ್ಲೋತ್ ಆಗಮಿಸಿದ್ರು. ರಾಜ್ಯಪಾಲ ವಜ್ರದ ಭಾಯ್ ವಾಲಾ ನಿಯೋಜಿತ ರಾಜ್ಯಪಾಲರನ್ನು ಸ್ವಾಗತಿಸಿ ಶುಭ ಕೋರಿದ್ರು. ನಾಳೆ ಬೆಳಗ್ಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರೋ ಸಮಾರಂಭದಲ್ಲಿ ರಾಜ್ಯದ ನೂತನ ರಾಜ್ಯಪಾಲರಾಗಿ ಗೆಹ್ಲೋತ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಡಿಕೆ ಶಿವಕುಮಾರ್ ಹೆಗಲ ಮೇಲೆ ಕೈಹಾಕಲು ಹೋದ ಅಭಿಮಾನಿ; ಮುಂದೇನಾಯ್ತು ಗೊತ್ತಾ..?

ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೆಗಲ ಮೇಲೆ ಕೈಹಾಕಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ ಅಭಿಮಾನಿಯೊಬ್ಬನಿಗೆ ಕಪಾಳಮೋಕ್ಷದ ಗಿಫ್ಟ್ ಸಿಕ್ಕಿದ್ದು, ಡಿಕೆಶಿ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ.

ಮಂಡ್ಯ ಜಿಲ್ಲೆಗೆ ತೆರಳಿರೋ ಡಿಕೆ ಶಿವಕುಮಾರ್
ಮದ್ದೂರಿನ ಕೆ ಎಂ ದೊಡ್ಡಿಯಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಡಿಕೆಶಿ ಹಿಂದೆ ಹಿಂದೆಯೇ ಬಂದು ಡಿಕೆ ಪಕ್ಕದಿಂದ ಹೆಗಲಮೇಲೆ ಕೈಹಾಕಿ ಫೋಟೋ ತೆಗೆಸಿಕೊಳ್ಳೋ ಪ್ಲಾನ್ ಮಾಡಿದ್ರು,ಅದಕ್ಕೆ ತಕ್ಕಂತೆ ಡಿಕೆ ಮುಂದೆ ವ್ಯಕ್ತೊಯೊಬ್ಭ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋ ಆಕ್ಟ್ ಮಾಡ್ತಾ ಇದ್ದ, ಇದನ್ನ ಗಮನಿಸಿದ ಡಿಕೆ ಶಿವಕುಮಾರ್ ಹೆಗಲಮೇಲೆ ಕೈಹಾಕಲು ಬಂದ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ರು, ಮೀಡಿಯಾದವ್ರು ಇದಾರೆ ಅವ್ರೆಲ್ಲಾ ಎನನ್ಕೊಳ್ಳಲ್ಲ ಅಂತಾ ವಾರ್ನ್ ಮಾಡಿದ್ರು. ಇಂತಾವೆಲ್ಲಾ ಮಾಡ್ಬಾರ್ದು ಅಂತಾ ಸೂಚಿಸಿದ್ರು.

ಆದ್ರೆ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಡಿಕೆ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಭಿಮಾನಿಗೆ ಈ ರೀತಿ ಹೊಡೆದಿದ್ದ ಸರಿಯಲ್ಲ ಎಂದಿದ್ದಾರೆ. ಬಿಜೆಪಿ ಮುಖಂಡ ರವಿಕುಮಾರ್ ಕೂಡ ಡಿಕೆ ನಡೆಯನ್ನು ಖಂಡಿಸಿದ್ದಾರೆ.
ನಡೆದ ಘಟನೆ

ಬೇರೆಯವರ ಜಗಳ ನಮಗೆ ಬೇಡ, ಮೇಕೆದಾಟು ಯೋಜನೆ ಸರ್ಕಾರದ ಆದ್ಯತೆ ಆಗಲಿ; ಡಿ.ಕೆ. ಶಿವಕುಮಾರ್

ಬೆಂಗಳೂರು:ನಾನು ಬೇರೆಯವರ ಜಗಳದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಕ್ಕೆ ಮೇಕೆದಾಟು ಯೋಜನೆ ಆದ್ಯತೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳು ಸಂಸದೆ ಸುಮಲತಾ ಅಂಬರೀಷ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ನಡುವಣ ವಾಕ್ಸಮರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿ ನೀಡಿದ ಅವರು ಹೇಳಿದ್ದಿಷ್ಟು;

‘ಯಾರ ಜಗಳದಲ್ಲೂ ಮಧ್ಯಪ್ರವೇಶಿಸುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ನಾನು ಸರ್ಕಾರಕ್ಕೆ ಆಗ್ರಹಿಸುವುದೇನೆಂದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಆದ್ಯತೆ ಮೇರೆಗೆ ಮೇಕೆದಾಟು ಯೋಜನೆ ಕೆಲಸ ಮಾಡಬೇಕು. ಕೆಆರೆಸ್ ಬಿರುಕು ವಿಚಾರ ನೋಡಿಕೊಳ್ಳಲು ಸರ್ಕಾರ, ಈ ಸಚಿವಾಲಯ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು, ತಂತ್ರಜ್ಞರ ತಂಡ ಇದೆ. ಅವರು ಪರಿಶೀಲನೆ ನಡೆಸಿ ವಾಸ್ತವ ಸ್ಥಿತಿ ಹೇಳಬೇಕು. ಬಿರುಕು ಬಿಟ್ಟಿದೆ ಎಂದು ಹೇಳಿ ಜನರಲ್ಲಿ ಆತಂಕ ಮೂಡಿಸುವುದು ನಮ್ಮ ಕೆಲಸವಲ್ಲ. ವಿರೋಧ ಪಕ್ಷವಾಗಿ ನಮ್ಮ ಕೆಲಸ, ಸರ್ಕಾರಕ್ಕೆ ಸಲಹೆ ನೀಡುವುದು ಅಥವಾ ಅವರು ಕೆಲಸ ಮಾಡದಿದ್ದಾಗ ಟೀಕೆ ಮಾಡುವುದು, ಕೆಲಸ ಮಾಡಿಸುವುದು. ರೈತರು, ಜನರಲ್ಲಿ ಭಯ ಹುಟ್ಟಿಸುವ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ಭಾಗಿಯಾಗುವುದಿಲ್ಲ.

ನಮ್ಮ ಆದ್ಯತೆಯಲ್ಲದ ವಿಚಾರವಾಗಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನಮ್ಮ ಬಗ್ಗೆ ಏನೇ ಹೇಳಿದರೂ ನಾವು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಜಗಳ ಮಾಡಿಕೊಂಡರೆ ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ?

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಒಂದು ಮಾಧ್ಯಮದಲ್ಲಿ ವರದಿ ನೋಡಿದೆ. ಈ ವಿಚಾರ ಏನು ಎಂದು ತಿಳಿದುಕೊಂಡು ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ.

ಯೋಗೇಶ್ವರ್ ವಿರುದ್ಧ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ..

ಬೆಂಗಳೂರು: ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ,‌7 ಮಿನಿಸ್ಟರ್ ಮನೆ ಪಡೆಯಲು ಮತ್ತು ಕಾರಿನಲ್ಲಿ ಒಡಾಡಲು ನನ್ನ ಕೊಡುಗೆ ಇದೆ ಎಂದು ರೇಣುಕಾಚಾರ್ಯ ವಿರುದ್ಧ ಹೇಳಿಕೆ ನೀಡಿದ್ದ ಯೋಗೇಶ್ವರ್ ಗೆ ರೇಣುಕಾಚಾರ್ಯ ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಯೋಗೇಶ್ವರ್ ಅವರಿಗೆ ಆ ಪುಣ್ಯಾತ್ಮ ಎಂದು ಹೆಸರು ಹೇಳದೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ,ಅವರು ನಮ್ಗೆ ಜಗದ್ಗುರುಗಳಿದ್ದ ಹಾಗೇ, ನಮ್ಮ ಕ್ಷೇತ್ರದ ಅಭಿವೃದ್ಧಿಯಾಗಿದೆ ಅಂದ್ರೆ ನಾನು ಶಾಸಕನಾಗಿದ್ದೇನೆ ಅಂದ್ರೆ, ಹಿಂದೆ ಅಬಕಾರಿ ಸಚಿವನಾಗಿದ್ದೇನೆ ಅಂದ್ರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಅಂದ್ರೆ ಅದಕ್ಕೆಲ್ಲ ಆ ಜಗದ್ಗುರುಗಳೇ ಕಾರಣ..
ಪಕ್ಷ ಕಟ್ಟುವಲ್ಲಿ ಅವರ ಪಾತ್ರ ಬಹಳಷ್ಟು ದೊಡ್ಡದಿದೆ..ಹೀಗಾಗಿ ಅವರು ತುಂಬಾ ದೊಡ್ಡವರು.ಅವರ ಆಶೀರ್ವಾದಿಂದ 7 ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿದ್ದೇನೆ.ಅವರ ಮೇಲೆ ಟೀಕೆ ಮಾಡಿದ್ರೆ ಅವರ ಮೂರನೇ ದೃಷ್ಟಿ ನನ್ನ ಮೇಲೆ ಬಿಳುತ್ತೆ.
ಅವರ ಮೂರನೇ ಕಣ್ಣು ಬಿಟ್ಟರೆ ನಾನು ಭಸ್ಮವಾಗಿ ಬಿಡುತ್ತೇನೆ.ಅವರ ಆಶೀರ್ವಾದದಿಂದ ನಾನು ಕಾರಿನಲ್ಲಿ ಒಡಾಡುತ್ತಿದ್ದೇನೆ.ಅವರನ್ನ ನಾನು ಪರಮಾತ್ಮ ಸ್ಥಾನದಿಂದ ನೋಡುತ್ತಿದ್ದೇನೆ.ಹೀಗಾಗಿ ಅವರ ಕೆಂಗಣ್ಣಿಗೆ ಗುರಿಯಾಗಲು ನಾನು ಇಷ್ಟಪಡುವುದಿಲ್ಲ.ಮುಂದೆ ಸಹಾ ಅವರ ಆಶೀರ್ವಾದ ನಮ್ಮ ಮೇಲೆ ಇರಲಿ.ಆದ್ರೆ ಅವರಿಗೆ ಒಂದೇ ಒಂದು ಮಾತುಗಳನ್ನ ಹೇಳ್ತೀನಿ.ನಾವು ನಿಮ್ಮನ್ನ ಗುರುಗಳು ಅಂತ ಒಪ್ಪಿಕೊಳ್ಳುತ್ತೇನೆ ಆದ್ರೆ ಚನ್ನಪಟ್ಟಣದಲ್ಲಿ ಯಾಕೆ ಜನ ತಿರಸ್ಕರಿಸಿದರು ಇದ್ರ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ರು.

ಮುಖ್ಯಮಂತ್ರಿಗಳ ಭೇಟಿ ಮಾಡಿ ಕುತೂಹಲ ಮೂಡಿಸಿದ ಕಾಂಗ್ರೆಸ್ ನಾಯಕ..

ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 23 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುದಾನ ಒದಗಿಸುವಂತೆ ಕೋರಿ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ವಿನಂತಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಚರ್ಚಿಸಿದ ಎಂ.ಬಿ.ಪಾಟೀಲ್‍ರವರು ಭೀಮಾನದಿ ಪಾತ್ರದಲ್ಲಿ ನೀರಿನ ಕೊರತೆಯ ಕಾರಣ ಇಂಡಿ ಭಾಗದ ಕೆಲವು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೃಷ್ಣಾ ನದಿ ನೀರನ್ನು ಎತ್ತಿ, ಭೀಮಾ ಭಾಗದ ಈ ಹಳ್ಳಿಗಳಿಗೆ ನೀರೊದಗಿಸಲು ಏಷ್ಯಾದಲ್ಲಿಯೇ ಅತೀ ದೊಡ್ಡ 16ಕಿ.ಮೀ ಉದ್ದದ ತಿಡಗುಂದಿ ಅಕ್ವಾಡಕ್ಟ್ ನಿರ್ಮಿಸಿ, ಅಲ್ಲಿಂದ ಕಾಲುವೆ ಮೂಲಕ ಇಂಡಿ ಭಾಗದ 65ಸಾವಿರ ಎಕರೆ ಪ್ರದೇಶ ನೀರಾವರಿ ಸೌಕರ್ಯ ಹಾಗೂ 23ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. ಅಕ್ವಾಡಕ್ಟ್ ಹಾಗೂ ಕಾಲುವೆ ಕಾರ್ಯ ಮುಗಿದಿದ್ದು, ನೀರು ಹರಿಸಲಾಗಿದೆ. ತಿಡಗುಂದಿ ಕಾಲುವೆಯಿಂದ ಲಿಫ್ಟ್ ಮಾಡಿ 23ಕೆರೆಗಳನ್ನು ತುಂಬಿಸುವ ಯೋಜನೆಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ ಹಣಕಾಸಿನ ಲಭ್ಯತೆ ಇಲ್ಲದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಇಂಡಿ ತಾಲೂಕಿನ ಅತೀ ಬರಗಾಲ ಪೀಡಿತ ಈ ಹಳ್ಳಿಗಳು ಕುಡಿಯುವ ನೀರು ಹಾಗೂ ನೀರಾವರಿಯಿಂದ ವಂಚಿತರಾಗಿ ತತ್ತರಿಸಿದ್ದಾರೆ. ಆದರೂ ಇಲ್ಲಿನ ಜನ ಅಲ್ಪನೀರಿನಲ್ಲಿಯೇ ವಿಶ್ವಪ್ರಸಿದ್ದ ನಿಂಬೆ, ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರಿಗೆ ನೆರವಾಗಲು ತಾವುಗಳು ಈ ಕುರಿತು ವಿಶೇಷ ಗಮನ ಹರಿಸಿ, ಹಣಕಾಸಿನ ನೆರವು ಒದಗಿಸಿದರೆ ಇಂಡಿ ಭಾಗ ನೀರಾವರಿಗೆ ಒಳಪಡುತ್ತದೆ ಹಾಗೂ ತಿಡಗುಂದಿ ಅಕ್ವಾಡೆಕ್ಟ್ ನಿರ್ಮಿಸಿದ ಉದ್ದೇಶವು ಸಫಲವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಆರ್ಥಿಕ ನೆರವು ಒದಗಿಸಲು ಕ್ರಮ ಜರುವುದಾಗಿ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರು ಸಂಪಾದಿಸಿದ ಶಿವಾನುಭ ಪತ್ರಿಕೆಗಳನ್ನು ಮರುಮುದ್ರಿಸಿ, ಸಂಪುಟಗಳ ರೂಪದಲ್ಲಿ ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆರ್ಥಿಕ ನೆರವು ಒದಗಿಸಲು ಮುಖ್ಯಮಂತ್ರಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಎಂ.ಬಿ.ಪಾಟೀಲ್ ರವರು ವಿನಂತಿಸಿದಾಗ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಾನುಭವ ಪತ್ರಿಕೆಗಳ ಸಮಗ್ರ ಸಂಪುಟಗಳನ್ನು ಹೊರತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೆರವು ಒದಗಿಸುವುದಾಗಿ ಹೇಳಿದರು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಕುತೂಹಲ:
ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಎಂಬಿ ಪಾಟೀಲ್ ಪ್ರಯತ್ನಿಸುತ್ತಿದ್ದಾರೆ.ಅದಕ್ಕಾಗಿ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಲ್ಲಿ ಆರೋಪವಿತ್ತು ಹಾಗಾಗಿ ಇಂದಿನ ಭೇಟಿ ಕುತೂಹಲ ಮೂಡಿಸಿದೆ.

ನೂರಾರು ಕೋವಿಡ್ ಸೋಂಕಿತರನ್ನು ಉಳಿಸಿದವನ ಪತ್ನಿಯೇ ಕೋವಿಡ್ ಗೆ ಬಲಿ; ಕುಟುಂಬ ಸದಸ್ಯರಿಗೆ ಡಿ.ಕೆ. ಶಿವಕುಮಾರ್ ಸಾಂತ್ವನ

ತುಮಕೂರು:ಕೋವಿಡ್ ನಿಂದ ಅನೇಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಆತ್ಮೀಯರ ಅಗಲಿಕೆಯಿಂದ ಅನೇಕರು ಕಂಗಾಲಾಗಿದ್ದಾರೆ. ಕುಣಿಗಲ್ ತಾಲೂಕಿನಲ್ಲಿ ಹೀಗೆ ನೋವಿನ ಕಡಲಿಗೆ ಸಿಕ್ಕಿರುವ ಕೆಲವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ಕುಣಿಗಲ್ ನ ಕೊತ್ತಗೆರೆಪಾಳ್ಯದ ಶಿವರಾಮ್ ವೃತ್ತಿಯಿಂದ ಆಂಬ್ಯುಲೆನ್ಸ್ ಚಾಲಕರು. ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು, ನೂರಾರು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಜತೆಗೆ ಸೋಂಕಿನಿಂದ ಸತ್ತ ಕೆಲವರ ಶವಗಳತ್ತ ವಾರಸುದಾರರು ತಿರುಗಿ ನೋಡದೇ ಹೋದಾಗ ಆ ಶವಗಳ ಅಂತ್ಯ ಸಂಸ್ಕಾರವನ್ನೂ ಇವರೇ ನೆರವೇರಿಸಿದರು.

ಆದರೆ ವಿಧಿ ಇವರ ಬದುಕಿನಲ್ಲೇ ಆಟವಾಡಿಬಿಟ್ಟಿತು. ಗುರುತು ಪರಿಚಯ ಇಲ್ಲದ ಯಾರು, ಯಾರನ್ನೋ ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ್ದ ಶಿವರಾಮ್ ಅವರಿಗೆ ಕೊರೋನಾ ಸೋಂಕಿಗೆ ಒಳಗಾದ ತಮ್ಮ ಪತ್ನಿ ಲಕ್ಷ್ಮಿದೇವಿ ಅವರನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ಒಂದಷ್ಟು ದಿನ ಸೋಂಕಿನಿಂದ ನರಳಿದ ಅವರು ಕೊನೆಗೊಮ್ಮೆ‌ ಕಣ್ಮುಚ್ಚಿದರು.

ಡಿ.ಕೆ. ಶಿವಕುಮಾರ್ ಅವರು ಶಿವರಾಮ್ ಮನೆಗೆ ಭೇಟಿ ನೀಡಿದಾಗ ಶಿವರಾಮ್ ಕುಟುಂಬ ಸದಸ್ಯರ ದುಃಖದ ಕಟ್ಟೆಯೊಡೆಯಿತು. ಅವರೆಲ್ಲ ತಮ್ಮ ಅಳಲು ಹೇಳಿಕೊಂಡು ಗದ್ಗದಿತರಾದರು. ಅವರಿಗೆ ಸಾಂತ್ವನ ಹೇಳಿದ ಡಿ.ಕೆ. ಶಿವಕುಮಾರ್ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಸಾಂಕೇತಿಕವಾಗಿ 10 ಸಾವಿರ ಸಹಾಯ ಧನವನ್ನೂ ನೀಡಿದರು. ಅವರ ನೋವಿನಲ್ಲಿ ಭಾಗಿಯಾದ ಶಿವಕುಮಾರ್ ಭಾರವಾದ ಹೆಜ್ಜೆಯೊಡನೆ ಅಲ್ಲಿಂದ ತೆರಳಿದರು.